ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ: ನೆನಪಿನ ಹಳ್ಳಿಯ ಗುಂಗಿನಲ್ಲಿ..

ಖ್ಯಾತ ಸಮಾಜಶಾಸ್ತ್ರಜ್ಞ ಪ್ರೊ. ಎಂ.ಎನ್. ಶ್ರೀನಿವಾಸ
Published 14 ಮೇ 2023, 1:06 IST
Last Updated 14 ಮೇ 2023, 1:06 IST
ಅಕ್ಷರ ಗಾತ್ರ

ಲೇಖನ– ಜಿ.ಎಂ. ಶಿರಹಟ್ಟಿ

ಸುಮಾರು 30 ವರ್ಷಗಳ ಹಿಂದೆ ಬೆಂಗಳೂರಿನ ‘ನಿಯಾಸ’ ಸಂಸ್ಥೆ ಕುರಿತು ಸಾಕ್ಷ್ಯಚಿತ್ರವನ್ನು ತಯಾರಿಸುತ್ತಿರುವಾಗ ಸಮಾಜಶಾಸ್ತ್ರದ ಪ್ರಾಧ್ಯಾಪಕಿ ವನಜಾಕುಮಾರ ಅವರು ‘ನಿಯಾಸ’ ಸಂಸ್ಥೆಯ ತಮ್ಮ ಹಳೆಯ ಫೋಟೊ ಅಲ್ಬಮ್‌ನಲ್ಲಿ ಅನೇಕ ಖ್ಯಾತರ ಫೋಟೋಗಳನ್ನು ಬಹಳ ಆಸಕ್ತಿಯಿಂದ ತೋರಿಸತೊಡಗಿದರು. ‘ಇದು ಡಾ. ರಾಜಾರಾಮಣ್ಣ ಅವರದು... ಇವರು ಮೃಣಾಲ ಸೇನ್... ಇವರು ಮನಮೋಹನ ಸಿಂಗ್’ ಎನ್ನುತ್ತ ಮುಂದಿನ ಫೋಟೋವೊಂದಕ್ಕೆ ಅವರ ಕೈ ಗಕ್ಕನೆ ನಿಂತಿತು. ಬಿಳಿಕೂದಲಿನ ತಳ್ಳನೆಯ ಸೂಟ್‌ಧಾರಿ ವ್ಯಕ್ತಿಯ ಜೊತೆಗೆ ತಾವು ನಿಂತ ಫೋಟೊ ಅದು. ಖ್ಯಾತ ಸಮಾಜಶಾಸ್ತ್ರಜ್ಞ ಪ್ರೊ. ಎಂ.ಎನ್. ಶ್ರೀನಿವಾಸ ಅವರ ಫೋಟೊ. ಅವರು ಬೆಂಗಳೂರಿನಲ್ಲಿ ನಿಧನರಾದಾಗ ಬಹಳಷ್ಟು ಖ್ಯಾತರು ಜಗತ್ತಿನ ತುಂಬೆಲ್ಲ ಕಂಬನಿ ಮಿಡಿದಿದ್ದರು. ಬೆಂಗಳೂರಿನ ಬೆನ್‌ಸನ್‌ಟೌನ್‌ನಲ್ಲಿ ಅವರ ಮನೆ ಇದೆ. ಅವರದೊಂದು ಪುಸ್ತಕ ‘ದಿ ರಿಮೆಂಬರ್ಡ್‌ ವಿಲೇಜ್’ ಬಹಳ ಪ್ರಸಿದ್ಧವಾದುದು. ಅದನ್ನು  ಓದಬೇಕು ಎಂದು ವನಜಾಕುಮಾರ ವಿವರಿಸಿದ್ದಾಗ, ಕುತೂಹಲ, ಗೌರವದ ಭಾವನೆ ಹುಟ್ಟಿಸಿತು.

ಮರುದಿನ ವನಜಾ ಅವರು ‘ದಿ ರಿಮೆಂಬರ್ಡ್‌ ವಿಲೇಜ್‌’ ಪುಸ್ತಕ ತಂದುಕೊಟ್ಟರು. ಅದೊಂದು ಹಳದಿ ಪುಸ್ತಕ ಸಾಧಾರಣ ಹೊದಿಕೆಯ ಪುಸ್ತಕ. ಮುಖಪುಟವೇನೂ ಅಷ್ಟೊಂದು ಆಕರ್ಷಕವಾಗಿರಲಿಲ್ಲ. ಆದರೆ, ಅವರು ಆ ಪುಸ್ತಕ ಕುರಿತು ಹೇಳಿದ ಕಥೆ ಆಸಕ್ತಿಕರವಾಗಿದೆ:

‘ಶ್ರೀನಿವಾಸ ಅವರು 1947ರಲ್ಲಿ ಆಕ್ಸ್‌ಫರ್ಡ್‌ನಲ್ಲಿ ಓದುತ್ತಿರುವಾಗ ಮೈಸೂರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಕೊಡಗಹಳ್ಳಿ ಗ್ರಾಮದಲ್ಲಿ 18 ವರ್ಷ ಇದ್ದರು. ಹಳ್ಳಿಯಲ್ಲಿಯ ಜನಜೀವನ, ವಿವಿಧ ಜಾತಿ–ಮತ–ಪಂಥಗಳ ಸಾಮಾಜಿಕ ಸಂಬಂಧ, ರಾಜಕೀಯ, ಧಾರ್ಮಿಕ ಪ್ರಭಾವ ಮುಂತಾದವುಗಳ ಅಧ್ಯಯನ ಮಾಡಿ, ಅನೇಕ ನೋಟ್ಸ್‌, ಡೈರಿಗಳಲ್ಲಿ ಫೈಲು ತುಂಬಿಕೊಂಡು 1970ರ ಹೊತ್ತಿಗೆ ಸ್ಟಾಂನ್‌ಫೋರ್ಡ್‌ ವಿಶ್ವವಿದ್ಯಾಲಯಕ್ಕೆ ತೆರಳಿದರು. ಇನ್ನೇನು ತಾವು ಸಿದ್ಧಪಡಿಸಿದ ಎಲ್ಲ ಸಾಮಗ್ರಿಗಳ ಸಮಗ್ರ ವರದಿಯನ್ನು ಆಕ್ಸ್‌ಫರ್ಡ ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು ಎನ್ನುವಷ್ಟರಲ್ಲಿ ಅವರು ಬಾಕ್ಸ್‌ಗಳನ್ನು ಇಟ್ಟಿದ್ದ ಲೈಬ್ರರಿ ಬೆಂಕಿಗೆ ಆಹುತಿ ಆಯಿತು. ಅದರ ಜೊತೆಗೆ 18 ವರ್ಷಗಳ ವರ್ಷಗಳ ಅಧ್ಯಯನ ಸಾಮಗ್ರಿಯೂ ನಾಶವಾಗಿತ್ತು.

ಶ್ರೀನಿವಾಸ ಅವರು ಬಹು ದುಃಖಿತರಾದರು. ಅವರ ಪರಿಶ್ರಮವೆಲ್ಲ ಹಾಳಾಗಿತ್ತು. ನಂತರ ಅವರು ತಮ್ಮ ಪ್ರೊ.ಸೋಲಟ್ಯಾಕ್ಸ್‌ ಅವರ ಸಲಹೆಯಂತೆ 18 ವರ್ಷಗಳ ನೆನಪುಗಳನ್ನು ತೆರೆದು ತೆರೆದು ವಿವರವಾದ ಮಹತ್ವಪೂರ್ಣವಾದ ವರದಿ ಸಿದ್ಧಪಡಿಸಿದರು. ಆ ವರದಿಯೇ ಈ ಪುಸ್ತಕ. ಅವರ ಈ ಖ್ಯಾತ ಪುಸ್ತಕದಿಂದ ಕೊಡಗಹಳ್ಳಿ ರಾಮಪುರ ಎಂದು ಖ್ಯಾತಿ ಪಡೆಯಿತು.

ವನಜಾ ಅವರ ವಿವರಣೆ ಕೇಳಿದ ಮೇಲೆ ಮನೆಗೆ ಬಂದು ಶ್ರೀನಿವಾಸರ ನೆನಪಿನ ಹಳ್ಳಿಯ ಚಿತ್ರಣವನ್ನು ಓದತೊಡಗಿದೆ. ಆಳವಾದ ಆಸಕ್ತಿ, ದೀಕ್ಷಾಬದ್ಧ ಸಂಶೋಧನೆ, ಅಧ್ಯಯನ, ಸಂಗ್ರಹಿಸಿದ ಅಪೂರ್ವ ಮಾಹಿತಿಯನ್ನು ಹೇಳುವ ತೀವ್ರತೆ ಮತ್ತು ಹೊಣೆಗಾರಿಕೆಯ ಅರಿವು ಕಾಡಿತು. ಶ್ರೀನಿವಾಸ ಅವರ ನೆನಪಿನ ಹಳ್ಳಿ ಈಗ ಹೇಗಿರಬೇಕು ಎಂಬುದನ್ನು ನೋಡುವ ಹಂಬಲ ಹೆಚ್ಚಾಯಿತು. ವನಜಾ ಅವರೊಂದಿಗೆ ರಾಮಪುರಕ್ಕೆ ಮೂವಿ ಕ್ಯಾಮೆರಾದೊಂದಿಗೆ ಹೋಗುವ ಯೋಜನೆ ಹಾಕಿಕೊಂಡು, ಮೈಸೂು ಆಕಾಶವಾಣಿಯ ಕೇಶವ ಮೂರ್ತಿ ಅವರೊಂದಿಗೆ ಹೊರಟೆವು.

ನಮ್ಮನ್ನು ಸ್ವಾಗತಿಸಿದ್ದು ರಾಮಪುರದ ಸುಂದರವಾದ ಗದ್ದೆಸಾಲುಗಳು (ಶ್ರೀನಿವಾಸ ಅವರು ಮೊದಲಿಗೆ ಇಲ್ಲಿ ಬಸ್ಸಿನಿಂದ ಇಳಿದಾಗ ಅವರ ಲಗೇಜು ಇನ್ನುಳಿದ ಸಾಮಾನುಗಳನ್ನು ಅವರು ಇಳಿದುಕೊಳ್ಳುವ ಮನೆಗೆ ತೆಗೆದುಕೊಂಡು ಹೋಗಲು ಯಾರೂ ಇರಲಿಲ್ಲ. ಅವರ ಜೊತೆಗೆ ಬಂದ ಅಡಿಗೆಯವ ವ್ಯವಸ್ಥೆ ಮಾಡಿದ್ದ). ಅಲ್ಲಲ್ಲಿ ಹಸಿರು, ಬೀದಿ, ಹಂಚಿನ ಮನೆಗಳನ್ನು ದಾಟಿ ಕೇಶವ ಮೂರ್ತಿ ಅವರ ಸಂಬಂಧಿಕರ ಮನೆಗೆ ಹೋದೆವು.

ಮಧ್ಯಾಹ್ನದ ಹೊತ್ತಿಗೆ ರಾಮಪುರ ನೋಡಲು ಕೇಶವಮೂರ್ತಿಯ ಸಂಬಂಧಿಕ ಶಿಕ್ಷಕರು ಒಬ್ಬರು ನಮ್ಮನ್ನು ಕರೆದುಕೊಂಡು ನಡೆದರು. ರಾಮಪುರ ಹಳ್ಳಿಯ ಹಾಗೆ ಕಾಣಲೇ ಇಲ್ಲ. ಅದೊಂದು ಬದಲಾಗುತ್ತಿರುವ ಗ್ರಾಮವಾಗಿತ್ತು. 50 ವರ್ಷಗಳ ಹಿಂದೆ ಶ್ರೀನಿವಾಸ ಅವರಿದ್ದಾಗ ಇದ್ದ ರೈಸ್‌ಮಿಲ್ ಹಾಗೇ ಇತ್ತು. ಊರಲ್ಲಿ ಹಲವಾರು ಹಳೆಯ ಮನೆಗಳು ಇದ್ದರೂ ಆಧುನಿಕ ಅನುಕೂಲಗಳನ್ನು ಪಡೆದುಕೊಂಡು ಸ್ವರೂಪವನ್ನೇ ಬದಲಾಯಿಸಿಕೊಂಡಿದ್ದವು. ರಾಮಪುರ ಒಂದು ಮಾದರಿ ಗ್ರಾಮವಾಗಿ ಮಾರ್ಪಾಡಾಗಿತ್ತು. ದನದ ಕೊಟ್ಟಿಗೆ ಕಲ್ಲೆಗೌಡ, ನಾಡುಗೌಡ ಮುಂತಾದವರು ಕಾಣಲೇ ಇಲ್ಲ. ನೆನಪಿನ ಹಳ್ಳಿಯಲ್ಲಿದ್ದ ಆ ಪರಿಸರವನ್ನು ನಾವು ನೋಡಲೇ ಇಲ್ಲ. ಶ್ರೀನಿವಾಸ ಅವರು ಅಧ್ಯಯನ ಮುಗಿಸಿ ಹೊರಡುವಾಗಲೇ ರಾಮಪುರ ಬದಲಾವಣೆಯತ್ತ ಮೈ ಚಾಚಿತ್ತು.

ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ, ಆರ್ಯುರ್ವೇದ ಆಸ್ಪತ್ರೆ, ಪಶು ಚಿಕಿತ್ಸಾಲಯ, ಕಾವೇರಿ ಗ್ರಾಮೀಣ ಬ್ಯಾಂಕ್, ಸಹಕಾರಿ ಬ್ಯಾಂಕ್ ಇತ್ಯಾದಿ ಸೇರಿ ಶ್ರೀನಿವಾಸರ ಹಳ್ಳಿ ಹಾಗೆಯೇ ಇತ್ತು. ದೇವಸ್ಥಾನಗಳು ಯಾವುವೂ ಬದಲಾಗಿರಲಿಲ್ಲ. ಬಸವೇಶ್ವರ ದೇವಾಲಯ, ಹಟ್ಟಿ ಮಾರೆಮ್ಮ, ರಾಮದೇವರು, ಮುನೇಶ್ವರ ಮುಂತಾದ ಹಲವಾರು ದೇವಾಲಯಗಳೂ ಆಧುನಿಕ ಸೌಕರ್ಯಗಳಾದ ವಿದ್ಯುತ್ ಶಕ್ತಿ, ನೀರಿನ ನಳ ಮುಂತಾದವುಗಳಿಂದ ಕೂಡಿದ್ದವು.‌

ಶ್ರೀನಿವಾಸ ಅವರ ಒಡನಾಡಿಯಾಗಿ ಅವರ ಜೊತೆಗೇನೆ ಇದ್ದ ರಾಮೇಗೌಡರ ತಮ್ಮ ಜವರೇಗೌಡ, ಶ್ರೀನಿವಾಸ ಅವರು ಇದ್ದ ಮನೆ ತೋರಿಸಿದರು. ತಾವು ಚಿಕ್ಕವರಿದ್ದಾಗ ಅವರ ಅಣ್ಣ ಮತ್ತು ಶ್ರೀನಿವಾಸ ಅವರು ಚಿಮಣಿ ಎಣ್ಣೆ ದೀಪ ಬೆಳಕಿನಲ್ಲಿ ಕುಳಿತು ಬರವಣಿಗೆಯಲ್ಲಿ ಚರ್ಚೆಯಲ್ಲಿ ತೊಡಗಿರುತ್ತಿರುವುದನ್ನು ವಿವರಿಸಿದರು. ಈಗಲೂ ಇಲ್ಲಿ ಎಲ್ಲ ಜಾತಿಯ ಜನರು ಒಗ್ಗಟ್ಟಿನಿಂದ ಬಾಳುತ್ತಿದ್ದಾರೆಂಬುದನ್ನು ಜವರೇಗೌಡರು ಹೇಳಿದರು. ಈಗ ರಾಮಪುರದ ಅನೇಕ ವಿದ್ಯಾವಂತರು ಬೇರೆ ಬೇರೆ ಕಡೆಗಳಲ್ಲಿ ಕೆಲಸಕ್ಕಾಗಿ ಹೋಗತೊಡಗಿದ್ದಾರೆ ಎಂಬ ಎಲ್ಲ ವಿವರವನ್ನು ಹೇಳಿ ಮನೆಗೆ ಊಟಕ್ಕೆ ಕರೆದುಕೊಂಡು ಹೋದರು.

ಕೇಶವಮೂರ್ತಿ ಅನೇಕ ಫೋಟೋಗಳನ್ನು ಕ್ಲಿಕಿಸಿದರು. ಸಂಜೆ ಮರಳುವಾಗ ಬಸವೇಶ್ವರವ ದೇವಸ್ಥಾನದ ಆರತಿಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಮೈಸೂರಿನತ್ತ ಹೊರಟೆವು. 18 ವರ್ಷ ಈ ಹಳ್ಳಿಯಲ್ಲಿ ಇದ್ದು, ರಾಮಪುರದ ಪ್ರತಿಯೊಂದು ವಿಷಯವನ್ನು ತಿಳಿದು ನೆನಪಿನಲ್ಲಿಟ್ಟುಕೊಂಡದ್ದನ್ನು ನಾವು ಒಂದೇ ದಿನದಲ್ಲಿ ಮರುಭೇಟಿ ಮೂಲಕ ವೀಕ್ಷಿಸಿ ಬಂದೆವು. ಹಳ್ಳಿಯು ಹಳ್ಳಿಯಾಗಿದ್ದಾಗ ಅದರ ಅಧ್ಯಯನವೇ ಬೇರೆ. ಪಟ್ಟಣ, ನಗರಗಳ ಅಧ್ಯಯನವೇ ಬೇರೆ.

ರಾಮಪುರ ಗ್ರಾಮದಿಂದ ಹೊರಬಂದಾಗ ಶ್ರೀನಿವಾಸ ಅವರೇ ಎಲ್ಲಿದೆ ನಿಮ್ಮ ನೆನಪಿನ ಹಳ್ಳಿ ಎಂದು ಕೇಳುವಂತಾಯಿತು. ಅವರ ನೆನಪಿನ ಹಳ್ಳಿಯಲ್ಲಿ ಮತ್ತೆ ನಾನೂ ಮರೆಯಾದಂತಾಯಿತು. ನೋಡಿದ ಗ್ರಾಮಕ್ಕಿಂತ ನೆನಪಿನಲ್ಲಿ ಉಳಿದ ಹಳ್ಳಿಯೇ ಲೇಸು ಎಂದೆನಿಸಿತು.

ಈಗಿನ ರಾಮಪುರದ ಅಕ್ಕಸಾಲಿಗರು
ಈಗಿನ ರಾಮಪುರದ ಅಕ್ಕಸಾಲಿಗರು
ರಾಮೋಹಳ್ಳಿಯ ಬಸವನ ಗುಡಿ
ರಾಮೋಹಳ್ಳಿಯ ಬಸವನ ಗುಡಿ
‘ಸ್ಟಾಂನ್‌ಫೋರ್ಡ್‌ ಡೈಲಿ’ ಪತ್ರಿಕೆಯಲ್ಲಿಯ ವರದಿ
‘ಸ್ಟಾಂನ್‌ಫೋರ್ಡ್‌ ಡೈಲಿ’ ಪತ್ರಿಕೆಯಲ್ಲಿಯ ವರದಿ

ಅಮೆರಿಕೆ ಅಧ್ಯಕ್ಷರಿಂದ ಸಾಂತ್ವನ ಪತ್ರ ಸ್ಟಾಂನ್‌ಫೋರ್ಡ್‌ ವಿಶ್ವವಿದ್ಯಾಲಯದ ಲೈಬ್ರರಿ ಬೆಂಕಿ ದುರಂತದಲ್ಲಿ ಪ್ರೊ.ಎಂ.ಎನ್. ಶ್ರೀನಿವಾಸ ಅವರ ಅಧ್ಯಯನದ ಸಾಮಗ್ರಿ ಸಂಪೂರ್ಣ ಸುಟ್ಟು ನಾಶವಾದಾಗ ಆಗಿನ ಅಮೆರಿಕೆಯ ಅಧ್ಯಕ್ಷರಾಗಿದ್ದ ರಿಚರ್ಡ ನಿಕ್ಸನ್‌ ಅವರು ಶ್ರೀನಿವಾಸ ಅವರಿಗೆ ಸಾಂತ್ವನ ಪತ್ರ ಬರೆದದ್ದು ಗಮನಾರ್ಹವಾಗಿದೆ. ಈ ಪತ್ರದಲ್ಲಿ ಅಧ್ಯಕ್ಷರು ‘ಕೆಲವು ಕಿಡಗೇಡಿಗಳಿಂದ ಆದ ಈ ಬೆಂಕಿ ದುರಂತದಲ್ಲಿ ತಮ್ಮ ಅಧ್ಯಯನ ಸಾಮಗ್ರಿ ಸುಟ್ಟು ಭಸ್ಮವಾದ ಸಂಗತಿ ನಮಗೆಲ್ಲ ಕಳವಳವನ್ನುಂಟು ಮಾಡಿದೆ. ಭಾರತದ ಖ್ಯಾತ ಸಮಾಜ ಶಾಸ್ತ್ರಜ್ಞರಾದ ತಾವು ನಮ್ಮ ದೇಶದ ಗೌರವ ಅತಿಥಿಗಳಾಗಿದ್ದೀರಿ. ಈ ನಿಮ್ಮ ದುಃಖದಲ್ಲಿ ಅಮೆರಿಕೆಯ ಪ್ರಜೆಗಳು ಹಾಗೂ ಸರ್ಕಾರ ಭಾಗಿಯಾಗಿದ್ದೇವೆ. ನಮ್ಮ ಸಾಂತ್ವನವನ್ನು ಸ್ವೀಕರಿಸಿರಿ’ ಎಂದು ಬರೆದಿದ್ದರು. ಶ್ರೀನಿವಾಸ ಅವರಿಗೆ ವಿಶೇಷ ವಸತಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಈ ದುರಂತದಲ್ಲಿ ಶ್ರೀನಿವಾಸ ಅವರ ಸಾಮಗ್ರಿ ಸುಟ್ಟು ಕರಕಲಾದ ವಾರ್ತೆಯನ್ನು ಅಮೆರಿಕೆಯ ಅನೇಕ ಪತ್ರಿಕೆಗಳು ಪ್ರಕಟಿಸಿದವು. ವಿಶೇಷವಾಗಿ ‘ಸ್ಟಾಂನ್‌ಫೋರ್ಡ್‌’ ಡೈಲಿ ಪತ್ರಿಕೆಯು ವಿಶೇಷ ಪುಟವನ್ನೇ ತಂದಿತ್ತು.

ಕನ್ನಡಿಗರಿಗೆ ನೆನಪಿಸಿದ ಹಳ್ಳಿ ‘ದಿ ರಿಮೆಂಬರ್ಡ್‌ ವಿಲೇಜ್‌’ ಜಾಗತಿಕ ಮಟ್ಟದ ಸಮಾಜಶಾಸ್ತ್ರ ಪ್ರಾಧ್ಯಾಪಕಕರಿಗೆ ವಿದ್ಯಾರ್ಥಿಗಳಿಗೆ ಭಾರತೀಯ ಗ್ರಾಮೀಣ ಜೀವನದ ವ್ಯವಸ್ಥೆಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ರಚಿತವಾಗಿತ್ತು. ಆಚಾರ್ಯ ಪಾಠಶಾಲೆಯಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಟಿ. ಆರ್. ಶಾಮಭಟ್ಟರು ಅದರ ಕನ್ನಡ ಅನುವಾದವನ್ನು ಪ್ರಾರಂಭ ಮಾಡಿದಾಗ ಈ ಕೃತಿಯ ಇಂಗ್ಲಿಷ್ ಕರಡು ಪ್ರತಿ ಸಿದ್ಧವಾಗುತ್ತಿತ್ತು. ಕನ್ನಡ ಭಾಷೆಯ ಮೇಲೆ ಬಹಳಷ್ಟು ಪ್ರೀತಿ ಇದ್ದ ಶ್ರೀನಿವಾಸರು ನವರತ್ನರಾಮರ ಕೆಲವು ನೆನಪುಗಳು ಪುಸ್ತಕದಿಂದ ಪ್ರಭಾವಿತರಾಗಿದ್ದರು. ಐಜಾಕ್‌ನಲ್ಲಿ ಶ್ರೀನಿವಾಸ ಅವರು ಇದ್ದಾಗ ಶಾಮಭಟ್ಟರು ಅವರ ಜೊತೆಗೆ ಕೆಲಸ ಮಾಡುತ್ತಿದ್ದರು. ಅಲ್ಲದೆ ಮಾಸ್ತಿ ಅವರ ‘ಜೀವನ’ ಪತ್ರಿಕೆಯಲ್ಲಿ ಬರುತ್ತಿದ್ದ ಅನೇಕ ಬರಹಗಳನ್ನು ಆಸಕ್ತಿಯಿಂದ ಓದುತ್ತಿದ್ದರು. ಅಲ್ಲದೆ ಶ್ರೀನಿವಾಸ ಅವರು ಕನ್ನಡ ತೆಲಗು ತಮಿಳು ಜಾನಪದ ಗೀತೆಗಳನ್ನು ಸಂಗ್ರಹಿಸಿದ್ದರು. ಶಾಮಭಟ್ಟರ ಕನ್ನಡ ಅನುವಾದ ಕರಡು ಪ್ರತಿಯನ್ನು ಶ್ರೀನಿವಾಸ ಅವರು ಬಹಳ ಆಸಕ್ತಿಯಿಂದ ಓದಿದ್ದರು. ‘ನೆನಪಿನ ಹಳ್ಳಿ’ ಪ್ರಕಟಗೊಳ್ಳುವ ಮೊದಲೇ ಅವರು ವಿಧಿವಶರಾದರೆಂದು ಶಾಮಭಟ್ಟ ಅವರು ಈಗಲೂ ವಿಷಾದಿಸುತ್ತಾರೆ.

ಬೆನ್‌ಸನ್‌ ಟೌನ್‌ನಲ್ಲಿ ಅರಕೇರಾ ಎಂ.ಎನ್. ಶ್ರೀನಿವಾಸ ಅವರ ಪತ್ನಿ ರುಕ್ಮಿಣಿ ಅವರು ಅಮೆರಿಕೆಯಿಂದ ಬೆಂಗಳೂರಿಗೆ ಬರುತ್ತಿದ್ದಾರೆಂಬ ಮಾಹಿತಿಯನ್ನು ನನಗೆ ನಿಯಾಸ ಪ್ರಾಧ್ಯಾಪಕರು ನೀಡಿದಾಗ ನಾನು ಮತ್ತು ವನಜಾ ಅವರು ಅವರ ಭೆಟ್ಟಿಗಾಗಿ ಬೆನ್‌ಸನ್‌ಟೌನ್‌ನಲ್ಲಿ ಇದ್ದ ಅವರ ಮನೆಗೆ ಹೋದೆವು. ಅವರ ಮನೆಯ ಹೆಸರು ‘ಅರಕೇರಾ’ ಎಂದಿತ್ತು. ರಾಮಪುರದ ಹತ್ತಿರದ ಒಂದು ಹಳ್ಳಿ ಅರಕೇರಾ. ಶ್ರೀನಿವಾಸ ಅವರು ತಮ್ಮ ಹೊಸ ಮನೆಗೆ ಅದನ್ನೇ ಹೆಸರಾಗಿ ಇಟ್ಟಿದ್ದರು ಅಷ್ಟೇ ಅಲ್ಲದೆ ಮನೆಯ ಬಾಗಿಲನ್ನು ರಾಮಪುರದ ರಾಮೇಗೌಡರ ಮನೆಯ ಬಾಗಿಲಿನಂತೆಯೇ ಮಾಡಿಸಿದ್ದನ್ನು ಶಾಮಭಟ್ಟರು ನೆನಪಿಸಿಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT