ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರೇ ಮಕ್ಕಳನ್ನು ಹಳಿದರೆ...

ಓದುಗರ ವೇದಿಕೆ
Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಇತ್ತೀಚೆಗೊಮ್ಮೆ ಬೆಂಗಳೂರಿಗೆ ಹೋದಾಗ ಬಾಲ್ಯದ ಗೆಳತಿ ಕಲ್ಯಾಣಿಯನ್ನು ಭೇಟಿಯಾಗಲು ಹೋಗಿದ್ದೆ. ಮಾತನಾಡುತ್ತಾ ಕುಳಿತಾಗ ಅವಳ ಮೊಬೈಲ್ ರಿಂಗಾಯಿತು.

ಕರೆ ಸ್ವೀಕರಿಸಿ ಮಾತನಾಡಿ ಮುಗಿಸಿದ ಕಲ್ಯಾಣಿ ಸಿಟ್ಟಿನಿಂದ– ‘ಏನೇ ಪ್ರೊಗ್ರೆಸ್ ಕಾರ್ಡ್‌ ಕೊಟ್ಟು ಆಗಲೇ ಒಂದು ವಾರ ಆಯ್ತಂತೆ? ನನಗೆ ಯಾಕೆ ಹೇಳಿಲ್ಲ? ಇವತ್ತು ನಿಮ್ ಮಿಸ್ ಫೋನ್ ಮಾಡಿದ್ರು. ನಾಳೆ ಸಿಗ್ನೇಚರ್ ಮಾಡಿ ಮರೀದೇ ನಿಮ್ ಮಗಳ ಜೊತೆ ಕಳಿಸಿ ಅಂದ್ರು. ಇದುವರೆಗೂ ಯಾಕೆ ನನಗೆ ತೋರಿಸಿಲ್ಲ?’ ಎಂದು ಜೋರಾಗಿ ಮಗಳಿಗೆ ಕೇಳಿದಳು ಕಲ್ಯಾಣಿ.

ಅಮ್ಮನ ಮಾತಿಗೆ ಬೆಚ್ಚಿದ ಮಗಳು ‘‘ಮಮ್ಮಿ, ಮ್ಯಾಥ್ಸ್‌ ಮತ್ತು ಸೈನ್ಸ್‌ನಲ್ಲಿ ಕಡಿಮೆ ಅಂಕಗಳು ಬಂದಿವೆ. ಅದಕ್ಕೆ...’’ ಎಂದು ಹೇಳುತ್ತಿದ್ದಂತೆಯೇ ಕಲ್ಯಾಣಿ ಕೋಪ ತಾರಕಕ್ಕೇರಿತು.

‘‘ಯಾಕೆ ಅಂಕಗಳು ಕಡಿಮೆ ಬಂತು? ಈಗಿನಿಂದಲೇ ಹೀಗೆ ಕಡಿಮೆ ಅಂಕ ತಗೊಂಡ್ರೆ ಮುಂದೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಹೇಗೆ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುತ್ತೀಯ? ನಾನು ನಿನ್ನನ್ನು ಮೆಡಿಕಲ್‌ಗೆ ಸೇರಿಸಬೇಕು ಅಂದುಕೊಂಡಿದಿನಿ. ಸಾವಿರಾರು ರೂಪಾಯಿ ಕೊಟ್ಟು ಒಳ್ಳೆ ಸ್ಕೂಲಿಗೆ ಸೇರಿಸಿದ್ದೀನಿ, ಟ್ಯೂಷನ್‌ಗೂ ಹಾಕಿದೀನಿ.

ಆದ್ರೂ ಚೆನ್ನಾಗಿ ಓದೋಕೆ ನಿನಗೆ ಏನು ಕಷ್ಟ? ಎದುರು ಮನೆ ಸುಮಾಳನ್ನು ನೋಡಿಯಾದರೂ ಬುದ್ಧಿ  ಕಲಿತುಕೊ. ಯಾವಾಗಲೂ ಕ್ಲಾಸಿಗೆ ಫಸ್ಟ್ ಬರ್ತಾಳೆ ಸುಮಾ. ನೀನು ಇದ್ದೀಯಾ ದಂಡಕ್ಕೆ. ನಿನ್ನನ್ನು ಅಂದು ಏನು ಪ್ರಯೋಜನ?...’’.

ಕಲ್ಯಾಣಿ ಮಾತುಗಳನ್ನು ಕೇಳಿ ನನಗೆ ಪಿಚ್ಚೆನಿಸಿತು. ಅಪ್ಪ ಅಮ್ಮಂದಿರ ಇಂತಹ ಮಾತುಗಳನ್ನು ನಾವು ಅಲ್ಲಲ್ಲಿ ಕೇಳಿಯೇ ಇರುತ್ತೇವೆ. ಮಕ್ಕಳು ಬರೀ ಟೀವಿ ನೋಡುತ್ತಾರೆಂದೋ ಚೆನ್ನಾಗಿ ಓದುತ್ತಿಲ್ಲವೆಂದೋ ಹೆಚ್ಚು ಅಂಕ ಬಂದಿಲ್ಲವೆಂದೋ.... ಹೀಗೆ ಅನೇಕ ಕಾರಣಗಳಿಗಾಗಿ ಮಕ್ಕಳನ್ನು ನಿಂದಿಸುವುದು, ಇತರರಿಗೆ ಹೋಲಿಸಿ ಬೈಯುವುದು, ಇತರ ಮಕ್ಕಳೊಂದಿಗೆ ಹೋಲಿಸಿ ಹೀಯಾಳಿಸುವುದು... ಪೋಷಕರ ಇಂಥ ವರ್ತನೆಗಳು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಹುದೆನ್ನುವುದನ್ನು ದೊಡ್ಡವರು ಯೋಚಿಸುವುದೇ ಇಲ್ಲ.

ಮಕ್ಕಳು ಬುದ್ಧಿವಂತರಾಗಬೇಕು ಎನ್ನುವ ಆಸೆ ಹೆತ್ತವರಿಗೆ ಇರುವುದು ಸಹಜ. ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಂಡು ‘ಎಂಜಿನಿಯರ್ ಅಗು, ಡಾಕ್ಟರ್ ಆಗು’ ಎಂದು ಒತ್ತಡ ಹೇರಿದರೆ ಮಕ್ಕಳು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ.

ಈ ರೀತಿಯ ಒತ್ತಡ ಹೇರುವುದರಿಂದಲೇ, ಕೆಲವು ಮಕ್ಕಳು ತಂದೆ–ತಾಯಿ ಆಸೆ ಪೂರ್ಣ ಮಾಡಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆಗೆ ಮೊರೆಹೋಗುತ್ತಾರೆ.  ದೇಹದ ಮೇಲೆ ಪುಸ್ತಕದ ಹೊರೆ ಹೊರಿಸಿ ಬುದ್ಧಿವಂತರನ್ನಾಗಿ ಮಾಡುತ್ತೇವೆಂದರೆ ಅದು ಶಿಕ್ಷಣವಾಗದೆ ಶಿಕ್ಷೆಯಾಗುತ್ತದೆ.

ಆತ್ಮವಿಶ್ವಾಸ, ವೈಚಾರಿಕತೆ... ಇದರ ಬಗ್ಗೆ ನಮ್ಮ ಗಮನವೇ ಇಲ್ಲ. ಮಾನಸಿಕ ಮಟ್ಟ ಅಳೆದು ಪಾಠ ಹೇಳುವ ದಿನಗಳು ಈಗಿಲ್ಲ. ಈಗಿರುವದು ಎರಡೇ, ಒಂದು ಪರೀಕ್ಷೆ ಮತ್ತು ಇನ್ನೊಂದು ಹೆಚ್ಚು ಅಂಕಗಳನ್ನು ಗಳಿಸುವುದು.

ಪಾಲಕರು ಮಕ್ಕಳನ್ನು ಪ್ರೀತಿ ವಿಶ್ವಾಸದೊಂದಿಗೆ ಮಾರ್ಗದರ್ಶನ ನೀಡುತ್ತ, ಭವಿಷ್ಯದ ಜೀವನದ ಕುರಿತು ತಿಳಿಹೇಳುತ್ತ, ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಆಗ ಮಕ್ಕಳ ಮನಸು ಹೂವಿನಂತೆ ಅರಳುತ್ತದೆ. ಪೋಷಕರೇ ಮಕ್ಕಳನ್ನು ಹಳಿದರೆ, ಪ್ರಪಂಚದಲ್ಲಿ ಅವರನ್ನು ಬೆನ್ನು ತಟ್ಟುವವರು ಯಾರಿರುತ್ತಾರೆ ಹೇಳಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT