ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಹರಣ ಪ್ರಕರಣ: ಶಾಸಕ ಎಚ್.ಡಿ. ರೇವಣ್ಣಗೆ ಜಾಮೀನು ಮಂಜೂರು

Published 13 ಮೇ 2024, 13:12 IST
Last Updated 13 ಮೇ 2024, 13:12 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಹಾಗೂ ಜೆಡಿಎಸ್‌ನ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯ, ಸೋಮವಾರ ವಿಸ್ತೃತವಾದ ವಿಚಾರಣೆ ಆಲಿಸಿ ಸಂಜೆ 6.34ಕ್ಕೆ ಜಾಮೀನು ಮಂಜೂರು ಮಾಡಿ ಆದೇಶಿಸಿತು.

ಷರತ್ತುಗಳು:

* ಆರೋಪಿ ರೇವಣ್ಣ ₹5 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು.

* ತಮ್ಮ ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು.

* ನ್ಯಾಯಾಲಯದ ಲಿಖಿತ ಅನುಮತಿ ಪಡೆಯದೇ ರಾಜ್ಯದ ಗಡಿ ದಾಟುವಂತಿಲ್ಲ.

* ಪ್ರಾಸಿಕ್ಯೂಷನ್‌ ಸಾಕ್ಷಿ, ದೂರುದಾರರು ಅಥವಾ ಸಂತ್ರಸ್ತರಿಗೆ ಬೆದರಿಕೆ ಹಾಕಬಾರದು.

* ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಹಾಜರಾಗಬೇಕು.

* ಮುಂದಿನ ಆದೇಶದವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೆ.ಆರ್.ನಗರ ತಾಲ್ಲೂಕು ಅಥವಾ ಸಂತ್ರಸ್ತೆಯ ಕಾಯಂ ನಿವಾಸದತ್ತ ಸುಳಿಯುವಂತಿಲ್ಲ.

* ಪ್ರತಿ ತಿಂಗಳ ಎರಡನೇ ಭಾನುವಾರದಂದು ತನಿಖಾಧಿಕಾರಿಯ ಮುಂದೆ ಆರು ತಿಂಗಳ ಕಾಲ ಅಥವಾ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವವರೆಗೆ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯ ಒಳಗೆ ಹಾಜರಾಗಬೇಕು.

* ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು.

ಪ್ರಭಾವಿ ಕುಟುಂಬ: ಬೆಳಗ್ಗೆ ಪ್ರಾಸಿಕ್ಯೂಷನ್‌ ಪರ ಹಾಜರಾಗಿದ್ದ ವಿಶೇಷ ಪ್ರಾಸಿಕ್ಯೂಟರ್ ಜಯನಾ ಕೊಠಾರಿ ಮತ್ತು ಅಶೋಕ್‌ ನಾಯಕ್‌ ತಮ್ಮ ವಾದ ಮಂಡಿಸಿದರು. ಅಶೋಕ್‌ ನಾಯಕ್‌ ಆರೋಪಿಗೆ ಜಾಮೀನು ನೀಡದಂತೆ ಬಲವಾಗಿ ಪ್ರತಿಪಾದಿಸಿದರು.

‘ಎಚ್.ಡಿ.ರೇವಣ್ಣ ಅವರು ಕುಟುಂಬವು ರಾಜಕೀಯವಾಗಿ ತುಂಬಾ ಪ್ರಭಾವಿ ಮತ್ತು ಬಲಾಢ್ಯವಾಗಿದೆ. ಈ ಪ್ರಕರಣದಲ್ಲಿನ ಕ್ರಿಮಿನಲ್‌ ಪಿತೂರಿಯನ್ನು ಗಮನಿಸಿದರೆ ಇವರು ಸಂತ್ರಸ್ತೆಯನ್ನು ಬೆದರಿಸಿ ಅಪಹರಿಸಿರುವುದು ವೇದ್ಯವಾಗುತ್ತದೆ. ಆರೋಪಿ ಪತ್ನಿ ಭವಾನಿ ರೇವಣ್ಣ, ದೊಡ್ಡ ಮಗ ಸೂರಜ್‌ ರೇವಣ್ಣ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಸ್ಥಳೀಯರು ಎದುರು ಹಾಕಿಕೊಳ್ಳುವುದು ಕಷ್ಟದ ಮಾತು. ಇಂತಹವರನ್ನು ಜಾಮೀನಿನ ಮೇಲೆ ಹೊರಗೆ ಬಿಟ್ಟರೆ ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ಬೆದರಿಸಬಲ್ಲರು. ಸಂತ್ರಸ್ತೆಯ ಜೀವ ಅಪಾಯದಲ್ಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಯಾಗಿ ರೇವಣ್ಣ ಪರ ಹಾಜರಿದ್ದ ಹೈಕೋರ್ಟ್‌ನ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಸಂತ್ರಸ್ತ ಮಹಿಳೆಯು ಕಳೆದ ಹತ್ತು ವರ್ಷಗಳಿಂದ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ರೇವಣ್ಣ ಅವರ ಸಂಬಂಧಿಯೂ ಹೌದು. ನನ್ನನ್ನು ಯಾರೂ ಅಪಹರಣ ಮಾಡಿಲ್ಲ ಎಂದು ಸ್ವತಃ ಮಹಿಳೆಯೇ ವಿಡಿಯೊ ಬಿಡುಗಡೆ ಮಾಡಿದ್ದು ಅದು ಈಗ ವೈರಲ್‌ ಆಗಿದೆ. ಅಷ್ಟಕ್ಕೂ ಪ್ರಾಸಿಕ್ಯೂಷನ್‌ ರೇವಣ್ಣ ಅವರನ್ನು ಬಂಧಿಸುವ ಮುನ್ನವಾಗಲೀ ಅಥವಾ ನಂತರವಾಗಲೀ ಅವರ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯವನ್ನು ಸಾದರಪಡಿಸಿಲ್ಲ. ಹೀಗಾಗಿ, ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಿರುವುದು ಕಾನೂನು ಬಾಹಿರ’ ಎಂದು ಆಕ್ಷೇಪಿಸಿದರು.

ಸುದೀರ್ಘ ವಾದ ಪ್ರತಿವಾದಿ ಆಲಿಸಿದ ನ್ಯಾಯಾಧೀಶರು ಕಾಯ್ದಿರಿಸಿದ್ದ ಆದೇಶವನ್ನು ಸಂಜೆ ಮುಕ್ತ ನ್ಯಾಯಾಲಯದಲ್ಲಿ ಪ್ರಕಟಿಸಿದರು. ಇದೇ 4ರಂದು ರೇವಣ್ಣ ಅವರನ್ನು ವಿಶೇಷ ತನಿಖಾ ದಳ (ಎಸ್ಐಟಿ) ಬಂಧಿಸಿತ್ತು. ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 4 ದಿನ ಎಸ್‌ಐಟಿ ಕಸ್ಟಡಿಗೆ ನೀಡಿತ್ತು. ಮೇ 8ರಿಂದ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT