ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ! ದೇವಿಯೇ ಬನದ ಕರಡಿಯೇ

ಭಾವಸೇತು
Last Updated 5 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ದೇವರಿಗೆ ಎಲ್ಲ ಕಡೆಗಳಲ್ಲಿ ಇರಲಾಗುವುದಿಲ್ಲ ಎನ್ನುವ ಕಾರಣಕ್ಕೆ ಅಮ್ಮ ಎಂಬ ಜೀವವನ್ನು ಸೃಷ್ಟಿಸಿದ’, ‘ತಾಯಿಯೇ ದೇವರು’, ‘ಕೆಟ್ಟ ಮಗನಿರಬಹುದು, ಕೆಟ್ಟ ಅಮ್ಮ ಇರುವುದು ಸಾಧ್ಯವಿಲ್ಲ’. ಹೀಗೆ ಅಮ್ಮನನ್ನು ದೈವತ್ವಕ್ಕೇರಿಸಿ ಆರಾಧಿಸುವ ಸಾಲು ಸಾಲು ಮಾತುಗಳು–ಹಾಡುಗಳನ್ನು ಕೇಳುತ್ತಲೇ ಬೆಳೆದಿರುತ್ತೇವೆ ನಾವೆಲ್ಲ.

ಇಂಥ ಮಾತುಗಳನ್ನು ಕೇಳಿದಾಗ, ಅಮ್ಮನ ಕುರಿತ ಅದ್ಭುತ ರಮ್ಯ ಬರಹವನ್ನು ಓದಿದಾಗ, ಸಿನಿಮಾದಲ್ಲಿ ಮದರ್ ಸೆಂಟಿಮೆಂಟ್‌ ದೃಶ್ಯಗಳನ್ನು ನೋಡುವಾಗೆಲ್ಲ ನಾನೂ ಭಾವುಕನಾಗುತ್ತಿದ್ದೆ. ಗಂಟಲು ಕಟ್ಟಿಬಂದಂತಾಗಿ, ಎದೆ ತುಂಬಿದಂತಾಗಿ ಕಣ್ಣಂಚು ಹಸಿಯಾದಂತಾಗಿ....ಆದರೆ ಅಲ್ಲೆಲ್ಲ ನೋಡಿ ನನ್ನೊಳಗೆ ರೂಪುಗೊಂಡ ‘ಅಮ್ಮ’ನ ದೈವಿಕ ವ್ಯಕ್ತಿತ್ವ ನನ್ನಮ್ಮನದು ಎಂದು ಯಾವತ್ತೂ ಅನ್ನಿಸುತ್ತಿರಲಿಲ್ಲ. ಈಗಲೂ ಅನ್ನಿಸುವುದಿಲ್ಲ.

ನಾನು–ನನ್ನಣ್ಣ ನಮ್ಮ ತಾಯಿಯನ್ನು ‘ಅಬ್ಬೆ’ ಎಂತಲೇ ಕರೆಯುವುದು. ಅಜ್ಜಿಯನ್ನು ‘ಅಮ್ಮ’ ಎಂದು ಕರೆಯುತ್ತಿದ್ದೆವು. ಹೀಗಾಗಿ ಆಗೆಲ್ಲ  ‘ಅಮ್ಮ’ ಎಂಬ ಶಬ್ದ ಕೇಳಿದಾಕ್ಷಣ ನನ್ನ ಮನಸಲ್ಲಿ ಕೆಂಪು ಸೀರೆಯುಟ್ಟು, ಸೆರಗನ್ನು ಬೋಳುತಲೆಯ ಮೇಲೆ ಸುತ್ತಿಕೊಂಡು, ಕೈಯಲ್ಲೊಂದು ಚೀಲ ಹಿಡಿದುಕೊಂಡು ಸದಾ ಸುತ್ತುತ್ತಿರುವ ನನ್ನ ಅಜ್ಜಿಯ ಚಿತ್ರವೇ ಕಣ್ಮುಂದೆ ಬರುತ್ತಿತ್ತು.

ಸ್ವಲ್ಪ ದೊಡ್ಡವರಾದ ಮೇಲೆ ‘ಅಮ್ಮ’ ಎಂದಾಗ ನಮ್ಮೂರ ಅಮ್ನೋರ ದೇವಸ್ಥಾನದ ಮೂರ್ತಿ ಕಣ್ಣ ಮುಂದೆ ಬರಲು ಶುರುವಾಗಿತ್ತು. ಆದರೆ ಯಾವತ್ತಿಗೂ ಕನಸಲ್ಲಿಯೂ ಒಮ್ಮೆ ಸಹ ‘ದೇವರಂಥ ಅಮ್ಮ’ನ ಸ್ಥಾನದಲ್ಲಿ ನನ್ನ ಅಬ್ಬೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಹೇಗೆ ತಾನೆ ಸಾಧ್ಯ ಹೇಳಿ? ‘ಮಾತೃದೇವೋಭವ’ ಎಂಬಲ್ಲಿನ ಅಮ್ಮ ಜರತಾರಿ ಸೀರೆಯುಟ್ಟು, ಬೆನ್ನಮೇಲೆ ನೀಳ ಕೇಶರಾಶಿಯ ಇಳಿಬಿಟ್ಟ, ಸ್ವಚ್ಛ ಕೋಮಲಹಸ್ತದ ನಡುವೆ ಚಂದದ ಮದರಂಗಿ ಚಿತ್ರ ಬಿಡಿಸಿಕೊಂಡ (ಕೆಲವೊಮ್ಮೆ ಕೈಯಲ್ಲಿ ಬಣ್ಣಗಳ ಧ್ವಜ ಹಿಡಿದುಕೊಂಡ) ದೇವಿಯರು... ಅಥವಾ ಸಿನಿಮಾಗಳಲ್ಲಿನ – ಮಾತುಮಾತಿಗೆ ಮಗನನ್ನು ಹೊಗಳುವ, ಅವನ ಕೂದಲು ಕೊಂಚ ಕೊಂಕಿದರೂ ವಿಲವಿಲ ಒದ್ದಾಡುವ, ಇಪ್ಪತ್ತೈದು ದಾಟಿದರೂ ಕೈತುತ್ತು ತಿನ್ನಿಸುವ, ತೊಡೆ ಮೇಲೆ ಮಲಗಿಸಿಕೊಂಡು ಲಾಲಿ ಹಾಡುವ, ಅವನು ಎಂಥ ತಪ್ಪು ಮಾಡಿದಾಗಲೂ ಅಂದವಾಗಿ ಸಮರ್ಥಿಸಿಕೊಂಡು ಮಾತನಾಡುವ, ಪ್ರೇಮವೈಫಲ್ಯದಿಂದ ನೊಂದ ಮಗನ ಕಣ್ಣೊರೆಸಿ ಸಮಾಧಾನಿಸುವ (ಸಾಮಾನ್ಯವಾಗಿ ಇಂಥ ಸಿನಿಮಾಗಳಲ್ಲಿ ಮಗನಿಗೆ ಮಾತ್ರ ಇಂಥ ಅಮ್ಮ ಸಿಗುತ್ತಾಳೆ. ಮಗಳಿಗಲ್ಲ), ಆ ಎಲ್ಲ ಅಮ್ಮಂದಿರ ಮಾದರಿಗಳೆಲ್ಲಿ...  ಹಳ್ಳಿಗಾಡಿನ ಒಣಮೈ ಹೆಣ್ಣು ನನ್ನ ಅಬ್ಬೆಯೆಲ್ಲಿ?

ಇವಳೋ ಪಟಗಳಲ್ಲಿನ ದೇವಿಯರಷ್ಟು ಚಂದದ ಸೀರೆ ಉಟ್ಟಿದ್ದನ್ನು ನಾನು ಎಂದೂ ಕಂಡಿಲ್ಲ. ತನ್ನ ಮೋಟು ಕೂದಲನ್ನೇ ಒರಟೊರಟಾಗಿ ಗರಗರ ಬಾಚಿಕೊಂಡು ಮುಡಿಕಟ್ಟಿ, ಬ್ರೈನ್‌ ಟ್ಯೂಮರ್‌ ಕಾಯಿಲೆಯ ದಾಡೆಗಳಿಂದ ತಪ್ಪಿಸಿಕೊಳ್ಳಲು ರೇಡಿಯೇಷನ್‌ಗೆ ಒಳಗಾಗಿ ನೆತ್ತಿಮೇಲಿನ ಅರ್ಧದಷ್ಟು ಕೂದಲು ಉದುರಿ ಹೋದಮೇಲೂ ಹಟಕ್ಕೆ ಬಿದ್ದವಳಂತೆ ದಿನಕ್ಕೆ ಮೂರು ಬಾರಿ ಕೂದಲು ಬಾಚಿಕೊಳ್ಳುವ, ಬಾಚಣಿಕೆಯ ಹಲ್ಲಿಗೆ ಸಿಲುಕಿದ ಕೂದಲನ್ನು ಕಿತ್ತು ಮನೆಮೂಲೆಯಲ್ಲಿ ಇಟ್ಟಿದ್ದ ಪ್ಲಾಸ್ಟಿಕ್‌ ಕೊಟ್ಟೆಯಲ್ಲಿ ಸಂಗ್ರಹಿಸಿಡುವವಳು, ಅಪ್ಪನೊಂದಿಗೆ ಮಾತು ಮಾತಿಗೆ ಜಗಳವಾಡುವವಳು, ಜಿಗಣೆಯಂತೆ ಹಟ ಹಿಡಿದು ಕಾಟ ಕೊಟ್ಟು ಕೆಲಸ ಮಾಡಿಸುವವಳು...

ನಂಬಿ ಮೋಸ ಮಾಡಿದ ಸಂಬಂಧಿಕರ ಬಳಿ, ಬುದುವಂತಿಕೆ ತೋರಲು ಹೋಗಿ ಮತ್ತೆ ಮತ್ತೆ ಟೋಪಿ ಹಾಕಿಸಿಕೊಳ್ಳುವ ಗಂಡನ ಬಳಿ, ತಾವು ಬಡವರು ಎಂಬ ಕಾರಣಕ್ಕೆ ತನ್ನ ಮನೆಯವರನ್ನು ‘ಲಘು’ವಾಗಿ ಕಾಣ್ತಾರೆ ಎಂಬ ಕಾರಣಕ್ಕೆ ತನ್ನದೇ ತವರಿನವರ ಜತೆ, ಹಳೆ ಪಾತ್ರೆ, ಕಬ್ಣ ಕೊಳ್ಳಲು ಬರುವವವರ ಜತೆ, ಆಲಸ್ಯ ತೋರುವ ತೋಟದ ಕೂಲಿ ಕೆಲಸದವರ ಜತೆ, ನೆಟ್ಟು ವರ್ಷಗಳೇ ಕಳೆದರೂ, ಸಾಕಷ್ಟು ಗೊಬ್ಬರ–ನೀರು ತಿಂದೂ ಚಿಗಿತುಕೊಳ್ಳದ ಹಿತ್ತಿಲ ಹೂ ಗಿಡದ ಜತೆ, ಕರುವಿಗೆ ಮೊದಲು ಕೆಚ್ಚಲು ನೀಡದಿದ್ದರೆ ಹಾಲು ಕರೆಯಲು ಕೊಡದೆ ತಂಟೆ ಮಾಡುವ ಗೌರಿ ಆಕಳ ಜತೆ, ಸುತ್ತಮುತ್ತಲಿನವರೆದುರು ತಲೆಯೆತ್ತಿ ತಿರುಗುವಷ್ಟೂ ಶ್ರೀಮಂತಿಕೆಯನ್ನು ಕೊಡದ ದೇವರ ಜತೆ.... ಹೀಗೆ ತನ್ನ ಬದುಕಿನಲ್ಲಿ ಜಾಗ ಪಡೆದ ಎಲ್ಲರ ಜತೆಗೂ ಜಗಳವಾಡುತ್ತಲೇ ಬದುಕುವ ನನ್ನ ಅಬ್ಬೆ ಹೇಗೆ ಮಮತಾಮಯಿ, ದೈವೀ ಸ್ವರೂಪಳಂತೆ ಕಂಡಾಳು?

ಸದಾ ಕೆಲಸ ಮಾಡಿ ಜಡ್ಡುಗಟ್ಟಿರುವ ಅವಳ ಕರಗಳು, ನೀಲಿ ನರಗಳು ಎದ್ದೆದ್ದು ತೋರುವ ಅವಳ ಕೃಶ ಶರೀರ, ಕೊಟ್ಟಿಗೆ ಸೆಗಣಿ ತೆಗೆವಾಗ ಎತ್ತಿ ಸೊಂಟಕ್ಕೆ ಕಟ್ಟಿದ ಹಳೇ ಸೀರೆಯಡಿಯಲ್ಲಿ ಕಾಣುವ ಮಾಸಲು ಲಂಗ, ರೇಷ್ಮೆ ದಾರದಲ್ಲಿ ಕಟ್ಟಿದ ಒಂಟಿ ಕರಿಮಣಿ ಸರ, ಗುಳಿಬಿದ್ದ ಕಣ್ಣುಗಳು, ಜೋತುಬಿದ್ದ ಗದ್ದ, ಕೆದರಿದ ಕೂದಲಿನ ಅಬ್ಬೆಯನ್ನು ನೋಡಿ ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ’ ಎಂದು ಹಾಡುವುದಾದರೂ ಹೇಗೆ?

ಪರದೆ–ಪುಸ್ತಕಗಳಲ್ಲಿ ಕಾಣಿಸಿಕೊಂಡು ನನ್ನನ್ನು ಅತೀವ ಭಾವುಕತೆಯಲ್ಲಿ ಅದ್ದಿಸುವ ಆ ‘ಅಮ್ಮ’ಂದಿರಿಗೂ, ಮಗಳು ದಾರಿ ತಪ್ಪುವ ಲಕ್ಷಣ ಕಂಡಾಗ ಚಂಡಿಯಾಗಿ ಒದ್ದು ಬುದ್ಧಿ ಕಲಿಸುವ ನನ್ನಬ್ಬೆಗೂ ಮಧ್ಯ ಎಷ್ಟು ಅಂತರ... ಈ ಎರಡರ ನಡುವೆ ತಿರುಪತಿಯ ರತ್ನಖಚಿತ ದೇವರಿಗೂ ನಮ್ಮೂರಿನ ಕೊಳೆಗೇರಿಯ  ಸುಕ್ರಿಯ ಮೈಮೇಲೆ ಬಂದು ಅಕರಾಳ ವಿಕರಾಳ ಕುಣಿದು, ಭಕ್ತರು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸುವ ಜೀವಂತ ದೈವಕ್ಕೂ ಇರುವಷ್ಟೇ ಕಂದರವಿದೆ.

ಕ್ಷಮಿಸಿ, ‘ಅಮ್ಮ’ ನನಗೆಂದಿಗೂ ದೇವರು ಅನಿಸಿಲ್ಲ. ಮಮತಾಮಯಿ ಮಹಾಮಾತೆ ಅನಿಸಿಲ್ಲ. ಬಹುಶಃ ಅನಿಸುವುದೂ ಇಲ್ಲ. ಅವಳು ಸದಾ ಮನುಷ್ಯ ಜಗತ್ತಿನೊಳಗೆ ತನ್ನ ಕುಟುಂಬಕ್ಕೊಂದು ಘನಸ್ಥಾನ ಕಲ್ಪಿಸಿಕೊಳ್ಳಲು ಸದಾ ಹೆಣಗುತ್ತಾ ಒದ್ದಾಡುವ ಪರಮಸ್ವಾರ್ಥಿ ಸಣ್ಣ ಹೆಣ್ಣಷ್ಟೇ. ಅಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT