ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಬಿಯಿಂದ ಚಿಮ್ಮಿದ ಚಿಣ್ಣರಲೋಕ!

Last Updated 28 ಮೇ 2011, 19:30 IST
ಅಕ್ಷರ ಗಾತ್ರ

ಮಕ್ಕಳ ಚಿತ್ರಗಳಲ್ಲಿ ಎರಡು ಜನಪ್ರಿಯ ಪ್ರಕಾರಗಳಿವೆ. ಮಕ್ಕಳಿಗೆ ಸಂಬಂಧಿಸಿದಂತೆ ಸಮಾಜಕ್ಕೆ ಉಪದೇಶ ಕೊಡುವ ರೀತಿಯ ಉದ್ದೇಶದವು ಮೊದಲ ರೀತಿಯ ಚಿತ್ರಗಳು. ಮಕ್ಕಳನ್ನು ಪರಾಕ್ರಮಿಗಳನ್ನಾಗಿ ಬಿಂಬಿಸುವ ಚಿತ್ರಗಳು ಇನ್ನೊಂದು ಬಗೆಯವು.

ಮೊದಲನೆಯದರಲ್ಲಿ ಯಾವುದಾದರೊಂದು ಬಗೆಯಲ್ಲಿ ಶೋಷಣೆಗೊಳಗಾದ ಹುಡುಗನೋ ಹುಡುಗಿಯೋ ಕೇಂದ್ರಪಾತ್ರವಾದರೆ ಇನ್ನೊಂದರಲ್ಲಿ ಅತಿಮಾನುಷ ಶಕ್ತಿ ಹಾಗೂ ಜಾಣ್ಮೆ ಇರುವ ವ್ಯಕ್ತಿಯಂತೆ ಮಕ್ಕಳನ್ನು ಪ್ರಸ್ತುತಪಡಿಸುವ ಪ್ರಯತ್ನಗಳನ್ನು ಕಾಣುತ್ತೇವೆ. ಇವೆರಡೂ ವಿಧಾನಗಳು ಮಕ್ಕಳ ಮನಸ್ಸಿನ ಎಲ್ಲ ಬಗೆಯ ಪೂರೈಕೆಗಳನ್ನು ಈಡೇರಿಸುವುದರಲ್ಲಿ ವಿಫಲವಾಗಿವೆಯೆಂದೇ ಹೇಳಬೇಕಾಗುತ್ತದೆ.

ಇದಕ್ಕೆ ಮುಖ್ಯಕಾರಣ ಚಿತ್ರದ ಪರಿಕಲ್ಪನೆಗಳೇ ಮಕ್ಕಳ ಮನಸ್ಸಿನಿಂದ ಹೊರತಾದವು ಮತ್ತು ಅವರ ನೈಜ ಪ್ರಪಂಚಕ್ಕೆ ದೂರವಾದವು.

ಮೇಲಿನ ಎರಡು ರೀತಿಗಳಿಗೆ ಭಿನ್ನವಾದ ಮಕ್ಕಳ ಸಿನಿಮಾ ಇಲ್ಲವೆಂದಲ್ಲ. ಚಿಣ್ಣರನ್ನು ಅನಾಮತ್ತಾಗಿ ಸೆಳೆದುಕೊಂಡು ಸಂತೋಷ, ಭಯ, ಕುತೂಹಲ ಇತ್ಯಾದಿ ಭಾವಗಳಲ್ಲಿ ಅವರನ್ನು ವಿಹರಿಸುವ, ಭ್ರಮಾ ಪ್ರಪಂಚವನ್ನು ಯಶಸ್ವಿಯಾಗಿ ಸೃಷ್ಟಿಸಿದ ಇಂಗ್ಲೀಷ್‌ನ `ಹ್ಯಾರಿ ಪಾಟರ್~ ಚಿತ್ರಗಳು ಮತ್ತು ಇರಾನಿನ ಪರ್ಷಿಯನ್ ಭಾಷೆಯ ಮಜಿದ್ ಮಜಿದಿ ನಿರ್ದೇಶನದ `ಚಿಲ್ಡ್ರನ್ಸ್ ಆಫ್ ಹೆವನ್~ ರೀತಿಯ ಚಿತ್ರಗಳಿವೆ. 

ನಮ್ಮ ದೇಶದಲ್ಲಿಯೂ ಕಳೆದ ದಶಕದಲ್ಲಿ ಗಮನಾರ್ಹ ಹಿಂದಿ ಚಿತ್ರಗಳು ತಯಾರಾಗಿವೆ. ರಾಕೇಶ್ ರೋಷನ್ ನಿರ್ದೇಶನದ `ಕೋಯಿ ಮಿಲ್ ಗಯಾ~ (2003), ನಾಗೇಶ್ ಕುಕನೂರರ `ಇಕ್ಬಾಲ್~ (2005) ಮತ್ತು ಅಮೀರ್ ಖಾನ್ ನಿರ್ದೇಶನದ `ತಾರೆ ಜಮೀನ್ ಪರ್ (2007) ಇವುಗಳನ್ನು ಹೆಸರಿಸಬೇಕು. ಈ ಸಾಲಿಗೆ ಸೇರುವ 2011ರ ಚಿತ್ರ `ಸ್ಟ್ಯಾನ್ಲೆ ಕಾ ಡಬ್ಬ~.

ಅಮೋಲ್ ಗುಪ್ತೆ ನಿರ್ದೇಶನದ `ಸ್ಟ್ಯಾನ್ಲೆ ಕಾ ಡಬ್ಬ~ ಪ್ರಚಲಿತ ಸಮಸ್ಯೆ ಮತ್ತದರ ಪರಿಹಾರವನ್ನು ಸೂಚಿಸುವ ರೂಢಿಗತ ಮಾರ್ಗ ಅನುಸರಿಸಿಲ್ಲ. ಬಹುತೇಕ ಮಕ್ಕಳ ಬದುಕಿನ ತುಣುಕನ್ನು ಸಾಧ್ಯವಾದಷ್ಟು ವಾಸ್ತವಿಕ ನೆಲೆಗಟ್ಟಿನಲ್ಲಿ ಪ್ರಸ್ತುತಪಡಿಸುವ ಪ್ರಾಮಾಣಿಕ ಪ್ರಯತ್ನ ಈ ಚಿತ್ರದಲ್ಲಿದೆ.

ಕುತೂಹಲಕರ ಸಂಗತಿಯೆಂದರೆ ಅಮೋಲ್ ಗುಪ್ತೆ `ತಾರೆ ಜಮೀನ್ ಪರ್~ ಚಿತ್ರಕಥೆ ರಚನೆಯಲ್ಲಿ ಅಮೀರ್‌ಗೆ ಸಹಯೋಗ ಒದಗಿಸಿದ್ದಾರೆ. ಎರಡು ಚಿತ್ರಗಳಲ್ಲೂ ಕೆಲವು ಸಮಾನ ಅಂಶಗಳಿವೆ. ಎರಡೂ ಚಿತ್ರಗಳು ಶಾಲಾ ವಾತಾವರಣದ ಹಿನ್ನೆಲೆ ಹೊಂದಿವೆ. ಎರಡರಲ್ಲಿಯೂ ಶಿಕ್ಷಕರ ಪಾತ್ರ ಮಹತ್ವದ್ದು. ಮೊದಲನೆಯದರಲ್ಲಿ ವಿಚ್ಛಿದ್ರ, ಅಸಂತುಷ್ಟ ಮನಸ್ಥಿತಿಯ ವಿದ್ಯಾರ್ಥಿಗೆ ಬೆಂಬಲ ಮತ್ತು ಸ್ಫೂರ್ತಿಯನ್ನು ಒದಗಿಸಿ ಅವನೊಳಗಿರುವ ಸ್ವಶಕ್ತಿ ರೂಪುಗೊಳ್ಳಲು ಶ್ರಮಿಸಿ ಯಶಸ್ವಿಯಾಗುವ ವಸ್ತುವಿದೆ.

ಇದರಿಂದಾಗಿ ವಿದ್ಯಾರ್ಥಿ ಮತ್ತು ಶಿಕ್ಷಕರಿಬ್ಬರೂ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಮಕ್ಕಳ ಚಿತ್ರವಾದರೂ, ಈಗಾಗಲೇ ಸಿದ್ಧರೂಪದಲ್ಲಿರುವ ಉದಾತ್ತ ಮತ್ತು ಆದರ್ಶ ಪಾತ್ರಗಳಿಗೆ ಅನುಗುಣವಾಗಿ ಪರಿಕಲ್ಪಿತ ಪಾತ್ರವಾಗಿರುವುದರಿಂದ ಟೀಚರ್ ಪಾತ್ರದ (ಅಮೀರ್ ಖಾನ್) ಅಗ್ಗಳಿಕೆಗೆ ಆ ಪಾತ್ರದ ನಿರೂಪಣೆ, ಅಭಿನಯ ಇತ್ಯಾದಿಗಳ ಜೊತೆ ಚಲನಚಿತ್ರದ ಪರಿಕರಗಳ ಸಮರ್ಥ ಹಾಗೂ ಯುಕ್ತ ಉಪಯೋಗ ಕಾರಣವಾಗಿದೆ. 

ಹೈಸ್ಕೂಲ್ ವಿದ್ಯಾರ್ಥಿ ಸ್ಟ್ಯಾನ್ಲೆ ತನ್ನ ಸಹಪಾಠಿಗಳಂತೆ ಊಟದ ಡಬ್ಬಿ ತರಲು ಅಸಮರ್ಥ. ಇದನ್ನು ವಿಶೇಷವಾಗಿ ಪರಿಗಣಿಸದ ಸಹಪಾಠಿಗಳು ತಾವು ತಂದಿರುವುದನ್ನು ಅವನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಸ್ಕೂಲಿನ ಹೊಟ್ಟೆಬಾಕ ಹಿಂದಿ ಮೇಷ್ಟ್ರು ಬಾಬುಭಾಯಿ ವರ್ಮ ಇದನ್ನು ಸಹಿಸುವುದಿಲ್ಲ. ಊಟದ ಡಬ್ಬಿ ತಾರದಿದ್ದರೆ ಸ್ಕೂಲಿಗೆ ಬರಕೂಡದೆಂದು ಸ್ಟ್ಯಾನ್ಲೆಗೆ ತಾಕೀತು ಮಾಡುತ್ತಾನೆ.

ಸ್ಕೂಲಿಗೆ ಬಾರದೆ ಹೋಗುವ ಸ್ಟ್ಯಾನ್ಲೆ ಸ್ವಸಾಮರ್ಥ್ಯದಿಂದ ಅಂತರ ಹೈಸ್ಕೂಲ್ ಮೇಳದಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ತನ್ನ ಅನುಚಿತ ವರ್ತನೆಯಿಂದ ವಿದ್ಯಾರ್ಥಿಯೊಬ್ಬನಿಗೆ ತೊಂದರೆಯಾಯಿತೆಂದು ತಿಳಿದ ಮೇಷ್ಟ್ರು ಸ್ಕೂಲಿನಿಂದ ನಿರ್ಗಮಿಸುತ್ತಾನೆ. ತಂದೆ-ತಾಯಿಯಿಲ್ಲದ ಸ್ಟ್ಯಾನ್ಲೆ ಹೊಟೆಲೊಂದರಲ್ಲಿ ದುಡಿಯುತ್ತಾನೆಂದು ಸ್ಥಾಪಿತಗೊಳ್ಳುವುದರಲ್ಲಿ ಚಿತ್ರ ಕೊನೆಗೊಳ್ಳುತ್ತದೆ.

ಸ್ಟ್ಯಾನ್ಲೆ ಚಿತ್ರದ ಕಥಾನಕವೇ ವಿಶೇಷಗುಣ ಹೊಂದಿದೆ. ಪಾತ್ರಗಳ ಪರಿಕಲ್ಪನೆಯಲ್ಲಿಯೇ ರೂಢಿಗತವಾಗಿ ಬಂದದ್ದರಿಂದ ಭಿನ್ನವಾಗಿದೆ. ಇಲ್ಲಿ ಯಾವ ಪಾತ್ರವೂ ಆದರ್ಶದ ಮಾದರಿಯನ್ನು ಹೊಂದಿಲ್ಲ, ಮುಖ್ಯವಾಗಿ ಹಿಂದಿ ಮೇಷ್ಟ್ರು ವರ್ಮಾನ ಪಾತ್ರ. ಅವನು ಮಕ್ಕಳ ಮತ್ತು ಸಹೋದ್ಯೋಗಿಗಳ ಊಟದ ಡಬ್ಬಿಯ ಕಡೆಗೇ ಗಮನವಿರುವಂಥ ದೌರ್ಬಲ್ಯವಿರುವ ವ್ಯಕ್ತಿ.

ಮುಖ್ಯಪಾತ್ರವಾದ ಸ್ಟ್ಯಾನ್ಲೆ ಸ್ವಾಭಿಮಾನಿ, ಸೂಕ್ಷ್ಮ ಮನಸ್ಸಿನ ಬಾಲಕ. ಈ ಪ್ರಮುಖ ಪಾತ್ರಗಳನ್ನು ಒಳಗೊಂಡು ಚಿತ್ರಕತೆಯಾಗಿ ಮಾರ್ಪಟ್ಟು, ಅನಂತರ ಚಿತ್ರ ತೆರೆದುಕೊಳ್ಳುವ ಬಗೆಯನ್ನು ಗಮನಿಸುವುದು ಒಳ್ಳೆಯದು.

ಮೊದಲ ನೋಟಕ್ಕೆ ವಿಶೇಷವೆನಿಸುವಂತೆ ಒಬ್ಬ ಮನುಷ್ಯ ಮತ್ತು ಹುಡುಗನೊಬ್ಬನ ನಡುವೆ ಡಬ್ಬಿಯೊಂದನ್ನು ಪಡೆಯುವ, ಬದಲಾಯಿಸಿಕೊಳ್ಳುವ ಆನಿಮೇಷನ್ (ಗೀತಾಂಜಲಿ ರಾವ್) ಚಿತ್ರದ ಪ್ರಾರಂಭಕ್ಕೆ ಮೊದಲು, ಅದರ ಕ್ರೆಡಿಟ್ಸ್‌ಗಳ ನಡುವೆ ಕಾಣಿಸಿಕೊಳ್ಳುತ್ತದೆ. ಆನಂತರ, ಶಾಲೆಗೆ ಎಲ್ಲರಿಗಿಂತ ಮುಂಚೆ ಬಂದು ಒಬ್ಬಂಟಿಯಾಗಿ ಕುಳಿತುಕೊಳ್ಳುವ ಸ್ಟ್ಯಾನ್ಲೆಯ ಚಿತ್ರ.

ಹರಿದ ಜೇಬಿನ ಅಂಗಿ ಮತ್ತು ತಿದ್ದಿತೀಡದ ಮುಖಗಳ ಇವನು ಉಲ್ಲಾಸ ಹುಟ್ಟಿಸುವುದಿಲ್ಲ. ಸಹಪಾಠಿಗಳು ಬಂದು ಎಬ್ಬಿಸುವ ತನಕ ಅವನಿಗೆ ನಿದ್ದೆ. ಚಿತ್ರದ ಪ್ರಾರಂಭದಲ್ಲಿಯೇ, ಸ್ಟ್ಯಾನ್ಲೆಯ ಈ ವ್ಯಕ್ತಿತ್ವದ ಮೇಲೆ ಒತ್ತು ಕೊಡುವಂತೆ ಸಮೀಪ ಚಿತ್ರಿಕೆಯಲ್ಲಿ ಚಿತ್ರಿಸಿ ಅದಕ್ಕೆ ಕಾರಣವನ್ನು ನಿರ್ದೇಶಕರು ಚಿತ್ರದ ಕೊನೆಯ ನಿಮಿಷಗಳಲ್ಲಿ ಒದಗಿಸುತ್ತಾರೆ. ಆನಂತರ, ಮಕ್ಕಳೆಲ್ಲರೂ ಸೇರುವುದರೊಂದಿಗೆ ಶಾಲಾ ಪರಿಸರದಲ್ಲಿ ಲವಲವಿಕೆ ಕಾಣಿಸಿಕೊಳ್ಳುತ್ತದೆ.

ಸ್ಟ್ಯಾನ್ಲೆ ಪಾತ್ರದ ಪಾರ್ಥೋ ಸೇರಿದಂತೆ ಯಾರೂ ಚಿತ್ರದಲ್ಲಿ ಅಭಿನಯಿಸಿದಂತೆ ಕಾಣಿಸುವುದಿಲ್ಲ. ಮಕ್ಕಳು ಸುಮ್ಮನೆ ವರ್ತಿಸುತ್ತಾರಷ್ಟೆ. ಇದು ಚಿತ್ರದ ಅಗ್ಗಳಿಕೆಗಳಲ್ಲೊಂದು. ಚಿತ್ರದ ನಿರ್ದೇಶಕ ಅಮೋಲ್ ಗುಪ್ತೆ ಅಭಿನಯಿಸಿರುವ ಹಿಂದಿ ಮೇಷ್ಟ್ರು ಪಾಠ ಮಾಡುವ ಮಧ್ಯೆಯೇ ಅವನ ಹೊಟ್ಟೆಬಾಕತನವನ್ನು, ಮಕ್ಕಳು ತರುವ ಊಟದ ಡಬ್ಬಿಗಳ ಮೇಲಿನ ಮೋಹವನ್ನು ಚುರುಕಾಗಿ ಪ್ರಸ್ತುತಪಡಿಸಲಾಗಿದೆ.

ಇದು ಚಿತ್ರದುದ್ದಕ್ಕೂ ವಿಸ್ತರಿಸಿದ್ದರೂ ಸ್ಟ್ಯಾನ್ಲೆ ಡಬ್ಬಿ ತಾರದೆ ಇರುದಿರುವುದು ಟೀಚರ್ ಗಮನಕ್ಕೆ ಪ್ರಾರಂಭದಲ್ಲೇ ಬಂದಿರುತ್ತದೆ. ಆದರೆ ಅವರು ಅದನ್ನು ವಿಶೇಷವಾಗಿ ಭಾವಿಸಿರುವುದಿಲ್ಲ. ಸ್ಟ್ಯಾನ್ಲೆಯ ಜೊತೆ ಅಂತಃಕರಣದಿಂದ ನಡೆದುಕೊಳ್ಳುವ ಇಂಗ್ಲಿಷ್ ಟೀಚರ್ ರೋಸಿ ಮಿಸ್ (ದಿವ್ಯಾ ದತ್ತ) ಮತ್ತು ಮಕ್ಕಳನ್ನು ವಸ್ತುಗಳಂತೆ ಕಾಣುವ ವಿಜ್ಞಾನದ ಟೀಚರ್ ಮಿಸೆಸ್ ಅಯ್ಯರ್ (ದಿವ್ಯಾ ಜಗದಾಲೆ) ಕೂಡ ಚಿತ್ರದಲ್ಲಿದ್ದಾರೆ.

ಇಡೀ ಚಿತ್ರದಲ್ಲಿ ನಾಟಕೀಯವೆಂದು ಪರಿಗಣಿಸಲು ಸಾಧ್ಯವಾಗುವ ಯಾವ ಘಟನೆಯೂ ಸಂಭವಿಸುವುದಿಲ್ಲ. ಕಥನದ ಮುಂದುವರಿಕೆ ಹಾಗೂ ಕುತೂಹಲ ಕಾಪಾಡಿಕೊಳ್ಳುವ ದೃಷ್ಟಿಯಿಂದ ತರಗತಿಯ ಒಳಗೆ ಮತ್ತು ಸ್ಕೂಲಿನ ಆವರಣಕ್ಕೆ ಸೀಮಿತವಾದಂತೆ ಸಣ್ಣಪುಟ್ಟ ಘಟನೆಗಳು ಜರುಗುತ್ತಲೇ ಇರುತ್ತವೆ.

ಡಬ್ಬಿ ತಾರದಿರುವ ಸ್ಟ್ಯಾನ್ಲೆ ತಾನೊಬ್ಬನೇ ಏನಾದರೂ ತಿಂದು ಬರುವೆನೆಂದು ಹೊರಗೆ ಹೋಗಿ ನಲ್ಲಿಯ ನೀರು ಕುಡಿಯುವುದು ಅವನ ನಿಜ ಪರಿಸ್ಥಿತಿಯ ಬಗ್ಗೆ ಅನುಕಂಪ ಹುಟ್ಟಿಸುವುದಿಲ್ಲವಾದರೂ ಕುತೂಹಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಅವನ ಸ್ವಾಭಿಮಾನವನ್ನು ಬಿಂಬಿಸುವಲ್ಲಿ ಯಶಸ್ವಿಯಾಗುತ್ತದೆ. ಇಂಥ ದೃಶ್ಯಗಳಲ್ಲಿ ಸ್ಟ್ಯಾನ್ಲೆ ಪಾತ್ರದ ಪಾರ್ಥೋನ ಸಂಯಮದ ಅಭಿನಯ ಮೆಚ್ಚುಗೆ ಗಳಿಸುತ್ತದೆ.

ಸ್ಟ್ಯಾನ್ಲೆ ಮತ್ತು ಹಿಂದಿ ಟೀಚರ್ ಪಾತ್ರಗಳನ್ನು ಬಿಟ್ಟರೆ ಹತ್ತೆಂಟು ವಿವಿಧ ಬಗೆಯ ಊಟದ ಡಬ್ಬಗಳೇ ಚಿತ್ರದ ಬಹುಭಾಗವನ್ನು ಆಕ್ರಮಿಸಿಕೊಂಡಿದೆ. ಏರಿಳಿತವಿಲ್ಲದ ಲಯ ಮತ್ತು ಗತಿಯಲ್ಲಿ ಚಿತ್ರ ಮುಂದುವರಿಯುತ್ತದೆ. ಈ ಭಾಗದಲ್ಲಿ ಹಿಂದಿ ಟೀಚರ್‌ನ ನಿಯಂತ್ರಣದಲ್ಲಿ  ಸ್ಟ್ಯಾನ್ಲೆ ಸೇರಿದಂತೆ ತರಗತಿಯ ಉಳಿದ ಹುಡುಗರು ಇರುತ್ತಾರೆ.

ಆದರೆ ಅವರೆಲ್ಲ ಒಂದುಗೂಡಿ ಆ ಟೀಚರ್‌ಗೆ ತಮ್ಮ ಡಬ್ಬಿಗಳು ಸಿಗದಂತೆ ಇಡಲು ಹಾಗೂ ತಿಂಡಿಯನ್ನು ಹಂಚಿಕೊಂಡು ತಿನ್ನಬೇಕೆಂದು ಆಟ ಹೂಡುತ್ತಾರೆ. ಇದರಿಂದ ಸಿಟ್ಟಾಗುವ ಮೇಷ್ಟ್ರು, ಸ್ಟ್ಯಾನ್ಲೆಗೆ ತರಗತಿಗೆ ಬರಕೂಡದೆಂದು ಅರ್ಥವಿಲ್ಲದ ಶಿಕ್ಷೆ ವಿಧಿಸುತ್ತಾರೆ.

ಮೇಷ್ಟ್ರ ವಿರುದ್ಧದ ಘರ್ಷಣೆಯ ಕಾರಣ ಹುಡುಗರೆಲ್ಲರೂ ಒಂದು ತಂಡದ ರೀತಿಯಲ್ಲಿ  ವರ್ತಿಸಲು ತೊಡಗುವ ಈ ಸಂದರ್ಭದಲ್ಲೂ ಸಂಯಮದ ಭಾವಾಭಿವ್ಯಕ್ತಿ ಎಲ್ಲ ಪಾತ್ರಗಳಲ್ಲೂ ಕಾಣಿಸುತ್ತದೆ. ಇಡೀ ಸಿನಿಮಾ ಸಹಜ ಮತ್ತು ವಾಸ್ತವತೆಯ ಪರಿಧಿ ಮೀರುವುದಿಲ್ಲ.

ಶಿಕ್ಷೆಗೆ ಒಳಗಾಗಿ ಶಾಲೆಗೆ ಬಾರದೆ ಸಹಪಾಠಿಗಳ ತಲ್ಲಣಕ್ಕೆ ಕಾರಣನಾಗುವ ಸ್ಟ್ಯಾನ್ಲೆ, ಸ್ವಪ್ರಯತ್ನದಿಂದ ಅಂತರಶಾಲಾ ಮೇಳ ನಡೆಯುವ ಸ್ಥಳ ಪತ್ತೆ ಹಚ್ಚಿ, ನೃತ್ಯ ಕಲಿತು, ಸಮಾರಂಭದಲ್ಲಿ ಹಾಡಿ ಕುಣಿದು ಮೆಚ್ಚುಗೆ ಗಳಿಸುವುದು ಚಿತ್ರದಲ್ಲಿರುವ ರಂಜನೆಯ ಭಾಗ. ಇದಾದ ನಂತರವೇ ಹಿಂದಿ ಶಿಕ್ಷಕ ವರ್ಮಾ ಅಪರಾಧಿ ಪ್ರಜ್ಞೆಯಿಂದ ಸ್ಕೂಲು ತೊರೆದು ಹೋಗುತ್ತಾನೆ.

ಚಿತ್ರದ ಕೊನೆಯ ತಿರುವಿನಲ್ಲಿ ಸ್ಟ್ಯಾನ್ಲೆ ಹೋಟೆಲೊಂದರಲ್ಲಿ ರಾತ್ರಿ ಹೊತ್ತಿನಲ್ಲಿ ಕೆಲಸ ಮಾಡುತ್ತಿದ್ದಾನೆ. ತೀವ್ರಗತಿಯ ಚಲನೆ ಇರುವ ಪುಟ್ಟ ಅವಧಿಯ ದೃಶ್ಯಗಳ ನಂತರ, ಮಕ್ಕಳಿಗೆ ತಿಂಡಿಗಳಿರುವ ಡಬ್ಬಿಗಳಿರುವ ಕ್ಯಾರಿಯರನ್ನು ಸ್ಕೂಲಿಗೆ ತೆಗೆದುಕೊಂಡು ಹೋಗಲು ಪ್ರಾರಂಭಿಸುತ್ತಾನೆ. ಅಂಥ ಡಬ್ಬಿಗಳಿಂದ ಮೊದಲು ಇನ್ನೊಬ್ಬರಿಂದ ತಿಂಡಿ ಪಡೆಯುತ್ತಿದ್ದವನು ಈಗ ಎಲ್ಲರಿಗೂ ಹಂಚುವ ಸ್ಥಿತಿ ತಲುಪುತ್ತಾನೆ.

ಇಷ್ಟೆಲ್ಲ ವಿಶೇಷಗಳಿದ್ದರೂ ಚಿತ್ರ ಕೆಲವು ದೋಷಗಳನ್ನೂ ಹೊಂದಿದೆ. ಹೋಟೆಲಿನಲ್ಲಿ ಕೆಲಸ ಮಾಡುವ ಹುಡುಗ ದುಬಾರಿ ಸ್ಕೂಲಿಗೆ ಸೇರಲು ಸಾಧ್ಯವೇ ಎನ್ನುವುದು ಮೊದಲ ತಕರಾರು. ವರ್ಮಾನ ಅಭಿನಯ ಸಹಜತೆ ಮತ್ತು ಉತ್ಪ್ರೇಕ್ಷೆಯ ವಿರೋಧಾಭಾಸಗಳಿಂದ ಕೂಡಿದೆ.

ಇಡೀ ಚಿತ್ರವನ್ನು ಕ್ಯಾನೆನ್ 7ಡಿ ಡಿಜಿಟಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಛಾಯಾಗ್ರಾಹಕ ಅಮೋಲ್ ಗೋಲೆ ಒಳಾಂಗಣದಲ್ಲಿ ಕೂಡ ಪ್ರತ್ಯೇಕ ಬೆಳಕಿನ ವ್ಯವಸ್ಥೆ ಇಲ್ಲದೆ ಶೂಟಿಂಗ್ ಮಾಡಿ ಸಮಾಧಾನಕರ ಪರಿಣಾಮವನ್ನು ಪಡೆದಿರುವುದಾಗಿ ಹೇಳಿದ್ದಾರೆ. ಸಿನಿಮಾ ತಯಾರಿಕೆಯ ವೆಚ್ಚವನ್ನು ಬಹಳಷ್ಟು ಕಡಿಮೆ ಮಾಡುವ ಈ ಬಗೆಯ ಚಿತ್ರೀಕರಣವನ್ನು ಸಿನಿಮಾ ಉತ್ಸಾಹಿಗಳು ಗಮನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT