ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು: ಎಲ್ಲ ಕಾಲದ ಅಮೃತ

Last Updated 24 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಅವರನ್ನು ಬರಮಾಡಿಕೊಳ್ಳಲು ಒಂದು ದಿನವೇ? ಒಂದು ವಿಶೇಷ ಸಂದರ್ಭದ ಆಸರೆಯಾದರೂ ಇರಬೇಕೆ? ನಮ್ಮನ್ನು ಎಷ್ಟು ಸಾಧ್ಯವೋ ಅಷ್ಟು ಮುಟ್ಟಿ ಮರೆಗೆ ನಿಂತವರಿಗೆ ಏನನ್ನಾದರೂ ತೊಡಿಸಬಹುದೇ? ಆಭರಣವನ್ನೂ ಕರಗಿಸಿಕೊಳ್ಳಬೇಕು ಎಂದಿದ್ದರಲ್ಲವೇ ಅವರು?
 
ಇಂಥವರನ್ನು ಈ ದಿನ, ಇಂತಿಷ್ಟು ವೇಳೆಯಲ್ಲಿ ಇಂತಹ ವರುಷದಲ್ಲಿ ತೀರಿಹೋದರು ಎನ್ನುವರಲ್ಲ, ನಿಜವೇ? ಕಣ್ಣಿಗೆ ಕಾಣಿಸದಿರುವುದು ನಮ್ಮನ್ನು ಸೇರುವುದಿಲ್ಲ ಎಂದೆನ್ನಬಹುದೆ? ಬಹುಳವನ್ನು ತೋರಲು ಕಿರುಬೆರಳಿಗೂ ಕಿರಿದಾದ ಎರಡು ಗುಡ್ಡೆಗಳು ಪ್ರಮಾಣವೇ?

ಇಷ್ಟಕ್ಕೂ ನಾವು ಬರಮಾಡಿಕೊಳ್ಳಬೇಕು ಎಂದಿದ್ದು ಬರಹಗಳಲ್ಲಿ ಮೂಡಿರುವ ಅವರನ್ನು ತಾನೇ? ಅವರು- ಸುಬ್ಬ, ತಿರುಕ, ಜಲಗಾರ, ಗೋಪಾಲ, ಏಕಲವ್ಯ, ಹೂವಯ್ಯ, ಮೂರ್ತಿ, ಗುಬ್ಬಕ್ಕ, ನಿಂಗ, ಮೀನಾಕ್ಷಿ, ಯಶೋಧರೆ, ತಿಂಗಳ ಮಾವ, ಟುವ್ವಿ ಹಕ್ಕಿ, ತೇನೆಹಕ್ಕಿ, ಐತ, ಪೀಂಚಲು, ಗಿರಿಯಣ್ಣ, ಮೋಡಣ್ಣ, ಮಲ್ಲಿಗೆಯಣ್ಣ, ಧನ್ವಂತರಿ... ಎಲ್ಲವೂ ಹೌದಲ್ಲವೇ?

ಕನ್ನಡದ ಲೇಖಕ ತನ್ನ ಮುಖವ ತೋರುವುದು ಬರಹಗಳ ಭರಣಿ ಒಳಗಿಂದಲೇ ಅಲ್ಲವೇ? ತುಂಡಾದ ಎರಡು ಎಳೆಯಂತಹ ದಡಗಳ ನಡುವೆ ಸೇತುವೆಯಾಗುವುದು ಬರಹವೇ.

ಅಂತಹ ಸೇತುವೆ ಕಂಡಾಗ ಕಂಠ ತುಂಬಿ ಬರುತ್ತದೆ; ಮಾತು ಚಿಗಿಯುತ್ತದೆ. ಆಡಲು ಇರುವ ಮೈದಾನದಂತೆ ಅವರ ಬರಹಗಳಿವೆ. ಈ ಮೂಳೆ-ಮಾಂಸದ ತಡಿಕೆ ಅರಳುವುದಕ್ಕೆ ನೆಲೆ ಅಲ್ಲಿದೆ; ಎದೆಬಡಿತದ ಸದ್ದಿಗೂ ಲಯವೊಂದು ದಕ್ಕುವುದು ಅಲ್ಲಿ ನಡೆದಾಗಲೇ.

ಹಾಗೆ ನೋಡಿದರೆ, ಕನ್ನಡದ ವರ್ತಮಾನ ಎಡವಟ್ಟಾಗಿದೆ. ಎಂದೆನಿಸಿದಾಗೆಲ್ಲ, ಕನ್ನಡವನ್ನು ಬಲ್ಲ ನಮ್ಮಂಥವರು ಖಾಯಂ ಆಗಿಯೇ ಕೆಲವರ ಬರಹಗಳ ಬಳಿಗೆ ಹೋಗಿ ಬರುವುದುಂಟು; ಅಲ್ಲಿ ತೋಡಿಕೊಳ್ಳುವವರಿಗೆ ತಾವು ತೆರೆದುಕೊಂಡಿರುವುದು. ತುಂಬಾ ಸಲ ಆ ಬರಹಗಳು ನಮ್ಮನ್ನು ಹತ್ತಿರಕ್ಕೆ ಕರೆದು ಮಾತನಾಡಿಸುವ ಔದಾರ್ಯವನ್ನೂ ತೋರುವುವು. ಆಗಲೂ ನಾಚಿಕೊಂಡರೆ ನಷ್ಟ ನಮಗೆ ಮಾತ್ರವೇ ಇರುವುದು. ಈ ಬಗೆಯ ನಷ್ಟಕ್ಕೆ ಕನ್ನಡದ ತನ್ನವರು ಒಳಗಾಗಬಾರದೆಂದೇ ಕೆ.ವಿ.ಕುವೆಂಪುನವರು ತಮ್ಮ ಬರಹಗಳನ್ನು ಇಲ್ಲಿರಿಸಿದ್ದಾರೆ.

ಏನು ಬಂದು ಏನು ಹೋದರೂ ನಮ್ಮ ಕನ್ನಡದ ಜನಸಮುದಾಯ ಸಂಜೆಗಾಳಿಯ ಹಾಗೆ ಬಂದು ನೆರವಾದವರನ್ನು ಮನದೊಳಗೆ ನೆನೆಸುವುದಿದೆ. ಇವತ್ತಿಗೂ ಕುವೆಂಪು ಅವರ ಬರಹಗಳನ್ನು ಮೇಲಿಂದ ಮೇಲೆ ಓದಬೇಕೆನ್ನಿಸುವುದು ಯಾಕೆಂದರೆ- ಈ ಮನುಷ್ಯ ಜನಕ್ಕಾಗುವ ಕಷ್ಟ-ಸುಖದ ಬಗ್ಗೆ ಎಷ್ಟೆಲ್ಲ ಒದ್ದಾಡಿದ್ದಾರೆ ಎಂದೇ; ಏನೆಲ್ಲವನ್ನು ತನ್ನ ಎದೆಯ ಮೇಲೆ ಹಾಕಿಕೊಂಡಿದ್ದಾರೆ ಎನ್ನಿಸಿಯೇ; ಅಲ್ಲಾಡದೆ ಏಕ ಉರಿಯುವ ನಮ್ಮ ನಡುಮನೆಯ ದೀಪದ ಬತ್ತಿಯನ್ನು ಎತ್ತರಿಸಿದ್ದಾರೆ ಎನ್ನುವ ಸಲುವಾಗಿಯೇ.

ಒಂದು ಮನೆಯ ಹಾಗೆ...
ವಿವಾಹವು ನಡೆಯುವ ಹಾದಿಯೇ ಹೊರತು ಸೇರುವ ಸೆರೆಮನೆಯಲ್ಲ ಎಂದು ಹೇಳಿದವರು ಕುವೆಂಪು. ಈ ಮಾತು ಅವರು ಕಂಡ ಬಾಳನೋಟವನ್ನು ತೋರಿಸುವಂಥದು; ಮುಖತಃ ಇವತ್ತಿಗೂ ಸಂಸಾರದಲ್ಲಿ ಕಂಗೆಟ್ಟವರಿಗೆ, ಬಾಯಾರಿದವರಿಗೆ ಬೇಕಾಗಿರುವುದು. ಹೀಗೆ ಹೇಳುತ್ತಿರುವಾಗ `ಕವಿಮನೆ~ ನೆನಪಾಗುವುದು. ಎಲ್ಲರೂ ಬಲ್ಲಂತೆ ಕುಪ್ಪಳ್ಳಿಯ ಸಮೀಪ `ಕವಿಮನೆ~ ಇದೆ. ಅಪರೂಪವೆನಿಸುವ ಈ ಸ್ಥಳಕ್ಕೆ ಹೋಗಿಬರುವವರ ಕೊರತೆ ಏನಿಲ್ಲ.

ಕವಿಶೈಲವನ್ನು ನೋಡ ಬಯಸುವವರು ಅಲ್ಲಿ ಪ್ರವೇಶ ಪತ್ರ ಪಡೆದು ಹೋಗಬೇಕು. ಆ ಪ್ರವೇಶ ಪತ್ರ ಬಳುಕುತ್ತಿರುವುದಿಲ್ಲ; ಮಡಚಿಡಬೇಕು ಎನ್ನಿಸುವಂತೆಯೂ ಇರುವುದಿಲ್ಲ; ಒಂದು ಸಲ ನೋಡಬೇಕು ಎಂಬಷ್ಟು ನಯವಾಗಿರುತ್ತದೆ, ಎಲೆಯಂತೆ. ಆ ಪತ್ರದ ನಡುಮಧ್ಯೆ ಕುವೆಂಪು, ಹೇಮಾವತಿ ದಂಪತಿಗಳು ಕುಳಿತಿರುವ ಭಾವಚಿತ್ರವಿದೆ. ಅಷ್ಟು ಹತ್ತಿರವೂ ಅಲ್ಲದ, ದೂರವೂ ಅಲ್ಲದ ಹಾಗೆ ಇಬ್ಬರೂ ನಿರುಮ್ಮಳವಾಗಿದ್ದಾರೆ.
 
ಮೊದಲು ಹೇಮಾವತಿಯವರು ಹೇಳಬೇಕಾದ್ದನ್ನು ಮಿಗದಂತೆ ಹೇಳಿ, ಈಗ ಕೇಳಿಸಿಕೊಳ್ಳುವ ಸರದಿಗೆ ಹೊಂದುಕೊಳ್ಳುತ್ತಿದ್ದು ಕುವೆಂಪು ಅವರು ಮತ್ತೇನನ್ನೋ ಹೇಳುತ್ತಿರುವಂತೆ ಆ ಚಿತ್ರವಿದೆ. ಮನೆಯ ಆಚೆಗೆ ಬಂದು ಒಂದು ಮುಷ್ಠಿಯಷ್ಟು ಜಾಗಬಿಟ್ಟು ಕುಳಿತಿರುವ ಈ ಇಬ್ಬರು ಒಂದು ಮನೆಯ ಹಾಗೆ ಕಾಣಿಸಿಕೊಳ್ಳುತ್ತಾರೆ. ಇದು ಕೇವಲ ಭಾವಚಿತ್ರವಾಗದೆ, ಈ ಕಾಲದ ಭಾವದ ಅಭಾವವನ್ನು ಕಡಿಮೆಗೊಳಿಸುವ ಚೈತನ್ಯದ ಧಾರೆಯನ್ನೇ ಕಳುಹಿಸುತ್ತದೆ.

ಸಂಸಾರ ನಡೆಯುವುದು ಒಬ್ಬರಿಂದಲ್ಲ; ಯಾವುದೇ ಹೆಮ್ಮೆಗಳಿಂದಲ್ಲ ಎಂಬುದನ್ನು ಬಲ್ಲ ಕುವೆಂಪು ಸರಳತೆಗೆ ತೆತ್ತುಕೊಳ್ಳುತ್ತಾರೆ. ತಪ್ಪು ಮಾಡಿದೆ ಎನ್ನಿಸಿದಾಗ ಅಷ್ಟೇ ಹಗುರವಾಗಿ ಒಪ್ಪಿಕೊಳ್ಳುತ್ತಾರೆ; ಕ್ಷಮೆ ಕೋರುತ್ತಾರೆ:

ತಾಯ ಚರಣಕಿರಣವೊಂದು
ಕೃಪೆಯೊಳೆನ್ನ ಪೊರೆಯಲೆಂದು
ನಿನ್ನ ರೂಪದಿಂದ ಬಂದು
ಸಲಹುತಿರುವುದೆನ್ನನಿಂದು!
ಮರೆಯುತದನು ಒಮ್ಮೆಯೊಮ್ಮೆ
ಗಂಡನೆಂಬ ಗಂಡುಹೆಮ್ಮೆ
ಮನವ ಮಥಿಸಿ ತಡೆಯಲಮ್ಮೆ:
ಮರ್ತ್ಯನೊಂದು ಮನಃಸ್ಥಿತಿ
ಮತ್ತೆ ಮತ್ತೆ ಈ ವಿಸ್ಮೃತಿ :
ಹೇ ಮಾಸತಿ, ಪ್ರೇಮಾವತಿ,
ಮೃಣ್ಮಯದಲಿ ಚಿನ್ಮಯ ರತಿ,
ಮನ್ನಿಸೆನ್ನ ಭಗವತಿ!

ಈ ಕ್ಷಮಾ ಕವಿತೆಯ ಒಳದನಿಯು, ಒಡೆದ ಮನಸ್ಸುಗಳಿಗೆ, ಎರಡು ಒಲೆ ಉರಿಯುತ್ತಿರುವ ಒಂದೇ ಮನೆಗೆ, ಇದಕ್ಕಿದ್ದಂತೆ ಹೊರಟುನಿಂತವರ ಬಳಿಗೆ ಸೇರಲೆಂದೇ ಇದೆ.

ಸಾಮಾನ್ಯವಾಗಿ ಕಂಡಲ್ಲಿ ಕ್ಷೇಮ ಸಮಾಚಾರವನ್ನೂ ವಿಚಾರಿಸುವವರು ಈಚೆಗೆ ಇನ್ನೊಂದು ಪ್ರಶ್ನೆಯನ್ನು ಹೆಚ್ಚು ಕೇಳುತ್ತಿದ್ದಾರೆ. ನಿಮ್ಮ ಮನೆಯಲ್ಲಿ ಯಾರ ಮಾತು ನಡೆಯುತ್ತದೆ? ಎಂಬುದೇ ಆ ಪ್ರಶ್ನೆ. ಇಂಥದ್ದೇ ಪ್ರಶ್ನೆ ಈ ಹಿಂದೆಯೂ ಕೇಳಿಬರುತ್ತಿದ್ದರೂ, ಈಗಿನ ಹಕ್ಕುದಾರಿಕೆ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿರಲಿಲ್ಲ; ಈಗದು ಬಳಕೆಯಲ್ಲಿದೆ.

ಇದು ಕುಟುಂಬದಲ್ಲಿ ಪ್ರತಿಷ್ಠೆಯ, ಚರ್ಚೆಯ ವಿಷಯವೂ ಆಗುತ್ತಿದೆ. ಈ ಪ್ರತಿಷ್ಠೆಯ ಚಕ್ರಕ್ಕೆ ಸಿಲುಕಿ ಹಲವಾರು ಮನೆಗಳು ಆಘಾತಕ್ಕೆ ಒಳಗಾಗುತ್ತಲೇ ಇವೆ. ಇಂಥ ಪ್ರತಿಷ್ಠೆಗಿಂತಲೂ ಬದುಕು ದೊಡ್ಡದು ಎಂಬುದನ್ನು ಕುವೆಂಪು ಮನವರಿಕೆ ಮಾಡುತ್ತಾರೆ. ಅವರಿಗೆ ಸಂಸಾರದೊಳಗೆ ಯಾರು ಹಿಡಿತ ಸಾಧಿಸಬೇಕೆಂಬುದು ಗೌಣ; ಸಮಯದೊಂದಿಗೆ ಸವಿಯನ್ನು ಹೆಚ್ಚಿಸಿದ ಸತಿಯ ಬಗೆಗೆ ಪ್ರೀತಿ ಸಮೇತವಾಗಿರುವ ವಿನಯ:

ಹಕ್ಕಿರದುಸಿರಿಗೆ ಹಕ್ಕಾದೆ;
ದಿಕ್ಕಿರದುಸಿರಿಗೆ ದಿಕ್ಕಾದೆ.
ಮನೆಬಿಟ್ಟವನಿಗೆ ಮನೆಯಾದೆ;
ಕಣ್‌ಗೆಟ್ಟವನಿಗೆ ಕಣ್ಣಾದೆ;
ಒಲುವೆಯ ಹೆಣ್ಣಾದೆ!
ಸಾವಿನ ಸರಸಕೆ ಬಲಿವೊದರಸೆಗೆ
ಅಮೃತದ ಹಣ್ಣಾದೆ.  
ಇಂಥ ಕುವೆಂಪು ಅವರಿಗೆ ಕನ್ನಡದ ಮನೆಯಷ್ಟೇ ಅಲ್ಲ, ತನ್ನ ಕನ್ನಡದ ನುಡಿಯು ಚೆನ್ನಾಗಿರಬೇಕೆಂಬ ಆಸೆ ಇದೆ.

ಕನ್ನಡ ಸಿದ್ಧವಾದುದಲ್ಲ; ಆಗಬೇಕಾದದ್ದು ಸದ್ಯದ ಕನ್ನಡದ ಸಂದರ್ಭವನ್ನು ನೋಡಿ: ಕನ್ನಡವನ್ನು ಹೇಗಾದರೂ ಸರಿಯೇ ಉಳಿಸಬೇಕೆಂದು ಹೇಳುವವರು ದಿನೇದಿನೇ ಹೆಚ್ಚುತ್ತಿದ್ದಾರೆ. ಹಾಗೆ ಹೇಳುತ್ತಿರುವವರಲ್ಲಿ ಕನ್ನಡಕ್ಕೆ ಎರಗಿರುವ ಅನೇಕ ಸಮಸ್ಯೆಗಳ ಕರಡಿಗೆಗಳಿವೆ.

ಈ ಸಮಸ್ಯೆಗಳ ಎದುರಿಗೆ, ಕನ್ನಡಕ್ಕೆ ಕನ್ನಡದ್ದೇಯಾದ ವಿವೇಚನಾಕ್ರಮವನ್ನು, ಸಾಮಗ್ರಿಯನ್ನು ಕಟ್ಟಿಕೊಳ್ಳುವ ತುರ್ತು ಮುಂಚೂಣಿಯಲ್ಲಿದೆ. ಈ ಪ್ರಕ್ರಿಯೆ ವ್ಯಾಕರಣ, ರಚನೆಗೆ ಸಂಬಂಧಿಸಿದ ಹಾಗೆ ಆಂಶಿಕವಾಗಿಯಾದರೂ ನಡೆಯುತ್ತಿದೆ; ನಡೆಯಲಿ. ಆದರೆ ಈ ಬಗೆಯ ಪಂಡಿತ ವಲಯದ ಕಟ್ಟೋಣದ ಆಚೆಗೂ ಕನ್ನಡಕ್ಕಿರುವ ಧಾರಣಾಶಕ್ತಿಯನ್ನು ಕನ್ನಡ ಜನಸಮುದಾಯದ ಭಾಗವಾಗಿರುವ ಕುವೆಂಪು ಅವರ ಕೃತಿಗಳು ನಿರೂಪಿಸುತ್ತವೆ.
 
ಹೀಗೆ ಹೇಳುವಾಗ, ಮೊದಲಿಗೆ ಕರ್ನಾಟಕದ ವಿಕಾಸವನ್ನು ಕುರಿತು ಚಿಂತಿಸಿರುವ ನೆನ್ನೆಗಳನ್ನು ನೋಡಬೇಕಿದೆ. ಕನ್ನಡವನ್ನು ಕಟ್ಟಿದವರು ಎರಡು ದಾರಿಗಳನ್ನು ತುಳಿದಿದ್ದಾರೆ.
 
ಒಂದು ಕನ್ನಡ ನಾಡಿನ ಆಚಾರ್ಯ ಕಾರ್ಯಕರ್ತ ಆಲೂರು ವೆಂಕಟರಾಯರ ಮಾದರಿ; ಇದನ್ನು `ನಾಡುನೋಡು~ ಮಾದರಿ ಎನ್ನಬೇಕಿದೆ. ಇನ್ನೊಂದು ಕುವೆಂಪು ಮೊದಲಾಗಿ ಇತರ ಕವಿಗಳು ತುಳಿದಿರುವ ಮಾದರಿ; ಇದನ್ನು `ನುಡಿಕೇಳು~ ಮಾದರಿ ಎನ್ನಬೇಕಿದೆ. ಈ ಎರಡು ದಾರಿಗಳು ಕನ್ನಡದವರು ಆರಿಸಿಕೊಂಡಿರುವ ಹಾಗೆ, ಕನ್ನಡಿಗರಿಗೆ ತೋರಿರುವ ದಾರಿಯೂ ಆಗಿದೆ.

ಮೇಲೆ ಸೂಚಿಸಿರುವ ಎರಡು ಮಾದರಿಗಳಲ್ಲಿ ಮೊದಲನೆಯದು, ನಾನು - ನನ್ನದು - ನನ್ನ ಮನೆ ಎನ್ನುವ ಭಾವನೆಯಲ್ಲಿ ಹುಟ್ಟಿಕೊಂಡಿರುವುದು; ಇದು ತನ್ನದು ಎಲ್ಲಿಂದ ಎಲ್ಲಿಯವರೆಗೆ? ಯಾವುದು? ಎಷ್ಟು? ಎಂಬುದನ್ನು ಗೊತ್ತು ಮಾಡಿಕೊಳ್ಳಲು ಯತ್ನಿಸುತ್ತದೆ; ಹಾಗಾಗಿ ಚದರಗಳನ್ನು ಲೆಕ್ಕ ಹಾಕುತ್ತದೆ; ಲೆಕ್ಕ ಹಾಕಿದ ಮೇಲೆಯೇ ಅಲ್ಲಿ ತಂಗಿರುವ ಜನರ ಭಾಷೆ ಸಮೃದ್ಧಿಗೊಳ್ಳಲು ಏನು ಬೇಕು? ಏನು ಮಾಡಬೇಕು? ಎಂದು ಮುಂದಾಗುತ್ತದೆ. ಈ ದಾರಿಗೆ ತನ್ನ ಭಾಷೆಯನ್ನು ಇನ್ಯಾವುದೋ ನುಂಗಿಬಿಡುವುದು ಎಂಬ ಆತಂಕವೂ ಇದೆ.

ಎರಡನೆಯದು, ನಾನು-ನನ್ನದು ನನ್ನ ಮನೆ ಎನ್ನುವ ಭಾವ ಸಂಬಂಧದಲ್ಲಿಯೇ ಇರುತ್ತದೆಯಾದರೂ, ಅಳತೆ ಮಾಡುವುದನ್ನು ಉಲ್ಲಂಘಿಸುತ್ತದೆ. ಈ ದಾರಿಗೆ ಯಾವುದೇ ಆತಂಕವಿರುವುದಿಲ್ಲ. ಇದು ಕನ್ನಡವಿರುವುದೇ ಮೇರೆ ಮೀರುವುದಕ್ಕೆ ಎನ್ನುತ್ತದೆ. ಈ ನಿಲುವು ಮೊದಲನೆಯದಕ್ಕೆ ವಿರೋಧವಲ್ಲ; ಒತ್ತಾಸೆಯೇ ಆಗಿದೆ. ಆದರೆ ಆ ಒತ್ತಾಸೆಯು ಮೂರ್ತ ರೂಪಗಳಲ್ಲಿ ಇರುವುದಿಲ್ಲವಷ್ಟೇ ಎನ್ನುವುದನ್ನು ಕುವೆಂಪು ಅವರ `ಕನ್ನಡ~ ಕವಿತೆ ಕಾಣಿಸುತ್ತದೆ. ಈ ಕವಿತೆ ಕನ್ನಡವನ್ನು ಕೊಂಡಾಡುತ್ತಲೇ ಈ ಒಂದು ಪ್ರಶ್ನೆಯನ್ನು 1946ರಲ್ಲಿ ಕೇಳಿಕೊಂಡಿದೆ.

ಬಾಳುವುದೇತಕೆ? ನುಡಿ ಎಲೆ ಜೀವ:
ಸಿರಿಗನ್ನಡದಲಿ ಕವಿತೆಯ ಹಾಡೆ!
ಸಿರಿಗನ್ನಡದೇಳಿಗೆಯನು ನೋಡೆ:
ಕನ್ನಡ ತಾಯಿಯ ಸೇವೆಯ ಮಾಡೆ!
ಈ ಸಾಲುಗಳು ಮುಖ್ಯವೆನಿಸುವುದು ಯಾಕೆಂದರೆ, ಕನ್ನಡದ ಮೂಲಕ ಅಥವಾ ಕನ್ನಡದಿಂದ ಏನೂ ಸಿಗುವುದಿಲ್ಲ; ಯಾವುದೇ ಬಹುಮಾನವೂ ಪ್ರಾಪ್ತಿಯಾಗುವುದಿಲ್ಲ ಎನ್ನುವುದನ್ನೇ ಕುವೆಂಪು ಅವರು ಹೇಳುತ್ತಾರೆ; ನಾಡು ಕಟ್ಟುವ ಕಟ್ಟಾಳುಗಳಿಗಿಂತ ಕನ್ನಡವನ್ನು ಹಿಂಜರಿಕೆಯಿಲ್ಲದೆ ನುಡಿಯುವವರು ಅವರಿಗೆ ಸಾಕು ಎನ್ನಿಸುತ್ತದೆ.

ಕನ್ನಡವನ್ನು ನೋಡುವುದಕ್ಕೆ (ವ್ಯಾಕರಣ, ರಚನೆಗೆ) ಸರಿ ಕಾಣಿಸುವ ಹಾಗೆ ಮುರಿದು ಕಟ್ಟುತ್ತಿರುವ ಈ ಸಂದರ್ಭದಲ್ಲಿ, ಕನ್ನಡವನ್ನು ಕೇಳ್ವೆಯ ದೆಸೆಯಿಂದ ಹೆಚ್ಚಿಸಬೇಕೆಂದು ಕುವೆಂಪು ಕನಸು ಕಂಡಿದ್ದಾರೆ. ಇಲ್ಲೊಂದು ಪ್ರಶ್ನೆ ಏಳುತ್ತದೆ. ಕುವೆಂಪು ಅವರು ಕನ್ನಡ, ಕರ್ನಾಟಕ, ಪ್ರಾಂತ್ಯದ ಬಗೆಗೂ ಮಾತನಾಡಿದ್ದಾರಲ್ಲ; ಆ ಕುರಿತು ಬರೆದಿದ್ದಾರಲ್ಲ ಎಂಬುದು ಪ್ರಶ್ನೆಯಾಗಿ ಕಾಡುವುದು ಸಹಜವೇ.
 
ಈ ಬಗೆಯ ಉದ್ದೇಶಿತ ಬರಹಗಳು ಮತ್ತು ಭಾಷಣಗಳ ನೆಲೆಯಿಂದ ಲೇಖಕನ ಅಭಿಪ್ರಾಯವನ್ನು ಪಡೆಯುವ ರೂಢಿಯಾದ ಒಂದು ಓದಿನ ಕ್ರಮ ಇದೆ. ಈ ಕ್ರಮವನ್ನು ಬಿಟ್ಟು ಒಟ್ಟು ಕುವೆಂಪು ಅವರ ಬರವಣಿಗೆಯಲ್ಲೇ ಕಾಲಕಾಲಕ್ಕೆ ಆಗಿರುವ ಪಲ್ಲಟವನ್ನು ನೋಡಿದರೆ `ಕನ್ನಡ~ದಂತಹ ಕವಿತೆಯೆಂಬ ಜನಸಮುದಾಯದ ಆಂತರ್ಯ ಅರ್ಥವಾಗುತ್ತದೆ. ಈ ನೋಟದಲ್ಲಿ ಕನ್ನಡ ಭಾಷೆ ಮೊದಲಾಗುತ್ತದೆ; ಆನಂತರ ಕರ್ನಾಟಕದ ಮಾತು ಬರುತ್ತದೆ.

ಕುವೆಂಪು ಅವರ ಬಳಕೆ
ಈ ಹೊತ್ತಿಗೆ ಅಕ್ಷರ ಬಲ್ಲಂತಹ ಎರಡು ವರ್ಗದ ಜನ ಎರಡು ರೀತಿಯಲ್ಲಿ ಕುವೆಂಪು ಅವರನ್ನು ಬಳಸುತ್ತಿದ್ದಾರೆ. ಮೊದಲನೇ ವರ್ಗವು, ಅವರ ಬರಹಗಳೊಂದಿಗೆ ನೇರವಾದ ಒಡನಾಟವನ್ನು ಇರಿಸಿಕೊಂಡಿದೆ. ಈ ಒಡನಾಟದ ಸಲುಗೆಗೆ ಕುವೆಂಪು ಅವರನ್ನು ಉತ್ಸವಮೂರ್ತಿಯಾಗಿ ಮೆರೆಸುವುಕ್ಕಿಂತ, ಅವರ ಬರಹಗಳಲ್ಲಿ ಕಾಣಸಿಗುವ ಬೆಳಕನ್ನು ಹೀರಿಕೊಳ್ಳಲು ಹಂಬಲಿಸುತ್ತದೆ;

ಇಲ್ಲಿ ಕುವೆಂಪು ಅವರ ಬರಹಗಳೊಂದಿಗೆ ಜಗಳವೂ ಸಾಧ್ಯವಾಗುತ್ತದೆ. ಈ ನಿಟ್ಟು ಯಾವುದೇ ಲೇಖಕನನ್ನು ಅನುಸಂಧಾನ ಮಾಡುವುದಕ್ಕೆ ಸರಿಯಾದದ್ದು. ಇಂಥವರಿಂದ ಕನ್ನಡಕ್ಕೆ ಅಪಾಯವಿಲ್ಲ; ಎರಡನೇ ವರ್ಗದಿಂದ ಆ ಅಪಾಯವಿದೆ. ಈ ವರ್ಗ ಹಿಂದೆಯಿಂದಲೂ ಕುವೆಂಪು ಅವರ ಬರಹಗಳಿಂದ ಕಲಿಯಲು ಪ್ರಯತ್ನಿಸಿದ್ದು ಕಡಿಮೆಯೇ;

ಹೆಚ್ಚೆಂದರೆ ಇಲ್ಲಿ ಅವರ ಬರಹಗಳನ್ನು ತೋರಿಸುವುದಕ್ಕೆ ಆಸಕ್ತಿ ಇದೆ. ಹಾಗಾಗಿಯೇ ತಮ್ಮ ಮನೆಯ ಗೋಡೆಯ ಮೇಲೆ, ಕಾರಿನ ಮುಂಬದಿಗೆ, ದ್ವಿಚಕ್ರ ವಾಹನದ ಹಿಂಬದಿಗೆ ಕುವೆಂಪು ಅವರ ಬರಹಗಳನ್ನು ಕತ್ತರಿಸಿ ಹಾಕಿಕೊಳ್ಳುವುದಿದೆ.
 
ಈ ತೋರುಗಾಣಿಕೆ ಇಲ್ಲಿಗೆ ಮುಗಿಯುವುದಿಲ್ಲ. ಕುವೆಂಪು ಅವರನ್ನು ಇಡುಗಂಟಾಗಿಯೇ ನೋಡುತ್ತಾ ಬಂದಿರುವ ಈ ವರ್ಗ, ಅವರ ಕೃತಿಗಳಲ್ಲಿ ಬಳಕೆಯಾಗಿರುವ ಪರಿಕರಗಳನ್ನು ನಿರ್ದಿಷ್ಟ ಕೋಮಿನ ಚೌಕಟ್ಟಿಗೆ ಒಳಪಡಿಸುವ ಉಮೇದಿನಲ್ಲಿದೆ. ಹಾಗಾಗಿಯೇ ಯಾವತ್ತೂ ಇಲ್ಲದ ಸಂಘ, ಸೇವಾ ಸಂಸ್ಥೆಗಳು ಕುವೆಂಪು ಅವರ ಹೆಸರಿನಲ್ಲಿ ಈಗ ಹೆಚ್ಚು ಹುಟ್ಟಿಕೊಳ್ಳುತ್ತಿವೆ.
 
ಇವು ಹಮ್ಮಿಕೊಳ್ಳುವ ವಿಚಾರ ಸಂಕಿರಣ, ಸನ್ಮಾನ ಸಮಾರಂಭ, ಪುಸ್ತಕ ಚರ್ಚೆ, ಮಕ್ಕಳ ಸ್ಪರ್ಧೆ, ರಾಜ್ಯೋತ್ಸವ ಕಾರ್ಯಕ್ರಮ ಯಥಾಪ್ರಕಾರ ಕುವೆಂಪು ಅವರ ಜಾತಿ ಹಿನ್ನೆಲೆಗೆ ಸರಿಹೊಂದುವ ಇಲ್ಲವೇ ಗುಣವಾಚಕದ ಕೊಳದಲ್ಲಿ ಮುಳುಗಿಸಿ ಏಳಿಸುವವರಿಂದ ನೆರವೇರುತ್ತದೆ.

ಈ ರೂಪದಲ್ಲಿ ಜಾತಿಯನ್ನು ಬಲಿಷ್ಠವಾಗಿಸಲು ಮುಂದಾಗುತ್ತಿರುವವರ ಯಾತ್ರೆ ರಾಜ್ಯದ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಖಾಸಗಿ ಕಂಪನಿಗಳ ಒಡೆತನದಲ್ಲಿರುವ ಸಂಸ್ಥೆಗಳ ಕಡೆಗೆ ಹೋಗುತ್ತಿದೆ. ವಿಪರ್ಯಾಸವೆಂದರೆ ಕುವೆಂಪು ಅವರ ಕೃತಿಗಳಲ್ಲಿ ಕಂಡುಬರುವ ಉಕ್ತಿಗಳೇ ಈ ಸಂಘಟನೆಗಳ ಹೆಸರುಗಳಾಗಿರುತ್ತವೆ ಎಂಬುದು.
 
ಇಂಥವು ಹೆಚ್ಚಾಗಿ ಮೈಸೂರು, ಮಂಡ್ಯ, ನಂಜನಗೂಡು, ಹಾಸನ, ಚಾಮರಾಜನಗರದಂತಹ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಪರಿಣಾಮ; ಈಗೀಗ `ಕುವೆಂಪು~ ಹೆಸರಿನಲ್ಲಿ ತಂಡ ಕಟ್ಟಿಕೊಂಡು ಕ್ರಿಕೆಟ್ ಆಡುವವರು ಕೂಡ ತಮಗೆ `ಬೇಕಾದ~ವರ ಹುಡುಕಾಟದಲ್ಲಿದ್ದಾರೆ. `ಕುವೆಂಪು~ ಹೆಸರಿನಲ್ಲಿ ತಲೆಯೆತ್ತಿರುವ ಶಿಕ್ಷಣ ಸಂಸ್ಥೆಗಳು ಪ್ರವೇಶ ಪಡೆಯುವವರಿಂದ ಜಾತಿಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿವೆ. ಇದಕ್ಕೆ ಅಧ್ಯಾಪಕರು, ವಿಶ್ವಾವಿದ್ಯಾನಿಲಯದ ಪ್ರಾಧ್ಯಾಪಕರು ಎಲ್ಲೆಡೆ ಚದುರಿಹೋಗಿರುವ ಕುವೆಂಪು ಅವರ ಆಪ್ತ ಶಿಷ್ಯರು, ವಿದ್ಯಾರ್ಥಿಗಳ ಬೆಂಬಲವೂ ವ್ಯಾಪಕವಾಗಿದೆ. ಹೀಗೆ ದೊಡ್ಡ ಮಂಕರಿಯಲ್ಲಿ ಕುವೆಂಪು ಅವರನ್ನು ಕವುಚಿಹಾಕುವ ಯತ್ನ ನಡೆದಿದೆ.

ಕನ್ನಡದ ವಿವೇಕ
`ಶೂದ್ರತಪಸ್ವಿ~ ನಾಟಕದ ಮೇಲೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ನೀಡಿದ ಅಭಿಪ್ರಾಯಕ್ಕೆ, ಕುವೆಂಪು ಅವರು ಬರೆದ `ಮಾರ್ನುಡಿ~ ಈಗಲೂ ಮುಖ್ಯವೇ. ಕನ್ನಡದಲ್ಲಿ ಸಂವಾದ ಮಾಡುವವರಿಗೆ ಇವರಿಬ್ಬರ ತೂಕಬದ್ಧ ವರ್ತನೆ ಮಾದರಿಯಾಗಿಯೇ ತೋರುತ್ತದೆ. ಮುಖ್ಯವಾಗಿ ಮಾಸ್ತಿ ಅವರಿಗೆ ಕುವೆಂಪು ಅವರು ಪ್ರತಿಕ್ರಿಯೆ ನೀಡಿರುವ ಬರಹದಲ್ಲಿನ ಅಡಿಟಿಪ್ಪಣಿಯನ್ನು ನಾವು ನೋಡಬೇಕು:

ಬ್ರಾಹ್ಮಣೇತರರಲ್ಲಿ ಕೆಲವರು ಕೃತಿಯ ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟುಕೊಡುತ್ತದೆ ಎಂಬ ಅಸತ್ಯವೂ ಅಪ್ರಕೃತವೂ ಅವಿವೇಕವೂ ಆದ ಕಾವ್ಯ ವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಅದನ್ನು ಸ್ತುತಿಸಿದರೆಂದು ಕೇಳಿದ್ದೇನೆ (ಪು.28).

ಮೇಲಿನ ಮಾತುಗಳನ್ನು ಆಲಿಸುವವರಿಗೆ ಈ ಕವಿ ಕನ್ನಡದ ಸೂಕ್ಷ್ಮವಲಯವನ್ನು ಜಾಗೃತ ಮಾಡುತ್ತಿದ್ದಾರೆ ಎನ್ನಿಸುವುದು ನಿಜವೇ. ಈ ವಿವೇಕವನ್ನು ಕನ್ನಡದ ನಮ್ಮ ಲೇಖಕರು ಕಾಲಕ್ಕೆ ತಕ್ಕಂತೆ, ಬೇರೆಬೇರೆ ಸಂದರ್ಭಗಳಲ್ಲಿ, ಭಿನ್ನವಾದ ವಿನ್ಯಾಸಗಳಲ್ಲಿ ಹೇಳುತ್ತಾ ಬಂದಿರುವುದನ್ನೂ ಕಾಣಬಹುದಾಗಿದೆ. ಉದಾಹರಣೆಗೆ: `ಇಂದಿನ ಜೀವನ ಕ್ಲಿಷ್ಟ ಎಂದರೇನು?~ (ಗೋಪಾಲಕೃಷ್ಣ ಅಡಿಗ), `ಕಮೀಟ್‌ಮೆಂಟ್ ಯಾರಿಗೆ?

ಯಾವುದಕ್ಕೆ?~ (ನಿರಂಜನ), `ಸಾಹಿತ್ಯ - ತತ್ವಜ್ಞಾನ ತಾತ್ವಿಕ ನಿಲುವುಗಳು ಇತ್ಯಾದಿ~ (ಡಿ.ಆರ್. ನಾಗರಾಜ್), `ಅಲಕ್ಷ್ಯ ಮತ್ತು ಸಂಸ್ಕೃತಿ ಸ್ಥಿತಿ~ (ಕೆ.ಪಿ.ಪೂರ್ಣಚಂದ್ರ ತೇಜಸ್ವಿ), `ಕನ್ನಡ ಸಾಹಿತ್ಯದಲ್ಲಿ ಪ್ರಧಾನ ಮತ್ತು ಅಧೀನ ಸಂಸ್ಕೃತಿ~ (ಕೆ.ವಿ.ನಾರಾಯಣ), `ಜಾತಿಗಳೇ ಜೈಲಾಗದಿರಿ~ (ಬರಗೂರು ರಾಮಚಂದ್ರಪ್ಪ), `ಓದುವುದು ಎಂದರೆ~ (ರಾಜೇಂದ್ರ ಚೆನ್ನಿ) ಇತ್ಯಾದಿ.

ಇಂತಹ ಬರಹಗಳು ಓದಿನ ಜವಾಬ್ದಾರಿಯನ್ನು ಕುರಿತು ನಿವೇದಿಸುತ್ತವೆ. ಇವುಗಳ ಸಮ್ಮುಖದಲ್ಲಿಯೇ ಕನ್ನಡದ ಸಂವಾದದ ಬಾಗಿಲುಗಳು ಈಗ ಮುಚ್ಚಿಹೋಗಿವೆ.

ಯಾವುದೋ ಕೃತಿಯ ಬಗೆಗೆ ಚರ್ಚೆ ಆಗುತ್ತಿದೆ ಎಂದು ಅನಿಸುವ ಹೊತ್ತಿಗೆ, ಅಲ್ಲಿ ಲೇಖಕನನ್ನು ನಿಂದಿಸುವ, ಖಾಸಗಿ ವಿವರಗಳನ್ನು ಎತ್ತಾಡುವ ಕೆಟ್ಟ ಚಾಳಿ ಈಗ ಸಂಸ್ಕೃತಿ ಚಿಂತನೆಯ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಗೆಯ ಚರ್ಚೆಗಳಲ್ಲಿ ಪಠ್ಯವೇ ನಾಪತ್ತೆ ಆಗಿರುತ್ತದೆ. ಬದಲಾಗಿ ಯಾವುದಾದರೊಂದು ಗುಂಪನ್ನು ಎತ್ತಿಕಟ್ಟುವ ಕೆಲಸ ಸಭೆ ಸೇರುವವರಿಂದ ನಡೆಯುತ್ತದೆ.
 
ವಾದಗಳನ್ನು ಆಶಯಗಳನ್ನು ಮುಂದಕ್ಕೆ ಬಿಟ್ಟುಕೊಂಡು ಕೃತಿಗೆ ಅವಮಾನ ಮಾಡಲಾಗುತ್ತಿದೆ. ಲೇಖಕನ ಹಿನ್ನೆಲೆಯೇ ಕೃತಿಯ ಮೌಲ್ಯವನ್ನು ನಿರ್ಧರಿಸುವುದಕ್ಕೆ ಇರುವ ಏಕೈಕ ಮಾನದಂಡ. ಕನ್ನಡಕ್ಕೆ ಪ್ರಶಸ್ತಿ ಬಂದರೆ ವೈದಿಕರಲ್ಲದವರಿಗೆ ಬರಬೇಕು ಎಂದು ಹೇಳುವವರೇ ಸಂಸ್ಕೃತಿ ಚಿಂತಕರಾಗಿದ್ದಾರೆ.

ಈ ನಡವಳಿಕೆಯಿಂದ ಏನನ್ನಾದರೂ ಕಲಿಯಲು ಸಾಧ್ಯವೇ? ಇವುಗಳನ್ನು ಮಾದರಿ ಎನ್ನಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದು ಹೊಸ ತಲೆಮಾರಿನ ಕೆಲವರಿಗಾದರೂ ಗೊತ್ತಾಗುತ್ತಿದೆ.
 
ಈ ಕಷ್ಟ ಕಾಲದಲ್ಲಿ ನಮ್ಮನ್ನು ಕೈಹಿಡಿಯಬಲ್ಲಂತವು ಮತ್ತೆ ಕುವೆಂಪುನವರ ಬರಹಗಳೇ. ಲಂಕೇಶರಿಗೆ ಒಂದು ಕಡೆ ಕುವೆಂಪು ಅವರು ಹೇಳಿದ ಮಾತೊಂದು ಇಲ್ಲಿ ನೆನಪಾಗುತ್ತಿದೆ- `ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ~. ಈ ವಿವೇಕವೇ ನಮ್ಮ ನಾಳೆಗಳ ಕಾಯಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT