`ಒರಾಂಗ್-ಉಟಾನ್'. ಹಾಗೆಂದರೆ ಮಲಯನ್ ಭಾಷೆಯಲ್ಲಿ `ಕಾಡಿನ ಮನುಷ್ಯ' ಎಂದರ್ಥ. ಮನುಷ್ಯರ ನಿಕಟ ಸಂಬಂಧಿಯಾಗಿದ್ದು, ಮನುಷ್ಯರನ್ನೇ ಹೋಲುವ ರೂಪವನ್ನೂ ಪಡೆದು, ನಿಬಿಡ ಅಡವಿಗಳಲ್ಲಷ್ಟೇ ವಾಸಿಸುವ ಈ ಪ್ರಾಣಿಗೆ (ಚಿತ್ರ-8) ಈ ಕಾರಣಗಳಿಂದಾಗಿ ಕಾಡಿನ ಮನುಷ್ಯ (ಒರಾಂಗೊಟಾನ್) ಎಂಬ ಹೆಸರು.

ವಾಸ್ತವವಾಗಿ ಒರಾಂಗೊಟಾನ್ ಒಂದು ವಿಧದ `ವಾನರ' (ಏಪ್). ಚಿಂಪಾಂಜಿ (ಚಿತ್ರ-1), ಗೊರಿಲ್ಲ (ಚಿತ್ರ-2), ಗಿಬ್ಬನ್ (ಚಿತ್ರ-3) ಮತ್ತು ಬೋನೋಬೋ (ಚಿತ್ರ-4) ಇವುಗಳ ಗುಂಪಿಗೇ (ಚಿತ್ರ-5) ಒರಾಂಗೊಟಾನ್ ಕೂಡ ಸೇರಿದೆ. ಒಂದು ವ್ಯತ್ಯಾಸ ಏನೆಂದರೆ ಗೊರಿಲ್ಲ, ಚಿಂಪಾಂಜಿ ಮತ್ತು ಬೋನೋಬೋ ಆಫ್ರಿಕಾದಲ್ಲಿ ನೆಲಸಿದ್ದರೆ ಗಿಬ್ಬನ್ ಮತ್ತು ಒರಾಂಗೊಟಾನ್ ಏಷಿಯದಲ್ಲಿ ನೆಲೆಗೊಂಡಿವೆ; ಗಿಬ್ಬನ್‌ಗಳು ಭಾರತವೂ ಸೇರಿದಂತೆ ಏಷ್ಯಾದ ಹಲವಾರು ಪ್ರದೇಶಗಳಲ್ಲಿ ವ್ಯಾಪಕವಾಗಿ ವಾಸಿಸುತ್ತಿವೆ, ಆದರೆ ಒರಾಂಗೊಟಾನ್‌ಗಳದು ತುಂಬ ಸೀಮಿತ ವಾಸಕ್ಷೇತ್ರ. ಸುಮಾತ್ರಾ ಮತ್ತು ಬೋರ್ನಿಯೋ ದ್ವೀಪಗಳ ವೃಷ್ಟಿವನಗಳಲ್ಲಷ್ಟೇ (ಚಿತ್ರ-9) ಅವುಗಳ ವಾಸ್ತವ್ಯ. ಆ ನಿಬಿಡ-ಕಾನನಗಳ ಮುಗಿಲಿನೆತ್ತರದ ಹಸಿರು ಚಾವಣಿಯಲ್ಲೇ ಈ ಕಾಡಿನ ಮನುಷ್ಯರ ಬಹುಪಾಲು ಬದುಕು.

ಒರಾಂಗೊಟಾನ್‌ಗಳ ವೈಶಿಷ್ಟ್ಯಗಳು ಹಲವಾರು. ಪ್ರಮುಖವಾಗಿ-
* ಈ ವಾನರ ನೂರಕ್ಕೆ ನೂರರಷ್ಟು ವೃಕ್ಷವಾಸಿ. ಅದು ನೆಲಕ್ಕೆ ಇಳಿಯುವುದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಅದರ ಕೈಕಾಲುಗಳ, ಹಸ್ತ-ಪಾದಗಳ ರಚನೆ ವೃಕ್ಷ ವಾಸಕ್ಕೆಂದೇ ವಿನ್ಯಾಸಗೊಂಡಿವೆ (ಒರಾಂಗೊಟಾನ್‌ನ ಹಸ್ತ-ಪಾದಗಳ ರಚನೆಯನ್ನು ಚಿತ್ರ-12 ರಲ್ಲೂ ಇತರ ವಾನರರ ಹಸ್ತ-ಪಾದಗಳನ್ನು ಚಿತ್ರ-13 ರಲ್ಲೂ ಗಮನಿಸಿ).

ಹಾಗಾದ್ದರಿಂದಲೇ ವೃಕ್ಷಗಳ ಮೇಲೆ ಒರಾಂಗೊಟಾನ್‌ಗಳದು ಸುರಕ್ಷಿತ ಲೀಲಾಜಾಲ ತೂಗಾಟ, ಓಡಾಟ (ಚಿತ್ರ-6, 7).
* ಕೆಂಬಣ್ಣದ, ಉದ್ದದ ರೋಮಭರಿತ ಶರೀರ ಒರಾಂಗೊಟಾನ್‌ಗಳ ಇನ್ನೊಂದು ವಿಶಿಷ್ಟ ಲಕ್ಷಣ. ಅಷ್ಟೇ ಅಲ್ಲ, ಗಂಡು-ಹೆಣ್ಣುಗಳ ಮುಖ ಲಕ್ಷಣಗಳು ತೀರಾ ಭಿನ್ನವಾಗಿರುವುದು ಈ ವಾನರರ ವೈಶಿಷ್ಟ್ಯ.

* ಒರಾಂಗೊಟಾನ್‌ಗಳಲ್ಲಿ ವಯಸ್ಕ ಗಂಡುಗಳು 50 ರಿಂದ 60 ಕಿಲೋ ತೂಗುತ್ತವೆ. ಹೆಣ್ಣುಗಳದು ಅದರರ್ಧ ತೂಕ. ಹಾಗಾಗಿ `ಅತ್ಯಂತ ಬೃಹದ್ಗಾತ್ರದ ವೃಕ್ಷವಾಸಿ' ಎಂಬ ದಾಖಲೆ ಈ ವಾನರರದು.

* ಹಣ್ಣುಗಳೇ ಈ ವಾನರರ ಮುಖ್ಯ ಆಹಾರ. ಆದರೆ ಫಲಾಹಾರ ಧಾರಾಳವಾಗಿ ಸಿಗದಂತಾದಾಗ ಒರಾಂಗೊಟಾನ್‌ಗಳು ಚಿಗುರೆಲೆಗಳನ್ನೂ ತಿನ್ನುತ್ತವೆ; ಎಳಸಾದ ತೊಗಟೆಯನ್ನೂ ಜಗಿಯುತ್ತವೆ. ಅತ್ಯಂತ ಅಪರೂಪವಾಗಿ ಈ ವಾನರರು `ಗೆದ್ದಲು'ಗಳನ್ನು ಹಿಡಿದು ತಿನ್ನುವುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.

ಒರಾಂಗೊಟಾನ್ ತುಂಬ `ಬುದ್ಧಿವಂತ'ವಾನರ. ನಿತ್ಯ ಬದುಕಿಗೆ ನೆರವಾಗುವ ಅದರ ಜಾಣತನದ ಕೆಲ ನಿದರ್ಶನಗಳನ್ನು ಗಮನಿಸಿ:

* ಒರಾಂಗೊಟಾನ್‌ಗಳಿರುವ ವೃಷ್ಟಿವನ ಪ್ರದೇಶಗಳಲ್ಲೇ ಹಣ್ಣುಗಳನ್ನೇ ಆಹಾರವಾಗಿ ಸೇವಿಸುವ ಬಾರೀ ಗಾತ್ರದ `ಹಾರ್ನ್‌ಬಿಲ್' ಹಕ್ಕಿಗಳೂ ನೆಲಸಿವೆ. ಒರಾಂಗೊಟಾನ್‌ಗಳು ಅಡವಿ ಛಾವಣಿಯಲ್ಲಿ ಕುಳಿತು ಹಾರ್ನ್‌ಬಿಲ್‌ಗಳ ಹಾರಾಟ ಗಮನಿಸಿ ಅವುಗಳ ಜಾಡನ್ನೇ ಹಿಡಿದು (ಚಿತ್ರ-11) ಫಲವೃಕ್ಷಗಳನ್ನು ಹುಡುಕಿಕೊಳ್ಳುತ್ತವೆ.

* ವೃಷ್ಟಿವನದಲ್ಲಿ ಧಾರಾಕಾರ ಮಳೆ ಸುರಿವಾಗ ಈ ವಾನರರು ವಿಶಾಲ ಎಲೆಗಳನ್ನು ಮುರಿದು ಕೊಡೆಗಳಂತೆ ಹಿಡಿದು ಕೂರುತ್ತವೆ; ಮಳೆಯಿಂದ ಹೀಗೆ ರಕ್ಷಣೆ ಪಡೆಯುತ್ತವೆ.

* ಮಳೆ ಬೀಳುತ್ತಿರುವಾಗ ನೀರು ಬೇಕೆನಿಸಿದರೆ ಒರಾಂಗೊಟಾನ್ ಅಗಲ ಎಲೆಯನ್ನು ಕಿತ್ತು ಅದನ್ನು `ದೊನ್ನೆ'ಯಂತೆ ಎಂದರೆ ಬಟ್ಟಲಾಗುವಂತೆ ಮಡಿಸಿ ಹಿಡಿದು ಮಳೆ ನೀರನ್ನು ಸಂಗ್ರಹಿಸಿ ಕುಡಿಯುತ್ತದೆ.

* ಪ್ರತಿ ರಾತ್ರಿ ಮಲಗುವಾಗಲೂ ಈ ವಾನರ ಕೊಂಬೆಗಳ ಮೇಲೆ ಎಳೆ ರೆಂಬೆಗಳನ್ನು ಬಾಗಿಸಿ ಜೋಡಿಸಿ ಆ `ಮಂಚ'ದ ಮೇಲೆ ಎಲೆಗಳ ರಾಶಿಯನ್ನು ಹರಡಿ ಮೆತ್ತನೆಯ ಹಸಿರು ಹಾಸಿಗೆಯೊಂದನ್ನು ಸಿದ್ದಪಡಿಸಿಕೊಳ್ಳುತ್ತದೆ.

* ವಿಪರೀತ ಬೀಜಗಳಿರುವ ಹಣ್ಣು ಸಿಕ್ಕಾಗ ಆ ಹಣ್ಣನ್ನು ತೆರೆದು ಒಂದು ಕಡ್ಡಿ ಹಿಡಿದು ಎಲ್ಲ ಬೀಜಗಳನ್ನೂ ಹೊರತೆಗೆದು ನಂತರ `ನೆಮ್ಮದಿ'ಯಿಂದ ತಿನ್ನುವ ಮನುಷ್ಯ ಸದೃಶ ಕ್ರಮವನ್ನು ಈ ವಾನರರು ರೂಢಿಸಿಕೊಂಡಿವೆ.

ಅದೆಲ್ಲ ಏನೇ ಇದ್ದರೂ ಈ `ಕಾಡಿನ ಮನುಷ್ಯ'ರ ಬದುಕು ಸುರಕ್ಷಿತವಾಗಿಲ್ಲ. ಅದಕ್ಕೆ ಅತ್ಯಂತ ಮುಖ್ಯ ಕಾರಣ ಅವುಗಳ ಆವಾಸದ ಕ್ಷಿಪ್ರಗತಿಯ ವಿನಾಶ. ಒರಾಂಗೊಟಾನ್‌ಗಳ ನೆಲೆಯಾಗಿರುವ ವೃಷ್ಟಿವನ ಪ್ರದೇಶ ಬೆಲೆಬಾಳುವ ಮರಮುಟ್ಟುಗಳಿಗಾಗಿ ಮತ್ತು `ತಾಳೆ'ಯಂತಹ ವಾಣಿಜ್ಯ ಬೆಲೆಗಳ ಕೃಷಿಗಾಗಿ ಕ್ಷಿಪ್ರವಾಗಿ ಕುಗ್ಗುತ್ತಿದೆ (ಚಿತ್ರ-10). ಇಂಡೊನೇಷ್ಯಾದ ಈ ವಾನರರ ನೆಲೆ ಪ್ರತಿ ವರ್ಷ ಸಮೀಪ ಒಂದು ದಶಲಕ್ಷ ಹೆಕ್ಟೇರ್‌ನಷ್ಟು ನೆಲಸಮವಾಗುತ್ತಿದೆ.

ಜೊತೆಗೆ ಈ ವಾನರರ ಸಂತಾನ ವರ್ಧನಾವೇಗ ಬಹಳ ಕಡಿಮೆ. ಪ್ರೌಢ ಹೆಣ್ಣುಗಳು ಪ್ರತಿ ಎಂಟು ವರ್ಷಗಳಿಗೊಮ್ಮೆ ಮಾತ್ರ ಗರ್ಭಧರಿಸುತ್ತವೆ; ಒಮ್ಮೆಗೆ ಒಂದೇ ಒಂದು ಮರಿಗೆ ಜನ್ಮ ನೀಡುತ್ತವೆ.

ಈ ಎರಡೂ ಕಾರಣಗಳಿಂದಾಗಿ ಮನುಷ್ಯರಷ್ಟೇ ದೀರ್ಘಾಯುಷಿ ಆಗಿದ್ದರೂ ಕೂಡ ಈ ಕಾಡಿನ ಮನುಷ್ಯರ ಸಂಖ್ಯೆ ವೇಗವಾಗಿ ಕ್ಷೀಣಿಸುತ್ತ ಕೆಲವೇ ಸಾವಿರ ತಲುಪಿದೆ; ಅಪಾಯದ ಹಾದಿ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.