ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗಿಲ್ಲ ಸಂಸಾರದ ಬಂಧನ!

Last Updated 13 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ನಾನೀಗ ಹೇಳ ಹೊರಟಿರುವುದು ಗೌರಮ್ಮನ ಜೀವನದ ಒಂದು ಸಣ್ಣ ತುಣುಕು ಅಷ್ಟೆ. ಹಿರಿಯರಿಗೆಂದೇ ಅವರ ಊರಿನಲ್ಲಿ ನಡೆಯುವ ಕ್ರೀಡೆಯಲ್ಲಿ ಬಹುಮಾನ ಇವರಿಗೆ ಕಟ್ಟಿಟ್ಟ ಬುತ್ತಿ. ಪ್ರಾಯ 72 ಆದರೂ ನಾಟಕಗಳಲ್ಲಿ ಪಾತ್ರ ಮಾಡುವ ಆಸೆ ಇದೆ ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸುತ್ತಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಾಲೆಯಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಮದುವೆಯಾದ ಮೇಲೆ ಅದಕ್ಕೆಲ್ಲಾ ಅವಕಾಶವಿರಲಿಲ್ಲ ಎಂದು ನೆನಪಿಸಿಕೊಂಡು ನೊಂದುಕೊಳ್ಳುತ್ತಾರೆ.

'ಮದುವೆಯಾಗಿ ಮಕ್ಕಳಾದ ಮೇಲೆ ನಿನಗೇಕೆ ಈ ಹುಚ್ಚು? ಇನ್ನು ಇದೊಂದು ಬಾಕಿ ಇತ್ತು ನೋಡು. ಸುಮ್ಮನೆ ಮನೆಗೆಲಸ, ಅಡುಗೆ ಮಾಡಿಕೊಂಡಿರಬಾರದೇ?' ಎಂಬೆಲ್ಲಾ ವ್ಯಂಗ್ಯದ ಮಾತುಗಳನ್ನು ಕೇಳಿ ತಮ್ಮ ಇಂಗಿತವನ್ನೆಲ್ಲಾ ತಮ್ಮೊಡಲಲ್ಲೇ ಬಚ್ಚಿಟ್ಟುಕೊಳ್ಳುತ್ತಿದ್ದರು.

ಇದು ಕೇವಲ ಒಬ್ಬಳು ಗೌರಕ್ಕನ ಕತೆಯಲ್ಲ. ಸಮಾಜದಲ್ಲಿ ಇಂತಹ ಹಲವಾರು ಹೆಣ್ಣುಮಕ್ಕಳು ತಮ್ಮ ಮಹತ್ವಾಕಾಂಕ್ಷೆಗಳನ್ನು ಬಚ್ಚಿಟ್ಟುಕೊಂಡು ಬದುಕುತ್ತಿದ್ದಾರೆ.

ಸಂಸಾರ ಬಂಧನವೇ?
ಮದುವೆಯಾಗುವ ತನಕ ಅಪ್ಪ-ಅಮ್ಮನ ಕಣ್ಗಾವಲಿನಲ್ಲಿ ಬೆಳೆಯುವ ಹುಡುಗಿ, ಲಗ್ನವಾಗುತ್ತಿದ್ದಂತೆಯೇ ಗಂಡನ ಕೈಗೊಂಬೆಯಾಗಿಬಿಡುತ್ತಾಳೆ. ಹೀಗೆ ಅದೆಷ್ಟೋ ಹೆಣ್ಣುಮಕ್ಕಳ ಕೊರಳಿಗೆ ತಾಳಿ ಬಿದ್ದು ಗಂಡನ ಮನೆಯೊಳಗೆ ಅಡಿಯಿರಿಸಿದಾಗಲೇ, ಅವಳು ಕಂಡಿದ್ದ ಆಸೆ-ಆಕಾಂಕ್ಷೆಗಳೆಲ್ಲಾ ಮೂಲೆಗುಂಪಾಗಿ ತನ್ನ ವೈಯಕ್ತಿಕ ಬದುಕನ್ನೇ ಬದಿಗಿಡಬೇಕಾಗುತ್ತದೆ.

ಆಸೆಕಂಗಳು ಇಂಗಿ ಹೋದರೂ, ಬತ್ತದ ಅದಮ್ಯ ಬಯಕೆಯನ್ನೇ ಹೊತ್ತು, ಕಟ್ಟಿಕೊಂಡ ಕನಸಿನ ಆಶಾಗೋಪುರ ಕುಸಿಯುವುದನ್ನು ನೆನೆದು, ಸೊಲ್ಲೆತ್ತದೆ ಮೌನಿಯಾಗಿ ಬಿಡುತ್ತಾಳೆ. ವಿಧಿಯಿಲ್ಲದೆ ಅಷ್ಟರಲ್ಲೇ ತನ್ನ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾಳೆ.

ಮನೆ ಮಂದಿಗೆಲ್ಲಾ ಹೊಂದಿಕೊಂಡು ಪ್ರತಿಯೊಬ್ಬರ ಇಷ್ಟಾನಿಷ್ಟಗಳಿಗೆ ಅನುಸಾರವಾಗಿ ಸಂಸಾರ ನಡೆಸಬೇಕು. ಮಕ್ಕಳ ಪಾಲನೆ, ಮನೆಯ ಜವಾಬ್ದಾರಿ, ಸಂಸಾರದ ಕಾಳಜಿ ಮಾಡುತ್ತಲೇ ಒಂದು ದಿನ ತನ್ನ ಮುಖದ ನೆರಿಗೆಗಳನ್ನು ಎಣಿಸುವ ಹಂತಕ್ಕೆ ತಲುಪಿಬಿಡುತ್ತಾಳೆ. ಮದುವೆ ಎಂಬುದು ಇಂತಹ ಹೆಣ್ಣುಮಕ್ಕಳಿಗೆ ಎತ್ತಿಗೆ ಮೂಗುದಾರ ಹಾಕಿದಂತೆ. ಅವಳ ಗರಿಗೆದರಿದ ಸಣ್ಣಪುಟ್ಟ ಬಯಕೆಗಳಿಗೂ ಮನೆಯವರ ಅನುಮತಿ ಬೇಕೇ ಬೇಕು. ತನ್ನಾಸೆಗೆ ಬೆಂಬಲ ಸಿಗದಿದ್ದಾಗ ಲೋಕದ ಕಣ್ಣಿಗೆ ಗೋಚರಿಸದ ಹಾಗೆ ತನ್ನ ಆಶೋತ್ತರಗಳನ್ನೆಲ್ಲಾ ತನ್ನೊಡಲೊಳಗೇ ಬಚ್ಚಿಟ್ಟುಕೊಂಡು ಬದುಕಬೇಕು.

ಜೀವನಪರ್ಯಂತ ಕಾಡುವ ಆ ವ್ಯಥೆಯನ್ನು ಹತ್ತಿಕ್ಕಿಕೊಂಡು ನಗುವಿನ ಮುಖವಾಡ ಧರಿಸಿ ಜೀವಿಸುವ ಇವಳ ಬದುಕು ನಾಲ್ಕು ಗೋಡೆಗಳೊಳಗೆ ನಶಿಸಿ ಹೋಗುತ್ತಿರುವುದು ಇಂದಿಗೂ ಹಲವಾರು ಹೆಣ್ಣುಮಕ್ಕಳ ಮನೆ-ಮನದ ಅಳಲಾಗಿದೆ. ತನ್ನ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ಎಂಬುದು ಕನಸಾಗಿಯೇ ಉಳಿದುಬಿಡುತ್ತದೇನೋ ಎಂದು ವಿಹ್ವಲಗೊಳ್ಳುತ್ತಾಳೆ. ಕೆಲವೊಮ್ಮೆ ಹೆಣ್ಣಿನಲ್ಲಿ ಏನೇ ವಿದ್ಯೆ, ಪ್ರತಿಭೆ ಇದ್ದರೂ ತನ್ನ ಅಂತರ್ದನಿಯನ್ನು ಅದುಮಲೂ ಆಗದೆ, ಪೂರೈಸಿಕೊಳ್ಳಲೂ ಆಗದೆ ಮಾನಸಿಕವಾಗಿ ದುರ್ಬಲಳಾಗುವ ಸಾಧ್ಯತೆ ಇದೆ. ಆಗ ಹೆಣ್ಣಿಗೆ, ಒಮ್ಮೊಮ್ಮೆ ಬಂಧನವಿಲ್ಲದ ಬದುಕು ಅದೆಷ್ಟು ಸುಂದರ ಅನ್ನಿಸಬಹುದು!

ಕಾಲ ಬದಲಾಗುತ್ತಿದೆ..
ಆದರೆ ಈಗೀಗ ನಮ್ಮ ಹೆಣ್ಣುಮಕ್ಕಳ ಜೀವನದ ಗುರಿಯಲ್ಲಿ ಒಳ್ಳೆಯ ತಿರುವನ್ನು ನೋಡುವಂತಾಗಿದೆ. ಒಂದು ಸಂತಸದ ಸಂಗತಿ ಎಂದರೆ, ಈಕೆ ತನ್ನ ಸುತ್ತಮುತ್ತಲಿನ ಪ್ರಭಾವದಿಂದ ಪ್ರೇರಣೆಗೊಂಡು ಇವೆಲ್ಲವುಗಳಿಂದ ನಿಧಾನಕ್ಕೆ ತಾನು ಕಟ್ಟಿಕೊಂಡ ಗೂಡಿನಿಂದ ಹೊರಗೆ ಇಣುಕಿ ನೋಡಲು ಶುರುಮಾಡಿದ್ದಾಳೆ. ‘ನನ್ನದೇ ಸಮಯ’ (me time) ಬೇಕೆಂಬುದನ್ನು ಅರಿತು ಮುನ್ನಡೆಯಲು ಪ್ರಾರಂಭಿಸಿದ್ದಾಳೆ. ತನ್ನ ಕನಸು ಹಾಗೂ ಗುರಿ ಮುಟ್ಟುವಲ್ಲಿ ಮುಳ್ಳಿನ ಹಾದಿಯನ್ನು ದಾಟುವ ಛಲಗಾತಿಯಾಗಿ ಯಶಸ್ವಿಯೂ ಆಗಿದ್ದಾಳೆ.

ಮನೆ, ಸಂಸಾರದ ಜೊತೆ ಗಂಡು ಮೆಟ್ಟಿದ ಎಲ್ಲಾ ಕ್ಷೇತ್ರಗಳಲ್ಲೂ ಮೆರೆಯುತ್ತಿದ್ದಾಳೆ. ತನ್ನ ಸಂಸಾರ ಹಾಗೂ ಸಾಧನೆಯ ಕ್ಷೇತ್ರ ಎರಡನ್ನೂ ಯಶಸ್ವಿಯಾಗಿ ತೂಗಿಸಬಲ್ಲೆ ಎಂದು ರುಜುವಾತುಪಡಿಸಿದ್ದಾಳೆ.

ಹೆಣ್ಣಿನ ಜೀವನದಲ್ಲಿ ಸಾಂಸಾರಿಕ ಜೀವನವೇ ಶಾಶ್ವತ ನಿಲುವಲ್ಲ ಎಂಬ ಧೋರಣೆಯ ಯುವತಿಯರು ಆ ಕಟ್ಟಳೆಯಿಂದ ಹೊರ ನಡೆಯುವ ಸಾಹಸಕ್ಕಿಳಿದಿದ್ದು ‘ಮದುವೆ’ ಎಂಬ ಪದ್ಧತಿಯನ್ನು ಎರಡನೇ ಸ್ಥಾನಕ್ಕಿಳಿಸಿದ್ದಾರೆ. ಮೊದಲು ತಾವು ಹಣಕಾಸಿನಲ್ಲಿ ಸ್ವಾವಲಂಬಿಯಾಗ ಬಯಸುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆಯೇ ಸೈ. ಇಂತಹ ಧ್ಯೇಯ ಹೊತ್ತ ಸ್ತ್ರೀ ತನಗೆದುರಾಗುವ ಆರ್ಥಿಕ ಏರುಪೇರುಗಳನ್ನೂ ನಿಭಾಯಿಸುವ ಛಾತಿ ಹೊಂದಿರುತ್ತಾಳೆ. ಇಂದು ಆಕೆಯ ಧೈರ್ಯ, ಛಲ ಅವಳನ್ನು ಹಳ್ಳಿಯಿಂದ ವಿದೇಶಕ್ಕೆ ಹಾರುವಂತೆ ಮಾಡಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ದೃಢ ನೆಲೆಯನ್ನು ಕಂಡುಕೊಂಡು ಪ್ರಪಂಚದ ಯಾವ ಮೂಲೆಯಲ್ಲಾದರೂ ಇದ್ದು ಜಯಿಸುವ ಸಾಮರ್ಥ್ಯ ಹೊಂದಿದ್ದಾಳೆ. ನಮ್ಮ ಸಮಾಜ ಹೆಣ್ಣಿನ ಮೇಲೆ ಹೇರುವ ಎಲ್ಲಾ ಕಟ್ಟಳೆಗಳನ್ನೂ ದಾಟಿ, ಬಂಧಮುಕ್ತ ಜೀವನವನ್ನು ಆಲಂಗಿಸಿಕೊಂಡಿದ್ದಾಳೆ.

ನಿಮ್ಮದೇ ಲೋಕ ಸೃಷ್ಟಿಸಿಕೊಳ್ಳಿ
ಸಂಸಾರ ಒಂದು ಬಂಧನ ಎಂದು ಯೋಚಿಸುವ ಹೆಣ್ಣುಮಕ್ಕಳೆಲ್ಲ ತಮ್ಮ ಬದುಕಿಗೊಂದು ಪರ್ಯಾಯ ರೂಪವನ್ನು ತಾವೇ ಕಂಡುಕೊಳ್ಳಬೇಕಾಗಿದೆ. ಹೆಣ್ಣು ವಿದ್ಯಾವಂತೆಯಾಗಿದ್ದರೆ ಸಾಲದು. ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ತನ್ನ ವೈಯಕ್ತಿಕ ಜೀವನಕ್ಕೂ ಸಮಯ ಕಲ್ಪಿಸಿಕೊಳ್ಳಬೇಕು.

* ದಿನದ ಸ್ವಲ್ಪ ಸಮಯವನ್ನು ನಿಮ್ಮ ಆಸಕ್ತಿ, ಅಭಿಲಾಷೆ ಅಥವಾ ವಿರಾಮಕ್ಕೆಂದೇ ಮೀಸಲಿಡಿ.
* ಅಡುಗೆ ಕೋಣೆಯ ಹೊರಗೂ ನಿಮಗೊಂದು ಲೋಕವಿದೆ ಎಂಬುದನ್ನು ಅರಿಯಿರಿ.
* ಸ್ವತಂತ್ರಳಾಗಿ ನಿರ್ಣಯ ತೆಗೆದುಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಿ.
* ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಸಾಮರ್ಥ್ಯ ಹಾಗೂ ಕೌಶಲವನ್ನು ಹೊರಗೆ ತನ್ನಿ.
* ನೀವು ಸಣ್ಣವರಿದ್ದಾಗ ಕಲಿಯುವುದಕ್ಕಾಗದಿದ್ದ ಹವ್ಯಾಸ ಅಥವಾ ವಿದ್ಯೆಯನ್ನು ಕಲಿಯಲು ಉತ್ಸುಕತೆ ಇರಲಿ. ಇದಕ್ಕೆ ನಿಮ್ಮ ವಯಸ್ಸು ಅಡ್ದಿ ಬಾರದಿರಲಿ.
* ನೀವು ಕಲಿತ ಸಣ್ಣಪುಟ್ಟ ಹವ್ಯಾಸವನ್ನು ಮನೆಯಲ್ಲಿದ್ದುಕೊಂಡೇ ಒಂದು ಉದ್ಯಮವನ್ನಾಗಿ ಬೆಳೆಸಿಕೊಳ್ಳಿ.
ಆಗಾಗ ಸ್ನೇಹಿತರೊಡಗೂಡಿ ಪರಿಸರವನ್ನು ಆಸ್ವಾದಿಸಿ.
* ಕ್ಷುಲ್ಲಕ ವಿಷಯಗಳನ್ನು ಕಡೆಗಣಿಸಿ. ಎಲ್ಲಕ್ಕಿಂತ ಮೊದಲು ‘ನಿಮ್ಮನ್ನು ನೀವೇ ಪ್ರೀತಿಸಿ.’

ಇದು ಹೆಚ್ಚಿನ ಸಾಧನೆಗೆ ನಿಮ್ಮಲ್ಲಿ ಉತ್ಸಾಹ, ಚೈತನ್ಯ ತುಂಬುವುದರಲ್ಲಿ ಸಂಶಯವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT