ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಿಯ ಕಥೆಗಳನ್ನು ಹೇಳುವವರು ಯಾರು?

Last Updated 13 ಜುಲೈ 2018, 19:30 IST
ಅಕ್ಷರ ಗಾತ್ರ

‘ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎಂದೊಡನೆ ನಮ್ಮ ಕಣ್ಣ ಮುಂದೆ ಮೂಡುವ ಚಿತ್ರ ಆ ಜಾಣ ಕೋತಿ ಮತ್ತು ಮೂರ್ಖ ಬೆಕ್ಕುಗಳ ರೊಟ್ಟಿಯ ಕಥೆಯಲ್ಲವೇ? ನಾವು ಬಾಲ್ಯದಲ್ಲಿ ಕೇಳಿದ ಕಥೆಯು ನಮ್ಮ ಮನಸ್ಸಿನ ಯಾವುದೋ ಮೂಲೆಯಲ್ಲಿ ಇಂದಿಗೂ ಜೀವಂತವಾಗಿರುತ್ತದೆ. ನಮ್ಮ ಬದುಕಲ್ಲಿ ಬರುವ ಹಲವಾರು ಸನ್ನಿವೇಶಗಳಲ್ಲಿ ನಾವು ಕೇಳಿದ ಕಥೆಗಳ ಚಿತ್ರವು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಇದೇ ಕಥೆಗಳಲ್ಲಿ ಅಡಗಿರುವ ಶಕ್ತಿ.
ಹಿಂದೆಲ್ಲ ಅಜ್ಜಿಯ ಮನೆಗೆ ರಜೆಗೆಂದು ಹೋದಾಗ, ಅವಳು ಮಾಡಿದ ರುಚಿ, ರುಚಿಯಾದ ಅಡುಗೆಯನ್ನು ಮಕ್ಕಳಿಗೆಲ್ಲಾ ಕೈತುತ್ತು ಇಟ್ಟು, ಮಲಗುವ ಮುನ್ನ ಕಥೆಗಳನ್ನು ಹೇಳುತ್ತಿದ್ದಳು. ಯಾವುದೋ ರಾಜನ ಕಥೆಗಳು, ಪ್ರಾಣಿ-ಪಕ್ಷಿ ಮಾತನಾಡುವ ಪಂಚತಂತ್ರ ಕಥೆಗಳು, ಕಾಗಕ್ಕ-ಗುಬ್ಬಕ್ಕನ ಕಥೆಗಳು, ಎಲ್ಲವೂ ಕೇಳಿದಾಗ ನಮಗೆ ಯಾವುದೋ ಸಿನಿಮಾ ತೋರಿಸಿದಷ್ಟು ಖುಷಿ. ನೀತಿ, ಪ್ರಾಮಾಣಿಕತೆ, ಧೈರ್ಯ, ಸಹಬಾಳ್ವೆ - ಮತ್ತಿತರ ಮಾನವೀಯ ಮೌಲ್ಯಗಳನ್ನು ಸಣ್ಣಮಕ್ಕಳ ಮನಸ್ಸಿನಲ್ಲಿ ತುಂಬುವುದಕ್ಕೆ ಇರುವ ಒಂದು ಬಲವಾದ ಸಾಧನವೆಂದರೆ ಕಥೆಗಳು. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿ ನಾವು ಬಿತ್ತುವ ವಿಷಯಗಳೇ ಅವರ ಮುಂದಿನ ವ್ಯಕ್ತಿತ್ವವನ್ನು ರೂಪಿಸುತ್ತದೆ.

ಈಗಿನ ದಿನಗಳಲ್ಲಂತೂ ಸದಾ ಮೊಬೈಲ್, ಟಿ.ವಿ., ವೀಡಿಯೊ ಗೇಮ್‌ಗಳಲ್ಲಿ ಮುಳುಗಿರುವ ಮಕ್ಕಳಿಗೆ, ಕುಳಿತು ಕಥೆ ಕೇಳುವ ಆಸಕ್ತಿಯೂ ಇಲ್ಲ, ಪ್ರೀತಿಯಿಂದ ಮಕ್ಕಳಿಗೆ ಕಥೆಯನ್ನು ಹೇಳುವವರೂ ಇಲ್ಲ. ಎಷ್ಟೋ ಮಕ್ಕಳಿಗೆ ‘ಭೀಮ’ ಎಂದರೆ ಲಡ್ಡು ತಿನ್ನುವ ‘ಛೋಟಾ ಭೀಮ್’ ಎಂದೆನಿಸುತ್ತದೆಯೇ ಹೊರತು ಮಹಾಭಾರತದಲ್ಲಿ ಬರುವ ಪಾಂಡವರಲ್ಲಿ ಒಬ್ಬನೆಂದು ತಿಳಿದಿರುವುದಿಲ್ಲ! ಅಪ್ಪ-ಅಮ್ಮಂದಿರು ಕೆಲಸದ ಒತ್ತಡಕ್ಕೆ ಸಿಲುಕಿ ಮಕ್ಕಳಿಗೆ ಮಲಗುವ ಮುನ್ನ ಕಥೆ ಹೇಳುವ ಬದಲು ಅರ್ಥವಿಲ್ಲದ ಕಾರ್ಟೂನ್‌ಗಳನ್ನು ತೋರಿಸಿ ಮಲಗಿಸುತ್ತಾರೆ. ಇದು ವಿಪರ್ಯಾಸವೇ ಸರಿ.
ಕಥೆಗಳನ್ನು ಹೇಳುವುದು ಒಂದು ಕಲೆ, ಯಾವುದೋ ಪಠ್ಯದ ಸಾಲುಗಳನ್ನು ಓದುವ ಹಾಗೆ ಗಾಂಭೀರ್ಯದಿಂದ, ಭಾವ–ಬಣ್ಣವಿಲ್ಲದೆ ಹೇಳಿದರೆ, ಕಥೆಗಳಲ್ಲಿನ ಸ್ವಾರಸ್ಯವೇ ಮರೆಯಾಗುತ್ತದೆ. ಕೇಳುವ ಕಿವಿಗಳ ಏಕಾಗ್ರತೆಯನ್ನು ತಮ್ಮತ್ತ ಸೆಳೆಯುವ ಕಲೆ ಕಥೆ ಹೇಳುವವರಿಗಿರಬೇಕು. ಕಥೆ ಕೇಳುತ್ತ ಅದರಲ್ಲಿ ಬರುವ ಸನ್ನಿವೇಶಗಳು ಕಣ್ಮುಂದೆ ಮೂಡಬೇಕು. ಆ ಸನ್ನಿವೇಶಗಳಲ್ಲಿ ಬರುವ ಪಾತ್ರಗಳಿಗೆ ಕಲ್ಪನೆಗೆ ಅನುಗುಣವಾಗಿ ಬಣ್ಣಗಳನ್ನು ತುಂಬುತ್ತಾ ಹೋಗಬೇಕು. ಅವರ ಭಾವಕ್ಕೆ ತಕ್ಕಂತೆ ಮನಸಿನ ಕುಂಚವು ಚಿತ್ತಾರ ಸೃಷ್ಟಿಸಬೇಕು. ಆಗಲೇ ಕಥೆಗಳಿಗೆ ಜೀವ ಬರಲು ಸಾಧ್ಯ.

ಕಥೆಗಳು ಕೇವಲ ಕಾಲ್ಪನಿಕವಾಗಿರಬೇಕೆಂದಿಲ್ಲ. ನಮ್ಮ ಜೀವನದ ಜೀವಾಳವಾಗಿರುವ ಅನುಭವಗಳು ಎಷ್ಟೋ ಬಾರಿ ಕಥೆಯಾಗಿ ನಮ್ಮಲ್ಲಿ ಬೆರೆತಿರುತ್ತವೆ. ಅವುಗಳು ಕಾಲ-ಕಾಲಕ್ಕೆ ಹೊಸ ರೂಪವನ್ನು ಪಡೆದರು, ಅದರ ಮೌಲ್ಯವನ್ನು ಬಿಡದೆ ನಮಗೆ ಮಾರ್ಗದರ್ಶಕವಾಗಿರುತ್ತವೆ. ಕಥೆಗಳ ಮೂಲಕ ನಾವು ನಮ್ಮ ಜೀವನಶೈಲಿ, ಭಾಷೆ ಮತ್ತು ಭಾವನೆಗಳನ್ನು ಕಾಪಾಡಿಕೊಳ್ಳಬಹುದು. ನಮ್ಮ ಬಿಡುವಿಲ್ಲದ ಜೀವನದಲ್ಲಿ ಒಂದಿಷ್ಟು ಸಮಯ ಕಥೆಗಳಿಗಾಗಿ ಮೀಸಲಿಡಬಹುದಲ್ಲವೇ? ಇವತ್ತಿನ ಮೊಬೈಲ್ ಯುಗದಲ್ಲಿ, ಕಥೆಗಳನ್ನು ಹೇಳುವ ಆ್ಯಪ್‌ಗಳು ಬಂದಿವೆ. ಅವುಗಳನ್ನು ಉಪಯೋಗಿಸಿಯಾದರು ಕಥೆಗಳ ಪರಂಪರೆಯನ್ನು ಉಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT