ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳುಗಾಡಲ್ಲಿ ಒಂಟೆ ಡೈರಿ!

Last Updated 21 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಒಂಟೆ ಹಾಲಿನ ಐಸ್‌ಕ್ರೀಂ ತಿನ್ನಬೇಕೆ?ಇದೆಲ್ಲಿ ಸಾಧ್ಯ ಎನ್ನುವಿರಾ? ಹಾಗಿದ್ದಲ್ಲಿ `ರಾಷ್ಟ್ರೀಯ ಒಂಟೆ ಸಂಶೋಧನಾ ಕೇಂದ್ರ~ಕ್ಕೆ ಭೇಟಿ ಕೊಡಿ. ಐಸ್‌ಕ್ರೀಂ ಮಾತ್ರವಲ್ಲ- ಒಂಟೆಯ ಹಾಲು, ಆ ಹಾಲಿನ ಉತ್ಪನ್ನಗಳಾದ ಚೀಸ್, ಲಸ್ಸಿ, ಕಾಫಿ, ಚಹಾ ಎಲ್ಲವೂ ಲಭ್ಯ!

ರಾಜಸ್ತಾನದ ಬಿಕನೆರ್ ಎನ್ನುವ ಜಿಲ್ಲಾಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಜೋರ‌್ಬೀರ್ ಎನ್ನುವಲ್ಲಿದೆ, ಏಷ್ಯಾ ಖಂಡದ ಏಕೈಕ ಒಂಟೆ ಸಂಶೋಧನಾ ಕೇಂದ್ರ.
ಎರಡು ಸಾವಿರ ಎಕರೆಗಳಷ್ಟು ವಿಶಾಲವಾದ ಕೇಂದ್ರವನ್ನು ಪ್ರವೇಶಿಸುತ್ತಿದ್ದಂತೆಯೇ, ಪ್ರವೇಶ ದ್ವಾರಕ್ಕೆ ಹೊಂದಿಕೊಂಡಂತೆಯೇ ಸಂಶೋಧನಾ ಕೇಂದ್ರದ ಮಾಹಿತಿ ಕಚೇರಿಯಿದೆ. ಅಲ್ಲಿಯೇ ಒಂಟೆ ಹಾಲಿನ ಉತ್ಪನ್ನಗಳ ಮಾರಾಟವೂ ನಡೆಯುತ್ತದೆ. ನಮ್ಮ ಕುತೂಹಲವನ್ನು ಮನಗಂಡ ಹರಿಸಿಂಗ್ ಎನ್ನುವ ಸಂಶೋಧನಾ ಅಧಿಕಾರಿಯೊಬ್ಬರು, ಜೊತೆ ಜೊತೆಯಲ್ಲೇ ಹೆಜ್ಜೆ ಹಾಕುತ್ತಾ ಒಂಟೆಗಳ ಲೋಕದ ಪರ್ಯಟನೆ ಮಾಡಿಸಿದರು, ಸಾಕಷ್ಟು ಮಾಹಿತಿಯನ್ನೂ ನೀಡಿದರು.

ಪ್ರಪಂಚದಲ್ಲಿ ಎರಡು ವಿಧದ ಒಂಟೆಗಳು ಇವೆಯಂತೆ. ನಿಗಿನಿಗಿ ಮರಳುಗಾಡಿನ ಒಂಟೆಗೆ ಒಂದು ಡುಬ್ಬವಿದ್ದರೆ ಶೀತವಲಯದ ಲಡಾಕ್ ಮರಳುಗಾಡಿನ ಒಂಟೆಗೆ ಎರಡು ಡುಬ್ಬಗಳ ಸೌಂದರ್ಯ. ಬಿಕಾನೇರಿ, ಜೈಸಲ್ಮೇರಿ, ಕಚ್ಚಿ, ಮೇವಾರಿ- ಹೀಗೆ ಒಂಟೆ ತಳಿಗಳಿವೆ. 74 ಕ್ರೋಮೋಸೋಮ್‌ಗಳ ರಚನೆಯಿಂದ ರೂಪುಗೊಂಡಿರುವ ಒಂಟೆಗಳು 50-60 ವರ್ಷಗಳು ಬದುಕಬಲ್ಲ ಸಸ್ಯಾಹಾರಿ ಸಸ್ತನಿಗಳು. ಮರಳುಗಾಡಿನಲ್ಲಿ ಕೃಷಿ ಒಂಟೆಯಿಲ್ಲದೆ ಸಾಧ್ಯವಿಲ್ಲ. ಇವುಗಳ ಲದ್ದಿ ಉತ್ಕೃಷ್ಟ ಸಾವಯವ ಗೊಬ್ಬರವೂ ಹೌದು. ಶೀತವಲಯದ ಒಂಟೆಗಳ ತುಪ್ಪಳವನ್ನು ಚಳಿಗಾಲದ ಬಟ್ಟೆ ತಯಾರಿಸಲು ಬಳಸಲಾಗುತ್ತದೆ. ಹೆಚ್ಚು ಸಾಂದ್ರವಿರುವ ಒಂಟೆಗಳ ಹಾಲಿನಲ್ಲಿ ಇನ್ಸುಲಿನ್ ಹೇರಳವಾಗಿರುತ್ತದಂತೆ. ಒಂಟೆಗಳಿಗಾಗಿಯೇ ಸಂಶೋಧನಾ ಕೇಂದ್ರ ಸ್ಥಾಪಿಸಲು ಇನ್ನೆಷ್ಟು ಕಾರಣ-ವಿಶೇಷಗಳು ಬೇಕು? ಅದಕ್ಕಾಗಿಯೇ, 1975ರ ಜುಲೈ 5ರಂದು ರಾಜಸ್ತಾನ ಸರ್ಕಾರ ಒಂಟೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ.

ಒಂಟೆಗಳು ಏಷ್ಯಾ ಖಂಡದ ದೇಶಗಳ ರಕ್ಷಣಾ ಪಡೆಯ ಅವಿಭಾಜ್ಯ ಅಂಗ. ವಿಸ್ತಾರವಾದ ಮರುಭೂಮಿ ಸರಹದ್ದು ಉಳ್ಳ ದೇಶ ಭಾರತ. ಅಂದಮೇಲೆ ಒಂಟೆ ಪಡೆಯಿಲ್ಲದೆ ದೇಶ ರಕ್ಷಣೆ ಅಸಾಧ್ಯ. 1951ರಿಂದ ಭಾರತೀಯ ಸೇನೆಯ ಒಂಟೆ ಪಡೆಗೆ 13ನೇ ಬೆಟಾಲಿಯನ್‌ನಲ್ಲಿ ಸ್ಥಾನ ನೀಡಲಾಗಿದೆ. ರಾಜಸ್ತಾನ, ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳ ಸರಹದ್ದನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿವೆ ಈ ಪಡೆ.

ಒಂಟೆ ಕೇಂದ್ರದಲ್ಲೊಂದು ಸುತ್ತು...

ಪ್ರಸ್ತುತ 270 ಒಂಟೆಗಳಿರುವ ಸಂಶೋಧನಾ ಕೇಂದ್ರದಲ್ಲಿ ಮುಖ್ಯವಾಗಿ ಅವುಗಳ ಹಾಲನ್ನು ಸಂರಕ್ಷಣೆ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಕರೆದ ಹಾಲು ಒಂದು ತಾಸಿನೊಳಗೆ ಹಾಳಾಗುತ್ತದೆ. ಇಷ್ಟು ಸೂಕ್ಷ್ಮವಾದ ಹಾಲನ್ನು ದೀರ್ಘ ಕಾಲ ಉಳಿಸಿಕೊಳ್ಳುವ ಸವಾಲಿಗೆ ಉತ್ತರ ಹುಡುಕಲಾಗುತ್ತಿದೆ. ಪ್ರಸ್ತುತ ಕರೆದ ಹಾಲನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಒಂಟೆಗಳ ವಿದ್ಯುತ್ ಸಂವಹನ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಚಾಲಿತ ಯಂತ್ರಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ.

ಪ್ರವಾಸಿಗರಿಗೆ ಮಧ್ಯಾಹ್ನ ಎರಡರ ನಂತರವೇ ಸಂಶೋಧನಾ ಕೇಂದ್ರಕ್ಕೆ ಪ್ರವೇಶ. ಬಿಸಿಲಿಗೆ ತಂಪಾಗಲಿ ಎಂದು ಮಾರಾಟ ಮಳಿಗೆಯಲ್ಲಿನ ಕುಲ್ಫಿ ಕೊಂಡು ರುಚಿ ನೋಡಿದೆ. ಹಸುವಿನ ಹಾಲಿಗೆ ಒಗ್ಗಿಕೊಂಡಿರುವ ನಾಲಿಗೆಗೆ ಒಂಟೆ ಹಾಲು ಒರಟು ಮತ್ತು ಉಪ್ಪುಪ್ಪು.
ಒಂಟೆ ಮೂಳೆಯ ಹಲವಾರು ಒಡವೆಗಳು ಮತ್ತು ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಯೂ ಅಲ್ಲಿತ್ತು. ಅಂದಹಾಗೆ, ಒಂಟೆಗಳ ಡುಬ್ಬದಿಂದ ಒಸರುವ ಕೊಬ್ಬಿನಿಂದ ಚರ್ಮಕ್ಕೆ ಹಚ್ಚಿಕೊಳ್ಳುವ ಕ್ರೀಂ ತಯಾರಿಸಲಾಗುತ್ತದೆ. ಅದು ಕೂಡ ಅಲ್ಲಿ ಮಾರಾಟಕ್ಕಿತ್ತು.

ವರ್ಷಕ್ಕೊಮ್ಮೆ ಒಂಟೆಗಳ ಸೌಂದರ್ಯ ಸ್ಪರ್ಧೆ ಇಲ್ಲಿ ನಡೆಯುತ್ತದಂತೆ. ಏಷ್ಯಾದ ವಿವಿಧ ಭಾಗಗಳಿಂದ ಸುಮಾರು 200 ಒಂಟೆಗಳು ಸ್ಪಧೆಯಲ್ಲಿ ಪಾಲ್ಗೊಳ್ಳುತ್ತವೆ. ನಾನು ಅಲ್ಲಿಗೆ ಹೋಗಿದ್ದಾಗ ಬಿಕಾನೇರಿನ ಒಂಟೆಗೇ ರಾಜಕುಮಾರನ ಪಟ್ಟ ದೊರಕಿತ್ತು. ಆ ಒಂಟೆಯ ಹೆಸರು ಕೂಡ `ರಾಜ್~.

ಒಂಟೆ ಸಂಶೋಧನಾ ಕೇಂದ್ರದಲ್ಲಿ ಪ್ರವಾಸಿಗರೆದುರೇ ಹಾಲು ಕರೆಯಲಾಗುತ್ತದೆ. ಒಂಟೆ ಡುಬ್ಬದ ಮೇಲೇರಿ ಒಂದು ರೌಂಡ್ ಕೂಡ ಹಾಕಿಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT