ಅರಣ್ಯ ಇಲಾಖೆಯ ಮುಖ್ಯ ಕೆಲಸ ಕಾಡು ಕಾಯೋದು, ವನ್ಯಜೀವಿಗಳಿಗೆ ರಕ್ಷಣೆ ಕೊಡೋದು. ಆದರೆ ಇಂದು ಅರಣ್ಯ ಇಲಾಖೆ ತನ್ನ ಮೂಲ ಉದ್ದೇಶವನ್ನು ಬಿಟ್ಟು ಉಳಿದೆಲ್ಲ ಕೆಲಸ ಮಾಡುತ್ತಿದೆ. ರಸ್ತೆ ನಿರ್ಮಾಣ, ಪ್ರವಾಸೋದ್ಯಮ, ಸಂಶೋಧನೆ ಇತ್ಯಾದಿ ಇತ್ಯಾದಿ ಕೆಲಸಗಳನ್ನು ಅರಣ್ಯ ಇಲಾಖೆಯ ಮೇಲೆ ಹೇರಲಾಗಿದೆ. ನನ್ನ ಪ್ರಕಾರ ಪ್ರವಾಸೋದ್ಯಮವೇ ಈ ನೆಲದ ಕಾಡುಗಳಿಗೆ ಇರುವ ದೊಡ್ಡ ಆತಂಕ. ಸಿಟಿಗಳಿಂದ ಒಂದಷ್ಟು ಜನ ಬರ್ತಾರೆ ಅಂತ ಇಲ್ಲಿ ಅರಣ್ಯ ಇಲಾಖೆ ಹುಲಿ ಓಡಾಡುವ ಜಾಗದಲ್ಲಿ ಕಾಂಕ್ರಿಟ್ ಕಟ್ಟಡ ಕಟ್ಟುತ್ತೆ. ಅದಕ್ಕೆ ಕರೆಂಟು–ಸ್ನಾನದ ನೀರಿಗೆ ಪೈಪ್ ಪೈನು– ತಲುಪಲು ದಾರಿ– ಅದಕ್ಕೆ ಸೇತುವೆ ಹೀಗೆ ಅರಣ್ಯದ ನಾಶಕ್ಕೆ ಅರ್ಥವಿಲ್ಲದ ಪ್ರವಾಸೋದ್ಯಮವೇ ಮಾರಕವಾಗಿದೆ. ಅಲ್ಲ ಕಣ್ರೀ, ಕಾಡಿಗೆ ಬರೋರು ನಾಡಿನ ಸೌಲಭ್ಯ ಬಯಸೋದ್ರಲ್ಲಿ ಏನಾದ್ರೂ ಅರ್ಥ ಇದೆಯಾ? ಅಂಥವರು ಕಾಡಿಗೆ ಬರದಿದ್ರೆ ಆಗುವ ನಷ್ಟವಾದರೂ ಏನು? ಬಂದವರಿಗೆ ಕಾಡಿನಲ್ಲಿ ಪ್ಲಾಸ್ಟಿಕ್ ಹಾಕಬಾರದು ಎಂಬ ಸಾಮಾನ್ಯ ಜ್ಞಾನವಾದರೂ ಇರುವುದಿಲ್ಲವೇ?

ನನ್ನ ಇನ್ನೊಂದು ಮುಖ್ಯ ಆತಂಕ ಇರುವುದು ಕಾಡು ಎಂಬುದರ ವ್ಯಾಖ್ಯಾನದ ಬಗ್ಗೆ. ಬಯಲುಸೀಮೆಯ ಅನೇಕ ಕುರುಚಲು ಕಾಡುಗಳನ್ನು ನಾವು ಕಾಡು ಎಂದು ಭಾವಿಸಲೇ ಇಲ್ಲ. ಹೀಗಾಗಿಯೇ ಅವುಗಳನ್ನು ಉಳಿಸಿಕೊಳ್ಳುವ ಮನಸ್ಥಿತಿಯೂ ನಿರ್ಮಾಣವಾಗಲಿಲ್ಲ. ಸದ್ಯಕ್ಕೆ ಉಳಿದಿರುವ ‘ಅಮೃತ್ ಮಹಲ್ ಕಾವಲು’ಗಳು ಬಯಲು ಸೀಮೆ ಕಾಡುಗಳ ಪ್ರಾತಿನಿಧಿಕ ತುಂಡುಗಳಂತೆ ಇವೆ. ಇವನ್ನು ಪಶು ಸಂಗೋಪನಾ ಇಲಾಖೆ ಅತ್ಯಂತ ಕೆಟ್ಟ ರೀತಿಯಲ್ಲಿ ನಿರ್ವಹಿಸುತ್ತಿದೆ. ಸ್ಥಳೀಯ ಪ್ರದೇಶಕ್ಕೆ ಹೊಂದದ ಗಿಡಗಳನ್ನು ನೆಟ್ಟು ಅರಣ್ಯ ಇಲಾಖೆ ಒಂದಷ್ಟು ಕಾವಲುಗಳನ್ನು ಹಾಳು ಮಾಡಿದೆ. ಬಯಲುಸೀಮೆ ಜೀವ ವೈವಿಧ್ಯದ ಜ್ವಲಂತ ಸಾಕ್ಷಿಯಂತಿರುವ ಕಡೂರು ತಾಲ್ಲೂಕಿನ ಬಾಸೂರು ಕಾವಲು, ಮಧುಗಿರಿ ತಾಲ್ಲೂಕಿನ ಮೈದನಹಳ್ಳಿ ಕಾವಲುಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಇನ್ನಾದರೂ ಶ್ರಮ ಹಾಕಬೇಕು.

ಇಂದು ಕುತ್ತಿಗೆಗೆ ಕ್ಯಾಮೆರಾ ನೇತು ಹಾಕಿಕೊಂಡವರೆಲ್ಲಾ ‘ನಾನೊಬ್ಬ ಪರಿಸರ ಹೋರಾಟಗಾರ – ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂಥವರು ಕಾಡಿಗೆ ಬರುವುದೇ ಕಾಡಿಗೆ ಆಪತ್ತು ಎಂದು ನನಗೆ ಅನ್ನಿಸುತ್ತದೆ. ಇವರ ಮಾತುಕತೆ- ರೀತಿನೀತಿ- ಅಪೇಕ್ಷೆಯಲ್ಲಿ ಕಾಡಿನ ಪ್ರೀತಿ ಕೊಂಚವೂ ಇರಲ್ಲ. ಬರೀ ಫೋಟೊ ತೆಗೀಬೇಕು, ಅದಕ್ಕೆ ಕಾಪಿರೈಟ್ ಹಾಕಿಕೋಬೇಕು, ಪ್ರೈಜ್ ತಗೋಬೇಕು ಎಂಬುದಷ್ಟೇ ಇವರ ಧೋರಣೆ. ಆದರೆ ಬೆರಳೆಣಿಕೆಯಷ್ಟು ಛಾಯಾಗ್ರಾಹಕರು ಮಾತ್ರ ನಿಜಕ್ಕೂ ನಮಗೆ ನೆರವಾಗಿದ್ದಾರೆ. ಎಷ್ಟೋ ವೇಳೆ ಅವರು ತೆಗೆದ ಛಾಯಾಚಿತ್ರಗಳು ನ್ಯಾಯಾಲಯದಲ್ಲಿ ಸಾಕ್ಷ್ಯಗಳಾಗಿ ಕಾಡಿನ ಪರ ತೀರ್ಪು ಬರಲು ನೆರವಾಗಿದೆ. ಅಂಥವರನ್ನು ನಾನು ಸ್ಮರಿಸಬೇಕು. ಕಾಡು ಪ್ರೀತಿಸುವುದನ್ನು ಕಲಿಯುವ ಮೊದಲು ಕಾಡಿಗೆ ಬರಬೇಡಿ. ಅದರಿಂದ ನಿಮಗೂ ತೊಂದರೆ- ಕಾಡಿಗೂ ತೊಂದರೆ; ಇದು ಛಾಯಾಗ್ರಾಹಕರಿಗೆ ನನ್ನ ಕಿವಿಮಾತು.

ಚಿಕ್ಕಮಗಳೂರಿನಲ್ಲಿ ಷಡಕ್ಷರಿ ಎಂಬ ಸ್ಕೌಟ್ ಮೇಷ್ಟ್ರು ಇದ್ದಾರೆ. ಅವರು ಜೀವಶಾಸ್ತ್ರದ ಉಪಾಧ್ಯಾಯರೂ ಹೌದು. ಮಕ್ಕಳನ್ನು ಕಾಡಿಗೆ ಕರೆದೊಯ್ದು ಗಿಡ- ಮರ- ಪಕ್ಷಿ- ಪ್ರಾಣಿ ತೋರಿಸಿ ಪರಿಸರ ಪ್ರೀತಿ ಬೆಳೆಸುತ್ತಾರೆ. 30 ವರ್ಷದ ಹಿಂದೆ ನಾನೂ ಅವರ ವಿದ್ಯಾರ್ಥಿ. ಅವರಿಂದಲೇ ನನಗೆ ಕಾಡಿನ ಪ್ರೀತಿ ಬೆಳೆಯಿತು. ಆ ದಿನಗಳಲ್ಲಿ ನಾನು ಕೇವಲ ಭಾವುಕನಾಗಿದ್ದೆ, ಉಲ್ಲಾಸ ಕಾರಂತರು ಅದಕ್ಕೆ ವೈಜ್ಞಾನಿಕ ಆಯಾಮ ನೀಡಿದರು. ಇಂದು ಚಿಕ್ಕಮಗಳೂರಿನಲ್ಲಿ ಪರಿಸರ ಪ್ರಿಯರ ಸಂಖ್ಯೆ ಹೆಚ್ಚಿದೆ. ಸರಿಸುಮಾರು ಮೂರು ತಲೆಮಾರಿಗೆ ಪರಿಸರ ಹೋರಾಟ ನಿರಂತರ ಹರಿದು ಬಂದಿದೆ. ಇದಕ್ಕೆ ಕಾರಣ ಷಡಕ್ಷರಿಯಂಥ ಸ್ಕೂಲ್ ಮೇಷ್ಟ್ರು.

ಹೊಸ ತಲೆಮಾರಿನ ಪರಿಸರ ಹೋರಾಟಗಾರರನ್ನು ಕಂಡಾಗ ಖುಷಿಯೂ ಆಗುತ್ತೆ, ಆತಂಕವೂ ಆಗುತ್ತೆ. ಒಂದು ಸಲ ಕಾಡಿಗೆ ಬಂದು ಜಿಗಣೆ ಕೈಲಿ ಕಚ್ಚಿಸಿಕೊಂಡ ಅನೇಕರು ಮತ್ತೆ ಅತ್ತ ತಲೆ ಮಾಡಿ ಮಲಗಿಲ್ಲ. ಕೆಲವರಿಗೆ ತಂತ್ರಜ್ಞಾನದಿಂದಲೇ ಎಲ್ಲವನ್ನೂ ಮಾಡಬಹುದು. ಕಾಡು ನೋಡುವುದು ವ್ಯರ್ಥ ಎಂಬ ಅಭಿಪ್ರಾಯವಿದೆ. ಜಿಪಿಎಸ್ – ಗೂಗಲ್ ಅರ್ಥ್‌ನಿಂದಲೇ ಎಲ್ಲವೂ ಸಾಧ್ಯ ಎಂದುಕೊಂಡಿದ್ದಾರೆ. ಇದು ತಪ್ಪು. ಕಾಡು ತಿರುಗದೆ, ಏರಿಯಾ ತಿಳಿಯದೆ ಸಂರಕ್ಷಣೆಯ ಪ್ರಯತ್ನ ಮಾಡುವುದು ಕತ್ತಲಲ್ಲಿ ಸೂಜಿ ಹುಡುಕಿದಂತೆ. ಕಾಡು ತನ್ನ ರಹಸ್ಯಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅದಕ್ಕೆ ಅನೇಕ ವರ್ಷಗಳ ಸತತ ಯತ್ನ ಬೇಕು. ಬೆಂಗಳೂರಿನಲ್ಲಿ ಕೆಲಸ ಮಾಡುವ ಅನೇಕರಿಗೆ ಕಾಡಿನ ಬಗ್ಗೆ ಪ್ರೀತಿ ಇದೆ. ಅಂಥವರನ್ನು ಕಾಡಿನ ಕೆಲಸಗಳಿಗೆ ವ್ಯವಸ್ಥಿತವಾಗಿ ಲಿಂಕ್ ಮಾಡುವ ಕೆಲಸ ಆಗಬೇಕು.
ಕಾಡಿನ ಸಂರಕ್ಷಣೆ ಎನ್ನುವ ಕೆಲಸ ಎಂದಿಗೂ ಮುಗಿಯುವುದೇ ಇಲ್ಲ. ಕಾಲಕ್ಕೆ ತಕ್ಕಂತೆ ಇಶ್ಯೂಗಳು ಹೊಸದಾಗಿ ಉದ್ಭವಿಸುತ್ತವೆ.

ಕೆಲವನ್ನು ಹೋರಾಟದಿಂದ, ಕೆಲವನ್ನು ನ್ಯಾಯಾಲಯದ ಮೂಲಕ, ಕೆಲವನ್ನು ಅರಣ್ಯ ಇಲಾಖೆ ನೆರವಿನೊಂದಿಗೆ ಪರಿಹರಿಸಬೇಕು. ಈ ಹಿಂದೆ ಕಾಳ್ಗಿಚ್ಚು ಕಾಡಿನ ದೊಡ್ಡ ಸಮಸ್ಯೆಯಾಗಿತ್ತು. ಇಂದು ಅರಣ್ಯ ಇಲಾಖೆ ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಈಗ ಪ್ರವಾಸೋದ್ಯಮ, ನದಿ–ತೊರೆ ಯೋಜನೆ, ರಸ್ತೆ–ಅಣೆಕಟ್ಟು ಯೋಜನೆಗಳು ದೊಡ್ಡ ಸಮಸ್ಯೆಯಾಗಿವೆ.

ಅರಣ್ಯ ಸಂರಕ್ಷಣೆಯಲ್ಲಿ ಹುಲಿಗೆ ಏಕೆ ಹೆಚ್ಚು ಒತ್ತು ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ. ಆಹಾರ ಸರಪಳಿ ಅತಿ ಮೇಲಿನ ಪ್ರಾಣಿ ಹುಲಿ. ಅದು ಉಳಿಯಬೇಕೆಂದರೆ ಅದರ ಬೇಟೆ ಪ್ರಾಣಿಗಳು ಉಳಿಯಬೇಕು, ಬೇಟೆ ಪ್ರಾಣಿಗಳು ಉಳಿಯಬೇಕೆಂದರೆ ವಿಸ್ತಾರವಾದ ಕಾಡು ಉಳಿಯಬೇಕು. ಹುಲಿಯ ಉಳಿವು- ಇಡೀ ಕಾಡಿನ ಆಹಾರ ಸರಪಳಿಯ ಉಳಿವು. ಕಾಡಿನ ಉಳಿವು ನಾಡಿನ ಉಳಿವು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.