ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂದರ ಜೋಗಿಯಿಂದ ರಾಮಾಯಣ ದರ್ಶನಂ ಕಡೆಗೆ..

Last Updated 9 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮ್ಮ ಕಾಲದಲ್ಲಿ ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳು ಮಾರಾಟದ ಸರಕುಗಳಾಗಿವೆ. ಮಕ್ಕಳಿಗೆಂದು ರೂಪಿಸಿಕೊಡುವ ಸಾಹಿತ್ಯ, ಆಟಗಳು, ನಾಟಕ, ಮನರಂಜನೆಗಳು ಕೂಡ ಈ ಮಾತಿಗೆ ಅಪವಾದಗಳಲ್ಲ. ಆದ್ದರಿಂದ ಮಕ್ಕಳ ಸಾಹಿತ್ಯದ ಸ್ವರೂಪ, ಅಗತ್ಯ ಮತ್ತು ಸಂವಹನಗಳನ್ನು ಕುರಿತ ಚರ್ಚೆಯು ಗಂಭೀರವಾಗಿ ನಡೆಯಬೇಕಿದೆ.

ಮಕ್ಕಳ ಸಾಹಿತ್ಯಕ್ಕೆ ಹಲವು ಉದ್ದೇಶಗಳಿವೆ.  ಮನರಂಜನೆ, ವಿದ್ಯಾಭ್ಯಾಸ, ಸಾಂಪ್ರದಾಯಿಕವಾದ ನೈತಿಕ ಮೌಲ್ಯಗಳ ಮುಂದುವರಿಕೆ, ಕಲ್ಪನಾಶಕ್ತಿ ಮತ್ತು ಕಲಾವಿದತನಗಳ ಅರಳುವಿಕೆ ಮುಂತಾದವು. ಇವು ಮಕ್ಕಳ ಸಾಹಿತ್ಯದಲ್ಲಿ ಬಿಡಿಬಿಡಿಯಾಗಿ ಅಥವಾ ಒಟ್ಟಾಗಿ ಕಾಣುತ್ತವೆ. ನಾವು ಬಳಸುವ ಭಾಷೆಯ ಅಪರಿಚಿತವಾದ ಚೆಲುವುಗಳನ್ನು ಮಕ್ಕಳಿಗೆ ಕಲಿಸುವುದು ಕೂಡ ಇಂಥ ಬರವಣಿಗೆಯ ಗುರಿ.

ಮಕ್ಕಳ ಕವಿತೆಗಳನ್ನು ಓದುವುದರಿಂದ ಪ್ರಾಸ, ಲಯ, ಗೇಯಗುಣ, ಹೋಲಿಕೆ ಮುಂತಾದ ಸಂಗತಿಗಳನ್ನು ಮಕ್ಕಳು ಸಂತೋಷವಾಗಿ ಕಲಿಯಲು ಸಾಧ್ಯವಾಗುತ್ತದೆ. ಇದು ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯಿಂದ ‘ಶ್ರೀ ರಾಮಾಯಣ ದರ್ಶನಂ’ ಕಡೆಗೆ, ಟಾಲ್‌ಸ್ಟಾಯ್ ಅವರ ಮಕ್ಕಳ ಕಥೆಗಳಿಂದ ‘ವಾರ್ ಅಂಡ್ ಪೀಸ್’ ಕಡೆಗೆ ಮಾಡುವ ಪ್ರಯಾಣ.
ಶಿಶುಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯಗಳು ಒಂದೇ ಏಣಿಯ ಮೆಟ್ಟಿಲುಗಳು.

ಶಿಶುಸಾಹಿತ್ಯದಲ್ಲಿ ಭಾಷೆಯ ‘ಶಬ್ದಗುಣ’ಕ್ಕೆ ಮೊದಲ ಮಣೆ. ಅರ್ಥಕ್ಕೆ ಎರಡನೆಯ ಜಾಗ. ಮಕ್ಕಳ ಸಾಹಿತ್ಯದಲ್ಲಿ ಇದು ತಿರುವುಮುರುವಾಗುತ್ತದೆ. ಶಿಶುಗಳಿಗೆ ‘ರೊಟ್ಟಿ ಅಂಗಡಿ ಕಿಟ್ಟಪ್ಪ’ ಸರಿ. ‘ತಿಂಡಿ ಅಂಗಡಿ ರಾಮಪ್ಪ’ ತಪ್ಪು. ಇಂಗ್ಲಿಷಿನ ಶಿಶುಪ್ರಾಸಗಳು (ನರ್ಸರಿ ರೈಮ್ಸ್) ಮತ್ತು ನಿರರ್ಥಕ ಕವಿತೆಗಳು (ನಾನ್ ಸೆನ್ಸ್ ವರ್ಸ್) ಈ ಕೆಲಸ ಮಾಡುತ್ತವೆ.

ಕನ್ನಡದಲ್ಲಿ ಶಿಶುಸಾಹಿತ್ಯವು ಜನಪದದಿಂದ ಬಂದಿದೆ (ಆನೆ ಬಂತೊಂದಾನೆ.. ಯಾವೂರಾನೆ?) ಅಥವಾ ಇಂಗ್ಲಿಷಿಗೆ ಋಣಿಯಾಗಿದೆ. ಮಕ್ಕಳ ಮನಸ್ಸನ್ನು ಅರಿಯದೆ. ಅವರಿಗಾಗಿ ಬರೆಯುವುದು ಸಾಧ್ಯವಿಲ್ಲ. ಕಾನ್ವೆಂಟುಗಳು ಹಳ್ಳಿಗಳಿಗೂ ನುಗ್ಗಿರುವ ಕಾಲದಲ್ಲಿ, ಕನ್ನಡ ಶಿಶುಪ್ರಾಸಗಳ ಕಡೆಗೆ ಗಮನ ಹರಿಸಲೇಬೇಕು.

ಮಕ್ಕಳ ಸಾಹಿತ್ಯದ ಪರಂಪರೆಯನ್ನು ಬರವಣಿಗೆಯೊಳಗೆ ಮತ್ತು ಮೌಖಿಕ ಪರಂಪರೆಗಳಲ್ಲಿ ಹುಡುಕಬೇಕು. ಜಾನಪದ ಮೂಲಗಳು ಮತ್ತು ಶಿಷ್ಟಮೂಲಗಳಿಗೆ ತಮ್ಮದೇ ಆದ ಅಜೆಂಡಾಗಳು ಇದ್ದವು, ಇರುತ್ತವೆ. ಒಗಟುಗಳು ಮತ್ತು ಗಾದೆಗಳು ಕೂಡ ಈ ಸೀಮೆಗೆ ಸೇರಿದವೇ. ಒಂದೇ ಕುಟುಂಬದಲ್ಲಿ ತಂದೆ ಕಲಿಸುವ ವಸ್ತುಗಳಿಗೂ ತಾಯಿ ಕೊಡುವ ಲೋಕಕ್ಕೂ ವ್ಯತ್ಯಾಸವಿರುತ್ತದೆ. ನಮ್ಮ ಸಮಾಜದಲ್ಲಿ ವಿಭಿನ್ನ ಹಿನ್ನೆಲೆಗಳಿಂದ ಬಂದಿರುವ ಮಕ್ಕಳು ಬೇರೆಬೇರೆಯದನ್ನೇ ಕಲಿತಿರುತ್ತಾರೆ.

(ಶಾಲೆಯ ಗೋಡೆಗಳಾಚೆ) ಓದು ಬಲ್ಲ ಮನೆಗಳಿಗೆ ‘ಚಂದಮಾಮ’, ‘ಬಾಲಮಿತ್ರ’ಗಳಿದ್ದರೆ ಉಳಿದವರಿಗೆ ಅದೂ ಇಲ್ಲ. ಸಂಸ್ಕೃತ ಶ್ಲೋಕಗಳ ಮೂಲಕ ನಾಲಿಗೆ ಹರಿತ ಮಾಡಿಕೊಂಡಂತೆ, ಜಾನಪದ ಹಾಡುಗಳ ಮೂಲಕ ‘ಕಂಠಶುದ್ಧಿ’ ಮಾಡಿಕೊಳ್ಳುವುದೂ ಉಂಟು. ನಮ್ಮ ಕೂಲಿಮಠಗಳ, ಶಾಲೆಗಳ ರಚನೆಯಲ್ಲಿಯೇ ಸಮಾನತೆ ಇರುವುದಿಲ್ಲ. ಅವರು ಪಡೆಯುವ ಸಾಹಿತ್ಯವೂ ಹಾಗೆಯೇ.

ರಾಜಕುಮಾರ ರಾಜಕುಮಾರಿಯರಾಗಿ ಹುಟ್ಟಿರಬೇಕು ಅಥವಾ ಸಿಂಡ್ರೆಲಾ ಹಾಗೆ ರಾಜಕುಮಾರ ಒಲಿಯಬೇಕು. ಉಳಿದವರ ಗತಿ ಏನು? ಈ ಇಕ್ಕಟ್ಟಿನಲ್ಲಿಯೂ ಮಕ್ಕಳಿಗೆ ಭೀಮ, ಬಕಾಸುರ, ಕುಂಭಕರ್ಣ, ಗಣಪತಿ, ಹನುಮಂತರೇ ಇಷ್ಟವಾಗುತ್ತಾರಲ್ಲ, ಯಾಕೆ? ನೀತಿ-ಧರ್ಮಗಳ ಬೋಧನೆಗೆ ಮಕ್ಕಳು ಬಂಡೇಳುವರೇ ಅಥವಾ ಎರಡೂ ಬೇಕೋ? ಮಕ್ಕಳ ಸಾಹಿತ್ಯದ ಹಳೆಯ ಪರಂಪರೆಯನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಹೇಗೆ ಬದಲಿಸಬೇಕು?
ಪಠ್ಯಪುಸ್ತಕ ಮತ್ತು ಮಕ್ಕಳ ಸಾಹಿತ್ಯಗಳ ಸಂಬಂಧ ಬಹಳ ಸೂಕ್ಷ್ಮವಾದುದು.

ಇಲ್ಲಿ ಮೇಡಂ ಮತ್ತು ಮೇಷ್ಟ್ರುಗಳ ಪಾತ್ರ ಬಹಳ ಮುಖ್ಯ. ಅವರು ಅಕ್ಕಿ, ಬೇಳೆ, ತರಕಾರಿಗಳನ್ನು ರುಚಿಯಾದ ಅಡುಗೆಯಾಗಿ ಬದಲಾಯಿಸುವ ಪಾಕಪ್ರವೀಣರಾಗಬೇಕು. ಬಹಳ ಅಧ್ಯಾಪಕರಿಗೆ ಅಂತಹ ಆಸಕ್ತಿ, ತರಬೇತಿ ಮತ್ತು ಶಕ್ತಿ ಇರುವುದಿಲ್ಲ. ಆಗ ಸಾಹಿತ್ಯ ಪುಸ್ತಕಗಳಲ್ಲಿ ಉಳಿಯುತ್ತದೆ ಇಲ್ಲವೇ ನೀರಸ ಮಾಹಿತಿಯಾಗುತ್ತದೆ. ಪಠ್ಯಪುಸ್ತಕಗಳಲ್ಲಿ ತಿಳಿವಳಿಕೆ ಮತ್ತು ಮನರಂಜನೆಗಳ ಒಡಗೂಡುವಿಕೆ ನಡೆಯಬೇಕು.

ಈಚಿನ ವರ್ಷಗಳಲ್ಲಿ ನರ್ಸರಿ ಮತ್ತು ಪ್ರೈಮರಿ ಶಾಲೆಗಳಲ್ಲಿ ಅಧ್ಯಾಪಕಿಯರೇ ಬಹಳ ಬಹಳ ಜಾಸ್ತಿ. ‘ಮಿಸ್’ಗಳ ಜೊತೆಯಲ್ಲಿ ‘ಸರ್’ಗಳೂ ಕಲಿಸಿದರೆ ಹೆಚ್ಚು ಒಳ್ಳೆಯದೇ? ಯೋಚಿಸಬೇಕು. ಮಕ್ಕಳ ಸಾಹಿತ್ಯವನ್ನು ‘ಬರೆದಿರುವ’ ಮಹಿಳೆಯರು ಬಹಳ ಕಡಿಮೆ. ಯಾಕೆ? ಪಠ್ಯಪುಸ್ತಕಗಳಲ್ಲಿ ನೀತಿಬೋಧೆ, ಉಪದೇಶ ಮತ್ತು ಮಹಾಪುರುಷರ ಕಥನಗಳು ಯಾವ ಹಂತದಲ್ಲಿ ಎಷ್ಟು ಇರಬೇಕು? ಇವೂ ಮುಖ್ಯವಾದ ಪ್ರಶ್ನೆಗಳೇ.

ಸಮಾಜವು ಬದಲಾದಂತೆ, ಮಕ್ಕಳ ಸಾಹಿತ್ಯದ ಆಶಯ ಮತ್ತು ಆಕೃತಿಗಳಲ್ಲಿಯೂ ಬದಲಾವಣೆ ಆಗಬೇಕು. ಸಮಾನತೆ ಮತ್ತು ವಿಧೇಯತೆ ಪರಸ್ಪರ ವಿರುದ್ಧ ಮೌಲ್ಯಗಳಲ್ಲವೇ? ಪಿತೃ, ಮಾತೃ ಮತ್ತು ಆಚಾರ್ಯರು ದೇವರಿಗೆ ಸಮಾನರೆನ್ನುವ ಮಾತು, ಪ್ರಶ್ನೆ ಕೇಳಲಾರದ, ಬದಲಾವಣೆ ತರಲಾರದ, ಅಂಜುಬುರುಕರನ್ನು ಸೃಷ್ಟಿಸಬಾರದು. ಅಲ್ಲವೇ? ದುಷ್ಟ ಸಮಾಜ ಮತ್ತು ಅದು ಸಿದ್ಧಪಡಿಸುವ ದುಷ್ಟ ಶಿಕ್ಷಣವ್ಯವಸ್ಥೆಗಳನ್ನು ಮೀರುವ ಶಕ್ತಿ ನಿಜವಾದ ಕಲೆಗೆ, ಸಾಹಿತ್ಯಕ್ಕೆ, ಮಕ್ಕಳ ಸಾಹಿತ್ಯಕ್ಕೆ ಇರುತ್ತದೆ.

ಅದನ್ನು ಅಳವಡಿಸಿಕೊಳ್ಳುವುದು ಹೇಗೆ ಮತ್ತು ಯಾರು? ಬುದ್ಧ, ಬಸವ, ಗಾಂಧಿಯರ ಬಗ್ಗೆ ಪಾಠಗಳನ್ನು ಸೇರಿಸುವುದು ಒಂದು ಬಗೆ. ಕಲೆಯ ಮಾಂತ್ರಿಕಶಕ್ತಿಯನ್ನು ಬಳಸಿಕೊಳ್ಳುವುದು ಇನ್ನೊಂದು ಬಗೆ. ಒಟ್ಟಾಗಿ ಓದುವ, ಆಡುವ, ಹಾಡುವ, ತಿನ್ನುವ ಕ್ರಿಯೆಯಲ್ಲಿಯೂ ಈ ಶಕ್ತಿ ಅಡಗಿದೆ.

ಸಾಹಸ ಪ್ರವೃತ್ತಿಯನ್ನು ಮೂಡಿಸುವುದು, ಕಲ್ಪನಾಶಕ್ತಿಯನ್ನು ಬೆಳೆಸುವುದು ಮತ್ತು ಲೋಕದ ಬಗೆಗಿನ ತಿಳಿವಳಿಕೆಯನ್ನು ಹೆಚ್ಚಿಸುವುದು ಮಕ್ಕಳ ಸಾಹಿತ್ಯದ ಪ್ರಮುಖ ನೆಲೆಗಳು. ಇವುಗಳ ಹಿಂದಿರುವುದು, ಮಕ್ಕಳಿಗಿರುವ ಕುತೂಹಲವನ್ನು ಮುರುಟಿಹೋಗದಂತೆ ನೋಡಿಕೊಳ್ಳುವ ಬಯಕೆ. ಅದು ‘ಸೆನ್ಸ್ ಆಫ್ ವಂಡರ್’. ಅಲ್ಲಿ ವಿವೇಕ ಇರುತ್ತದೆ, ಹೆದರಿಕೆಯ ಲವಲೇಶವೂ ಇರುವುದಿಲ್ಲ.

ನಾವು ಪಾಶ್ಚಾತ್ಯರಿಂದ ಪಡೆದುಕೊಂಡ ಆಲಿಬಾಬಾ, ಅಲ್ಲಾದೀನ್, ಸಿಂದಾಬಾದ್, ಹವಳದ್ವೀಪ, ಭೂಗರ್ಭಯಾತ್ರೆ, ಟ್ರೆಷರ್ ಐಲ್ಯಾಂಡ್‌ಗಳು ಕೊಟ್ಟ ಲೋಕ ಕೊನೆಯುಸಿರಿನವರೆಗೆ  ನನ್ನ ಬಳಿ ಇರುತ್ತದೆ. ಅಂತೆಯೇ ಕಾರಂತರ ‘ಬಾಲಪ್ರಪಂಚ’ ನನ್ನ ಮನಸ್ಸಿನ, ಕಲ್ಪನೆಯ, ವಿಚಾರಗಳ ಲೊಕಗಳನ್ನು ಬೆಳೆಸಿತು. ಅದೇಕೋ ನಮ್ಮ ಪಂಚತಂತ್ರದ ಕಥೆಗಳು ಮತ್ತು ಈಸೋಪನ ಕಥೆಗಳು ಕಲಿಸಿದ ನೀತಿಗಳು ಕೊಂಚ ಕೆಳನೆಲೆಯವು ಎನ್ನಿಸಿತು.

ಅಲ್ಲಿ ಮಿತ್ರಲಾಭದಂತೆಯೇ ಮಿತ್ರಭೇದವೂ ಮುಖ್ಯ. ರಾಜಕುಮಾರರಿಗೆಂದು ಬರೆದ ಕಥೆಗಳಲ್ಲವೇ! ಟ್ಯಾಗೋರ್ ಮಕ್ಕಳ ಲೋಕವನ್ನು ಹಿರಿಯರಿಗಾಗಿ ಕಟ್ಟಿಕೊಡಲು ಯತ್ನಿಸಿದರು, ಬಂಗಾಳಿಯಲ್ಲಿ ಸತ್ಯಜಿತ್ ರೇ ಮತ್ತು ಕನ್ನಡದಲ್ಲಿ ಎಚ್.ಎಸ್.ವಿ. ಇಂಥ ಕೆಲಸಗಳನ್ನು ಮಾಡಿದ್ದಾರೆ.

ಅನುವಾದಗಳು ಧಂಡಿಯಾಗಿವೆ. ಮಕ್ಕಳಿಗೆಂದೇ ಬರೆಯಲಾಗುವ ಸರಳೀಕೃತ ಆವೃತ್ತಿಗಳ ಬಗ್ಗೆಯೂ ನಾವು ಯೋಚಿಸಬೇಕು. ಮಕ್ಕಳು ನಮಗಿಂತ ಚಿಕ್ಕವರು, ಆದರೆ ನಮಗಿಂತ ದಡ್ಡರೇನೂ ಅಲ್ಲ. ಪದಕೋಶ ಮತ್ತು ಸಂಕೀರ್ಣತೆಗಳ ನೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ಭಾವನೆಗಳ ಪ್ರಬುದ್ಧತೆ ಬರಲು ತಡವಾಗಬಹುದು. ಬರವಣಿಗೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮಕ್ಕಳ ವಯಸ್ಸು, ಪ್ರಾದೇಶಿಕ ಪರಿಸರ ಮತ್ತು ಹಿನ್ನೆಲೆಗಳನ್ನು ಗಮನದಲ್ಲಿಟ್ಟಿಕೊಂಡ ಶಿವರಾಮ ಕಾರಂತರೇ ಇಲ್ಲಿಯೂ ಮಾದರಿ. ‘ಬಾಲಪ್ರಪಂಚ’, ‘ವಿಜ್ಞಾನಪ್ರಪಂಚ’, ‘ನಾಗರಿಕತೆಯ ಹೊಸ್ತಿಲಲ್ಲಿ’... ಒಂದೇ ಎರಡೇ? ಇವುಗಳನ್ನು ಬರೆಯಲು ಆಯಾ ಕ್ಷೇತ್ರಗಳ ವಿದ್ವಾಂಸರು ಮನಸ್ಸು ಮಾಡಬೇಕು, ಸಾಹಿತಿಗಳಲ್ಲ. (ಎರಡೂ ಆಗಿದ್ದ ಬಿ.ಜಿ.ಎಲ್. ಸ್ವಾಮಿಯವರ ನೆನಪು).

‘ಮಕ್ಕಳ ಸಾಹಿತಿ’ ಎಂಬ ಪ್ರತ್ಯೇಕವಾದ ಕೆಟಗರಿಯೊಂದು ಇರಬೇಕೇ ಎನ್ನುವುದು ದೊಡ್ಡ ಪ್ರಶ್ನೆ. ಇಂತಹ ಕೆಲಸವನ್ನು ಮಾಡಿರುವ ಹಿರಿಯರ ಬಗ್ಗೆ ನನಗೆ ಗೌರವವಿದೆ. ಹೊಯ್ಸಳ, ಸಿಸು ಸಂಗಮೇಶರು ಇಂತಹ ಪರಂಪರೆಯಲ್ಲಿ ಮುಖ್ಯರು. ಆದರೆ ಪ್ರತಿಭಾವಂತ ಸಾಹಿತಿಗಳು ಮಕ್ಕಳಿಗೆಂದೇ ಬರೆದಾಗ ಅದರ ರುಚಿಯೇ ಬೇರೆ. ಟಾಲ್ ಸ್ಟಾಯ್, ಟ್ಯಾಗೋರ್, ಮಾರ್ಕ್ ಟ್ವೈನ್ ಮತ್ತು ಕುವೆಂಪು ನೆನಪಿಗೆ ಬರುತ್ತಾರೆ. ಸಾಹಿತಿಗಳು ಭಾಷೆಯ ಗುಟ್ಟುಗಳನ್ನು ಬಲ್ಲವರು. ಕಲ್ಪನೆಯ ಲೋಕವನ್ನು ಕಂಡವರು. ಅವರು ಮನಸ್ಸು ಮಾಡಬೇಕು ಅಷ್ಟೆ. ಎಲ್ಲರಿಗೂ ಆಗುವುದೆಂದಲ್ಲ. ‘ಮಗುತನ’ವನ್ನು ಉಳಿಸಿಕೊಂಡ ಸಾಹಿತಿಗಳಿಗೆ ಇದು ಸಾಧ್ಯ.

ಇಲ್ಲಿಯೇ ಗಮನಿಸಬೇಕಾದ ವಿಷಯ ಮಕ್ಕಳೇ ಬರೆಯುವ ಸಾಹಿತ್ಯದ್ದು. ಅವರು ವಾರಿಗೆಯ ಮಕ್ಕಳಿಗೆಂದು ಬರೆಯುವರೋ ಅಥವಾ ಹಿರಿಯರನ್ನು ಅನುಕರಿಸುವರೋ ಹೇಳುವುದು ಕಷ್ಟ. ಪತ್ರಿಕೆಗಳು ಮಕ್ಕಳಿಗೆ ಚಿತ್ರ ಬರೆಯುವ ಸ್ಪರ್ಧೆ ಮಾಡುತ್ತವೆ. ಆದರೆ, ಮಕ್ಕಳ ಕವಿತೆಗಳ ಸ್ಪರ್ಧೆಯಲ್ಲಿ ಬರೆಯುವವರು ವಯಸ್ಸಾದವರೇ.

ಮಕ್ಕಳಾದಾಗಲೇ ಬರೆದ ‘ಬಾಲ ಪ್ರತಿಭೆ’ಗಳು ಆಮೇಲೆ ಮಾಯವಾಗಿಬಿಡುತ್ತಾರೆಯೇ. ಕಾಲೇಜು ಹಂತದಲ್ಲಿ ಎ.ಆರ್.ಕೃ., ರಾಜರತ್ನಂ, ಶ್ರೀನಿವಾಸರಾಜು ಮುಂತಾದವರು ಬೆಳೆಸಿದ ಗಿಡಗಳ ಬಗ್ಗೆ ನಾವೆಲ್ಲರೂ ಬಲ್ಲೆವು. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಮಕ್ಕಳು ಕನ್ನಡದಲ್ಲಿ ಬರೆಯುವಂತೆ, ಅನುವಾದಿಸುವಂತೆ ಮಾಡುವುದು ಸಾರ್ಥಕವಾದ ಸವಾಲು.

ಮಕ್ಕಳು ಓದುವ ಸಾಹಿತ್ಯದಲ್ಲಿ ಇಂಗ್ಲಿಷ್, ಸಂಸ್ಕೃತ ಮುಂತಾದ ಅನ್ಯ ಭಾಷೆಗಳಿಗೆ ಬಹಿಷ್ಕಾರ ಹಾಕಬೇಕೆಂದು ನನಗೆ ತೋರುವುದಿಲ್ಲ. ಇಲ್ಲಿ ನಾನು ಫ್ಯಾಂಟಮ್ ಮತ್ತು ಹ್ಯಾರಿ ಪಾಟರ್‌ಗಳ ಮಾತು ಹೇಳುತ್ತಿಲ್ಲ. ನಿಜವಾಗಿಯೂ ಒಳ್ಳೆಯ ಮಕ್ಕಳ ಸಾಹಿತ್ಯಕ್ಕೆ ದೇಶ-ಭಾಷೆಗಳ ಗಡಿಯಿಲ್ಲ. ಆದರೆ ಅವುಗಳನ್ನು ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಸಿಕೊಳ್ಳಬೇಕು.

ಮಕ್ಕಳಿಗೆಂದು ವಿಶಿಷ್ಟವಾದ ಪದ್ಯವನ್ನು ಬರೆಯುವುದರಲ್ಲಿ ತೋರಿಸುತ್ತಿರುವ ಆಸಕ್ತಿಯನ್ನು ಗದ್ಯಕ್ಕೆ ತೋರಿಸುತ್ತಿಲ್ಲ. ಇದು ಕೇವಲ ಕತೆ–ಕಾದಂಬರಿಗಳ ಮಾತಲ್ಲ. ಇತರ ಬಗೆಯ ಗದ್ಯವೂ ಅಷ್ಟೇ ಮುಖ್ಯ. ಪತ್ರಿಕೆಗಳ ಮಕ್ಕಳ ಪುರವಣಿಗಳು ಈ ಕೆಲಸ ಮಾಡುತ್ತಿವೆ.

ಅಂತೆಯೇ ಆಕಾಶವಾಣಿಯೂ ಸೇರಿದಂತೆ ಶ್ರವ್ಯ ಮತ್ತು ದೃಶ್ಯಮಾಧ್ಯಮಗಳ ಸಹಯೋಗವು ಸಾಹಿತಿಗಳಿಗೆ ಸಾಧ್ಯವಾಗಬೇಕು. ಹೊಸದಾಗಿ ಬರೆಯುತ್ತಿರುವವರಿಗೆ ಮತ್ತು ಹಳೆಯ ಹಿರಿಯರಿಗೆ. ಇಂತಹ ಕಡೆ ಸಾಹಿತ್ಯ, ಸಂಗೀತ ಮತ್ತು ಅಭಿನಯಗಳ ಸಹಯೋಗ ಇರುತ್ತದೆ. ಇಲ್ಲಿ ಕನ್ನಡ ಉದಾಹರಣೆಗಳನ್ನು ಕೊಟ್ಟಿದ್ದರೂ ಈ ವಿಷಯವು ಎಲ್ಲ ಭಾಷೆಗಳಿಗೂ ಅನ್ವಯಿಸುತ್ತದೆ. ಇದರ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT