ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ | ಜನವಾದಿ ಸಂಶೋಧಕ ಪಾಲ್ತಾಡಿ

Published 18 ಮೇ 2024, 23:57 IST
Last Updated 18 ಮೇ 2024, 23:57 IST
ಅಕ್ಷರ ಗಾತ್ರ

ಊರು ಕಟ್ಟುವ ಶಿಕ್ಷಕರು ಮಾತ್ರ ಕೇವಲ ಎರಡು ತಲೆಮಾರಲ್ಲ, ಇಡೀ ಗ್ರಾಮವನ್ನು ನಿರಂತರವಾಗಿ ತಿದ್ದುತ್ತಾರೆ ಎಂಬುದಕ್ಕೆ ಸಾಕ್ಷಿಯಂತಿದ್ದರು ಇತ್ತೀಚೆಗೆ ನಿಧನರಾದ ಪಾಲ್ತಾಡಿ ಮೇಷ್ಟ್ರು...

ಪಾಲ್ತಾಡಿ ರಾಮಕೃಷ್ಣ ಆಚಾರ್ ಜೀವನಪೂರ್ತಿ ತಮ್ಮ ಸುತ್ತು ಬದುಕು ಮತ್ತು ಜಗತ್ತನ್ನು ಕುರಿತು ಆಲೋಚಿಸಿದ್ದು ಮನುಷ್ಯತ್ವದ ನೆಲೆಯಲ್ಲಿ. ಈ ಕಾರಣಕ್ಕೇ ಅವರನ್ನು ವಿಶ್ವವಿದ್ಯಾನಿಲಯದ ಸಭೆಯಲ್ಲಿ, ಅಕಾಡೆಮಿಯ ಚಾವಡಿಯಲ್ಲಿ, ಶಾಲಾ–ಕಾಲೇಜಿನ ತರಗತಿಯಲ್ಲಿ, ದೈವದ ಮನೆಯ ಅಂಗಳದಲ್ಲಿ ಒಬ್ಬ ಸಂಶೋಧಕ, ಪ್ರಾಧ್ಯಾಪಕ, ಪ್ರಾಚಾರ್ಯ, ಅಕಾಡೆಮಿಯ ಅಧ್ಯಕ್ಷ ಎಂದು ಕಂಡವರಿಗಿಂತ ಸರಳವಾಗಿ ‘ಪಾಲ್ತಾಡಿ ಮೇಷ್ಟ್ರು’ ಎಂದು ಭಾವಿಸಿದವರೇ ಹೆಚ್ಚು. ಒಂದು ಇಡೀ ಊರು ಕರೆಯುವ ‘ಎಡ್ಡೆ ಮಾಸ್ಟ್ರ’ (ಒಳ್ಳೆಯ ಮೇಷ್ಟ್ರು) ಎಷ್ಟೋ ಬಾರಿ ರಾಷ್ಟ್ರಪ್ರಶಸ್ತಿಗಿಂತ ದೊಡ್ಡದಾಗುವುದು ಇದೇ ಮಾನವೀಯ ಕಾರಣಕ್ಕೆ.

ಸಾಮಾನ್ಯವಾಗಿ 30-40 ವರ್ಷಗಳ ಅವಧಿಯಲ್ಲಿ ಗುರುವೊಬ್ಬ ಶಾಲೆಯೊಳಗಡೆ ಅಪ್ಪ ಮತ್ತು ಮಗನನ್ನು ತಿದ್ದುವುದು ಇದ್ದೇ ಇದೆ. ಆದರೆ ಊರು ಕಟ್ಟುವ ಶಿಕ್ಷಕರು ಮಾತ್ರ ಕೇವಲ ಎರಡು ತಲೆಮಾರಲ್ಲ, ಇಡೀ ಗ್ರಾಮವನ್ನು ನಿರಂತರವಾಗಿ ತಿದ್ದುತ್ತಾರೆ, ಆಕರ್ಷಿಸುತ್ತಾರೆ. ಹೀಗೆ ಎಲ್ಲರಿಗೂ ಬೇಕಾಗುವ ಮೇಷ್ಟ್ರು ಅಲ್ಲಿ ಬರೀ ಸಂಶೋಧಕನಾಗಿ ಮಾತ್ರ ಉಳಿಯಲಾರ. ಎಲ್ಲರೊಂದಿಗೆ  ಒಡಗೂಡಿ ಸರಿಪಡಿಸುವ, ಪ್ರೀತಿಯ ಸಂಬಂಧ ಸಹವಾಸ ಸಾಮಾಜಿಕ ನ್ಯಾಯದ ಪಾಯದಲ್ಲಿ  ಹಳ್ಳಿಗಳನ್ನು ಕಟ್ಟುತ್ತಾನೆ. ಬರವಣಿಗೆ ಭಾಷಣ ಸಂಶೋಧನೆಯನ್ನು ಪಕ್ಕಕ್ಕಿಟ್ಟು ನೋಡಿದಾಗಲೂ ಪಾಲ್ತಾಡಿ ರಾಮಕೃಷ್ಣ ಮೇಷ್ಟ್ರು ಬಹುಮಂದಿಗೆ ಇಷ್ಟವಾಗುವುದು ಈ ಮೇಲಿನ ಕಾರಣಕ್ಕೇ.

ಹಾಗೆ ನೋಡಿದರೆ ನನಗೆ ಪಾಲ್ತಾಡಿ ಮೇಷ್ಟ್ರು ನೇರ ಗುರುಗಳಲ್ಲ. ಲೋಕ ಶಿಕ್ಷಣದ ಗ್ರಹಿಕೆಯಲ್ಲಿ ಅರಿವನ್ನು ಬದುಕುವ ಪರೀಕ್ಷೆಗೆ ಅಂಟಿಸುವ ಕ್ರಮದಲ್ಲಿ ನನ್ನ ಮತ್ತು ಅವರ ಸಂಬಂಧ ಗಾಢವಾದದ್ದು ಮತ್ತು ನಿರಂತರವಾದದ್ದು. ಪುಟ್ಟ ಹಳ್ಳಿಯೊಂದರಿಂದ ಹುಟ್ಟಿಬಂದು ತಮ್ಮ  ವಲಯವನ್ನು ವಿಸ್ತರಿಸುತ್ತಲೇ ಹುಟ್ಟಿದೂರಿಗೂ ಹೆಸರು ದಕ್ಕಿಸಿದವರು. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಪದವಿಪೂರ್ವ ಕಾಲೇಜಿಗೆ ಏರಿ ಪ್ರಾಚಾರ್ಯರಾಗಿ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್- ಅಧ್ಯಕ್ಷರಾಗಿ ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದವರು. ತುಳು-ಕನ್ನಡ ಸಾಹಿತ್ಯ, ಜಾನಪದ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಪಾಲ್ತಾಡಿ ಅವರ ಜೀವನವೇ ಅಂತಹ ನೆಲೆಯಿಂದ ಎದ್ದು ಬರುವ ಅನಾಮಿಕ ವಿದ್ಯಾರ್ಥಿಗಳಿಗೆ ಇಂದಿಗೂ ಮಾದರಿ.

ಪಾಲ್ತಾಡಿಯವರು ತುಳುನಾಡಿನ ಬುಡಕಟ್ಟು ಜನಾಂಗ, ಆದಿವಾಸಿ ಅಥವಾ ದೈವ ನರ್ತಕರಂಥ ವೃತ್ತಿ ಬದುಕು ಮಾಡುವವರ ಜೊತೆಗೆ ನಿರಂತರ ಸಂಬಂಧ ಇಟ್ಟುಕೊಂಡವರು. ಅವರ ಹಾಡು ನೃತ್ಯ ಪಳಮೆ ನುಡಿಗಟ್ಟುಗಳನ್ನು ಅವರ ಮೂಲಕವೇ ಲೋಕಕ್ಕೇರಿಸಿದವರು. ಪ್ರದರ್ಶನ ಮತ್ತು ಪುಸ್ತಕ ಎರಡೂ ದಾರಿಯಲ್ಲೂ ಪಾಲ್ತಾಡಿ ಅಂಥ ಪರಿಧಿಯ ನಿಜ ಜನಪದರನ್ನು ಮುಖ್ಯವಾಹಿನಿಗೆ ತಂದವರು. ಪಾಲ್ತಾಡಿ ರಚಿಸಿದ ಜಾನಪದ ಕೃತಿಗಳು, ಸಂಗ್ರಹಿಸಿದ ಜನಪದ ಕಥೆಗಳು, ಆರಾಧನೆ ನಂಬಿಕೆ ವೈದ್ಯ ಪದ್ಧತಿ ಇತ್ಯಾದಿಗಳ ಕುರಿತು ಬರೆದ ಲೇಖನಗಳು, ಯೋಜಿಸಿದ ಕಮ್ಮಟಗಳು ಕಡಿಮೆಯಲ್ಲ. ಈ ಹಾದಿಯುದ್ದಕ್ಕೂ ಮೃದುನಗು, ವಿನಯ, ಕುತೂಹಲ, ಚಿಕಿತ್ಸಕ ದೃಷ್ಟಿ, ವಿದ್ಯಾರ್ಥಿ ಪ್ರೀತಿ, ಲೋಕ ಸಹವಾಸ ಪಾಲ್ತಾಡಿಯವರ ಹಿರಿಮೆ.

ಭಾಗಶಃ ನೆಲದವರ ಬಾಯಿ ಮಾತಾಗಿದ್ದ ತುಳುವನ್ನು ಶಾಲಾ ಪಠ್ಯ-ಶೈಕ್ಷಣಿಕ ಆವರಣಕ್ಕೇರಿಸಬೇಕೆನ್ನುವ, ಅದನ್ನು ಸಂವಿಧಾನದ ಎಂಟನೆಯ ಗುಂಪಿಗೆ ಸೇರಿಸಲೇಬೇಕೆನ್ನುವ ಪಾಲ್ತಾಡಿಯವರ ಹಟಕ್ಕೆ ಸ್ಥಿರ ಪಾಯ ಸಿಕ್ಕಿದ್ದು ತುಳು ಸಾಹಿತ್ಯ ಅಕಾಡೆಮಿಯ ಅವರ ಅಧ್ಯಕ್ಷ ಅವಧಿ. ಈವರೆಗಿನ ಅಕಾಡೆಮಿಯ ಸ್ಥಾನಿಕ ಅಧಿಕಾರ ಪರಂಪರೆ ಮತ್ತು ತುಳುವರು ನೆನಪಿಡಲೇ ಬೇಕಾದ ಮಹತ್ವದ ಮೂರು-ನಾಲ್ಕು ಕಾರ್ಯಗಳನ್ನು ಅವರು ಸಾಧಿಸಿದ್ದರು. ಒಂದು- ತುಳು  ಅಕಾಡೆಮಿಗೆ ಸ್ವತಃ ಕಚೇರಿ, ಸಭಾಭವನವಿರುವ ಸ್ವತಂತ್ರ ಕಟ್ಟಡ. ಎರಡು- ತುಳುವನ್ನು ವಿಶ್ವಕೇರಿಸುವ ವಿಶ್ವ ತುಳು ಸಮ್ಮೇಳನದ ಸಂಯೋಜನೆಯಲ್ಲಿ ಪಾಲುಗಾರಿಕೆ. ಮೂರು -ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪಠ್ಯ ಅನುಷ್ಠಾನ. ನಾಲ್ಕನೆಯದು ಸಂವಿಧಾನದ ಎಂಟನೆಯ ಗುಂಪಿಗೆ ತುಳುವನ್ನು ಸೇರಿಸುವ ಗಂಭೀರ ಪ್ರಯತ್ನ. ಈ ನಾಲ್ಕರಲ್ಲಿ ಮೊದಲ ಮೂರರ ಅನುಷ್ಠಾನದಲ್ಲಿ ಪಾಲ್ತಾಡಿ ಪಾತ್ರ ಮಹತ್ವದ್ದು.

ಪಾಲ್ತಾಡಿಯವರು ತಮ್ಮ ಸಮಕಾಲೀನರು, ಹಿರಿಯರು ಬಹುಮುಖ್ಯವಾಗಿ ಬಿ.ಎ.ವಿವೇಕ ರೈ, ಪ್ರೊ.ಅಮೃತ ಸೋಮೇಶ್ವರ, ಚಿನ್ನಪ್ಪ ಗೌಡ, ಪುರುಷೋತ್ತಮ ಬಿಳಿಮಲೆ ಮುಂತಾದವರ ಪರಂಪರೆಯನ್ನು ಸಮರ್ಥವಾಗಿ ನಿಷ್ಠೆಯಿಂದ ಮುಂದುವರಿಸಿದವರು. ಹಾಗೆ ನೋಡಿದರೆ ಇತ್ತೀಚಿಗೆ ಅಗಲಿದ ಹಿರಿಯ ಲೇಖಕ ಕವಿ ಸಂಶೋಧಕ ಯಕ್ಷಗಾನ ಪ್ರಸಂಗಕರ್ತ ಪ್ರೊ.ಅಮೃತ ಸೋಮೇಶ್ವರ ಅವರೇ ಪಾಲ್ತಾಡಿಯವರ ನಿಜಗುರು. ಸುಮಾರು 60 ವರ್ಷಗಳ ಹಿಂದೆ ಪಾಲ್ತಾಡಿ ಮೇಷ್ಟ್ರಾಗಿದ್ದ ಕೆಯ್ಯೂರು ಶಾಲೆಗೆ ಚುನಾವಣಾಧಿಕಾರಿಯಾಗಿ ಬಂದ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಅಮೃತ ಸೋಮೇಶ್ವರ, ಅಲ್ಲೇ ಶಿಕ್ಷಕರಾಗಿದ್ದ ರಾಮಕೃಷ್ಣ ಆಚಾರ್ ಅವರನ್ನು ಮಾತನಾಡಿಸಿದ್ದು; ಆ ಮೂಲಕ ಪಾಲ್ತಾಡಿ ಅವರು ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡದ್ದು; ಮುಂದೆ ಅವರು ಸಾಂಸ್ಕೃತಿಕ ಶೈಕ್ಷಣಿಕ ಸಾಹಿತಿಕವಾಗಿ ಬಹಳಷ್ಟು ಸಾಧಿಸಿದ್ದು ಉಲ್ಲೇಖನಿಯ.

ನುಡಿ ನಡೆಯಲ್ಲಿ ಸರಳವಾಗಿ ಬಿಡುವ ಪಾಲ್ತಾಡಿ ಬಹಳಷ್ಟು ಸಂದರ್ಭದಲ್ಲಿ ಬುದ್ಧಿಜೀವಿಗಳ ಗುಂಪಿನಲ್ಲಿ ಕಳೆದುಹೋದಂತೆ ಇದ್ದವರು. ಆಚಾರ್ರು ಎಂದಿಗೂ ಸಾಹಿತಿಕ ಪರಿಭಾಷೆಯಲ್ಲಿ ಮಾತನಾಡಿದವರಲ್ಲ. ವಿಷಯಗಳನ್ನು ಬೇರೆಯವರ ಗಮನಕ್ಕಿಂತ ಹೃದಯಕ್ಕೆ ತರಬೇಕೆಂದು ಬಯಸಿದವರು. ಅವರ ಮನಸ್ಸಿನಂತೆ ಮಾತು ಕೂಡ ಸರಳ. ಎಳೆ ಎಳೆಯಾಗಿ ಬರೆದವರು, ಮಾತನಾಡಿದವರು. ಕೆಲವೊಮ್ಮೆ ಮಾತನಾಡುವವರನ್ನು ಬರೆಯುವವರನ್ನೆಲ್ಲ ಹುಡುಕಿ ಹುಡುಕಿ ಎಳೆದು ವೇದಿಕೆ ಹತ್ತಿಸಿದವರು. ಪ್ರೊ. ಬಿ.ಎ. ವಿವೇಕ ರೈ ಅವರು ತುಳು ಅಕಾಡೆಮಿಗೆ ಅಧ್ಯಕ್ಷರಾಗಿದ್ದಾಗ ಪಾಲ್ತಾಡಿ ಅವರು ರಿಜಿಸ್ಟ್ರಾರ್ ಆಗಿ ‘ ರೈ- ಪಾಲ್ತಾಡಿ’ ಜೋಡಿ ಮಾಡಿರುವ ಸಾಧನೆ ಇವತ್ತಿಗೂ ಮಾದರಿಯೇ. ಆಗ ಅಕಾಡೆಮಿಯು ಚಾವಡಿಯಿಂದ ಹೊರಗೆ ಬಂದು ಹಳ್ಳಿಹಳ್ಳಿಗಳಿಗೆ, ತುಳುವರು ಇರುವ ರಾಜ್ಯ-ದೇಶಗಳಿಗೆ ನುಗ್ಗಿದ್ದು ಆಗಲೇ. ಗುತ್ತು ಮನೆ ಅಂಗಳಕ್ಕೆ ಸೀಮಿತವಾಗಿದ್ದ ದೈವ ಸಂಸ್ಕೃತಿ ಕಲೆ ನೃತ್ಯಗಳನ್ನು ರಾಜ್ಯ, ರಾಷ್ಟ್ರಮಟ್ಟದ ವೇದಿಕೆಗೇರಿಸಿದ್ದು; ತುಳುನಾಡಿನ ಕೆಡ್ಡಸ ಆಟಿ ಬಿಸು ಉತ್ಸವಗಳನ್ನು ಶೈಕ್ಷಣಿಕ ಪರಿಸರದಲ್ಲಿ ಸಾರ್ವತ್ರಿಕಗೊಳಿಸಿದ್ದು-ಈ ವಿಷಯದಲ್ಲಿ ಪಾಲ್ತಾಡಿ ಅವರು ಹಿಡಿದ ದಾರಿ ಹಟ ಶಿಸ್ತು ಗಮನೀಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT