ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ: ಬೆಳಾರ ಭಾಷೆಯ ಕೊನೆಯ ಕೊಂಡಿ ಕಳಚಿತು

Published 16 ಸೆಪ್ಟೆಂಬರ್ 2023, 23:31 IST
Last Updated 16 ಸೆಪ್ಟೆಂಬರ್ 2023, 23:31 IST
ಅಕ್ಷರ ಗಾತ್ರ

ಎ.ಮುರಿಗೆಪ್ಪ

ಯುನೆಸ್ಕೊದ ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ 6000ರ ಆಸುಪಾಸಿನ ಭಾಷೆಗಳಲ್ಲಿ ಸುಮಾರು 2500 ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಕಳೆದ ಮೂರು ವರ್ಷಗಳಲ್ಲಿ 200ಕ್ಕೂ ಮಿಕ್ಕ ಭಾಷೆಗಳು ಅಳಿವಿಗೆ ಒಳಗಾಗಿವೆ. ಭಾರತವು ಹೆಚ್ಚು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಹೊಂದಿದ್ದು, 196 ಭಾಷೆಗಳು ಅಪಾಯದ ಸ್ಥಿತಿಯಲ್ಲಿವೆ. ಭಾರತದ ಬಹು ಭಾಷಿಕ ಸ್ವರೂಪವನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಚಿಂತನೆ ನಡೆಸಿತ್ತು. ರಾಷ್ಟ್ರದುದ್ದಕ್ಕೂ ಅಳಿವಿನಂಚಿನಲ್ಲಿರುವ ಭಾಷೆಗಳನ್ನು ಅಧ್ಯಯನಕ್ಕೆ ಒಳಪಡಿಸಿ, ದಾಖಲೆಗಳನ್ನು ತಯಾರಿಸಲು ಸಂಘ–ಸಂಸ್ಥೆಗಳನ್ನು ಗುರುತಿಸಿ ವಿಶೇಷ ಧನಸಹಾಯವನ್ನು ನೀಡಿತು. ಕರ್ನಾಟಕದ ಕಲಬುರ್ಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಅಳಿವಿನಂಚಿನ ಭಾಷೆಗಳ ವಿಭಾಗವು ಈ ನಿಟ್ಟಿನಲ್ಲಿ ಚರ್ಚಿಸಿ ಪ್ರಸ್ತುತ ಕರ್ನಾಟಕದ ಹತ್ತು ಭಾಷೆಗಳನ್ನು ಅಧ್ಯಯನಕ್ಕೆ ತೆಗೆದುಕೊಂಡಿತು. ಅವುಗಳಲ್ಲಿ ಬೆಳಾರ ಭಾಷೆಯೂ ಒಂದು.

ಬೆಳಾರ ಭಾಷೆ ಇಂದು ಬಳಕೆಯಿಂದ ಮರೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೊಸಂಗಡಿಯ ಸುತ್ತಮುತ್ತ ಎಡಮೊಗೆ, ಉಳ್ಳೂರು, ಕಾರೂರು, ಆಲೂರು, ಹೊಸಬಾಳು, ರಟ್ಟಾಡಿ ಮತ್ತು ಅಮಾಸೆಬೈಲು ಎಂಬ ಗ್ರಾಮಗಳಲ್ಲಿ ಬೆಳಾರ ಸಮುದಾಯದ ಸದಸ್ಯರಿದ್ದಾರೆ. ಬೆಳಾರ ಸಮುದಾಯದ ಸದಸ್ಯರು ವಲಸೆ ಬಂದವರು. ಈ ಸಮುದಾಯ ಬಹಳ ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಿದೆ. ಈ ಸಮುದಾಯದವರು ತಾವು ವಾಸಿಸುವ ಗ್ರಾಮಗಳಲ್ಲಿ ಚಿಕ್ಕ ಮನೆಗಳನ್ನು ಕಟ್ಟಿಕೊಂಡು ಹೆಚ್ಚಾಗಿ ಕಲ್ಲು ಕಡಿಯುವ ಶ್ರಮದಾಯಕ ಕೆಲಸ ಹಾಗೂ ಕೃಷಿಕ ಬದುಕನ್ನು ನಡೆಸಿಕೊಂಡು ಬಂದಿದ್ದಾರೆ. ಸುಮಾರು 500 ಜನರುಳ್ಳ ಸೀಮಿತ ಸಂಖ್ಯೆಯ ಈ ಸಮುದಾಯದಲ್ಲಿ ಕೆಲವರಷ್ಟೆ ಉನ್ನತ ವ್ಯಾಸಂಗ ಪೂರೈಸಿ ಎಂಜಿನಿಯರ್ ಆಗಿದ್ದಾರೆ, ನ್ಯಾಯವಾದಿಗಳಾಗಿದ್ದಾರೆ ಹಾಗೂ ಇನ್ನಿತರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಳಾರ ಸಮುದಾಯದ ಕೆಲವರು ಹೆಸರಾಂತ ಯಕ್ಷಗಾನ ಕಲಾವಿದರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಒಂದಿಬ್ಬರು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿದ್ದಾರೆ.

ಬೆಳಾರ ಸಮುದಾಯದ ಹಿಂದಿನ ತಲೆಮಾರಿನವರು ಬೆಳಾರ ಭಾಷೆಯನ್ನು ಮಾತನಾಡುತ್ತಿದ್ದರು. ಆದರೆ ಇಂದು ಬೆಳಾರ ಸಮುದಾಯದ ಸದಸ್ಯರು ತಮ್ಮ ಸಂಪರ್ಕಕ್ಕಾಗಿ ಕುಂದಾಪುರದ ಕನ್ನಡಕ್ಕೆ ಬದಲಾಗಿದ್ದಾರೆ. ಬೆಳಾರ ಭಾಷೆಯು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗಮನಕ್ಕೆ ಬಂದ ನಂತರ ಅಳಿವಿನಂಚಿನ ಭಾಷೆಗಳ ಸಂರಕ್ಷಣಾ ಯೋಜನೆಯ ನಿಯೋಜಕರಾಗಿದ್ದವರಲ್ಲಿ ನಾನು, ಪ್ರೊ ಚೆ. ರಾಮಸ್ವಾಮಿ,  ಹರಿಹರ, ಸ್ಥಳೀಯವಾಗಿ ಸುಬ್ರಮಣ್ಯ ಶೆಟ್ಟಿ ಅವರ ಸಹಕಾರದೊಂದಿಗೆ ಬಳಾರ ಭಾಷೆಯ ಅಧ್ಯಯನಕ್ಕೆ ಮುಂದಾಗಿದ್ದೆವು.

ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಈ ಹಿಂದೆ ಬೆಳಾರ ಭಾಷೆಯನ್ನು ಮಾತನಾಡುತ್ತಿದ್ದ ಸುಮಾರು 80 ವರ್ಷ ವಯಸ್ಸಿನ ಸಿದ್ದ ಬೆಳಾರ ಎಂಬುವವರ ಪರಿಚಯವಾಗಿತ್ತು. ಮಾತನಾಡಲು ಬೇರೆ ಯಾರೂ ಇಲ್ಲದ ಕಾರಣ ಅವರಿಗೂ ಬೆಳಾರೆ ಭಾಷೆ ಮರೆತುಹೋಗಿತ್ತು. ಮುಂದೆ ಅವರನ್ನು ಭೇಟಿ ಮಾಡಿ ಭಾಷಾ ಸಾಮಗ್ರಿಯನ್ನು ಸಂಗ್ರಹಿಸತೊಡಗಿದಂತೆ ಅವರು ನೆನಪಿಸಿಕೊಂಡು ಬೆಳಾರ ಭಾಷೆಯ ಸಾಮಗ್ರಿಯನ್ನು ಒದಗಿಸಿದರು. ಬೆಳಾರ ಭಾಷೆಯ ಅಧ್ಯಯನ ನಡೆಸಿದ ಮೇಲೆ, ಆ ಭಾಷೆಯ ವ್ಯಾಕರಣವನ್ನು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಪ್ರಕಟಿಸಿತು.

ಇತ್ತೀಚೆಗೆ ಸಿದ್ದ ಬೆಳಾರ ಅವರು ನಿಧನರಾದರು. ಇದರಿಂದಾಗಿ ಬೆಳಾರ ಭಾಷೆಯ ಕೊನೆಯ ಕೊಂಡಿ ಕಳಚಿದಂತಾಯಿತು. ಸಿದ್ದ ಅವರ ನಿಧನದಿಂದಾಗಿ ತೀವ್ರ ಅಳಿವಿನ ಅವಸ್ಥೆಯಲ್ಲಿದ್ದ ಭಾಷಾರೂಪವೊಂದು ಅವಸಾನಗೊಂಡಂತಾಯಿತು.

ಎಚ್.ಎ. ಸ್ರೋಕ್ ಅವರು ಮದರಾಸು ಪ್ರಾಂತ್ಯ ದಕ್ಷಿಣ ಕನ್ನಡದ 1894ರ ಮೊದಲನೆಯ ಸಂಪುಟ(ಮ್ಯಾನುಯೆಲ್)ದಲ್ಲಿ ಬೆಳಾರ ಭಾಷೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಂತರ 1985ರಲ್ಲಿ ಸ್ಟುವರ್ಟ್‌ ಅವರು ಸಾಮಗ್ರಿಯ ಪುನರ್ ಸಂಗ್ರಹಣೆ ಮಾಡಿದ್ದಾರೆ. ದಕ್ಷಿಣ ಕನ್ನಡ ಸಂಪುಟದ ಪ್ರಕಾರ ಬೆಳಾರ ಸಮುದಾಯದ ಪುರುಷರ ಸಂಖ್ಯೆ 419 ಮತ್ತು ಸ್ತ್ರೀಯರ ಸಂಖ್ಯೆ 255. ಒಟ್ಟು ಜನಸಂಖ್ಯೆ 674. ಅವರು 41 ಸಂಕೇತಿಕರಿಸಿದ ಪದಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಸ್ಟುವರ್ಟ್‌ ಅವರ ಪ್ರಕಾರ ಅವರು ಬೆತ್ತದ ಕೆಲಸ ಮಾಡುತ್ತಿದ್ದರು. ಪ್ರೊ. ಡಿ.ಎನ್.ಎಸ್ ಭಟ್ ಅವರು ಬೆಳಾರ ಭಾಷೆಯ ನಾಮಪದ ಮತ್ತು ಕ್ರಿಯಾಪದಗಳ ವ್ಯಾಕರಣ ವಿವರವನ್ನು ಕುರಿತು ಲೇಖನವನ್ನು ಬರೆದಿದ್ದಾರೆ. ಪ್ರೊ. ಡಿ.ಎನ್.ಎಸ್. ಭಟ್ ಅವರ ಪ್ರಕಾರ ಬೆತ್ತದ ಬುಟ್ಟಿಗಳನ್ನು ತಯಾರಿಸುತ್ತಿದ್ದರು. ಸೀಮಿತ ಸಂಖ್ಯೆಯಲ್ಲಿರುವ ಬೆಳಾರ ಸಮುದಾಯದ ಯುವಕರಿಗೆ ಉದ್ಯೋಗಗಳಲ್ಲಿ ಅವಕಾಶವನ್ನು ಕಲ್ಪಿಸುವುದರ ಮೂಲಕ ಬೆಳಾರ ಸಮುದಾಯವನ್ನು ಅಭಿವೃದ್ಧಿ ಪಡಿಸಬಹುದಾಗಿದೆ.

ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಯೋಜನೆಯಡಿಯಲ್ಲಿ ಪ್ರೊ ಎ.ಮುರಿಗೆಪ್ಪ ಅವರ ಬೆಳಾರ ಭಾಷೆಯ ವ್ಯಾಕರಣ ಪ್ರಕಟಣೆ ಮತ್ತು ಪ್ರೊ.ಡಿ.ಎನ್.ಎಸ್. ಭಟ್ಟ ಅವರು ಲೇಖನದಿಂದಾಗಿ ಅವಸಣಗೊಂಡ ಭಾಷೆಯೊಂದು ದಾಖಲೀಕರಣಗೊಂಡು ಉಳಿಯುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT