ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಅರಿವೂ ಅಚ್ಚರಿಯೂ

ಪೂಜಾ ಗಾಂಧಿ
Published 28 ಅಕ್ಟೋಬರ್ 2023, 23:30 IST
Last Updated 28 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ನಾವು ಯಾವ ನೆಲದಲ್ಲಿರುತ್ತೇವೋ ಅಲ್ಲಿನ ಭಾಷೆ ಕಲಿಯುವುದು, ನಾವು ಆ ನೆಲಕ್ಕೆ ಕೊಡುವ ಗೌರವ, ಕೊಡುಗೆ ಎನ್ನುವುದು ನನ್ನ ಭಾವನೆ. ನನ್ನ ಮೊದಲ ಕನ್ನಡ ಸಿನಿಮಾ ‘ಮುಂಗಾರು ಮಳೆ’ ನಂತರ ಕನ್ನಡ ಬರದೇ ಇದ್ದರೂ ಮಾತಾಡಲು ಪ್ರಯತ್ನಿಸುತ್ತಿದ್ದೆ. ನಂತರದ ದಿನಗಳಲ್ಲಿ, ಬರೀ ಮಾತಾಡಿದರೆ ಸಾಲದು, ಕನ್ನಡ ಭಾಷೆಯ ಸೌಂದರ್ಯವನ್ನು ಕಾಣಬೇಕಾದರೆ ಓದಲು, ಬರೆಯಲು ಕೂಡ ಕಲಿಯಲೇಬೇಕೆಂದು ತುಂಬಾ ಅನ್ನಿಸಿತು. ಆದರೆ ಕಲಿಕೆಗೆ ಸೂಕ್ತ ಸಮಯ ಸಿಕ್ಕಿರಲಿಲ್ಲ.

ಇದೀಗ ಎರಡು ವರ್ಷಗಳಿಂದ, ಕನ್ನಡ ಭಾಷೆಯನ್ನು ಕಲಿಯಲೇಬೇಕೆಂದು ಗಟ್ಟಿಯಾಗಿ ನಿರ್ಧಾರ ಮಾಡಿ ಸಮಗ್ರ ಕಲಿಕೆ ಶುರುಮಾಡಿದ್ದೇನೆ. ಕನ್ನಡವನ್ನು ಕಲಿಯಬೇಕೆಂದು ಹೊರಟಾಗ, ಶಿಕ್ಷಕರ ಹುಡುಕಾಟ, ಎಲ್ಲಿಂದ ಕಲಿಕೆ ಶುರು ಮಾಡಬೇಕು, ಹೇಗೆ ಶುರು ಮಾಡಬೇಕು, ಪಠ್ಯಕ್ರಮ ಹೇಗಿರಬೇಕು ಎಂಬೆಲ್ಲಾ ಗೊಂದಲಗಳು ಇದ್ದೇ ಇದ್ದವು. ಈ ಎಲ್ಲಾ ಗೊಂದಲಗಳ ನಡುವೆಯೇ ಮೊದಲ ಹೆಜ್ಜೆ ಇಟ್ಟಿದ್ದೆ.

ಮೊದಲು ಅಂಗನವಾಡಿ ಶಿಕ್ಷಕರಾದ ಸನತ್ ಎಂಬುವರಿಂದ ಕಲಿಕೆ ಆರಂಭಿಸಿದೆ. ಕನ್ನಡದ ಅಕ್ಷರಗಳು, ವರ್ಣಮಾಲೆಗಳನ್ನು ಮಕ್ಕಳಂತೆ ಅಭ್ಯಾಸ ಮಾಡುತ್ತಲೇ ಹಂತಹಂತವಾಗಿ ವಾಕ್ಯ ರಚನೆಯನ್ನೂ ಕಲಿತೆ. ಆಮೇಲೆ 5ನೇ ತರಗತಿ ಶಿಕ್ಷಕರಿಂದ, 10ನೇ ತರಗತಿ ಶಿಕ್ಷಕರಿಂದ ಕನ್ನಡ ಭಾಷೆಯ ಮೂಲಗಳನ್ನು ಅರಿತೆ. ಒಂದು ವರ್ಷ ಮನೆಯಲ್ಲೇ ಕನ್ನಡ ತರಗತಿ ಪಡೆದುಕೊಂಡೆ. ಹೆಚ್ಚಿನ ಕಲಿಕೆಗೆ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿದೆ. ಅಲ್ಲಿ ಎಂಟು ತಿಂಗಳ ಕಾಲ, ದಿನಕ್ಕೆ ಎಂಟು ಗಂಟೆಯ ಅವಧಿ ಕನ್ನಡ ಮಾಧ್ಯಮದಲ್ಲಿಯೇ ಕರ್ನಾಟಕ ಇತಿಹಾಸ, ಭಾರತದ ಇತಿಹಾಸ, ಅರ್ಥಶಾಸ್ತ್ರ, ಸಾಮಾನ್ಯಜ್ಞಾನದ ವಿಷಯಗಳನ್ನು ಕಲಿತೆ.

ಕನ್ನಡ ಭಾಷೆಯನ್ನು ಓದಿ, ಬರೆಯಲು ಕಲಿಯುತ್ತಿದ್ದಂತೆ ಭಾಷೆಯ ಬಗ್ಗೆ ಆಸಕ್ತಿಯೂ ಹೆಚ್ಚಾಯಿತು. ಹಲವು ಪುಸ್ತಕಗಳನ್ನು ಓದಲು ಆರಂಭಿಸಿದೆ. ಪುಸ್ತಕ ಓದುತ್ತಾ ಮತ್ತೂ ಕಲಿಯಬೇಕೆಂಬ ಉತ್ಸಾಹ ಹೆಚ್ಚಾಗಿದೆ. ಈಗ ಲೋಹಿತ್ ಎಂಬ ಕನ್ನಡ ಪ್ರೊಫೆಸರ್ ಒಬ್ಬರಿಂದ ಕಲಿಕೆ ಮುಂದುವರೆಸಿದ್ದೇನೆ. ಕನ್ನಡವನ್ನು ಆಳವಾಗಿ ಅಧ್ಯಯನ ಮಾಡುವ ಪ್ರಯತ್ನದಲ್ಲಿದ್ದೇನೆ. ವಾರಕ್ಕೆ ನಾಲ್ಕು ದಿನ, ಐದು ಗಂಟೆ ಕಲಿಕೆ ಮುಂದುವರೆದಿದೆ. ಕರ್ನಾಟಕ ಇತಿಹಾಸ, ಸಾಹಿತ್ಯ, ವಚನಗಳನ್ನು ಓದಿ ತಿಳಿದುಕೊಳ್ಳುತ್ತಿದ್ದೇನೆ. ಓದುತ್ತಾ ಓದುತ್ತಾ ಕನ್ನಡ ಭಾಷೆ ಎಷ್ಟು ಸುಂದರ ಎಂಬ ಅರಿವು ಹೆಚ್ಚಾಗುತ್ತದೆ. ಅಚ್ಚರಿಯೂ ಆಗುತ್ತಿದೆ.

ಈಗ ಅನ್ಯಭಾಷಿಗರ ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಯೋಜನೆಯೊಂದನ್ನು ಸ್ವಯಂಪ್ರೇರಣೆಯಿಂದ ರೂಪಿಸಿದ್ದೇನೆ. ಅನ್ಯಭಾಷಿಗರಿಗೆ ಯಾವ ರೀತಿಯಲ್ಲಿ ಕನ್ನಡ ಭಾಷೆಯನ್ನು ಹೇಳಿಕೊಟ್ಟರೆ ಸುಲಭವಾಗುತ್ತದೆ ಎಂಬುದರ ಕುರಿತ ಯೋಜನೆಯಿದು. ಇದು ಹಲವರಿಗೆ ಉಪಯೋಗವಾಗಲಿದೆ ಎಂಬ ಭರವಸೆ ನನಗಿದೆ.

ನನ್ನ ಪಾಲಿಗೆ ನವೆಂಬರ್‌ ಮಾತ್ರವಲ್ಲ, 365 ದಿನವೂ ಕನ್ನಡ ರಾಜ್ಯೋತ್ಸವವೇ. ಕನ್ನಡ ಕಲಿಕೆ ಒಂದು ದಿನದ, ಒಂದು ತಿಂಗಳ ವಿಷಯ ಅಲ್ಲ, ಪ್ರತಿ ದಿನದ ಹಬ್ಬ ನನಗೆ.

ನಿರೂಪಣೆ: ಸುಮಲತಾ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT