ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟ ಕಟ್ಟಿದವರು..

Last Updated 25 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಕಳೆದ ವರ್ಷವೂ ನಮ್ಮ ಎನ್‌ಎಸ್‌ಎಸ್ ಹುಡುಗರು, ಊರಿನವರೊಂದಿಗೆ ಸೇರಿ ಇದೇ ಜಾಗದಲ್ಲಿ ಕಟ್ಟ ಕಟ್ಟಿದ್ದೆವು. ಇದರಿಂದ ಬೇಸಿಗೆಯಲ್ಲಿ ನಾಲ್ಕೈದು ಕಿ.ಮೀ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಅಂತರ್ಜಲ ಏರಿಕೆಯಾಗಿತ್ತು. ಈ ವರ್ಷವೂ ಪುನಃ ಶ್ರಮದಾನದ ಮೂಲಕವೇ ಕಟ್ಟ ಕಟ್ಟಿದ್ದೇವೆ...

ಮೂಡಬಿದಿರೆಯ ಎಸ್‌.ಎನ್‌.ಎಂ ಪಾಲಿಟೆಕ್ನಿಕ್‌ ಕಾಲೇಜಿನ ಎನ್‌ಎಸ್‌ಎಸ್‌ ಘಟಕ–1ರ ಕಾರ್ಯಕ್ರಮಾಧಿಕಾರಿ ರಾಮ್‌ಪ್ರಸಾದ್, ಸಮುದಾಯ ಸಹಭಾಗಿತ್ವದಲ್ಲಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಯೋಗದಲ್ಲಿ ನದಿಗೆ ಅಡ್ಡಲಾಗಿ ಕಟ್ಟ ಕಟ್ಟಿದ ಬಗ್ಗೆ ವಿವರಿಸುತ್ತಿದ್ದರು.‌

ಇಂಥ ಶಿಬಿರಗಳಲ್ಲಿ ಗ್ರಾಮ ನೈರ್ಮಲ್ಯ, ಶೌಚಾಲಯ ನಿರ್ಮಾಣದಂತಹ ಚಟುವಟಿಕೆಗಳು ಸಾಮಾನ್ಯ. ಆದರೆ, ಈ ಪಾಲಿಟೆಕ್ನಿಕ್‌ನಲ್ಲಿರುವ ಎನ್‌ಎಸ್‌ಎಸ್‌ ಘಟಕ ಮಾತ್ರ, ಪ್ರತಿ ವರ್ಷ ಇಂಥದ್ದೊಂದು ರಚನಾತ್ಮಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುತ್ತದೆ. ಈ ಬಾರಿ ಕಾಲೇಜಿನ ಎರಡು ಘಟಕಗಳ ವಿದ್ಯಾರ್ಥಿಗಳು, ಗ್ರಾಮಸ್ಥರು, ಗ್ರಾಮ ಪಂಚಾಯ್ತಿ, ರೋಟರಿಕ್ಲಬ್‌ ಸದಸ್ಯರ ಸಹಯೋಗದಲ್ಲಿ ಹೊಸಂಗಡಿ ಸಮೀಪದ ತೋರ್ಪು ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ 300 ಮೀಟರ್‌ ಉದ್ದ, ಮೂರು ಅಡಿ ಎತ್ತರದ ಕಟ್ಟವನ್ನು (ಮರಳು ಮೂಟೆಯ ತಾತ್ಕಾಲಿಕ ಬ್ಯಾರೇಜ್‌) ನಿರ್ಮಾಣ ಮಾಡಿದೆ.

ಕಟ್ಟ ಕಟ್ಟುವುದರ ಹಿಂದೆ..
ಕಟ್ಟ ಕಟ್ಟುವ ಯೋಜನೆ ರೂಪಿಸುವುದು, ಸ್ಥಳ ಗುರುತಿಸುವಿಕೆ, ಈ ಚಟುವಟಿಕೆಗೆ ಬೇಕಾಗುವ ವ್ಯವಸ್ಥೆಯನ್ನು ಹೊಸಂಗಡಿ ಗ್ರಾಮ ಪಂಚಾಯ್ತಿಯ ಸದಸ್ಯ ಹರಿಪ್ರಸಾದ್‌ ವಹಿಸಿಕೊಂಡರು. ರೋಟರಿಕ್ಲಬ್‌ನವರು ಆರ್ಥಿಕ ನೆರವಿಗೆ ಒಪ್ಪಿದರು. ಇವರಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಊರಿನ ಪ್ರಮುಖರಲ್ಲೊಬ್ಬರಾದ ಪದ್ಮರಾಜ್ ಮತ್ತು ಒಂದಷ್ಟು ಗ್ರಾಮಸ್ಥರೂ ಕೈ ಜೋಡಿಸಿದರು.

ಯೋಜನೆ ಸಿದ್ಧವಾಯಿತು. ಆದರೆ, ಕಟ್ಟ ಕಟ್ಟಲು ಕನಿಷ್ಠ ನೂರು ಜನ ಬೇಕಿತ್ತು. ಅದಕ್ಕೆ ಹರಿಪ್ರಸಾದ್ ಅವರು ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಚಾರ್ಯ ಜೆ.ಜೆ.ಪಿಂಟೊ ಅವರನ್ನು ಸಂಪರ್ಕಿಸಿ, ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳನ್ನು ಶ್ರಮದಾನಕ್ಕೆ ಕಳಿಸಿಕೊಡಲು ಮನವಿ ಮಾಡಿದರು. ರೋಟರಿ ಕ್ಲಬ್‌ ಸದಸ್ಯರೂ ಆಗಿರುವ ಪಿಂಟೊ ಎರಡೂ ಘಟಕಗಳ ವಿದ್ಯಾರ್ಥಿಗಳಿಗೆ ಶ್ರಮದಾನದಲ್ಲಿ ಭಾಗಿಯಾಗಲು ಸೂಚಿಸಿದರು. ಜನವರಿ ತಿಂಗಳ ಆರಂಭದಲ್ಲಿ ಕಟ್ಟ ಕಟ್ಟುವ ದಿನ ನಿಗದಿಯಯಿತು.

ಚುರುಕಿನ ಶ್ರಮದಾನ
ಅಂದು ಬೆಳಿಗ್ಗೆ 9.30ಗೆ ಘಟಕದ 25 ವಿದ್ಯಾರ್ಥಿನಿಯರು ಸೇರಿದಂತೆ, 110 ಮಂದಿ ನದಿ ಪಾತ್ರದಲ್ಲಿ ನಿಗದಿಪಡಿಸಿದ ಜಾಗದಲ್ಲಿ ಶ್ರಮದಾನಕ್ಕೆ ಸಜ್ಜಾದರು. ಇವರೊಂದಿಗೆ ಗ್ರಾಮಸ್ಥರು ಸೇರಿಕೊಂಡರು. ರೋಟರಿ ಕ್ಲಬ್‌ನವರು ಜತೆಯಾದರು. ಕಟ್ಟ ಕಟ್ಟಲು ಬೇಕಾದ ಮರಳು ನದಿ ಪಾತ್ರದಲ್ಲಿತ್ತು. ಅದನ್ನು ಚೀಲಗಳಲ್ಲಿ ತುಂಬಿಕೊಂಡು ಬರಲು ಒಂದು ತಂಡವನ್ನು ನಿಯೋಜಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಬೇಕಾಗಿದ್ದ ನಾಲ್ಕೈದು ಟ್ರ್ಯಾಕ್ಟರ್ ಲೋಡ್‌ ಮಣ್ಣು ತರಿಸುವ ಕಾರ್ಯವನ್ನು ಧರಣೇಂದ್ರಕುಮಾರ್ ನಿರ್ವಹಿಸಿದರು.

ವಿದ್ಯಾರ್ಥಿಗಳ ತಂಡ ಮರಳು ತುಂಬಿದ ಚೀಲಗಳನ್ನು ಕಟ್ಟಿಗೆಗಳನ್ನು ಜೋಡಿಸಿದ ತಡಿಕೆ ಮೇಲೆ ಹೇರಿಕೊಂಡ, ನದಿಯಲ್ಲಿ ತೇಲಿಸಿಕೊಂಡು, ತಾವು ಈಜುತ್ತಲೇ ಹೊತ್ತು ತಂದರು. ಸಾಲಾಗಿ ನಿಂತ ವಿದ್ಯಾರ್ಥಿಗಳು ಮರಳು ಮೂಟೆಗಳನ್ನು ಕೈಯಿಂದ ಕೈಯಿಗೆ ಸಾಗಿಸುತ್ತಾ, ಕಟ್ಟದ ನಿರ್ಮಾಣ ಕಾರ್ಯ ಚುರುಕುಗೊಳಿಸಿದರು. ಒಂದು ಕಡೆ ಪ್ಲಾನಿಂಗ್ ಮಾಡುವ ಹಿರಿಯರು, ಇನ್ನೊಂದೆಡೆ ಕಟ್ಟಡ ಕಟ್ಟುವವರು, ನಡುವೆ ವಿದ್ಯಾರ್ಥಿಗಳು ಸಾಥ್.

300 ಮೀ ಉದ್ದ, 3 ಅಡಿ ಎತ್ತರ
2500 ಮರಳು ಚೀಲಗಳನ್ನು ಹೊತ್ತು ತಂದ ವಿದ್ಯಾರ್ಥಿಗಳು, ಅವುಗಳನ್ನು ಜೋಡಿಸುವಲ್ಲೂ ನೆರವಾದರು. ಶ್ರಮದಾನದಲ್ಲಿ ಪಾಲ್ಗೊಂಡಿದ್ದವರಿಗೆ, ಇದೊಂದು ಕೆಲಸ ಎಂದು ಎನ್ನಿಸಲಿಲ್ಲ. ಎಲ್ಲರೂ ಸಂಭ್ರಮದೊಂದಿಗೆ ಆಟವಾಡಿಕೊಂಡೇ ಕೆಲಸ ಪೂರೈಸಿದರು. ಸಂಜೆ ಸೂರ್ಯ ಮನೆಗೆ ಹೊರಡುವ ಹೊತ್ತಿಗೆ ಮೂರು ಅಡಿ ಎತ್ತರ, ಮುನ್ನೂರು ಮೀಟರ್ ಉದ್ದದ ಮರಳಿನ ಕಟ್ಟ ಸಿದ್ಧವಾಯಿತು. ತಾವೇ ಕಟ್ಟಿದ ಕಟ್ಟದ ಮೇಲೆ ವಿದ್ಯಾರ್ಥಿಗಳು ಹಾಗೂ ಈ ಶ್ರಮದಾನಕ್ಕೆ ಕೈಜೋಡಿಸಿದವರೆಲ್ಲ ಗ್ರೂಫ್‌ ಫೋಟೊಕ್ಕೆ ಪೋಸ್‌ ನೀಡಿದರು.

ಧ್ಯೇಯಕ್ಕೆ ತಕ್ಕಂತೆ...
‘ನನಗಲ್ಲ ನಿನಗೆ’ ಎಂಬದು ಎನ್ಎಸ್ಎಸ್‌ನ ಧ್ಯೇಯ ವಾಕ್ಯ. ಅದಕ್ಕೆ ತಕ್ಕಂತೆ ಘಟಕಗಳ ವಿದ್ಯಾರ್ಥಿಗಳು ಗ್ರಾಮಸ್ಥರ ನೆರವಿಗೆ ಮುಂದಾಗಿದ್ದಾರೆ. ‘ಕಳೆದ ವರ್ಷ ಜನವರಿ ಕೊನೆಯಲ್ಲಿ ಕಟ್ಟ ಕಟ್ಟಿದ್ದೆವು. ಈ ವರ್ಷ ತಿಂಗಳ ಆರಂಭದಲ್ಲೇ ಮಾಡಿದ್ದೇವೆ.‌ ಇಲ್ಲಿ ನದಿ ನೀರು ನಿಲ್ಲಿಸುವುದರಿಂದ ಸುತ್ತಲಿನ ಐದಾರು ಕಿ.ಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಬೇಸಿಗೆಯಲ್ಲೂ ಕೃಷಿ ಚಟುವಟಿಕೆ ಮುಂದುವರಿದಿರುತ್ತದೆ’ ಎನ್ನುತ್ತಾರೆ ರಾಮ್‌ಪ್ರಸಾದ್‌.

ಎನ್ಎಸ್ಎಸ್‌ ವಿದ್ಯಾರ್ಥಿಗಳು ಭಾಗವಹಿಸಿದ್ದರಿಂದ ಅವರಿಗೆ ಕಟ್ಟದ ಮಹತ್ವ ತಿಳಿದುಕೊಳ್ಳಲು ಸಾಧ್ಯವಾಗಿದೆ. ಮಾತ್ರವಲ್ಲ, ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮಾಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತವೆ ಎಂಬುದನ್ನು ಮನದಟ್ಟು ಮಾಡಿಕೊಡಬಹುದು ಎನ್ನುವುದು ಅವರ ಅಭಿಪ್ರಾಯ.

ಈ ಜಲಸಂರಕ್ಷಣಾ ಕಾರ್ಯಕ್ಕೆ ಮೂಡಬಿದಿರೆಯ ರೋಟರಿ ಕ್ಲಬ್‌ನ ಸದಸ್ಯರು ಮತ್ತು ಎನ್‌ಎಸ್‌ಎಸ್‌ ಘಟಕ 2 ರ ಕಾರ್ಯಕ್ರಮಾಧಿಕಾರಿ ಕಿರಣ್ ಸೇರಿದಂತೆ ಅನೇಕರು ಕೈ ಜೋಡಿಸಿದ್ದಾರೆ.

(ಚಿತ್ರಗಳು: ಎಸ್‌.ಎನ್‌.ಎಂ ಪಾಲಿಟೆಕ್ನಿಕ್‌ ಕಾಲೇಜು ಸಂಗ್ರಹದಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT