ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ : ಅಕ್ಷರ ದೇವರು

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಜಾಗತೀಕರಣದಿಂದ ಒಂದು ಪುಟ್ಟ ಹಳ್ಳಿ ಅನಿಸುತ್ತಿರುವ ಜಗತ್ತು ಜ್ಞಾನದ ತೀವ್ರ ಹಸಿವಿನಿಂದ ತುಡಿಯುತ್ತಿರುವಾಗ ಜೀವಪುರದ ಸಂಕನಗೌಡರ ದನದ ಕೊಟ್ಟಿಗೆಯಲ್ಲಿ ಸತ್ತೇನೋ ಬದುಕಿದೆನೋ ಎನ್ನುವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ದಾರುಣವಾಗಿ ನರಳತೊಡಗಿತ್ತು.

ಸರಿಯಾದ ಗಾಳಿಯೂ, ಬೆಳಕು ಇರದ ದನಗಳ ಉಚ್ಚೆ, ಸೆಗಣಿಯ ಘಾಟಿನಲ್ಲಿ ಒತ್ತೊತ್ತಾಗಿ ಕುಳಿತು, ಅಕ್ಷರ, ಮಗ್ಗಿ ಉಲಿಯುವ ಮಕ್ಕಳಿಗೆ ಸೊಗಸಿಲ್ಲವಾಗಿ, ಅದಕ್ಕಾಗಿ ಮರಗುವರೂ ಇಲ್ಲವಾಗಿ ಶಾಲೆ ನಿಡುಸುಯ್ಯತೊಡಗಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಆರಂಭವಾಗಿದ್ದ ಆ ಏಕೋಪಾಧ್ಯಾಯ ಶಾಲೆಗೆ ಅಧಿಕೃತವೆಂದು ಇದ್ದದ್ದು ಒಂದು ಕೊಠಡಿ ಮಾತ್ರ. ನಂತರ ನಿರ್ಮಾಣಗೊಂಡ ಮೂರು ರೂಮುಗಳು, ಅಲ್ಲಲ್ಲಿ ಬಿರುಕು ಬಿಟ್ಟು ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದ್ದವು. ಅಷ್ಟು ಸಾಲದೆಂಬಂತೆ ಚಂಡಮಾರುತದ ಪರಿಣಾಮವಾಗಿ ಎಂಟು ದಿನ ಧೋ ಎಂದು ಸುರಿದ ಮಳೆಗೆ ಮೇಲ್ಛಾವಣಿ ಕುಸಿದು ತಲ್ಲಣ ಸೃಷ್ಟಿಸಿತ್ತು.

ಪುಣ್ಯಕ್ಕೆ ಶಾಲೆಗೆ ರಜೆ ಇದ್ದು, ಮಕ್ಕಳು ಬದುಕಿ ಉಳಿದಿದ್ದರು. ಬಿದ್ದ ಕಟ್ಟಡದ ಕಿಟಕಿ, ಬಾಗಿಲು, ನೆಲದ ಹಾಸುಗಲ್ಲು ಊರಿನವರ ಪಾಲಾಗಿ, ಬಾರಾಕಮಾನ್‌ದಂತಿದ್ದ ಕೊಠಡಿಯಲ್ಲಿ ಹೇಗೋ ಕುಳಿತ ಮಕ್ಕಳು ಜೋರು ಜೋರಾಗಿ ಹಾಡು, ಕಥೆ ಹೇಳುತ್ತಿದ್ದರು.

ಸರಕಾರದ ಯೋಜನೆಗಳಿಂದ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಯಾಗಿ, ಅನಿವಾರ್ಯವೋ ಎಂಬಂತೆ ಸಂಕನಗೌಡರ ದನದ ಕೊಟ್ಟಿಗೆ ಶಾಲಾ ಕೊಠಡಿಯಾಗಿ ಪರಿವರ್ತನೆಗೊಂಡು ತೆವಳತೊಡಗಿತ್ತು. ಹೆಚ್ಚಿನ ಕೊಠಡಿ ನಿರ್ಮಿಸಲು ಇಲಾಖೆಯಲ್ಲಿ ಹಣದ ಕೊರತೆ ಇರಲಿಲ್ಲ. ಇದ್ದದ್ದು ಜಾಗದ ಸಮಸ್ಯೆ. ಅದು ಪರಿಹಾರ ಕಾಣದಾಗಿ ಊರಿನಲ್ಲಿ ಶಾಲೆ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಮಹಾಶೂನ್ಯ ಆವರಿಸಿಬಿಟ್ಟಿತ್ತು.

ಈ ಮಹಾಶೂನ್ಯದ ಕಾರಣೀಪುರುಷರೆಂದರೆ ಸಂಕನಗೌಡ ಮತ್ತು ವಸಂತ ದೇಸಾಯಿ ಎಂಬ ಊರಿನ ಭಾರಿ ಕುಳಗಳು. ಆರಂಭದಲ್ಲಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾಗಿ ಪ್ರತಿಷ್ಠಿತರಾಗಿ, ರಾಜಕೀಯದಲ್ಲಿ ಓಡಾಡಿಕೊಂಡು, ತಾಲ್ಲೂಕು, ಜಿಲ್ಲೆ, ರಾಜ್ಯವೆಂದು ತಿರುಗಾಟ ಹಚ್ಚಿಕೊಂಡ ಮೇಲೆ ಶಾಲೆಯ ಮೇಲಿನ ಮೋಹವನ್ನು ತೊರೆದಿದ್ದರು. ಅಷ್ಟಲ್ಲದೆ ರಾಜಕೀಯದ ಜಿದ್ದಾಜಿದ್ದಿನ ಹೊರಳಿನಲ್ಲಿ ಅವರಿಬ್ಬರೂ ಹಾವು ಮುಂಗಸಿಯಾಗಿ ಪರಿವರ್ತನೆಗೊಂಡು ಊರಿನ ಹಿತಕ್ಕೆ ಕಲ್ಲು ಹಾಕತೊಡಗಿದ್ದರು.

ಮನಸ್ಸು ಮಾಡಿದ್ದರೆ ಮಕ್ಕಳ ಬದುಕು ರೂಪಿಸುವ ಊರ ಶಾಲೆಗೆ ಅವರು ಮೆರುಗು ತರಬಹುದಾಗಿತ್ತು. ದುರಂತವೆಂದರೆ ಊರಿನ ಮಕ್ಕಳು ಅಕ್ಷರವಂತರಾಗುವುದು ಇಬ್ಬರಿಗೂ ಇಷ್ಟವಿರಲಿಲ್ಲ. ಅಕ್ಷರಗಳು ಕ್ರಾಂತಿಯ ಬೀಜಗಳು ಎಂಬ ಅರಿವಿನಲ್ಲಿದ್ದ ಅವರು ಆ ದಿಸೆಯಲ್ಲಿ ಜೀವಪುರವನ್ನು ಕತ್ತಲಲ್ಲಿಡುವವರೇ ಆಗಿದ್ದರು. ತಮ್ಮ ಮನೆತನಗಳ ಬಗ್ಗೆ ಪರಂಪರಾಗತವಾಗಿ ಊರಿನ ಜನ ಇರಿಸಿಕೊಂಡು ಬಂದಿದ್ದ ಗೌರವ, ನಿಷ್ಠೆ, ಭಯ ತಿಲ ಮಾತ್ರವೂ ಕಮ್ಮಿಯಾಗಬಾರದು.

ಅವರು ತಮ್ಮೆದುರು ತಲೆಯೆತ್ತುವ ಅಥವಾ ಧ್ವನಿಯೆತ್ತರಿಸಿ ಮಾತಾಡುವ, ಸ್ವತಂತ್ರವಾಗಿ ಆಲೋಚಿಸುವ, ತೀರ್ಮಾನ ತೆಗೆದುಕೊಳ್ಳುವ ಉದ್ಧಟತನಗಳು ಸಂಭವಿಸಬಾರದು. ಆಲದ ಮರದ ಕೆಳಗೆ ಕುರುಚಲು ಬೇಕಾದಷ್ಟು ಚಿಗುರೊಡೆಯಲಿ, ಆದರೆ ಎತ್ತರಕ್ಕೆ ಬೆಳೆವ ಕನಸು ಕಾಣಬಾರದು.

ಅಂತಾದರೆ ಆಲಕ್ಕೆ ಧಕ್ಕೆ ಎಂದು ಭಾವಿಸಿದ್ದ ಗೌಡರು, ದೇಸಾಯಿ ತಮ್ಮ ಧಿಮಾಕಿನ ಬಿಳಲುಗಳಿಂದ ಜನರನ್ನು ನೆಲಕ್ಕೊತ್ತುತ್ತಲೇ ಬಂದಿದ್ದರು. ಚುನಾವಣೆಗಳ ಗದ್ದಲ, ಈರ್ಷೆ, ಘರ್ಷಣೆಗಳು ಅವರಿಬ್ಬರ ಮಧ್ಯೆ ಗೋಡೆ ಎಬ್ಬಿಸಿದ್ದರಿಂದ ಊರಿಗೆ ಮಂಜೂರಾಗಿ ಬರುವ ಸರಕಾರದ ಸಕಲ ಸವಲತ್ತುಗಳು ಬಂದ ದಾರಿಗೆ ಸುಂಕವಿಲ್ಲದಂತೆ ತಿರುಗಿ ಹೋಗಿ, ಜೀವಪುರದ ಸ್ಥಿತಿ ಗಂಡಹೆಂಡಿರ ಕಲಹದ ನಡುವೆ ಸಿಕ್ಕು ಕಸಿವಿಸಿ ಅನುಭವಿಸುವ ಕೂಸಿನಂತಾಗಿತ್ತು.

ಜೀವಪುರಕ್ಕೂ ನಗರಕ್ಕೂ ಇಪ್ಪತ್ತು ಕಿಲೋಮೀಟರ್ ಅಂತರ. ಓಡಾಡಲು ಶಿಕ್ಷಕರಿಗೆ ಅನುಕೂಲವೆನಿಸಿತ್ತು. ಊರಿನ ರಾಜಕೀಯ ಅವರನ್ನು ವೈಯಕ್ತಿಕ ಹಿತಾಸಕ್ತಿಗೆ ಮಿತಿಗೊಳಿಸಿತ್ತು. ಗೌಡರು, ದೇಸಾಯರ ಕಡೆಯ ಜನರನ್ನು ಅತ್ತಕಡೆ ಅಧಿಕಾರಿ ವರ್ಗದವರನ್ನು ನಾಜೂಕಾಗಿ ಸಂಭಾಳಿಸಿಕೊಂಡು ಶಿಕ್ಷಕ-ಶಿಕ್ಷಕಿಯರು ಬಿಂದಾಸಾಗಿದ್ದರು.

ಅಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಲು ಯಾರೂ ತಯಾರು ಇಲ್ಲದ್ದರಿಂದ, ಬೋಳೆ ಸ್ವಭಾವದ ತಿಮ್ಮಪ್ಪ ಸರ್ ಪ್ರಭಾರಿಯಾಗಿದ್ದು ಊರಿನಲ್ಲಿಯೇ ಮನೆ ಮಾಡಿಕೊಂಡಿದ್ದರು. ಶಿಕ್ಷಕರು ಬಸ್ಸಿಳಿದ ಕೂಡಲೇ ಹುಡುಗ-ಹುಡುಗಿಯರು ಓಡೋಡಿ ಶಾಲೆಗೆ ಬರುತ್ತಿದ್ದರು. ಅವಸರವಸರವಾಗಿ, ಬೇಸೂರಿನಲ್ಲಿ ನಾಡಗೀತೆ, ರಾಷ್ಟ್ರಗೀತೆ ಹಾಡಿ ತರಗತಿಗೆ ನುಗ್ಗುತ್ತಿದ್ದರು. ಕಲಿಕೆ ರೀತಿ ಹೇಗೇ ಇರಲಿ ದಾಖಲಾತಿಗಳು ಅಚ್ಚುಕಟ್ಟಾಗಿದ್ದು ಮೇಲಾಧಿಕಾರಿಗಳ ಪ್ರಶಂಸೆಗೆ ಅರ್ಹವೆನಿಸಿದ್ದವು.

ಆ ದಿನ ಸೂರ್ಯನೊಂದಿಗೆ ಬಂದ ತೇಜಪ್ಪ, ಶಾಲೆಯ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡರು. ಬಹಳ ಶಿಸ್ತಿನ ಮನುಷ್ಯರು. ವೃತ್ತಿ ನಿಷ್ಠೆಗೆ ಹೆಸರಾದವರು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವ ಸ್ವಭಾವದವರಲ್ಲ. ಸುಮ್ಮನೆ ನಾಲ್ಕಾರು ದಿನ ಶಾಲೆಯನ್ನು, ಊರನ್ನು ಗಮನಿಸಿಕೊಂಡಿದ್ದ ತೇಜಪ್ಪನವರಿಗೆ ನಿರಾಶೆಯ ಕಾರ್ಮೋಡ ಗೋಚರಿಸಿದರೂ, ಅಲ್ಲಿ ಮಿಂಚುಗೆರೆಯ ಭರವಸೆಯಿಟ್ಟು, ಶಿಕ್ಷಕರನ್ನು ಹತ್ತಿರ ಕುಳ್ಳಿರಿಸಿಕೊಂಡು, “ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದ್ರ ಮಕ್ಕಳಿಗೆ ಅಕ್ಷರ ಕಲಿಸುದರಾಗ ನಾನು ದೇವರನ್ನು ಕಂಡಾಂವ.

ಈ ಶಾಲೆ ವಿದ್ಯಾಲಯವಲ್ಲ; ಕೊಂಡವಾಡವಾಗಿದೆ. ಇದು ಮೊದಲಿನಿಂದಲೂ ಹೀಗೇ ಇದೆಯೆಂದು ನೀವು ಅನ್ನಬಹುದು. ಆದರೆ ನೀವು ಅದರ ಒಂದು ಭಾಗವಾಗಿರುವುದು ಶಾಲೆ ಹದಗೆಡಲು ಕಾರಣವೆನ್ನಿಸಿದೆ. ಹೀಗೆ ಮುಖದ ಮೇಲೆ ಹೇಳ್ತೀನಿ ಅಂತ ಸಿಟ್ಟು ಮಾಡ್ಕೋಬ್ಯಾಡ್ರಿ.

ನೇರವಾಗಿ ಮಾತಾಡೋದು ನನ್ನ ಸ್ವಭಾವ. ಇಲ್ಲಿಯ ಹುಡುಗರ ಕಣ್ಣೊಳಗ ಹೊಂಗನಸುಗಳ ಸುಳಿವ ಇಲ್ಲ... ದನದ ಕೊಟ್ಟಿಗ್ಯಾಗ ಹುಡುಗರನ್ನು ಕುಂದ್ರಿಸಿ ಭವಿಷ್ಯದ ಹೂವಾ ಹ್ಯಾಂಗ ಅರಳಿಸ್ತೀರಿ?” ಎಂದು ವಿಷಾದಿಸಿದರು. ಆ ವಿಷಾದ ಶಿಕ್ಷಕರ ಹೃದಯ ತಟ್ಟುತ್ತಿರುವಾಗಲೇ “ನಾನು ನಿಮ್ಮ ಮ್ಯಾಲೆ ಹೆಡ್‌ಮಾಸ್ಟರಕಿ ಮಾಡಲು ಬಂದಿಲ್ಲ.

ನಾವೆಲ್ಲ ಶಿಕ್ಷಕರು ಒಂದ ನಿಮ್ಮ ಮ್ಯಾಲೆ ಜವಾಬ್ದಾರಿ ಇದೆ. ನಮ್ಮ ಮನಸಾಕ್ಸಿ ನಾಳಿನ ನಾಗರಿಕರನ್ನ ತಯಾರು ಮಾಡಬೇಕಾಗೇತಿ. ನಮ್ಮ ವೃತ್ತಿ ಧರ್ಮಕ್ಕ ಗೌರವ ತಂದ್ಕೋಬೇಕು. ನಾವೆಲ್ಲರೂ ಈ ಶಾಲೆಗೆ ಹೊಸಜೀವಾ ತುಂಬುವ ಕೆಲಸ ಮಾಡೋಣ” ಅಂದಿದ್ದರು ತೇಜಪ್ಪ. ಅವರ ಮಾತಿಗೆ ತಲೆದೂಗಿದ ಶಿಕ್ಷಕರು ಗರಿಗೆದರಿದ ಹಕ್ಕಿಯಾಗಿದ್ದರು.

ಶಿಕ್ಷಕರ ಕಳಕಳಿಗೆ ಬಣ್ಣ ಬರತೊಡಗಿತು. ಜೀವಪುರದ ಮೂಲೆಮೂಲೆಗೂ ಅಕ್ಷರಗಳ ಕಲರವ ಕೇಳಿಸತೊಡಗಿತು. ಮಕ್ಕಳ ಹಾಡು, ಆಟ, ಪಾಠಗಳು ಹೆತ್ತವರನ್ನು ಸಂತುಷ್ಟಗೊಳಿಸಿದವು. ಇದುವರೆಗೂ, ಮುದುಡಿಕೊಂಡಿದ್ದ ಜನ ಚೈತ್ರದ ಚಿಗುರಿನಂತೆ ಸಂಭ್ರಮಿಸತೊಡಗಿದರು.

ಮಕ್ಕಳನ್ನು ದನದ ಕೊಟ್ಟಿಗೆಯಿಂದ ವಿಮೋಚನೆಗೊಳಿಸಿ ಬಯಲಿಗೆ ತಂದರು ತೇಜಪ್ಪ. ಮಳೆಗಾಲ ಶುರುವಾಗುವುದರ ಒಳಗಾಗಿ ಶಾಲಾ ಕಟ್ಟಡವನ್ನು ದುರಸ್ತಿ ಮಾಡಿಸುವ ಮತ್ತು ಇನ್ನಷ್ಟು ಜಾಗೆಯನ್ನು ದೊರಕಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ಧ್ಯಾನಸ್ಥರಾದರು. ಎಸ್‌ಡಿಎಂಸಿ ಉಪಾಧ್ಯಕ್ಷರನ್ನು, ಸದಸ್ಯರನ್ನು ಶಾಲೆಗೆ ಬರಮಾಡಿಕೊಂಡು “ನಾವು ನಿಮ್ಮ ಊರಿನ ಅನ್ನದ ಋಣದಲ್ಲಿದ್ದವರು. ನಿಮ್ಮ ಮಕ್ಕಳ ಭವಿಷ್ಯ ರೂಪಿಸೋದು ನಮ್ಮ ಕರ್ತವ್ಯ. ಇದಕ್ಕೆ ನಿಮ್ಮ ಸಹಕಾರಬೇಕು” ಎಂದು ಗಂಧ ತೀಡಿದಂತೆ ಮನವಿ ಮಾಡಿಕೊಂಡರು.

ಆ ಗಂಧದ ಪರಿಮಳ ಎದೆ ತೀಡುವ ಮೊದಲೇ ಉಪಾಧ್ಯಕ್ಷ ದಾಸಪ್ಪ, “ನೀವು ಇಲ್ಲಿನ ರಾಜಕೀಯಕ್ಕೆ ಹೊಸಬರು. ಊರಾಗ ಪಾರ್ಟಿ ಅದಾವು. ಒಬ್ಬರು ಮಾಡಿದ್ದು ಇನ್ನೊಬ್ಬರಿಗೆ ಸೇರುದಿಲ್ಲ. ನೀವು ನೋಡಿದ್ರ ಕ್ರಾಂತಿ ಮಾಡಾಕ ಬಂದವರಂಗ ಮಾತಾಡ್ತೀರಿ. ದಿನಾ ಕಳೀಲಿ, ಈ ಜೀವಪುರ ನಿಮಗ ಅರ್ಥ ಆಗತ್ತ. ನಮ್ಮ ಸಹಕಾರ ಇದ್ದ ಇರತೈತಿ. ಆದ್ರ ಇಲ್ಲೆ ಗೆಲ್ಲುದು ಬಹಳ ಕಷ್ಟ” ಎಂದರು.

ಅವರ ದನಿಯಲ್ಲಿ ವಿಷಾದವಿದ್ದರೂ ತೇಜಪ್ಪ ಸೋಲಲಿಲ್ಲ. “ದಾಸಪ್ಪನವರ ನಾವು ಒಳ್ಳೆಯವರಿದ್ರ ಲೋಕಾನ ಒಳ್ಳೇದಂತ, ದ್ವೇಷ, ಅಸೂಯೆ ಅನ್ನೋದು ಹುಟ್ಟುವಾಗ ನಮ್ಮ ಕೂಡ ಬರೂದಿಲ್ಲ. ಪ್ರತಿಯೊಬ್ಬ ಮನುಷ್ಯ ಛಲೋನ ಇರ‌್ತಾನ. ಆದ್ರ ಸಂದರ್ಭ ಸನ್ನಿವೇಶಕ್ಕ ಸಿಕ್ಕು ಕೆಟ್ಟವನಾಗ್ತಾನ”.

“ಹದಿನಾರಾಣೆ ಖರೆ ಮಾತು ಹೇಳಿದ್ರಿ ಗುರುಗಳ. ನಮ್ಮೂರಿಗೆ ಜೀವಪುರ ಅಂತ ಹೆಸರು ಯಾಕ್ ಬಂತು ಗೊತ್ತೇನ್ರಿ? ಪ್ರತಿಯೊಬ್ಬರ ಜೀವಕ್ಕೂ ಬೆಲೆ ಇರ‌್ಬೇಕಂತ ಹಿರೇರು ಈ ಹೆಸರು ಇಟ್ರಂತ. ಇವತ್ತ ನೋಡಿದರ ನಮ್ಮೂರಿಗೆ ಜೀವಾನ ಇಲ್ದಂಗಾಗೇತಿ. ಮ್ಯಾಲೆ ಚಂದ ಇದ್ರೂ ಒಳಗ ನಿಗಿನಿಗಿ ಕೆಂಡ. ರಾಜಕೀಯ ಮಂದಿ ಅದಕ್ಕ ಗಾಳಿ ಊದೇ ಊದ್ತಾರ. ಜನರ ಬಾಳೇವು ಆ ಬೆಂಕಿ ಝಳಕ್ಕ ಸಿಕ್ಕು ತತ್ರಸ್ಯಾಡತೇತಿ”- ದಾಸಪ್ಪನವರ ಒಳ ಸಂಕಟ ನಿಟ್ಟುಸಿರಾಗಿ ಹೊರಬಿದ್ದಿತ್ತು.

ಅದರ ಪರಿಣಾಮವನ್ನು ಊಹಿಸಿದರೂ ನಿರಾಶರಾಗದ ತೇಜಪ್ಪ “ಸೆರಗಿನೊಳಗ ಕೆಂಡಾ ಕಟ್ಕೊಂಡು ನೆಮ್ಮದಿಯಿಂದ ಇರಾಕಾಗುದಿಲ್ರಿ.  ಕಿಚ್ಚು ಐತಿ ಅಂದ್ರ ಅದನ್ನು ಆರಿಸುವ ಉಪಾಯ ಮಾಡಬೇಕು. ಕತ್ಲ ಐತಿ ಅಂದ್ರ ದೀಪ ಹಚ್ಚಬೇಕು” ಎಂದರು.

“ಈಗ ಎಲ್ಲಿ ನೋಡಿದ್ರೂ ಬೆಂಕಿ ಹಚ್ಚು ಮಂದೀನ ಸಿಗ್ತಾರಿ ಗುರುಗಳ. ದೀಪ ಹಚ್ಚುದು ಕಷ್ಟ; ಬೆಂಕಿ ಹಚ್ಚುದು ಸುಲಭ ಅಂದ್ಕೊಂಡಾರ ಅವರು”.

“ಬೆಳಕಿನಿಂದ ಬದುಕು; ಬೆಂಕಿಯಿಂದ ಅಲ್ಲ ಅನ್ನೋ ತಿಳಿವಳಿಕೆ ಬೇಕು ಮನಿಷ್ಯಾಗ”.
“ತಿಳಿಗೇಡಿಗಳಿಗೆ ತಿದ್ದೋರಕ್ಕಿಂತ ತಲೆಕೆಡಿಸೋರೆ ಹೆಚ್ಚು ಇದ್ದಾರಿ ಊರಾಗ”.

“ಊರು ಅಂದ್ರ ಕರುಳು-ಬಳ್ಳಿ ಜನ ಇರಬೇಕಂತ. ಅದರಾಗ ಕತ್ರಿ ಆಡಿಸುವ ಶಕುನಿ ಜನಾ ಇದ್ರ ಮಹಾಭಾರತ ಆಗೋದ ಖರೆ, ಪ್ರೀತಿ ಹಾಲಿನ್ಯಾಗ ಹುಳಿ ಹಿಂಡಿದ್ರ ಕುರುಕ್ಷೇತ್ರ ನಡೆಯೋದೆ ಖರೆ”.
“ನಮ್ಮೂರಾಗ ಅಂಥದ್ದು ನಡೆದು ಬಹಳ ದಿನಾ ಆತ್ರಿ ಗುರುಗಳ. ಯಾರಿಗೆ ಏನೂ ಹೇಳುವಂತಿಲ್ಲ. ಗೌಡರು, ದೇಸಾಯರ ದುರ್ಬಾರಂದ್ರ ದರಬಾರ. ನಮ್ಮ ತಲಿಮ್ಯಾಲೆ ಅವರದ ಅಂಕುಶ” ಎಂದು ಹತಾಶೆ ವ್ಯಕ್ತಪಡಿಸಿದರು ದಾಸಪ್ಪ.

“ದೊಡ್ಡವರ ವಿಷಯ ತಗೊಂಡು ಏನು ಮಾಡೊದೈತ್ರಿ ದಾಸಪ್ಪ? ನಮ್ಮ ಶಾಲೆ ಮಕ್ಕಳದ್ದೇ ಚಿಂತಿ. ಸಾಲಿಯೊಂದು ಚಂದ ಇದ್ರ ಊರಿಗೇ ಕಳೆಯಂತ ನಮ್ಮಬ್ಬ ಗುರುಗಳು ಹೇಳ್ತಿದ್ದು. ಆದ್ರ ಈ ಸಾಲಿ ನೋಡಿದ್ರ ಸಂಕಟ ಆಗತ್ರಿ. ಕಲಿಯೋ ಮಕ್ಕಳಿಗೆ ಛಲೋ ಪರಿಸರ ಇರಬೇಕು. ಇನ್ನೂ ಐದಾರು ಕೊಠಡಿಗಳು ಬೇಕು. ಆಟದ ಮೈದಾನ ಬೇಕು. ನೀವು ಜಾಗಾ ಕೊಡಿಸಿದ್ರ ಮುಂದಿನ ಜವಾಬ್ದಾರಿ ನಂದು”.
“ಊರಾಗಂತೂ ಯಾವ ಜಾಗಾನೂ ಇಲ್ರಿ. ಸುತ್ತಮುತ್ತ ಇರೋದು ಹೊಲ, ತ್ವಾಟ”
“ನಮ್ಮ ಸಾಲಿ ಮುಂದ ಇರುವ ಜಾಗಾ ಯಾರದು?”

“ಅದು ತಾಯವ್ವ ಗೌಡ್ತೀದು”
“ಆ ಜಾಗಾ ಶಾಲೆಗೆ ಬಹಳ ಅನುಕೂಲ ಆಗತ್ತ ನೋಡ್ರಿ”
“ಈಗಾಗಲೇ ಅದರ ಮ್ಯಾಲೆ ಗೌಡ್ರು, ದೇಸಾಯರು ಕಣ್ಣು ಹಾಕ್ಕೊಂಡು ಕುಂತಾರಿ”
“ಜಾಗಾ ತಾಯವ್ವ ಗೌಡ್ತೀದೂ ಅಂದ್ರಿ”
“ಖರೆ, ದೇಸಾಯರಿಗೆ ಅಲ್ಲಿ ಫಾರ‌್ಮಹೌಸ್ ಮಾಡುವ ಆಸೆ. ಗೌಡರಿಗೆ ಹಾಲಿನ ಡೇರಿ ಕಟ್ಟುವ ಹಂಬಲ. ಆದ್ರ ಗೌಡ್ತಿಗೆ ಆ ಜಾಗಾ ಮಾರುವ ಮನಸ್ಸಿಲ್ಲ”.

“ಮತ್ತೆ ಜಾಗಾ ಎಲ್ಲಾ ಹಾಳು ಬಿದ್ದಿದೆಯಲ್ಲ”
“ಅಲ್ಲಿ ಬನ್ನಿ ಮರ ಐತಲ್ರಿ, ಅದರ ಕೆಳಗ ತಾಯವ್ವ ಗೌಡ್ತಿಯ ಗಂಡನ ಸಮಾಧಿ ಇರೋದು. ವೀರನಗೌಡ ಅಂತ ಅವರ ಹೆಸರು. ಸ್ವಾತಂತ್ರ್ಯಯೋಧರು, ಗಾಂಧೀಜಿಯವರ ಕೂಡ ಚಳವಳಿ ಮಾಡಿದವರು. ನಾಲ್ಕು ವರ್ಷ ಆಯ್ತೀರಿ ಅವರು ತೀರ‌್ಕೊಂಡು. ಅವರಿಗೂ ಮಕ್ಕಳಿಲ್ಲ. ಉತ್ತೋರು, ಬಿತ್ತೋರು ಇಲ್ಲಂತ ಭೂಮಿ ಹಾಳು ಬಿದ್ದೈತಿ. ಅದನ್ನು ಹ್ಯಾಂಗಾದ್ರೂ ಮಾಡಿ ಕಬಳಿಸುವ ಮಸಲತ್ತು ಗೌಡರು ಮತ್ತು ದೇಸಾಯರದು. ಗೌಡ್ತಿ ಜಬರದಸ್ತದ ಹೆಣ್ಮಗಳ್ರಿ, ಭೂಮಿ ಕೊಡಂಗಿಲ್ಲ ಅಂದ್ಲು”.

“ಸಾಲಿ ಸಲುವಾಗಿ ತಾಯವ್ವ ಜಾಗಾ ಕೊಡಬಹುದಲ್ಲ?”
“ಗುರುಗಳ ಆ ಜಾಗದ ಉಸಾಬರಿಗೆ ಹೋಗೋದು ಬ್ಯಾಡ್ರಿ. ಗೌಡ್ರು, ದೇಸಾಯರು ಎಂಥವರಂತ ನಿಮ್ಗ ಗೊತ್ತಿಲ್ಲ. ಸುಮ್ನ ಹೆಬ್ಬಾವು ತಗೊಂಡು ಮೈಮ್ಯಾಲೆ ಹಾಕೊಳ್ಳೋದು ಬ್ಯಾಡ” ಹಿಂಜರಿಕೆಯ ಮಾತಾಡಿದರು ದಾಸಪ್ಪ.

“ಭೂಮಿ ಕೇಳೋದು ನನ್ನ ಸ್ವಾರ್ಥಕ್ಕಲ್ಲ; ಊರ ಮಕ್ಕಳ ಹಿತಕ್ಕ ದಾಸಪ್ಪನವರ”
“ನಿಮ್ಮ ಕಾಳಜಿ ನನ್ಗ ಅರ್ಥ ಆಗತ್ರಿ ಗುರುಗಳ. ಆದ್ರ ಭೂಮಿ ನುಂಗುವ ಜಿದ್ದಾಜಿದ್ದಿನ ಗೌಡ್ರು, ದೇಸಾಯರಿಗೆ ಇದು ತಿಳಿಬೇಕಲ್ರಿ? ಇದೂ ತನಕ ಊರಾಗ ಅವರ ಕಣ್ಣು ಬಿದ್ದ ಯಾವ ಭೂಮೀನೂ ಉಳಿದಿಲ್ಲ. ದೈನೇಸಿಯಿಂದಾದ್ರೂ ಸೈ, ಧಮಕಿಯಿಂದಾದ್ರೂ ಸೈ ಭೂಮಿ ಆಕ್ರಮಣ ಮಾಡುದರಾಗ ಅವರದು ಎತ್ತಿದ ಕೈ. ಸ್ವಹಿತದ ಮುಂದ ಊರ ಹಿತ ಯಾವ ಲೆಕ್ಕ?”

“ಅದನ್ನ ಜನಾ ಕೇಳಬೇಕು”
“ಗೌಡ್ರು ದೇಸಾಯಿ ಮಹಾ ತಾಕತ್ತಿನವರು. ಜನರ ದನಿ ಕಿತ್ಗೊಂಡಾರ, ಎದೆಯುಬ್ಬಿಸಿ ನಿಂತವರನ್ನ ಹಿಂಸಿಸಿ, ಕುತಂತ್ರ ಮಾಡಿ ಊರು ಬಿಟ್ಟು ಓಡಿಸ್ಯಾರ. ನಾವಂತೂ ಕೆಳಗಿನ ಜನ. ಕತ್ತಲದಾಗ ತೆವಳಬೇಕು”.

“ಮನುಷ್ಯಾಗ ಕತ್ಲಾನ ಶಾಶ್ವತ ಅಲ್ರಿ ದಾಸಪ್ಪನವರ. ಬೇಕು ಅಂದ್ರ ಬೆಳಕೂ ಸಿಗತ್ತ”.
“ಗೌಡ್ರು, ದೇಸಾಯರು ಅಡ್ಡ ನಿಂತಾರ. ಬೆಳಕು ನಮ್ಗ ಹ್ಯಾಂಗ್ ಸಿಗಬೇಕ್ರಿ?”
“ರಾಹು-ಕೇತುಗಳಿಗೆ ಸೂರ್ಯಚಂದ್ರ ಹೆದರ‌್ತಾರೇನು. ತಾಯವ್ವ ಗೌಡ್ತಿಯ ಎದೆಗಾರಿಕೆ ನೋಡಿಯಾದ್ರೂ ನೀವು ಗಟ್ಟಿಯಾಗಬೇಕಾಗಿತ್ತು”.

ತೇಜಪ್ಪನವರ ಮಾತು ದಾಸಪ್ಪನವರ ಎದೆ ಚುಚ್ಚಿತ್ತು. ಅದರ ಪರಿಣಾಮದಿಂದ ತತ್‌ಕ್ಷಣ ಅವರು ಮುಖ ಕೆಳಗೆ ಹಾಕಿದ್ದರು. ಮತ್ತೆ ತೇಜಪ್ಪ, “ನಾನು ಹೀಗೆ ಅಂದೆ ಅಂತ ಬೇಜಾರು ಮಾಡ್ಕೋಬ್ಯಾಡ್ರಿ. ನಿಮ್ಗ ಅಪಮಾನ ಮಾಡುವ ಉದ್ದೇಶ ನಂದಲ್ಲ. ಊರಿನ ಜನಾ ಗೌಡ್ತಿ ಹಾಂಗ ಜಿಗುಟತನ ಬೆಳೆಸಿಕೊಂಡಿದ್ರ ಗೌಡರು, ದೇಸಾಯರು ಇಷ್ಟು ಪ್ರಬಲ ಆಗ್ತಿರಲಿಲ್ಲ. ರಾಕ್ಷಸ ಬೆಳ್ಯಾಕ, ಊರು ನರಕ ಆಗುದಕ ಮನುಷ್ಯಾನ ದೌರ್ಬಲ್ಯದ ಕಾರಣ. ಅವಿದ್ಯೆ, ಅಜ್ಞಾನದಿಂದ ನೀವೆಲ್ಲಾ ಬಲಾಢ್ಯರ ಕ್ರೌರ್ಯ, ಹಿಂಸೆ ಅನುಭವಿಸ್ತ ಬಂದೀರಿ. ಅಂಥ ಅನಾಹುತಗಳಿಗೆ ನಿಮ್ಮ ಮಕ್ಕಳೂ ಬಲಿಯಾಗಬೇಕೇನು?”

ದಾಸಪ್ಪನವರ ಎದುರಿಗೆ ತೇಜಪ್ಪ ಕನ್ನಡಿ ಹಿಡಿದಿದ್ದರು. ಅದು ನಿಜಗನ್ನಡಿ. ಅದರಲ್ಲಿ ಮುಖ ನೋಡಿಕೊಳ್ಳಲು ಸಂಕೋಚವೆನಿಸಿದರೂ ದಾಸಪ್ಪ ಹಿಂದೇಟು ಹಾಕಲಿಲ್ಲ. `ಗುರುಗಳ, ನೀವು ಹನಿಸಿದ ಬೆಳಕು, ನನ್ನೆದಿಯೊಳಗ ಸೇರ‌್ಕೊಂತು' ಎಂದರು. `ಈ ಬೆಳಕನ್ನು ನಿಮ್ಮೆದಿಯೊಳಗ ಮುಚ್ಚಿಟ್ಟುಕೊಂಡ್ರ ಪ್ರಯೋಜನ ಇಲ್ಲ ದಾಸಪ್ಪನವರ. ಅದನ್ನು ಎಲ್ಲರಿಗೂ ಹಂಚುವ ಕೆಲಸ ನಿಮ್ಮಿಂದಾಗಬೇಕು'.

`ನೀವು ದಾರಿ ತೋರಿಸಿದ್ರ ನಾವು ನಡಿಯಾಕ ತಯಾರು. ಅಷ್ಟ ಅಲ್ಲ ನನ್ನ ಕೂಡ ಇವರೂ ಬರ‌್ತಾರ' ಎಂದು ಎಸ್.ಡಿ.ಎಂ.ಸಿ. ಸದಸ್ಯರತ್ತ ಮುಖ ತಿರುಗಿಸಿ ಹೇಳಿದರು ದಾಸಪ್ಪ. `ಗುರುಗಳ, ಇದೆಲ್ಲಾ ನಮ್ಗ ಹೊಸಾದ್ರಿ, ಏನೂ ತಿಳಿಯಾಕಿಲ್ಲ. ನಮ್ಮ ಮಕ್ಕಳ ಸಲುವಾಗಿ, ಸಾಲಿ ಸುಧಾರಣಾ ಸಲುವಾಗಿ ನೀವು ಹ್ಯಾಂಗ್ ಹೇಳ್ತೀರಿ ಹಾಂಗ ಕೇಳ್ತೀವಿ' ಎಂದಳು ಮಹಿಳಾ ಸದಸ್ಯೆ ನೀಲವ್ವ.

`ನೀಲವ್ವ ಹೇಳಿದ್ದು ಬರೋಬ್ಬರಿ ಐತ್ರಿ ಗುರುಗಳ. ಸಾಲಿ ಸಲುವಾಗಿ ನೀವು ಏನು ಮಾಡ್ತೀರಿ. ಅದಕ್ಕ ನಮ್ಮ ಬೆಂಬಲ ಐತಿ' ಇಬ್ಬರು ಸದಸ್ಯರು ಒಂದೆ ದನಿಯಲ್ಲಿ ಹೇಳಿದರು. ಮಧ್ಯಾಹ್ನದ ಇಳಿಹೊತ್ತು. ತಾಯವ್ವ ಗೌಡ್ತಿ, ಮನೆಯ ಹೊರ ಕಟ್ಟೆಯ ಮೇಲೆ ಕುಳಿತು ಜೋಳ ಹಸನು ಮಾಡುತ್ತಿದ್ದಳು.

`ನಮಸ್ಕಾರ ಗೌಡ್ತಿ' ಎಂದ ದಾಸಪ್ಪ. `ಯಾಕ ದಾಸಪ್ಪ ಇತ್ಲಾಗ ಬಂತಲ್ಲ ನಿನ್ನ ಸವಾರಿ?' ಕೇಳಿದಳು ಗೌಡ್ತಿ.
`ಇವರು ನಮ್ಮೂರಿನ ಸಾಲಿಗೆ ಹೊಸದಾಗಿ ಬಂದ ಹೆಡ್‌ಮಾಸ್ಟರು' ತೇಜಪ್ಪನವರನ್ನು ಗೌಡ್ತಿಗೆ ಪರಿಚಯಿಸಿದರು ದಾಸಪ್ಪ. `ನಮಸ್ಕಾರ ಅವ್ವಾರ' ಎಂದರು ತೇಜಪ್ಪ.

`ಒಳಗ ಬರ‌್ರಿ ಗುರುಗಳ' ಎನ್ನುತ್ತ ಜೋಳದ ಬುಟ್ಟಿ, ಮರಾ ಎತ್ತಿಕೊಂಡು ಮನೆಯೊಳಗೆ ನಡೆದಳು ಗೌಡ್ತಿ.`ಕಟ್ಟಿ ಮ್ಯಾಲೇ ಆರಾಮ್ ಕೂಡ್ತೀನಿ ಗೌಡ್ತಿ' ಎಂದರು ದಾಸಪ್ಪ. `ಗುರುಗಳನ್ನು ಹೊರಗಿನಿಂದ ಹೊರಗ ಕಳಿಸಲೇನು ನಾನು. ಅವರನ್ನು ಕರ್ಕೊಂಡು ಒಳಗ ಬಾ' ಗೌಡ್ತಿ ಒತ್ತಾಯಿಸಿದಳು. ಹಾಗೆಯೇ ಅವರಿಗಾಗಿ ಪಡಸಾಲೆಯಲ್ಲಿ ಚಾಪೆ ಹಾಸಿ, ಅಡುಗೆ ಮನೆಗೆ ಹೋಗಿ ಚಹಾ ಮಾಡಿ ತಂದು ಕುಡಿಯಲು ಕೊಟ್ಟಳು.

`ಗೌಡ್ತಿ, ಗುರುಗಳು ನಿಮ್ಮ ಭೆಟ್ಟಿಗಂತ ಬಂದಾರ' ಚಹ ಕುಡಿಯುತ್ತ ಹೇಳಿದರು ದಾಸಪ್ಪ.
`ಬಂದದ್ದು ಬೇಶಾತು. ಆದ್ರ ಯಾವ ವಿಚಾರಕ್ಕಂತ ತಿಳಿಲಿಲ್ಲ' ಬಾಗಿಲ ಹತ್ತಿದ ಕುಳಿತುಕೊಳ್ಳುತ್ತ ಹೇಳಿದಳು ಗೌಡ್ತಿ.

`ಇವರು ಬಂದ ಮ್ಯಾಲೆ ಸಾಲಿಗೆ ಬರುವ ಹುಡುಗರ ಸಂಖ್ಯಾ ಜಾಸ್ತಿಯಾಗೇತಿ ಗೌಡ್ತಿ. ಆದ್ರ ಜಾಗಾದ ಕೊರತಿ ಐತಿ. ಇನ್ನೂ ಐದಾರು ರೂಮಾದ್ರೂ ಬೇಕು. ಅದಕ್ಕಂತ...' ದಾಸಪ್ಪ ಮಾತು ಅರ್ಧಕ್ಕೆ ನಿಲ್ಲಿಸಿದರು.

`ಅವ್ವಾರ, ಸಾಲಿ ಮಗ್ಗಲ ಇರುದು ನಿಮ್ಮ ಜಾಗಾ. ಅದನ್ನು ಸಾಲಿಗೆ ಕೊಟ್ರ ಬಹಳ ಉಪಕಾರ ಆಗತ್ರಿ' ದಾಸಪ್ಪನವರ ಮಾತಿನ ಎಳೆಯೊಂದಿಗೆ ಎಳೆ ಜೋಡಿಸಿದರು ತೇಜಪ್ಪ. `ಅಲ್ಲಿ ನಮ್ಮ ಯಜಮಾನರ ಸಮಾಧಿ ಐತ್ರಿ ಗುರುಗಳ' ಎಂದಳು ಗೌಡ್ತಿ.

`ವೀರನಗೌಡರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅಂಥ ಮಹಾನುಭಾವರು ಮಲಗಿರುವ ಜಾಗ ಅದು. ಸಾಲಿಗೆ ಕೊಟ್ರ ಸಾರ್ಥಕ ಅನಿಸುವುದು. ನಿಮ್ಮೂರಿನ ಮಕ್ಕಳು ಅಲ್ಲಿ ಕಲ್ತು ಮುಂದೆ ಬಂದ್ರ ವೀರನಗೌಡರ ಆತ್ಮಕ್ಕೂ ಶಾಂತಿ ಸಿಗುವುದು. ಅವರ ಸಮಾಧಿಗೆ ಮಂಟಪ ಕಟ್ಟಿಸಿ ಅದನ್ನು ರಕ್ಷಿಸುವ ಕೆಲಸ ನಾನು ಮಾಡ್ತೀನ್ರಿ ಗೌಡ್ತಿ' ಎಂದರು ತೇಜಪ್ಪ.

ಅವರ ಅಂತರಾಳದ ಮಾತು ಕೇಳಿ ತಾಯವ್ವ ಗೌಡ್ತಿಯ ಮನಸ್ಸು ಪ್ರಫುಲ್ಲಿತವಾಯಿತು. ಊರು ಹಾಳಾರ ಒಡಲಿಗೆ ಭೂಮಿ ಹಾಕುವುದಕ್ಕಿಂತ ಶಾಲೆಗೆ ದಾನ ಮಾಡುವುದೇ ಸರಿಯೆನಿಸಿತು. `ನಾನು ಮನಸ್ಸಾದಿಂದ ಸಾಲಿಗೆ ಭೂಮಿ ಬಿಟ್ಟು ಕೊಡ್ತೀನ್ರಿ ಗುರುಗಳ' ಎಂದು ವಾಗ್ದಾನ ಮಾಡಿದಳು ಗೌಡ್ತಿ.

ದಾಸಪ್ಪನವರಿಗೆ ಅಚ್ಚರಿಯೆಂಬೋ ಅಚ್ಚರಿ. ಜೊತೆಗೆ ತಾಯವ್ವ ಗೌಡ್ತಿ ಒಂದೇ ಮಾತಿಗೆ ಒಪ್ಪಿಕೊಂಡಿದ್ದರ ಸಂತೋಷ. ಅದೆಲ್ಲ ತೇಜಪ್ಪನವರ ಪ್ರಭಾವದ ಫಲವೆಂದು ತಿಳಿಯಲು ಅವರಿಗೆ ತಡವಾಗಲಿಲ್ಲ.
ಜೀವಪುರದ ಮನೆ ಮನೆಗಳಲ್ಲೂ ತಾಯವ್ವ ಗೌಡ್ತಿಯನ್ನು ಹೆಮ್ಮೆಯಿಂದ ಹೊಗಳುತ್ತಿರಬೇಕಾದರೆ ಗೌಡರು, ದೇಸಾಯರು ಅವಳ ಬಗ್ಗೆ ನಂಜು ಕಾರುತ್ತ ಕುಳಿತಿದ್ದರು.

ಅವಳ ಅಜ್ಞಾನದಿಂದಾಗಿ ಕಿಮ್ಮತ್ತಿನ ಭೂಮಿ ಸರಕಾರಕ್ಕೆ ಪುಕ್ಕಟೇ ಹೋಗುವ ಅಸಮಾಧಾನ ಅವರನ್ನು ವಿಚಲಿತರನ್ನಾಗಿಸಿತ್ತು. ಜೀವಪುರ ಮುಖ್ಯ ದಾರಿಗೆ ಹೊಂದಿಕೊಂಡಿದ್ದು, ಭವಿಷ್ಯದಲ್ಲಿ ಈ ದಾರಿ ರಾಜ್ಯ ಹೆದ್ದಾರಿಯಾಗುವ ವಿಚಾರವನ್ನು ಅವರು ಬ್ಲ್ಲಲವರಾಗಿದ್ದರು. ಹಾಗಾಗಿ ಭೂಮಿಗೆ ಹೆಚ್ಚು ಬೆಲೆ ಬರುವುದೆಂದು ತಿಳಿದೇ ಗೌಡರು, ದೇಸಾಯರು ಆ ಭೂಮಿಯನ್ನು ಖರೀದಿಸಲು ಪೈಪೋಟಿ ನಡೆಸಿದ್ದರು. ಗೌಡ್ತಿ ದುಡ್ಡಿನಾಸೆಗೆ ಬಲಿಯಾಗಿರಲಿಲ್ಲ.

ಅಲ್ಲಿ ಶಿವಾಲಯ ಕಟ್ಟಿಸುವ ನೆಪದಾಲ್ಲಾದರೂ ಆ ಭೂಮಿಯನ್ನು ಆಪೋಷನ ತೆಗೆದುಕೊಳ್ಳುವ ಹುನ್ನಾರದಲ್ಲಿದ್ದ ಗೌಡ. ದೇಸಾಯರು ಈಗ ಕೆಂಡದುಂಡೆಯಾಗಿ ತೇಜಪ್ಪನವರನ್ನು ಬೈದಾಡಿಕೊಂಡರು. ಅಷ್ಟು ಸಾಲದಾಗಿ ಗೌಡರು, ತೇಜಪ್ಪನವರನ್ನು ಮನೆಗೆ ಕರೆಯಿಸಿಕೊಂಡು ತಮ್ಮ ತಳಮಳವನ್ನು ಕಾರಿಕೊಂಡರು.

`ಯಾಕ್ರಿ ಮಾಸ್ತರ, ಸಾಲಿ ಕಲಿಸೋದು ಬಿಟ್ಟು, ಊರೊಳಗ ಪವಾಡ ತೋರಿಸಲಿಕ್ಕೆ ಬಂದಿರೇನು?' ಹುಬ್ಬುಗಂಟಿಕ್ಕಿ, ಗೊಗ್ಗರುಗೊಗ್ಗರಾಗಿ ಪ್ರಶ್ನಿಸಿದರು. `ಇದರಾಗ ನಂದೇನೂ ಪವಾಡ ಇಲ್ಲಿ ಗೌಡ್ರ. ನಿಜವಾದ ಪವಾಡ ಅಂದ್ರ ತಾಯವ್ವ ಗೌಡ್ತೀದು. ಆ ಮಹಾತಾಯಿ ಊರ ಮಕ್ಕಳ ಸಲುವಾಗಿ ದೊಡ್ಡ ತ್ಯಾಗ ಮಾಡಿದ್ದು' ತೇಜಪ್ಪ ಶಾಂತವಾಗಿ ಉಲಿದರು.

`ನಮ್ಮ ದನದ ಕೊಟಿಗ್ಯಾಗ ನಡೆಯೋ ಸಾಲಿ ಬಂದ್ ಮಾಡಿಸಿದ್ರಿ. ಈಗ ನಾನು ಹಾಲಿನ ಡೇರಿ ಮಾಡಬೇಕೆನ್ನೋ ಜಾಗಾನ್ನ ಆ ಗೌಡ್ತಿ ತಲಿ ಕೆಡಿಸಿ ನುಂಗು ಪ್ಲಾನ್ ಮಾಡೀರಿ. ಹೊಟ್ಟೆ ಪಾಡಿಗೆ ಬಂದ ನಿಮ್ಗೆ ಈ ಅಧಿಕಾರ ಯಾರು ಕೊಟ್ರು?' ದರ್ಪದಿಂದ ಕೇಳಿದರು ಗೌಡರು.

`ಡೇರಿ ಮಾಡೋದು ನಿಮ್ಮ ಸ್ವಂತಕ್ಕ ಗೌಡ್ರ, ಸಾಲಿ ಮಕ್ಕಳ ಹಿತಕ್ಕ ಇರುವುದು'. `ಸಾಲಿ ಮಾಸ್ತರಗ ಬುದ್ಧಿ ಇಲ್ಲ ಅನ್ನೋದು ಅದಕ್ಕ ನೋಡ್ರಿ. ಡೇರಿ ಆದ್ರ ಊರಾಗ ಪಶು ಸಂಪತ್ತು ಹೆಚ್ಚಾಗತ್ತ. ಹೈನಾನೂ ಸಮೃದ್ಧಿಯಾಗತ್ತ. ಜನರ ಬದುಕಿಗೆ ಒಂದು ದಾರಿನೂ ಆಗತ್ತ. ಈಗ ಸಾಲಿ ಕಲ್ತವರೆಲ್ಲ ದನಾ ಕಾಯಾಕೂ ಲಾಯಕ್ ಇಲ್ಲದ್ಹಂಗ ಕುಂತಾರ ಮತ್ತ ನೀವು ಸಾಲಿ ಕಟ್ಟಿಸಿ ಏನು ಸಾಧಿಸ್ತೀರಿ?' ಕಣ್ಣು ಹಿಗ್ಗಿಸಿದ್ದರು ಗೌಡರು.

`ಈಗ ಮಳಿ ಬೆಳಿ ಕಮ್ಮಿ ಆದರೂ ಗೌಡ್ರ, ದನ-ಕರ, ಹೈನಾ-ಗೀನಾ ಅಂತ ನಂಬಿದೋರು ಕಂಗಾಲಾಗಿ ಕುಂದ್ರು ಪರಿಸ್ಥಿತಿ. ಬರಗಾಲ ಬಿತ್ತು ಅಂದ್ರ ಉಪಜೀವನ ಸಲುವಾಗಿ ಜನ ಊರು ಖಾಲಿ ಮಾಡಿ, ಹೋಗ್ತಾರ. ಮಕ್ಕಳು ಓದು ಬರಹ ಕಲ್ತರ ಎಲ್ಲಾದ್ರೂ ಹೊಟ್ಟೆ ತುಂಬಿಸಿಕೊಂಡಾರು' ಸಹನೆ ಕಳೆದುಕೊಳ್ಳದೇ ಹೇಳಿದ್ದರು ತೇಜಪ್ಪ.

`ಅಂದ್ರ ನೀವು ಆ ಜಾಗದಾಗ ಸಾಲಿ ಕಟ್ಟಿಸೋರ ಅಂದ್ಹಂಗಾತು?' `ತಾಯವ್ವ ಗೌಡ್ತಿ ಸಾಲಿಗಂತ ಭೂಮಿ ವಾಗ್ದಾನ ಮಾಡ್ಯಾರಿ' `ಮಾಸ್ತರ ಅದೆಲ್ಲಾ ಆಗೂದಿಲ್ಲ. ನನ್ಗ ಅಲ್ಲಿ ಹಾಲಿನ ಡೇರಿ ಮಾಡುವ ಜರೂರತ್ತಿಲ್ಲ. ಆ ಜಾಗದಾಗ ಏಳು ಹೆಡಿ ಸರ್ಪ ಸುತ್ತಾಡತೈತಿ ಅನ್ನೋದು ಊರಿಗೇ ಗೊತ್ತೈತಿ. ಅಂದ್ರ ಅದು ದೇವರ ಜಾಗಾ. ಅಲ್ಲಿ ನಾವು ಶಿವನ ಗುಡಿ ಕಟ್ತೀವಿ. ನಿಮ್ಮ ಸಾಲಿಗೆ ಜಾಗಾ ಬೇಕಾದ್ರ ನಮ್ಮ ದನದ ಕೊಟ್ಟಿಗೇನ ಖರೀದಿ ಕೊಡ್ತೀನಿ.

ಜನರ ನಂಬಿಕಿ ವಿಷಯದಾಗ ತಲೆ ಹಾಕಬ್ಯಾಡ್ರಿ' ಎಂದು ಎಚ್ಚರಿಸಿದರು ಗೌಡರು. ದೇಸಾಯರ ಧೋರಣೆಯೂ ಗೌಡರಿಗಿಂತ ಭಿನ್ನವಾಗೇನೂ ಇರಲಿಲ್ಲ. ತೇಜಪ್ಪನವರನ್ನು ಎದುರು ನಿಲ್ಲಿಸಿಕೊಂಡು ಫಾರ್ಮ್‌ಹೌಸ್ ಬಗ್ಗೆ ಮಾತಾಡದೆ ಆ ಜಾಗೆಯಲ್ಲಿ ಶಿವಾಲಯ ಕಟ್ಟುತ್ತೇವೆ ಎಂದು ಹಟದ ಮಾತಾಡಿದರು.

ಇತರೆ ವಿಷಯಗಳಲ್ಲಿ ಹಗೆತನ ಸಾಧಿಸುವ ರಾಜಕೀಯ ಜನ ಸ್ವಾರ್ಥದ ವಿಷಯದಲ್ಲಿ ಎಂಥ ದುಶ್ಮನ್‌ಗಿರಿ ಇದ್ದರೂ ಮರೆತು ಒಂದಾಗಿ ಬಿಡುತ್ತಾರೆ ಎಂಬುದಕ್ಕೆ ಸಾಕ್ಷಿಯಾದ ಗೌಡ ಮತ್ತು ದೇಸಾಯರು ಜತೆಗೂಡಿ ಶಿಕ್ಷಣಾಧಿಕಾರಿಗಳ ಕಚೇರಿಗೆ ಅಲೆದು, ತಾಯವ್ವ ಗೌಡ್ತಿಯ ಹೊಲವನ್ನು ಶಾಲೆಗೆ ದೇಣಿಗೆಯಾಗಿ ಪಡೆದುಕೊಳ್ಳಬಾರದೆಂದು, ಅದಕ್ಕೆ ಅವಳ ಒಪ್ಪಿಗೆ ಎಳ್ಳು ಕಾಳಿನಷ್ಟು ಇಲ್ಲವೆಂದು ತೇಜಪ್ಪ ಮಾಸ್ತರರು ಅವಳ ಮೇಲೆ ಒತ್ತಡ ತಂದು ದಿಕ್ಕು ತಪ್ಪಿಸುತ್ತಿದ್ದಾನೆಂದು ದೂರಿ, ಇಂತಹದಕ್ಕೆ ಅವಕಾಶ ನೀಡಿದರೆ ಪರಿಣಾಮವು ಉಗ್ರವಾಗುವುದೆಂದು ಅಧಿಕಾರಿಗಳಿಗೆ ಎಚ್ಚರಿಸಿ ಬಂದಿದ್ದರು.

ಆ ಹಿಂದೆಯೇ ಅಧಿಕಾರಿಗಳು ತೇಜಪ್ಪನವರಿಗೆ ಆ ಹೊಲದ ವಿಚಾರವನ್ನು ಕೈಬಿಡಬೇಕೆಂದು ಆದೇಶಿಸಿದ್ದರು. ಈ ಸುದ್ದಿ ತಿಳಿಯುತ್ತಲೇ ತಾಯವ್ವ ಗೌಡ್ತಿ, ದಾಸಪ್ಪ ಮತ್ತು ತೇಜಪ್ಪನವರನ್ನು ಜತೆ ಕರೆದುಕೊಂಡು ಸ್ವತಃ ತಾನೇ ನಗರಕ್ಕೆ ಬಂದು ಅಧಿಕಾರಿಗಳನ್ನು ಭೇಟಿಯಾಗಿ ಅವರೆದುರು ಗೌಡ್ರು ಮತ್ತು ದೇಸಾಯರ ಒಳಹಿಕ್ಮತ್ತುಗಳನ್ನು ಅರುಹಿ, ಹೊಲವನ್ನು ಊರಿನ ಮಕ್ಕಳ ಶಿಕ್ಷಣದ ಸಲುವಾಗಿ ತಾನೇ ಮನಸಾರೆ ಕೊಡುವುದಾಗಿ ಸ್ವಹಸ್ತಾಕ್ಷರದಲ್ಲಿ ಬರೆದುಕೊಟ್ಟು ಬಂದಿದ್ದಳು.

ಗೌಡರು ಮತ್ತು ದೇಸಾಯರು ತಮ್ಮ ನರಮಂಡಲಕ್ಕೆ ಕಾದ ಕಬ್ಬಿಣದ ದ್ರವವನ್ನು ಬಸಿದುಕೊಂಡು ಪ್ರಳಯಾಂತಕ ರಭಸದಲ್ಲಿ ತಾಯವ್ವ ಗೌಡ್ತಿ, ತೇಜಪ್ಪ,, ದಾಸಪ್ಪನವರನ್ನು ಬೈದಾಡಿಕೊಂಡರು. ತಮ್ಮ ಕಾರಸ್ತಾನ ಬೀಜಗಳು ಎಲ್ಲೂ ಊರಿಕೊಳ್ಳದೆ ಭಯಂಕರ ಮುಖಭಂಗವಾಗುವ ಸ್ಥಿತಿಯಲ್ಲಿ ಪರ್ಯಾಯವೋ ಎನ್ನುವಂತೆ ತಮ್ಮ ಚೇಲಾಗಳನ್ನು ಪ್ರಚೋದಿಸಿ ಊರಲ್ಲಿ ಗದ್ದಲವೆಬ್ಬಿಸಿದರು. ದೇವರು, ಧರ್ಮವೆಂದರೆ ಅತೀ ಭಾವುಕರಾಗುವ ಕೆಲವು ಹೆಂಗಸರು, ಗಂಡಸರು ಅವರ ಪ್ರೇರಣೆಯಿಂದ ತಾಯವ್ವ ಗೌಡ್ತಿಯ ಮನೆ ಮುಂದೆ ಸೇರಿ ಶಿವನ ಗುಡಿಗೆ ಜಾಗಾ ಬಿಟ್ಟುಕೊಡುವಂತೆ ಒತ್ತಾಯಿಸಿದ್ದರು.

ಅದಕ್ಕೆ ಗೌಡ್ತಿ ಮಣಿಯಲಿಲ್ಲವಾಗಿ ಕೊನೆಗೆ ಪಂಚಾಯತಿ ಸೇರಿಸಿ ತಾಯವ್ವ ಗೌಡ್ತಿ ಭೂಮಿಯನ್ನು ಶಿವಾಲಯಕ್ಕೆ ಕೊಡದಿದ್ದರೆ, ಊರಿಂದ ಬಹಿಷ್ಕಾರ ಹಾಕುವುದಾಗಿ ಪಂಚರ ಮೂಲಕ ಹೇಳಿಸಿ ಗೌಡ್ತಿಯನ್ನು ಹೆದರಿಸಿದ್ದರು. ಅವರ ಹಲಾಲ್‌ಖೋರ ಬುದ್ಧಿಗೆ ರಕ್ತ ಕುದಿಸಿಕೊಂಡ ತಾಯವ್ವ `ದೇವರ ಮ್ಯಾಲೆ ಇಷ್ಟು ಭಕ್ತಿ ಇದ್ರ ನೀವೆಲ್ಲಾ ನಿಮ್ಮ ನಿಮ್ಮ ಹೊಲದೊಳಗ ಶಿವನ ಗುಡಿ ಕಟ್ಟಿಸಿ ಪುಣ್ಯಾ ಪಡ್ಕೋರಿ. ನಾನಂತೂ ಸಾಲೀಗೆ ಭೂಮಿ ಕೊಡುವಾಕಿ' ಎಂದಿದ್ದಳು.

`ಗೌಡ್ತಿ, ನೀನು ಹುಚ್ಚಿ ಅದಿ. ಬಂಗಾರದಂಥ ಭೂಮಿನ ಸರಕಾರಕ್ಕೆ ಬಿಟ್ಟು ಕೊಟ್ರ ನಿನಗೆ ಬರುವ ಲಾಭಯೇನದ?' ಗೌಡರು ಆಕೆಯ ಮನಸ್ಸನ್ನು ಗಲಿಬಿಲಿಗಿಳಿಸಲು ಪ್ರಯತ್ನಿಸಿದ್ದರು.
ತಕ್ಷಣವೇ ಗೌಡ್ತಿ `ಸರಕಾರಕ್ಕಲ್ಲ, ಭೂಮಿನ ಊರಿಗೇ ಬಿಟ್ಟುಕೊಡ್ತಿನಲ್ಲ' ಎಂದಿದ್ದಳು.
`ಸರಕಾರದೋರು ಅಲ್ಲಿ ಸಾಲಿ ಕಟ್ಟಸ್ತಾರ' ಅನಾಹುತವೊಂದು ಘಟಿಸುವುದು ಎಂಬಂತೆ ಹೇಳಿದ್ದರು ದೇಸಾಯಿ.

`ಅದು ನಮ್ಮ ಊರಿನ ಮಕ್ಕಳ ಸಲುವಾಗೀನ ಅಲ್ಲೇನು?' ಕೇಳಿದ್ದಳು ಗೌಡ್ತಿ.
`ಸಾಲಿಯಾದ್ರ ಮಕ್ಕಳಷ್ಟ ಬರ‌್ತಾರ. ಶಿವನ ಗುಡಿಯಾದ್ರ ಊರ ಮಂದೀನ ಬರ‌್ತಾರ' ಗೌಡ, ದೇಸಾಯರು ತರ್ಕವೊಂದನ್ನು ಪ್ರಕಟಿಸಿದರು.

`ನಮ್ಮ ಗೌಡರು ದೇಶದ ಸಲುವಾಗಿ ಹೋರಾಡಿದ್ರು ಇರೂತನಕ ಗೌರವದಿಂದ ಬದುಕಿದ್ರು. ಅವರ ಆತ್ಮಕ್ಕೆ ನಾನು ವಂಚನೆ ಮಾಡಲು ತಯಾರಿಲ್ಲ. ಅವರ ಹೆಸರಿನ್ಯಾಗ ಸಾಲಿ ಆಗೋದ ಯೋಗ್ಯ. ನನ್ಗ ದೇವರು ಬ್ಯಾರೆ ಅಲ್ಲ, ಮಕ್ಕಳು ಬ್ಯಾರೆ ಅಲ್ಲ. ಸಾಲಿಯೊಳಗ ಮಕ್ಕಳು ಭೇದಭಾವ ಇಲ್ಲದ ಅಕ್ಷರ ಕಲಿತಾವು. ನಾನು ಆ ಅಕ್ಷರದಾಗ ದೇವರನ್ನ ಕಾಣ್ತೀವಿ.

ನನ್ನ ವಿಷಯದಾಗ ಯಾರೂ ತಲಿ ಹಾಕಬ್ಯಾಡ್ರಿ' ಎಂದು ಪಂಚಾಯತಿ ಆವರಣದಿಂದ ಹೊರಟು ಹೋದಳು ತಾಯವ್ವ. ಅವಳನ್ನು ಅಭಿಮಾನದಿಂದ ನೋಡಿದ ಜನ `ತಾಯವ್ವ ಗೌಡ್ತಿಗೆ ಜಯವಾಗಲಿ, ವೀರನಗೌಡರು ಅಮರವಾಗಲಿ!' ಎಂದು ಒಕ್ಕೊರಲುತ್ತ ಅವಳ ಹಿಂದೇನೆ ನಡೆದು ಹೋದರು. ಗೌಡರು ಮತ್ತು ದೇಸಾಯಿ ತಮ್ಮ ಹಿಂಬಾಲಕರೊಂದಿಗೆ ಬಾಲಸುಟ್ಟ ಬೆಕ್ಕಿನಂತೆ ಎಷ್ಟೋ ಹೊತ್ತು ಕುಳಿತೇ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT