ಬೆಂಕಿ ಹಚ್ಚಿದ ತೆಂಗಿನಗರಿಗಳ ತೂರಾಟ. ಬೆಂಕಿಯ ಕಿಡಿಗಳು ಮೈಮೇಲೆ ಬೀಳುತ್ತಿದ್ದಂತೆ ಮತ್ತಷ್ಟು ರೋಷಾವೇಷ. ಕಾರ್ಗತ್ತಲನ್ನು ಭೇದಿಸಿದ ಬೆಂಕಿಯ ಕಿಡಿಗಳು ನರ್ತಿಸುತ್ತಿವೆಯೇನೋ ಎಂಬಂತಹ ನೋಟ. ಈ ರೋಮಾಂಚನಕಾರಿ ದೃಶ್ಯವನ್ನು ಕಣ್ತುಂಬಿಕೊಳ್ಳುವ ಸಹಸ್ರಾರು ಭಕ್ತರು.

ಎರಡು ಮಾಗಣೆ (ಹೋಬಳಿ)ಗಳ ಭಕ್ತರ ಮಧ್ಯೆ ನಡೆಯುವ ‘ಅಗ್ನಿಕೇಳಿ’ ವ್ರತಾಚರಣೆ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿಯ ವರ್ಷಾವಧಿ ಜಾತ್ರೆಯ ಪ್ರಮುಖ ಆಕರ್ಷಣೆ. ಇದು ‘ತೂಟೆದಾರ ಸೇವೆ’ ಎಂತಲೂ ಪ್ರಸಿದ್ಧಿ.

ಈ ಅಗ್ನಿಕೇಳಿ ನಡೆಯುವುದು ಕಟೀಲು ಬಳಿಯ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಗಳ ಗ್ರಾಮಸ್ಥರ ಮಧ್ಯೆ.

ತೆಂಗಿನಗರಿಗಳನ್ನು ಪೊರಕೆಯಂತೆ ಸುತ್ತಲಾಗಿರುತ್ತದೆ. ಅದಕ್ಕೆ ಒಂದು ತುದಿಯಿಂದ ಬೆಂಕಿ ಹಚ್ಚುತ್ತಾರೆ. ಒಂದೆಡೆ ಅತ್ತೂರು, ಇನ್ನೊಂದೆಡೆ ಕೊಡೆತ್ತೂರು ಮಾಗಣೆಯವರು ನಿಂತು, ಬೆಂಕಿ ಹಚ್ಚಿದ ತೆಂಗಿನಗರಿಗಳ ‘ಪಂಜ’ನ್ನು ಪರಸ್ಪರರ ಮೇಲೆ ಎಸೆಯುತ್ತಾರೆ. ತೂರಿ ಬರುವ ಗರಿಗಳಿಂದ ಉದುರುವ ಬೆಂಕಿಯ ಕಿಡಿಗಳು, ಮೈಮೇಲೆ ಬಿದ್ದರೂ ಈ ಆಟದಲ್ಲಿ ತೊಡಗಿರುವವರಿಗೆ ಏನೂ ಅನಿಸುವುದೇ ಇಲ್ಲ. ಪೈಪೋಟಿಗೆ ಬಿದ್ದವರಂತೆ ಅವರೆಲ್ಲ ಈ ‘ಬೆಂಕಿಯ ಓಕುಳಿ’ಯಲ್ಲಿ ಮೈಮರೆಯುತ್ತಾರೆ.

ಕಟೀಲು ದುರ್ಗಾಪರಮೇಶ್ವರಿಗೆ ಅರುಣಾಸುರ ಮರ್ದಿನಿ ಎಂದು ಕರೆಯುವುದೂ ಉಂಟು. ಅರುಣಾಸುರನನ್ನು ಸಂಹರಿಸಿದ ದೇವಿ, ವಿಜಯಶಾಲಿಯಾಗಿ ಮರಳಿದಾಗ ಬೆಂಕಿಯ ಸ್ವಾಗತ ಕೋರಲಾಗಿತ್ತು. ಅದರ ಸ್ಮರಣಾರ್ಥ ತೂಟೆದಾರ ಸೇವೆ ನಡೆಯುತ್ತದೆ. ಇದು ದುರ್ಗಾಪರಮೇಶ್ವರಿಗೆ ಬಲು ಇಷ್ಟದ ಆಟ ಎಂಬುದು ಪ್ರತೀತಿ.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಶ್ರೀಹರಿ ನಾರಾಯಣದಾಸ ಅಸ್ರಣ್ಣ ಅವರು ಹೇಳುವಂತೆ, ‘ಕಟೀಲಮ್ಮ ಜಲದುರ್ಗೆ. ದೇವಿಯ ಜಾತ್ರೆಯಲ್ಲಿ ಯಾವುದಾದರೂ ಆಟ ಆಗಬೇಕು. ಇಲ್ಲಿ ಅಗ್ನಿಕೇಳಿಯ ಆಟ ನಡೆಯುತ್ತದೆ. ಇದು ಯಾವಾಗ ಆರಂಭವಾಯಿತು ಎಂಬುದು ಯಾರಿಗೂ ಗೊತ್ತಿಲ್ಲ’.

ಅತ್ತೂರು ಮತ್ತು ಕೊಡೆತ್ತೂರು ಮಾಗಣೆಗಳು ಕಟೀಲಿಗೆ ಸಂಬಂಧಿಸಿದ ಮಾಗಣೆಗಳು. ಈ ಎರಡೂ ಮಾಗಣೆಗಳ ವ್ಯಾಪ್ತಿಯಲ್ಲಿ ಎಂಟು ಊರುಗಳು ಬರುತ್ತವೆ. ಈ ಊರುಗಳಲ್ಲಿ ತೂಟೆದಾರ ಸೇವೆ ಮಾಡುವ ಮನೆತನಗಳು ಇವೆ. ವಂಶಪಾರಂಪರ್ಯವಾಗಿ ಅವರು ಈ ಸೇವೆ ಮಾಡುತ್ತಿದ್ದಾರೆ. ಇದು ಅತ್ಯಂತ ಸಂಪ್ರದಾಯಬದ್ಧ ಹಾಗೂ ನಿಯಮಬದ್ಧವಾಗಿ ನಡೆಯುವ ಸೇವೆ. ಇಂತಹ ಸೇವೆ ಮಾಡುವ ಮನೆಯವರು ಒಂದು ಮನೆಯಿಂದ ಒಬ್ಬರು ಮಾತ್ರ ಬರಬೇಕು. ಸೂತಕ ಇದ್ದರೆ ಬರುವ ಹಾಗಿಲ್ಲ. ಆ ಮನೆತನದವರ ಬದಲು ಬೇರೆಯವರು ಬರುವಂತೆಯೂ ಇಲ್ಲ... ಹೀಗೆ ಹಲವು ನಿಯಮಗಳಿವೆ. ಇದು ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಸೇವೆ.

ತೂಟೆದಾರ ಸೇವೆಗೆ ಈ ಎಂಟು ಊರಿಗೆ ಸಂಬಂಧಿಸಿದವರಿಗೆ ಮಾತ್ರ ಅವಕಾಶ. ಸೇವೆ ಮಾಡುವವರು ಎಂಟು ದಿನ ಉಪವಾಸ ವ್ರತ ಮಾಡಬೇಕು. ಈ ಸೇವೆಗೆ ಬೇಕಾದ ತೆಂಗಿನಗರಿಗಳನ್ನು ಅತ್ತೂರು ಶರಣ ಗ್ರಾಮದವರು ತಂದು ಕೊಡುವುದು ಸಂಪ್ರದಾಯ. ಪ್ರತಿ ವರ್ಷವೂ ಈ ಊರಿನವರೇ ತೆಂಗಿನ ಗರಿಗಳನ್ನು ಪಂಜದ ಆಕಾರದಲ್ಲಿ ಸುತ್ತಿ ತಂದು ದೇವಸ್ಥಾನಕ್ಕೆ ಕೊಡುತ್ತಾರೆ.

ಮೇಷ ಸಂಕ್ರಮಣದಂದು ಧ್ವಜಾರೋಹಣದೊಂದಿಗೆ ಎಂಟು ದಿನಗಳ ಕಟೀಲು ವರ್ಷಾವಧಿ ಜಾತ್ರೆಗೆ ಚಾಲನೆ ದೊರೆಯುತ್ತದೆ. ಧ್ವಜಾರೋಹಣದ ಬಳಿಕ ಮದ್ಯ–ಮಾಂಸ ತ್ಯಜಿಸಿ ವ್ರತ ಆಚರಿಸುತ್ತಾರೆ. ಈ ಅಗ್ನಿಕೇಳಿ ಸಂದರ್ಭದಲ್ಲಿ ವ್ರತಾಧಾರಿಗಳಿಗೆ ಕುಂಕುಮ ಹಾಗೂ ಹೂವು ನೀಡಲಾಗುತ್ತದೆ. ವ್ರತಾಧಾರಿಗಳು ದೇಹಕ್ಕೆ ಕುಂಕುಮ ಲೇಪಿಸಿಕೊಳ್ಳುತ್ತಾರೆ. ಬೆಂಕಿ ಸೇವೆಯ ಬಳಿಕ ವ್ರತಾಧಾರಿಗಳು ದೇವಸ್ಥಾನದ ಬಳಿಯ ನಂದಿನಿ ನದಿಯಲ್ಲಿ ಸ್ನಾನಮಾಡಿ, ಮೈಗೆ ಗಂಧ ಲೇಪಿಸಿಕೊಂಡು ದೇವಸ್ಥಾನದಲ್ಲಿ ತೀರ್ಥಪ್ರಸಾದ ಸ್ವೀಕರಿಸುತ್ತಾರೆ.

ನಸುಕಿನ 2 ಗಂಟೆಗೆ ನಡೆಯುವ ಈ ಬೆಂಕಿ ಕಾಳಗದಲ್ಲಿ ಅಕ್ಷರಶಃ ವೈರಿಗಳಂತೆ ಕಾದಾಡುತ್ತಾರೆ. ಆಯಾ ಗ್ರಾಮಗಳ ಗುತ್ತು ಬರ್ಕೆ (ಮುಖಂಡರು)ಯವರು ಇದು ಅತಿರೇಕಕ್ಕೆ ಹೋಗದಂತೆ ಹತೋಟಿಗೆ ತರುತ್ತಾರೆ. ಅಗ್ನಿಕೇಳಿಯಲ್ಲಿ ಪ್ರತಿವರ್ಷ 400ಕ್ಕೂ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ. ಅವರಿಗೆ ಸೇವಾಕರ್ತರು ಎಂದು ಕರೆಯಲಾಗುತ್ತದೆ.

ಜಾತ್ರೆಯ ಎಂಟನೇ ದಿನ ಬಲಿ ಉತ್ಸವದ ನಂತರ ವಸಂತ ಮಂಟಪದಲ್ಲಿ ದುರ್ಗಾಪರಮೇಶ್ವರಿಗೆ ಪೂಜೆ ನಡೆಯುತ್ತದೆ. ಸಂಜೆ 7.30ರಿಂದ ಶ್ರೀದೇವಿಯ ಸವಾರಿಗಳು ನಡೆಯುತ್ತವೆ. ವಿಶೇಷವಾಗಿ ಅಲಂಕೃತಗೊಂಡ ಚಿನ್ನದ ಪಲ್ಲಕ್ಕಿಯಲ್ಲಿ ವಿರಾಜಮಾನಳಾದ ದೇವಿಯ ಮೂರ್ತಿಯನ್ನು ವಾದ್ಯವೃಂದದೊಂದಿಗೆ ಎಕ್ಕಾರಿಗೆ ಕರೆದೊಯ್ಯಲಾಗುತ್ತದೆ. ಅಲ್ಲಿಂದ ವಾಪಸ್ ಬರುವಾಗ 18 ಕಟ್ಟೆಗಳಲ್ಲಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ. ನಂದಿನಿ ನದಿಯಲ್ಲಿರುವ ಸ್ನಾನದ ಕಟ್ಟೆಯಲ್ಲಿ ಅವಭೃತೋತ್ಸವ ಜರುಗುತ್ತದೆ. ವಿಶೇಷ ರಥದಲ್ಲಿ ದೇವಿ ಸ್ನಾನಕ್ಕೆ ಸಾಗುವಾಗ ತೂಟೆದಾರ ವ್ರತಧಾರಿಗಳೂ ಜೊತೆಯಲ್ಲೇ ಸಾಗುತ್ತಾರೆ. ಅಜಾರು ರಕ್ತೇಶ್ವರಿ ಸನ್ನಿಧಿ ಬಳಿ ದೇವಿಯ ಜೊತೆ ವ್ರತಧಾರಿಗಳೂ ನಂದಿನಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಬಳಿಕ ನದಿ ತೀರದಲ್ಲಿ ದೇವರಿಗೆ ವಿಶೇಷ ಪೂಜೆ, ಅಲ್ಲೇ ಸ್ವಲ್ಪ ಹೊತ್ತು ತೂಟೆದಾರ ಸೇವೆ ನಡೆಯುತ್ತದೆ. ನಂತರ ಕೂಗು ಹಾಕುತ್ತಾ ವ್ರತಾಧಾರಿಗಳು ದೇವಸ್ಥಾನದ ಎದುರಿನ ಮೈದಾನಕ್ಕೆ ಬಂದು ಅಲ್ಲಿ ತೂಟೆದಾರ ಸೇವೆ ಮುಂದುವರಿಸುತ್ತಾರೆ. ದೇವಿಯ ಸನ್ನಿಧಾನದಲ್ಲಿ ನಡೆಯುವ ಈ ‘ಅಗ್ನಿ ಓಕುಳಿ’ ಸೇವೆ ನೋಡಲು ಸಹಸ್ರಾರು ಭಕ್ತರು ಸೇರಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.