ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆಯೆಂಬ ಇರಿವ ಈ ಅಲಗು

Last Updated 9 ಜುಲೈ 2011, 19:30 IST
ಅಕ್ಷರ ಗಾತ್ರ

ಕಳೆದ ಇಪ್ಪತ್ತು ವರ್ಷಗಳಿಗೂ ಮಿಕ್ಕಿ ಕತೆ ಬರೆದುಕೊಂಡು ಬಂದಿರುವ ಈ ಕತೆಗಾರನಿಗೆ ಅದೆಂದೋ ಒಂದು ದಿನ, ತಾನು ಈ ಇಪ್ಪತ್ತೂ ಚಿಲ್ಲರೆ ವರ್ಷಗಳಲ್ಲಿ ಬರೆದ ಕತೆಗಳಿಂದ ತನ್ನ ಬದುಕಿಗೆ ಏನಾದರೂ ಪ್ರಯೋಜನ ದೊರಕಿದೆಯೆ ಎಂಬ ಪ್ರಶ್ನೆ ಧುತ್ತನೆ ತಲೆಯೊಳಗೆ ಹೊಕ್ಕಿಬಿಟ್ಟಿತು.

ತನಗೆ ಇಂತಹುದೊಂದು ಆಲೋಚನೆ ಇದುವರೆಗೆ ಬಂದಿರಲಿಲ್ಲವೇ ಎಂದು ಕತೆಗಾರ ಯೋಚಿಸಿ ನೋಡಿದ. ಎಂದೂ ತಾನು ಹಾಗೆ ಯೋಚಿಸಿರಲಿಲ್ಲವೆಂಬುದು ಹೊಳೆಯುತ್ತಲೇ ಆಶ್ಚರ್ಯವಾಯಿತು. ಅಲ್ಲದೆ ಇದೀಗ ತನಗೆ ಇಂತಹುದೊಂದು ಚಿಂತೆ ಕೊರೆಯತೊಡಗಿರುವುದಾದರೂ ಯಾಕೆ ಎಂಬ ದಿಗಿಲೂ ಉಂಟಾಯಿತು.

ಹಾಗೆ ತಾನು ಕತೆಗಳಿಂದ ಅಥವಾ ತನ್ನ ಸಾಹಿತ್ಯ ಚಟುವಟಿಕೆಗಳಿಂದ ಪಡೆದ ಪ್ರಯೋಜನ ಎನ್ನುವುದರ ಅರ್ಥ ಹಾಗೂ ವ್ಯಾಪ್ತಿಯಾದರೂ ಯಾವುದಿರಬಹುದು ಎಂದು ತಿಣುಕಿ ನೋಡಿದ.

ತಾನು ಕತೆ ಬರೆದುದರಿಂದ, ಪುಸ್ತಕವನ್ನು ಹೊರತಂದುದರಿಂದ ಬಂದ ಸಣ್ಣಪುಟ್ಟ ಹಣದ ಮೊತ್ತದ ಪ್ರಯೋಜನವೋ, ಹಾಗೆ ಬರೆದ ಕತೆಗೆ ಪುಸ್ತಕಗಳಿಗೆ ದೊರೆತ ಪ್ರಶಸ್ತಿ, ಸನ್ಮಾನ, ಹೊಗಳಿಕೆ, ಗುರುತಿಸುವಿಕೆಯ ಪ್ರಯೋಜನವೋ, ಇವೆಲ್ಲವುಗಳಿಂತ ತಾನು ಮುಖ್ಯವೆಂದು ತಿಳಿದುಕೊಂಡು ಆಗಾಗ್ಗೆ ತನ್ನ ಸಾಹಿತ್ಯ ಕೌಶಲ್ಯವನ್ನು ತಾನೇ ಹೊಗಳಿಕೊಂಡು, ಅಕ್ಷರಗಳ ಮೂಲಕ ಹೊರಹಾಕಲ್ಪಡುತ್ತಿರುವ ನನ್ನ ಸುಖ-ದುಃಖಗಳ ಅಭಿವ್ಯಕ್ತಿಯ ಸಮಾಧಾನದ ಪ್ರಯೋಜನವೋ- ಎಂದೆಲ್ಲ ಒಂದಕ್ಕಿನ್ನೊಂದನ್ನು ತೂಗಿ ನೋಡಲು ಯತ್ನಿಸಿದ. ಅವುಗಳಾವುವೂ ಸದ್ಯದ ತನ್ನ ಪ್ರಶ್ನೆಗೆ ಸಮರ್ಪಕ ಉತ್ತರಗಳಾಗಿಲ್ಲವೆನ್ನಿಸಿ ಮತ್ತಷ್ಟು ದುಗುಡದಲ್ಲಿ ಮುಳುಗಿದ.

ತನ್ನ ಈವರೆಗಿನ ಬದುಕಿನಲ್ಲಿ ಎಂದೂ ತನ್ನ ತಲೆಯೊಳಗೆ ಹುಟ್ಟದ ಈ ಪ್ರಯೋಜನಕಾರಿ ಸಿದ್ಧಾಂತ ಹೊಕ್ಕ ಈ ತಳಮಳದ ಗಳಿಗೆಯಾದರೂ ಎಂತಹುದಿರಬಹುದು ಎಂದು ಚಿಂತೆಗೀಡಾದ. ತಾನು ಕತೆಯನ್ನು ಎಂದಿನಿಂದ ಬರೆಯಲಾರಂಭಿಸಿದೆ ಎಂಬುದನ್ನು ನೆನೆಸಿಕೊಂಡರೆ ಇದಕ್ಕೆ ಉತ್ತರ ದೊರಕಬಹುದೇನೋ ಎಂದು ತಲೆ ಕೆರೆದುಕೊಂಡ. ಈ ತರ್ಕ ಕೂಡ ಹಾಸ್ಯಾಸ್ಪದವೆನ್ನಿಸಿತು.

ಹಾಗೆ ನೋಡಿದರೆ ಆತ ಎಂದು ತನ್ನ ಬದುಕಿನ ಮೊದಲ ಕತೆಯನ್ನು ಬರೆದ ಎಂಬುದಕ್ಕೆ ಆತನ ಬಳಿ ಈಗ ಯಾವ ಸಾಕ್ಷ್ಯವೂ ಇರಲಿಲ್ಲ. ತನ್ನ ಬರವಣಿಗೆಗಳ ಬಗ್ಗೆ ಯಾವಾಗಲೂ ಒಂದು ಬಗೆಯ ಉಡಾಫೆ, ಬೇಜವಾಬ್ದಾರಿಯನ್ನೇ ಪ್ರಕಟಿಸುತ್ತ ಬಂದಿದ್ದ ಆತ ಎಂದೂ ತನ್ನ ಬರಹಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದ ಉದಾಹರಣೆಗಳು ಇರಲಿಲ್ಲ.

ಪತ್ರಿಕೆಯಲ್ಲಿ ಬಂದ ತನ್ನ ಕತೆಯನ್ನೋ, ಬರಹವನ್ನೋ ಆತ ಓದಿ ನಿರ್ಲಕ್ಷ್ಯದಿಂದೆಂಬಂತೆ ಅಟ್ಟದ ಮೇಲೋ, ರ‌್ಯಾಕ್‌ನ ಮೂಲೆಯಲ್ಲೋ ಎಸೆದುಬಿಡುತ್ತಿದ್ದ. ಮತ್ತೆಂದಾದರೂ ತನ್ನ ಆ ಕತೆಯನ್ನು ತೆಗೆದು ನೋಡಬೇಕೆಂಬ ಆಸಕ್ತಿ ಅವನಲ್ಲಿ ಅಷ್ಟಾಗಿ ಹುಟ್ಟುತ್ತಿರಲಿಲ್ಲ.
 
ಆದರೆ ತಮ್ಮ ಬರವಣಿಗೆಯ ಮೊದಲ ಪ್ರತಿಯನ್ನು ಅದೊಂದು ಅಮೂಲ್ಯ ವಸ್ತುವೇನೋ, ಪವಿತ್ರ ಸಂಗತಿಯೇನೋ ಎಂಬಂತೆ ಕಾಪಿಟ್ಟುಕೊಂಡು, ಫೈಲ್ ಮಾಡಿಟ್ಟುಕೊಂಡು ಸಂಭ್ರಮಿಸುತ್ತಿದ್ದ ಅನೇಕ ಸಾಹಿತಿಮಿತ್ರರನ್ನು ಅವನು ನೋಡಿದ್ದ.

ಒಂದಿಬ್ಬರು ತಮ್ಮ ಬರಹಗಳ ಮೊದಲ ಪ್ರತಿಯನ್ನು ಗಾಜಿನ ಚೌಕಟ್ಟಿನೊಳಗೆ ಬಂಧಿಸಿ, ಅದಕ್ಕೊಂದು ಚೆಂದದ ಫ್ರೇಮು ಹಾಕಿಸಿ ತಮ್ಮ ಮನೆಯ ಗೋಡೆಗೆ ಪ್ರಶಸ್ತಿಯ ಫಲಕದಂತೆ ನೇತು ಹಾಕಿದ್ದನ್ನೂ ತಾನು ಅವರನ್ನು ಭೇಟಿಯಾಗಲು ಹೋದ ಮೊದಲ ದಿನಗಳಲ್ಲಿ ಅಂತಹ ಫಲಕಗಳನ್ನು ತೋರಿಸಿ ಎಂತಹುದೋ ತೃಪ್ತಿಯಿಂದ ಬೀಗುವುದನ್ನೂ ಆತ ಕಂಡಿದ್ದ. ಅಂತಹ ಯಾವ ಹವ್ಯಾಸಗಳೂ, ಅಭ್ಯಾಸಗಳೂ ತನಗೆ ಇರಲಿಲ್ಲವೆಂಬುದಕ್ಕೆ ತನ್ನ ಸೋಮಾರಿತನವೂ ಕಾರಣವಿರಬಹುದೆಂದು ಕೆಲವೊಮ್ಮೆ ಅವನಿಗೆ ಅನ್ನಿಸಿತ್ತು.

ತಾನು ತನ್ನ ಮೊದಲ ಕತೆ ಯಾವುದೆಂದು ಹುಡುಕುತ್ತಿರುವ ಈ ಸನ್ನಿವೇಶದಿಂದಾಗಿ ತನ್ನ ಸಾಹಿತಿಮಿತ್ರರ ಕಾಪಿಟ್ಟುಕೊಳ್ಳುವ ಹವ್ಯಾಸ ಬಹಳ ಉತ್ತಮದ್ದೆಂದೂ ಈಗ ಅನ್ನಿಸುತ್ತಿರಬಹುದೆ ಎಂದು ತಲೆ ಕೆರೆದುಕೊಂಡ.

ಈಗ ತಾನು ಮೊದಲು ಬರೆದ ಕತೆಯನ್ನು ಹುಡುಕಿ ತೆಗೆದು ಓದಿದರೆ ಸದ್ಯ ನನ್ನ ಮುಂದೆ ನಿಂತಿರುವ ಪ್ರಶ್ನೆಗೇನಾದರೂ ಉತ್ತರ ದೊರೆಯಬಹುದೆ ಎಂಬ ಅತಾರ್ಕಿಕ ಸಂಗತಿ ಹೊಳೆಯುತ್ತಲೇ ಹಳೆಯ ಕತೆಗಳನ್ನೆಲ್ಲ ಒಮ್ಮೆ ಮೆಲುಕು ಹಾಕಲು ನೋಡಿದ.

ಆದರೆ ಅಂತಹ ಮೊದಲ ಕತೆಯ ನೆನಪುಗಳಾವುವೂ ಸುಳಿಯದೆ ಚಡಪಡಿಸಿದ. ಮತ್ತೆ ಮತ್ತೆ ಬಲವಂತವಾಗಿ ಮೆದುಳನ್ನು ಹಿಂಡಿ ತೆಗೆದಂತೆ ನೆನಪು ಮಾಡಿಕೊಳ್ಳುತ್ತ ಹೋಗುತ್ತಲೇ ಅವನ ಕಣ್ಣ ಮುಂದೆ ತನ್ನ ಅವ್ವ, ಅಪ್ಪ, ತನ್ನ ಬಾಲ್ಯದ ಬದುಕಿನ ನೆನಪುಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಾ ಹೋಗತೊಡಗಿದವು.

ಅಂತಹ ನೆನಪುಗಳನ್ನೆಲ್ಲ ಊರು ಬಿಟ್ಟು ಬಂದ ಮೇಲೆ ಅವನು ಬೇಕೆಂತಲೇ ಮುಚ್ಚಿಟ್ಟುಬಿಟ್ಟು, ಎಂದೂ ನೆನೆಯದೆ ಇರುತ್ತಿದ್ದ. ಅವೆಲ್ಲ ದುಃಸ್ವಪ್ನಗಳಂತೆ ಕಾಡುತ್ತಿದ್ದುದಕ್ಕೋ ಏನೋ ಅವನ್ನೆಲ್ಲ ಮನದ ಕತ್ತಲಮೂಲೆಗೆ ಗಂಟು ಕಟ್ಟಿ ಒಗೆದುಬಿಟ್ಟಿದ್ದ. ಈಗ ಅವುಗಳು ನೆನಪಾಗುತ್ತಲೇ ತನ್ನ ಕತೆಗೆ ದೊರೆತ ಪ್ರೇರಣೆಗಳೇನಾದರೂ ಅಲ್ಲಿಂದ ಒಸರಬಹುದೇ ಎಂದುಕೊಂಡು ಆ ನೆನಪುಗಳಿಗೆಲ್ಲ ಎದೆಗೊಡುತ್ತಾ ಹೋದ...

ಮುಳ್ಳಿನ ಪೊದೆಗಳನ್ನು ಕಡಿದು ಸವರಿ, ಸೌದೆಯ ಸಣ್ಣ ಸಣ್ಣ ಪೆಂಡಿಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಅವನ ಅಪ್ಪನಿಗೆ ಅದೊಂದು ದಿನ ಬಲ ಮೊಣಕಾಲಿಗೆ ಮುಳ್ಳು ನಾಟಿಕೊಂಡು ಇನ್ನಿಲ್ಲದಷ್ಟು ಬಾಧೆಪಡುವಂತೆ ಮಾಡಿಬಿಟ್ಟಿತು. ಏನೇ ಮಾಡಿದರೂ ಅದು ನೆಟ್ಟುಕೊಂಡ ಗುರುತು ಪತ್ತೆಯಾಗದೆ, ಗಾಯದ ನೋವೂ ವಾಸಿಯಾಗದೆ ಅವನ ಅಪ್ಪ ತಿಂಗಳಾನುಗಟ್ಟಲೆ ಕಾಲು ಚಾಚಿಕೊಂಡು ಕುಳಿತುಕೊಳ್ಳುವಂತಾದ.

ಹಾಗಿದ್ದರೂ ಮನೆಯಲ್ಲಿ ಅವನ ಅವ್ವನ ಮಾತುಗಳನ್ನು, ಅಳುವನ್ನು ಕೇಳಲಾಗದೆ ಕುಂಟುತ್ತಲೇ ಒಂದೆರಡು ದಿನ ಕೆಲಸ ಮಾಡಲು ನೋಡಿದ. ಆದರೆ ಕಾಲು ಅದಾಗಲೇ ಸಾಕಷ್ಟು ಊದಿಕೊಂಡು ದೊಡ್ಡ ಗಾಯವಾಗಿ ಕೀವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋಗಿ ಬಂದು, ಮಾತ್ರೆ ತಿಂದು, ಸೊಪ್ಪು ಅರೆದು ಹಚ್ಚಿ ಏನೆಲ್ಲಾ ಮಾಡಿದರೂ ಕಾಲು ಊದಿಕೊಳ್ಳುತ್ತಲೇ ಹೋಗಿ ನಡೆಯದಂತಾಗಿ ಮೂಲೆ ಹಿಡಿದು ಕುಳಿತುಬಿಟ್ಟ.

ದಿನವೂ ಅಷ್ಟೋ ಇಷ್ಟೋ ದುಡಿದು ತರುತ್ತಿದ್ದ ಅಪ್ಪನ ಸಂಪಾದನೆ ನಿಂತುಹೋಗಿದ್ದಕ್ಕೋ, ತಾನು ಎಂದೂ ದುಡಿಯದವಳು ಹೀಗೆ ಇಡೀ ಸಂಸಾರದ ಹೊರೆಯನ್ನೆಲ್ಲ ಹೊತ್ತುಕೊಂಡು ಹೊರಗೆ ದುಡಿಯುವಂತೆ ಆಗಿದ್ದಕ್ಕೋ, ಅವ್ವ ದಿನೇ ದಿನೇ ಗಂಡನ ಮೇಲೆ ಸಿಡುಕತೊಡಗಿದ್ದಳು.

ಅಂತಹ ಒಂದು ಸಿಡುಕಿನ ಗಳಿಗೆಯಲ್ಲಿ ಅವನನ್ನು, `ಹಿಂಗೆ ಮನೇಲಿ ಕಾಲು ಮುರಿದು ಕುಂತುಕೊಳ್ಳೋ ಬದಲು ನಂಜನಗೂಡು ದೇವಸ್ಥಾನದ ಮೂಲೆಯಲ್ಲಾದ್ರೂ ಹೋಗಿ ಕುಂತ್ಕಂಡ್ರೆ ಸಂಜೆವರೆಗೆ ಮೂವತ್ತೋ ನಲ್ವತ್ತೋ ಭಿಕ್ಷೆನಾದ್ರೂ ಆಗುತ್ತೆ~ ಅಂದುಬಿಟ್ಟಳು.

ಅವಳ ಆ ಮಾತು ಕೇಳಿ ಅಂದೆಲ್ಲ ಮಂಕಾಗಿದ್ದ ಅವನ ಅಪ್ಪ ಒಣಗಿದ ಕಟ್ಟಿಗೆಯಂತಾಗಿದ್ದ ತನ್ನ ಕಾಲನ್ನೊಮ್ಮೆ ಸವರಿ ನೋಡಿ ಸುಮ್ಮನೆ ಕಣ್ಣೀರಿಟ್ಟ. ಮುಳ್ಳು ಚುಚ್ಚಿದ್ದ ಗಾಯವೇನೋ ವಾಸಿಯಾಗಿತ್ತು. ಆದರೆ ಅವನು ವರ್ಷಾನುಗಟ್ಟಲೆ ಕುಳಿತುಬಿಟ್ಟಿದ್ದರಿಂದ ಕಾಲು ಅಲುಗಾಡದ ಸ್ಥಿತಿಗೆ ತಲುಪಿ ಮರಗಟ್ಟಿ ಹೋಗಿತ್ತು.

ಹೆಂಡತಿಯ ಮಾತು ರಾತ್ರಿಯೆಲ್ಲ ಮುರಿದ ಮುಳ್ಳಿನಂತೆ ಚುಚ್ಚತೊಡಗಿ ಮರುದಿನ ಬೆಳಕು ಬರುವ ಮುಂಚೆಯೇ ತೆವಳಿಕೊಂಡು ಹೊರಗೆ ಹೋಗಿಬಿಟ್ಟಿದ್ದ. ಅಲ್ಲಿ ಯಾರದೋ ಸಹಾಯದಿಂದ ನಂಜನಗೂಡಿನ ಬಸ್ಸು ಹತ್ತೇಬಿಟ್ಟಿದ್ದ.

ಸಂಜೆ ಅವನ ಹೆಂಡತಿ ಕೆಲಸ ಮುಗಿಸಿ ಬಂದಾಗ ಅವನು ಚಿಲ್ಲರೆ ನಾಣ್ಯಗಳನ್ನು, ಮಡಚಿದ ಪುಡಿ ನೋಟುಗಳನ್ನು ನೆಲದ ಮೇಲೆ ಹರವಿಕೊಂಡು, ಜೋಡಿಸುತ್ತ ಕುಳಿತುಕೊಂಡಿದ್ದ. ಅಷ್ಟೊಂದು ದುಡ್ಡುಕಾಸನ್ನು ನೋಡಿ ಅವಳಿಗೆ ಎಂತಹುದೋ ಭಯವಾದಂತಾಗಿ ಅವನ ಕೆಲಸವನ್ನೇ ಸುಮ್ಮನೆ ನೋಡುತ್ತ ನಿಂತುಕೊಂಡುಬಿಟ್ಟಿದ್ದಳು.

ಅವನು ಎಣಿಕೆ ಮುಗಿಸಿ ಅವಳತ್ತ ತಲೆ ಎತ್ತಿ ನೋಡಿ `ತಕೋ, ಎಂಬತ್ತೈದು ರೂಪಾಯಿ ಇದೆ... ಹೊಸಬನಾಗಿದ್ದರಿಂದ ಇಷ್ಟೇ ಮಾಡೋಕ್ಕಾಗಿದ್ದು. ಹೋಗ್ತಾ ಹೋಗ್ತಾ ಇನ್ನೂ ಹೆಚ್ಗೆ ಸಂಪಾದನೆ ಅಗ್ಬೋದು...~ ಎನ್ನುತ್ತ ಕಿರುನಗೆ ನಕ್ಕ.

ಅವಳು ಮರುಮಾತಾಡದೆ ಆತ ಕೊಟ್ಟಿದ್ದನ್ನು ತೆಗೆದುಕೊಂಡು ನಿಟ್ಟುಸಿರೊಂದಿಗೆ ಒಲೆ ಹಚ್ಚಲು ಕೋಣೆಯೊಳಗೆ ಕಾಲಿಟ್ಟಳು.

ಅದೆಲ್ಲ ಇವನಿಗೆ ಗೊತ್ತಾಗಿದ್ದು ಎಷ್ಟೋ ದಿನಗಳ ನಂತರ. ಪಿಯುಸಿ ಓದಲೆಂದು ನಂಜನಗೂಡಿನ ಸರ್ಕಾರಿ ಹಾಸ್ಟೆಲ್ಲು ಸೇರಿಕೊಂಡಿದ್ದ ಇವನು ಅದೊಂದು ದಿನ ಬಸ್‌ಸ್ಟ್ಯಾಂಡ್‌ನ ಮೂಲೆಯಲ್ಲಿ ನೆಲಮಟ್ಟದ ತಳ್ಳುಹಲಗೆಯಲ್ಲಿ ಕುಳಿತು ಓಡಾಡುತ್ತ, ಜನರೆಡೆಗೆ ಕೈಚಾಚಿ, ಅತ್ತ ತಿರುಗಿ ನಿಂತವರ ಕೈಕಾಲುಗಳನ್ನು ಮುಟ್ಟಿ ನಮಸ್ಕರಿಸಿ ಬೇಡುತ್ತಿದ್ದ ಅಪ್ಪನನ್ನೂ, ಅವನು ಕುಳಿತಿದ್ದ ಗಾಡಿಯನ್ನು ತಳ್ಳುತ್ತ ಅವನಿಗೆ ನೆರವಾಗುತ್ತಿದ್ದ ಅವ್ವನನ್ನೂ ಕಂಡು ಬೆಚ್ಚಿಬಿದ್ದ.

ಅಡ್ಡಾಡುವ ಜನರ ನಡುವೆ ಆಗೀಗ ಮರೆಯಾಗುತ್ತಿದ್ದ ಅವರನ್ನು ದೂರದಿಂದಲೇ ಮತ್ತೆ ಮತ್ತೆ ದಿಟ್ಟಿಸಿ, ನಂಬಲಾಗದವನಂತೆ ನೋಡಿದ. ಹತ್ತಿರ ಹೋಗಿ ನೋಡುವ ಧೈರ್ಯ ಸಾಲದೆ ದೂರದಿಂದಲೇ ನೋಡಿ ಅವರು ತನ್ನ ಅಪ್ಪ-ಅವ್ವನೇ ಎಂಬುದನ್ನು ಖಚಿತಪಡಿಸಿಕೊಂಡು ಅಲ್ಲಿಂದ ಹೊಡೆದುಕೊಳ್ಳುವ ಎದೆ ಹೊತ್ತುಕೊಂಡು ಓಡಿದವನೇ ಹಾಸ್ಟೆಲ್ಲಿನ ರೂಮು ಸೇರಿಕೊಂಡು ಮನಬಂದಂತೆ ಅತ್ತ.

ಬೇಡುತ್ತಿದ್ದ ಅಪ್ಪ-ಅವ್ವರ ದೃಶ್ಯಗಳು ಪದೇ ಪದೇ ಕಣ್ಣ ಮುಂದೆ ಬಂದಂತಾಗಿ ಒಂದೇ ಸಮನೆ ದುಃಖಿಸಿದ.

ಮರುದಿನ ಬೆಳಿಗ್ಗೆ ನಂಜನಗೂಡಿಗೆ ತಮ್ಮ ಎಂದಿನ ಕಾಯಕಕ್ಕೆ ಹೊರಡಲು ಗಾಡಿ ತಳ್ಳಿಕೊಂಡು ತಯಾರಾಗುತ್ತಿದ್ದ ಅಪ್ಪನೂ ಅವ್ವನೂ ಇವನು ಮನೆ ಮುಂದೆ ಬಂದು ನಿಲ್ಲುತ್ತಲೇ ಬೆದರಿದವರಂತೆ ನಿಂತುಕೊಂಡರು. ತಕ್ಷಣವೇ ಸಾವರಿಸಿಕೊಂಡು ಗಾಡಿಯನ್ನು ಬಾಗಿಲ ಸಂದಿಗೆ ತಳ್ಳಲು ಯತ್ನಿಸುತ್ತ ಗಾಬರಿಯಿಂದ `ಬಾ... ಬಾ... ಕಾಲೇಜಿಗೆ ರಜೇನಾ?~ ಎನ್ನುತ್ತ ತೊದಲತೊಡಗಿದರು.

`ಯಾಕೆ ಸುಮ್ನೆ ಒದ್ದಾಡ್ತೀರಾ? ನನಗೆ ಎಲ್ಲಾ ಗೊತ್ತು~ ಎನ್ನುತ್ತ ಭಾರವಾದ ಉಸಿರಿನೊಂದಿಗೆ ಒಳಬಂದು ಕಿತ್ತುಹೋಗಿದ್ದ ಗಾರೆನೆಲದ ಮೇಲೆ ಕಾಲು ಚಾಚಿ ಕುಳಿತುಕೊಂಡ. ಅಪ್ಪ-ಅವ್ವ ಇಬ್ಬರೂ ಒಬ್ಬರ ಮುಖವನ್ನೊಬ್ಬರು ತಪ್ಪಿಸುತ್ತ ತಪ್ಪಿತಸ್ಥರಂತೆ ಭಯಗ್ರಸ್ತರಾಗಿ ಕುಳಿತುಕೊಂಡರು.
 
ಅವ್ವ ಆತುರಾತುರದಿಂದ ತೊಲೆಯ ಮೇಲಿದ್ದ ಕುಡುಗೋಲು ತೆಗೆದುಕೊಂಡವಳೇ `ನಾನೊಂದಿಷ್ಟು ಸೌದೆ ತರೋಕೆ ಹೋಗ್ತೀನಿ... ಇರು ಮಗನೇ ಬೇಗ ಬಂದುಬಿಡ್ತೀನಿ... ಬಿಸಿ ಬಿಸಿ ಉಪ್ಪಿಟ್ಟು ಮಾಡಿದ್ದೀನಿ ತಿನ್ತಾ ಇರು~ ಎಂದು ಅವನ ಪ್ರತಿಕ್ರಿಯೆಗೂ ಕಾಯದೆ ಹರಕು ಚಪ್ಪಲಿ ತೊಟ್ಟು ಹೊರಟುಬಿಟ್ಟಳು.

ಅವನು ಅಪ್ಪನ ಬಳಿಗೆ ಬಂದು ತಲೆ ತಗ್ಗಿಸಿ  ಕುಳಿತಿದ್ದ ಅಪ್ಪನನ್ನು ಜಗ್ಗುತ್ತಾ `ಏನಪ್ಪಾ ಇದೆಲ್ಲ~ ಎಂದು ಕಣ್ಣೀರಿಟ್ಟ. ಅಪ್ಪ ಅವನ ಕೈ ಹಿಡಿದುಕೊಂಡು ಕತೆಯ ಹಾಗೆ ಹೇಳತೊಡಗಿದ...

ಮೊದಲಿಗೆ ನಂಜನಗೂಡಿನ ದೇವಸ್ಥಾನದ ಮೂಲೆಗೆ ತೆವಳಿಕೊಂಡು ಹೋಗುತ್ತಲೇ ಅದಾಗಲೇ ಸಾಲುಗಟ್ಟಿ ಕುಳಿತಿದ್ದ ಅನೇಕ ಮಂದಿ ಅವನನ್ನೇ ದುರುಗುಟ್ಟಿಕೊಂಡು ನೋಡತೊಡಗಿದರು. ಅವರೆಲ್ಲರಿಗೆ ಆತನೊಬ್ಬ ಹೊಸ ಸೇರ್ಪಡೆಯಂತೆ ಕಂಡು ಅಸಮಾಧಾನವಾಗಿದ್ದುದು ಅವರ ಮುಖಗಳಲ್ಲಾದ ಬದಲಾವಣೆಯಿಂದಲೇ ಗೊತ್ತಾಗುತ್ತಿತ್ತು.

ಅಲ್ಲಿದ್ದವರಿಗೆಲ್ಲ ಮುಖ್ಯಸ್ಥನಂತೆ ತೋರುತ್ತಿದ್ದ, ತನ್ನ ಸುತ್ತ ಗುಂಪು ಸೇರಿಸಿಕೊಂಡು, ಹರಟೆ ಕೊಚ್ಚುತ್ತಾ ಕೇಕೆ ಹಾಕುತ್ತಾ ನಗುತ್ತಿದ್ದ ಮೋಟುಕೈಯವನೊಬ್ಬ ಅವನನ್ನು ನೋಡುತ್ತಲೇ ಮುಖ ಗಂಟಿಕ್ಕಿಕೊಂಡು `ಏಯ್ ಇಲ್ಲಿರೋರ‌್ಗೆ ಕಲೆಕ್ಷನ್ ಇಲ್ಲ... ಅಲ್ಲೆಲ್ಲಾದ್ರೂ ಬೇರೆ ಕಡೆ ಕೂತ್ಕೊ ಹೋಗು...~ ಎಂದು ಕೂಗಿ ಹೇಳಿದ.

`ಇವತ್ತೊಂದಿನ ಅಷ್ಟೇ ಅಣ್ಣ... ಮಧ್ಯಾಹ್ನನೇ ಹೊಂಟೋಯ್ತೀನಿ~ ಎಂದು ಇವನು ದೈನ್ಯನಾಗಿ ಕೇಳಿಕೊಂಡ.

`ಮೊದಮೊದ್ಲು ಎಲ್ಲಾ ಹಿಂಗೇ ಹೇಳೋದು... ನಡಿ ನಡಿ~ ಎನ್ನುತ್ತಾ ಸೇದುತ್ತಿದ್ದ ಬೀಡಿಯನ್ನು ನೆಲಕ್ಕೆ ಅದುಮಿ, ಉಳಿದ ಮೋಟನ್ನು ಕಿವಿಗೆ ಸಿಗಿಸಿಕೊಳ್ಳುತ್ತ ಎದ್ದು ಬಂದ ಅವನು ತನ್ನ ಮೋಟುಕೈಯಿಂದಲೇ ಅವನ ಭುಜ ತಿವಿದು ಅಲುಗಾಡಿಸತೊಡಗಿದ.

ಇವನಿಗೆ ಅಳುವೇ ಬಂದಂತಾಗಿ ಸುಮ್ಮನೆ ಮಿಕಮಿಕನೆ ನೋಡತೊಡಗಿದ. ಅಲ್ಲಿದ್ದ ಒಂದಿಬ್ಬರು `ಹೋಗ್ಲಿ ಬಿಡು ಚಿನ್ನಯ್ಯ... ಆಮೇಲೆ ಅವ್ನೇ ಹೋಯ್ತೊನೆ... ಅವನಿಗ್ಯಾರು ಕಾಸು ಕೊಡ್ತಾರೆ~ ಎಂದು ಯಾವ ಕಡೆಗೂ ಸೇರದಂಥ ಸಮಾಧಾನದ ಮಾತುಗಳನ್ನಾಡಿದರು.

ಅಲ್ಲಿ ಕೊಂಚ ಹೊತ್ತು ಸುಮ್ಮನೆ ಕುಳಿತಿದ್ದ ಅವನು ಮೆಲ್ಲಗೆ ತೆವಳುತ್ತ ಹಾಗೇ ಸ್ವಲ್ಪ ದೂರ ಚಲಿಸಿದ. ನಿಧಾನವಾಗಿ ತೆವಳುತ್ತ ಹೊಳೆಯ ಸಮೀಪ ಬಂದವನಿಗೆ ಅಲ್ಲಿ ಜನ ಗುಂಪು ಗುಂಪಾಗಿ ಸೇರಿ ಯಾವುದೋ ಗಲಭೆಯಾಗುತ್ತಿರುವಂತೆ ಕಾಣಿಸಿತು. ಅಲ್ಲಿಗೆ ತೆವಳಿಕೊಂಡು ಹೋದ. ಎಲ್ಲರೂ ಹೊಳೆಯತ್ತ ಕೈ ತೋರಿಸುತ್ತಾ, ಅಲ್ಲೊಂದಿಬ್ಬರು ನೀರಿಗಿಳಿದು ಈಜುತ್ತಾ ಏನನ್ನೋ ಹುಡುಕಾಡುತ್ತಿರುವಂತಿತ್ತು. ಉಳಿದ ಕೆಲವರು ಮೆಟ್ಟಿಲುಗಳ ಮೇಲೆ ನಿಂತು ಅವರಿಗೆ ಏನೋ ಸೂಚನೆಗಳನ್ನು ನೀಡುತ್ತಿದ್ದುದು ಅಲ್ಲಿ ಯಾವುದೋ ಅನಾಹುತ ನಡೆದಿರುವುದನ್ನು ಹೇಳುತ್ತಿತ್ತು.

ಹತ್ತಿರ ತೆವಳಿದ ಅವನು ಅಲ್ಲಿದ್ದ ಒಬ್ಬನನ್ನು `ಏನಾಯ್ತಣ್ಣ? ಯಾಕಷ್ಟು ಜನ?~ ಎಂದು ಕೇಳಿದ.

`ಯಾವನೋ ನಿನ್ನ ಹಾಗೇ ಕುಂಟ ಕಣಪ್ಪ... ಸ್ನಾನ ಮಾಡೋಕೆ ಹೊಳೆದಂಡೆಗೆ ಬಂದಿದ್ದನಂತೆ... ಕಾಲು ಜಾರಿ ಮುಳುಗಿ ಹೋದ. ಅವಾಗಿಂದ ಹುಡುಕ್ತಾ ಅವ್ರೆ... ಕಾಣಲೇ ಇಲ್ಲ... ಪಾಪ ಅವನು ಕುಳಿತು ಬಂದಿದ್ದ ಕೈಗಾಡಿ ನೋಡಲ್ಲಿ...~ ಎನ್ನುತ್ತ ಅವನು ಹೊಳೆಯ ಮೆಟ್ಟಿಲತ್ತ ಕೈ ತೋರಿಸಿದ.

ಇವನು ಅತ್ತ ನೋಡುತ್ತಲೇ ಅಲ್ಲೊಂದು ನಾಲ್ಕು ಚಕ್ರದ ಹಲಗೆಯ ತಳ್ಳುಗಾಡಿ ನಿಂತಿತ್ತು. ಅದಕ್ಕೆ ತಳ್ಳಿಕೊಂಡು ಹೋಗಬಹುದಾದ ಎರಡು ಕೈಹಿಡಿಕೆಗಳಿದ್ದು ಅಲ್ಲಿಗೊಂದು ಪ್ಲಾಸ್ಟಿಕ್ ಕೈಚೀಲ ನೇತು ಹಾಕಲಾಗಿತ್ತು. ಅದು ಗಾಳಿಯ ರಭಸಕ್ಕೆ ರಪರಪನೆ ಬಡಿದುಕೊಳ್ಳುತ್ತಿತ್ತು.

ಅಷ್ಟು ಹೊತ್ತಿಗೆ ಸಂಜೆಯಾಗತೊಡಗಿ ಅಲ್ಲಿ ಗುಂಪು ಕಟ್ಟಿದ್ದ ಜನರೆಲ್ಲ ಚೆದುರಿಹೋಗುತ್ತಲೇ ಹೊಳೆಯ ಸುತ್ತಮುತ್ತಲ ಜನರೂ ಕರಗತೊಡಗಿದ್ದರು. ಇವನು ತೆವಳುತ್ತ ತೆವಳುತ್ತ ಆ ಕೈಗಾಡಿಯ ಹತ್ತಿರಕ್ಕೆ ಬಂದುಬಿಟ್ಟಿದ್ದ. ಆ ಗಾಡಿ ನಿಂತಿದ್ದ ಪರಿಗೂ ಇವನು ಅದರ ಬಳಿ ಕುಳಿತುಕೊಂಡ ವೈಖರಿಗೂ ಸರಿಯಾಗಿ ಹೊಂದಾಣಿಕೆಯಾಗತೊಡಗಿ, ಅದು ಅವನದೇ ವಾರಸುದಾರಿಕೆಯ ಗಾಡಿ ಎನ್ನುವ ಭಾವನೆಗೆ ಕೊಂಚವೂ ಚ್ಯುತಿ ಬಾರದಂತೆ ಕಾಣತೊಡಗಿ, ಯಾರಿಗೂ ಅನುಮಾನ ಬರುವಂತಿರಲಿಲ್ಲ.

ಮುಸ್ಸಂಜೆ ಕವಿಯುತ್ತಲೂ ಇವನಿಗೆ ಧೈರ್ಯ ಹುಟ್ಟಿ ಆ ಗಾಡಿಗೆ ಹತ್ತಿ ಕಾಲು ಚಾಚಿಕೊಂಡು ಕುಳಿತು ನೇತುಹಾಕಿದ್ದ ಚೀಲದೊಳಕ್ಕೆ ಕೈ ಹಾಕಿದ. ಅಂಗೈಗೆ ಸಿಕ್ಕಿಸಿಕೊಳ್ಳುವ ಎರಡು ಪುಟ್ಟ ಮರದ ಹಲಗೆಗಳೂ, ಒಂದಿಷ್ಟು ಚಿಲ್ಲರೆ ಕಾಸೂ, ಒಂದು ಪುಟ್ಟ ಟವೆಲ್ಲೂ ಸಿಕ್ಕಿದವು. ಆ ಎರಡೂ ಮರದ ಹಲಗೆಗಳನ್ನು ಅಂಗೈಗೆ ಸಿಕ್ಕಿಸಿಕೊಂಡು ನೆಲಕ್ಕೆ ಕೈಯಿಕ್ಕಿ ಮುಂದಕ್ಕೆ ಗಾಡಿಯನ್ನು ತಳ್ಳಿ ನೋಡಿದ. ಗಾಡಿ ನೀರಿನಲ್ಲಿ ತೇಲಿದಂತೆ ಸಲೀಸಾಗಿ ಉರುಳುತ್ತಲೇ ಆತ್ಮವಿಶ್ವಾಸ ತುಂಬಿಕೊಂಡವನಂತೆ ಗಾಡಿಯನ್ನು ಮುನ್ನಡೆಸುತ್ತಾ ನಡೆದ.....

***
`ನಾನು ಓದುವುದನ್ನು ನಿಲ್ಲಿಸಿ ಕೆಲಸಕ್ಕೆ ಸೇರಿಕೊಳ್ಳುತ್ತೇನೆ... ನಿಮ್ಮನ್ನು ಸಲಹುತ್ತೇನೆ... ನಿಮ್ಮ ಈ ಭಿಕ್ಷಾಟನೆ ನಿಲ್ಲಿಸಿ~ ಎಂದು ಇವನು ಅಲವತ್ತುಕೊಂಡ.

`ನೀನು ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೋ... ಅಲ್ಲಿಯವರೆಗೂ ನಾವು ಓದಿಸುತ್ತೇವೆ; ಭಿಕ್ಷೆ ಮಾಡಿಯಾದರೂ ಸರಿ... ದಿನಕ್ಕೆ ಈಗ ಏನಿಲ್ಲವೆಂದರೂ ನೂರೈವತ್ತು ರೂಪಾಯಿಗಳವರೆಗೂ ಸಂಪಾದನೆಯಾಗುತ್ತಿದೆ~ ಎಂದು ಅವರು ಅಂದಾಗ ಇವನಿಗೆ ಕಸಿವಿಸಿಯಾಯಿತು. ತಾನು ಹೇಳಿದರೂ ಇವರು ಒಪ್ಪುವುದಿಲ್ಲ; ಒಪ್ಪಿಕೊಂಡಂತೆ ನಟಿಸಿಯಾದರೂ ತಮ್ಮ ಕಾಯಕ ಮುಂದುವರೆಸುತ್ತಾರೆ ಎಂಬುದು ಮನವರಿಕೆಯಾದವನಂತೆ ಸುಮ್ಮನೆ ಅಳುಮೋರೆ ಮಾಡಿಕೊಂಡು ನಿಂತುಕೊಂಡ.

ಅಲ್ಲಿಂದಾಚೆಗೆ ನಂಜನಗೂಡಿನ ಬೀದಿಗಳಲ್ಲಿ ಅಡ್ಡಾಡುವುದೆಂದರೆ ಅವನೊಳಗೆ ಎಂತಹುದೋ ಭೀತಿ ಹೊಕ್ಕಂತೆ ಆಗುತ್ತಿತ್ತು. ಎಷ್ಟೋ ದಿನಗಳವರೆಗೆ ಪೇಟೆಯ ಬೀದಿಯತ್ತ ಹೋಗದೆ ಸುಮ್ಮನೆ ಒಬ್ಬನೇ ಹಾಸ್ಟೆಲ್ಲು ರೂಮಿನಲ್ಲಿ ಮಲಗಿ ಅಲ್ಲೆಲ್ಲೋ ಪೇಟೆಯ ಬೀದಿಗಳಲ್ಲಿ ಅಲೆಯುವ ಅವ್ವನನ್ನೂ ಅಪ್ಪನನ್ನೂ ನೆನೆದು ಕಣ್ಣೀರಿಡುತ್ತಿದ್ದ.

ಅಪ್ಪಿತಪ್ಪಿ ಯಾವಾಗಲಾದರೊಮ್ಮೆ ಪೇಟೆಯ ಕಡೆ ಹೋದಾಗ ಅಪ್ಪನೂ ಅವ್ವನೂ ಧುತ್ತನೆ ತನ್ನ ಎದುರಿಗೆ ಬಂದು ನಿಂತು, ಕಾಸಿಗಾಗಿ ಕೈಯೊಡ್ಡಿಬಿಡಬಹುದೆಂಬ ಭಯ ಆವರಿಸಿದಂತಾಗಿ ಬಹಳ ಎಚ್ಚರಿಕೆಯಿಂದ ನಡೆದಾಡುತ್ತಿದ್ದ. ಅಪ್ಪ-ಅವ್ವ ಇಬ್ಬರೂ ತನ್ನ ಹಾಸ್ಟೆಲ್ಲು ಗೇಟಿನ ಮುಂದೆ ಬಂದು `ಧರ್ಮ ಮಾಡಿ ಸ್ವಾಮಿ~ ಎಂದು ದೈನ್ಯತೆಯಿಂದ ಬೇಡಿಕೊಂಡಂತೆ ಕನಸಾಗಿ ಬೆಚ್ಚಿ ಕೂರುತ್ತಿದ್ದ.

ತಾನು ಕಂಡ ಎಲ್ಲ ಭಿಕ್ಷುಕರಲ್ಲಿಯೂ ಗಾಡಿಯಲ್ಲಿ ಕುಳಿತ ಅಪ್ಪ- ಗಾಡಿ ತಳ್ಳುತ್ತಿರುವ ಅವ್ವ- ಇವರದೇ ಚಿತ್ರ ಮೂಡಿದಂತಾಗಿ ಯಾವ ಭಿಕ್ಷುಕರನ್ನೂ ಕಣ್ಣೆತ್ತಿ ನೋಡಲಾಗದೆ ಒದ್ದಾಡತೊಡಗುತ್ತಿದ್ದ. ಈ ತಳಮಳಗಳು ಮುಗಿದರೆ ಸಾಕೆಂದು ಕಾಯುತ್ತಿದ್ದವನು ಪರೀಕ್ಷೆ ಮುಗಿಯುತ್ತಲೇ ಫಲಿತಾಂಶಕ್ಕೂ ಕಾಯದೆ, ಯಾರಿಗೂ ಹೇಳದೆ ಬೆಂಗಳೂರಿನ ಬಸ್ಸು ಹತ್ತಿ ಹೊರಟುಬಿಟ್ಟಿದ್ದ.

ಅಲ್ಲೆಲ್ಲೋ ಫ್ಯಾಕ್ಟರಿಗಳಲ್ಲಿ, ಕಾಂಪ್ಲೆಕ್ಸುಗಳಲ್ಲಿ, ಹೋಟೆಲುಗಳಲ್ಲಿ, ಎಲ್ಲೆಂದರಲ್ಲಿ -ಒಂದಾದ ಮೇಲೊಂದರಂತೆ ಬದಲಾಗುತ್ತಲೇ ಹೋಗುವ ಕೆಲಸಗಳಿಗೆ ಸೇರಿಕೊಂಡಿದ್ದ.

ಒಂದೊಂದು ಕಡೆ ಅವನಿಗೆ ಸರಿಹೊಂದುವ ಕೆಲಸ ಸಿಕ್ಕಿದರೂ ಸಂಬಳ ಕಡಿಮೆ ಇರುತ್ತಿತ್ತು. ಸಂಬಳ ಹೆಚ್ಚು ಕೊಡುತ್ತೇವೆನ್ನುವ ಕಡೆಗಳಲ್ಲಿ ಅವನಿಂದ ಕೆಲಸ ಮಾಡಲು ಶ್ರಮವೆನಿಸುತ್ತಿತ್ತು. ಹಾಗೆಯೇ ಒಂದೆರಡು ವರ್ಷಗಳಲ್ಲಿ ಸಾಕಷ್ಟು ಸಂಬಳವೂ ತ್ರಾಸದಾಯಕವಲ್ಲದ ಕೆಲಸವೂ ಇರುವಂತಹ ಜಾಗೆಯೊಂದನ್ನು ಹುಡುಕಿಕೊಂಡಿದ್ದ. ಎಸ್‌ಎಸ್‌ಎಲ್‌ಸಿ ನಪಾಸಾಗಿ ಎಂದೋ ಬೆಂಗಳೂರು ಸೇರಿಕೊಂಡಿದ್ದ ಒಂದಿಬ್ಬರು ಗೆಳೆಯರು ಅವನ ನೆರವಿಗೆ ಬಂದಿದ್ದರು.

ಅಂತಹ ದಿನಗಳಲ್ಲೇ ಒಂದಷ್ಟು ಹಣವನ್ನು ಕೂಡಿಸಿಕೊಂಡು, ಅವ್ವ-ಅಪ್ಪನನ್ನು ನೆನೆಸಿಕೊಂಡು, ಒಂದು ವಾರ ರಜೆ ಹಾಕಿ ಊರಿಗೆ ಹೊರಡಬೇಕೆಂದುಕೊಂಡು ಹೊರಟು ಬಂದಿದ್ದ. ಅವನು ಹಾಗೆ ಹೊರಡುವ ಮೂರು ತಿಂಗಳಿಗೂ ಮುಂಚೆಯೇ ಅವನ ಅಪ್ಪ-ಅವ್ವ ಇಬ್ಬರೂ ಇಹಲೋಕ ತ್ಯಜಿಸಿದ್ದರು.

ಅವರು ಹೇಗೆ ಸತ್ತರೆಂಬುದು ಊರಿನಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ನಂಜನಗೂಡಿಂದ ಬರುವ ಮಾರ್ಗದಲ್ಲಿ; ಊರಿಗೆ ಒಂದೆರಡು ಫರ್ಲಾಂಗು ದೂರದಲ್ಲಿ ಅವರ ಕೈಗಾಡಿ ನುಜ್ಜುಗುಜ್ಜಾಗಿ ಬಿದ್ದಿತ್ತು. ಆ ಗಾಡಿಯಿಂದ ನಾಲ್ಕಾರು ಮಾರು ದೂರದಲ್ಲಿದ್ದ ಕಾಲುವೆಯ ಪಕ್ಕದ ಹಳ್ಳದಲ್ಲಿ ಅವರಿಬ್ಬರೂ ಮುಖಕೆಳಗೆ ಮಾಡಿ ಬಿದ್ದಿದ್ದರು.
***

ಅದೆಲ್ಲವೂ ಇಷ್ಟು ನಿಚ್ಚಳವಾಗಿ, ಎಂದೂ ನೆನಪಾಗದಷ್ಟು ಸ್ವಚ್ಛವಾಗಿ, ಘಟನೆಗಳ ಒಂದೆಳೆಯೂ ತಪ್ಪದಂತೆ ಇಂದು ನೆನಪಾಗುತ್ತಿರುವುದರ ಮರ್ಮವಾದರೂ ಏನು ಎಂದು ತಿಳಿಯದೆ ಕತೆಗಾರನಿಗೆ ಅಚ್ಚರಿಯೊಂದಿಗೆ ಒಂದು ಬಗೆಯ ವಿಷಾದವೂ ಆಗತೊಡಗಿತು. ಬದುಕಿನ ತಿರುಗಣಿಯಲ್ಲಿ ಅದು ಹೇಗೋ ಕತೆಯ ಹುಚ್ಚು ಹಿಡಿಸಿಕೊಂಡು, ಕತೆಯನ್ನು ಧ್ಯಾನಿಸಿಕೊಂಡು ಬಂದ ತನಗೆ ತನ್ನ ಮೊದಲ ಕತೆಗಿಂತಲೂ ನಿಚ್ಚಳವಾಗಿ ತನ್ನ ಬದುಕಿನ ಭೂತಕಾಲ ನೆನಪಾಗುತ್ತಿರುವುದು ಅಚ್ಚರಿಯೆನ್ನಿಸಿತು.

ಒಂದು ರೀತಿಯಲ್ಲಿ ಅಂದಿನ ದಿನಗಳ ಹಾಗೆಯೇ ಇಂದೂ ತನ್ನ ಬದುಕು ನಿಜವಾದ ನೆಲೆಯೊಂದನ್ನು ಕಂಡುಕೊಳ್ಳದೆ ತನ್ನ ಅಪ್ಪನ ಭಿಕ್ಷಾಟನೆಯ ಗಾಡಿಯ ಹಾಗೆಯೇ ಅಲೆದಾಡುತ್ತಿರುವುದನ್ನು ನೆನೆದು ಯಾವುದೋ ಖಿನ್ನತೆ ಆವರಿಸಿದಂತಾಗಿ ಒಳಗೊಳಗೇ ನೊಂದುಕೊಂಡ.

ಐದಾರು ದಿನಗಳ ಹಿಂದೆ ಸಾಹಿತ್ಯ ಕಾರ‌್ಯಕ್ರಮವೊಂದಕ್ಕೆ ಅತಿಥಿಯಾಗಿ ಬಂದಿದ್ದ ತನ್ನ ಬಾಲ್ಯಕಾಲದ ಸ್ನೇಹಿತನೊಬ್ಬನ ಭೇಟಿ ನನ್ನ ಈ ತಳಮಳಗಳನ್ನೆಲ್ಲ ಒಳಗಿಂದ ಬಗೆದು ತೋರಿಸುತ್ತಿರಬಹುದೆ ಎಂದು ತಲೆ ಕೊಡವಿಕೊಂಡ. ತನ್ನ ಬದುಕಿನಲ್ಲಿ ಅಂತಹ ಎಷ್ಟೋ ಮಂದಿಯನ್ನು ತಾನು ಭೇಟಿಯಾಗಿದ್ದಾಗಲೂ ಹುಟ್ಟದ ಕೀಳರಿಮೆ, ಸಂಕಟ ಈಗ ಹುಟ್ಟುತ್ತಿರುವುದು ಒಂದು ರೀತಿಯಲ್ಲಿ ವಿಚಿತ್ರವಾಗಿಯೂ ತೋರಿತು.

ವಾರ್ತಾ ಇಲಾಖೆಯ ನಿರ್ದೇಶಕನಾಗಿದ್ದ ಆ ಸ್ನೇಹಿತ ಇವನನ್ನು ಕಂಡೊಡನೆ `ಓಹೋ... ಕನ್ನಡ ಸಾಹಿತ್ಯದ ಪ್ರಭಾವಿ ಕಥೆಗಾರರು! ಹೇಗಿದ್ದೀರಿ?~ ಎಂದು ನಾಟಕೀಯವಾಗಿ ಹೊಗಳುತ್ತ ಕೈಕುಲುಕಿದ್ದು ಕತೆಗಾರನಿಗೆ ಒಂದು ಬಗೆಯ ಲೇವಡಿ ಮಾತಿನ ಹಾಗೆ ಕೇಳಿಸಿ ಪೇಲವವಾಗಿ ನಕ್ಕ. ಕಾರ‌್ಯಕ್ರಮ ಆರಂಭವಾಗುವುದು ಇನ್ನೂ ತಡವೆಂದು ತಿಳಿದ ಮೇಲೆ ಆ ಗೆಳೆಯ ಇವನನ್ನು ಕಾರಿನಲ್ಲಿ ಹತ್ತಿರದಲ್ಲೇ ಇದ್ದ ಐಷಾರಾಮಿ ಹೋಟೆಲ್ಲೊಂದಕ್ಕೆ ಕರೆದೊಯ್ದ.

`ಕೊನೆಗೂ ನೀನಿರುವ ಇಲಾಖೆಯಲ್ಲಿ ನಿನಗೆ ಖಾಯಮಾತಿ ಸಿಗಲಿಲ್ಲ ಅನ್ನು~ ಎಂದು ಕನಿಕರಿಸುವಂತೆ ನುಡಿಯುತ್ತಲೇ `ಸಾಹಿತ್ಯ ಕೃಷಿ ಜೋರಾಗಿರಬೇಕಲ್ಲವೆ?~ ಎಂದ.
ಕೂಡಲೇ ಉತ್ಸಾಹಗೊಂಡು ಇವನು, `ಓ ಚೆನ್ನಾಗಿದೆ! ಮೊನ್ನೆ ನನ್ನ ಕೃತಿಯೊಂದಕ್ಕೆ ಕೇಂದ್ರ ಸರ್ಕಾರದ ಪ್ರಾದೇಶಿಕ ಪ್ರಶಸ್ತಿಯೊಂದು ಬಂತು... ಒಂದು ವರ್ಷದ ಫೆಲೋಶಿಪ್ ಕೂಡ ಸಿಕ್ಕಿದೆ... ಗಮನಿಸಿರಬೇಕಲ್ವೆ?~ ಎಂದು ಅವನಲ್ಲಿ ಅಸೂಯೆ ಹುಟ್ಟಿಸಲು ನೋಡಿದ.
ಅದರ ಕುರಿತು ಯಾವ ಕುತೂಹಲವೂ ಇಲ್ಲದವನಂತೆ ಆತ `ಮರೆತುಹೋಯ್ತು ಕಣಯ್ಯಾ... ಪೇಪರಲ್ಲಿ ನೋಡಿದ್ದೆ... ನಿನಗೇನು ಬಿಡಯ್ಯೊ ಪ್ರತಿಭಾವಂತ...

ಜ್ಞಾನಪೀಠವೇ ಬರುತ್ತೆ...~ ಎಂದು ನೀರಸವಾಗಿ ನುಡಿದದ್ದು ಕೊಂಕು ಇರಬಹುದೆ ಎಂದು ಇವನಿಗೆ ಅನ್ನಿಸಿತು. ಆ ಮಾತು ಎಲ್ಲೋ ಒಂದು ಕಡೆ ನನ್ನ ಲಕ್ಷಗಟ್ಟಳೆ ಆದಾಯದ ಮುಂದೆ ನಿನ್ನದೇನು ಸಾಹಿತ್ಯದ ಚಾಕರಿ? ಎಂಬ ಅಸಡ್ಡೆಯೂ ಇರಬಹುದೆನ್ನಿಸಿ ಕತೆಗಾರ ಸಪ್ಪೆ ಮೋರೆ ಮಾಡಿಕೊಂಡ.

ಇನ್ನಿವನು ಕುಗ್ಗಿದಂತೆಯೇ ಅಂದುಕೊಂಡ ಗೆಳೆಯ ಗತ್ತಿನಿಂದ `ಓಕೆ, ಹೊರಡೋಣ್ವೆ?~ ಎನ್ನುತ್ತ ಚುರುಕಾಗಿ ಎದ್ದ.

ಆ ಗೆಳೆಯನ ಭೇಟಿ ನನ್ನ ಸಾಹಿತ್ಯ ಪ್ರೀತಿಯನ್ನು ಯಕಃಶ್ಚಿತ್ ಭಾವವೆಂಬಂತೆ ನಾನೇ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುತ್ತಿರಬಹುದೆ ಎಂದುಕೊಂಡ. ಅವನ ನೆನಪಿನ ಜೊತೆಜೊತೆಯಾಗಿಯೇ ಬಂದ ಇನ್ನೊಂದಿಷ್ಟು ಗೆಳೆಯರ ಆದಾಯ, ಸಂಪಾದನೆ, ಅಧಿಕಾರ, ಐಷಾರಾಮಿ ಜೀವನ ಎಲ್ಲವೂ ತನ್ನ ಸಾಹಿತ್ಯದ ನೈತಿಕತೆಗೆ ಎಸೆಯುತ್ತಿರುವ ಸವಾಲುಗಳಂತೆ ಕಾಣಿಸುತ್ತಿವೆಯೆ ಎನ್ನಿಸಿತು.

ನನಗೆ ಬಂದಿರುವ ಪ್ರಶಸ್ತಿಯ ಮೊತ್ತ, ಬರೆದ ಕಥೆಗಳಿಗೆ ಬಂದ ಬಹುಮಾನ, ಸಂಭಾವನೆ ಎಲ್ಲವನ್ನೂ ಒಗ್ಗೂಡಿಸಿದರೆ ನನ್ನ ಮಗಳ ಮದುವೆಗೆ ಸಾಕಾಗುವಷ್ಟು ಸಂಪನ್ಮೂಲವಾಗುತ್ತದೆಯೆ ಎಂದು ಲೆಕ್ಕ ಹಾಕಿ ನೋಡಿ, ಭಯದಿಂದ ಕಂಪಿಸಿದ.

ಮಧ್ಯವಯಸ್ಸಿಗೆ ತಲುಪಿಸಿರುವ ಬದುಕಿನ ಜವಾಬ್ದಾರಿ ನನ್ನನ್ನು ಇಂತಹ ಸಂಘರ್ಷಗಳಿಗೆ ದೂಡುತ್ತಿರಬಹುದೆ ಅಂದುಕೊಂಡ. ಮೊಟ್ಟಮೊದಲ ಬಾರಿಗೆ ತಾನು ಪ್ರೀತಿಸಿದ ತನ್ನ ಕತೆಗಳು ತನ್ನಲ್ಲಿ ಕೀಳರಿಮೆ ಹುಟ್ಟು ಹಾಕುತ್ತಿರುವಂತೆ ಕಂಡು ಹೆದರಿದ.

ತಾನು ಕತೆಗಳನ್ನು ಬರೆಯಲು ಆರಂಭಿಸಿದ ದಿನಗಳಲ್ಲಿ ಕತೆ ಬರೆಯುವುದು ಎಂದರೆ ನಾನು ನನ್ನ ಒಳಗನ್ನು ಬಗೆದುಕೊಳ್ಳುವ ಕ್ರಿಯೆ... ಅದೊಂದು ಬದುಕಿನ ಹೋರಾಟದ ಹಾಗೆಯೇ, ಸುಖ-ಸಂತೋಷಗಳ ಹಾಗೆಯೇ ತೀವ್ರತೆಯನ್ನು ಹೊಂದಿರುವಂತಹದ್ದು... ಎಂದೆಲ್ಲ ಹೇಳಿಕೊಳ್ಳುತ್ತಿದ್ದುದು ನೆನಪಾಗಿ ತನ್ನಷ್ಟಕ್ಕೇ ನಕ್ಕ.
 
ಅದರೊಟ್ಟಿಗೇ ತಾನು ಕಚೇರಿಗೆ ಸೇರಿದ ಹೊಸತರಲ್ಲಿ ತನ್ನ ಸಾಹಿತ್ಯವನ್ನು ಸಹೋದ್ಯೋಗಿಗಳ ಮೇಲೆ ಅಸ್ತ್ರದಂತೆ ಬಳಸಲು ಯತ್ನಿಸಿದ್ದೂ ನೆನಪಾಗಿ ವಿಷಾದದ ಅಲೆಯೊಂದು ಸುಳಿದಂತಾಯಿತು.

ಆತನ ಕತೆಯೋ ಪುಸ್ತಕವೋ ಪ್ರಕಟಗೊಂಡಾಗಲೆಲ್ಲ ಅವನ ಸಹೋದ್ಯೋಗಿಗಳು ಕತೆಗಾರನನ್ನು ವಿಶಿಷ್ಟ ವ್ಯಕ್ತಿಯೆಂಬಂತೆಯೂ ಅಸಾಮಾನ್ಯನಂತೆಯೂ, ಕಲಾವಿದನಂತೆಯೂ ನೋಡುತ್ತಿದ್ದುದನ್ನು ಗಮನಿಸಿ ಪುಳಕಿತನಾಗುತ್ತಿದ್ದ.
 
ಕೆಲವರು ಈತ ಬರೆದಿರುವ ಕತೆಗಳಲ್ಲಿ ತಮ್ಮನ್ನೆಲ್ಲಿಯಾದರೂ ಕಾಣಿಸಿದ್ದಾನೆಯೇ ಎಂಬ ಕುತೂಹಲಕ್ಕೆ ಕತೆಗಳನ್ನು ಓದುತ್ತಿದ್ದರೆ, ಮತ್ತೆ ಕೆಲವರು ಮುಂದೆಂದಾದರೂ ನಮ್ಮನ್ನು ಕುರಿತು ಕತೆ ಬರೆದುಬಿಟ್ಟಾನೆಂದು ಚಿಂತೆಗೆ ಬಿದ್ದವರಂತೆ, ಆತನ ಕತೆಗಳನ್ನು ಓದದಿದ್ದರೂ ಸುಮ್ಮನೆ, `ಬಹಳ ಚೆನ್ನಾಗಿದೆ ಸಾರ್ ನಿಮ್ಮ ಕತೆ... ಮೊನ್ನೆ ಓದಿದೆ~ ಎಂದು ಕತೆಯ ಹೆಸರನ್ನು ನೆನಪಿನಲ್ಲಿಟ್ಟುಕೊಂಡು ಹೊಗಳುತ್ತಿದ್ದರು.

ತನ್ನ ಈ ಪ್ರತಿಭಾವಿಲಾಸ ಬದುಕಿನ ನಡವಳಿಕೆಗಳಲ್ಲಿ ತನ್ನ ನೆರವಿಗೆ ಬಾರದೆಂಬುದು ಕತೆಗಾರನಿಗೆ ಕೆಲವೇ ದಿನಗಳಲ್ಲಿ ಅರಿವಿಗೆ ಬರತೊಡಗಿತ್ತು. ತನ್ನ ಸಾಹಿತ್ಯ, ಪ್ರಶಸ್ತಿ, ಬಹುಮಾನ, ಸನ್ಮಾನ- ಇಂತಹ ಯಾವುಗಳಿಂದಲೂ ತಾನು ಇರುವ ಇಲಾಖೆಯಲ್ಲಿ ಖಾಯಂ ಉದ್ಯೋಗವನ್ನು ಪಡೆಯಲಾರೆನೆಂಬ ಸತ್ಯ ಅವನಿಗೆ ಗೊತ್ತಾಗಿಹೋಗಿತ್ತು.

ತನ್ನ ಕಚೇರಿಯಲ್ಲಿ ಅತಿ ಹೆಚ್ಚು ಪ್ರಭಾವಶಾಲಿಯಾದವುಗಳೆಂದರೆ ಹಣ, ಅಂತಸ್ತು, ಜಾತಿ ಮುಂತಾದವುಗಳೆಂಬುದನ್ನು ಕಣ್ಣಾರೆ ಕಾಣತೊಡಗಿದ. ಅವುಗಳನ್ನೆಲ್ಲ ನೋಡನೋಡುತ್ತ ರೋಸಿದಂತಾಗಿ, ವಿಷಾದದಿಂದ ಆ ಕುರಿತೂ ಕತೆಗಳನ್ನು ಬರೆದರೂ ತನ್ನ ಸಮಾಧಾನದ ಹೊರತಾಗಿ ಅದರಿಂದ ಯಾವ ಪರಿಣಾಮವೂ ಕಾಣದಂತಾಗಿ ಕತೆ ಬರೆಯುವುದನ್ನೇ ನಿಲ್ಲಿಸಿ, ಸುಮ್ಮನಿದ್ದುಬಿಡಲೆ ಎಂದೂ ಯೋಚಿಸುತ್ತಾ ಕೂರುತ್ತಿದ್ದ.

ಕತೆ ಬರೆಯುವ ತನ್ನ ಪ್ರತಿಭೆಯನ್ನೂ ಕೂಡ ತನ್ನ ಸಹೋದ್ಯೋಗಿಗಳು ವಿಶಿಷ್ಟ ಕೌಶಲ್ಯವೆಂಬಂತೆಯೂ ದೌರ್ಬಲ್ಯವೆಂಬಂತೆಯೂ ಒಟ್ಟಿಗೇ ಕಾಣುತ್ತಾ `ನೀವು ಬಿಡಿ ಸಾರ್ ಬುದ್ಧಿಜೀವಿಗಳು... ನಮ್ಮಂಥವರೊಂದಿಗೆ ಎಲ್ಲಿ ಬೆರೆಯುತ್ತೀರಿ... ನಿಮ್ಮದೇ ಬೇರೆ ಲೋಕ~ ಎಂದು ಅವನನ್ನು ಅಲೌಕಿಕನೆಂಬಂತೆಯೂ ಕ್ಷುಲ್ಲಕನೆಂಬಂತೆಯೂ ಕಡೆಗಣಿಸಿಬಿಡುತ್ತಿದ್ದರು.

ಇದುವರೆಗಿನ ತನ್ನ ವೃತ್ತಿ-ಪ್ರವೃತ್ತಿ-ಬದುಕಿನ ಇಂತಹ ವಾಸ್ತವದ ವಿದ್ಯಮಾನಗಳೆಲ್ಲ ಈಗ ನನ್ನನ್ನು ಇಂತಹ ಜಿಜ್ಞಾಸೆಗೆ ತಂದು ನಿಲ್ಲಿಸಿರಬಹುದೆ ಎಂದು ಚಿಂತಿಸಿದ. ಹೀಗೆ ನನ್ನಂತಹ ಸಾಹಿತಿಯೊಬ್ಬನಿಗೆ, ಕಲಾವಿದನೊಬ್ಬನಿಗೆ, ಸಂಗೀತಗಾರನೊಬ್ಬನಿಗೆ ತನ್ನ ಕಲಾಪ್ರತಿಭೆ ಕೇವಲ ಮನಸ್ಸಂತೋಷಕ್ಕೆ ಮಾತ್ರ ಸೀಮಿತವೆನ್ನಿಸುವ ಚಟುವಟಿಕೆಯೆ? ಅದೊಂದು ಉಪವತ್ತಿಯಂತಹುದೆ?

ಹಾಗಾದರೆ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುವ ಸಿನಿಮಾ ಸಂಗೀತಗಾರರು, ಸಿನಿಮಾ ಸಾಹಿತಿಗಳು, ಅಂತರರಾಷ್ಟ್ರೀಯ ಕಲಾವಿದರಿಗೆ ತನ್ನಂತಹ ಅಗತ್ಯಗಳ ಪ್ರಶ್ನೆ ಎಂದೂ ಕಾಡಿಲ್ಲವೆ? ಕಾಡಿದ್ದರೆ ಆ ಕುರಿತು ಅವರ ಅಭಿಪ್ರಾಯಗಳು ಏನಿರಬಹುದು?

ಹಣದ ಗುಡ್ಡೆಯ ಮೇಲೆ ಕುಳಿತ ಅವರು ನಮ್ಮ ಕಲಾಭಿವ್ಯಕ್ತಿ ಕೇವಲ ನಮ್ಮ ಮನಸ್ಸಂತೋಷಕ್ಕಾಗಿ ಮಾತ್ರ; ಅದೇ ಅಂತಿಮ ಸತ್ಯ ಎಂದು ಹೇಳುತ್ತಾರೆಯೆ? ಅಥವಾ ನಾನು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ದೊಡ್ಡ ಕತೆಗಾರನಾಗಿದ್ದರೆ ಇಂತಹ ಜಿಜ್ಞಾಸೆಗಳು ಹುಟ್ಟುತ್ತಿರಲಿಲ್ಲವೆ?

-ಹೀಗೆ ಎಲ್ಲವನ್ನೂ ಯೋಚಿಸುತ್ತಾ ಹೋದ ಕತೆಗಾರನಿಗೆ ಇದು ನಾನಾಗಿಯೇ ಸೃಷ್ಟಿಸಿಕೊಂಡ ಗೋಜಲು ಜಿಜ್ಞಾಸೆ ಇರಬಹುದೆ ಎಂತಲೂ ಅನ್ನಿಸಿ ಎಂತಹುದೋ ಸಂಕಟ ಸುತ್ತಿಕೊಂಡಂತಾಗಿ ಮಂಕು ಹಿಡಿದು ಕುಳಿತುಬಿಟ್ಟ...
***

ಪ್ರಿಯ ವಾಚಕರೆ,
ಇದು ಕತೆಯೊಳಗಿನ ಕತೆಗಾರನೇ ಬರೆಯಬೇಕೆಂದುಕೊಂಡಿದ್ದ ಕತೆ. ಆದರೆ ಆನಂತರದ ಬದುಕಿನ ಸುಳಿಗಳಲ್ಲಿ, ಅಲೆಗಳಲ್ಲಿ, ಅಲೆದಾಟಗಳಲ್ಲಿ, ಸಾಂಸಾರಿಕ ಜಂಜಾಟಗಳಲ್ಲಿ ಕಳೆದುಹೋದ ಆ ಕತೆಗಾರ ಈ ಕತೆ ಬರೆಯಲಾಗಲೇ ಇಲ್ಲ; ಅಷ್ಟೇ ಏಕೆ, ಇನ್ನಾವ ಕತೆಯನ್ನೂ ಬರೆಯಲು ಆ ಕತೆಗಾರನಿಗೆ ಸಾಧ್ಯವಾಗಲೇ ಇಲ್ಲ.

ಆತ ಕೊನೆಗೂ ತನ್ನ ಬದುಕಿನ ಬಹುದೊಡ್ಡ ಸಾಹಸವೆಂಬಂತೆ ಮಗಳ ಮದುವೆ ಮಾಡಿ ಮುಗಿಸಿದ. ನಾನು ನನ್ನ ಬದುಕಿನಲ್ಲಿ ಬರೆದ ಯಾವ ಕತೆಯಿಂದಲೂ ಸಿಗದ ಸಂತೃಪ್ತಿ, ಸಮಾಧಾನ ನನ್ನ ಮಗಳ ಮದುವೆಯಾದ ದಿನ ನನಗೆ ಸಿಕ್ಕಿತು ಎಂದು ಆತ ತನ್ನ ಕೊನೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ.

ಇಲ್ಲಿರುವ ಕತೆ ಆ ಕತೆಗಾರನ ಡೈರಿಯಲ್ಲಿ ಸಿಕ್ಕ ತುಂಡು ತುಂಡು ಟಿಪ್ಪಣಿಗಳ ಮರುರೂಪ. ಆಕಸ್ಮಿಕವಾಗಿ ಈ ಕತೆಗಾರನಿಗೆ ಸಿಕ್ಕ ಆ ಟಿಪ್ಪಣಿಗಳು ಈ ಕತೆಗಾರನಿಗೆ ಅನ್ನಿಸಿದಂತೆ ಕತೆಯಾಗಿ ಮೈದಳೆದಿದೆ. ಈ ಕತೆ ಎಷ್ಟು ನಿಜರೂಪದಲ್ಲಿ ಕತೆಯಾಗಿ ಉಳಿದಿದೆ, ಕತೆಯ ಕತೆಯಾಗಿದೆ, ಕತೆಗಾರನ ಕತೆಯಾಗಿದೆ- ಇತ್ಯಾದಿಗಳ ಕುರಿತು ಈ ಕತೆಗಾರನಿಗೇ ಹಲವಾರು ಅನುಮಾನಗಳಿವೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT