ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ: ಗಣಬರು

Published : 31 ಆಗಸ್ಟ್ 2024, 23:40 IST
Last Updated : 31 ಆಗಸ್ಟ್ 2024, 23:40 IST
ಫಾಲೋ ಮಾಡಿ
Comments

ಗಣಬರು

ಗಣಬರು (ಕ್ರಿ). ಮೈಮೇಲೆ ಗ್ರಹ ಬರು; ಮೈದುಂಬು; ದೇವರು ಬರು

[ಗಣ + ಬರು (<ಬರ್)]

ಭೂತವನ್ನು ಮೈಗೂಡಿಸಿಕೊಂಡು ಒಂದು ರೀತಿಯ ದೇವಮಾನವನಂತೆ ವರ್ತಿಸುವ ಪದ್ಧತಿಯನ್ನು, ಮೈಮೇಲೆ ದೇವರು ಬರುವುದನ್ನು ಜನಪದರು ‘ಗಣ’ ಎಂದು ಕರೆಯುತ್ತಾರೆ. ಆ ಕ್ರಿಯೆಗೆ ಒಳಗಾದ ವ್ಯಕ್ತಿಯನ್ನು ‘ಗಣಮಗ’ ಎಂದು ಹೇಳುವರು.

ಸೀತೆಯ ಚೆಲುವನ್ನು ಸವಿಯಲು ಪುಷ್ಪಕ ವಿಮಾನದಿಂದ ಇಳಿಯುವಾಗ ರಾವಣನು ಸುಂಟರಗಾಳಿಯಾಗಿ ನೆಲಕ್ಕೆ ಇಳಿದನು ಎಂದು ಕುವೆಂಪು ಬಣ್ಣಿಸಿದ್ದಾರೆ. ಅದು ಭೂತನರ್ತನ ಮಾಡಿ ಅಲ್ಲಿ ಇಲ್ಲಿ ಕುಣಿದು ನೆಗೆಯಿತು. ಹಾರುತ್ತ ಓಡುತ್ತ ಹೆಡೆಯೆತ್ತಿ ನಿಂತು ನಾಗರದ ರೀತಿ ಓಲಾಡಿತು. ಮತ್ತೊಮ್ಮೆ ನಡು ಬಳುಕಿ ನಟಿಯಂತೆ ಓಲಾಡಿತು. ಮತ್ತೆ ಹಾಗೆ ಗಣಬಂದವನ ರೀತಿ ವೃತ್ತಾಕಾರವಾಗಿ ಕುಣಿದು ನಿಧಾನ ನಿಧಾನವಾಗಿ ಸೀತೆ ಇದ್ದಲ್ಲಿಗೆ ಬಂದಿತು. ಆ ಗಾಳಿಯ ಕುಣಿತ ಚಿತ್ರಿಸುವಾಗ ಕವಿಯು ಜನಪದರ ಗಣಬಂದವನನ್ನು ಉಲ್ಲೇಖಿಸಿದ್ದಾರೆ.

ಮತ್ತಂತೆ

ಗಣಬಂದವನ ತೆರದಿ ರಿಂಗಣಗುಣಿಸು ಹೊಮ್ಮಿ

ರಯ್ಯನೊಯ್ಯನೆ ಹತ್ತೆ ಹರಿತಂದುದಾಗಾಳಿ.

ಬಾನಕ್ಷತೆ

ಬಾನು (ನಾ). ಆಕಾಶ; ಗಗನ

ಅಕ್ಷತೆ (ನಾ). 1. ಪೂಜೆ, ಶುಭಕಾರ್ಯ, ಮುಂತಾದವುಗಳಲ್ಲಿ ಬಳಸುವ ಅರಿಸಿನವನ್ನಾಗಲಿ ಕುಂಕುಮವನ್ನಾಗಲಿ ಹಚ್ಚಿದ ಅಕ್ಕಿ.

2. ಆರತಕ್ಷತೆ, ಕೆಂಪಕ್ಷತೆ, ಗಂಧಕ್ಷತೆ, ಬಿಳಿಯಕ್ಷತೆ, ಮಂತ್ರಾಕ್ಷತೆ, ಹಳದಿಯಕ್ಷತೆ.

ಕುವೆಂಪು ಅವರು ಬೆಳ್ಳಕ್ಕಿಗಳನ್ನು ತದೇಕ ಚಿತ್ತವಾಗಿ ನೋಡುತ್ತ ಕಲ್ಪನಾ ಸೌಂದರ್ಯದಲ್ಲಿ ಮಿಂದು ಅವುಗಳನ್ನು ವಿವಿಧ ಬಗೆಯಾಗಿ ವರ್ಣಿಸಿದ್ದಾರೆ. ಶ್ವೇತಶುದ್ಧದ ಅವುಗಳು ಸಾಲುಸಾಲಾಗಿ ಗುಂಪಿನಲ್ಲಿ ಹಾರುತ್ತ, ಕೆಲವೊಮ್ಮೆ ಚದುರಿದಂತೆ ಸಾಗುತ್ತ ಮನೋಹರವಾಗಿ ಕಾಣುತ್ತವೆ; ಅವುಗಳ ಬೆಡಗಿನ ಇಂದ್ರಜಾಲಕ್ಕೆ ಒಳಗಾಗದವರಿಲ್ಲ. ಕವಿಯು ‘ಸಂಕೇತ ಸಾಕ್ಷಿ’ ಕವನದಲ್ಲಿ ಅವುಗಳನ್ನು ‘ಬಾನಕ್ಷತೆ’, ‘ಹಾಲ್‍ಚುಕ್ಕಿ’ ಎಂಬ ಹೊಸ ಪದಗಳಿಂದ ಬಣ್ಣಿಸಿದ್ದಾರೆ. ಅವರಿಗೆ ಅವುಗಳು ‘ಜಗನ್ಮಾತೆಯ ಆಶೀರ್ವಾದ’ವಾಗಿವೆ. ಅವುಗಳು ಸಾಲು ಸಾಲಾಗಿ ಚಲಿಸಿ ಸಾಗುತ್ತ ದೂರ ದೂರದಲ್ಲಿ ಹಾಲ್‍ಚುಕ್ಕಿಯಾಗಿ ಗೋಚರಿಸಿವೆ!

‘ಜಗನ್ಮಾತೆಯ ಆಶೀರ್ವಾದದ

ಬಾನಕ್ಷತೆ ಈ ಬೆಳ್ಳಕ್ಕಿ;

ಮನೆಯಿದಿರೇ ಹೊಲದಲಿ

ಎರಚಿದವೋಲಿದೆ ಬಿಳಿ ಅಕ್ಕಿ!

ಒಯ್ಯೊಯ್ಯನೆ ಅಃ ಚಲಿಸುತ್ತಿವೆ

ಸಾಲ್ ಸಾಲ್ ಸಾಲ್ ಹಾಲ್ ಚುಕ್ಕಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT