ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಅಂತಃಕರಣದ ಚೆಲುವಿಗೆ ಸಾಹಿತ್ಯ – ಕಲೆಯ ಅಂತರ್ಜಲ

Last Updated 16 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಮಕ್ಕಳು ಈ ಲೋಕದ ಬಹಳ ದೊಡ್ಡ ಭರವಸೆ. ನಾಳಿನ ಎಲ್ಲ ಸುಂದರ ಆಸೆಗಳು ಶುರುವಾಗುವುದು ಈ ಮಕ್ಕಳಿಂದಲೇ. ಅವರ ಮುಗ್ಧತೆಯೊಳಗಿನ ಪ್ರಬುದ್ಧತೆ, ನಗುವಿನೊಳಗಿನ ಸಹಜತೆ, ನಡೆಯೊಳಗಿನ ನಿಷ್ಕಲ್ಮಶತೆ– ಇವೇ ಈ ಜಗತ್ತನ್ನು ಒಂದಷ್ಟು ಸಹನೀಯವಾಗಿಸಬಲ್ಲ ಜೀವರಸಗಳು.

ಆದರೆ ಮಕ್ಕಳಿಗೆ ಸಿಗಬೇಕಾದ ಸಹಜ ಬಾಲ್ಯವನ್ನು ದೊಡ್ಡವರಾದ ನಾವು ನಮ್ಮ ಸಂಕುಚಿತ ಲೆಕ್ಕಾಚಾರಗಳಲ್ಲಿ ದಾರಿ ತಪ್ಪಿಸುತ್ತೇವೆ. ನಾಳಿನ ಭರವಸೆಗಳಿಗೆ ಲಾಭ–ನಷ್ಟಗಳ ಲೇಬಲ್ಲುಗಳನ್ನು ಅಂಟಿಸುತ್ತ, ಮಕ್ಕಳು ಯಾವ ಶಾಲೆಯಲ್ಲಿ ಏನು ಕಲಿತರೆ, ನಾಳೆ ಹೆಚ್ಚು ಸಂಬಳ ಸಿಗುತ್ತದೆ ಎಂಬುದನ್ನೇ ಬಹಳ ದೊಡ್ಡ ಪ್ರಶ್ನೆಯಾಗಿಸಿಕೊಂಡಿದ್ದೇವೆ.

ಈ ಪ್ರಶ್ನೆಯೇ ಮಕ್ಕಳ ಪುಟ್ಟ ಭಾವಕೋಶವನ್ನು ಅರಳದಂತೆ ತುಳಿಯುತ್ತದೆ. ಮಕ್ಕಳು ಸದಾ ಪಠ್ಯಪುಸ್ತಕಗಳಿಗೆ ಅಂಟಿಕೊಂಡು, ಹೋಂವರ್ಕ್ –ನೋಟ್ಸ್‌ಗಳಲ್ಲಿ ಮುಳುಗಿದ್ದರೆ ನಿರಾಳವಾಗಿರುವ ಪೋಷಕರು, ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡಿದರೆ, ಚಿತ್ರ ಬರೆಯುತ್ತಿದ್ದರೆ ಅಥವಾ ಕಥೆ ಪುಸ್ತಕ ಓದುತ್ತಿದ್ದರೆ ‘ಮಕ್ಕಳು ಹಾಳಾಗುತ್ತಿದ್ದಾರೆ’ ಎಂದು ಆತಂಕಗೊಳ್ಳುತ್ತಾರೆ.

ಆದರೆ ಮಕ್ಕಳ ಈ ಸಹಜ ಆಟ, ಚಿತ್ರ ಬರೆಯುವುದು, ಕಥೆ ಪುಸ್ತಕ ಓದುವುದು, ಆಡುವುದು, ಕುಣಿಯುವುದು, ತಮ್ಮ ಭಾವನೆಗಳನ್ನು ಮಾತಿನಲ್ಲೋ ಅಥವಾ ಅಕ್ಷರಗಳಲ್ಲೋ ವ್ಯಕ್ತಪಡಿಸುವುದು ಕೂಡ ಕಲಿಕೆಯ ಒಂದು ಮುಖ್ಯವಾದ ಭಾಗ ಎಂದು ನಮಗೇಕೆ ಅನಿಸುತ್ತಿಲ್ಲ?

ಮಕ್ಕಳ ಪುಟ್ಟ ಮನಸು ಹೊರಜಗತ್ತಿನೊಂದಿಗೆ ಹೇಗೆಲ್ಲಾ ಅನುಸಂಧಾನ ನಡೆಸುತ್ತಿರುತ್ತದೆ ಎಂಬುದು ಅತ್ಯಂತ ಕುತೂಹಲಕರ. ಪುಟ್ಟ ಮಕ್ಕಳು ನಡೆಸುವ ಸಂಭಾಷಣೆಯೊಂದನ್ನು ಕದ್ದು ಆಲಿಸಿದರೆ ಮಕ್ಕಳ ಭಾವಜಗತ್ತಿನ ಸಣ್ಣ ಝಲಕನ್ನು ನಾವು ಅನುಭವಿಸಬಹುದು. ಮಕ್ಕಳೆಂದರೆ ಅವರು ಏನೂ ತಿಳಿಯದವರು ಅಥವಾ ತೀರಾ ಮುಗ್ಧರು ಎಂಬುದೆಲ್ಲಾ ಸುಳ್ಳು.

ಅವರಿಗೆ ಅವರದೇ ಆದ ಗ್ರಹಿಕೆಗಳು, ತಿಳಿವಳಿಕೆಗಳು, ಧೋರಣೆಗಳು, ಕಲ್ಪನೆಗಳು, ಕನಸುಗಳು, ಇವೆಲ್ಲಾ ಇರುತ್ತವೆ. ಇವುಗಳು ನಿಜವಾಗಿಯೂ ಮಕ್ಕಳೊಂದಿಗೆ ಕೆಲಸ ಮಾಡುವವರಿಗೆ ತಿಳಿದಿರಬೇಕಾಗುತ್ತದೆ. ಆದರೆ ನೀರಸತೆ, ನಿಷ್ಕ್ರಿಯತೆ ಹಾಗೂ ಒಣಶಿಸ್ತುಗಳನ್ನೇ ನಂಬಿಕೊಂಡಿರುವ ಶಿಕ್ಷಣ ವ್ಯವಸ್ಥೆಯೊಳಗೆ ತಮ್ಮೊಳಗಿನ ಜೀವದ್ರವ್ಯವನ್ನು ದಿನೇದಿನೇ ಕಳೆದುಕೊಳ್ಳುತ್ತಾ ಮಕ್ಕಳು ‘ಯಂತ್ರಮಾನವ’ರಾಗುತ್ತಿದ್ದಾರೆ.

ತಮ್ಮ ಸ್ವಂತ ಯೋಚನೆಗಳನ್ನು ರೂಪಿಸಿಕೊಳ್ಳುವ, ಗಟ್ಟಿ ಮಾಡಿಕೊಳ್ಳುವ ಬದಲು ತಮ್ಮ ಮೇಲೆ ಹೇರಲಾಗುವುದನ್ನೇ ಗಟ್ಟಿಮಾಡಿಕೊಳ್ಳಲು ಹೆಣಗಾಡಿ, ಕೊನೆಗೆ ಅದೂ ಮಾಡಲಾಗದೇ ಇದೂ ಮಾಡಲಾಗದೇ ಹೆಚ್ಚಿನ ಮಕ್ಕಳು ಅತಂತ್ರರಾಗುತ್ತಿದ್ದಾರೆ.

ಹೀಗೆಲ್ಲಾ ನಮಗೆ ಅನಿಸಿ ಈ ಮಕ್ಕಳಿಗೆ ಯಾವ್ಯಾವುದರ ಬಗ್ಗೆ ಏನೆಲ್ಲಾ ಅನಿಸುತ್ತದೆ ಎಂದು ತಿಳಿದುಕೊಳ್ಳುವುದನ್ನು ಹಾಗೂ ಅವರು ಅದನ್ನೆಲ್ಲಾ ವ್ಯಕ್ತಪಡಿಸಲು ಅವಕಾಶಗಳನ್ನು ನೀಡಬೇಕು ಎಂದು ಶುರುವಾದದ್ದು ‘ನವಿಲಗರಿ’ ಎಂಬ ಮಾಸಿಕ ಪತ್ರಿಕೆ (2004). ಒಂದೂವರೆ ವರ್ಷ ನಡೆದು ನಿಂತು ಹೋದ ಈ ಪತ್ರಿಕೆ ಮಕ್ಕಳ ಅಭಿವ್ಯಕ್ತಿಯ ಸಾಧ್ಯತೆಗಳ ಕುರಿತಾದ ಅನುಭವವನ್ನೂ ಹಾಗೂ ಒಂದು ಮುನ್ನೋಟವನ್ನು ನಮಗೆ ಒದಗಿಸಿತು.

ಅನಂತರ ಶಾಲೆಯ ಮಟ್ಟಿಗೆ ನಿರ್ದಿಷ್ಟವಾಗಿ ಏನಾದರೂ ಮಾಡಬೇಕು ಅಂದುಕೊಂಡು ನಮ್ಮ ಶಾಲೆಯ ಮಕ್ಕಳಿಗೆ ಹಲವು ಅವಕಾಶಗಳನ್ನು ಸೃಷ್ಟಿಸುತ್ತಾ ಬಂದೆವು. ಹಲವು ಪುಸ್ತಕಗಳ ಓದು, ಸಿನಿಮಾಗಳ ವೀಕ್ಷಣೆ, ಹಲವು ವ್ಯಕ್ತಿಗಳೊಂದಿಗೆ ಸಂವಾದಗಳು, ಬೇಸಿಗೆ ಶಿಬಿರ, ‘ಆದಿಮ ಸಾಂಸ್ಕೃತಿಕ ಕೇಂದ್ರ’ಕ್ಕೆ ಭೇಟಿ, ನಾಟಕಗಳ ವೀಕ್ಷಣೆ– ಹೀಗೆ ಮಕ್ಕಳು ತಮ್ಮ ಕುತೂಹಲದ ಕಣ್ಣುಗಳನ್ನು ಇನ್ನಷ್ಟು ಅಗಲಿಸಿ ನೋಡುವಂತೆ, ಗಮನಿಸುವಂತೆ ಹಾಗೂ ಅಭಿವ್ಯಕ್ತಿಸುವಂತೆ ಪ್ರೇರೇಪಿಸುತ್ತಿದ್ದೆವು. ಅದನ್ನೆಲ್ಲಾ ತಮ್ಮ ‘ಲೇಖನ ಪುಸ್ತಕ’ಗಳಲ್ಲಿ ಮಕ್ಕಳು ದಾಖಲಿಸುತ್ತಾ ಹೋದರು.

ಆ ಅಭಿವ್ಯಕ್ತಿಗಳು ಲೇಖನಗಳ ರೂಪದಲ್ಲೂ ಪದ್ಯಗಳ ರೂಪದಲ್ಲೂ ಚಿತ್ರಗಳ ರೂಪದಲ್ಲೂ ಇರುತ್ತಿದ್ದವು. ಇಲ್ಲವೆಂದರೆ ಶಾಲೆಯಲ್ಲಿನ ವಾರದ ಸಾಂಸ್ಕೃತಿಕ ವೇದಿಕೆ ‘ಕಾಮನಬಿಲ್ಲು’ ಕಾರ್ಯಕ್ರಮದಲ್ಲಿ ಅವರೇ ರೂಪಿಸುವ ನಾಟಕಗಳೂ ಆಗಿರುತ್ತಿದ್ದವು. ಇವುಗಳಲ್ಲಿ ಆಯ್ದವುಗಳನ್ನು ‘ಬೇಲಿಹೂ’ ಎಂಬ ಮಾಸಿಕ ಗೋಡೆಪತ್ರಿಕೆಯಲ್ಲಿ ಸಂಕಲಿಸಿ ಪ್ರಕಟಿಸುತ್ತಿದ್ದೆವು.

ತಾವೇ ಕಟ್ಟಿದ ಪದಗಳ ಗೂಡು ಹಾಗೂ ಸೃಷ್ಟಿಸಿದ ಚಿತ್ರಗಳ ಸೊಗಸಿಗೆ ಪುಟಾಣಿಗಳು ಪಡುವ ಸಂಭ್ರಮವನ್ನು ವರ್ಣಿಸುವುದು ಕಷ್ಟ! ಈ ಪ್ರಕ್ರಿಯೆಗಳಲ್ಲಿ ಮೇಷ್ಟ್ರು–ಮಕ್ಕಳು ಎಂಬ ಭೇದ ಮರೆತು ‘ಎಲ್ಲರೂ ಮನುಷ್ಯರು’ ಎಂದು ತಿಳಿಯುತ್ತಿದ್ದೆವು. ಈ ಮನುಷ್ಯತನ ಮಕ್ಕಳು ದೊಡ್ಡವರಿಗೆ ಕಲಿಸುವ ಪಾಠ. ಯಾವುದೋ ತಿಳಿಯದ, ನೋಡಿರದ ಅಮೆರಿಕದ ಸಸ್ಯವರ್ಗದ ಬಗ್ಗೆ ತಿಳಿಸುತ್ತಾ ಮಕ್ಕಳ ಕಣ್ಣಲ್ಲಿ ಅಜ್ಞಾನದ ಭಯವನ್ನು ಹುಟ್ಟುಹಾಕುವುದಕ್ಕಿಂತ, ಅದೇ ಮಗು ತನ್ನ ತೋಟದಲ್ಲಿ ಬೆಳೆಯುವ ಸಸ್ಯಗಳ ಕುರಿತು ಧೈರ್ಯವಾಗಿ, ವಿವರವಾಗಿ ತನಗೆ ತಿಳಿದದ್ದನ್ನು ಹೇಳುವುದು ಮಿಗಿಲು ಅಲ್ಲವೇ?

ಮಕ್ಕಳೊಂದಿಗಿನ ಸೃಜನಶೀಲ ಅನುಸಂಧಾನದ ಈ ಎಲ್ಲ ಪ್ರಕ್ರಿಯೆಗಳು ಬಂದು ಮುಟ್ಟಿದ್ದು ‘ಶಾಮಂತಿ’ ಪುಸ್ತಕ ಪ್ರಕಟಣೆಯ ಹಂತಕ್ಕೆ. ಈ ದಾರಿಯ ಒಂದೊಂದು ಹೆಜ್ಜೆಗಳು ಇನ್ನೊಂದೆರಡು ಹೆಜ್ಜೆಗಳನ್ನು ಹೆಚ್ಚಿಗೆ ಹಾಕಲು ಪ್ರೇರೇಪಿಸಿವೆ. 2010ರಲ್ಲಿ ಮೊದಲನೇ ‘ಶಾಮಂತಿ’ ಪ್ರಕಟಣೆಯಾದಾಗ ಅದೊಂದು ಹೆರಿಗೆಯಂತೆ ಎಲ್ಲ ನೋವು ಹಾಗೂ ತೃಪ್ತಿಗಳನ್ನು ನೀಡಿತು.

ಕೋಟಿಗಾನಹಳ್ಳಿ ರಾಮಯ್ಯನವರ ಪ್ರೋತ್ಸಾಹ ಪೂರ್ವಕ ಮುನ್ನುಡಿ ಈ ಮೊದಲ ಸಂಚಿಕೆಯನ್ನು ಗಟ್ಟಿಗೊಳಿಸಿತು. ಶಾಲಾ ಬಳಗ, ಇಲಾಖಾ ಅಧಿಕಾರಿಗಳು ಹಾಗೂ ನಮ್ಮೂರಿನ ‘ಸ್ನೇಹ ಯುವಕರ ಬಳಗ’ವೇ ‘ಸ್ನೇಹ ಪ್ರಕಾಶನ’ವಾಗಿ ನೀಡಿದ ಒತ್ತಾಸೆ ಮರೆಯಲಾರದ್ದು. ಹಾಗೆಯೇ ನಾಡಿನ ಹಲವು ಸಹೃದಯರ ಸಹಕಾರದಿಂದ ‘ಶಾಮಂತಿ’ ಐದು ಸಂಚಿಕೆಗಳನ್ನು ಕಂಡಿದೆ.

‘ಆ ಕಾಗೆ ಚಳಿಯಲ್ಲಿ ನಡುಗುತ್ತಿತ್ತು. ಎತ್ತಿ ತಂದು ಚಂದ್ರಂಕಿಯ ಕೆಳಗೆ ಬಿಟ್ಟೆ’ ಇದು ವಾಣಿಶ್ರೀ ಎಂಬ ಹುಡುಗಿಯ ಲೇಖನದ ಭಾಗ. ಮನುಷ್ಯನ ನೋವನ್ನು ವೀಡಿಯೋಕರಿಸಲು ತೋರಿಸುವ ಉತ್ಸುಕತೆಯನ್ನು ಅವನ ನೋವು ನಿವಾರಿಸಲು ತೋರಿಸದ ಅಭಿವೃದ್ಧಿಯ ಕಾಲವಿದು. ಈ ಕಾಲಕ್ಕೆ ನಾವು ಮಕ್ಕಳ ಸಹಜ ಅಂತಃಕರಣವನ್ನು ಪೋಷಿಸುವುದು ಮಾನವೀಯ ತುರ್ತು ಕೂಡ ಆಗಿದೆ. ಅದಕ್ಕೆ ಸಾಹಿತ್ಯ, ಸಂಗೀತ, ಕಲೆ, ಕ್ರೀಡೆಗಳಂತಹ ಮನೋವಿಕಾಸದ ನೆಲೆಗಳು ಮಕ್ಕಳಿಗೆ ಸಿಗುವಂತೆ ಮಾಡಬೇಕು. ಈ ಮೂಲಕ ನಾಳಿನ ಜಗತ್ತನ್ನು ಮನುಷ್ಯ ಬದುಕಿಗೆ ಇನ್ನಷ್ಟು ಸಹ್ಯವಾಗಿಸಬೇಕು.      
          
***
ಪಠ್ಯದ ಜೊತೆಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಮನೋವಿಕಾಸಕ್ಕೆ ಅಗತ್ಯ ಎನ್ನುವುದು ಎಸ್‌. ಕಲಾಧರ ಅವರ ನಂಬಿಕೆ. ಈ ನಂಬಿಕೆಯನ್ನು ಅವರು ತಾವು ಶಿಕ್ಷಕರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಮಂಗಲದ ಶಾಲೆಯಲ್ಲಿ ಕಾರ್ಯರೂಪಕ್ಕೆ ತಂದಿದ್ದಾರೆ. ಆ ಶಾಲೆಯ ಮಕ್ಕಳು ಕಳೆದ ಐದು ವರ್ಷಗಳಿಂದ ರೂಪಿಸುತ್ತಿರುವ ‘ಶಾಮಂತಿ’ ಗ್ರಾಮದ ಗಡಿ ದಾಟಿ ನಾಡಿನ ಸಾಂಸ್ಕೃತಿಕ ವಲಯದಲ್ಲಿ ತನ್ನ ಕಂಪು ಸೂಸಿದೆ. ‘ಮಕ್ಕಳ ತೋಟದ ಹೂವ್ವು!’ ದೊಡ್ಡವರಿಗೂ ಇಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT