ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಡ್ಡಿಯ ಆಸುಪಾಸು...

Last Updated 16 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಒಗೆದ ಒಂದ್ರಾಶಿ ಬಟ್ಟೆಗಳನ್ನು ಬಕೆಟ್ ತುಂಬ ತುಂಬಿಕೊಂಡು ಒಣಗಿ ಹಾಕಲು ಟೆರೇಸ್ ಮೇಲೆ ಬಂದಿದ್ದೆ; ಇಡೀ ವಾರದ ಬಟ್ಟೆಗಳಿಗೂ ಪ್ರತೀ ಶನಿವಾರ ಅಥವಾ ಭಾನುವಾರ ಮಾತ್ರ ಶುದ್ಧವಾಗುವ ಯೋಗ. ಬರೀ ಬ್ಯಾಚುಲರ್ಸ್‌ ಮಾತ್ರ ಅಲ್ಲ, ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಮನೆಗಳಲ್ಲೂ ವೀಕೆಂಡಿನ ಪ್ರಮುಖ ಕಾರ್ಯಕ್ರಮ ಬಟ್ಟೆ ಒಗೆಯುವ ಕಾಯಕ. ಹಾಗಾಗಿ ಯಾವ ಮನೆಯ ಟೆರೇಸ್ ನೋಡಿದರೂ ಬಗೆಬಗೆಯ ಬಟ್ಟೆಗಳು ನೇತಾಡುತ್ತಿರುತ್ತವೆ. ಟೀ ಶರ್ಟುಗಳು, ಪ್ಯಾಂಟುಗಳು, ಚೂಡಿದಾರ-ಟಾಪ್‌ಗಳು, ಟವೆಲ್ಲು, ಕರ್ಚೀಫು, ಬನಿಯನ್ನು ಹೀಗೆ ಒಂದೊಂದೇ ಐಟಮ್ಮುಗಳನ್ನು ಎತ್ತಿ ಒಣಹಾಕುತ್ತಿದ್ದೆ. ಕೊನೆಯಲ್ಲಿ ಸಿಕ್ಕಿದ್ದು ಬಣ್ಣ ಬಣ್ಣದ ಚಡ್ಡಿಗಳು! ಒಂದು, ಎರಡು, ಮೂರು... ಉಹೂಂ ಎಷ್ಟು ಒಣಹಾಕಿದರೂ ಮುಗಿಯುತ್ತಿಲ್ಲ! ಕೊನೆಗೆ ಸಾಲಾಗಿ ಒಣಗಿಸಿದ್ದನ್ನು ಲೆಕ್ಕ ಮಾಡುತ್ತೇನೆ, ಕರೆಕ್ಟಾಗಿ ಆರು ಚಡ್ಡಿಗಳಿವೆ! ಸೋಮವಾರದಿಂದ ಶನಿವಾರದವರೆಗೆ ದಿನಕ್ಕೆ ಒಂದರಂತೆ!

ಚಡ್ಡಿಯಂಥಾ ಸಣ್ಣ ಬಟ್ಟೆಯನ್ನೂ ದಿನಾ ಸ್ನಾನ ಮಾಡುವಾಗ ತೊಳೆದುಕೊಳ್ಳದೆ ವಾಶಿಂಗ್‌ಮಷಿನ್‌ಗೆ ಹಾಕುವ ಸೋಮಾರಿಗಳಿಗೆ ಮನಸ್ಸಿನಲ್ಲೇ ಧಿಕ್ಕಾರ ಕೂಗಿದೆ. ಈ ವಿಷಯವಾಗಿ ಹಲವು ಬಾರಿ ನನ್ನ ಮತ್ತು ನನ್ನವನ ನಡುವೆ ವಾದ-ವಾಗ್ವಾದಗಳು ನಡೆಯುತ್ತಲೇ ಇರುತ್ತವೆ. ವಾಶಿಂಗ್‌ಮಷಿನ್ ಇರುವುದೇ ಬಟ್ಟೆಗಳನ್ನು ತೊಳೆಯುವುದಕ್ಕೆ, ಸಣ್ಣದಾದರೇನು? ದೊಡ್ಡದಾದರೇನು?

ಅವನ ವಾದ. ಆದರೂ ತೀರಾ ಚಡ್ಡಿಯನ್ನೂ ವಾಶಿಂಗ್‌ಮಷಿನ್‌ಗೆ ಹಾಕುವುದೆಂದರೇನು? ನನ್ನ ವಿರೋಧ. ಪರ-ವಿರೋಧಗಳ ನಡುವೆ ಹೊರಗೆ ಬಂತೊಂದು ಸ್ಫೋಟಕ ಸತ್ಯ! `ನಾನೇ ಎಷ್ಟೋ ಪಾಲು ವಾಸಿ, ಕೊನೇಪಕ್ಷ ವಾಶಿಂಗ್‌ಮಷಿನ್‌ಗಾದ್ರೂ ಹಾಕ್ತೀನಿ, ಆದ್ರೆ ತಾವು ಹಾಕಿದ ಚಡ್ಡಿಯನ್ನೂ ತಮ್ಮ ಹೆಂಡತಿ ಕೈಲಿ ತೊಳೆಸುವ ಭೂಪರಿದ್ದಾರೆ, ಇದಕ್ಕೇನಂತೀಯಾ?'. ಕೇಳಿ ಅವಕ್ಕಾದ ನಾನು ನಗಬೇಕೋ, ಅಳಬೇಕೋ ತಿಳಿಯದೆ ದಂಗಾದೆ!

ಅವರವರ ಚಡ್ಡಿಗಳನ್ನು ಅವರವರೇ ತೊಳೆದುಕೊಳ್ಳಬೇಕಾ? ಅಥವಾ ವಾಶಿಂಗ್‌ಮಷಿನ್‌ಗೆ ಹಾಕಬಹುದಾ? ಅಥವಾ ಕೆಲಸದವರ ಕೈಲಿ ತೊಳೆಸಬಹುದಾ? ಎಷ್ಟನೇ ವಯಸ್ಸಿನಿಂದ ಮಕ್ಕಳಿಗೆ ತಮ್ಮ ಚಡ್ಡಿ ತಾವೇ ತೊಳೆದುಕೊಳ್ಳಲು ರೂಢಿಸಬೇಕು? ಈ ಎಲ್ಲಾ ಅಧಿನಿಯಮಗಳನ್ನೊಳಗೊಂಡ ಬಿಲ್ ಒಂದನ್ನು ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಚರ್ಚೆಯಾಗುವಂತೆ ಮಾಡಿ ಪಾಸ್ ಮಾಡ್ಸೋಣ ಬಿಡು ನನ್ನವನ ತಮಾಷೆ! ಆದ್ರೆ ನನ್ನ ಪಾಲಿಗೆ ನಿಜವಾಗಿಯೂ ಅದು ಸೀರಿಯಸ್ ವಿಷಯಾನೇ.

ಇಲ್ಲೂ ನನಗೆ ಲಿಂಗತಾರತಮ್ಯ ಎದ್ದು ಕಾಣಿಸುತ್ತದೆ. ಹೈಸ್ಕೂಲು ದಾಟಿ ಕಾಲೇಜಿಗೆ ಹೋಗುತ್ತಿದ್ದರೂ ಎಷ್ಟೋ ತಾಯಂದಿರು ತಮ್ಮ ಗಂಡುಮಕ್ಕಳಿಗೆ ಅವರ ಬಟ್ಟೆ ತೊಳೆದುಕೊಳ್ಳುವುದು ಹಾಗಿರಲಿ, ಚಿಕ್ಕ ಚಡ್ಡಿಯನ್ನು ತೊಳೆದುಕೊಳ್ಳುವುದನ್ನೂ ರೂಢಿಸಿರುವುದಿಲ್ಲ. ಬಟ್ಟೆ ತೊಳೆದು ಒಣಗಿಸಿ ತೆಗೆದು ಅಲ್‌ಮೇರಾದಲ್ಲಿ ಜೋಡಿಸಿಡುವ ಸೇವೆ ಲಭ್ಯವಿರುತ್ತದೆ. ಇಂಥವರು ನಾಳೆ ಮದುವೆ ಆದಾಗ ತಮ್ಮ ಹೆಂಡತಿಯಿಂದ ಇದೇ ಸೇವೆ ಅಪೇಕ್ಷಿಸುತ್ತಿರುತ್ತಾರೆ. ನಾನು ಹೇಳುತ್ತಿರುವುದು ಸುಳ್ಳಲ್ಲ! ಪರಿಚಯಸ್ಥರೊಬ್ಬರ ಮನೆಯಲ್ಲಿ ಹೀಗೇ ಹರಟೆ ಹೊಡೆಯುತ್ತ್ದ್ದಿದಾಗ ಒಬ್ಬರು, ಓದು ಮುಗಿದು ಕೆಲಸಕ್ಕೆ ಹೋಗುತ್ತಿದ್ದರೂ ಇನ್ನೂ ತಾಯಿಯ ಕೈಲಿ ಚಡ್ಡಿ ಒಗೆಸಿಕೊಳ್ಳುತ್ತಿದ್ದ ಹುಡುಗನೊಬ್ಬನನ್ನು ಮದುವೆಯಾದ ಮೇಲೆ ಏನು ಮಾಡ್ತೀಯಾ? ಎಂದು ಛೇಡಿಸುತ್ತಿದ್ದರು. ಆ ಹುಡುಗ ಏನೂ ಕಮ್ಮಿಯಿಲ್ಲ, ಹೆಂಡತಿ ಕೈಲಿ ತೊಳೆಸ್ತೀನಿ ಎನ್ನಬೇಕೇ!? ಇದು ಆ ಸಂದರ್ಭಕ್ಕೆ ತಮಾಷೆಯಾಗಿ ಕಂಡರೂ ತಮಾಷೆಯಲ್ಲ, ಎಷ್ಟೋ ಮನೆಗಳ ವಾಸ್ತವ!

ಬಹುಶಃ ಚಡ್ಡಿ ತಯಾರಿಕೆಯಲ್ಲಿ ದೊಡ್ಡ ಹೆಸರು ಮಾಡಿರುವ ಕಂಪನಿ, ಎಲ್ಲರಿಗೂ ಗೊತ್ತಿರುವ ಬ್ರಾಂಡ್ ಜಾಕಿಯೇ ಇರಬೇಕು. ಅದಕ್ಕೆಂದೇ ದೊಡ್ಡ ದೊಡ್ಡ ಜಾಹೀರಾತುಗಳು ಪತ್ರಿಕೆಗಳಲ್ಲಿ, ಫಲಕಗಳಲ್ಲಿ ರಾರಾಜಿಸುತ್ತಿರುತ್ತವೆ. ಅಷ್ಟೇ ಏಕೆ? ಸಾಮಾನ್ಯವಾಗಿ ಗಂಡಸರು ಬಗ್ಗಿದಾಗ ಪ್ಯಾಂಟ್ ಮೇಲೆ ಗೋಚರಿಸುವ ಪಟ್ಟಿಯೂ ಜಾಕಿಯದೇ! ಅದಕ್ಕೇ ಇರಬೇಕು ಯೋಗರಾಜಭಟ್ಟರು ಜಾಕಿ ಜಾಕಿ ಜಾಕಿ ಜಾಕಿ ಜಾನ್ಕಿ ರಾಮನ್ನ ಚಡ್ಡಿ ತುಣುಕು ಜಾಕಿ ಜಾಕಿ ಜಾಕಿ ಅಂಥ ಹಾಡು ಬರೆದಿದ್ದು! ಅವ್ರ ಏನನ್ನು ಮನಸ್ಸಲ್ಲಿಟ್ಟುಕೊಂಡು ಹಾಡು ಬರೆದಿದ್ದಾರೋ? ಆದ್ರೆ ಆ ಹಾಡು ಕೇಳಿದಾಗ ಮನಸ್ಸಿನಲ್ಲಿ ಜಾಕಿ ಚಡ್ಡಿಯ ನೆನಪು ಒಂದು ಕ್ಷಣ ಬರದೇ ಹೋಗುವುದಿಲ್ಲ. ಆ ಸಿನೆಮಾ ಬಿಡುಗಡೆಯಾಗಿದ್ದ ಸಂದರ್ಭದಲ್ಲಂತೂ ಎಲ್ಲರ ಬಾಯಲ್ಲೂ ಜಾಕಿ ಜಾಕಿ ಎನ್ನುವ ಚಡ್ಡಿಯ ಹಾಡೇ! ಹಿಂದೊಮ್ಮೆ ಯಾವುದೋ ಒಂದು ವಾರ ರಾಜ್ಯದ ಪ್ರಮುಖ ಪತ್ರಿಕೆಯೊಂದರ ಮೊದಲನೆ ಪುಟದಲ್ಲಿ ಗಂಭೀರವಾದ ಸಾಹಿತ್ಯಿಕ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ, ಅದಕ್ಕೆ ಅನಂತಮೂರ್ತಿಯವರ ಅಭಿಪ್ರಾಯ ಪ್ರಕಟವಾಗಿತ್ತು. ಅದರ ಪಕ್ಕದಲ್ಲೇ ಕೆಳಗಿನ ಮೂಲೆಯಲ್ಲಿ ಜಾಕಿ ಚಡ್ಡಿಯ ಅರೆಬೆತ್ತಲೆಯ ದೊಡ್ಡ ಜಾಹೀರಾತು! ಎಲ್ಲಿಂದೆಲ್ಲಿಯ ಸಂಬಂಧ? ಅನಂತಮೂರ್ತಿ ಅವರಿಗೂ ಚಡ್ಡಿಗಳಿಗೂ ಆಗುವುದೇ ಇಲ್ಲ, ಒಂದು ಎಡ, ಮತ್ತೊಂದು ಬಲ ಎನ್ನುವ ಯೋಚನೆ ಬಂದು ಪುಟವಿನ್ಯಾಸವನ್ನು ನೋಡಿ ನಕ್ಕಿದ್ದೇ ನಕ್ಕಿದ್ದು!

ಬರೀ ಪತ್ರಿಕೆಯಲ್ಲಿ ಮಾತ್ರವಲ್ಲ; ದಿನಾ ಆಫೀಸಿಗೆ ಹೋಗುವಾಗ ಎಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆಯೋ, ಎಲ್ಲಿ ಸ್ಲೋ ಮೂವಿಂಗ್ ಟ್ರಾಫಿಕ್ ಇರುತ್ತದೆಯೋ ಅದೇ ಆಯಕಟ್ಟಿನ ಜಾಗದಲ್ಲಿ ದೊಡ್ಡದಾದ ಜಾಕಿ ಜಾಹೀರಾತು ಫಲಕ! ಕಣ್ಣು ಅಲ್ಲಿಗೆ ಹೋಗದಿರಲು ಸಾಧ್ಯವೇ ಇಲ್ಲ! ಅಷ್ಟಷ್ಟು ದಿನಗಳಿಗೊಮ್ಮೆ ಅದರ ಡಿಸೈನ್-ಕಾನ್ಸೆಪ್ಟ್ ಬದಲಾಗುತ್ತಿರುತ್ತದೆ. ಒಮ್ಮೆ ಒಬ್ಬಳು ಹುಡುಗಿ ಜಾಕಿ ಚಡ್ಡಿ ಬನಿಯನ್‌ಗಳನ್ನು ಹಾಕಿಕೊಂಡು ಎಕ್ಸರ್‌ಸೈಜ್ ಮಾಡುವಂತೆ ಕಾಲುಗಳನ್ನು ಮೇಲೆತ್ತಿಕೊಂಡಿದ್ದರೆ ಮತ್ತೊಮ್ಮೆ ದೊಡ್ಡ ಗಂಡಸು ಜಾಕಿ ಚಡ್ಡಿ ಧರಿಸಿ ಮೈ ಕೈ ಬಿಟ್ಟುಕೊಂಡು ನಿಂತಿರುತ್ತಾನೆ. ಅದನ್ನು ನೋಡಿದಾಗಲೆಲ್ಲಾ ಮನೆಯಲ್ಲಿ ಚಡ್ಡಿಗೆ ಸಂಬಂಧಿಸಿದಂತೆ ನಡೆದ ಘಟನೆಗಳು ನೆನಪಾಗಿ ನಗು ಉಕ್ಕುತ್ತಿರುತ್ತದೆ. ಒಬ್ಬಳೇ ನಗುತ್ತಾ ಹೋಗುತ್ತಿರುವ ನನ್ನನ್ನು ನೋಡಿ ಅಕ್ಕಪಕ್ಕದಲ್ಲಿ ಹೋಗುತ್ತಿರುವವರು ಹುಚ್ಚು ಅಂದುಕೊಳ್ಳದಿದ್ದರೆ ಸಾಕು!

ಹೀಗೆ... ಕೆಲವೊಮ್ಮೆ ಇರಿಸುಮುರಿಸಿಗೆ, ಮತ್ತೆ ಕೆಲವೊಮ್ಮೆ ತಮಾಷೆಗೆ ಕಾಲೆಳೆಯುವುದಕ್ಕೆ, ಮತ್ತೆಷ್ಟೋ ಬಾರಿ ನನ್ನ ಮತ್ತು ನನ್ನವನ ನಡುವೆ ಸರಸ ಸಂಭಾಷಣೆಗೂ ಚಡ್ಡಿ ಕಾರಣವಾಗುತ್ತದೆ. ಚಡ್ಡಿಯನ್ನು ನಿಭಾಯಿಸುವುದರ ಮೇಲೆ ವ್ಯಕ್ತಿಯ ಗುಣವನ್ನೂ ಅಳೆಯಬಹುದೇನೊ ಅನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT