ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿದು ಹೋದ ಸಹೋದರರನ್ನು ಒಗ್ಗೂಡಿಸಲು ಹೊರಟ ಸಂತ ಇಶ್ತಿಯಾಕ್‌ ಅಹಮ್ಮದ್‌

Published 2 ಜುಲೈ 2023, 1:49 IST
Last Updated 2 ಜುಲೈ 2023, 1:49 IST
ಅಕ್ಷರ ಗಾತ್ರ

– ಎಸ್‌. ರವಿಪ್ರಕಾಶ್

‘ದಯಮಾಡಿ ನಮ್ಮ ದೇಶವನ್ನು (ಪಾಕಿಸ್ತಾನ) ನಕಲು ಮಾಡಲು ಹೋಗಬೇಡಿ.... ನಾವು ನಾಶ ಆದಹಾಗೆ ನೀವೂ ನಾಶ ಹೊಂದಬೇಡಿ. ಭಾರತ ಒಂದು ಮಹಾನ್ ದೇಶ ಎಂಬುದು ಇಲ್ಲಿ ಬಂದು ನೋಡಿದಾಗ ಗೊತ್ತಾಗುತ್ತದೆ. ನಿಮ್ಮತನವನ್ನು ಕಾಪಾಡಿಕೊಳ್ಳಿ ... ’

– ಹೀಗೆಂದು ಹೃದಯದಾಳದಿಂದ ಹೇಳಿದವರು ಪ್ರೊ. ಇಶ್ತಿಯಾಕ್ ಅಹಮದ್. ಇವರು ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದಲ್ಲಿ ಮಾನವಹಕ್ಕುಗಳ ಕುರಿತು ಹಲವು ದಶಕಗಳ ಕಾಲ ಬೋಧನೆ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಸಿಂಗಾಪುರ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡಿದ್ದಾರೆ. ಮೂಲತಃ ಪಾಕಿಸ್ತಾನದ ಲಾಹೋರ್‌ನವರಾದ ಇವರೀಗ ಸ್ವೀಡನ್‌ನಲ್ಲಿ ವಾಸವಿದ್ದಾರೆ. ಸದ್ಯ ಅವರು ಭಾರತದಲ್ಲಿ ಪ್ರವಾಸದಲ್ಲಿದ್ದಾರೆ.

ಇವರ ಮೂರು ಪುಸ್ತಕಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಮತ್ತು ವಿಮರ್ಶೆಗೆ ಕಾರಣವಾಗಿರುವುದೂ ಅಲ್ಲದೆ, ಎರಡು ಕೃತಿಗಳಿಗೆ ಭಾರತ ಮತ್ತು ಪಾಕಿಸ್ತಾನದಲ್ಲಿ ಹಲವು ಪ್ರಶಸ್ತಿಗಳೂ ಲಭಿಸಿವೆ. ಆ ಎರಡೂ ಕೃತಿಗಳೆಂದರೆ, ‘Jinnah: His Successes, Failures and Role in History’ ಮತ್ತು ‘The Punjab Bloodied, Partitioned and Cleansed’ (ಪ್ರಶಸ್ತಿ ಪುರಸ್ಕೃತ ಕೃತಿಗಳು), ಮಿಲಿಟರಿ ಸರ್ವಾಧಿಕಾರವನ್ನು ಅನಾವರಣಗೊಳಿಸುವ ‘The Pakistan Garrison State: Origins, Evolution’.

ಇವರ ಕೃತಿಗಳು ಭಾರತದ ವಿಭಜನೆಗೆ ಹೊಸ ಹೊಳಹುಗಳನ್ನು ನೀಡಿದವು. ಅಖಿಲ ಭಾರತ ಕಾಂಗ್ರೆಸ್‌ ಮತ್ತು ನೆಹರೂ ಅವರೇ ವಿಭಜನೆಗೆ ಕಾರಣವೆಂದು ಪಾಕಿಸ್ತಾನದಲ್ಲಿ ಪ್ರತಿಪಾದಿಸುತ್ತಾ ಬಂದಿರುವುದನ್ನು ಖಂಡಿಸಿದವು. ಅಲ್ಲದೇ, ಮುಸ್ಲಿಂ ಲೀಗ್ ಮತ್ತು ಮೊಹಮದ್ ಅಲಿ ಜಿನ್ನಾ ಅವರೇ ವಿಭಜನೆಗೆ ಪ್ರಮುಖ ಕಾರಣರೆಂದು ಹಲವು ಸಾಕ್ಷ್ಯಗಳ ಮೂಲಕ ನಿರೂಪಿಸಿದ್ದಾರೆ. ತಮ್ಮ ಕೃತಿಯಲ್ಲಿನ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನದಲ್ಲಿನ ಜನರಿಗೆ ಮುಟ್ಟಿಸಲು ಯೂಟ್ಯೂಬ್‌ ಚಾನೆಲ್‌ ಅನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಶ್ತಿಯಾಕ್ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿದರು. ಅದರ ಸಾರಾಂಶ ಇಲ್ಲಿದೆ.

ಭಾರತದ ವಿಭಜನೆ ಆಗಬಾರದಿತ್ತು. ವಿಭಜನೆ ಆಗಿದ್ದು ದೊಡ್ಡ ಪ್ರಮಾದ. ಅದರ ಘೋರ ಪರಿಣಾಮವನ್ನು ಈಗಲೂ ಎರಡೂ ದೇಶಗಳು ಅನುಭವಿಸುತ್ತಿವೆ. ಧರ್ಮದ ಆಧಾರದಲ್ಲಿ ಪಾಕಿಸ್ತಾನ ನಿರ್ಮಾಣಗೊಂಡಿತು. ಅದೀಗ ವಿನಾಶದ ಅಂಚಿಗೆ ಬಂದು ತಲುಪಿದೆ. ಅಲ್ಲಿ ಇಸ್ಲಾಮ್‌ ಬಿಟ್ಟು ಅನ್ಯ ಧರ್ಮಗಳ ಜನರಿಗೆ ನೆಲೆಯೂ ಇಲ್ಲ ಬೆಲೆಯೂ ಇಲ್ಲ. ಮುಸ್ಲಿಮರಿಗೂ ನೆಮ್ಮದಿ ಇಲ್ಲ. ವಿಭಜನೆ ಭಾರತೀಯ ಉಪಖಂಡದ ಇತಿಹಾಸದಲ್ಲಾದ ದೊಡ್ಡ ತಿರುವು. ಈಗಲ್ಲದಿದ್ದರೂ ಮುಂದೊಂದು ದಿನ ಭಾರತ–ಪಾಕ್‌ ಗಡಿಗಳು ಮರೆಯಾಗಬಹುದು ಎಂಬ ವಿಶ್ವಾಸವಿದೆ. ಎರಡೂ ದೇಶಗಳ ಸಾಮರಸ್ಯಕ್ಕಾಗಿ ಭಾರತದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಯುರೋಪಿಯನ್‌ ಯೂನಿಯನ್ ಮಾದರಿಯಲ್ಲಿ ಗಡಿಗಳನ್ನು ತೆಗೆಯಬೇಕು ಭಾರತ, ಪಾಕಿಸ್ತಾನ, ಬಾಂಗ್ಲಾ ದೇಶಗಳ ಮಧ್ಯೆ ಓಡಾಟ, ವ್ಯಾಪಾರ– ವಾಣಿಜ್ಯ ಸುಗಮವಾಗಿ ನಡೆಯಬೇಕು.

ಯುರೋಪಿನ ದೇಶಗಳು ಪ್ರಥಮ ಮತ್ತು ದ್ವಿತೀಯ ಮಹಾ ಯುದ್ಧಗಳಲ್ಲಿ ಮತ್ತು ಅದಕ್ಕೂ ಹಿಂದೆ ಹಲವು ಘೋರ ಯುದ್ಧಗಳನ್ನು ಮಾಡಿದ್ದವು. ಈಗ ಅವೆಲ್ಲವನ್ನೂ ಮರೆತಿವೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಈ ಸ್ಥಿತಿ ನಿರ್ಮಾಣ ಆಗುವುದು ಸುಲಭವಲ್ಲ. ಆದರೆ ಅಸಂಭವವಲ್ಲ. ಭಯೋತ್ಪಾದನೆ ಮೂಲೋತ್ಪಾಟನೆ ಮಾಡದೇ ಮಾತುಕತೆ ಇಲ್ಲ ಎಂದು ಭಾರತ ಹೇಳುತ್ತದೆ. ಈ ವಾದ ಸರಿಯಾಗಿದೆ. ಪಾಕಿಸ್ತಾನವು ಭಯೋತ್ಪಾದಕರಿಗೆ ನೀಡುತ್ತಿರುವ ನೆರವನ್ನು ಸಂಪೂರ್ಣ ನಿಲ್ಲಿಸಬೇಕು. ರಷ್ಯಾ ವಿರುದ್ಧ ಅಫ್ಗಾನಿಸ್ತಾನದಲ್ಲಿ ಪಾಕಿಸ್ತಾನ ಆರಂಭಿಸಿದ ಜಿಹಾದ್‌, ರಷ್ಯಾದ ಸೇನೆ ನಿರ್ಗಮನದ ಬಳಿಕ ಆ ಭಯೋತ್ಪಾದಕ ಗುಂಪುಗಳು ಭಾರತಕ್ಕೆ ಕಾಲಿಟ್ಟಿದ್ದು ಸುಳ್ಳಲ್ಲ. ಲಷ್ಕರ್, ಜೈಷೆ ಮುಂತಾದ ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ನಿಗ್ರಹಿಸಬೇಕು. ಅದೇ ರೀತಿ ಬಲೂಚಿಸ್ತಾನದಲ್ಲಿ ಅಲ್ಲಿನ ಪ್ರತ್ಯೇಕತಾವಾದಿಗಳಿಗೆ ಭಾರತ ಬೆಂಬಲ ನೀಡುತ್ತಿದ್ದರೆ ಅದನ್ನೂ ನಿಲ್ಲಿಸಬೇಕು. ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ ಕಾರಣಕ್ಕೆ ವ್ಯಾಪಾರ–ವಾಣಿಜ್ಯ ಸಂಪೂರ್ಣ ನಿಲ್ಲಿಸಿದ ಪಾಕಿಸ್ತಾನದ ಕ್ರಮವಂತೂ ಮೂರ್ಖತನದ್ದು. ಇದರಿಂದ ಪಾಕಿಸ್ತಾನಕ್ಕೆ ಭಾರಿ ನಷ್ಟವಾಗಿದೆ.

ಭಾರತ ಮತ್ತು ಹಿಂದೂಗಳ ವಿರುದ್ಧ ಸದಾ ವಿಷ ಕಾರುವ ಪಾಕಿಸ್ತಾನ ತನ್ನ ಮನಸ್ಥಿತಿ ಬದಲಿಸಿಕೊಳ್ಳಬೇಕು. ಶಾಲೆಗಳಲ್ಲಿ ಭಾರತದ ವಿರುದ್ಧ ದ್ವೇಷವನ್ನೇ ಬೋಧಿಸಲಾಗುತ್ತಿದೆ. ಅದನ್ನೂ ನಿಲ್ಲಿಸಬೇಕು. ಕಾಶ್ಮೀರಕ್ಕಾಗಿ ನಾಲ್ಕು ಯುದ್ಧಗಳನ್ನು ಆರಂಭಿಸಿದ ಪಾಕಿಸ್ತಾನಕ್ಕೆ ಈವರೆಗೂ ಕಾಶ್ಮೀರ ಪಡೆಯಲು ಸಾಧ್ಯವಾಗಲಿಲ್ಲ. ಯುದ್ಧದ ದುಸ್ಸಾಹಸ ನಿಲ್ಲಿಸುವುದು ಆ ದೇಶದ ಜನರ ಹಿತದೃಷ್ಟಿಯಿಂದ ಒಳಿತು.

ಕಳೆದ 75 ವರ್ಷಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದೆ. ಇಲ್ಲಿನ ಯಾವುದೇ ನಗರಗಳಿಗೂ ಹೋದರೂ ಬೆಳವಣಿಗೆ ನಿಚ್ಚಳವಾಗಿ ಕಾಣುತ್ತದೆ. ಇಲ್ಲಿ ಯಾವುದೇ ಪಕ್ಷದ ಸರ್ಕಾರ ಇದ್ದರೂ ದೇಶದ ಹಿತಕ್ಕಾಗಿ ಟೊಂಕ ಕಟ್ಟಿ ಶ್ರಮಿಸಿವೆ. ಪಾಕಿಸ್ತಾನದಲ್ಲಿ ಅಧಿಕಾರಸ್ಥರು ಲೂಟಿ ಮಾಡಿದ್ದೇ ಹೆಚ್ಚು. ಆರಂಭದಲ್ಲಿ ಪಾಕಿಸ್ತಾನವು ಭಾರತಕ್ಕಿಂತ ಉತ್ತಮ ಪ್ರಗತಿ ಸಾಧಿಸುವ ಹಾದಿಯಲ್ಲಿತ್ತು. ಆದರೆ, ಕಾಶ್ಮೀರವನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಭ್ರಮೆಗೆ ಸಿಲುಕಿ 1962ರಲ್ಲಿ ಭಾರತದ ಮೇಲೆ ಯುದ್ಧ ಸಾರಿ ಅಭಿವೃದ್ಧಿಯ ಹಾದಿಯಿಂದ ಪ್ರಪಾತಕ್ಕೆ ಜಾರಿತು. ಭಾರತದ ಈಗಿನ ಅಭಿವೃದ್ಧಿಯ ವೇಗ ನೋಡಿದರೆ ಅತಿ ಬೇಗನೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಹಿಂದೆಯೂ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದೆ. ಆಗಲೂ ಕೆಲವು ನಗರಗಳಿಗೆ ಭೇಟಿ ನೀಡಿದ್ದೆ. ಈ ಬಾರಿ ಭಾರತದ ಹಲವು ನಗರಗಳಿಂದ ನನಗೆ ಆಹ್ವಾನ ಬಂದಿದೆ. ಹೋದ ಕಡೆಗಳಲ್ಲಿ ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ಕಾಣುತ್ತಿದ್ದಾರೆ. ವಿಮಾನ ನಿಲ್ದಾಣವಿರಲಿ, ಹೊಟೇಲ್‌ನಲ್ಲಿರಲಿ ಜನ ನನ್ನನ್ನು ಗುರುತು ಹಿಡಿದು ಬಂದು ಮಾತನಾಡಿಸುತ್ತಾರೆ. ಇದು ಯೂ ಟ್ಯೂಬ್‌ ಉಪನ್ಯಾಸದ ಪರಿಣಾಮ. ಬೆಂಗಳೂರು ಅತಿ ದೊಡ್ಡ ಹೈಟೆಕ್‌ ಸಿಟಿ. ಇಲ್ಲಿನ ಜನ ಉತ್ತರ ಭಾರತದ ಹಾಗಲ್ಲ, ಮೃದು ಭಾಷಿಗಳು. ಇಲ್ಲಿನ ಆಹಾರಗಳ ವೈವಿಧ್ಯವೂ ಅಸಾಧಾರಣ.

ಭಾರತದಲ್ಲಿ ಕಂಡ ಮತ್ತೊಂದು ಮಹತ್ವದ ಅಂಶ ಎಂದರೆ ಇಲ್ಲಿ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯವಿದೆ. ರಾತ್ರಿ ವೇಳೆಯೂ ನಿರ್ಭೀತರಾಗಿ ಓಡಾಡುವುದನ್ನು ಹಲವು ನಗರಗಳಲ್ಲಿ ಕಂಡಿದ್ದೇನೆ. ವಿಶೇಷವಾಗಿ ಮುಸ್ಲಿಮ್ ಮಹಿಳೆಯರೂ ಬುರ್ಕಾ, ಹಿಜಾಬ್‌ ಸೇರಿದಂತೆ ತಮಗಿಷ್ಟವಾದ ಉಡುಪುಗಳಲ್ಲಿ ಓಡಾಡುತ್ತಾರೆ. ಅವರಿಗೆ ಕಿರುಕುಳ ಕೊಡುವವರನ್ನು ನೋಡಿಲ್ಲ. ಆದರೆ, ಪಾಕಿಸ್ತಾನದಲ್ಲಿ ಕತ್ತಲಾದ ಬಳಿಕ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಿಲ್ಲ. ಶ್ರೀಮಂತರ ಮಕ್ಕಳು ಕಾರಿನಲ್ಲಿ ಓಡಾಡುತ್ತಾರೆ.

ಭಾರತದ ಮುಸ್ಲಿಮರು ಇಲ್ಲಿ ನೆಲದ ಸಂಸ್ಕೃತಿಗೆ ತಕ್ಕಂತೆ ಇರಬೇಕು. ಅತ್ಯುತ್ತಮ ಶಿಕ್ಷಣ ಪಡೆದು ವೈಜ್ಞಾನಿಕ ಮನೋಭಾವದೊಂದಿಗೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು. ಹಿಂದೂ ಧರ್ಮ ಅತ್ಯಂತ ಸಹಿಷ್ಣುತೆ ಹೊಂದಿರುವ ಧರ್ಮ. ಆದರೆ, ಮುಸ್ಲಿಮರ ಬಗ್ಗೆ ಹಿಂದೂಗಳು ಅನಗತ್ಯ ಸಂಶಯಪಡುವುದು ಸರಿಯಲ್ಲ. ಬಹುಪತ್ನಿತ್ವ, ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ, ಭಯೋತ್ಪಾದನೆ ಮಾಡುತ್ತಾರೆ ಎಂಬ ಮನೋಭಾವ ಸರಿಯಲ್ಲ. ಹಿಂದೂ– ಮುಸ್ಲಿಮ್ ಇಬ್ಬರೂ ಒಂದಾಗಿ ಮುನ್ನಡೆದರೆ ಭಾರತವನ್ನು ತಡೆಯುವ ಶಕ್ತಿ ಇಲ್ಲ. ಅದೇ ರೀತಿ ಪಾಕಿಸ್ತಾನ– ಭಾರತದ ಮಧ್ಯೆ ಶತ್ರುತ್ವ ಮರೆಯಾಗಿ, ಶಾಂತಿಯಿಂದ ಬದುಕುವ ಹಾಗೆ ಆಗಬೇಕು.

ಮೂಲಭೂತವಾದಿಗಳ ಚಿತಾವಣೆಯಿಂದ ಧರ್ಮದ ಆಧಾರದಲ್ಲಿ ಜನ್ಮ ತಳೆದ ಪಾಕಿಸ್ತಾನ ಈಗ ವಿಫಲಗೊಂಡ ರಾಷ್ಟ್ರವಾಗಿದೆ. 1930 ರಷ್ಟು ಹಿಂದೆಯೆ ಭಾರತದ ವಿಭಜನೆ ಮೊಳಕೆಯೊಡೆದಿತ್ತು. ಪಾಕಿಸ್ತಾನ ಮಾತ್ರವಲ್ಲ, ದ್ರಾವಿಡ ದೇಶದ ಸೃಷ್ಟಿಯ ಬೀಜವನ್ನೂ ಜಿನ್ನಾ ಬಿತ್ತಿದ್ದರು. ಈ ಬಗ್ಗೆ ಪರಿಯಾರ್‌ ಜತೆಗೂ ಮಾತನಾಡಿದ್ದರು. ಆದರೆ ಜಿನ್ನಾ ಆಸೆ ಈಡೇರಲಿಲ್ಲ. ಅಂದಿನ ಕಾಂಗ್ರೆಸ್‌ ನಾಯಕರ ವಿಶಾಲ ದೃಷ್ಟಿ ಮತ್ತು ಮುತ್ಸದ್ಧಿತನದಿಂದ ಭಾರತ ಜಾತ್ಯತೀತ ತಳಹದಿಯ ಮೇಲೆ ಯಾನ ಆರಂಭಿಸಿತು. ಅದರ ಪರಿಣಾಮ ಭಾರತ ಇಂದು ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಕೆಲವು ಅಪವಾದಗಳನ್ನು ಹೊರತುಪಡಿಸಿ ಎಲ್ಲ ಜಾತಿ, ಧರ್ಮ ಮತ್ತು ಸಮುದಾಯಗಳ ಜನ ಸಾಮರಸ್ಯದಿಂದ ಬದುಕುತ್ತಿರುವುದು, ನಿಜಕ್ಕೂ ಒಂದು ಯಶಸ್ಸಿನ ಕಥೆ. ಹೀಗಾಗಿ ಪಾಕಿಸ್ತಾನದ ಹಾದಿಯಲ್ಲಿ ಅಪ್ಪಿತಪ್ಪಿಯೂ ಕಾಲಿಡಬಾರದು. ಅಂದರೆ, ಇಸ್ಲಾಮಿಕ್‌ ದೇಶಗಳ ಮಾದರಿಯಲ್ಲಿ ಭಾರತ ಹಿಂದು ರಾಷ್ಟ್ರ ಆಗಬಾರದು. ಎಲ್ಲರನ್ನೂ ಒಳಗೊಳ್ಳುವ, ಎಲ್ಲರನ್ನು ಗೌರವಿಸುವ, ಎಲ್ಲರ ಅಭಿವೃದ್ಧಿಯಲ್ಲಿ ಭಾರತದ ಹಿತ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT