ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಯಾವುದಯ್ಯ ಧರ್ಮಕ್ಕೆ!!

Last Updated 30 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಧರ್ಮದ ಸ್ಥಾನ ನೀಡಿ’, ಹಾಗಂದರೇನು! ‘ಧರ್ಮ’ ಕುರಿತ ಅಧ್ಯಯನದಲ್ಲಿ ವಾಸ್ತವದ ನೆಲಗಟ್ಟಿನ ಮೇಲೆ ಸಾಗುವ ಸಾಪೇಕ್ಷ ಚಿಂತನೆಗೆ ಒಂದು ಕ್ಷಣ ದಿಗ್ಭ್ರಾಂತಿಯ ಸ್ಪರ್ಶ ನೀಡುವ ಮಾತಿದು. ಧರ್ಮವನ್ನು ಕುರಿತ ನಿಚ್ಚಳ ಅರಿವಿನ ಕೊರತೆಯು ಇಂದು ಸರ್ವತ್ರ ತಾಂಡವವಾಡುತ್ತಿರುವುದು ಶೋಚನೀಯ. ಕುಟುಂಬದ ಮೊದಲ ಗುರುವಿನಿಂದ ಹಿಡಿದು ವಿಶ್ವವಿದ್ಯಾಲಯಗಳ ಉನ್ನತ ವ್ಯಾಸಂಗದ ವರೆಗೂ ಎಲ್ಲಿಯೂ ಧರ್ಮದ ವಾಸ್ತವ ಅರ್ಥವಾಗಲಿ, ವಿಶ್ಲೇಷಣೆಯಾಗಲಿ ಬೋಧನೆಯಲ್ಲೂ ಇಲ್ಲ, ಕಲಿಕೆಯಲ್ಲೂ ಕಾಣದು. ಧರ್ಮದ ಮೂಲಾರ್ಥವನ್ನು ತೊರೆದು ಮತವನ್ನೇ ಧರ್ಮವೆಂದು ಭಾವಿಸಿ, ಮತದ ಅರ್ಥವನ್ನೂ ವೈಜ್ಞಾನಿಕವಾಗಿ ಗ್ರಹಿಸದೆ, ವಿಭಿನ್ನ ತತ್ವ ಹಾಗೂ ಆಚರಣಾ ಕ್ರಮಗಳೊಂದಿಗೆ ಅಪಮಾರ್ಗಗಳಲ್ಲಿ ಸಮುದಾಯಗಳು ಸಾಗುತ್ತಿರುವುದನ್ನು ಪ್ರತ್ಯಕ್ಷ ಕಾಣುತ್ತಿದ್ದೇವೆ. ಮಠಾಧೀಶರು, ಜಗದ್ಗುರುಗಳು, ಧರ್ಮಗುರುಗಳು, ಮತೀಯ ಮುಖಂಡರು, ರಾಜಕಾರಣಿಗಳು, ಪ್ರಾಧ್ಯಾಪಕರು, ಸಾಹಿತಿಗಳು, ಮಾಧ್ಯಮಗಳು, ಕೆಲವೊಮ್ಮೆ ವಿಜ್ಞಾನಿಗಳೂ ಕೂಡ ‘ಧರ್ಮ’ ವನ್ನು ಅದರ ವ್ಯತಿರಿಕ್ತ ಅರ್ಥದಲ್ಲಿಯೇ ಗ್ರಹಿಸುತ್ತಾ ಎಲ್ಲೆಡೆ ದಿಕ್ಕು ತಪ್ಪಿದ ಹಾದಿಯನ್ನು ತುಳಿದಿರುವುದು ಸ್ಪಷ್ಟವಾಗಿದೆ.

ಹಿಂದೂ, ಕ್ರೈಸ್ತ, ಇಸ್ಲಾಮ್, ಜೈನ, ವೀರಶೈವ, ಬೌದ್ಧ, ಯಹೂದ್ಯ, ಸಿಖ್, ಪಾರಸಿಕ, ಮುಂತಾಗಿ ಇವೆಲ್ಲವೂ ಮತಗಳು; ಧರ್ಮಗಳಲ್ಲ. ವಾಸ್ತವದಲ್ಲಿ ಧರ್ಮ ‘ಗಳು’ ಎಂಬುದಿಲ್ಲ. ಧರ್ಮವೆಂಬುದು ಇರುವುದು ಸ್ಫುಟವಾಗಿ ಮತ್ತು ಖಚಿತವಾಗಿ ಒಂದೇ. ಧರ್ಮ-ಗಳು ಎಂದಾಗ ಭೂಮಿ-ಗಳು, ನೀರು-ಗಳು, ಗಾಳಿ-ಗಳು, ಬೆಳಕು-ಗಳು, ರಕ್ತ-ಗಳು, ಎಂದಂತೆ (ಅ)ಭಾಸವಾಗುತ್ತದೆ. ‘ಮತ’ವನ್ನೇ ‘ಧರ್ಮ’ವೆಂದು ತಪ್ಪಾಗಿ ಭಾವಿಸಿದ ಮಾನವ ಸಮುದಾಯಗಳು ಪೃಥ್ವಿಯ ಮೇಲೆ ಸಾಮಾಜಿಕ ಅನಾಹುತಗಳ, ದುರಂತಗಳ ಪರಂಪರೆಯನ್ನೇ ಸೃಷ್ಟಿಸಿವೆ. ಹಿಂದೂ ಮತದಿಂದ ಇಸ್ಲಾಮ್ ಮತಕ್ಕೆ ವರ್ಗವಾಗುವುದು ಅಥವಾ ಇಸ್ಲಾಮ್‍ನಿಂದ ಕ್ರೈಸ್ತಮತ ಸ್ವೀಕರಿಸುವುದು ‘ಮತಾಂತರ’ವೇ ಹೊರತು ಧರ್ಮಾಂತರ ಅಲ್ಲ. ಧರ್ಮಾಂತರವೆಂಬುದು ಅಸಂಭವ ಹಾಗೂ ಅಸಂಗತ.

‘ಧಾರಯತೀ...’

ಶಾಸ್ತ್ರೋಕ್ತ ವ್ಯಾಖ್ಯಾನದಂತೆ ಧರ್ಮವು ‘ಧಾರಯತಿ ಇತಿ ಧರ್ಮ:’. ವಿಶ್ವದ ಜೀವಕೋಟಿ ಮೊದಲಾಗಿ ಸಮಸ್ತವನ್ನೂ ಧಾರಣೆ ಮಾಡುವಂತಹದು, ಪೊರೆಯುವಂತಹದು. ‘ಧರ್ಮ’ ಎಂಬುದು ವಿಶಾಲ ಅರ್ಥವ್ಯಾಪ್ತಿಯನ್ನು ಹೊಂದಿದೆ. ಅದು ಮನುಷ್ಯನು ತನ್ನ ಸಹ ಮಾನವರೊಂದಿಗೆ ಸಹ ಪ್ರಾಣಿಗಳೊಂದಿಗೆ ಪ್ರಕೃತಿಯೊಂದಿಗೆ ವಿಶ್ವದ ಸಕಲ ಚರ ಮತ್ತು ಅಚರ ವಸ್ತುಗಳೊಂದಿಗೆ ಭೂ ಮಂಡಲದ ಒಬ್ಬ ಸದಸ್ಯನಾಗಿ, ಮನುಷ್ಯ ತನ್ನ ಜೀವಿತದ ಅವಧಿಯಲ್ಲಿ ಹೊಂದಿರಲೇಬೇಕಾದ ವಿಚಾರಪೂರ್ಣ, ವೈಜ್ಞಾನಿಕ ಹಾಗೂ ಸಮಾಜಮುಖಿಯಾದ ಪವಿತ್ರ ಭಾವನೆಗಳನ್ನು ಹಾಗೂ ಅವುಗಳಿಗೆ ಅನುಗುಣವಾದ ಸಾತ್ವಿಕ ವರ್ತನೆಗಳನ್ನು ಕುರಿತ ಒಂದು ಅಖಂಡ ಹಾಗೂ ಸಮಗ್ರವಾದ, ಅಲಿಖಿತ ಸ್ವರೂಪದ ಭಾವಗೋಚರ ನೀತಿಕೋಶ. ಸಮಾಜವನ್ನು ಒಂದು ಬಲಿಷ್ಠವಾದ ನೈತಿಕ ಕಟ್ಟುಪಾಡಿನಲ್ಲಿಟ್ಟು ಕಾಪಾಡುವುದು ಜಗತ್ತಿನಾದ್ಯಂತ ಮನುಷ್ಯ ಕುಲಕ್ಕೆ ಅರಿವು ಮೂಡಿದಂದಿನಿಂದಲೂ ಅನಿವಾರ್ಯವಾಗಿದೆ. ಇಲ್ಲಿ ಮನುಷ್ಯನ ಸಾತ್ವಿಕ ಗುಣಗಳು ಸಮಾಜ ಜೀವನಕ್ಕೆ ಅತ್ಯಗತ್ಯವಾದ ಬಹುಮುಖ್ಯ ಪಾತ್ರವಹಿಸುತ್ತವೆ. ಆ ಗುಣಗಳಲ್ಲೆಲ್ಲ ದಯೆ ಎಂಬುದು ಧರ್ಮವೆಂಬ ನೀತಿ ಕೋಶದ ಅಗ್ರಮಾನ್ಯ ಗುಣ. ಪ್ರಾಣಿದಯೆ, ಭೂತದಯೆಗಳು ಮಾನವ ಸಂಕುಲಕ್ಕೆ ಕಿರೀಟಪ್ರಾಯವಾದವು.

ಉಳಿದಂತೆ ಧರ್ಮದ ಇತರ ಮೂಲ ಧಾತುಗಳ ಒಂದು ಅಪೂರ್ಣ ಪಟ್ಟಿಯನ್ನಿಲ್ಲಿ ಕೊಡಬಹುದು. ಪ್ರಾಮಾಣಿಕ ನಡತೆ, ಜೀವಪ್ರೀತಿ, ಮಮತೆ, ಕರುಣೆ, ವಾತ್ಸಲ್ಯ, ಸತ್ಯನಿಷ್ಠೆ, ಸತ್ಯನಿಷ್ಠುರತೆ, ನಿಸ್ವಾರ್ಥ ಸಹಾಯ, ಸತ್ಪಾತ್ರ ದಾನ, ಅನಿಮಿತ್ತ ಸೌಜನ್ಯ, ಜೀವಕಕ್ಕುಲತೆ, ಮನುಷ್ಯ ಸಮಾನತೆ, ವಿವೇಕಪೂರ್ಣ ಔದಾರ್ಯ, ದು:ಖಿತ ಸಜ್ಜನರಿಗಾಗಿ ಅನುಕಂಪ, ಸಾತ್ವಿಕ ಲಾಭದಲ್ಲಿ ನೀತಿಬದ್ಧ ಪಾಲು, ಸಂತೋಷದ ಅಭೇದ ಹಂಚಿಕೆ, ಒಳ್ಳಿತಾದ ವಿವೇಚನೆ, ಸಹಜೀವಿಗಳ ನೋವನ್ನು ಅರ್ಥ ಮಾಡಿಕೊಳ್ಳುವ ಅನುಭೂತಿ, ನಿರಹಂಕಾರ, ಅರಿಷಡ್ವರ್ಗ ಮುಕ್ತ, ಪಂಚಶೀಲ ಯುಕ್ತ ವ್ಯಕ್ತಿತ್ವ, ಮನುಷ್ಯನಿಗಿಂತ ಮಿಗಿಲಾದ ಪಂಚಭೂತಾದಿ ವಿಶ್ವಶಕ್ತಿಯ ಅರಿವು, ತನಗಿಂತ ಕಿರಿಯರಿಲ್ಲ ಎಂಬ ವಿನೀತಭಾವ ಮುಂತಾದ ಇವೆಲ್ಲವೂ ಧರ್ಮದ ಬಲಿಷ್ಠ ಮೂಲ ಧಾತುಗಳು ಹೀಗೆ ಮುಂತಾಗಿ ಧರ್ಮವೆಂಬುದು ಸಕಲ ಸಾತ್ವಿಕ ಗುಣಗಳ ಅಗೋಚರ ಭಾವನಾತ್ಮಕ ಲೋಕವಾಗಿದೆ.

ಮನುಸ್ಮೃತಿ...

ಮನುಸ್ಮೃತಿಯೂ ಸಹ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಸಾಲಿನಲ್ಲಿ ಮೊದಲನೆಯದಾದ ಧರ್ಮ ಎಂಬ ಪುರುಷಾರ್ಥದ ಸಂಗತಾರ್ಥವನ್ನು ಇದೇ ರೀತಿಯಾಗಿ ಪುಷ್ಟೀಕರಿಸುತ್ತದೆ.

“ಅಹಿಂಸಾ ಸತ್ಯಮಸ್ತೇಯಂ ಶೌಚಂ ಇಂದ್ರಿಯ ನಿಗ್ರಹ:
ದಾನಂ ದಮೋ ದಯಾಕ್ ಶಾಂತಿ: ಸರ್ವೇಷಾಂ ಧರ್ಮ ಸಾಧನಂ”

ಅಹಿಂಸೆ, ಸತ್ಯ, ಅಚೌರ್ಯ ಅರ್ಥಾತ್ ಕಳವು ಮಾಡದಿರುವುದು, ದಯೆ, ಅಂತರಂಗ ಬಹಿರಂಗ ಶುದ್ಧಿ, ಇಂದ್ರಿಯ ನಿಗ್ರಹ, ದಾನ, ನಿರ್ಮದ, ಶಾಂತಿಗಳೇ ಧರ್ಮದ ಮೂಲಾಂಶಗಳು ಎಂಬುದಾಗಿ ಧರ್ಮದ ಅರ್ಥವನ್ನೂ, ಸಾರವನ್ನೂ ಬಹು ಅಚ್ಚುಕಟ್ಟಾಗಿ, ನಿಖರವಾಗಿ ತಿಳಿಸುತ್ತದೆ. ಪ್ರತಿಯೊಬ್ಬ ಸುಶಿಕ್ಷಿತ ಗೃಹಸ್ಥನೂ ಪಾಲಿಸಲೇಬೇಕದ ಈ ‘ಧರ್ಮ’ವೆಂದರೆ ಹಿಂದೂ, ಮುಸ್ಲಿಮ್, ಕ್ರೈಸ್ತ, ಪಾರಸಿ ಮುಂತಾದವುಗಳಲ್ಲ ಎಂಬುದು ಇಲ್ಲಿ ಸುಸ್ಪಷ್ಟ.

ಧರ್ಮದ ಉಗಮದ ಜಾಡು ಸಮಾಜಶಾಸ್ತ್ರ, ರಾಜನೀತಿಶಾಸ್ತ್ರ ಮೊದಲಾದವುಗಳ ಅಧ್ಯಯನದಲ್ಲಿ ದೊರೆಯುತ್ತದೆ. ಹಾಬ್ಸ್, ಲಾಕ್, ರೂಸೋ, ಮೊದಲಾದ ಪಾಶ್ಚಿಮಾತ್ಯ ವಿದ್ವಾಂಸರ ಚಿಂತನೆಗಳಲ್ಲಿ ಧರ್ಮಕ್ಕೂ ಮೊದಲು ಸಮಾಜದ ಉಗಮ ಕುರಿತ ಸತ್ಯಸಮೀಪ ತಾರ್ಕಿಕ ಊಹೆಗಳಿವೆ. ಮಾನವನೂ ಮೂಲತ: ಒಬ್ಬ ಜೀವಿ ಅಥವಾ ಪ್ರಾಣಿ. ಹಾಗಾಗಿ ಪಶುಸದೃಶ ವರ್ತನೆಗಳು ಅವನಲ್ಲೂ ಇದ್ದವು. ಕ್ರೌರ್ಯ ಅವನ ಮೂಲಗುಣವಾಗಿತ್ತು. ಬಲಾಢ್ಯನು ಎಸಗಿದ ಮುಗ್ಧರ ಮೇಲಿನ ಕ್ರೌರ್ಯವು ಕರುಣೆಯ ಮಹತ್ವವನ್ನು ಪರಿಚಯಿಸಿತು. ಅಹಿಂಸೆಯ ಅಗತ್ಯ ಮತ್ತು ಅರಿವು ಸಹ ಅಲ್ಲಿ ಮೂಡಿತು. ಅಹಿಂಸೆಯಿಂದ ಮಾತ್ರವಷ್ಟೆ ಜೀವಿಗಳ ಸಹಬಾಳ್ವೆ ಸಾಧ್ಯ. ಮನುಷ್ಯ-ಮನುಷ್ಯರ ನಡುವೆ ಬೇಕಿರುವುದು ಹಿಂಸೆ ಮುಕ್ತ ಸಹಜ ಪ್ರೀತಿ. ಕ್ರೌರ್ಯದ ಜಾಗದಲ್ಲಿ ಇರಬೇಕಾದುದು ದಯೆ. ದಯೆಯಿಂದಲಷ್ಟೇ ನಿವ್ರ್ಯಾಜಪ್ರೇಮ ಹಾಗೂ ಅನಿಮಿತ್ತ ಮನುಷ್ಯ ಸಂಬಂಧಗಳು ಕೂಡ ಊರ್ಜಿತಗೊಳ್ಳುತ್ತವೆ ಎಂಬುದು ಅವನಿಗೆ ಮನವರಿಕೆಯಾಯಿತು. ಕಾಡು ಜೀವನಕ್ಕೆ ಕ್ರೌರ್ಯವು ಧ್ಯೇಯಗುಣವಾದರೆ, ಸಮಾಜ ಜೀವನಕ್ಕೆ ದಯೆಯು ಮೂಲಧಾತು. ಈ ದಯೆಯನ್ನು ಅನುಸರಿಸಿ ಇತರ ಎಲ್ಲ ಸಾತ್ವಿಕ ಗುಣಗಳ ಆವಿರ್ಭಾವ ಹಾಗೂ ಅನುಷ್ಠಾನ. ಜೀವನದ ಸಾರ್ಥಕತೆ, ಪರಿಪೂರ್ಣತೆ ಹಾಗೂ ಪೂರ್ಣತ್ವಗಳ ಅನುಭೂತಿ – ಎಲ್ಲವೂ ಸಂಭವಿಸುವುದು ಸದ್ಗುಣ ಹಾಗೂ ಸದ್ವರ್ತನೆಗಳೆಂಬ ಧರ್ಮಧಾತುಗಳಿಂದ ಎಂಬ ಸತ್ಯವು ಮನವರಿಕೆಯಾದಾಗಲೇ ‘ಧರ್ಮ’ದ ಮೊದಲ ಮೊಗ್ಗು ಅರಳಿತೆನ್ನಬಹುದು.

ಧರ್ಮದ ಅನುಷ್ಠಾನಕ್ಕಾಗಿ ನಿರ್ದಿಷ್ಟ ಆಚರಣಾ ವಿಧಾನಗಳು ಅತ್ಯಗತ್ಯ ಎಂಬುದು ನಿರ್ವಿವಾದ. ಆಚರಣಾ ವಿಧಾನಗಳು ಮೇಲ್ನೋಟಕ್ಕೆ ಸರಳ ಸುಲಭವೆಂಬಂತೆ ಕಂಡರೂ ನಿರ್ದಿಷ್ಟ ವಿಧಾನವನ್ನು ಅನುಸರಿಸಿ ಧರ್ಮಾನುಷ್ಠಾನ ಮಾಡುವುದು ಅಚಲ ಶ್ರದ್ಧೆಯಿಂದ ಕೂಡಿದ ಒಂದು ತಪಸ್ಸಿನಂತೆ. ಸಾತ್ವಿಕ ಭಾವಗಳನ್ನು ಹೊಂದಲು, ಗುಣಗಳನ್ನಾಗಿ ಅವುಗಳನ್ನು ರೂಢಿಸಿಕೊಳ್ಳಲು, ಶುದ್ಧಿ, ಶೌಚ, ಆಚಮನ, ಯಮ, ನಿಯಮ, ಯೋಗ ಮೊದಲಾದ ನಿಷ್ಠಾತ್ಮಕ ಕ್ರಿಯೆಗಳ ಮೂಲಕ – ನೀತಿ ಬದ್ಧವಾದುದುದನ್ನು ‘ಮಾಡು’ ಎಂಬ ಬೋಧೆಯನ್ನು; ಅನೀತಿಯನ್ನು ‘ಬಿಡು’ ಎಂಬ ನಿಷೇಧವನ್ನು ವಿಧಿಸುವ ಆಚಾರ ಸಂಹಿತೆಯು ಅವಶ್ಯಕವಾಗುತ್ತದೆ. ಈ ಆಚಾರಸಂಹಿತೆ ಅರ್ಥಾತ್ ಕ್ರಿಯಾ ಸಂಹಿತೆಯೇ ‘ಮತ’ ಅಥವಾ ‘ಮತ’ದ ಅಧಿಕಾರ ವ್ಯಾಪ್ತಿ ಆಗಿರುತ್ತದೆ. ಆ ನಿರ್ದಿಷ್ತ ಸಂಹಿತೆಯನ್ನು ಪಾಲಿಸುವ ಅನುಯಾಯಿಗಳು ಅದರ ‘ಮತೀಯ’ರೆನಿಸುತ್ತಾರೆ. ‘ಧರ್ಮ’ದ ಅನುಷ್ಠಾನಕ್ಕೆ ಆಚಾರ ಸಂಹಿತೆಯೇ ರಾಜಮಾರ್ಗ. ಈ ಪ್ರಕ್ರಿಯೆಯು ಸಮುದಾಯಗಳು ತಮ್ಮ ತಲೆಮಾರುಗಳಿಗೆ ನೀಡುವ ಸುದೀರ್ಘ ಕಾಲಾವಧಿಯ ತರಬೇತಿಯಿಂದಲೂ ಕೂಡಿದೆ. ಪ್ರಾಚೀನ ಭಾರತೀಯ ಜೀವನ ವಿಧಾನದಲ್ಲಿ ಬ್ರಹ್ಮಚರ್ಯಾಶ್ರಮವೆಂಬ ಮನುಷ್ಯನ ಆಯುಷ್ಯದ ಮೊದಲ 25 ವರ್ಷಗಳು ಇಂತಹ ಕಠಿಣ ತರಬೇತಿಗಾಗಿ ಮೀಸಲಾಗಿದ್ದವೆಂಬುದನ್ನು ಗಮನಿಸಬೇಕು.

ವಿಕಾಸದ ಮೂಲಕ ಬೆಳೆಯುತ್ತಾ ಬಂದ ಮನುಷ್ಯನ ಸಾಮಾಜಿಕ ಗುಣವು ಅವನ ಜೈವಿಕ ಪ್ರವೃತ್ತಿಯಂತೆ ಜಗತ್ತಿನಾದ್ಯಂತ ಏಕ ಪ್ರಕಾರದ ಶಾರೀರಿಕ ಹಾಗೂ ಮಾನಸಿಕ ಮೂಲಸಂವೇದನೆಯನ್ನು ಹೊಂದಿದೆ.

ಮಾನವಶಾಸ್ತ್ರವು (Anthropology) ಭೂಮಿಯ ಮೇಲಿನ ಸಮಸ್ತ ಮಾನವ ವಂಶವು ಒಂದೇ (Human race is one) ಎಂದು ತನ್ನ ವೈಜ್ಞಾನಿಕ ಅಧ್ಯಯನಗಳಿಂದ ಖಚಿತವಾಗಿ ರುಜುವಾತು ಪಡಿಸಿದೆ. ಪ್ರಪಂಚದ ಎಲ್ಲ ಕಡೆ ಒಂದಕ್ಕೊಂದು ಸಂಪರ್ಕವಿಲ್ಲದಂತೆ ದೂರ ದೂರ ನೆಲೆಸಿದ್ದ ಮನುಷ್ಯ ಸಮುದಾಯಗಳು ಧರ್ಮದ ಅನಿವಾರ್ಯತೆಯನ್ನು ತಮ್ಮ ನಿತ್ಯ ಜೀವನದ ಅನುಭವದಲ್ಲಿ ಮನಗಂಡಿದ್ದವು. ಧರ್ಮದ ಅನುಷ್ಠಾನಕ್ಕಾಗಿ ಸಮುದಾಯಗಳು ಒಂದರಿಂದ ಮತ್ತೊಂದು ವಿಭಿನ್ನವಾದ ಆಚರಣಾ ಮಾರ್ಗಗಳನ್ನು ಅನುಸರಿಸಿದಾಗ್ಯೂ ಗುರಿ ಮಾತ್ರ ಅಪ್ರಜ್ಞಾಪೂರ್ವಕವಾಗಿ ಒಂದೇ ಆಗಿದ್ದಂತಹ ಆಚಾರ ಸಂಹಿತೆಗಳನ್ನು ರೂಪಿಸಿ, ರೂಢಿಸಿಕೊಂಡಿವೆ. ಧರ್ಮದ ಪಾಲನೆಗೆ ಆಯಾ ಪರಿಸರ, ಸನ್ನಿವೇಶ ಹಾಗೂ ಕಾಲಮಾನಕ್ಕೆ ಒಗ್ಗುವ ಕೆಲವು ಬಗೆಯ ಆಚಾರ ಪ್ರಧಾನ ಕ್ರಿಯೆಗಳೂ (Rituals) ಆಚಾರ ಸಂಹಿತೆಯ ಭಾಗವಾಗಿದೆ.

ಆಚಾರ ಸಂಹಿತೆಯ ವಿಧ್ಯುಕ್ತ ಕ್ರಿಯೆಗಳಾದ ಪ್ರಾರ್ಥನೆ, ಪೂಜೆ, ಭಜನೆ, ಆರಾಧನೆ, ಉಪವಾಸ, ವ್ರತ, ತೀರ್ಥಯಾತ್ರೆ, ಯಾಗ, ಯಜ್ಞ, ಹರಕೆ ಮುಂತಾದವುಗಳಿಂದ ಕೂಡಿದ ಪ್ರಪಂಚದ ಇಂತಹ ನೂರಾರು ಮತಗಳು ನೂರಾರು ದಾರಿಗಳಾಗಿ ಸೇರಲು ಹೊರಟಿದ್ದು ‘ಧರ್ಮ’ ಎಂಬ ಒಂದೇ ಊರನ್ನು.

ಆಚಾರ ಸಂಹಿತೆಯು ಒಂದು ಸಮುದಾಯದ ಜನಮಾನಸದಲ್ಲಿ ಜಾನಪದದಂತೆ ಜೀವನ ಕ್ರಮವನ್ನು ಅನುಸರಿಸಿ ತಾನೇ ತಾನಾಗಿ ರೂಪುಗೊಳ್ಳಬಹುದು ಇಲ್ಲವೆ ಒಬ್ಬ ನಿರ್ದಿಷ್ಟ ವ್ಯಕ್ತಿಯಿಂದ ರೂಪಿಸಲ್ಪಡಬಹುದು. ಹೀಗೆ ರೂಪಿಸಲ್ಪಟ್ಟ ಆಚಾರ ಸಂಹಿತೆಯು ಧರ್ಮದ ಅನುಷ್ಠಾನದ ಪ್ರಕ್ರಿಯೆಯಲ್ಲಿ ‘ಮತ’ವಾಗಿ ಮಾರ್ಪಟ್ಟರೆ ಅದನ್ನು ರೂಪಿಸುವ ಇಲ್ಲವೇ ನಿರೂಪಿಸುವ ವ್ಯಕ್ತಿಯು ‘ಮತಾಚಾರ್ಯ’ ಎನಿಸುತ್ತಾನೆ. ಧರ್ಮಾನುಷ್ಠಾನಕ್ಕಾಗಿ ಮತವು ತನ್ನ ಆಚಾರ ಸಂಹಿತೆಯನ್ನು ಜಾರಿಗೆ ತರಲು ಏರ್ಪಡಿಸಿಕೊಳ್ಳುವ ಸಾಂಸ್ಥಿಕ ವ್ಯವಸ್ಥೆಯನ್ನು ಮಠ, ಚರ್ಚು, ಗುರುಪೀಠ ಎಂಬಿತ್ಯಾದಿ ಪರಿಕಲ್ಪನಾತ್ಮಕ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳಿಗೆ ಪೂರಕವಾಗಿ ದುಡಿಯಲು ನಿಂತವರು ಧರ್ಮಗುರುಗಳು, ಮಠಾಧೀಶರು, ಪಂಚರು, ತ್ರಾಯಿತರು ಮೊದಲಾದವರಾಗಿರುತ್ತಾರೆ. ಸಮುದಾಯಗಳು ತಾವು ರೂಪಿಸಿಕೊಂಡ ಇಂತಹ ಸಂಹಿತೆಗಳು ತಮ್ಮದೆ ಅಭಿಮತಗಳಾಗಿದ್ದರಿಂದ ಪ್ರಾಯಶ: ಇವುಗಳಿಗೆ (ಸಂಸ್ಕೃತಾದಿ ಭಾರತೀಯ ಭಾಷೆಗಳಲ್ಲಿ) ‘ಮತ’ ಎಂಬ ಹೆಸರು ಅನ್ವರ್ಥವಾಗಿರಲೂಬಹುದು. ಆಚಾರ ಸಂಹಿತೆಗಳೇ ಮತಗಳಾಗಿಯೂ ಕಂಡು ಬರುವುದರಿಂದ ‘ಮತಾಚಾರ’ವೆಂಬ ಹೆಸರೂ ಪ್ರಚಲಿತವಾಗಿದೆ. ಮತವೆಂಬುದು ಅಗೋಚರ ಅಸ್ತಿತ್ವವಾಗಿದ್ದು ಈ ಸಂಹಿತೆಗಳನ್ನು ಮತಗಳ ಪ್ರಣಾಳಿಕೆಗಳಂತೆ ಭಾವಿಸಲಾಗಿದೆ. ದಯೆ, ಅಹಿಂಸಾದಿ ಧರ್ಮಧಾತುಗಳು ಹಾಗೂ ಕ್ರಿಯಾ ವಿಧಾನಗಳಿಗೆ ನಡುವಿನ ಸೇತುವೆಯಂತೆ ಎಲ್ಲಾ ಪ್ರಮುಖ ಮತಗಳು ತಮ್ಮದೇ ಆದ ಒಂದೊಂದು ಪ್ರಣಾಳಿಕೆಯನ್ನು ಸಹ ನಿರ್ಮಿಸಿಕೊಂಡಿವೆ ಅವುಗಳನ್ನು ಆಯಾ ಮತದ ‘ದರ್ಶನ’ (Philosophy) ಅಥವಾ ತತ್ವಗಳಾಗಿವೆ.

ಬಹುಪಾಲು ಮತಗಳು ತಮ್ಮ ಆಚಾರ ಸಂಹಿತೆ ಹಾಗೂ ದರ್ಶನಗಳಿಗೆ ಅಕ್ಷರ ರೂಪಕೊಟ್ಟು ಬೈಬಲ್, ಖುರಾನ್, ಗುರುಗ್ರಂಥಸಾಹೀಬ್, ದಮ್ಮಪದ ಮೊದಲಾಗಿ ಗ್ರಂಥಸ್ಥಗೊಳಿಸಿದ್ದರೆ, ಅಕ್ಷರೇತರ (Non-literate) ಸಮುದಾಯಗಳಲ್ಲಿ ಮೌಖಿಕ ನಿರೂಪಗಳೇ ಆಚಾರ ಸಂಹಿತೆಗಳಾಗಿವೆ. ಅನೇಕ ಮತಗಳು ನಿರ್ದಿಷ್ಟ ವ್ಯಕ್ತಿಗಳಿಂದ ಸ್ಥಾಪಿತವಾಗಿ, ಅವರು ನೀಡಿದ್ದಾರೆಂದು ನಂಬಲಾಗುವ ಆಚಾರ ಸಂಹಿತೆಗಳನ್ನು ಹೊಂದಿವೆ. ಹಿಂದೂ ಮತಕ್ಕೆ ನಿರ್ದಿಷ್ಟ ಸ್ಥಾಪಕರಾರೂ ಇಲ್ಲವಾಗಿ ಅದನ್ನು ‘ಅಪೌರುಷೇಯ’ ಎನ್ನಲಾಗಿದೆ. ತನ್ನ ಸಂಹಿತೆಯಲ್ಲಿ ಭಗವದ್ಗೀತೆ, ವೇದಗಳು, ರಾಮಾಯಣ, ಮಹಾಭಾರತಗಳಂತಹ ಮೂಲಗಳಿಂದ ಆಯ್ದ ನೈತಿಕ ಮೌಲ್ಯಗಳನ್ನು ಕಂಡರಿಸಿದೆ. ಇಲ್ಲಿಯೂ ಸಹ ಎಲ್ಲ ದರ್ಶನಗಳ ಜೀವಾಳ ಅಥವಾ ಸಾರ ಬಹುಪಾಲು ಒಂದೇ ಆಗಿರುತ್ತದೆ. ಆಚರಣೆಯೊಂದು, ಒಂದು ಮತದಲ್ಲಿ ‘ಪ್ರಾರ್ಥನೆ’ ಎನಿಸಿಕೊಂಡರೆ ಇನ್ನೊಂದರಲ್ಲಿ ಅದು ‘ನಮಾಜ್’, ಮತ್ತೊಂದರಲ್ಲಿ ಅದು ‘ಆರಾಧನೆ’. ಒಂದರಲ್ಲಿನ ಕರ್ಮ, ಭಕ್ತಿ, ಜ್ಞಾನಗಳೆಂಬ ಮಾರ್ಗಾನುಷ್ಠಾನವು ಇನ್ನೊಂದು ಮತದಲ್ಲಿ Labour, Faith, Knowledge ಆಗಿರುತ್ತದೆ. ಜೀವದಯೆ, ಮನುಷ್ಯಪ್ರೀತಿ, ದಾನ, ಮೊದಲಾದ ಧರ್ಮಧಾತುಗಳು ಪುಣ್ಯಮಯವಾದರೆ, ಜೀವಹಿಂಸೆ, ಕಳವು, ಸುಳ್ಳು ಮುಂತಾದವುಗಳು ಪಾಪಕರ ಎಂಬ ನೀತಿಯು ಎಲ್ಲ ಮತಗಳಿಂದಲೂ ಬೋಧಿಸಲ್ಪಟ್ಟಿದೆ.

Religion ಎಂಬ ಪದ

ಒಂದೇ ಶಬ್ದಕ್ಕೆ ನಾಲ್ಕಾರು ಅರ್ಥಗಳನ್ನಿಟ್ಟು ಸಂದರ್ಭಕ್ಕನುಸಾರವಾಗಿ ಓದುಗರೇ ಆ ಶಬ್ದಕ್ಕೆ ಲೇಖಕನ ಮನಸ್ಸಿನಲ್ಲಿರುವ ಅರ್ಥವನ್ನು ಗ್ರಹಿಸಬೇಕು. ಇದು ಆಂಗ್ಲಭಾಷೆಯ ಜಾಯಮಾನ. ಭಾರತ ದೇಶಕ್ಕೆ ಆಂಗ್ಲಭಾಷೆಯ ಪರಿಚಯ ಹಾಗೂ ಪಾಶ್ಚಿಮಾತ್ಯರ ಧಾರ್ಮಿಕ ತತ್ವ, ದರ್ಶನ ಮುಂತಾದ ವಿಚಾರಗಳ ಒಳ ಹರಿವು ಉಂಟಾದ ಮೇಲೆ Religion ಎಂಬ ಶಬ್ದವು ‘ಧರ್ಮ’ ಮತ್ತು ‘ಮತ’ ಗಳ ನಡುವಿನ ಭಿನ್ನತೆಯ ಬಗೆಗೆ ಇದ್ದ ಅಸ್ಪಷ್ಟತೆಯನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿದೆ. ‘ಮತ’ವನ್ನು ಸೂಚಿಸಲು Faith ಎಂಬ ಶಬ್ದವಿದ್ಯಾಗ್ಯೂ ಜನಬಳಕೆಯಲ್ಲಿ Religion ಪದವೇ ಪ್ರಚಲಿತಗೊಂಡಿದೆ. ಇಂತಹ ಅಪಪ್ರಯೋಗವು ಕೂಡ ಒಂದು ಕಾರಣವಾಗಿ ಮತಾನುಯಾಯಿಗಳು ‘ಮಾರ್ಗ’ಪಲ್ಲಟಗೊಂಡಿದ್ದಾರೆ.

ಧರ್ಮೋರಕ್ಷತೀ...

ಧರ್ಮರಕ್ಷಣೆಯೆಂಬುದು ಮತದ ಸಹಾಯದಿಂದ ಧರ್ಮದ ಮೂಲಾಂಶಗಳನ್ನು ಅನುಷ್ಠಾನ ಮಾಡುವುದು ಹಾಗೂ ಅದಕ್ಕೆ ವಿರುದ್ಧಕಾರ್ಯಗಳಲ್ಲಿ ತೊಡಗದಿರುವುದೆ ಆಗಿದೆ. ಆದರೆ ಮತಗಳು ‘ಧರ್ಮ’ ದೆಡೆಗೆ ಸಾಗಲು ಇರುವ ‘ಮಾರ್ಗ’ಗಳು ಮಾತ್ರ ಎಂಬ ಪ್ರಜ್ಞೆಯು ವಿಸ್ಮೃತಿಗೆ ಸರಿದು ಮತದ ವಿಧಿ ವಿಧಾನಗಳೇ ಧರ್ಮ ಎಂಬ ಅಪಾರ್ಥದ ಗ್ಲಾನಿ ಸರ್ವತ್ರ ಕವಿದಿದೆ. ಮನುಷ್ಯ ಕುಲದ ಸಾಮಾಜಿಕ ಬದುಕಿನ ಬಹುದೊಡ್ಡ ಅನರ್ಥ ಸಂಭವಿಸಿದುದು ಇಲ್ಲಿಯೇ. ಬಹುತೇಕ ಮತಗಳ ಅನುಯಾಯಿಗಳು ‘ಧರ್ಮ’ದ ಹಾಗೂ ‘ಮತ’ದ ಅರ್ಥಸೂಕ್ಷ್ಮ ಹಾಗೂ ವ್ಯತ್ಯಾಸವನ್ನು ಗ್ರಹಿಸದೆ ಮತವನ್ನೇ ಧರ್ಮ ಎಂತಲೂ, ಧರ್ಮ ರಕ್ಷಣೆಯೆಂದರೆ ಮತದ ರಕ್ಷಣೆಯೆಂತಲೂ ಭಾವಿಸಿದ್ದಾರೆ. ಹೀಗೆ ಅಪಾರ್ಥ ಮಾಡಿಕೊಂಡ ಸಂಪ್ರದಾಯನಿಷ್ಠರು ಪರ-ಮತ ನಾಶದಿಂದಲೇ ಸ್ವ-ಮತ ರಕ್ಷಣೆಯು ಸಾಧ್ಯ ಎಂಬ ನಿಗೂಢ ನಂಬಿಕೆಗೆ ಶರಣಾಗಿದ್ದಾರೆ. ಇದರ ಅಂಗವಾಗಿ ಧರ್ಮದ ‘ಧಾರಯತೀ....’ ಗುಣವನ್ನು ಅರ್ಥ ಮಾಡಿಕೊಳ್ಳಲಾಗದವರು ‘ಮತ’ದ ಆಚಾರ ಸಂಹಿತೆಯನ್ನು ವ್ಯತಿರಿಕ್ತವಾಗಿ ಆಚರಿಸುತ್ತಾ ಪರ-ಮತ ದ್ವೇಷವನ್ನು ಸ್ವ-ಮತ ರಕ್ಷಣೆಯ ಕರ್ತವ್ಯ ಭಾಗವೆಂದು ಭಾವಿಸಿದ್ದಾರೆ. ಪರ-ಮತ ನಾಶವನ್ನು ಸ್ವ-ಮತದ ಉನ್ನತ ಮೌಲ್ಯವೆಂದು ಮತೀಯವಾದಿಗಳು ನಂಬಿದ್ದಾರೆ. ‘ಧರ್ಮೋರಕ್ಷತಿ ರಕ್ಷಿತ:’ – ಧರ್ಮಸೂಕ್ಷ್ಮವನ್ನು ಅರುಹಿದ ಈ ಅಮೋಘ ಉಕ್ತಿ ಈಗ ಮತದ್ವೇಷದ ಭದ್ರಬುನಾದಿ. ‘ತನ್ನ ಮತವನ್ನು ರಕ್ಷಿಸಿದರೆ ಆ ಮತವು ತನ್ನನ್ನು ರಕ್ಷಿಸುತ್ತದೆ’ ಎಂಬ ವಿಕೃತ ಅರ್ಥ ಕಲ್ಪಿತವಾಗಿದೆ. ‘ಹಿಂದುವು ಹಿಂದುತ್ವವನ್ನು ರಕ್ಷಿಸಿದರೆ, ಹಿಂದುತ್ವವು ಅವನನ್ನು ರಕ್ಷಿಸುತ್ತದೆ’. ‘ಮುಸ್ಲಿಮರು ಇಸ್ಲಾಮನ್ನು... ಕ್ರೈಸ್ತರು ಕ್ರೈಸ್ತ ಮತವನ್ನು... ಎಂಬಂತೆ ಎಲ್ಲ ಮತಗಳವರು ತಂತಮ್ಮ ಮತಗಳನ್ನು ಪರ-ಮತ ದ್ವೇಷದ ಇಂಗಿತದೊಂದಿಗೆ ರಕ್ಷಿಸುವವರಾಗಿದ್ದಾರೆ.

ಸ್ವಮತದ ರಕ್ಷಣೆ ಹೆಸರಿನಲ್ಲಿ ಧರ್ಮ ಕುರಿತ ಅಜ್ಞಾನವು ಇನ್ನೊಂದು ಮತದ ದ್ವೇಷಕ್ಕೆ ಮೂಲವಾಯಿತು. ವಾಸ್ತವದಲ್ಲಿ ‘ಧರ್ಮ’ವು ವಿಶ್ವಪ್ರೀತಿಯನ್ನು, ಮನುಕುಲ ಭ್ರಾತೃತ್ವವನ್ನು ಬೋಧಿಸುವಂತಹುದು. ಆದರೆ ಮತವನ್ನೇ ಧರ್ಮವೆಂದು ಭಾವಿಸಿದಾಗ ಮನುಷ್ಯನೇ ಮನುಷ್ಯನನ್ನು ದ್ವೇಷಿಸುವ ವಿಚ್ಛಿದ್ರಕಾರಿ ಮತೀಯವಾದವು ಜಾಗತಿಕ ಯುದ್ಧಗಳಂತಹ ದುರಂತಗಳನ್ನು ಉಂಟುಮಾಡಿದೆ. ಧರ್ಮ ರಕ್ಷಣೆ ಎಂದರೆ, ಕತ್ತಿ, ಖಡ್ಗಗಳನ್ನು ಹಿಡಿದು ಚಿತ್ರವಿಚಿತ್ರವಾದ ಲಾಂಛನಗಳನ್ನು ಧರಿಸಿ, ಯುದ್ಧ ಸಾರಿ, ರಕ್ತ ಹರಿಸಿ ಧರ್ಮವನ್ನು ರಕ್ಷಿಸಬೇಕಾದ ಅಗತ್ಯ ಧರ್ಮಕ್ಕೆ ಇಲ್ಲ. ಧರ್ಮವನ್ನಪ್ಪಿಕೊಂಡವರನ್ನು ಅವರಂತೆಯೇ ಧರ್ಮಪಾಲನೆ ಮಾಡುವವರು ಪ್ರೀತಿಸಿ ರಕ್ಷಿಸುತ್ತಾರೆ. ಜೀವದಯೆ ಇರುವವನಿಗೆ ಜೀವ ಪ್ರಪಂಚದಲ್ಲಿ ಸ್ಥಾನ ಮತ್ತು ರಕ್ಷಣೆಗಳು ಸಾಧ್ಯವಾಗುತ್ತದೆ. ಧರ್ಮೋರಕ್ಷತಿ ಎಂಬ ಉಕ್ತಿಯನ್ನು ಮತಕ್ಕೆ ಅನ್ವಯಿಸಿ ಹೇಳಿದುದಲ್ಲ.

ಬಂಡಾಯದಿಂದ ಪಂಥಕ್ಕೆ....

ಈ ಪ್ರಕ್ರಿಯೆ ಇಲ್ಲಿಗೆ ನಿಲ್ಲವುದಿಲ್ಲ. ತಾವು ಸ್ವೀಕರಿಸಿದ ಹೊಸ ಮತದಲ್ಲಿ ಕೂಡ ಸೌಲಭ್ಯವನ್ನು ಅರಸುವುದು ಪ್ರಾಯಶ: ಮನುಷ್ಯಸಹಜ ಗುಣ. ಸೌಲಭ್ಯಾಕಾಂಕ್ಷೆಯಿಂದಾಗಿ ಮೂಲ ನಿಷ್ಠಾವಂತರೊಂದಿಗೆ ಭಿನ್ನಾಭಿಪ್ರಾಯ ಏರ್ಪಡುವುದು ಸಹಜ. ಈ ಒಳ ಸಂಘರ್ಷದಿಂದಾಗಿ ಆಚರಣಾ ಕ್ರಮಗಳಲ್ಲಿ ವಿಭಜನೆ ಕಾಲಿಡುತ್ತದೆ. ಮರುವಿಭಾಗಗೊಂಡ ಮತಗಳು ‘ಪಂಥ’ಗಳಾಗಿ ಮಾರ್ಪಡಬಹುದು. ಹಿಂದೂ ಮತದಿಂದ ಪ್ರತ್ಯೇಕಗೊಂಡ ಬೌದ್ಧ ಮತವು ಹೀನಯಾನ, ಮಹಾಯಾನಗಳೆಂಬ ಎರಡು ಪಂಥಗಳಾಗಿ ಕವಲೊಡೆದುದು; ಜೈನ ಮತವು ದಿಗಂಬರ, ಶ್ವೇತಾಂಬರಗಳೆಂಬ ಎರಡು ಪಂಥಗಳಾದುದಲ್ಲದೆ,_ ಮೂರ್ತಿಪೂಜಕ, ಸ್ಥಾನಕ್ ವಾಸಿ, ತೇರಾಪಂಥ್, ಬೀಸ್‍ಪಂತ್, ತಾರನಪಂಥ್ ಮೊದಲಾದ ಶಾಖಾ ಪಂಥಗಳಾಗಿ ಒಡೆದುದು; ಸಿಖ್ ಮತವು ಅಕಾಲಿ, ನಿರಂಕಾರಿ, ಖಾಲ್ಸಾ, ಉದಾಸಿ ಮುಂತಾದ ಶಾಖೆಗಳಾಗಿ ಹೋಳಾದುದು; ಕ್ರಿಶ್ಚಿಯನ್ ಮತವು ರೋಮನ್ ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟ್ ಎಂಬ ಮುಖ್ಯ ಶಾಖೆಗಳಾಗಿ, ಮತ್ತೆ ಮೆಥೋಡಿಸ್ಟ್, ಪೆಂತಿಕಾಸ್ಟ್ ಇತ್ಯಾದಿಯಾಗಿ ಕವಲೊಡೆದುದು; ಇಸ್ಲಾಮ್ ಮತವು ಶಿಯಾ ಮತ್ತು ಸುನ್ನಿ ಎಂಬ ಎರಡು ಬಂಡಾಯ ಶಾಖೆಗಳಲ್ಲದೆ, ಅವುಗಳಲ್ಲಿ ಶೇಖ್, ಸೈಯದ್, ಪಠಾಣ್ ಮೊದಲಾದ ಉಪಶಾಖೆಗಳಾಗಿ ಕವಲಾದುದು; ವೀರಶೈವ ಮತವು ಹಿಂದೂ ವ್ಯಾಪ್ತಿಯಿಂದ ಬಂಡಾಯ ಮತವಾಗಿ ಸಿಡಿದಿದ್ದಾಗ ಜಾತಿ ವ್ಯವಸ್ಥೆಯನ್ನು ಮೂಲೋತ್ಪಾಟನ ಮಾಡುವ ನಿರ್ದಿಷ್ಟ ಸಿದ್ಧಾಂತದೊಂದಿಗೆ ರಚನಾತ್ಮಕ ಕ್ರಿಯಾಸಂಹಿತೆಯನ್ನುಹೊಂದಿ, ವ್ಯಾಪಕವಾದ ಸಾಂಸ್ಥಿಕ ಸ್ವರೂಪವನ್ನು ಪಡೆದಿತ್ತು. ಅದು ಕ್ರಮೇಣ ಹಿಂದೂ ಮತದಂತೆ ತನ್ನೊಳಗೂ ಸ್ತರೀಕೃತ ವ್ಯವಸ್ಥೆಯನ್ನು ಹೊಂದಿ, ಹಲವಾರು ಉಪಜಾತಿಗಳಾಗಿ ಮಾರ್ಪಟ್ಟಿರುವುದು ಹಾಗೂ ಮತಾಚಾರ್ಯರ ಹಿನ್ನೆಲೆಯಲ್ಲಿ ಆವರಿಸಿರುವ ಶ್ರೇಷ್ಠತೆಯ ವ್ಯಸನದಿಂದಾಗಿ ಈಗ ಲಿಂಗಾಯತ – ವೀರಶೈವ ಎಂಬ ಎರಡು ಶಾಖೆಗಳು ಒಂದು ವೇಳೆ ಸಾಂಸ್ಥೀಕರಣಗೊಂಡಲ್ಲಿ ಅವು ಮತ್ತೆರಡು ಉಪ ಪಂಥಗಳಾಗಿ ನೆಲೆಯೂರಿ, ಈ ಮತದ ವಿವಿಧ ಸಮುದಾಯಗಳು ಆ ಉಪ ಪಂಥಗಳೊಂದಿಗೆ ಸಮಾವೇಶಗೊಳ್ಳುವುದು; _ ಇವೆಲ್ಲವೂ ಮತವು ವಿಚ್ಛಿನ್ನತೆಯನ್ನು ತನ್ನ ಪ್ರಥಮ ಲಕ್ಷಣ ಮತ್ತು ಸ್ವರೂಪವನ್ನಾಗಿ ಹೊಂದಿರುವುದನ್ನು ಸ್ಪಷ್ಟ ಪಡಿಸುತ್ತದೆ. ಆದರೆ ‘ಧರ್ಮ’ವು ಅವಿಚ್ಛಿನ್ನ, ಅಖಂಡ ಹಾಗೂ ನಿರಂತರ. ಅದು ವಿಭಜನೆ, ಶಾಖೆ, ಪಂಥವೆಂಬ ಪ್ರಶ್ನೆಗೆ ‘ಧರ್ಮ’ವು ನಿಲುಕುವಂಥದ್ದಲ್ಲ.

ಬುದ್ಧ, ಬಸವರಿಬ್ಬರಲ್ಲೂ ಕಂಡು ಬರುವ ಒಂದು ಸಾಮಾನ್ಯ ಸಂಗತಿಯೆಂದರೆ ಮತವನ್ನೆ ಧರ್ಮವೆಂದು ತಿಳಿದಿದ್ದವರಿಗೆ ತಿಳಿಯಾದ ಭಾಷೆಯಲ್ಲಿ ಮತವಾವುದು, ಧರ್ಮವಾವುದು ಎಂಬುದನ್ನು ಬಿಡಿಸಿ ಹೇಳಿದುದು. ಆದರೆ ತಲೆಮಾರುಗಳು ಕಳೆದಂತೆ ಸಮುದಾಯಗಳು ಧರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತೆ ಅದೇ ತಪ್ಪುಗಳನ್ನು ಮಾಡಿ ಮತವನ್ನೇ ಧರ್ಮವೆಂದು ಭಾವಿಸತೊಡಗಿರುವುದು ಇಂದಿನ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತದೆ. ಬಂಡಾಯ ಮತಗಳ ಸರಳ ಶುದ್ಧ ನಿಷ್ಠೆಯನ್ನು ಒಲ್ಲದವರು, ರಂಜನೆಯಿಂದ ಕೂಡಿದ ವೈಭವದ ಆಚರಣೆಗಳಿಗೆ ಒಲಿದವರು ಪಂಥಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಮತಸ್ಥಾಪಕರು ತಮ್ಮ ದಿವ್ಯ ಚಿಂತನೆಯ ಫಲವಾಗಿ ರೂಪಿಸಿದ ಮತಗಳನ್ನು ನಂತರದ ಪೀಳಿಗೆಯವರು ತಪ್ಪಾಗಿ ಅರ್ಥೈಸಿದುದಲ್ಲದೆ ತಮ್ಮ ಅನುಕೂಲಕ್ಕಾಗಿ ಮೂಲ ಮತಗಳನ್ನು ವಿಭಜಿಸಿ ಪಂಥಗಳನ್ನಾಗಿ ಪರಿವರ್ತಿಸಿದ್ದಾರೆ. ‘ಧರ್ಮ’ವನ್ನು ತಲುಪದೆ ಬರೀ ದಾರಿಗಳ ಯಜಮಾನಿಕೆಗಾಗಿ ಬಡಿದಾಡುವುದು ಮನೆಯನ್ನು ತಲುಪದೆ ದಾರಿಯಲ್ಲೇ ಉಳಿದು ಬಿಡುವ ಮುಗ್ಧರ ಕೆಲಸವಾದೀತು.

ಪ್ರಣತಿಯೇ ಪ್ರಕಾಶವಲ್ಲ....

‘ಧರ್ಮ’ ಮತ್ತು ‘ಮತ’ಗಳ ವ್ಯತ್ಯಾಸಗಳಿಗೆ ಹೀಗೊಂದು ಉಪಮೆ. ಫ್ಯಾನ್‍ಗಳನ್ನು ತಯಾರಿಸುವ ನೂರಾರು ಕಂಪನಿಗಳಿವೆ. ಒಂದೊಂದು ಕಂಪನಿಯದು ಹತ್ತಾರು ಮಾದರಿಗಳು. ಎಲ್ಲವೂ ಗಾತ್ರ, ವಿನ್ಯಾಸ, ತಾಂತ್ರಿಕತೆ, ಬಣ್ಣಗಳಲ್ಲಿ ವೈವಿಧ್ಯಮಯ. ಈ ಎಲ್ಲಾ ಮಾದರಿ ಫ್ಯಾನ್‍ಗಳನ್ನು ಒಂದೆಡೆ ಇರಿಸಿ ಚಾಲೂ ಮಾಡಿದರೆ ಎಲ್ಲ ಫ್ಯಾನ್‍ಗಳೂ ಗಾಳಿಯನ್ನು ಬೀಸುತ್ತವೆ. ಫ್ಯಾನ್‍ಗಳು ಅದೆಷ್ಟೇ ವೈವಿಧ್ಯಮಯವಾಗಿದ್ದರೂ ಅವುಗಳಿಂದ ಸೂಸಿದ ಗಾಳಿ ಮಾತ್ರ ಒಂದೇ. ಈ ಗಾಳಿಯೇ ಧರ್ಮ, ಗಾಳಿ ತಲುಪುವಂತೆ ಮಾಡಿದ ಫ್ಯಾನ್‍ಗಳೇ ಮತಗಳೆಂಬಂತೆ ಭಾವಿಸಬಹುದು. ಅಂತೆಯೆ ಬೆಳಕು ಕೂಡ ಧರ್ಮವಾದರೆ, ಪ್ರಣತಿಗಳು ಮತಗಳಂತೆ. ಆದರೆ ಬೆಳಕನ್ನು ಒದಗಿಸುವ ಪ್ರಣತಿಗಳೇ ಸ್ವಯಂ ಪ್ರಕಾಶಗಳಲ್ಲ. ಗಾಳಿಯನ್ನು ಬೀಸುವ ಫ್ಯಾನ್‍ಗಳೇ ಸ್ವಯಂ ಗಾಳಿಯಲ್ಲ ಫ್ಯಾನೇ ಬೇರೆ, ಗಾಳಿಯೇ ಬೇರೆ. ಪ್ರಣತಿಯೇ ಬೇರೆ, ಪ್ರಕಾಶವೇ ಬೇರೆ.

ಮತದಿಂದ ಬಂಡಾಯಕ್ಕೆ....

ಮತಗಳ ಆಚಾರ ಸಂಹಿತೆಯು ಸಮಾನತೆ ಹಾಗೂ ಮಾನವ ಕಲ್ಯಾಣಗಳನ್ನು ಧಿಕ್ಕರಿಸಿ ತಾರತಮ್ಯವನ್ನು ಸಾಂಸ್ಥೀಕರಿಸಲು, ಸಮುದಾಯಗಳ ಮೇಲೆ ಅರ್ಥಹೀನ ಸಂಪ್ರದಾಯಗಳನ್ನು, ಉಸಿರುಗಟ್ಟಿಸುವ ರೂಢಿ, ಪದ್ಧತಿ ನಿಯಮಾದಿಗಳನ್ನು ಹೇರಿದಾಗ ಸಹಿಸಲು ಅಸಾಧ್ಯವಾದ ಮುಗ್ಧರ ಧ್ವನಿ ಅಲ್ಲಿ ಬಂಡಾಯವೇಳುತ್ತದೆ. ವಿಮೋಚನೆಗಾಗಿ ಪ್ರಚಂಡ ಮತಾಂದೋಲನವೇ ಏರ್ಪಡುತ್ತದೆ. ಮೂಲ ಮತದಿಂದ ಸಿಡಿದು ಹೊರಬಂದು, ಪ್ರತಿಯಾಗಿ ಹೊಸದೊಂದು ಸರಳವಾದ, ಜೀವಪರ ಸಂಹಿತೆಯನ್ನು ಪ್ರಕಟಿಸುತ್ತದೆ. ಮೂಲಮತದ ಪೈಶಾಚ ಪ್ರವೃತ್ತಿಯಿಂದ ಸೋತು ಬಳಲಿದ್ದ ಜನಸಮೂಹವು ನಿರಾಳತೆಗಾಗಿ ಇಂತಹ ಹೊಸ ಸಂಹಿತೆಯನ್ನು ಅಪ್ಪಿಕೊಳ್ಳುತ್ತದೆ. ಹೀಗೆ ಮೂಲಮತದಿಂದ ಹೊರಸಿಡಿದು ಮರುಸ್ಥಾಪಿತವಾಗುವ ಮತವು ಬಂಡಾಯಮತ (Protest Religion) ಎಂದೇ ಗುರುತಿಸಲ್ಪಟ್ಟಿದೆ. ಜೈನ, ವೀರಶೈವ, ಬೌದ್ಧ, ಸಿಖ್, ಹಾಗೂ ಪ್ರಾಟೆಸ್ಟಂಟ್ ಮತಗಳು ಇಂತಹ ಬಂಡಾಯ ಮತಗಳೇ ಆಗಿವೆ.

ಮೃದು ಮತ, ಕಠೋರ ಮತ

ಯಾವ ಮತದ ಸಂಹಿತೆಯು ಎಲ್ಲರನ್ನೂ ಎಲ್ಲವನ್ನೂ ತನ್ನ ತೋಳ ತೆಕ್ಕೆಗೆ ತೆಗೆದು ಕೊಂಡು ಭ್ರಾತೃತ್ವವನ್ನು ಬಿತ್ತುತ್ತದೆಯೋ ಅಂತಹ ಮತವನ್ನು ಮೃದುಮತ (Soft Religion , one which invites and includes) ಎಂತಲೂ, ಯಾವ ಮತವು ಮನುಷ್ಯರಲ್ಲಿ ದ್ವೇಷಾಸೂಯೆಗಳ ಮೂಲಕ ತಾರತಮ್ಯ ಸೃಷ್ಟಿಸಿ, ಒಡಕುಂಟುಮಾಡಿ ದೂರಗೊಳಿಸುತ್ತದೆಯೋ ಅಂತಹ ಮತವನ್ನು ಕಠೋರ ಮತ (Hard Religion, one which divides and excludes) ಎಂತಲೂ ಪರಿಗಣಿಸಲಾಗಿದೆ. ಬುದ್ಧ ಬಸವಾದಿಗಳ ಬೋಧನೆಗಳೆಲ್ಲವೂ ಧರ್ಮಧಾತುಗಳೇ ಆಗಿವೆ. ‘ಧರ್ಮ’ವನ್ನು ಪ್ರತಿಪಾದಿಸುವ ಇವರ ಮತಗಳು ಸಹಜವಾಗಿಯೇ ಮೃದುಮತಗಳಾಗಿವೆ.

ಸುಕ್ಷಿಶಿತರು ಅನುಸರಿಸಿದ ಮತಾಚರಣೆಯಲ್ಲಿನ ಕ್ರಿಯೆಗಳು ಉನ್ನತ ಸಂಸ್ಕೃತಿ (Great culture) ಎಂಬುದಾಗಿ ಅಹಿಂಸೆ ಮತ್ತು ಸೌಜನ್ಯಗಳ ದ್ಯೋತಕಗಳಾಗಿ ಕಂಡುಬರುತ್ತವೆ. ಆದರೆ ಪ್ರಾಣಿಬಲಿ, ನರಬಲಿ, ದೇವದಾಸಿ, ಬಸವಿಯಂತಹ ಆಚರಣೆಗಳು ಹರಕೆಗಳಾಗಿ ರೂಢಿಗೆ ಬಂದುದು, ಮತವನ್ನೇ ಧರ್ಮವೆಂದು ಭಾವಿಸಿದುದರ ದ್ಯೋತಕವಾದ ಕ್ಷುದ್ರ ಸಂಸ್ಕೃತಿ (Little culture) ಎಂದು ಗುರುತಿಸಲ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT