ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯೆಂಬ ಅನಾದಿ ಸೋಜಿಗ

ಪ್ರಬಂಧ
Last Updated 17 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸೊಳ್ಳೆಯ ಕಾಟ. ಬಿಸಿ ಗಾಳಿ. ಕಿರ್ರನೆ ತಿರುಗುವ ಫ್ಯಾನು. ಕಿತ್ತುಕೊಳ್ಳುವ ಬೆವರು. ಎಣ್ಣೆ ಜಿನುಗು. ಹಬೆಯಾಡುವ ಉಸಿರು. ನಿದ್ರೆ ಸುಳಿಯದ ರಾತ್ರಿಗಳು. ಸಾಕಪ್ಪ ಸಾಕು ಈ ಬೇಸಿಗೆ ಯಾವತ್ತು ತೊಲಗುತ್ತದೋ ಎಂದುಕೊಳ್ಳುತ್ತಿರುತ್ತೇವೆ. ಆಗಲೆ ಗುಲ್‌ಮೊಹರ್‌ನ ಕೆಂಪು ಹೂ ಹಾದಿ. ದುಂಡುಮಲ್ಲಿಗೆಯ ಘಮಲು. ದುಂಬಿಯ ಝೇಂಕಾರ. ಜೀರುಂಡೆಯ ಜೀಗುಡುವ ಸದ್ದು. ಚಿಲುಚಿಲುಮೆಯಾಗಿ ಮಳೆಯೂ ಹಾಜರಾಗಿಬಿಡುತ್ತದೆ.

ಮಾರ್ಕ್ವೆಜ್ ಹೇಳುವಂತೆ, ಭೂಮಿ ಒಂದೇ ಸಮನೆ ತನ್ನ ತುಕ್ಕು ಹಿಡಿದ ಕಕ್ಷೆಯಲ್ಲಿ ಕರ ಕರ ಸುತ್ತುತ್ತಿರುತ್ತದೆ. ಮಳೆ ಅದನ್ನು ರಿಪೇರಿ ಮಾಡಿ ಅದರ ಚಲನೆಯನ್ನು ಸುಗಮಗೊಳಿಸುತ್ತದೆ. ಮಳೆಯ ಆಗಮನದೊಂದಿಗೆ ಮಾವಿನ ಚಿಗುರು ಕೋಗಿಲೆಯ ಕುಕಿಲು ಹಿನ್ನೆಲೆಗೆ ಸರಿಯುತ್ತವೆ. ಋತುಮಾನದ ಬದಲಾವಣೆಯೊಂದಿಗೆ ಒಂದನ್ನು ಕೊಟ್ಟು ಮತ್ತೊಂದನ್ನು ನೇಪಥ್ಯಕ್ಕೆ ಸರಿಸುವ ಪ್ರಕೃತಿಯ ಕಾರುಬಾರು ಜೋರಾಗಿಯೇ ನಡೆಯುತ್ತದೆ. ಏಕತಾನದಿಂದ ಕೂಡಿದ ನಮ್ಮ ಬದುಕಲ್ಲಿ ಮಳೆ ಎಂಬುದು ಅನಾದಿ ಸೋಜಿಗ. ಧ್ಯಾನಸ್ಥ ಸೆಳಕು.

ನಮ್ಮೂರು ಚಿತ್ರದುರ್ಗದಲ್ಲಿ ಮಳೆಗಾಗಿಯೇ ಕಾದಿರುತ್ತವೆ ಬಂಡೆಗಳು. ನೀರ ಪಸೆ ಹೀರಿಕೊಳ್ಳುತ್ತದೆ ಮಣ್ಣು. ಹುಲ್ಲು ಗರಿಕೆ. ಸಣ್ಣ ಪುಟ್ಟ ಗಿಡಗಳು. ತಂಗ್ಟಿ ಹೂವು, ಬೇವಿನ ಮರ, ಪಾಚಿ ಹಾವಸೆ, ಕೆಂಡ ಸಂಪಿಗೆ, ಮುಳ್ಳು ಗಿಡಗಳು ಎಲ್ಲ ಚಿಗುರೊಡೆಯುತ್ತವೆ. ಸುತ್ತಮುತ್ತಲ ಬೋಳು ಬೆಟ್ಟಗುಡ್ಡಗಳೆಲ್ಲ ಹಸಿರ ಮುಡಿದು ಧಗೆಯನ್ನು ಕಡಿಮೆ ಮಾಡುತ್ತವೆ, ಮಲೆನಾಡಿನ ಬಿರುಮಳೆ ಜಡಿಮಳೆ ಇಲ್ಲಿ ಬಾರದಿದ್ದರೂ ಸುಯ್ಯೆನುವ ಗಾಳಿಯೊಂದಿಗೆ ರಭಸದಿಂದ ಅಖಾಡಕ್ಕಿಳಿಯುತ್ತದೆ ಮಳೆ. ಬೆಟ್ಟದ ಮೇಲೆ ಕಾಳ್ಗಿಚ್ಚಿಗೆ ಒಣಗಿ ಕರುಕಾಗಿದ್ದ ಹುಲ್ಲು ಏಕಾಏಕಿ ಪಚ್ಚೆ ಹಸಿರಾಗಿಬಿಡುತ್ತದೆ.

ಬಂಡೆ ಸಂದಿಗಳಲ್ಲಿ ಶೇಖರಗೊಂಡಿದ್ದ ಮಳೆಯ ನೀರು ಕೋಟೆ ಚಂದ್ರವಳ್ಳಿಯ ಹಾದಿಯುದ್ದಕ್ಕೂ ಝರಿಯಾಗಿ ಅಂತರಗಂಗೆಯಾಗಿ ಹರಿಯತೊಡಗುತ್ತದೆ. ಕೋಟೆಯ ಒಳಗೆ ಶಿಥಿಲಗೊಂಡ ಅರಮನೆಯ ಆವರಣದಲ್ಲಿ ಕಾಣುವ - ಕಾಮನಬಿಲ್ಲು, ಬಿಸಿಲುಮಳೆಗೆ ಮಿರುಗುವ ಗೋಧಿನಾಗರ, ಅಲ್ಲಿನ ನೀರವತೆ ಏಕಾಂತ -ಯಾವುದೋ ಲೋಕದ ತುಣುಕು ಇಲ್ಲಿ ಜಾರಿ ಬಿದ್ದಿದೆ ಎನ್ನುವ ಭಾವನೆ ಮೂಡಿಸುತ್ತದೆ. ಊರ ಹೊರಭಾಗದ ಕ್ರೈಸ್ತರ ಸ್ಮಶಾನದುದ್ದಕ್ಕೂ ಅಣಬೆಗಳು ಸಾಲುಗಟ್ಟುತ್ತವೆ. ಮಸಣದ ಹೊಗೆ ಮಳೆಯ ಜಿಬಿರು ಒಂದಾಗಿ ಮೇಳೈಸುತ್ತವೆ. ಕರವರ್ತಿ ಈಶ್ವರನ ದೇಗುಲದಲ್ಲಿ ಕರ್ಪೂರ ತೀಡಿದ ವಾಸನೆ ಮಳೆಯ ಮಣ್ಣಿನ ವಾಸನೆಯೊಂದಿಗೆ ಕೂಡಿ ತೇಲಿ ಬರುತ್ತದೆ. ಉಯ್ಯೊಲೆ ಕಂಬದ ಕೆಳಗೆ ಸಾಲುದೀಪಗಳು ಆರಿದ್ದರೂ ಬೆಳಕಿನ ಹಾರೈಕೆ ಹಾಗೆಯೇ ಉಳಿದಿರುತ್ತದೆ.

ಇನ್ನು ನಗರದಲ್ಲಿ ಮಳೆ ಪ್ರಾರಂಭವಾಗುತ್ತಿದ್ದಂತೆ ಆಟೊರಿಕ್ಷಾಗಳ ಭರಾಟೆ ಕಡಿಮೆಯಾಗುತ್ತದೆ. ಮಕ್ಕಳು ಗುಡು ಗುಡು ಮಲ್ಲಜ್ಜನ ಹೆದರಿಕೆಯಿಂದ ಮನೆಗೆ ನಾಗಾಲೋಟ ಮಾಡಿದರೆ, ಪುಂಡರು ಸಂಸಾರ ವಂದಿಗರು ಅವರಿವರು ಮಳೆಯನ್ನು ಅನುಭವಿಸುತ್ತ ತಂತಮ್ಮ ಗೂಡು ಸೇರಿಕೊಳ್ಳುತ್ತಾರೆ. ಮನುಷ್ಯರ ಸಂಚಾರ ಸ್ತಬ್ಧವಾಗಿ ಎದುರಿದ್ದ ಮರಗಳು ನಿಗೂಢವಾಗಿ ಕಾಣುತ್ತವೆ. ದುರ್ಗದ ಸುತ್ತಲಿನ ದೈತ್ಯಾಕಾರದ ಫ್ಯಾನುಗಳು ಮರೆಯಾಗತೊಡಗುತ್ತವೆ. ನಗರ ತನ್ನ ಆಧುನಿಕ ಚಹರೆ ಕಳಚಿಕೊಂಡು ಗೂಢ ಗಾಢವಾಗತೊಡಗುತ್ತದೆ. ಕರೆಂಟು ಹೋಗಿ ಸರಣಿ ಧಾರಾವಾಹಿ ಸ್ಫೋಟ, ಚೋಟಾ ಭೀಮ್ ಹಾವಳಿ ಎಲ್ಲ ಹಿನ್ನೆಲೆಗೆ ಸರಿಯುತ್ತವೆ. ಗಾಳಿ ಮಳೆಯ ಸಿಂಚನ ಮನೆ ಮನ ತುಂಬಿಕೊಳ್ಳುತ್ತದೆ.

ಭರಣಿಮಳೆ, ಚಿತ್ತಿಮಳೆ ಎಂದು ಅಷ್ಟಾಗಿ ತಲೆ ಕೆಡಿಸಿಕೊಳ್ಳದ ನಗರವಾಸಿಗಳು ಮಳೆಯಾಯಿತೆಂದರೆ ಕುಡಿಯುವ ನೀರಿನ ಬವಣೆ ತಪ್ಪಿತಲ್ಲ; ಅಂತರ್ಜಲದ ಕೊರತೆ ನೀಗಿತಲ್ಲ ಎಂದು ಸಮಾಧಾನದ ನಿಟ್ಟುಸಿರುಬಿಡುತ್ತಾರೆ. ಮಳೆಯ ಸುಳಿವು ಕಾಣದಿದ್ದರೆ ಊರ ದೇವಿಯರನ್ನೆಲ್ಲ ಒಟ್ಟಿಗೆ ಕೂರಿಸಿ ಹೋಳಿಗೆಮ್ಮನನ್ನು ಮಾಡುತ್ತಾರೆ. ಇಡೀ ಕರುವಿನಕಟ್ಟೆ ಒಬ್ಬಟ್ಟಿನ ತಟ್ಟೆಗಳು ದೀಪದಾರತಿಗಳಿಂದ ಇಡಿಕಿರಿದಿರುತ್ತದೆ. ಒಟ್ಟಿನಲ್ಲಿ ಮಳೆಯೆಂದರೆ ಏನೋ ಸಂಭ್ರಮ. ಏನೋ ನೆಮ್ಮದಿ. ಮಳೆಗಾಲದಲ್ಲಿ ದುರ್ಗದ ಜನ ಸಖತ್ತು ಖಾಯಿಷ್ ಪಡುವುದೆಂದರೆ ಖಾರ ಮಂಡಕ್ಕಿ, ಮೆಣಸಿನಕಾಯಿ. 

ಮಳೆಗೆ ಹಂಗೆ ಹಂಗೆ ಖಡ್ಡೆನ್ನುವ ಮೆಣಸಿನಕಾಯಿ ಬೋಂಡ ತಿಂದರೆ ಅವರ ಉತ್ಸಾಹ ಇಮ್ಮಡಿಯಾಗುತ್ತದೆ. ಆದರೆ ಅತಿವೃಷ್ಟಿಯಾದಾಗ ನಂ ಜನರ ಮನಸ್ಸು ಮುದುಡಿ ಹೋಗುತ್ತದೆ. ಸೀನೀರು ದೋಣಿಯಿಂದ ನೀರು ನುಗ್ಗಿ ತಗ್ಗಿನಲ್ಲಿರುವ ಮನೆಗಳು ಗುಡಿಸಲುಗಳೆಲ್ಲ ಜಲಾವೃತವಾಗುತ್ತವೆ. ನೂರೆಂಟು ಪಡಿಪಾಟಲು. ಹಾಗಾಗಿ ಮಳೆರಾಯನ ದಾಂಗುಡಿಯಿಂದ ಯಾವ ತೊಂದರೆಯೂ ಆಗದೆ ಸುಖ ಸಮೃದ್ಧಿ ನೆಲೆಗೊಳ್ಳಲಿ ಎಂದು ಜನರ ಪ್ರಾರ್ಥನೆ. ಮಳೆ ಸುಮ್ಮನೆ ಗಾಳಿಗಂಟಲು ನಡೆಸಿದ್ದರೆ ಹಲವರು ಸುತ್ತಲಿನ ವಿದ್ಯುತ್ ಉತ್ಪಾದಿಸುವ ರಕ್ಕಸ ಫ್ಯಾನುಗಳಿಗೆ ಹಿಡಿ ಶಾಪ ಹಾಕುತ್ತಾರೆ. ಯಂತ್ರಗಳು ನಿಸರ್ಗದ ಹಾದಿಗುಂಟ ಸವಾರಿ ಮಾಡುತ್ತಿವೆ ಅಂತ.

ನನಗೆ ಮಳೆಯೆಂದರೆ ತುಂಬ ಇಷ್ಟ. ಆದರೆ ಮಳೆಯ ಜೊತೆಗೆ ನೆನಪಿನ ಬಳ್ಳಿ ಹಂದರವಾಗುತ್ತದೆ. ಮಳೆಗಾಲದ ಒಡಲಲ್ಲಿ ನೂರೆಂಟು ಕಾತರ. ಕಾಡುವ ಚಿತ್ರಗಳು. ಜೊತೆಗೆ ನಿಡುಸುಯ್ಲು. ಆಷಾಢದ ಭರ್ರೋ ಎನ್ನುವ ಕುಳಿರ್ಗಾಳಿ ತುಂತುರು ಸೋನೆ ಮಳೆಗೆ ನಮ್ಮ ಮನೆಯೂ ಬಿಸುಪು ಕಳೆದುಕೊಂಡು ತಣ್ಣಗಾಗಿ ದುಗುಡ ಹರಳುಗಟ್ಟುತ್ತದೆ. ಸೊಪ್ಪು ಸೋಸಿದಂತೆ ಅಂಗಾಂಗವನ್ನೆಲ್ಲ ಚಿವುಟಿ ನಮ್ಮ ತಂದೆಯನ್ನು ಸೆಳೆದೊಯ್ದ ಸಾವಿನ ನೋವು ಮರುಕಳಿಸುತ್ತದೆ. ನವಿಲಗರಿಯಂತೆ ಅವರ ನೆನಪು ಕಣ್ತೆರೆಯುತ್ತದೆ. ಮಳೆಗಾಲದಲ್ಲಿ ಜೋಳ ಖಾರದಪುಡಿ ಮಿಳ್ಳೆ ಎಣ್ಣೆ ಕಲಿಸಿ ಬುಕ್ಕುತ್ತಿದ್ದ ಅವರ ಮನೆಯ ಬಡತನ ಕಾಡುತ್ತದೆ. ಮಳೆ ಗಾಳಿಯ ಪರಿವೆ ಇಲ್ಲದೆ ಸಾವಿನ ಹೊಡೆತಕ್ಕೆ ಒಳಗಾಗಿ ಹೇಳ ಹೆಸರಿಲ್ಲದೆ ನಿರ್ಜನವಾದ ನಮ್ಮ ಅಜ್ಜಿ ತಾತನ ಮನೆ ಕಣ್ಮುಂದೆ ಬರುತ್ತದೆ.

ಒಮ್ಮೆ ಕಡಬದಿಂದ ಕೆಲಸ ಮುಗಿಸಿಕೊಂಡು ಸೊಪ್ಪು ತರಕಾರಿ ಕೊಂಡು ಬಸ್ಸಿನಲ್ಲಿ ಬರುತ್ತಿದ್ದೆ. ತುಮಕೂರಿನ ಒಳಗೆ ಒಂದೇ ಸಮನೆ ಮಳೆ. ಸಂಜೆಗತ್ತಲು. ಬೀದಿ ದೀಪಗಳು ಹೊತ್ತಿವೆ. ಸುಮ್ಮನೆ ಕಿಟಕಿಯಿಂದ ದಿಟ್ಟಿಸಿ ನೋಡುತ್ತಿದ್ದೆ. ಒಬ್ಬಳು ಮಧ್ಯವಯಸ್ಸಿನ ಹೆಣ್ಣುಮಗಳು ಅಂಗಾತ ದೇಹವನ್ನು ಚಾಚಿ ಹೆದ್ದಾರಿ ನಡುವೆ ಬಿದ್ದಿದ್ದಾಳೆ. ಬಹುಶಃ ಉಸಿರು ನಿಂತಿತ್ತು ಎಂದು ಕಾಣುತ್ತದೆ. ಜನರೆಲ್ಲ ಪರದೆಯ ಮೇಲಿನ ದೃಶ್ಯವೆಂಬಂತೆ ಕುತೂಹಲದಿಂದ ನೋಡಿ ನಮಗ್ಯಾಕೆ ಉಸಾಬರಿ ಎಂದು ಹಾಗೇ ನುಸುಳಿಕೊಂಡು ಮಳೆಯಲ್ಲಿಯೇ ಕರಗಿ ಹೋಗುತ್ತಿದ್ದಾರೆ. ನಾನು ಗಾಬರಿಯಿಂದ ಹಾಗೇ ಮನೆಗೆ ಧಾವಿಸಿದೆ. ಈಗಲೂ ಆ ದೃಶ್ಯ ನೆನಪಾಗಿ ಮನಸ್ಸು ತಲ್ಲಣಿಸುತ್ತದೆ. ಅಂತಃಕರಣವನ್ನು ಕೂಡ ಕಡ ತರಬೇಕಾದ ಪರಿಸ್ಥಿತಿಯಲ್ಲಿ ಇದ್ದೆನಲ್ಲ ನಾನು ಅಂತ ಯಾತನೆಯಾಗುತ್ತದೆ. ಆಡೆನ್‌ನ ಇಕಾರಸ್ ಎಷ್ಟೋ ಸಲ ನೆನಪಾಗುತ್ತಾನೆ. ರೆಕ್ಕೆ ಸುಟ್ಟು ಕಡಲಿಗೆ ಬೀಳುತ್ತಿದ್ದ ಪುಟ್ಟ ಹುಡುಗ ಇಕಾರಸ್... ದುರಂತ ಗಮನಿಸಿಯೂ ತಣ್ಣಗೆ ಸಾಗಿದ ಬೆಲೆ ಬಾಳುವ ಹಡಗು... ಹಡಗಿನ ಜನರೂ... ನನ್ನಂತೆ ಮಳೆಗೆ ಬಿಸಿ ಬಿಸಿ ಮಸಾಲೆ ಪೂರಿ, ಗೋಬಿಮಂಚೂರಿ ಚಪ್ಪರಿಸುವವರೂ... ಕೆಸರಾಗಬಾರದೆಂದು ಸೀರೆಯ ಅಂಚನ್ನು ಎತ್ತಿ ನಡೆಯುತ್ತ ಬೆಚ್ಚಗೆ ಒಳ ಸೇರುವವರೂ...

ಕನಕಪುರದ ನನ್ನ ಮಾವನವರ ಮನೆಯ ಮಳೆಯ ಆರ್ಭಟವನ್ನಂತೂ ಮರೆಯಲಿಕ್ಕೇ ಸಾಧ್ಯವಿಲ್ಲ. ಇನ್ನೂರು ವರ್ಷಕ್ಕೂ ಪುರಾತನವಾದ ಆ ತೊಟ್ಟಿಮನೆಯಲ್ಲಿ ಮಳೆಯ ರುದ್ರನರ್ತನ. ಬೆಳಕಿಂಡಿ ತೂರುವ ಜಾಗಗಳಲ್ಲಿ ಮಳೆಯೂ ಸೊಕ್ಕಿ ಮನುಷ್ಯನ ಸೊಲ್ಲು ಕ್ಷೀಣವಾಗುತ್ತದೆ. ಸೋರುವ ಸೂರು. ನಡುಮನೆ ತೊಟ್ಟಿಯಲ್ಲಿ ರಪರಪ ಮಳೆ. ಇರಿಚಲು. ಗುಡುಗು ಮಿಂಚು ಸಿಡಿಲುಗಳ ರೌದ್ರಾವತಾರ. ಕಬ್ಬಿಣದ ಹಾರೆ ಹಾಕಿದ್ದರು ಮನೆಯವರು ಸಿಡಿಲು ಬಡಿಯುವುದಿಲ್ಲವೆಂದು. ಅಂತೆಯೇ ಹಿಂದಿನ ಬೀದಿಯಲ್ಲಿ ದಿಮ್ಮನಾಗಿ ಚಿಲಕ ಹಾಕಿ ಮಲಗಿದ್ದರೂ ಸಿಡಿಲಿಗೆ ಬಲಿಯಾದವರ ಕಥೆ ನಮ್ಮೆಲ್ಲರನ್ನು ಗದಗುಟ್ಟಿಸುತ್ತಿತ್ತು. ಸರಿಸುಮಾರು ಮೂವತ್ತಾದರೂ ಸಿಡಿಲು ಅಬ್ಬರಿಸಿರಬೇಕು ಅಂದಿನ ಇರುಳು. ಕುವೆಂಪು ಪದ್ಯವೊಂದರಲ್ಲಿ ಹೇಳಿದಂತೆ, ಮಳೆಯಿದು ಬರಿ ಮಳೆಯಲ್ಲಿದು ಪ್ರಳಯದ ಆವೇಶ... ಯಾವುದೇ ಕಾಲದಲ್ಲಿಯಾದರೂ ಕುಸಿದು ಬೀಳಬಹುದಾದ ಹಳೆಯ ಮಣ್ಣಿನ ಗೋಡೆ. ಮಳೆಯಾದಾಗಲೆಲ್ಲ ಭಯದ ನೆರಳಿನಲ್ಲಿಯೇ ಇರುವ ಮನೆಯವರು. ಎಷ್ಟು ಜನರೋ ಇದೇ ರೀತಿ ಜೀವ ಕೈಲಿಡಿದು ಬಾಳುತ್ತಿರುವವರು. ಬಿರುಮಳೆಯಿಂದ ಬದುಕು ದುಸ್ತರವಾದವರು...

ದುರ್ಗದ ಕೇಂದ್ರ ಗ್ರಂಥಾಲಯದಲ್ಲೊಮ್ಮೆ ಓದುತ್ತ ಕುಳಿತಿದ್ದೆ. ಹೊರಗೆ ಮಳೆಯೋ ಮಳೆ. ಪುಸ್ತಕವೆಲ್ಲ ನುಸಿಯಾಗಿತ್ತು. ಆದರೂ ಗಹನವಾಗಿ ಅದರಲ್ಲಿಯೇ ಮುಳುಗಿದ್ದೆ. ಮಳೆಯ ಭರಾಟೆ ತಪ್ಪಿಸಿಕೊಂಡು ಅಳಿಲು ಮರಿಗಳೆರಡು ಲೈಬ್ರರಿಯ ಟೇಬಲ್ ಮೇಲೆಲ್ಲ ಪುಡು ಪುಡು ಓಡಾಡುತ್ತಿದ್ದವು. ಒಂದರೆ ಚಣ ಸಿಟ್ಟು ಬಂದಿತು. ಎಲಾ ಇವನ ಎಷ್ಟು ಧೈರ್ಯ ಇವಕ್ಕೆ ಅಂತ. ಮರುಕ್ಷಣವೆ ನನ್ನ ಬಗ್ಗೆಯೇ ಅಸಹ್ಯವೆನ್ನಿಸಿತು. ಪುಸ್ತಕ ಪಕ್ಕಕ್ಕೆ ಒಗಾಯಿಸಿ ಮಳೆಯನ್ನು ಅಳಿಲುಮರಿಗಳನ್ನು ಗಮನಿಸತೊಡಗಿದೆ. ಅಲ್ಲೇ ಇದ್ದ ತ.ರಾ.ಸು. ಪ್ರತಿಮೆಯೂ ಮಸುಕಾಯಿತು. ಹಾದಿ ಬದಿಯ ಮರದ ಕೆಳಗೆ ಆಶ್ರಯ ಪಡೆದಿದ್ದ ಮಕ್ಕಳು ಗೋಚರಿಸತೊಡಗಿದರು. ಹಾಗೆಯೇ ನೆಮ್ಮದಿಯ ಕನಸು, ಎಚ್ಚರ, ಸುರಿಮಳೆ, ಆಕಾಶ, ಇಳೆಯ ನಡುವೆ ನಿಂತ ನಾವು ನೀವು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT