ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ರತ ಪರ್ವಗಳ ತೋರಣ ಶ್ರಾವಣ ಮಾಸ

Last Updated 24 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಪ್ರ ಕೃತಿಯಲ್ಲಿ ನವಚೈತನ್ಯ ತುಂಬುವ ವಸಂತ ‘ಋತುಗಳ ರಾಜ’ನಾದರೆ ನಮ್ಮ ಸಂಸ್ಕೃತಿಸಿರಿಯ ಸಂದೂಕದಂತಿರುವ ಶ್ರಾವಣವನ್ನು ರಾಣಿಯೆನ್ನಬಹುದಲ್ಲವೇ?

ಜಡವಾಗಿದ್ದ ಮೈಮನಸ್ಸುಗಳಿಗೆ ಉತ್ಸಾಹವನ್ನು ಉಣಬಡಿಸಿ ಭಕ್ತಿ, ಶ್ರದ್ಧೆ, ಜೀವನಪ್ರೀತಿ ಎಲ್ಲವನ್ನೂ ಪ್ರಚೋದಿಸಲು ಹಬ್ಬಗಳ ಹಿಂಡನ್ನೇ ಹೊತ್ತು ತರುವ ಈ ಮಾಸದ ವಿಲಾಸ ಅನನ್ಯ.

ಮೊದಲ ಹಬ್ಬ ನಾಗರಪಂಚಮಿ ನಾಡಿಗೆ ದೊಡ್ಡದಾದರೆ ತಿಂಗಳ ಕೊನೆಗೆ ಜಗದೋದ್ಧಾರನ ಜನ್ಮಾಷ್ಟಮಿ. ನಡುವೆ ಮಂಗಳಗೌರೀ, ವರಮಹಾಲಕ್ಷ್ಮೀ, ಗಾಯತ್ರೀದೇವಿಯರ ಕೃಪಾವರ್ಷ. ಉಪಾಕರ್ಮ, ರಕ್ಷಾಬಂಧನದ ನೂಲಹುಣ್ಣಿಮೆ, ಶಿವಪೂಜೆಯ ಸೋಮವಾರಗಳು, ಸಂಪತ್ ಶುಕ್ರವಾರಗಳು, ತಿರುಪತಿ ತಿಮ್ಮಪ್ಪನಿಗೆ ಪ್ರಿಯವಾದ ಶನಿವಾರಗಳು… ಒಂದೇ ಎರಡೇ!!

ಬಾಗಿಲಲ್ಲಿ ತಳಿರುತೋರಣ, ಅಂಗಳದ ರಂಗೋಲಿ, ಬಣ್ಣಬಣ್ಣದ ಹೂವುಗಳಿಂದ ಪ್ರತಿಮನೆಯೂ ಶೋಭಿಸಿತೆಂದರೆ ಅಧಿಕೃತವಾಗಿ ಹಬ್ಬಗಳ ಶುಭಾರಂಭ. ಶ್ರಾವಣ ಶುಕ್ಲ ಚೌತಿ, ಪಂಚಮಿಗಳಂದು ನಾಗಾರಾಧನೆಯ ಜೊತೆಗೇ ಒಡಹುಟ್ಟಿದ ಅಣ್ಣ-ತಮ್ಮಂದಿರ ಬೆನ್ನು ಉದರ ಅಂದರೆ ‘ತಾಯಿಮನೆಯ ಹಿಂದಿನ-ಮುಂದಿನ ಪೀಳಿಗೆಗಳು ತಂಪಾಗಿರಲಿ, ಸುಖವಾಗಿರಲಿ’ ಎಂದು ತನಿ ಎರೆಯುವ ಹೆಣ್ಣುಮಕ್ಕಳಿಗೆ ತವರಿನಲ್ಲಿ ಗೆಳತಿಯರೊಂದಿಗೆ ಬೆರೆತು ಜೋಕಾಲಿ ಜೀಕುವುದೊಂದು ಸಡಗರ. ಕನ್ನಡ ಜಾನಪದದಲ್ಲಿ ಪಂಚಮಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ.

ಉತ್ತರಭಾರತದಲ್ಲಿ ಈ ‘ಸಾವನ್ ಕೇ ಝೂಲಾ’ಗಳು ಕಲೆ-ಸಂಸ್ಕೃತಿಯೊಂದಿಗೆ ಎಷ್ಟು ಹಾಸುಹೊಕ್ಕಿವೆಯೆಂದರೆ ಅದರ ಬಗೆಗಿನ ಸಂಗೀತ, ಕಾವ್ಯ, ಸಾಹಿತ್ಯ, ನೃತ್ಯ, ಚಿತ್ರ, ಆಚರಣೆ ಯಾವುದಕ್ಕೂ ಬರವಿಲ್ಲ!

ಹೆಂಗಳೆಯರು ಮದುವೆಯಾದ ಮೊದಲ ಐದು ವರ್ಷ ಶ್ರಾವಣ ಮಂಗಳವಾರಗಳಂದು ಮಂಗಳಗೌರೀವ್ರತವನ್ನಾಚರಿಸುವುದು ರೂಢಿ. ವೈಷ್ಣವರು ಮತ್ತು ವಿಷ್ಣುವನ್ನು ಮನೆದೇವರಾಗುಳ್ಳ ಕುಟುಂಬದ ಗಂಡುಮಕ್ಕಳು ಶನಿವಾರಗಳಂದು ‘ವೇಂಕಟೇಶಾಯ ಮಂಗಳಂ’ ಎನ್ನುತ್ತಾ ಐದಾರು ಮನೆಗಳಿಂದ ಭಿಕ್ಷೆ ತಂದು ಅದರಲ್ಲಿ ಅಡುಗೆ/ಅಂಬಲಿ ಮಾಡಿ ಭುಂಜಿಸುವ ವಾಡಿಕೆ ಇದೆ. ಶಂಖ, ಜಾಗಟೆ, ಗರುಡಗಂಬ ಹಿಡಿದು ಬರುವ ದಾಸಯ್ಯನ ಜೋಳಿಗೆಗೆ ಅಕ್ಕಿ, ಧವಸ-ಧಾನ್ಯ, ನಾಣ್ಯ ಇತ್ಯಾದಿ ಸಲ್ಲುತ್ತವೆ. ಶ್ರಾವಣ ಸೋಮವಾರಗಳಂದು ಭಕ್ತರು ಶಿವಾಲಯಗಳನ್ನು ಸಂದರ್ಶಿಸಿ ಪ್ರದೋಷ ಕಾಲದ ಅಭಿಷೇಕ, ಪೂಜಾದಿಗಳಲ್ಲಿ ಪಾಲ್ಗೊಳ್ಳುತ್ತಾರೆ.
ಋಕ್/ಯಜುರ್ ಉಪಾಕರ್ಮಗಳ ದಿನ ಆಯಾ ವೇದಾನುಯಾಯಿಗಳು ವಿಧಿವತ್ತಾಗಿ ಜನಿವಾರ/ಯಜ್ಞೋಪವೀತವನ್ನು ಬದಲಿಸಿ ಹೊಸದನ್ನು ಧರಿಸಿದರೆ ಗಾಯತ್ರಿ ಪ್ರತಿಪದವು(ಪಾಡ್ಯ) ವೇದಮಾತೆಯ ಔಪಾಸನೆ, ಜಪ, ಧ್ಯಾನಗಳಿಗೆ ಮೀಸಲು.

ರಕ್ಷಾಬಂಧನ ಸೋದರಸಂಬಂಧದ ಉತ್ಸವ! ಅಕ್ಕತಂಗಿಯರು ಅಣ್ಣತಮ್ಮಂದಿರ ಕೈಗೆ ರಕ್ಷೆ(ರಾಖಿ)ಯನ್ನು ಕಟ್ಟಿ, ಆರತಿಯೆತ್ತಿ ತಿಲಕವಿಟ್ಟು, ಸಿಹಿಯುಣಿಸಿ ಅವರ ಕ್ಷೇಮವನ್ನು ಬಯಸುವುದು, ಉಡುಗೊರೆಗಳ ವಿನಿಮಯ ಎಲ್ಲವೂ ಚಂದ. ಉತ್ತರದ ರಾಜ್ಯಗಳಲ್ಲಿ ದೊಡ್ಡ ಹಬ್ಬವಾದ ಇದನ್ನು ಈಗ ದೇಶಾದಾದ್ಯಂತ ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭ ತಿಲಕರು ರಾಷ್ಟ್ರೀಯ ವಿಚಾರ ಪ್ರಸರಣಕ್ಕಾಗಿ ಸಾಮೂಹಿಕ ಗಣೇಶೋತ್ಸವವನ್ನು ಆರಂಭಿಸಿದಂತೆಯೇ ಬಂಗಾಳದ ವಿಭಜನೆಯನ್ನು ತಡೆಯುವ ಸಲುವಾಗಿ ರವೀಂದ್ರನಾಥ ಟ್ಯಾಗೋರರು ಹಿಂದೂ-ಮುಸ್ಲಿಂ ಒಗ್ಗಟ್ಟನ್ನು ಸಾಧಿಸಲೋಸುಗ ರಾಖೀ ಮಹೋತ್ಸವಗಳನ್ನು ಏರ್ಪಡಿಸಿದ್ದರಂತೆ.

ಶ್ರೀಹರಿಯ ದಶಾವತಾರಗಳಲ್ಲೇ ಪರಿಪೂರ್ಣವೆನಿಸಿರುವುದು ಕೃಷ್ಣಾವತಾರ! ಗೀತಾಚಾರ್ಯನು ಜನಿಸಿದ ಪುಣ್ಯ ಕ್ಷಣವನ್ನು, ವಸುಂಧರೆಯ ಭಾಗ್ಯವನ್ನು ಸಂಭ್ರಮಿಸುವ ದಿವ್ಯ ಪರ್ವ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ. ಅಂದು ಬಾಲಕೃಷ್ಣನಿಗೆ ಭರ್ಜರಿ ಪೂಜೆ, ಪುನಸ್ಕಾರ, ಅಭಿಷೇಕ, ಅರ್ಘ್ಯ ಪ್ರದಾನ, ಅಡುಗೆ, ಅಲಂಕಾರಗಳು ನಡೆಯುತ್ತವೆ. ಕೃಷ್ಣಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ತೂಗಿ ಅವನಿಗೆ ಪ್ರಾಣಪ್ರಿಯವಾದ ನವನೀತವನ್ನು ಕೊಟ್ಟು ಚಕ್ಕುಲಿ, ತೇಂಗೊಳಲು, ಮುಚ್ಚೋರೆ, ಖಾರಾಶೇವೆ, ಉಂಡೆ, ಕೋಡುಬಳೆ, ಸಜ್ಜಪ್ಪ, ಎರೆಯಪ್ಪ, ವಿವಿಧ ಹಣ್ಣುಗಳನ್ನೆಲ್ಲ ಫಲಸ್ತಿಕೆ ಕಟ್ಟಿ ಅಲಂಕರಿಸುವ ಗಮ್ಮತ್ತನ್ನು ನೋಡಿಯೇ ತಿಳಿಯಬೇಕು. ಕೃಷ್ಣನ ಕೀರ್ತನೆ, ಭಜನೆಗಳು ಮನೆಮನಗಳನ್ನು ತುಂಬಿ ಪಾವನವಾಗಿಸುತ್ತವೆ. ಮುದ್ದುಕಂದ ಮುಕುಂದನನ್ನು ಕಾಣಲು ಬರುವವರಿಗೆ ಗೊಜ್ಜವಲಕ್ಕಿ, ಸಿಹಿ ಅವಲಕ್ಕಿ ಮೊದಲಾಗಿ ಚರ್ಪು, ಪ್ರಸಾದಗಳನ್ನು ಹಂಚಲಾಗುತ್ತದೆ.

ಇನ್ನುಳಿದಂತೆ ಸಂಪತ್ ಶುಕ್ರವಾರಗಳ ಹಾಡು, ವ್ರತ, ಗೋಧೂಳಿ ಸಮಯದ ವರಮಹಾಲಕ್ಷ್ಮೀ ಪೂಜೆ, ಬಾಗಿನ ಕೊಡುವುದು ಹೀಗೆ ಪ್ರತೀ ವಾರವೂ ದೇವರ ಧ್ಯಾನ, ಉಪಾಸನೆ, ಉಪವಾಸ ಆಮೇಲೆ ಹಬ್ಬದೂಟ!
ಹಬ್ಬದೂಟ ಎನ್ನುತ್ತಲೇ ಅಡುಗೆಯ ಘಮ ತೇಲಿ ಬಂದು, ಮನದಲ್ಲೇ ಬಾಳೆ ಎಲೆ ಹಾಸಿ ಊಟಕ್ಕೆ ಕುಳಿತಿರಾ? ಸರಿ ಇನ್ನೇಕೆ ತಡ, ಭಕ್ಷ್ಯಗಳನ್ನು ಬಡಿಸೋಣವಾಗಲಿ! ಸಿಹಿ ಕಡುಬು, ಖಾರದ ಕಡುಬು, ಕರಿಗಡುಬು, ತಂಬಿಟ್ಟು, ಶೇಂಗಾ ಉಂಡೆ, ಎಳ್ಳುಂಡೆ, ಪುಠಾಣಿ, ಅರಳಿನ ಉಂಡೆ, ಮಂಡಿಗೆ, ಪಾಯಸ, ಪಂಚಾಮೃತ, ಉಸ್ಲಿ, ಶ್ಯಾವಿಗೆ, ಪುಳಿಯೋಗರೆ, ಪರಮಾನ್ನ, ಚಿತ್ರಾನ್ನ, ಶಾಲ್ಯಾನ್ನ, ಸೂಪು, ಚಕ್ಕುಲಿ, ಹಪ್ಪಳ, ಸಂಡಿಗೆ, ಆಂಬೋಡೆ, ಪಕ್ವಾನ್ನ, ಮೋತಿಚೂರ್ ಲಡ್ಡು, ಬೇಸನ್ ಲಾಡು, ಜಿಲೇಬಿ, ಜಾಮೂನು, ಸುಕ್ಕಿನುಂಡೆ, ಹೋಳಿಗೆ, ಸಾರು, ಪಲ್ಯ, ಚಟ್ನಿ, ಕೋಸಂಬರಿ, ಬೋಂಡ-ಬಜ್ಜಿ, ಮೇಲೋಗರ, ಕೂಟು, ಕಲಸಿದನ್ನ, ಗೊಜ್ಜು, ಉಪ್ಪಿನಕಾಯಿ, ಕೆನೆ ಮೊಸರನ್ನ – ಸಾವಧಾನವಾಗಿ ಸ್ವೀಕರಿಸಿ!

ಹೀಗೆ ಶ್ರಾವಣದಲ್ಲಿ ಹಬ್ಬಗಳ ಶುರುವಾತಾದರೆ ಆನಂತರದ ಭಾದ್ರಪದ, ಆಶ್ವಯುಜ, ಕಾರ್ತೀಕ ಮಾಸಗಳು ಗೌರಿ-ಗಣೇಶ, ನವರಾತ್ರಿ, ದೀಪಾವಳಿಗಳಂಥ ಮಹಾಪರ್ವಗಳನ್ನು ಒಡಲಲ್ಲಿಟ್ಟುಕೊಂಡು ನಮಗಾಗಿ ಕಾಯುತ್ತಿರುತ್ತವೆ. ಈ ಹಬ್ಬ, ವ್ರತಗಳೆಲ್ಲ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿರುವುದರ ಜೊತೆಗೆ ಸಮಾಜವನ್ನೂ ಭದ್ರವಾಗಿ ಬೆಸೆದಿವೆ. ಇವುಗಳ ಆಚರಣೆಯ ಹಿಂದಿನ ಉದಾತ್ತ ಉದ್ದೇಶ, ಮಹತ್ವವನ್ನೆಲ್ಲ ಸರಿಯಾಗಿ ಗ್ರಹಿಸಿ ಮುಂದಿನ ಪೀಳಿಗೆಯವರಲ್ಲೂ ಅದರ ಅರಿವು ಮೂಡಿಸುವುದು ಮತ್ತು ನಮ್ಮ ಆಚಾರ-ವಿಚಾರಗಳಲ್ಲಿನ ವೈವಿಧ್ಯ, ವೈಶಿಷ್ಟ್ಯಗಳು ಮರೆಯಾಗದಂತೆ ಕಾಪಿಡುವುದು ನಮ್ಮ ಕರ್ತವ್ಯವಾಗಿದೆ.
**

ಶ್ರಾವಣ ಬಂತು ನಾಡಿಗೆ...
ಸಾಹಿತ್ಯ–ಸಂಗೀತದಲ್ಲಿ ಶ್ರಾವಣವು ಮೂಡಿಸಿರುವ ಛಾಪು ಗಮನಾರ್ಹವಾದುದು.

ಸಂಸ್ಕೃತದಲ್ಲಿ ಕಾಳಿದಾಸನ ‘ಋತುಸಂಹಾರ’ ಸೇರಿದಂತೆ ಅನೇಕ ಕವಿಗಳ ಕೃತಿಗಳಲ್ಲಿ ಮತ್ತು ಕನ್ನಡದಲ್ಲೂ ಪಂಪ, ಕುಮಾರವ್ಯಾಸರಿಂದ ಹಿಡಿದು ಕುವೆಂಪು, ನರಸಿಂಹಸ್ವಾಮಿ, ಶಿವರುದ್ರಪ್ಪನವರು ಮತ್ತಿತರರ ಕಾವ್ಯದಲ್ಲಿ ವಿವಿಧ ಋತುಗಳ, ಮಾಸಗಳ ಬದುಕಿನ ಚಿತ್ರಣ, ಪ್ರಕೃತಿಯ ವರ್ಣನೆ ಸೊಗಸಾಗಿ ಅಭಿವ್ಯಕ್ತಗೊಂಡಿವೆ. ಇತರೆಲ್ಲ ಋತುಗಳಿಗಿಂತ ವಸಂತ-ವರ್ಷಗಳಿಗೆ, ಮಾಸಗಳಲ್ಲಿ ಚೈತ್ರಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆತಿದೆಯೆಂದೂ ಹೇಳಬಹುದು.

ಆದರೆ ನಮ್ಮ ವರಕವಿ ಬೇಂದ್ರೆಯವರು ಮಾತ್ರ ಪೂರ್ತಿಯಾಗಿ ಮನಸೋತಿದ್ದು ಶ್ರಾವಣಕ್ಕೆ! ಅವರ ‘ಶ್ರಾವಣಾ.. ಬಂತು ಕಾಡಿಗೆ, ನಾಡಿಗೆ’ ಹಾಡಿನ ಮೋಡಿ ಎಂಥಾದ್ದೆಂಬುದು ಅದನ್ನು ಶ್ರವಣ ಮಾಡಿದವರಿಗೆಲ್ಲ ಗೊತ್ತು. ಅದೊಂದೇ ಅಲ್ಲದೇ ಬೇಂದ್ರೆಯವರ ಸಾಕಷ್ಟು ಕವನಗಳಲ್ಲಿ ಶ್ರಾವಣ ಒಂದು ಪಾತ್ರ, ಭಾವ, ತತ್ತ್ವ, ಶಕ್ತಿ ಏನೆಲ್ಲವಾಗಿ ಹೊಮ್ಮಿದೆ. ಕವಿಯ ಇಷ್ಟದೇವರಾದ ಕೃಷ್ಣನೂ, ಪೂಜ್ಯ ಗುರು ಶ್ರೀಅರವಿಂದರೂ ಜನಿಸಿದ್ದು ಮತ್ತು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಈ ಮಾಸದಲ್ಲೇ ಆದ್ದರಿಂದ ಅವರ ಆಧ್ಯಾತ್ಮಿಕ ನೆಲೆಯ ಪದ್ಯಗಳಲ್ಲೂ, ಶೃಂಗಾರ– ಪ್ರಕೃತಿ ಗೀತಗಳು ಹಾಗೂ ಸ್ವಾತಂತ್ರ್ಯದ ಕುರಿತಾದ ಕವಿತೆಗಳಲ್ಲೂ ಶ್ರಾವಣದ ಪ್ರಸ್ತಾಪ ಸಾಕಷ್ಟು ಬಂದಿದೆ. ಬಹುಶಃ ಬೇಂದ್ರೆಯವರಂತೆ ಶ್ರಾವಣವನ್ನು ಆವಾಹಿಸಿಕೊಂಡವರು, ಅದರ ವಿಲಾಸಕ್ಕೆ ವಶವಾದವರು ಮತ್ತೊಬ್ಬರಿಲ್ಲ. ಮನನದ ಜೊತೆಗೆ ‘ಶ್ರವಣ’ಕ್ಕೆ ಪೂರಕವಾದ ಬಂಧವುಳ್ಳ ಅವರ ಕಾವ್ಯರಾಶಿ ಹಾಗೂ ಅದರಲ್ಲಿ ವ್ಯಕ್ತವಾಗಿರುವ ಅನ್ಯಾದೃಶ ಶ್ರಾವಣ ಪ್ರೀತಿಯಿಂದಾಗಿ ಅಡಿಗರು ಅವರನ್ನು ‘ಶ್ರಾವಣಪ್ರತಿಭೆ’ ಎಂದು ಕರೆದಿದ್ದು ಅರ್ಥಪೂರ್ಣವೂ ಆಪ್ತವೂ ಎನಿಸುತ್ತದೆ.

ಸಾವನ್ ಕೇ ಝೂಲಾಗಳ ಪ್ರಸ್ತಾಪ ಬಂದಿತ್ತಷ್ಟೇ. ಉತ್ತರಾದಿ ಸಂಗೀತದಲ್ಲಿ ಜಾನಪದ ಪ್ರಕಾರದ ಈ ಝೂಲಾ (ಹಿಂದೋಳ, ಠುಮ್ರಿ ಎಂಬ ಹೆಸರೂ ಇವೆ) ಹಾಡುಗಳು ಬಹಳಷ್ಟು ಜನಪ್ರಿಯವಾಗಿವೆ. ರಾಧಾ ಕೃಷ್ಣ ಗೋಪಿಕೆಯರು ಶ್ರಾವಣದಲ್ಲಿ ಮರಗಳಿಗೆ ತೂಗುಬಿಟ್ಟ, ಪುಷ್ಪಾಲಂಕೃತ ಉಯ್ಯಾಲೆಗಳಲ್ಲಿ ಆಡುತ್ತಾ ಮೈಮರೆತು ಆನಂದದಲ್ಲಿ ಮುಳುಗುವ ಮಧುರ ಕ್ಷಣಗಳನ್ನು ಕಟ್ಟಿಕೊಡುವ ಸಂಗೀತ ಪ್ರಸ್ತುತಿಗಳನ್ನು ಆಲಿಸುವುದೇ ಒಂದು ರಸಾನುಭೂತಿ. ಜಾನಪದ, ಶಾಸ್ತ್ರೀಯ ಮಾತ್ರವಲ್ಲದೇ ಅಲ್ಲಿನ ಸಿನಿಮಾ ಸಂಗೀತದಲ್ಲೂ ಸಾವನ್ ದೊಡ್ಡ ಸ್ಥಾನವನ್ನೇ ಪಡೆದಿದೆ. ಲೆಕ್ಕವಿಲ್ಲದಷ್ಟು ಚಿತ್ರಗೀತೆಗಳು ಬಂದಿವೆ, ಬರುತ್ತಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT