ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024: ಪ್ಲೇಆಫ್‌ಗೆ ಲಗ್ಗೆ ಇಟ್ಟ ಬೆಂಗಳೂರು; ಹಾಲಿ ಚಾಂಪಿಯನ್‌ ಚೆನ್ನೈಗೆ ಆಘಾತ

ಹೊಸ ಅಧ್ಯಾಯ ಬರೆದ ಫಫ್ ಡುಪ್ಲೆಸಿ ಬಳಗ: ಹಾಲಿ ಚಾಂಪಿಯನ್‌ ಚೆನ್ನೈಗೆ ಆಘಾತ
Published 18 ಮೇ 2024, 19:14 IST
Last Updated 18 ಮೇ 2024, 19:14 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ‘ಹೊಸ ಅಧ್ಯಾಯ’ ಬರೆಯಿತು. ತಂಡದ ಅಪ್ಪಟ ಅಭಿಮಾನಿಗಳ ಪ್ರಾರ್ಥನೆ ಫಲಿಸಿತು. 

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೈಯಿಂದ ಅಕ್ಷರಶಃ ಜಯದ ಅವಕಾಶ ಕಸಿದುಕೊಂಡ ಫಫ್ ಡುಪ್ಲೆಸಿ ಬಳಗವು ಪ್ಲೇ ಆಫ್‌ ಪ್ರವೇಶಿಸಿತು. ಕ್ರಿಕೆಟ್‌ಪ್ರಿಯರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಪಂದ್ಯದಲ್ಲಿ 27 ರನ್‌ಗಳಿಂದ ಗೆದ್ (ಪ್ಲೇ ಆಫ್‌ ಆರ್ಹತೆಗಾಗಿ ತಂಡಕ್ಕೆ 18 ರನ್‌ಗಳ ಅಂತರದ ಜಯದ ಅಗತ್ಯವಿತ್ತು)ದ ಬೆಂಗಳೂರು ತಂಡವು ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು.  ಸತತ ಆರನೇ ಪಂದ್ಯ ಗೆದ್ದು ಈ ಸಾಧನೆ ಮಾಡಿತು. ಟೂರ್ನಿಯ ಪ್ರಥಮಾರ್ಧದಲ್ಲಿ ಆಡಿದ್ದ ಎಂಟು ಪಂದ್ಯಗಳ ಪೈಕಿ ಏಳರಲ್ಲಿ ಸೋತಿತ್ತು. ನಂತರ ಪುಟಿದೆದ್ದು ಈ ಸಾಧನೆ ಮಾಡಿತು.  ಆಗ ವೈಫಲ್ಯ ಅನುಭವಿಸಿದ್ದ ಯಶ್ ದಯಾಳ್, ಮೊಹಮ್ಮದ್ ಸಿರಾಜ್, ಕ್ಯಾಮರಾನ್ ಗ್ರೀನ್, ರಜತ್ ಪಾಟೀದಾರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅವರೇ ಇಂದು ಜಯದ ರೂವಾರಿಗಳಾದರು.

ಕಳೆದ ಅರ್ಧಡಜನ್ ಪಂದ್ಯಗಳಲ್ಲಿ ಆರ್‌ಸಿಬಿಯ ಅಭಿಮಾನಿಗಳು ಮಾಡಿದ್ದ ಲೆಕ್ಕಾಚಾರಗಳು ಹಾಗೂ ಪ್ರಾರ್ಥನೆಗಳು ಫಲ ನೀಡಿದವು. ತಂಡವು 14 ಅಂಕಗಳೊಂದಿಗೆ ಉತ್ತಮ ರನ್‌ ರೇಟ್‌ ಗಳಿಸಿತು.  ಆದರೆ ಚೆನ್ನೈ ತಂಡದ ಆರನೇ ಪ್ರಶಸ್ತಿ ಜಯಿಸುವ ಕನಸು ಕಮರಿತು.  

13 ಪಂದ್ಯಗಳಲ್ಲಿ 14 ಅಂಕ ಗಳಿಸಿದ್ದ ಚೆನ್ನೈ ತಂಡವು ಈ ಪಂದ್ಯದಲ್ಲಿ 219 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿತ್ತು. ಆದರೆ ಈ ಪಂದ್ಯದಲ್ಲಿ ಜಯಸಿದಿದ್ದರೂ ಕೇವಲ 201 ರನ್‌ ಹೊಡೆದು ಸೋತಿದ್ದರೂ ಕೂಡ ಪ್ಲೇಆಫ್‌ ಪ್ರವೇಶಿಸುವ ಅವಕಾಶವಿತ್ತು. ರವೀಂದ್ರ ಜಡೇಜ ಹಾಗೂ ಮಹೇಂದ್ರಸಿಂಗ್ ಧೋನಿ 7ನೇ ವಿಕೆಟ್ ಜೊತೆಯಾಟದಲ್ಲಿ61 ರನ್‌ ಸೇರಿಸಿದ್ದರಿಂದ ಆ ಸಾಧ್ಯತೆಯೂ ದಟ್ಟವಾಗಿತ್ತು. 

ಆದರೆ ಕೊನೆಯ ಓವರ್‌ನಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಗೆಲುವು ಮತ್ತು ಪ್ಲೇ ಆಫ್‌ ಅವಕಾಶ ಆತಿಥೇಯರ ಮಡಿಲು ಸೇರಿತು. ಯಶ್‌ ದಯಾಳ್‌ ಹಾಕಿದ ಆ ಓವರ್‌ನಲ್ಲಿ   ಚೆನ್ನೈ ತಂಡವು 17 ರನ್‌ ಗಳಿಸಿದ್ದರೂ ಸಾಕಿತ್ತು. ‘ವಿಂಟೇಜ್ ಧೋನಿ’ ಯಶ್ ದಯಾಳರ ಮೊದಲ ಎಸೆತದಲ್ಲಿಯೇ ಚೆಂಡನ್ನು ಮೈದಾನದಾಚೆ ಕಳಿಸಿದರು. ನಂತರದ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಎತ್ತುವ ಭರದಲ್ಲಿ ಸ್ವಪ್ನಿಲ್ ಸಿಂಗ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಕ್ರೀಸ್‌ನಲ್ಲಿದ್ದ ಜಡೇಜ ಅವರು ಮಾಡಿದ ಪ್ರಯತ್ನಗಳು ಫಲಕೊಡಲಿಲ್ಲ.

ಚೆನ್ನೈ ತಂಡವನ್ನು ಕಟ್ಟಿಹಾಕಲು ಇನಿಂಗ್ಸ್ ಆರಂಭದಿಂದಲೇ ಅತಿಥೇಯ ಬೌಲರ್‌ಗಳು ಮಾಡಿದ್ದ ಪ್ರಯತ್ನಗಳು ಕೈಹಿಡಿದವು. ಗ್ಲನೆ್ ಮ್ಯಾಕ್ಸ್‌ವೆಲ್ ಹಾಕಿದ ಮೊದಲ ಓವರ್‌ ನ ಪ್ರಥಮ ಎಸೆತದಲ್ಲಿಯೇ ಋತುರಾಜ್ ಗಾಯಕವಾಡ ವಿಕೆಟ್ ಗಳಿಸಿದರು. ಮೂರನೇ ಓವರ್ ಹಾಕಿದ ಯಶ್ ದಯಾಳ್ ಅವರು ಡೆರಿಲ್ ಮಿಚೆಲ್ ವಿಕೆಟ್ ಪಡೆದರು. ಈ ನಡುವೆಯೂ ರಚಿನ್ ರವೀಂದ್ರ (61 ರನ್) ಅರ್ಧಶತಕ ಹೊಡೆದರು. ಅಜಿಂಕ್ಯ ರಹಾನೆ ಹಾಗೂ ಶಿವಂ ದುಬೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ್ದರು. ಆದರೂ ಐದು ಸಲದ ಚಾಂಪಿಯನ್ ಚೆನ್ನೈ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡವು ಆರ್‌ಸಿಬಿ ಬ್ಯಾಟರ್‌ಗಳು  ಆರಂಭದಲ್ಲಿ ಅಬ್ಬರಿಸದಂತೆ ನೋಡಿಕೊಂಡಿದ್ದರು. ಆದರೆ  ಎರಡು ಜೊತೆಯಾಟಗಳಿಂದಾಗಿ ಆರ್‌ಸಿಬಿ  20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 218 ರನ್‌ ಗಳಿಸಿತು.

ಅರ್ಧಶತಕ ಗಳಿಸಿದ ಫಫ್ ಡುಪ್ಲೆಸಿ (54; 39ಎ) ಹಾಗೂ 47 ರನ್ ಗಳಿಸಿದ ವಿರಾಟ್ ಕೊಹ್ಲಿ ಮೊದಲ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿದ್ದು ಉತ್ತಮ ಅಡಿಪಾಯವಾಯಿತು. ಈ ಮೊತ್ತದ ಮೇಲೆ ರಜತ್ ಪಾಟೀದಾರ್ (41; 23ಎ) ಹಾಗೂ ಕ್ಯಾಮರಾನ್ ಗ್ರೀನ್ (ಅಜೇಯ 38; 17ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 71 ರನ್‌ ಸೇರಿಸಿದರು. ನಂತರ ಬೌಲರ್‌ಗಳು ವಿಜೃಂಭಿಸಿದರು. 

ಕಟ್ಟಕಡೆಯದಾಗಿ ಕ್ರೀಡಾಂಗಣದಲ್ಲಿ ಸೇರಿದ್ದ 32 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಲ್ಲಿದ್ದ ಆರ್‌ಸಿಬಿ ಬೆಂಬಲಿಗರ ಕಂಗಳಲ್ಲಿ ಆನಂದಭಾಷ್ಪವಿತ್ತು. ‘ಯಲ್ಲೋ ಆರ್ಮಿ’ಯ ಅಭಿಮಾನಿಗಳಲ್ಲಿ ದುಃಖ ಕಟ್ಟೆಯೊಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT