ಇನ್ನೂ ನಿರ್ಮಾಣ ಹಂತದಲ್ಲಿದ್ದ ಗೋಲ್ಡನ್ ಅಪಾರ್ಟ್ಮೆಂಟ್ ಎಂಬ ಹೆಸರಿನ ಬಹುಮಹಡಿ ಕಟ್ಟಡ ಆಕೆಯಂಥ ನೂರಾರು ಮಂದಿಗೆ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಿತ್ತು. ಕಟ್ಟಡದ ಪ್ರತಿಮಹಡಿಯಲ್ಲೂ ಜನವೋ ಜನ. ಯಾವ ಊರಿನವರೋ, ಯಾವ ಜಾತಿಯವರೋ, ಯಾವ ಭಾಷೆಯವರೋ! ಸಂಬಂಧಗಳೂ ಅಷ್ಟೆ, ಹೆಂಡಂದಿರಿಗೆ ಗಂಡಂದಿರು ಯಾರೋ, ಗಂಡಂದಿರಿಗೆ ಹೆಂಡಂದಿರು ಯಾರೋ, ಯಾವ್ಯಾವ ಮಕ್ಕಳು ಯಾರಯಾರವೋ! ಅವರ ಭಾಷೆ ಒಂದಲ್ಲ ಎರಡಲ್ಲ ಹತ್ತಾರು, ನಾನಾ ಭಾಷೆಗಳಲ್ಲಿ ತರಾವರಿ ಸಂಬಂಧವಾಚಕಗಳು, ಆ ಎಲ್ಲ ಸಂಬಂಧಗಳಿಗಿಂತ ತಕ್ಷಣದ ಬದುಕನ್ನು ಬದುಕುವುದು ಅವರವರಿಗೆ ಮುಖ್ಯ. ವಾಸಸ್ಥಳವೋ, ಇವತ್ತು ಈ ಕಟ್ಟಡವೆಂದರೆ ನಾಳೆ ಇನ್ನೊಂದು ಅಪೂರ್ಣ ಕಟ್ಟಡ. ಇರು ಎಂದರೆ ಇರುವುದು, ಓಡು ಎಂದರೆ ಗಂಟುಮೂಟೆ ಕಟ್ಟಿಕೊಂಡು ಓಡುವುದು ಅನಿವಾರ್ಯ. ಅವರು ಮಲಗಿರುವುದು ಕಡಿಮೆ, ಎಚ್ಚರಿರುವುದೇ ಹೆಚ್ಚು, ಅವರೆಲ್ಲರ ದಿನಚರಿಯೋ!

ಅದೂ ಅವರಿವರನ್ನು ಸ್ಮರಿಸಿಕೊಳ್ಳುತ್ತ, ಯಾವುದಾದರೊಂದು ನೆನಪನ್ನು ಹಾಡಾಗಿ ಪರಿವರ್ತಿಸಿ ಹಾಡುತ್ತ, ಇಲ್ಲವೆ ಅವರಿವರೊಂದಿಗೆ ವಿನಾಕಾರಣ ಜಗಳ ತೆಗೆಯುತ್ತ, ಪುನಃ ಬೆಳಗಿಗೆ ಪೂರ್ವದಲ್ಲಿ ಮುಖ್ಯವಾಗಿ ಹೆಂಗಸರನ್ನೂ ಮಕ್ಕಳನ್ನೂ ಎಬ್ಬಿಸಿ ವಿಸರ್ಜನಾಕಾರ್ಯಗಳಿಗೆ ಅಣಿಗೊಳಿಸುತ್ತ, ಮೂರುಕಲ್ಲುಗಳನ್ನು ಟೆಂಪೊರೊರಿ ಒಲೆಗಳನ್ನೂಡುತ್ತ, ಬೀದಿಬೀದಿಗಳಲ್ಲಿಂದಲೋ, ಅಂಗಡಿಮುಂಗಟ್ಟುಗಳಿಂದಲೋ ಕಸರವದಿ ಇತ್ಯಾದಿ ಉರುವಲು ತಂದು ಸಂಗ್ರಹಿಸುತ್ತ, ಬೆಂಕಿ ರಚಿಸುತ್ತ, ಅಡುಗೆ ಮಾಡುತ್ತ, ಮಾಡಿಸುತ್ತ, ಕಿವಿ ಸಂಧುಗಳಿಂದ ಕೊರೆಬೀಡಿಚುಟ್ಟ ತೆಗೆದು ಸೇದುತ್ತ, ಬೀದಿನಲ್ಲಿಗಳ ಸಹಾಯದಿಂದ ಕಫ ಕಕ್ಕುತ್ತ, ಮೈಗೆ ನೀರು ಸುರಿದುಕೊಳ್ಳತ್ತ, ಮೈಲಿಗೆ ಕಳಚುತ್ತ, ಮಡಿಯಾಗುತ್ತ, ಗುಂಪುಗುಂಪಾಗಿ ಕೂತು ತಂಗಳನ್ನೋ ಅರೆಬೆಂದ ಆಹಾರವನ್ನೋ ಭುಂಜಿಸುತ್ತ, ನಾಲ್ದೆಸೆಗೆ ಕೇಳಿಸುವಂತೆ ಡೇಗುತ್ತ, ಅಂದಿನ ಬದುಕಿಗೆ ಅಣಿಯಾಗುತ್ತ... ಆಗಲೇ ಎಂಟಾಯಿತಲೇ ಒಂಬತ್ತಾಯಿತಲೇ ಎಂದು ಸಮಯಪ್ರಜ್ಞೆ ಮೆರೆಯುತ್ತ, ಗಟ್ಟುಳ್ಳ ಹೆಂಡರು ಮಕ್ಕಳನ್ನು ಬೆನ್ನಹಿಂದೆ ಕಟ್ಟಿಕೊಂಡು ಅಂಡಾವರನ ಓಡುತ್ತ, ತಲುಪಿ ಅಪೂರ್ಣ ಕಟ್ಟಡಗಳನ್ನು ಪೂರ್ಣಗೊಳಿಸಲು...

ಅವತ್ತು ಇದೇ ಆಯಿತು, ನೋಡುನೋಡುತ್ತಿದ್ದಂತೆ ಆ ಕಟ್ಟಡದ ಎರಡನೇ ಮೂರನೇ ಮಹಡಿ ಇದ್ದಕ್ಕಿದ್ದಂತೆ ನಿರ್ಮಾನುಷಗೊಂಡವು, ಮಾನವ ತ್ಯಾಜ್ಯವಸ್ತುಗಳು ಮಾತ್ರ ಅಸಹಾಯಕತೆಯಿಂದ ಉಳಿದವು. ಕೆಲವು ಹೊರಗಡೆ, ಇನ್ನೂ ಕೆಲವು ಒಳಗಡೆ. ಅಲ್ಲೊಂದಿಲ್ಲೊಂದೆಂಬಂತೆ, ಲಚ್ಚುಮಿ ಮೊಲೆಗಂಟಿದ್ದ ತನ್ನ ಕರುಳಕುಡಿಯನ್ನವುಚಿಕೊಂಡು ಕೆಳಕ್ಕಿಳಿದು ಬಂದಳು, ಗರಹೊಡೆದಿದ್ದ ಎರಡನೆ ಮಹಡಿಯಲ್ಲಿರಲು ಧೈರ್ಯ ಸಾಲದೆ. ನಾಳೆ ಏನಾದ್ರೂ ಕೂಸ್ನ ಬೆನ್ನಿಗ್ ಕಟ್ಕೊಂಡ್ ಬಂದ್ರೆ ಕೆಲಸಕ್ ಕರ್ಕೊಳ್ಳಲ್ಲ ಎಂದು ಮೇಸ್ತ್ರಿ ಮುರುಗನ್ ಹೇಳಿದ ನಿಷ್ಠುರ ಮಾತು ನೆನಪಾದೊಡನೆ ಅಲುಮೇಲಮ್ಮನ ಎದೆ ಬಡಿತ ಹೆಚ್ಚಿತು. ಮೊಲೆಯಲ್ಲಿ ಅಳಿದುಳಿದಿದ್ದ ಹಾಲನ್ನು ತನ್ನ ವಸಡುಗಳ ಮೂಲಕ ಕೊಳ್ಳೆ ಹೊಡೆಯುತ್ತಿದ್ದ ಕೂಸಿನ ಕಡೆ ನೋಡಿದಳು. ಮೈಬಣ್ಣ ಕಪ್ಪಿದ್ದರೂ ಮಿರಿಮಿರಿ ಮಿಂಚುತ್ತಿತ್ತು, ನೆತ್ತಿಯ ಮೇಲೆ ರೇಶ್ಮಿ ನುಣುಪಿನ ಎಳೆಗೂದಲು, ದೇಹವೋ ಬಡಕಲು, ಇನ್ನೂ ಹಸಿ ಇರುವ ಹೊಕ್ಕಳು, ಕಡ್ಡಿಗಾತ್ರದ ಕೈಕಾಲುಗಳು, ತನ್ನ ಹಳೆಯ ಸೀರೆಯ ತುಂಡನ್ನೇ ಕಾಚವನ್ನಾಗಿಸಿ ಅದರ ತಿಕಭಾಗದ ಮಾನ ರಕ್ಷಿಸಿದ್ದಳು.

ಅದರ ಮೈಯನ್ನು ನೇವರಿಸಲು ಪ್ರಯತ್ನಿಸಿ ಬೊಬ್ಬೆಗಳಿದ್ದ ತನ್ನ ಒರಟುಕೈಗಳನ್ನು ಒಡನೆಯೇ ಉಪಸಂಹರಿಸಿಕೊಂಡಳು. ಪಳನಿಚಾಮಿ ನೆನಪಾಗಿ ತನ್ನ ಮೊಲೆಯಿಂದ ಬೇರ್ಪಡಿಸಿದ್ದೂ, ಅದನ್ನು ತನ್ನ ತೊಡೆಯ ಮೇಲಿರಿಸಿಕೊಂಡದ್ದೂ, ಒಡನೆಯೇ ಅದನ್ನು ಮರಳ ಮೇಲೆ ಉರುಳಿಬಿಟ್ಟದ್ದೂ, ಕೂಡಲೆ ಅಯ್ಯೋ ನನ ಕಂದಾ ಎಂದು ಉದ್ಗರಿಸುತ್ತ ಎತ್ತಿಕೊಂಡದ್ದಾಗಲೀ! ಅಳುತ್ತಿದ್ದ ಅದರ ಬಾಯಿಗೆ ತನ್ನಿನ್ನೊಂದು ಮೊಲೆ ಗುಂಡಿಯನ್ನಿರಿಸಿದಳಲ್ಲದೆ ತಲೆ ಎತ್ತಿ ನೋಡಿದಳು. ಇನ್ನೂ ನಿರ್ಮಾಣ ಹಂತದಲ್ಲಿರುವ ಗಗನಚುಂಬಿ ಕಟ್ಟಡಗಳು ತನ್ನ ಸುತ್ತಮುತ್ತ, ಕಾರ್ಯನಿರತವಾಗಿರುವ ಕ್ರೇನುಗಳು, ಜೆಸಿಬಿ ಯಂತ್ರಗಳು, ಉಸಿರು ಬಿಗಿಹಿಡಿದು ಬಿದಿರ ನಿಚ್ಚಣಿಕೆಯನ್ನು ಏರಿ ಇಳಿಯುತ್ತಿರುವ ನೂರಾರು ಕೆಲಸಗಾರರು, ಆಕಾಶದ ತುಟ್ಟತುದಿಯಲ್ಲಿ ರೆಕ್ಕೆಗಳನ್ನರಳಿಸಿ ಗಸ್ತು ತಿರುಗುತ್ತಿರುವ ಅಸಂಖ್ಯಾತ ಪಕ್ಷಿಗಳು, ಅದರಾಚೆ ಕೆಂಡಸದೃಶ ಬಿಸಿಲು ಕಕ್ಕುತ್ತಿರುವ ಸೂರ್ಯ.

ತನ್ನ ಬಾಯಿಯಲ್ಲಿದ್ದ ಶುಷ್ಕಮೊಲೆಯ ಗುಂಡಿಗಳನ್ನು ಜಿಬುಕೀ ಜಿಬುಕಿ ನಿತ್ರಾಣಗೊಂಡ ಕೂಸು ಅಳಲಾರಂಭಿಸಿತು. ಅಳುತ್ತಿರುವುದು ತನ್ನ ಕೂಸು ಮಾತ್ರವಲ್ಲ, ಇತರೇ ತಾಯಂದಿರ ಕೂಸುಗಳು ಸಹ. ಗಂಡಂದಿರು ಕೆಲಸಕ್ಕೆ ಹೋಗಿದ್ದ ಕಾರಣಕ್ಕೆ ಅವರೆಲ್ಲ ನಿರಮ್ಮಳವಾಗಿದ್ದರು. ಆದರೆ ಗಂಡಂದಿರ ಸೌಭಾಗ್ಯ ಲಕ್ಷ್ಮಿಗಿರಲಿಲ್ಲ, ಎಲ್ಲೋ ಪರಿಚಿತನಾಗಿ ಯಾವುದೋ ಅಪಾರ್ಟ್ಮೆಂಟಿಗೆ ಕರೆದೊಯ್ದು, ಇನ್ಯಾವುದೋ ಅಪಾರ್ಟ್ಮೆಂಟಿನಲ್ಲಿ ತನ್ನನ್ನು ಬಸುರು ಮಾಡಿ ಮತ್ತಿನ್ಯಾವುದೋ ಅಪಾರ್ಟ್ಮೆಂಟಿನಲ್ಲಿ ಪಳನಿಚಾಮಿ ನಾಪತ್ತೆಯಾಗಿದ್ದ, ಅದೂ ಪುನಃ ಬರುವುದಾಗಿ ನಂಬಿಸಿ. ಅವನ ಬರುವಿಕೆಯನ್ನು ಕಾಯುತ್ತಲೇ ತಾನು ಕಟ್ಟಡಗಳಿಂದ ಕಟ್ಟಡಗಳಿಗೆ ಅಲೆದಾಡಿ ಕೊನೆಗೆ ಗೋಲ್ಡನ್ ಅಪಾರ್ಟ್ಮೆಂಟ್ ಸೇರಿಕೊಂಡಿರುವಳು.

ಕೆಲವು ತಿಂಗಳ ಹಿಂದೆ ತನ್ನ ತುಂಬುಗರ್ಭ ತನ್ನ ಹೊಟ್ಟೆಗೆ ಕಲ್ಲು ಹಾಕಿರಲಿಲ್ಲ, ಆದರೆ ಉಡಿಯಲ್ಲಿರುವ ಕೂಸು ತನ್ನ ಹೊಟ್ಟೆಗೆ ಕಲ್ಲು ಹಾಕುವುದೆಂದರೆ! ಪುನಃ ಅದನ್ನು ಶಪಿಸುತ್ತ ಸುಡುವ ಮರಳ ಮೇಲೆ ಉರುಳಿಬಿಡುವುದು, ಪುನಃ ಅಯ್ಯೋ ನನ ಕಂದಾ ಎಂದು ಉದ್ಗರಿಸುತ್ತ ಅದನ್ನು ಬರಸೆಳೆದು ಅಪ್ಪಿಕೊಳ್ಳುವುದು.. ಹೀಗೇ ಮಾಡಿ ರೆಟ್ಟೆ ಸೋತಳು. ಮೇಲೆ ಕೆಳಗೆ ಅಸಹಾಯಕತೆಯಿಂದ ನೋಡುತ್ತ ಕೂತಭಂಗಿಗಳನ್ನು ಬದಲಾಯಿಸುತ್ತ ಹೋದಳು. ತಲೆಗೆ ತನ್ನೆರಡೂ ಕೈಗಳನ್ನೊತ್ತಿ ತನ್ನ ಅಳಿದುಳಿದ ಸಂತಾನವನ್ನು ನೆನಪಿಸಿಕೊಳ್ಳುತ್ತ, ಅವುಗಳನ್ನೊಂದೊಂದಾಗಿ ಶಪಿಸುತ್ತ ಬಸವಳಿದಳು. ಖಡಾಖಂಡಿತ ಹೇಳುವುದಾದರೆ ತನಗಾ ಬಸಿರು, ತನಗೀ ಕೂಸು ಬೇಕಿರಲಿಲ್ಲ. ಆದರೇನು ಗತಿ ಎಂದು ಪಳನಿಚಾಮಿಯನ್ನೂ, ಅವನ ಸಂಭೋಗವನ್ನೂ ನಿರಾಕರಿಸಿದ್ದಳು.

ನಿನ್ನ ಹಳೆಮಿಂಡರಂತೆ ನಾನಲ್ಲ ಲಕ್ಷ್ಮೀ, ನನ್ನನ್ನು ಹೊಸಗಂಡನೆಂದೇ ಭಾವಿಸಿ ಸಹಕರಿಸು ಎಂದು ಪರಿಪರಿಯಿಂದ ಹೇಳಿ ಅವನು ತನ್ನನ್ನು ನಂಬಿಸಿದ್ದ. ಅವನನ್ನು ತನಗೆ ಜೋಡಿಸಿದ್ದ ಅಲುಮೇಲಮ್ಮಜ್ಜಿ ‘ಇಂಥ ಪಟ್ಟಣದಾಗ ನಿನ್ನಂಥ ಒಂಟಿ ಹೆಂಗ್ಸು ಗಂಡಸಿನ ಆಸರೆ ಇಲ್ದೆ ಹೆಂಗ್ ಬದುಕ್ತಿಯವ್ವಾ, ಅದಲ್ದೆ ನಿನ್ನನ್ನ ಕಣ್ಣಗೊಂಬಿಯಾಂಗ ನೋಡಿಕೊಳ್ತಾನೆ, ನನ್ ಮಾತನ ನಂಬು, ನೀವಿಬ್ರೂ ಗಂಡ ಹೆಂಡತೀರಂಗ್ ಬದುಕೋದನ ನಾನು ಕಣ್ತುಂಬ ನೋಡ್ಬೇಕು’ ಎಂದು ಪರಿಪರಿಯಿಂದ ಹೇಳಿ ತನ್ನನ್ನು ನಂಬಿಸಿತ್ತು. ವೆಲ್ಲೂರು ಕಡೆಯ ಚಾಮಿ ಮಾನವ ಕಳ್ಳಸಾಗಾಣಿಕೆಯಲ್ಲಿ ನಿಸ್ಸೀಮನಿದ್ದನಂತೆ, ಕೇರಳ ತಮಿಳ್ನಾಡು ಆಂಧ್ರದೇಶಗಳ ಬರಪೀಡಿತ ಪ್ರದೇಶಗಳಿಂದ ಕರೆತಂದು ಕೂಲಿಯಾಳುಗಳಿಂದಲೂ, ಮೇಸ್ತ್ರಿಗಳಿಂದಲೂ, ರಿಯಲ್ ಎಸ್ಟೇಟ್ ಮಾಲಕರಿಂದಲೂ ಹೇರಳ ಕಮಿಷನ್ ಪಡೆಯುತ್ತಿದ್ದರೂ ಚಿಲ್ಲರೆಕಾಸಿಗಾಗಿ ತನ್ನನ್ನು ಪೀಡಿಸುತ್ತಿದ್ದ.

ತನ್ನೊಂದು ಹೊಟ್ಟೆತುಂಬಿಸಿಕೊಳ್ಳುವುದೇ ದುಸ್ತರ, ಇನ್ನು ಅವನ ಕುಡಿತಕ್ಕೆ ಜೂಜಿಗೆ, ಕೆಲವು ಅಪಾರ್ಟ್ಮೆಂಟ್ಗಳಲ್ಲಿರುವ ಅವನ ಪ್ರೇಯಸಿಯರ ಪಾಡಾಖರ್ಚಿಗೆ ಕೊಡಲೆಲ್ಲಿ ಸಾಧ್ಯ! ತನ್ನ ದೇಹ ಪೀಚಲುಗೊಳ್ಳದಿದ್ದಲ್ಲಿ, ತಾನು ತನ್ನ ನಲವತ್ತರ ವಯಸ್ಸಿನಲ್ಲೂ ಬಸಿರಾಗದಿದ್ದಲ್ಲಿ ಆತ ತನ್ನೊಂದಿಗೂ ತಾನು ಅವನೊಂದಿಗೂ ಹೊಂದಿಕೊಂಡು ದಿನಗಳನ್ನು ದೂಡಬಹುದಿತ್ತು. ತಲೆಗೆ ಸುತ್ತುಬಂದು ಜೋಲಿತಪ್ಪಿ ತಾನು ಗೋಲ್ಡನ್ ಅಪಾರ್ಟ್ಮೆಂಟ್ನ ಏಳನೇ ಮಹಡಿಯಿಂದ ಕೆಳಕ್ಕುರುಳಿದ್ದಲ್ಲಿ ಭ್ರೂಣದೊಂದಿಗೆ ತಾನೂ ತನ್ನೊಂದಿಗೆ ಭ್ರೂಣವೂ! ಆದರೆ ವಿಧಿ ಮೇಸ್ತ್ರಿ ಪರಶುರಾಮನ ಮೂಲಕ ತನ್ನನ್ನು ರಕ್ಷಿಸಿತು. ಗರ್ಭಪಾತ ಮಾಡಿಸಿಕೊಂಡಲ್ಲಿ ಕೂಲಿಕೆಲಸ ಸುಸೂತ್ರವೆಂದು ಅವನೇ ಸಲಹೆ ನೀಡಿದ,
ಅದಕ್ಕೆಂದೇ ಲಕ್ಷ್ಮಿ ಸರ್ಕಾರಿ ದವಾಖಾನೆಗಳಿಗೆ ಅಲೆದಳು, ಆದರೆ ಧೈರ್ಯ ಸಾಲಲಿಲ್ಲ. ಬಸಿರಿಳಿಸಿಕೊಂಡರೆಲ್ಲಿ ತನ್ನ ದೇಹದಲ್ಲಿ ಅಳಿದುಳಿದಿರುವ ಮಾಂಸಖಂಡಗಳು ಪರಪುರುಷರನ್ನಾಕರ್ಷಿಸುವವೋ, ತನ್ನ ಕೂಲಿನಾಲಿಗೆಲ್ಲಿ ಸಂಚಕಾರ ಒದಗುವುದೋ ಎಂಬ ಮುಂಜಾಗ್ರತೆಯಿಂದ. ತನ್ನ ಗರ್ಭ ಏಳರ ಉಚ್ಛ್ರಾಯ ಸ್ಥಿತಿ ತಲುಪಿದಾಗ ಚಾಮಿ ಕಾಣೆಯಾದ.

ಇಂದಿರಾನಗರದ ಫಾರ್ಚ್ಯೂನ್ ಅಪಾರ್ಟ್ಮೆಂಟ್ ನೆಲಕ್ಕುರುಳಿದ ದುರಂತದಲ್ಲಿ ಅವನು ದುರ್ಮರಣಕ್ಕೀಡಾಗಿರುವನೆಂದು ಒಬ್ಬ ಹೇಳಿದರೆ, ಇನ್ನೊಬ್ಬನ ಊಹೆಯಂತೆ ಅವನು ಪೆನುಗೊಂಡೆ ಸಮೀಪ ವಿನಾಕಾರಣ ಕೊಲೆಯಾಗಿರುವ ವ್ಯಕ್ತಿ. ಹೀಗೆ ಹಬ್ಬಿದ ವದಂತಿಗಳಿಗೂ ತನಗೂ ಸಂಬಂಧವಿಲ್ಲವೆನ್ನುವಂತೆ ತನ್ನ ಹಾಗೂ ತನ್ನ ಗರ್ಭವನ್ನೂ ಪೊರೆಯಲೆಂದು ಗೋಲ್ಡನ್ ಅಪಾರ್ಟ್ಮೆಂಟ್ ಇದ್ದ ಕೋರಮಂಗಲದಿಂದ ಮೆಜೆಸ್ಟಿಕ್ಕು ಇರುವಲ್ಲಿಗೆ ಹೋಗುವುದು ಬರುವುದು ಮಾಡತೊಡಗಿದಳು. ತನ್ನ ತುಂಬುಗರ್ಭ ನೋಡಿದವರು ಒಂದು ಕೊಡುವಲ್ಲಿ ಎರಡು ಕೊಟ್ಟರು. ಭಿಕ್ಷಾಟನೆ ತನ್ನ ಘನತೆಯನ್ನು ಹೆಚ್ಚಿಸಿತೇ ಹೊರತು ಕುಂದಿಸಲಿಲ್ಲ. ದಿನ ತುಂಬಲಾರಂಭಿಸಿದಂತೆ ಆತಂಕಕ್ಕೊಳಗಾದಳು, ಹೆರಿಗೆ ಕ್ಲಿಷ್ಟಕರವಾಗಿ ತನ್ನನ್ನೂ ತನ್ನ ಕೂಸನ್ನೂ ಅಕಾಲಮರಣಕ್ಕೆ ತುತ್ತಾಗಿಸು ಎಂದು ಮೊರೆ ಇಟ್ಟಳು. ಆದರೆ ಕರುಣಾಮಯಿ ದೇವರು ಅಚ್ಚಮ್ಮನ ವೇಷದಲ್ಲಿ ಪ್ರತ್ಯಕ್ಷನಾದ. ಆಕೆಯೂ ವೃದ್ಧೆಯಾಗಿದ್ದ ಕಾರಣಕ್ಕೆ ಭಿಕ್ಷುಕಿಯೇ, ತನ್ನವರಿಂದ ಪರಿತ್ಯಕ್ತಳೇ, ‘ಅಯ್ಯೋ ಹುಚ್ಚವ್ವಾ ದೇವ್ರು ಹುಟ್ಟಿಸಿರೋದು ಸಾಯೋದಕ್ಕಲ್ಲ ತಾಯಿ, ಬದುಕ್ಲಿಕ್ಕೆ’ ಎಂದು ಹೇಳುತ್ತಲೇ ಅಣಿಯಾದಳು. ಹಳೆಸೀರೆಗಳ ಮರೆಯಲ್ಲಿ ಹೆರಿಗೆ ಮಾಡಿಸಿದಳು, ಮತ್ತದೇ ಗಂಡುಕೂಸು! ಮತ್ತೆ ತಾನು ಬಾಣಂತಿ! ‘ಬಾಣಂತಿ ಅಂದ್ರ ದೇವರಿದ್ದಂಗೆ’ ಎಂದು ಅಚ್ಚಮ್ಮ ಹೇಳಿದ ಪರಿಣಾಮವಾಗಿ ಗೋಲ್ಡನ್ ಅಪಾರ್ಟ್ಮೆಂಟಿನ ಮೂರನೆ ಮಹಡಿಯಲ್ಲಿದ್ದ ಕಟ್ಟಡಕಾರ್ಮಿಕರು ತುತ್ತುಗಳನ್ನು ಹಂಚಿಕೊಳ್ಳುವುದು ಎಲ್ಲಿಯವರೆಗೆ ಸಾಧ್ಯ! ಎರಡು ಮೂರು ತಿಂಗಳು ಬಳಿಕ.

‘ನಾನ್ ಹೇಳ್ತಿರೋದು ಪಾಪಾಂತ ಗೊತ್ತು ತಾಯಿ, ಹಸಿಹಸಿ ಬಾಣಂತಿ ಕೈಲಿ ಕೆಲ್ಸ ಮಾಡಿಸಿದ್ರೆ ದೇವ್ರು ಮೆಚ್ಚಾಕಿಲ್ಲ, ಅದೂ ಅಲ್ದೆ ಅಪಾರ್ಟ್ಮೆಂಟ್ನವರೇನಾದ್ರೂ ನೋಡಿದ್ರೆ ನನ್ ಹೊಟ್ಟೆಗೂ ಸಂಚಕಾರ. ಕೂಸ್ನ ಯಾರಿಗಾದ್ರೂ ಒಪ್ಪಿಸಿ ಬಂದು ಕೆಲ್ಸ ಮಾಡು, ಬೇಡನ್ನಾಕಿಲ್ಲ’. ಹಲವು ಸಲ ಅಂಗಲಾಚಿದ್ದಕ್ಕೆ ನಿಷ್ಠುರವಾಗಿ ತನ್ನ ಮಾತಿನಿಂದ ಕತ್ತು ಹಿಡಿದು ಹೊರತಳ್ಳಿದ್ದ, ತನ್ನದೇನೂ ತಪ್ಪಿಲ್ಲವೆಂಬಂತೆ. ಎರಡು ಮೂರು ದಿವಸಗಳಿಂದ ತನಗೆ ಕೆಲಸವಿಲ್ಲ, ಕೆಲಸವಿಲ್ಲವೆಂದ ಮೇಲೆ ಮಜ್ದೂರಿಯೂ ಇಲ್ಲ, ಮಜ್ದೂರಿ ಇಲ್ಲವೆಂದ ಮೇಲೆ ತನ್ನ ಹೊಟ್ಟೆಗೆ ಅನ್ನವಿಲ್ಲ, ತನ್ನ ಹೊಟ್ಟೆಗೆ ಅನ್ನವಿಲ್ಲವೆಂದ ಮೇಲೆ ತನ್ನ ಎದೆಯ ಮೊಲೆಗಳಲ್ಲಿ ಹಾಲೂ ಇಲ್ಲ. ಹತಾಶೆಯಿಂದ ಸುತ್ತ ನೋಡಿದಳು. ಅಗೋ ಅಲ್ಲಿ ಕಂಕರು ಕಲೆಸುತ್ತಿರುವ ಮೆಷಿನ್, ಇಗೋ ಇಲ್ಲಿ ಸಾಮಗ್ರಿಗಳನ್ನು ಮೇಲಕ್ಕೆ ಸಾಗಿಸುತ್ತಿರುವ ಕ್ರೇನ್. ಅಗೋ ಅಲ್ಲಿನ ಪಾಳುಗೋಡೆಯನ್ನು ನೆಲಸಮ ಮಾಡುತ್ತಿರುವ ಜೆಸಿಬಿ ಯಂತ್ರ. ಆ ರಾಕ್ಷಸದೃಶ ಯಂತ್ರಗಳಿಗೆ ಸಹಕರಿಸುತ್ತಿರುವ ನೂರಾರು ಜನ ಕಾರ್ಮಿಕರು. ತನ್ನ ಅಸಹಾಯಕತೆಯನ್ನೂ ಕೂಸಿನ ಅರಣ್ಯರೋಧನವನ್ನು ನೇಪಥ್ಯಕ್ಕೆ ತಳ್ಳಿರುವ ಗಡಚಿಕ್ಕುವ ಸದ್ದು. ತನ್ನ ಮೇಲೊಂದಲ್ಲದೆ ಕೂಸಿನ ಮೈಮೇಲೂ ಹರಿದಾಡುತ್ತಿರುವ ಹದ್ದುಗಳ ನೆರಳುಗಳು, ಎಲ್ಲವನ್ನೂ ಗಮನಿಸಿಯೂ ಗಮನಿಸಿದವರಂತೆ ಕೂತಿದ್ದವರ ಪೈಕಿ...

ಮೆಲ್ಲಗೆ ಎದ್ದು ತನ್ನ ಕಡೆ ನಡೆಯಲಾರಂಭಿಸಿ ನಿರೀಕ್ಷಿಸಿದಂತೆ ಹತ್ತಿರವಾದಳು, ತುಸುಬಾಗಿ ತನ್ನನ್ನೂ ಕೂಸನ್ನೂ ದಿಟ್ಟಿಸಿದಳು, ಹಸಿವನ್ನೂ ಅಸಹಾಯಕತೆಯನ್ನೂ ಮೊಲೆಗಳ ಖಾಲಿತನವನ್ನೂ ಗುರುತಿಸಿದಳು. ಆದರೂ ಸೌಜನ್ಯಕ್ಕೆ ‘ಕೂಸ್ನ ಎದೆಗಾಕ್ಕೊಳ್ಳವ್ವಾ, ಅಳಿಸ್ತಿದ್ದೀಯಲ್ಲಾ’ ಎಂದೇ ಮಾತನ್ನಾರಂಭಿಸಿದಳು. ಅವರೀರ್ವರ ನಡುವೆ ಅರ್ಧತಾಸು ಮಾತುಕತೆ ನಡೆಯಿತು. ‘ಅಯ್ಯೋ ಅದಕ್ಯಾಕೆ ಇಷ್ಟು ಚಿಂತೆ ಮಾಡ್ತೀಯವ್ವಾ, ನಿನ್ತಾಯಂತ ತಿಳ್ಕೊಂಡು ಕೂಸ್ನ ನನಗೊಪ್ಪಿಸಿ ನಿಶ್ಚಿಂತೆಯಿಂದ ಕೆಲಸಕ್ಕೆ ನೀನೋಗು, ಮುಂಜಾನೆಯಿಂದ ಸಂಜೆ ತನಕ ಇದರ ಯೋಗಚೇಮ ನಾನು ನೋಡ್ಕಂತೀನಿ’ ಎಂದು ಭರವಸೆ ನೀಡಿದಳು. ತನ್ನ ದೇಹವನ್ನೇ ತಾನು ಸಂಭಾಳಿಸಲು ಹೆಣಗುತ್ತಿರುವ ನತದೃಷ್ಟೆ, ತನ್ನ ಕೂಸನ್ನು! ಆಶ್ಚರ್ಯದಿಂದ ದಿಟ್ಟಿಸಿದಳು ಲಕ್ಷ್ಮಿ, ‘ಈ ಪ್ರಾರಾಬ್ಧ ನಿನಗ್ಯಾಕ ಬಿಡವ್ವಾ’ ಎಂದಳು ತೋರಿಕೆಗೆ. ‘ನಾನಿನ್ನೂ ಬದುಕಿಲ್ವೇನವ್ವಾ ಹಂಗೇನೆ ಇದೂ, ಎರಡು ಕಾಳು ಹಾಲ್ನ ಜೋಡಿಸೋ ಶಕ್ತಿ ನನ್ನಲ್ಲಿಲ್ಲ, ಒಪ್ಕೊಂತೀನಿ, ಆದ್ರೆ ಅದು ದೇವ್ರಿಗೈತೆ, ನಂಬು’ ಎಂದು ಧೈರ್ಯ ತುಂಬಿದಳು. ಪುನಃ ಆಕೆ ‘ಕೂಸಿನ ಹೆಸ್ರೇನವ್ವಾ’ ಎಂದು ಕೇಳಿದಳು. ಇಟ್ಟಿದ್ದರೆ ತಾನೆ ಹೇಳುವುದು! ‘ಪರವಾಯಿಲ್ಲ ಕೆಲಸದಿಂದ ಬರೋದ್ರೊಳ್ಗೆ ನಾನೇ ಹೆಸ್ರಿಟ್ಟಿರ್ತೀನಿ’ ಎಂದು ಹೇಳಿದ್ದೂ ಅಲ್ಲದೆ ಕೂಸನ್ನು ತನ್ನೆರಡೂ ಕೈಗಳಿಂದ..

ಹ್ಹಾಂ! ಅಂದಹಾಗೆ ಆಕೆಯ ಪೂರ್ವಾಪರ? ಆಕೆ ಹುಟ್ಟಿದ್ದೆಲ್ಲೋ, ಬೆಳೆದದ್ದೆಲ್ಲೋ, ಆಕೆಯ ಹೆಸರುಗಳೊಂದೇ ಎರಡೇ, ಆಕೆ ಬಲ್ಲಂಥ ಭಾಷೆಗಳು ಒಂದೇ ಎರಡೇ, ಎರಡು ಕೊಂಬೆಗಳ ನಡುವಿನ ಹೂವಿನ ಆಹ್ಲಾದತೆಯನ್ನು ಕೊಳ್ಳೆ ಹೊಡೆದ ಸೊಕ್ಕಿನ ಭೃಂಗಗಳು ಒಂದೇ ಎರಡೇ, ಆಕೆಯ ದೇಹದಲ್ಲಿ ಆಶ್ರಯಪಡೆದ ವ್ಯಾಧಿಗಳು ಒಂದೇ ಎರಡೇ, ಆಕೆಯ ತಾರುಣ್ಯ ನಶಿಸಿದ್ದಾಗಲೀ, ಅಕಾಲಿಕ ವೃದ್ಧಾಪ್ಯ ಆವರಿಸಿದ್ದಾಗಲೀ ವಿಳಂಬವಾಗಲಿಲ್ಲ. ಅಸ್ಥಿಪಂಜರದಂಥ ತಾನು ಕಟ್ಟಕೊನೆಗೆ ಆಶ್ರಯಿಸಿದ್ದು ಗೋಲ್ಡನ್ ಅಪಾರ್ಟ್ಮೆಂಟ್ನ ಯಾವುದೋ ಒಂದು ಮಹಡಿಯನ್ನು. ತಮ್ಮೆರಡು ತುತ್ತುಗಳ ಪೈಕಿ ಒಂದನ್ನು ಹಂಚಿ ಭುಂಜಿಸುವ ಕಟ್ಟಡಕಾರ್ಮಿಕರು ಆಕೆಯ ದೇಹದ ಪ್ರಾಣವಾಯುವನ್ನು ರಕ್ಷಿಸಿದರು. ಅಂಥ ಅಪಾರ್ಟ್ಮೆಂಟ್ನ ಋಣ ತೀರಿಸುವ ಸದಾವಕಾಶ ಕೂಸಿನ ಮೂಲಕ ತನಗೆ. ಅದನ್ನು ಸಂಭ್ರಮಿಸಿದಳು, ಎತ್ತಿ ಮುದ್ದಾಡಿದಳು. ತನ್ನ ಶುಷ್ಕ ಮೊಲೆಗುಂಡಿಗಳನ್ನು ಅದರ ಬಾಯಿಯಲ್ಲಿರಿಸಿ ರೋಮಾಂಚನಗೊಂಡಳು.

ಶಿಶುಸಂಬಂಧೀ ಗುಣವಾಚಕಗಳನ್ನು ವಿಶೇಷಣಗಳನ್ನು ಓತಪ್ರೋತವಾಗಿ ಪ್ರಯೋಗಿಸುವುದರ ಮೂಲಕ ತಾನೂ ಆಶುಕವಯಿತ್ರಿಯಾದಳು. ವಾತ್ಸಲ್ಯ ಎಂಬ ಪದಕ್ಕೆ ಹೊಸವ್ಯಾಖ್ಯಾನ ಬರೆದಳು. ಗೋಲ್ಡನ್ ಅಪಾರ್ಟ್ಮೆಂಟ್ನ ಸರಹದ್ದೊಂದೇ ಅಲ್ಲದೆ ಕೋರಮಂಗಲದ ಜನನಿಬಿಡ ಪ್ರದೇಶದುದ್ದಕ್ಕೂ ತಂಗಾಳಿಯಂತೆ ಸಂಚರಿಸಿದಳು. ಎಲ್ಲೋ ಕೂತು ದಣಿವಾರಿಸಿಕೊಳ್ಳುತ್ತಿದ್ದಳು, ಎಲ್ಲೋ ತಿರುಗಾಡಿ ಅವರಿವರ ಗಮನ ಸೂರೆಗೊಳ್ಳುತ್ತಿದ್ದಳು, ಭೂತದಯೆ ಅಂಕುರಿಸಿ ಅವರಿವರು ಕೈ ಎತ್ತಿ ನೀಡುತ್ತಿದ್ದ ಚಿಲ್ಲರೆ ಕಾಸುಗಳನ್ನು ಆಯ್ದುಕೊಳ್ಳುತ್ತಿದ್ದಳು. ಆ ಸಂಪಾದನೆಯಲ್ಲಿ ತಾನು ಬಾಟಲನ್ನು ಖರೀದಿಸಿದಳು. ಅದರಲ್ಲಿ ಚಟಾಕು ಹಾಲು ತುಂಬಿಸುತ್ತಿದ್ದಳು. ಳೊಳ್ಳೊಳ್ಳಾಯಿ ಎಂದು ಹಾಡುತ್ತ ಕೂಸಿನ ಬಾಯಿಯಲ್ಲಿರಿಸಿ ಅದರ ಹಸಿವು ತೀರಿಸುತ್ತಿದ್ದಳು. ತನ್ನ ಹಸಿವು ಬಾಯಾರಿಕೆಗಳನ್ನೂ ತೀರಿಸಿಕೊಳ್ಳುತ್ತಿದ್ದಳು, ಅಲ್ಲದೆ ಇನ್ನೇನನ್ನೋ! ಸಂಜೆಯಾದೊಡನೆ ಅಪಾರ್ಟ್ಮೆಂಟ್ ತಲುಪಿ ನೈಜತಾಯಿಗೆ ಅದನ್ನೊಪ್ಪಿಸುವ ಮೊದಲು ‘ಗೋಲ್ಡನ್ ಅಪಾರ್ಟ್ಮೆಂಟ್ ಎಂದರೆ ಈ ಬಿಲ್ಡಿಂಗ್ ಅಲ್ಲ ಲಕ್ಷ್ಮೀ, ನಿನ್ನ ಮಗ! ಹ್ಹಾಂ ಅಂದಹಾಗೆ ನಿನ್ನ ಮಗ್ನ ಹೆಸ್ರು ಗಣೇಶ, ನಿನ್ಗೂ ಇಷ್ಟತಾನೆ!’ ಎಂದು ಹೇಳಿ ಅದರ ಗಲ್ಲಕ್ಕೆ ಲೊಚಲೊಚ ಮುದ್ದು ಕೊಡುವುದನ್ನು ಮರೆಯುತ್ತಿರಲಿಲ್ಲ. ತನ್ನ ಒಡಹುಟ್ಟಿದವಳೇ ಈಕೆಯ ರೂಪದಲ್ಲಿ ತನಗೆ ಸಹಾಯ ಮಾಡುತ್ತಿರುವಳೇನೋ! ಅಷ್ಟು ಸಾಕಲ್ಲವೆ ಈಕೆಗೆ, ಇಷ್ಟು ಸಾಕಲ್ಲವೆ ಆಕೆಗೆ!

ದಿನಗಳೆದಂತೆ ವರಪ್ರದಾಯಕ ಗಣೇಶನ ಭೌತಿಕ ಲಕ್ಷಣಗಳು ಒಂದೂವರೆ ರೂಪಾಯಿ ಬೆಲೆಯ ಚಡ್ಡಿಯಿಂದಲೂ, ಎರಡು ರೂಪಾಯಿ ಬೆಲೆಯ ಅಂಗಿಯಿಂದಲೂ ಶ್ರೀಮಂತಗೊಂಡವು, ಅಲ್ಲದೆ ಏನಾದರೊಂದು ತಿಂಡಿಪೊಟ್ಟಣಗಳಿಂದ ಲಕ್ಷ್ಮಿಯ ಭೌತಿಕ ಲಕ್ಷಣ ಸಹ. ಸಹಕಟ್ಟಡ ಕಾರ್ಮಿಕನೋರ್ವ ಆ ದಿವಸ ಸಂಜೆ ‘ನಿನ್ಕೂಸು ನಿನ್ಗೆ ಭಾರಾತೇನವ್ವಾ, ಆಕೆ ಆ ಎಳೇಮಗೂನ ಮುಂದಿಟ್ಕೊಂಡು ಅಣ್ಣಮ್ಮ ದೇವಸ್ಥಾನದತ್ರ ಭಿಕ್ಷೆ ಬೇಡೋದ್ನ ನಾನ್ ಕಣ್ಣಾರೆ ನೋಡಿದೆ ಎಂದು ಆ ಗುಟ್ಟನ್ನು ಅನಾವರಣಗೊಳಿಸಿದ. ಬಡಸಿಡಿಲಿಗೆ ತುತ್ತಾದವಳಂತೆ ತಾಯಿ ವಿಲವಿಲ ಒದ್ದಾಡಿದಳಲ್ಲದೆ ಆ ದಿವಸ ಕೇಳಿಯೇಬಿಟ್ಟಳು, ನೀನ್ ಮಾಡ್ತಿರೋದು ಸರೀನಾ ಅಂತ. ಅದಕ್ಕೆ ಆಕೆ ಗಂಭೀರವದನಳಾದಲ್ಲದೆ, ‘ಇದ್ರಲ್ಲಿ ತಪ್ಪೇನೈತೆ ಲಕ್ಷ್ಮಿ, ಈ ಸಿಟೀಲಿರೋ ಪ್ರತಿಯೊಬ್ರೂ, ಈ ದೇಸದ ಎಲ್ರೂನೂ.. ದೊಡ್ಡೋರು ದೊಡ್ಡ ಪ್ರಮಾಣದಲ್ಲಿ, ಸಣ್ಣೋರು ಸಣ್ಣ ಪ್ರಮಾಣದಲ್ಲಿ..’ ಎಂದು ಏನೇನೋ ಹೇಳಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಳು. ಅದಕ್ಕೆ ಏನು ಹೇಳುವುದು! ಎರಡು ದಿವಸಗಳ ಕಾಲ ಯೋಚಿಸಿದರೂ... ಮೂರನೆ ದಿವಸ ಬೆಳೆಗ್ಗೆ ‘ಅಕ್ಕಾ ಕೂಸ್ನ ಎತ್ಕೊಳ್ಳವ್ವಾ’ ಎಂದು ತಾನೇ ಆಕೆಯನ್ನು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.