ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಶೊ: ಆಧ್ಯಾತ್ಮಿಕ ‘ಬಂಡಾಯ’

Last Updated 26 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಯಾವುದೇ ಶ್ರೀಮಂತ ಪರಂಪರೆಯನ್ನು ನಿರ್ಲಕ್ಷ್ಯ ಮಾಡುವುದು ಅಥವಾ ಅದರ ವಿರುದ್ಧ ಬಂಡಾಯವೇಳುವುದು ಸುಲಭದ ಕೆಲಸವಲ್ಲ. ವಿಶಿಷ್ಟವಾದ ಪ್ರತಿಭೆ ಮತ್ತು ಅಂತಃಸತ್ವವಿಲ್ಲದ ವಿದ್ರೋಹ ಅಪಹಾಸ್ಯಕ್ಕೀಡಾಗುತ್ತದೆ. ಪರಂಪರೆಯ ಅಧಿಕೃತ ನುಡಿಗಳಿಗಿರುವ ಶಕ್ತಿ ಮತ್ತು ಪ್ರಭಾವಗಳು ಬಂಡಾಯದ ಏರುಧ್ವನಿಗಿರುವುದಿಲ್ಲ. ಪರಂಪರೆಯ ಪ್ರಾಚೀನತೆಯೇ ಶಬ್ದ ಮತ್ತು ಚಿಂತನೆಗಳಿಗೆ ಒಂದು ವಿಶಿಷ್ಟ ಬಗೆಯ ಸೊಗಡು ಮತ್ತು ಶ್ರೀಮಂತಿಕೆಯನ್ನು ತಂದುಕೊಡುತ್ತದೆ. ಇಂತಹ ಪರಂಪರೆಯ ವಿರುದ್ಧ ಸೆಟೆದು ನಿಲ್ಲುವ ವ್ಯಕ್ತಿ ಪರಂಪರೆಯ ಸತ್ವಪೂರ್ಣತೆಗೆ ಸರಿಗಟ್ಟಬಲ್ಲ ವಿಶಿಷ್ಟ ಪ್ರತಿಭೆ ಮತ್ತು ಆತ್ಮಶಕ್ತಿಗಳನ್ನು ಹೊಂದಿರಬೇಕಾಗುತ್ತದೆ.

ಆಟವಾಡಿಸುವ ಸಂತೋಷ: ಸೂಫಿ, ದಾವ್, ಉಪನಿಷತ್ತು, ಯೋಗ, ತಂತ್ರ ಮೊದಲಾದ ಪ್ರಾಚೀನ ಅನುಭಾವ ಪರಂಪರೆಗಳನ್ನೂ ಹಾಗೆಯೇ ಮನೋವಿಜ್ಞಾನ, ಸಮಾಜವಿಜ್ಞಾನ, ಕಲೆ, ಸಾಹಿತ್ಯ ಇತ್ಯಾದಿ ಹಲವು ಆಧುನಿಕ ಜ್ಞಾನಪ್ರಸ್ಥಾನಗಳನ್ನು ತಮ್ಮ ಉಪನ್ಯಾಸಗಳಲ್ಲಿ ಲೀಲಾಜಾಲವಾಗಿ ಪ್ರಸ್ತಾಪಿಸುತ್ತಿದ್ದ ಓಶೊ ಮೇಲ್ನೋಟಕ್ಕೆ ಒಬ್ಬ ಸಮನ್ವಯವಾದೀ ಚಿಂತಕರಂತೆ ಕಾಣಿಸುತ್ತಾರೆ. ಮತ್ತು ಇಷ್ಟು ಕಾಲ ಅವರನ್ನು ಹಾಗೆಯೇ ನೋಡುತ್ತ ಬರಲಾಗಿದೆ.ಆದರೆ ವಾಸ್ತವದಲ್ಲಿ ಓಶೊಗೆ ಆ ರೀತಿ ನಾನಾ ಪರಂಪರೆಗಳ ನಡುವೆ ಸಮನ್ವಯ ಏರ್ಪಡಿಸುವ ಉದ್ದೇಶ ಅಥವಾ ಆಸಕ್ತಿ ಕಿಂಚಿತ್ತೂ ಇರಲಿಲ್ಲ. ಆಂತರ್ಯದಲ್ಲಿ ಶುದ್ಧ ಬಂಡಾಯಗಾರರಾಗಿದ್ದರೂ ಸಹ ಅವರು ತಮ್ಮ ಬಂಡಾಯ ವಿಕ್ಷಿಪ್ತ ರೀತಿಯಲ್ಲಿ ವ್ಯಕ್ತವಾಗಲು ಆಸ್ಪದ ನೀಡದೇ ಅದಕ್ಕೊಂದು ವ್ಯವಸ್ಥಿತ ರೂಪ ನೀಡಿದ್ದರು. ಏಕೆಂದರೆ ವಿದ್ರೋಹವೆಂಬುದು ಎಲ್ಲೋ ಕೆಲವು ಅನುಭಾವಿಗಳ ವ್ಯಕ್ತಿವಿಶಿಷ್ಟವಾದ ಗುಣವಲ್ಲ; ಅದು ಧ್ಯಾನ ಅಧ್ಯಾತ್ಮದ ಮಾರ್ಗದಲ್ಲಿ ಸಾಧಕನು ಹಾದುಹೋಗಲೇ ಬೇಕಾದ ಒಂದು ಅನಿವಾರ್ಯ ಹಂತವೆಂಬುದು ಓಶೊರ ದೃಢವಾದ ನಿಲುವಾಗಿತ್ತು. ತಮ್ಮ ವಿದ್ರೋಹಕ್ಕೆ ಒಂದು ವ್ಯವಸ್ಥಿತ ರೂಪವನ್ನು ನೀಡಬೇಕಾಗಿದ್ದ ಅವಶ್ಯಕತೆಯನ್ನು ಅವರು ಒಂದೆಡೆ ಹೀಗೆ ನಿರೂಪಿಸಿದ್ದಾರೆ:

‘ನಾನಾಗ ಒಬ್ಬ ನಾಸ್ತಿಕವಾದಿ ಎಂದು ಕರೆಸಿಕೊಂಡಿದ್ದೆ. ಈ ಹಣೆಪಟ್ಟಿಯೇ ನನಗೊಂದು ಅಡಚಣೆಯಾಯಿತು, ಅದು ನನ್ನ ಸುತ್ತ ಒಂದು ಗೋಡೆಯನ್ನು ನಿರ್ಮಿಸಿತು. ನನ್ನ ಆಂತರ್ಯದ ಕಾಳಜಿಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಪ್ರಾಮಾಣಿಕರಾದ ಸಾಧಕರು ಹಲವು ಧಾರ್ಮಿಕ ಪಂಥಗಳಲ್ಲಿ, ಸಂಪ್ರದಾಯಗಳಲ್ಲಿ ಚದುರಿಹೋಗಿದ್ದರು. ಹಾಗಾಗಿ ನಾನು ತಾತ್ಕಾಲಿಕವಾಗಿ ಧಾರ್ಮಿಕ ವ್ಯಕ್ತಿಯ ಸೋಗು ಹಾಕಲೇ ಬೇಕಾಯಿತು. ಅವರು ಬಳಸುತ್ತಿದ್ದ ಮೋಕ್ಷ, ಧರ್ಮ, ದೇವರು ಇತ್ಯಾದಿ ಪರಿಕಲ್ಪನೆಗಳ ಮರೆಯಲ್ಲಿ ನಿಂತು ನಾನು ನನ್ನ ಅನುಭವವನ್ನೇ ನಿವೇದಿಸುತ್ತಿದ್ದೆ. ಕೃಷ್ಣ, ಬುದ್ಧ, ಮಹಾವೀರ ಮೊದಲಾದ ಹೆಸರುಗಳನ್ನು ಬಳಸಿ ಅವರುಗಳು ಎಂದೂ ಹೇಳದಿದ್ದ ಮಾತುಗಳನ್ನೆಲ್ಲ ಅವರ ಬಾಯಿಂದ ಹೇಳಿಸಿದೆ.

‘ಇದೆಲ್ಲ ನನಗೆ ಅವಶ್ಯಕತೆ ಇರಲಿಲ್ಲ. ಆದರೆ ಜನ ಶಾಸ್ತ್ರಾಧಾರವನ್ನು ಸುಲಭವಾಗಿ ನಂಬುತ್ತಾರೆ. ನಾನು ಗೀತೆಗೆ ವ್ಯಾಖ್ಯಾನ ನೀಡಲಾರಂಭಿಸಿದಾಗ ಸಾವಿರಾರು ಜನ ಬಂದು ಕೇಳುತ್ತಿದ್ದರು. ನನಗೂ ಕೃಷ್ಣನಿಗೂ ಅಥವಾ ನನಗೂ ಯೇಸುವಿಗೂ ಎತ್ತಣಿಂದೆತ್ತ ಸಂಬಂಧ? ನಾನು ಯೇಸುವಿನ ನುಡಿಗಳನ್ನು ಬಳಸುತ್ತಿದ್ದೆ ನಿಜ. ಶಬ್ದಗಳೊಡನೆ ಸ್ವಲ್ಪ ಆಟವಾಡುವ ಕಲೆ ಕರಗತವಾದರೆ ಸಾಕು, ಯಾವ ಮಾತಿಗೆ ಯಾವ ಅರ್ಥವನ್ನಾದರೂ ಹಚ್ಚಬಹುದು, ಅದೇನೂ ಕಷ್ಟದ ಕೆಲಸವಲ್ಲ. ಆದರೆ ನಾನು ಹಚ್ಚುತ್ತಿದ್ದ ಅರ್ಥಗಳೇ ಯೇಸುವಿನ ಪರಮ ಸಂದೇಶಗಳು ಎಂದು ಆ ಪಂಥದವರು ಭಾವಿಸುತ್ತಿದ್ದರು.

ಹೀಗೆ ಯೇಸುವಿನ ಹೆಸರಿನಿಂದ ಅವರ ಸಮಾಜದಲ್ಲಿ, ಹಾಗೆಯೇ ಕೃಷ್ಣ, ಬುದ್ಧ, ಮಹಾವೀರರ ಹೆಸರು ಹೇಳಿಕೊಂಡು ಆಯಾ ಸಮಾಜಗಳಲ್ಲಿ ಪ್ರವೇಶ ಪಡೆದೆ. ಅವರ ಬಂದೂಕುಗಳಲ್ಲಿ ನನ್ನ ಕಾಡತೂಸುಗಳನ್ನು ತುಂಬಿ ಅವರತ್ತಲೇ ಗುರಿ ಇಟ್ಟೆ, ನನ್ನ ಗುರಿ ತಪ್ಪಲಿಲ್ಲ. ತರಹಾವರಿ ಜೈನಮುನಿಗಳು, ಬೌದ್ಧಭಿಕ್ಖುಗಳು, ಕ್ರಿಶ್ಚಿಯನ್ ಪಾದ್ರಿಗಳು, ಹಿಂದೂ ವಿದ್ವಾಂಸರುಗಳು ನನ್ನ ಬಳಿ ಬರುತ್ತಿದ್ದರು, ತಮ್ಮ ಶಾಸ್ತ್ರಗಳಲ್ಲಿನ ಧರ್ಮಸೂಕ್ಷ್ಮಗಳನ್ನು ನನ್ನ ಬಳಿ ಗಂಭೀರವಾಗಿ ಚರ್ಚಿಸುತ್ತಿದ್ದರು. ಅವರ ಪಾರಿಭಾಷಿಕ ಪದಗಳನ್ನು ಬಳಸಿ ನನ್ನ ತತ್ವಗಳನ್ನು ಅವರಿಗೇ ತಿರುಗಿಸುತ್ತಿದ್ದೆ.

ಇದೊಂದು ಬಗೆಯ ಮೀನು ಹಿಡಿಯುವ ಕಲೆ. ಮೀನನ್ನು ಗಾಳಕ್ಕೆ ಸಿಕ್ಕಿಸಲು ಮೀನು ಇಷ್ಟ ಪಡುವ ತಿನಿಸನ್ನು ಗಾಳಕ್ಕೆ ಅಂಟಿಸಿರುತ್ತಾರೆ. ಹಾಗೆಯೇ ನಾನೂ ಅವರು ಇಷ್ಟ ಪಡುತ್ತಿದ್ದ ಪಾರಿಭಾಷಿಕ ಪದಗಳನ್ನು ಬಳಸಿ ಅವರನ್ನು ನನ್ನ ಗಾಳಕ್ಕೆ ಹಾಕಿಕೊಳ್ಳುತ್ತಿದ್ದೆ. ಒಂದೊಂದು ಮೀನು ಸಿಕ್ಕಾಗಲೂ ಒಳಗೇ ಹಿಗ್ಗುತ್ತಿದ್ದೆ. ಹೀಗೆ ಜೀವನವಿಡೀ ನಾನು ಎಲ್ಲ ಧಾರ್ಮಿಕ ವ್ಯಕ್ತಿಗಳನ್ನು, ಸಿದ್ಧಾಂತಿಗಳನ್ನು ಹಾಸ್ಯಾಸ್ಪದ ವಸ್ತುಗಳಂತೆ ಆಟವಾಡಿಸಿ ಸಂತೋಷ ಪಟ್ಟಿದ್ದೇನೆ.’

ರಾಜಿಯಿಲ್ಲ: ಎಲ್ಲ ಪ್ರತಿಷ್ಠಿತ ಧರ್ಮಗಳೂ ಯಥಾಸ್ಥಿತಿ (ಸ್ಟೇಟಸ್‌ಕೋ)ಯನ್ನು ಕಾಪಾಡುತ್ತ ಸಮಾಜವನ್ನು ಶೋಷಿಸುವ ಹಿತಾಸಕ್ತಿಗಳ ಕೈಗೊಂಬೆಗಳಾಗುವ ಕಾರಣ ಅನುಭಾವಿಯ ವಿದ್ರೋಹಕ್ಕೆ ಸಾಮಾಜಿಕವಾದ, ಮಾನವಪರವಾದ ಆಯಾಮವೂ ಉಂಟು. ಈ ಹಿನ್ನೆಲೆಯಲ್ಲಿ ಓಶೊ ಕಡೆತನಕವೂ ಎಲ್ಲ ಪ್ರತಿಷ್ಠಿತ ಧರ್ಮ ಹಾಗೂ ಪ್ರಭುತ್ವಗಳ ಪಾಲಿಗೆ ನುಂಗಲಾರದ ತುತ್ತಿನಂತೆ ಒಬ್ಬ ವಿದ್ರೋಹಿಯಾಗಿಯೇ ಉಳಿದಿದ್ದರು.

ಅಧ್ಯಾತ್ಮದ ಹೆಸರಿನಲ್ಲಿ ಹಣ, ಅಧಿಕಾರ, ಪ್ರತಿಷ್ಠೆ, ಪ್ರಭಾವ ಗಳನ್ನು ಸಂಪಾದಿಸಿಕೊಳ್ಳುವ ಉದ್ದೇಶವುಳ್ಳ ಕಾರ್ಪೊರೇಟ್ ಗುರುಗಳು ಜನರ ಸಾಮಾನ್ಯ ನಂಬಿಕೆಗಳೊಂದಿಗೆ ಹಾಗೂ ಪ್ರಭುತ್ವದೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳಲು ಪ್ರಯತ್ನಿ ಸುವರೇ ವಿನಾ ಆ ನಂಬಿಕೆ, ಅಧಿಕಾರಗಳ ವಿರುದ್ಧ ಸೊಲ್ಲೆತ್ತಲು ಹೋಗುವುದಿಲ್ಲ. ಈ ಹಿನ್ನೆಲೆಯಲ್ಲಿ ಓಶೋ ಒಬ್ಬ ಕಾರ್ಪೊರೇಟ್ ಗುರುವಲ್ಲ. ಕೊನೆಕೊನೆಗೆ ಪರಂಪರೆಯನ್ನು ಸಾರಾಸಗಟಾಗಿ ನಿರಾಕರಿಸುತ್ತಿದ್ದ ಒಬ್ಬ ಪರಮ ವಿದ್ರೋಹಿಯಾಗಿದ್ದರು. ಅನುಭಾವಿಯ ವಿದ್ರೋಹದ ಹಿಂದಿನ ಕಾಳಜಿಗಳು ಅರ್ಥವಾಗದಿದ್ದಾಗ ಅಥವಾ ಅದು ಸಾಮಾಜಿಕ ಯಥಾಸ್ಥಿತಿಗೆ ಅಪಥ್ಯವೆನಿಸಿದಾಗ ಪ್ರಭುತ್ವವು ಅವನ ಬಂಡಾಯದ ಮೂಲಪ್ರೇರಣೆಯನ್ನು ಶೋಧಿಸದೆ ಅದಕ್ಕೆ ಅಪಾರ್ಥ ಹಚ್ಚಿ ಅವನನ್ನು ಅವಹೇಳನ ಮಾಡುತ್ತದೆ. ಯೇಸು, ಬುದ್ಧ, ಮನ್ಸೂರ್, ಮಹಾವೀರರಾದಿಯಾಗಿ ಎಲ್ಲ ಅನುಭಾವಿಗಳೂ ಅಂದಂದಿನ ಪ್ರಭುತ್ವಗಳ ಕಣ್ಣಿಗೆ ಅಪರಾಧಿಗಳಂತೆ ಕಾಣಿಸುತ್ತಿದ್ದರೇ ವಿನಾ ಆಯಾ ಸಮಾಜಗಳಿಂದ ವಿಶೇಷ ಮನ್ನಣೆಯನ್ನೇನೂ ಗಳಿಸಿರಲಿಲ್ಲ. ಆದರೆ ಅನುಭಾವಿ ತೀರಿಕೊಂಡ ಮೇಲೆ ಅದೇ ಸಮಾಜ ಅವನ ವಿಚಾರಗಳಿಗೆ ಅಧಿಕೃತ ಸ್ಥಾನಮಾನ ನೀಡುವುದು ವಿಪರ್ಯಾಸ. ಇದು ಇಂದು ಓಶೊ ವಿಷಯದಲ್ಲೂ ಸತ್ಯವಾಗುತ್ತಿದೆ.

ನಮ್ಮ ಕಾಲದ ಗುರು
‘ನೀವೆಲ್ಲರೂ ಬುದ್ಧರೇ ಹೌದು. ನೀವು ನಿದ್ರಿಸುತ್ತಿರಬಹುದು, ಕನಸನ್ನು ಕಾಣುತ್ತಿರಬಹುದು; ಆದರೆ ನೀವೆಲ್ಲರೂ ಬುದ್ಧರೇ. ನಿಮ್ಮನ್ನು ಬುದ್ಧರನ್ನಾಗಿಸುವುದು ನನ್ನ ಕೆಲಸವಲ್ಲ, ಏಕೆಂದರೆ ನೀವು ಈಗಾಗಲೇ ಬುದ್ಧರಾಗಿದ್ದೀರಿ. ಅದನ್ನು ನಿಮಗೆ ನೆನಪಾಗಲು ಸಹಾಯಮಾಡುವುದಷ್ಟೆ ನನ್ನ ಕೆಲಸ, ಎಚ್ಚರಿಸುವುದಷ್ಟೆ ನನ್ನ ಕೆಲಸ...’ – ಹೀಗೆ ಹೇಳುತ್ತಲೇ ಅಧ್ಯಾತ್ಮದ ಹಲವು ದಾರಿಗಳನ್ನು ತೋರಿಸಿಕೊಟ್ಟವರು ಓಶೊ–ಭಗವಾನ್‌–ರಜನೀಶ್‌. ತಮ್ಮ ಪ್ರವಚನಗಳಿಂದ ಆಧುನಿಕ ಜಗತ್ತಿನಲ್ಲಿ ಆಧ್ಯಾತ್ಮಿಕತೆಯ ಬಿರುಗಾಳಿಯನ್ನೇ ಸೃಷ್ಟಿಸಿದವರು ಅವರು. ಉಪನಿಷತ್ತುಗಳು, ಭಗವದ್ಗೀತೆ, ಧಮ್ಮಪದ, ಝೆನ್‌ಕಥೆಗಳು, ಶಿವಸೂತ್ರಗಳು – ಹೀಗೆ ಜಗತ್ತಿನ ಹಲವು ಧಾರೆಗಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳಿಗೆ ಹೊಸದಾದ ಕಳೆಯನ್ನು ನೀಡಿದರು. ಕೃಷ್ಣ, ಬುದ್ಧ, ಯೇಸು, ಕಬೀರ್‌, ಮೀರಾ, ಝರತುಷ್ಟ್ರಾ – ಇಂಥ ಹಲವರು ಮಹಾತ್ಮರ ಉಪದೇಶಗಳನ್ನು ಆಧುನಿಕ ಜಗತ್ತಿಗೆ ಅಳವಡುವಂತೆ ಬಗ್ಗಿಸಿದರು. ಅಪಾರ ಓದು, ಒಳನೋಟಗಳಿಂದ ದಕ್ಕಿಸಿಕೊಂಡ ಅವರ ಅರಿವಿನ ಬೆಳಕು ನಮ್ಮ ಕಾಲದ ಆಧ್ಯಾತ್ಮಿಕಲೋಕದ ವಿಸ್ಮಯ ಎಂದೆನಿಸುವಂತೆ ಪ್ರಭಾವ ಬೀರಿತು.

ಆಧ್ಯಾತ್ಮಿಕತೆ ಎನ್ನುವುದು ಘನಗಂಭೀರವಾದ ಪ್ರಕ್ರಿಯೆ ಎಂಬ ಗ್ರಹಿಕೆಯನ್ನು ತಪ್ಪಿಸುವುದಕ್ಕಾಗಿಯೋ ಎಂಬಂತೆ ಕಥೆಗಳು, ನಗೆಹನಿಗಳ ಮೂಲಕವೂ ಗಹನವಾದ ತತ್ತ್ವಗಳನ್ನು ನಿರೂಪಿಸಿರುವುದು ಅವರ ಇನ್ನೊಂದು ಹೆಗ್ಗಳಿಕೆ. ನಮ್ಮ ಕಾಲದಲ್ಲಿ ತುಂಬ ಪ್ರಭಾವವನ್ನು ಮೂಡಿಸಿದ ಆಧ್ಯಾತ್ಮಿಕ ಗುರುಗಳಲ್ಲಿ ಓಶೊ ಪ್ರಮುಖರು ಎನ್ನುವುದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT