ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿಂದಾ.. ಗೋವಿಂದಾ...

Last Updated 5 ಸೆಪ್ಟೆಂಬರ್ 2015, 19:51 IST
ಅಕ್ಷರ ಗಾತ್ರ

ನಮ್ಮಲ್ಲಿನ ಮೊಸರು ಕುಡಿಕೆ ಆಟ ಮಹಾರಾಷ್ಟ್ರದಲ್ಲಿ ಭಾರೀ ಜನಪ್ರಿಯ. ಮರಾಠಿಗರ ವರ್ಣರಂಜಿತ ಆಚರಣೆಗಳಲ್ಲೊಂದಾದ ‘ದಹಿ ಹಂಡಿ’ ಈಗ ಸಾಹಸಕ್ರೀಡೆಯ ಸ್ವರೂಪ ಪಡೆದುಕೊಂಡಿದೆ. ‘ದಹಿ ಹಂಡಿ’ ದಿನ ಮುಂಬಯಿ ಮಹಾನಗರದ ಬೀದಿಬೀದಿಗಳಲ್ಲೂ ‘ಗೋವಿಂದಾ’ಗಳ ದರ್ಶನ.

ಮಹಾರಾಷ್ಟ್ರದ ಪ್ರಮುಖ ಉತ್ಸವಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ ಆಚರಿಸುವ ‘ದಹಿ ಹಂಡಿ’ಯೂ ಒಂದು. ಮಾನವ ಪಿರಮಿಡ್‌ಗಳ ಮೂಲಕ ಎತ್ತರದಲ್ಲಿರುವ ಮೊಸರಿನ ಮಡಕೆಯನ್ನು ತಲುಪಿ, ಅದನ್ನು ಒಡೆಯುವ ಆಟದ ಉತ್ಸವವಿದು. ಈ ಅಪೂರ್ವವಾದ ದೃಶ್ಯವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುವುದಿದೆ. ಪಿರಮಿಡ್‌ ರಚಿಸುವವರನ್ನು ‘ಗೋವಿಂದಾ ತಂಡ’ವೆಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ‘ಗೋಪಿಕೆ’ಯರ ತಂಡವೂ ಸಕ್ರಿಯವಿದೆ. 2012ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿರುವುದು ‘ದಹಿ ಹಂಡಿ’ಯ ವಿಶೇಷ.

‘ದಹಿ ಹಂಡಿ’ ಆಟಕ್ಕೆ ತನ್ನದೇ ಆದ ವಿಶೇಷವಿದೆ. ಏಳು, ಒಂಬತ್ತು, ಹತ್ತು– ಹೀಗೆ ಬೇರೆ ಬೇರೆ ಸ್ತರಗಳಲ್ಲಿ ಮಾನವ ಪಿರಮಿಡ್‌ಗಳನ್ನು ರಚಿಸಿ, ಎತ್ತರದಲ್ಲಿ ಕಟ್ಟಿದ ಮೊಸರಿನ ಮಡಕೆಯನ್ನು ಒಡೆಯಲಾಗುತ್ತದೆ. ಇದಕ್ಕೆ ಸಾಕಷ್ಟು ಸಿದ್ಧತೆಯೂ ನಡೆಯುತ್ತದೆ. ಈ ತರಬೇತಿ ‘ಗುರುಪೂರ್ಣಿಮೆ’ಯ ಮುಹೂರ್ತದಿಂದ ಆರಂಭಗೊಳ್ಳುತ್ತದೆ.

ಈಚಿನ ದಿನಗಳಲ್ಲಿ ‘ದಹಿ ಹಂಡಿ’ ವಿವಾದಗಳಿಂದಲೂ, ಕಾನೂನಿಗೆ ಸಂಬಂಧಿಸಿದ ಚರ್ಚೆಗಳಿಂದಲೂ ಸುದ್ದಿಯಲ್ಲಿದೆ. ಈ ವಿವಾದ – ಚರ್ಚೆಗಳು ಕೂಡ ‘ದಹಿ ಹಂಡಿ’ಯ ಜನಪ್ರಿಯತೆ ಹೆಚ್ಚಲಿಕ್ಕೆ ಕಾರಣವಾಗಿದೆ.

ಮೊಸರು ಕುಡಿಕೆ ಒಡೆಯುವ ಈ ಹಬ್ಬ ಸಾಹಸಿಗರ ಕಬ್ಬ ಮಾತ್ರವಲ್ಲ; ಇದು ಜನಸಾಮಾನ್ಯರು ಉತ್ಸಾಹದಿಂದ ಭಾಗಿಯಾಗುವ ಆಚರಣೆಯೂ ಹೌದು. ಹಬ್ಬದ ದಿನ ‘ದಹಿ ಹಂಡಿ’ ನಡೆಯುವ ಸ್ಥಳಗಳಲ್ಲಿನ ಜನಸಂದಣಿಯನ್ನು ನೋಡುವುದೇ ಒಂದು ಸಂಭ್ರಮದ ಸನ್ನಿವೇಶ. ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಎಲ್ಲಿ ನೋಡಿದರೂ ಜನರೇ ಕಾಣಿಸುತ್ತಾರೆ. ಬಯಲು ಮಾತ್ರವಲ್ಲದೆ, ಮರಗಳ ಕೊಂಬೆಗಳಲ್ಲಿ ಹಾಗೂ ಕಟ್ಟಡಗಳ ಮೇಲೆ ಸಹೃದಯರು ಕಿಕ್ಕಿರಿಯುತ್ತಾರೆ.

‘ಗೋವಿಂದಾ’ಗಳು ರಚಿಸುವ ಪಿರಮಿಡ್‌ ರಚನೆಯನ್ನು ಕಣ್ತುಂಬಿಕೊಳ್ಳುತ್ತ, ಮೊಸರು ಕುಡಿಕೆ ಒಡೆಯುವಂತೆ ಅವರನ್ನು ಉತ್ತೇಜಿಸುತ್ತಾರೆ. ‘ಗೋವಿಂದಾ’ಗಳ ಉತ್ಸಾಹ, ಪಿರಮಿಡ್‌ ರಚನೆಯ ಸಾಹಸ, ತಮ್ಮ ಪ್ರಯತ್ನದಲ್ಲಿ ಉಂಟಾಗುವ ಹತಾಶೆ, ಕುಡಿಕೆ ಒಡೆದಾಗ ಉಂಟಾಗುವ ಸಂಭ್ರಮ, ಬಹುಮಾನದ ಪುಲಕ– ಈ ಎಲ್ಲ ಭಾವಗಳು ನೋಡುಗರದೂ ಆಗುತ್ತವೆ. ಹಾಗಾಗಿ, ಇದು ಜನಸಾಮಾನ್ಯರ ಹಬ್ಬವೂ ಹೌದು.

ಗೋವಿಂದಾ! ಗೋವಿಂದಾ!
‘ದಹಿ ಹಂಡಿ’ಯನ್ನು ಮಾನವ ಪಿರಮಿಡ್‌ಗಳ ಮೂಲಕ ತಲುಪಲು ಮುಂಬಯಿ ಹಾಗೂ ಅದರ ಉಪನಗರಗಳಲ್ಲಿ ನೂರಾರು ‘ಗೋವಿಂದಾ’ ತಂಡಗಳಿವೆ. ಹಬ್ಬದ ದಿನ ಬೆಳಿಗ್ಗೆಯಿಂದ ತಮ್ಮ ತಮ್ಮ ಲಾರಿ, ಟೆಂಪೋಗಳಲ್ಲಿ ಈ ತಂಡಗಳು ಬ್ಯಾಂಡ್ ಬಾರಿಸುತ್ತಾ ರಸ್ತೆಗಳಲ್ಲಿ ಓಡಾಡುತ್ತಿರುತ್ತಾರೆ. ಒಂದೊಂದು ತಂಡದಲ್ಲಿ ಇನ್ನೂರು, ಮುನ್ನೂರು ಸದಸ್ಯರು ಇರುತ್ತಾರೆ. ಕೆಲವು ರಾಜಕೀಯ ಪಕ್ಷಗಳ ಮುಖಂಡರು ತಮ್ಮದೇ ಆದ ‘ಗೋವಿಂದಾ’ ತಂಡವನ್ನು ಕಟ್ಟಿಕೊಂಡು ತಮ್ಮ ಪರವಾದ ಬರಹಗಳ ಸಮವಸ್ತ್ರವನ್ನು ನೀಡುತ್ತಾರೆ. ಆಟದ ಆಯೋಜಕರು ಒಂದರಿಂದ ಹತ್ತು ಲಕ್ಷ ರೂಪಾಯಿ ಬಹುಮಾನ ಇರಿಸುವುದು ಸಾಮಾನ್ಯ.

ಇತ್ತೀಚಿನ ವರ್ಷಗಳಲ್ಲಿ ಈ ಆಕರ್ಷಣೆ 25ರಿಂದ 50 ಲಕ್ಷ ರೂಪಾಯಿ ಮುಟ್ಟಿರುವುದೂ ಇದೆ. ಮುಂಬಯಿ - ಥಾಣೆ ಶಹರದ ‘ಸಂಘರ್ಷ ಪ್ರತಿಷ್ಠಾನ’, ‘ಸಂಸ್ಕೃತಿ ಪ್ರತಿಷ್ಠಾನ’, ‘ಸಂಕಲ್ಪ ಪ್ರತಿಷ್ಠಾನ’– ಇಂತಹ ಹತ್ತಾರು ಪ್ರಮುಖ ಆಯೋಜಕರು ‘ದಹಿಹಂಡಿ’ ಸಂದರ್ಭದಲ್ಲಿ ಸುದ್ದಿ ಮಾಡುತ್ತಾರೆ. ಈ ಉತ್ಸವದಲ್ಲಿ ಸಿನಿಮಾ ತಾರೆಯರೂ ಭಾಗವಹಿಸುತ್ತಾರೆ. ಥಾಣೆಯ ‘ಸಂಸ್ಕೃತಿ ಪ್ರತಿಷ್ಠಾನ’ದ ‘ದಹಿಹಂಡಿ’ 2012ರ ಉತ್ಸವದಲ್ಲಿ 43.79 ಅಡಿ ಎತ್ತರದ ಮಾನವ ಪಿರಮಿಡ್ಡನ್ನು ಜೋಗೇಶ್ವರಿಯ ‘ಜೈಜವಾನ್ ಮಿತ್ರಮಂಡಳಿ’ ತಂಡ ರಚಿಸಿ ಹೊಸ ದಾಖಲೆ ಸ್ಥಾಪಿಸಿದೆ.

ಅಪಾಯದ ಆಟ
‘ಗೋವಿಂದಾ’ ತಂಡಗಳಲ್ಲಿ ಚಿಕ್ಕ ಮಕ್ಕಳು ಕಾಣಿಸಿಕೊಳ್ಳುವುದೂ ಇದೆ. ಹೀಗಾಗಿ ‘ದಹಿ ಹಂಡಿ’ಯನ್ನು ನಿಷೇಧಿಸಬೇಕೆಂಬ ಚರ್ಚೆಗಳೂ ನಡೆದಿದೆ. ಆರಂಭದಲ್ಲಿ ನ್ಯಾಯಾಲಯ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದರೂ, ನಂತರ ಮಕ್ಕಳನ್ನು ಬಳಸಬಾರದು ಎಂದಿದೆ. ಹಾಗಿದ್ದೂ ಪ್ರತೀ ವರ್ಷ ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುವುದು ನಿಂತಿಲ್ಲ. ಪಿರಮಿಡ್‌ನ ತುತ್ತ ತುದಿಯಲ್ಲಿ ಪುಟ್ಟ ಮಕ್ಕಳೇ ಹೆಚ್ಚಾಗಿ ಇರುವುದು ನಿಂತಿಲ್ಲ. ಮಾನವ ಪಿರಮಿಡ್‌ಗಳನ್ನು ಏರುವಾಗ ಕೆಲವು ‘ಗೋವಿಂದಾ’ಗಳು (ಸದಸ್ಯರು) ಕೆಳಗೆ ಬಿದ್ದು ಗಾಯಗೊಳ್ಳುವುದಿದೆ. ಹಬ್ಬದ ಮರುದಿನ ಮುಂಬಯಿಯ ವಿವಿಧ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ‘ಗೋವಿಂದಾ’ ಸದಸ್ಯರು ಚಿಕಿತ್ಸೆ ಪಡೆಯುವುದನ್ನು ಕಾಣಬಹುದು.

2014ರಲ್ಲೂ ತರಬೇತಿ ಸಮಯದಲ್ಲೇ ಹಲವರು ಕೆಳಗೆ ಬಿದ್ದು ಗಾಯಗೊಂಡಿದ್ದರು. ಕರಿರೋಡ್, ಸಾನ್‌ಪಾಡದಲ್ಲಿ ‘ಗೋವಿಂದಾ’ ತಂಡದ ಅಭ್ಯಾಸದಲ್ಲಿ ಇಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿದ್ದೂ ಇದೆ. ಈ ಅಪಾಯದ ಕಾರಣದಿಂದಾಗಿ, ‘ಗೋವಿಂದಾ’ ತಂಡದ ಸದಸ್ಯರಿಗೆ ವಿಮೆಯ ಸೌಲಭ್ಯವನ್ನು ಮಾಡಲಾಗುತ್ತಿದೆ.

ಸಿನಿಮಾ ಪ್ರೀತಿ
ಹಬ್ಬದ ದಿನ ಚಿಕ್ಕ ಪುಟ್ಟ ತಂಡಗಳು ರಸ್ತೆಗಳಲ್ಲಿ ತಿರುಗಾಡುತ್ತಾ ಎಲ್ಲೆಲ್ಲಿ ‘ದಹಿ ಹಂಡಿ’ ಕಟ್ಟಿದ್ದಾರೋ ಅಲ್ಲೆಲ್ಲ ಪ್ರಯತ್ನ ಮಾಡುತ್ತಾರೆ. ಹೆಚ್ಚಿನವರು ಐದು ಅಥವಾ ಆರು ಸ್ತರಕ್ಕೆ ಪ್ರಯತ್ನಿಸುವುದರಲ್ಲೇ ತೃಪ್ತಿ ಪಡುತ್ತಾರೆ. ಆದರೆ ಪ್ರಯತ್ನಿಸಿದ ಪ್ರತೀ ತಂಡಕ್ಕೂ ಆಯೋಜಕರು ಟ್ರೋಫಿ ನೀಡುತ್ತಾರೆ. ಹಿಂದಿ ಸಿನಿಮಾಗಳಲ್ಲಿ ‘ದಹಿ ಹಂಡಿ’ ಒಡೆಯುವ ಅನೇಕ ದೃಶ್ಯಗಳ ಹಾಡುಗಳು ಜನಪ್ರಿಯವಾಗಿವೆ.

ಟಿಪಿಕಲ್ ಮರಾಠಿ ಶೈಲಿಯ ‘ಗೋವಿಂದಾ ಆಲಾರೆ’ ಹಾಡು ಅಂದು ಗಲ್ಲಿಗಲ್ಲಿಗಳ ಮೈಕ್‌ಗಳಲ್ಲಿ ಕೇಳಿ ಬರುತ್ತದೆ. ಅಮಿತಾಭ್ ಬಚ್ಚನ್‌ರ ಹಾಡಿನ ಆ ದೃಶ್ಯ ಎಲ್ಲರಿಗೂ ಇಂದಿಗೂ ಪ್ರಿಯವಾದುದು. ‘ಗೋವಿಂದಾ’ ತಂಡಗಳಲ್ಲಿ ಮುಸ್ಲಿಂ ಸದಸ್ಯರೂ ಇದ್ದಾರೆ. ಮಹಾರಾಷ್ಟ್ರದ ‘ದಹಿ ಹಂಡಿ’ ಉತ್ಸವ ಮುಂಬಯಿ ಮಹಾನಗರದ ಪಾಲಿಗೆ ಅದರ ಸಾಂಸ್ಕೃತಿಕ ಹೆಮ್ಮೆಯ ಭಾಗವಾಗಿದೆ. ಈ ವರ್ಷವೂ ಮುಂಬಯಿಯಲ್ಲಿ ‘ದಹಿ ಹಂಡಿ’ಯ ಹವಾ ಜೋರಾಗಿಯೇ ಇದೆ.

ಸಾಹಸ ಕ್ರೀಡೆಯ ಸ್ವರೂಪ
‘ದಹಿ ಹಂಡಿ’ ಆಚರಣೆಗೆ ಸಾಹಸ ಕ್ರೀಡೆಯ ಸ್ವರೂಪ ಕೊಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಉತ್ಸವದಿಂದ ಉಂಟಾಗುವ ಸಾವುನೋವುಗಳನ್ನು ಗಂಭೀರವಾಗಿ ಪರಿಗಣಿಸಿದ ಬಾಂಬೆ ಹೈಕೋರ್ಟ್‌, ಮೊಸರು ಕುಡಿಕೆಗಳ ಎತ್ತರವನ್ನು 20 ಅಡಿಗೆ ಸೀಮಿತಗೊಳಿಸುವಂತೆ ಹಾಗೂ ಈ ಆಟದಲ್ಲಿ ಮಕ್ಕಳನ್ನು ಬಳಸದಂತೆ ನಿರ್ಬಂಧಿಸಿದೆ. ಈ ಹಿನ್ನೆಲೆಯಲ್ಲಿ ‘ದಹಿ ಹಂಡಿ’ಗೆ ಸಾಹಸಕ್ರೀಡೆಯ ಸ್ವರೂಪ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಆಟದ ನೀತಿ ನಿಯಮಗಳನ್ನು ರೂಪಿಸುವ ಪ್ರಯತ್ನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT