‘ಲೇ...ಶಿವಣ್ಣ ಒಂದು ಕಟ್ಟು ಬೀಡಿಕೊಡ್ಲ’ ಅನ್ನುತ್ತಾ ಕೈಯಲ್ಲಿ ಹಿಡಿದಿದ್ದ ಕೋಲನ್ನು ಅಂಗಡಿಗೆ ವರಗಿಸಿ, ಬ್ಯಾಟ್ರಿ ಕಂಕುಳಿಗೆ ಇರುಕಿಕೊಳ್ಳುತ್ತ, ನಂಜಣ್ಣ ಬೀಡಿಕಟ್ಟಿಗೆ ಕಾಸು ಕೊಡೋಕೇಂತ ಚಡ್ಡಿಜೇಬಿಗೆ ಕೈ ಹಾಕಲು ಹೋದ.

ಬೀಡಿ ಕೈಗಿಡೋಕೇಂತ ಬಂದ ಶಿವಣ್ಣ ನಂಜಣ್ಣನ ಕಂಕುಳಿಂದ ಜಾರಿ ಬೀಳ್ತಿದ್ದ ಬ್ಯಾಟ್ರಿಯ ಕ್ಯಾಚ್ ಹಿಡಿದು ‘ಇರಣ್ಣ ಇರು, ಒಂದು ಸೆಕೆಂಡ್ನಲ್ಲಿ ಬ್ಯಾಟ್ರಿ ಬಿದ್ದು ಹೋಗೋದಲ್ಲ. ಎಲ್ಲಿಗೋಗದು ಕಾಸು... ನಿಧಾನಕ್ಕೆ ತಗೊಂತ್ತಿದ್ದೆ’ ಅಂತ ಅವನು ಮಾತು ಮುಗ್ಸೋ ಹೊತ್ತಿಗೆ ರಂಗಣ್ಣ ಅಡ್ಡಾದ.

ಅವನನ್ನು ಕಾಣುತ್ತಲೇ ನಂಜಣ್ಣ ‘ಲೋ... ರಂಗ ನೀ ಇಲ್ಲೇ ಸಿಕ್ಕಿದೆ ನೋಡು. ನಾನು ಪರಮೇಶನ್ನ ನಿನ್ ಮನೆತಕ್ಕೆ ಹೋಗಿ ಬಾ, ರಂಗ ಇದಾನಾ ಇಲ್ವಾ ನೋಡೂಂತ ಹೇಳಿ ಇದೇತಾನೆ ಬಂದೆ’ ಎನ್ನುತ್ತ ಅವನತ್ತಲೇ ನೋಡಿದ.

ರಂಗಣ್ಣನಿಗೆ ಕತ್ತಲೇಲಿ ಮೊದಲು ನಂಜಣ್ಣನ ದನಿ ಕೇಳಿಸಿ ನಂತರ ಅವನ ದೇಹ ಕಾಣಿಸಿತು. ‘ಯಾಕಣ್ಣಾ?’ ಅಂದ.
‘ನಾಳೆ ಮರಿ ಕುಯ್ತೀನಿ. ನಿನಗೆಷ್ಟು ಪಾಲು ಬೇಕು ಕೇಳು ಅಂತ ಕಳುಸ್ದೆ ನೋಡು’.

ನಂಜಣ್ಣನ ಮಾತು ಕೇಳಿ ರಂಗಣ್ಣನ ಬಾಯಲ್ಲಿ ಜೊಲ್ಲುತುಂಬಿ ಬಂದು ‘ನನಿಗೆ ಒಂದು ಮೂರುಗುಡ್ಡೆ ಬೇಕು. ಆದ್ರೆ ಬಾರುಗೀರು ಚೆನ್ನಾಗಿರಬೇಕು’ ಅಂತೇಳುತ್ತಾ ಒಂದು ಗುಟುಕುಜೊಲ್ಲು ಹಂಗೇ ನುಂಗಿಕೊಂಡ.

‘ಯಾ... ಅದೇನು ನಾನು ತಿನ್ನಬೇಕಾ? ಎಲ್ಲರಿಗೂ ಏನು ಬರುತ್ತೆ ಅದ ಹಾಕುತ್ತೀವಿ. ನಿನ್ನೊಬ್ಬಗೆ ಏನ್ ಬೇರೆ ಮಾಡ್ತೀವಾ?’ ಅಂತಂದ ನಂಜಣ್ಣ, ‘ಲೇ... ಶಿವಾ ನಿನಿಗ್ ಬೇಕೇನ್ಲಾ?’ ಅಂತಾನು ಅಂದ.

‘ಬ್ಯಾಡ ಕಣಣ್ಣ. ಮನೇಲಿ ಮಾಡೋರು ಯಾರೂ ಇಲ್ಲ’ ಎಂದ ಶಿವಣ್ಣ ಸುಮ್ಮನಾದ.
ಅಲ್ಲಿಂದ ಹೊರಟ ನಂಜಣ್ಣ, ನಾಳೆ ಕುಯ್ಯಲಿರುವ ಹಂದಿಯ ಲೆಕ್ಕಾಚಾರದಲ್ಲೇ ಮನೆಗೆ ಬಂದ.

‘ಹೇ ತಾಯಿ, ಬೆಳಿಗ್ಗೆ ಗೂಡಿಂದ ಹಂದಿ ಹೊರಗೆ ಬಿಡಬ್ಯಾಡ, ಬಿಟ್ರೆ ಮತ್ತೆ ಅದನ್ನು ಹಿಡ್ಕೊಂಡ್ರೆ ಕಷ್ಟ. ಅಲ್ಲೇ ಮೇವು ನೀರು ಬಿಟ್ಟು ಹೊರಗೆ ಬಿಡದಂಗೆ ನೋಡಿಕೋ’ ಅಂತ ಹೆಂಡ್ತಿಗೆ ಹೇಳಿದ ಮಾತು ಕೇಳಿಸ್ಕೊಂಡ ಮಗಳು ದೊಡ್ಡಮ್ಮ ‘ಅಪ್ಪಾ... ಅದ್ಯಾಕ ಈಗಲೇ ಕುಯ್ತೀಯಾ? ಇನ್ನು ಸ್ವಲ್ಪ ದಿನ ಇದ್ದದ್ರೆ ಮರಿ ಬಲಿಯದು. ಆಗ ಕಾಸು ಹೆಚ್ಚಿಗೆ ಬರ್ತಿರಲ್ಲಲ್ವಾ..?’ ಅಂದಳು.

‘ಹೇ... ಯಾಕೆ ಬಿಡವ್ವ ಈಗಾಗಲೇ ಇದುನ್ನೇ ತಿನ್ನೋರಿಲ್ಲ... ಇನ್ನೊಷ್ಟು ದಿನ ಬಿಟ್ಟು ಕುಯ್ದರೆ ಯಾರು ಕೇಳ್ತಾರೆ. ಆ ಹಿತ್ತಲಿಗೆ ನುಗ್ತು ಈ ಹಿತ್ತಲಿಗೆ ನುಗ್ತು ಅಂತ ಎಲ್ಲಾರ ಬಾಯಲ್ಲೂ ಒಂದೊಂದು ಮಾತು ಕೇಳಬೇಕು. ಹೆಂಗೂ ನಿನ್ನ ಬೇರೆ ಕಳಿಸಬೇಕು. ಕೈಗೆ ಕಾಸು ಬಂದ್ರೇ ಮಗೀನ ಕೈ ಕಾಲಗೆ ಏನಾರ ಬೆಳ್ಳಿ ಚಿನ್ನ ಹಾಕಿ ಕಳಿಸಿದ್ರೆ ನಮಗೂ ಸಮಾಧಾನ ಆಗುತ್ತೆ. ಎಷ್ಟು ದಿನ ಬಿಟ್ರು ಹಂದಿ ಹಂದೀನೇ, ಎರಡು ಕಾಸು ಕಮ್ಮೀನೇ ಬರಲಿ, ಈಗಾಗಲೇ ಕುಯ್ಸಿ ಮುಗ್ಸಾನಾ’ ಎಂದ.

ಅವನ ಮಾತು ಮೊಮ್ಮಗನ ಕಡೆ ತಿರುಗಿ, ನೋಟ ತೊಟ್ಲುಕಡಿಕೆ ಒಮ್ಮೆ ಹರಿದು – ‘ಒಳ್ಳೆ ಅದೃಷ್ಟವಂತ ನೀನು. ಮೈ ತುಂಬಾ ಚಿನ್ನ ಬೆಳ್ಳಿ ಹಾಕಿಸಿಕೊಂಡು ಒಳ್ಳೆ ರಾಜಕುಮಾರನ ತರ ನೀನು ನಿಮ್ಮೂರಿಗೆ ಹೋಗ್ತೀಯ ಅನ್ನು’ ಅಂತ ಹೇಳಬೇಕಾದರೆ, ಅಲುಗೋ ಅವನ ಬಾಯನ್ನೇ ನೋಡುತ್ತಾ ಆ ಮಗುವು ಕಣ್ಣು ಅರಳುಸ್ತಾ ಮುದುರುಸ್ತಾ ನಗುತ್ತಿತ್ತು.

‘ಅಪ್ಪೋ ಏನ್ ಜಾಸ್ತಿ ಖರ್ಚು ಮಾಡಬ್ಯಾಡ. ಇವರಪ್ಪನು ತರ್ತೀನಿಂತ ಹೇಳಿ ಹೋಗವರೆ, ಒಂದು ಬೆಳ್ಳಿ ಉಡದಾರ ತಂದಾಕು ಸಾಕು’ ಅಂದಳು ಮಗಳು.

ಅಡಿಗೆ ಮನೆಯಿಂದ ಹೊರಗೆ ಬಂದ ತಾಯಮ್ಮ ‘ಮುತ್ತಿನ ಹರಳಿನ ಒಂದು ಲೋಲಕು ತನ್ನಿ ಕಿವಿಗೆ. ಕಾಲೊಂದಿ ಜೊತೆ ಒಳ್ಳೆಬಟ್ಟೆ ಮಗಿಗೆ ಇವಳಿಗೊಂದು ಸೀರೆ ತರಬೇಕು. ಒಂದುಕಾದ್ರೆ ಇನ್ನೊಂದುಕ್ಕಿಲ್ಲಾ ಅನ್ನಂಗೆ ಮಾಡಬ್ಯಾಡ್ರೀ...’ ಅಂತಂದು, ‘ನಡೀರಿ ಊಟ ಮಾಡಿರಂತೆ’ ಎಂದಳು.

ನೀರಿನ ತಂಬಿಗೆ ಕೈಗೆ ಕೊಡುತ್ತಾ ‘ಸಾಕಿದ ಹಂದಿ ಕುಯ್ಯೋದು ಅಂತಂದ್ರೆ ಮಕ್ಕಳ ಕತ್ತುಕುಯ್ದಂಗೆ. ನಾವು ಹಂದಿ ಕುಯಿಸ್ಲೇಬಾರ್ದು, ಯಾರಿಗಾದ್ರು ಮರೀನೆ ಮಾರಿ ಒಟ್ಟಿಗೆ ಕಾಸು ಇಸ್ಕೋಂಬದಿತ್ತು’ ಅಂದ ತಾಯಮ್ಮನ ಕಣ್ಣೊಳಗೆ ನೀರಾಡಿದವು.

ರಾತ್ರಿಯೆಲ್ಲಾ ಊರು ಸುತ್ತಿ ‘ಮರಿ ಕುಯಿತ್ತೀನಿ, ನಿಮಗೆಷ್ಟು ಪಾಲು ಬೇಕು?’ ಅಂತ ಜನರ ಪಟ್ಟಿತಯಾರು ಮಾಡಿಕೊಂಡು ಬಂದಿದ್ದ ನಂಜಣ್ಣ, ಇಡೀರಾತ್ರಿ ಮರಿ ಹಿಡಿಯೋಕೆ ಯಾರು ಯಾರು ಬೇಕು? ಅದನ್ನು ಹೆಂಗೆ ಹಿಡಿಬೇಕು... ಇಷ್ಟೆಲ್ಲಾ ಯೋಚನೆ ತಲೆಗೆ ಬಂದು ನಿದ್ದೆ ಬರದೆ ನಾಲ್ಕೈದು ಬಾರಿ ಬರಟೀ ಮಾಡಿಕೊಂಡು ಕುಡ್ದು ಎಚ್ಚರಾಗಿದ್ದ.

‘ಇದ್ಯಾಕಪ್ಪೋ...? ಮಲ್ಲಿಕ್ಕೋ... ನಿದ್ರೆಗೆಟ್ಟು ಉಸಾರ್ಗಿಸಾರ್ ತಪ್ಪೀತು’ – ಸರಿರಾತ್ರೀಲಿ ಎಚ್ಚರಾದ ಮಗಳು ಹಾಗೆ ಅಪ್ಪನಿಗೆ ಹೇಳಿ ಮಗ್ಗುಲಾದಳು. ಮಗೂನ ತನ್ನ ಹೊಟ್ಟೆ ಕಾವಿಗೆ ಎಳಕೊಂಡು ನಾಳೆ ನರಸಮ್ಮ ಬಂದಾಗ ಇದ ಹೇಳಬೇಕು. ಉಚ್ಚೆ ಉಯ್ಯುವಾಗ ಮಗ ಅಳುತ್ತೆ ಅಂತ ಒಳಗೊಳಗೆ ಲೆಕ್ಕ ಹಾಕುತ್ತಿದ್ದಳು.

‘ಅಮ್ಮಿ, ಎಷ್ಟಾತು ಟೇಮು’ ಎಂದು ನಂಜಣ್ಣ ಅನ್ನುತ್ತಲೇ, ‘ಅಯ್ಯೋ ಪುಣ್ಯಾತ್ಮನೇ, ಅದೇನು ನಿಂದು ಸಡಗರ ಅಂತೀನಿ. ರಾತ್ರೆಲ್ಲಾ ಹಂದಿ ಕುಯ್ಯೋದನ್ನೇ ಲೆಕ್ಕ ಮಾಡೋದು ಬಿಟ್ಟು ಓಟೊತ್ತು ಮಲಗು. ಇನ್ನು ಬೆಳ್ಳಿ ಮೂಡಕೆ ಬಾಳ ಹೊತ್ತೈತೆ, ಈಗಲೇ ಎದ್ದು ಏನ್ ಮಾಡ್ತೀಯಾ?’

‘ಹೇ... ನಾನು ಮಲಗೋದು ಅಂಗಿರ್ಲಿ, ನೀನು ಹೋಗಿ ಗೂಡಿಂದ ಹಂದೀನ ಆಚೆಗೀಚೆ ಬಿಟ್ಟೀಯಾ. ಆಮೇಲೆ ಅದ್ನ ಹಿಡಿಯೋದು ಕಷ್ಟ ಆಗುತ್ತೆ. ಹಂದಿ ಹಿಡಿಯೋರು ಬರೋತನಕ ಗೂಡಲ್ಲೆ ಇರ್ಲಿ, ತಿಳೀತಾ...’

‘ಅಯ್ಯೋ... ರಾತ್ರೆಲ್ಲಾ ಹಂದಿ ಹಿಡಿಯೋ ದ್ಯಾನಾಗಿರೋ ನಿಂಗೆ ಮತ್ತೆ ಹಂದಿ ಆಚೆ ಬಿಟ್ರೆ ನನ್ನ ಸುಮುಕೆ ಬಿಟ್ಟೀಯಾ? ನಾ ಯಾಕೆ ಆಚೆ ಬಿಡ್ಲಿ, ಮಲಗಪ್ಪ ತಂದೆ’ ಅಂತ ಒಂತರ ನಕ್ಸಾರ ಮಾಡಿ ತಾಯಮ್ಮ ದನದ ಕಸಮುಸರೆ ನೋಡಲು ಗೂಡಕಡೆಗೆ ಹೋದಳು.

‘ಹೊತ್ತು ಹುಟ್ಟ್ ಬಂತು. ಲೇ... ಪಾಪ... ಹೋಗ್ಲಾ ಶೇಖರನ್ನೂ ಕಾಳಮ್ಮಜ್ಜಿ ಶಂಕ್ರನ್ನೂ, ಉಗ್ರಿ ಪರಮ, ಚಟಾಕಿ ನಿಂಗನ ಕರಕೊಂಡು ಬಾ ಬೇಗ... ಹಂದಿ ಹಿಡಿಬೇಕು... ಬರುವಾಗ ಶೇಖರನಿಗೆ ಮಚ್ಚು, ಕೈಕೊಡಲಿ, ಚಾಕು ತರಕೆ ಹೇಳು’ ಅಂತ ಒಂದೇ ಉಸುರಿಗೆ ಎದ್ದು, ಪರಮೇಶಿನೂ ಎಬ್ಬಿಸಿ ಕಳಿಸಿ, ಬಾಯಿ ತುಂಬಾ ನೀರುತುಂಬಿಕೊಂಡು ಮುಕ್ಕಳಿಸಿ, ಬಚ್ಚಲು ಮನೆಗೆ ‘ತೂ...’ ಅಂತ ಉಗುದು, ರಾತ್ರಿ ಮಗುನ ಉಚ್ಚೆ ಉಯ್ಸಕೆ ತರಾವರಿ ಸಂಕಟ ಪಡ್ತಿದ್ದ ಮಗಳ, ‘ಯಾಕವ್ವಾ, ಮಗ ರಾತ್ರೆಲ್ಲಾ ಅಳತ್ತೆ. ಅದೇನು ನಿಮ್ಮವ್ವಂಗೆ ಹೇಳು’ ಅಂತಂದ.

ಅಷ್ಟರೊಳಗೆ ಊರು ಎಚ್ಚರಾಗಿತ್ತು. ಅದೇಟೇಮಿಗೆ ಹತಾರ ತಗೊಂಡು ಚಟಾಕಿ ನಿಂಗ ಬರ್ತಿದ್ದ. ಹೀಗೇ ಒಬ್ಬರಾದ ಮೇಲೆ ಒಬ್ಬರಂತೆ ಪರಮೇಶ, ಕಾಳಮ್ಮಜ್ಜಿ, ಶಂಕ್ರಣ್ಣ, ಉಗ್ರಿ, ಶೇಖರನೂ ಕಾಣಿಸಿಕೊಂಡ. ಅಂಗೆ ಒಬ್ಬರಿಗೊಬ್ಬರು ಸೇರಿಕೊಂಡು, ಬೆಳ್ಳುಬೆಳಗ್ಗೇನೆ ಹಿಂಗೆ ಹತಾರ ಹಿಡಿದು ಜನ ಸೇರಿಕೊಂಡಿದ್ದಕ್ಕೆ ಆಗಿನ್ನು ಕಣ್ಣುಜ್ಜುತ್ತಾ ಆಕಳಿಸಿ ಎದ್ದ ಊರು, ಊರಿನ ಒಂದಷ್ಟು ಹುಡುಗ್ರು, ಮಕ್ಳು ಸೇರಿಕೊಂಡು ಜನಗಳ ಗುಜುಗುಜು ಶುರುವಾಯ್ತು.

‘ಲೇ... ಪಾಪಾ ಹೋಗುರ್ಲಾ ಆಮೇಲೆ ಬರ್ರೀ...’ ಅಂತ ನಂಜಣ್ಣ ಹೇಳ್ತಾನೆ ಇದ್ದ. ಹಂದಿ ಹೆಂಗೆ ಹಿಡೀತಾರೆ ಅಂತ ಹುಡುಗ್ರು, ಮಕ್ಳು ನಿಂತಿದ್ರು.
ತಾಯಕ್ಕ ರಾತ್ರಿಯ ಮುದ್ದೆಗಳನ್ನು ಮಜ್ಜಿಗೇಲಿ ಕಲಸಿ ಅಂಬಲಿ ಮಾಡಿ ದಬ್ರೀಲಿ ತುಂಬಿಕೊಂಡು ಹಂದಿಗೂಡಿನ ಪಕ್ಕ ಕೂತಿದ್ಲು.

ಗೂಡಿಗೆ ಬಾಗಿಲಂತೆ ನಿಲ್ಲಿಸಿದ್ದ ಚಪ್ಪಡಿಕಲ್ಲು ಸಂದಿಯಿಂದ ಚೂಪು ಮುಸುಡಿ ಮುಸು ಮುಸು ಅಂತ ಒಂದೇ ಸಮನೆ ವಾಸನೆ ಎಳೆಯುತ್ತಾ ಹಾರಾಡುತ್ತಿದ್ದ ಹಂದಿಯು ಗೂಡು ಎತ್ತಿ ಒಂದೇ ಒಗೆತಕ್ಕೆ ಒಗೆದು ಆ ಮುಸುರೆಯ ಒಂದೇ ಗುಕ್ಕಿಗೆ ಕುಡಿಯುವ ಕಾತುರದಲ್ಲಿ ಒಳಗೇ ಹಾರಾಡ್ತಿತ್ತು.

ನಿಂಗ ‘ಅಮ್ಮೋ, ನೀನು ಮುಸುರೆ ಇಟ್ಟು ಅದು ಕುಡಿಯುತ್ತಿದ್ದಾಗ ಮೆಲ್ಗೆ ಅದರ ಮೈ ತುಬರಿಸು. ಅಂಗೇ ಅದು ನಿದ್ರೆ ಬಂದಂಗೆ ಮುಸುರೆ ಕುಡಿಬೇಕಾದರೆ ಹಿಂದುಗಡೆಯಿಂದ ಬಂದು ಅದರ ಕತ್ತಿಗೆಗೆ ನೇಗ್ಲೀಚು ಇಡು ಪರಮೇಶ. ನಂಜಣ್ಣ ನೀನು, ಬಿಗಿಯಾಗಿ ಅದನ್ನು ಅದುಮಿ ಹಿಡಿ. ಆಗ ನಾನು ಕಾಲು ಕಟ್ಟುತ್ತೀನಿ. ಇದೇ ದಡಿಯಿಂದ ಆತ್ತ ಎಲ್ಲ ಸೇರಿ ಹೊತ್ತುಕೊಂಡು ಹೋದರಾಯ್ತು. ಇಷ್ಟು ಹುಷಾರಾಗಿ ಕೆಲಸ ಆಗಬೇಕು. ಮತ್ತೆ ಆಯ ತಪ್ಪಿದ್ರೆ ಈ ಹಂದಿ ಹಿಡಿಯೋಕೆ ಆಗಲ್ಲ... ಹುಷಾರು’ ಅಂದ.

ತಾಯಮ್ಮ ಅಂಬಲಿ ಹಿಡಿದು ಹಂದಿ ಹಿಡಿಯುವವರ ಆದೇಶಕ್ಕಾಗಿ ಕಾಯುತ್ತಾ ಕುಳಿತಳು. ಹಂದಿ ಮಾತ್ರ ಇದ್ಯಾವುದನ್ನೂ ಲೆಕ್ಕಿಸದೇ ಗೂಡೊಳಗೆ ಹಾರಾಡ್ತಲೇ ಇತ್ತು.

ಹಂದಿ ಹಿಡಿಯಲು ಹತಾರ ಹಿಡಿದಿದ್ದವರೆಲ್ಲ ಒಂದೊಂದು ಆಯಕಟ್ಟಿಗೆ ನಿಂತರು. ತಾಯಮ್ಮ ದಬರಿಯಲ್ಲಿ ಮುಸುರೆ ಹಿಡಿದಿದ್ದಳು. ನಂಜಣ್ಣನ ಮಗ ಪರಮೇಶ, ನಂಜಣ್ಣ–ನಿಂಗಣ್ಣನ ಆದೇಶದಂತೆ ಗೂಡಿಗೆ ಒಡ್ಡಿ ನಿಲ್ಲಿಸಿದ್ದ ಒಡ್ಡುಗಲ್ಲ ನಿಧಾನವಾಗಿ ಸರಿಸಿ ಬಾಗಿಲು ತೆರೆದ. ಒಂದು ಕಲ್ಲು ಸರಿಸಿದ್ದೇ ತಡ, ಗೂಡಿನಿಂದ ದಢಾರನೆ ಆಚೆ ನುಗ್ಗಿದ ಹಂದಿ ತಾಯಮ್ಮನ ಮೇಲೆ ಗುಡ್ರ್ಕುಗುಡ್ರ್ಕು ಅಂತ ಸಿಕ್ಕಿ ಸಿಕ್ಕಿದ ಕಡೆಲೆಲ್ಲ ಬಾಯಿ ಹಾಕಲು ಹೋಗಿ ಅವಳ ಕೈಯಲ್ಲಿದ್ದ ಮುಸುರೆ ದಬರಿ ನೆಲಕೆ ಬಿತ್ತು.

‘ಅಯ್ಯೋ... ಅಯ್ಯೋ...’ ಅನ್ನುತ್ತಾ ದಬರಿ ಮೇಲೆತ್ತಿ ಇಡುವಷ್ಟರಲ್ಲಿ ಮುಕ್ಕಾಲು ಮುಸುರೆ ನೆಲದ ಪಾಲಾಗಿತ್ತು. ಉಳಿದಿದ್ದ ಮುಸುರೇನ ಹಂದಿಗೆ ತೋರಿಸಲು ತಾಯಕ್ಕ ಸಜ್ಜಾಗುತ್ತಿರುವಾಗ್ಗೆ ‘ಇವಳವ್ವನ್... ಸರಿಯಾಗಿ ಕೈಯಲ್ಲಿ ದಬ್ರಿ ಹಿಡಿಯೋಕೆ ಆಗಲಿಲ್ಲ’ ಅಂತ ನಂಜಣ್ಣ ಗೊಣಕೊಂಡು ನೊರ ನೊರ ಹಲ್ಲುಕಡಿಯುತ್ತಿದ್ದ.

ತಾಯಕ್ಕ ಹಂದಿಗೆ ದಬರಿ ತೋರಿಸುತ್ತಾ ಅದು ಉಳಿದ ಮುಸುರೆ ನೆಕ್ಕಕ್ಕೆ ಸುರು ಮಾಡಿದ ಮೇಲೆ ಎಡಗೈ ಬೆರಳಲ್ಲಿ ಅದರ ಹಣೆ ಮುಟ್ಟಿ ತೂಬರಿಸಲಾರಂಭಿಸಿದಳು. ಉಳಿದ ಮುಸುರೆ ನೆಕ್ಕುತ್ತಾ ನೆಕ್ಕುತ್ತಾ ಕಣ್ಣು ಮುಚ್ಚಿ ರುಚಿಯ ಧ್ಯಾನದಲ್ಲಿ ಅದಿರಬೇಕಾದರೆ, ನಿಂಗಣ್ಣ ಅದರ ಹಿಂದಿನ ಕಾಲುಗಳಿಗೆ ಗಬಕ್ಕನೆ ಕೈಹಾಕಿ ಹಿಡಿಯಲಾರಂಭಿಸಿದ.

ಕಯ್ಯಯ್ಯೋ.....ಕಯ್ಯಯ್ಯೋ... ಎನ್ನುತ್ತಾ ಇಡೀ ಊರಿಗೇ ಕೇಳುವಂತೆ ಅರಚತೊಡಗಿದ ಆ ಹಂದಿಯು ನಿಂಗಣ್ಣ ಹಿಡಿದ ಹಿಡಿತವ ಬಿಗಿ ಮಾಡೋದ್ರೊಳಗೆ ನುಗುಚಿಕೊಂಡು ಬಿದ್ದು, ಎದ್ದು ಅರಚುತ್ತಾ, ಅತ್ತಿಂದಿತ್ತ, ಇತ್ತಿಂದತ್ತ ಎಲ್ಲಾ ಕೈಕಾಲು ಆಡಿಸಿಕೊಂಡು ನಿಂಗಣ್ಣನನ್ನು ಮಕಾಡೆ ಬೀಳಿಸಿ ಓಡಲಾರಂಭಿಸಿತು.

ಅಷ್ಟೊತ್ತು ನೇಗಿಲ ಈಚು ಹಿಡಿದು ಸಮಯಕ್ಕಾಗಿ ಕಾಯ್ತ ನಿಂತಿದ್ದ ಶಂಕರಣ್ಣ ಓಡುತ್ತಿದ್ದ ಹಂದಿ ತಲೆಗೆ ದಡ್ ಅಂತ ಬಾರಿಸಿದ. ಅವನ ಏಟಿಗೆ ಆ ಹಂದಿ ಬಿದ್ದೆನೋ ಎದ್ದೆನೋ ಅನ್ನುವಂತೆ ಊರ ಸಂದಿಗೊಂದಿ ನುಗ್ಗಿ ವೇಗ ಹೆಚ್ಚಿಸಿಕೊಂಡು ಹಾರಿ ಹಾರಿ ಹೋಗತೊಡಗಿತು. ಅದರ ಬೆನ್ನಿಗೆ ಬಿದ್ದಜನ, ಅದನ್ನು ಗುರಿಯಾಗಿಸಿಕೊಂಡು ಬಿಟ್ಟ ಬಾಣದಂತೆ ‘ಅಲ್ಲೋಯ್ತು... ಇಲ್ಲೋಯ್ತು...

ದುಂಡಿತಗೊಂಡಾಕು, ಕಲ್ಲಲ್ಲೊಡಿ, ಅದರ ತಲೆಗೊಡಿರಿ, ಕಿವಿ ಬುಗುರಿಗೊಡಿರಿ’ ಅಂತ ಒಳಕೆ ಸೌದೆ, ಕಲ್ಲುದುಂಡಿ ಕೈಗೆ ಏನೇನೆಲ್ಲಾ ಸಿಗುತ್ತೋ ಅದನ್ನೆಲ್ಲಾ ಮೇಲೆ ತೂರುತ್ತಾ ಹಿಂದೆ ಹಿಂದೆ ಓಡುತ್ತಿದ್ದರು.

‘ಥೂ... ಅದರ ನೆಗೆದು ಬಿದ್ದೋಗ, ಅದರ ಸೆಲೆಗೆಟ್ಟೋಗ’ ಅಂತ ಒಬ್ಬೊಬ್ಬರು ಒಂದು ಬೈಗಳ ಗೊಣಗಿಕೊಳುತ್ತ ಒಬ್ಬೊಬ್ಬರೇ ಗದ್ದೆ ಒಳಗಿನಿಂದ ಹೊರಬರತೊಡಗಿದರು. ಹಂದಿ ಹುಡುಕಲು ಬಂದವರೆಲ್ಲಾ ಗುಜುಗುಜು ಮಾತಾಡಿಕೊಂಡು ಗದ್ದೆದಾಟಿ ಅತ್ತ ನಡೆದರು.

ನಂಜಣ್ಣನ ಕಟಬಾಯಲ್ಲಿ ಹರಿದಿದ್ದ ಜೊಲ್ಲ ಅವನ ಹೆಗಲ ಮೇಲಿದ್ದ ಟವಲ್ನಲ್ಲಿ ಒರೆಸಿದ ಶಂಕ್ರಣ್ಣ ‘ಎಲ್ಲಿಗೆ ಹೋದಳಜ್ಜ... ಹೋದ್ರೆ ಹೋಯ್ತು, ಸಂಜೆ ಹೊತ್ತಿಗೆ ಮನೆಗೆ ಬರುತ್ತೆ. ಸಾಕಿದ್ದು ಎಲ್ಲಿಗೆ ಹೋಗುತ್ತೆ? ಅದರ ಗೂಡಿಗೆ ಅದು ಬಂದೇ ಬರುತ್ತೆ’ ಅಂತ ಸಾಧ್ಯವಾದಷ್ಟು ಧೈರ್ಯತುಂಬಲು ಯತ್ನಿಸಿದ.

ನಂಜಣ್ಣನ ತಲೆಯೊಳಗೆ ಹಾಕಬೇಕಾದ ಹಂದಿಮಾಂಸದ ಪಾಲು, ಬರೆಸಬೇಕೆಂದುಕೊಂಡಿದ್ದ ಹೆಸರುಗಳ ಚೀಟಿ, ಮೊಮ್ಮಗುವಿಗೆ ಮಾಡಿಸಬೇಕೆಂದಿದ್ದ ಒಡವೆ, ಮತ್ತೆಲ್ಲವೂ ಹುಚ್ಚೆದ್ದಂತೆ ಕುಣಿಯತೊಡಗಿದವು.

ಅತ್ತ ಗದ್ದೆಯ ಕೆಸರಿನಲ್ಲಿ ಹೂತುಹೋಗಿದ್ದ ಹಂದಿ ತನ್ನನ್ನು ಬಿಗಿಯಾದ ಹಗ್ಗದಲ್ಲಿ ಉಸಿರುಗಟ್ಟಿಸುತ್ತಿರುವರು ಯಾರು ಯಾರು ಎಂದು ನೋಡುತ್ತಿರುವಾಗಲೇ ಹತ್ತಾರು ಜನ ಕಾಣಿಸಿಕೊಂಡಂತಾಗಿ ನಿಧಾನವಾಗಿ ಕಣ್ಣು ಮುಚ್ಚಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.