ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಪ್ಪರಿಯದ ಚೆಲುವೆ

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ರ್‍ಹೈನ್‌ ಒಂದು ನದಿಯ ಹೆಸರು. ಇದು ಯೂರೋಪಿನ ದೊಡ್ಡ ನದಿ. ರ್‍ಹೈನ್‌ ನದಿಯ ಉಲ್ಲೇಖವಿಲ್ಲದೆ ಯೂರೋಪಿನ ಚರಿತ್ರೆಯೇ ಅಪೂರ್ಣ. ಸ್ಪಿಟ್ಜರ್ಲೆಂಡ್‌ ದೇಶದ ಹಿಮಾಮೃತ ಪರ್ವತ ಶ್ರೇಣಿಯಲ್ಲಿ ಕರಗಿದ ಹಿಮ ಝರಿಯಾಗಿ ಹರಿಯುತ್ತಾ ತನ್ನೊಂದಿಗೆ ಹಲವು ತೊರೆಗಳನ್ನು ಸೇರಿಸಿಕೊಂಡು
ಉತ್ತರಾಭಿಮುಖವಾಗಿ ಹರಿದು ನೆದರ್ಲೆಂಡ್ ದೇಶದಲ್ಲಿ ಬಾಲ್ಟಿಕ್ ಸಮುದ್ರದಲ್ಲಿ ವಿರಮಿಸುತ್ತದೆ.

ಈ ನದಿಯ ದಡದಲ್ಲಿನ ಹಲವಾರು ಪಟ್ಟಣಗಳು ಪ್ರವಾಸಿ ಸ್ಥಾನಗಳಾಗಿ ಸುಂದರ ಪ್ರಪಂಚವನ್ನೇ ನಿರ್ಮಿಸಿವೆ. ಈ ಮಹಾನದಿ ಸ್ವಿಟ್ಜರ್ಲೆಂಡ್ ದೇಶದ ಉತ್ತರ ಭಾಗದ schaffhusen ನಗರದ ಹತ್ತಿರ ನಯನ ಮನೋಹರ ಜಲಪಾತವಾಗಿ ಧುಮುಕಿ ಮುನ್ನಡೆಯುತ್ತದೆ. ಹಲವರು ಇದನ್ನು ‘ಯುರೋಪಿನ ನಯಾಗರ’ ಎನ್ನುತ್ತಾರೆ. ಈ ಜಲಪಾತ ಸುಮಾರು ೭೫ ಅಡಿ ಆಳಕ್ಕೆ, ೪೫೦ ಅಡಿ ಅಗಲದ ಹರಿವಿನಿಂದ ಭೋರ್ಗರೆಯುತ್ತಾ ಧುಮುಕುತ್ತದೆ.

ಈ ರ್‍ಹೈನ್‌ ಘಾಲ್ಸ್ ಮುಪ್ಪಿನ ಗಂಧವನ್ನೇ ಅರಿಯದ ಸುಂದರಿ. ಈ ಸುಂದರಿಯ ಕಿರೀಟದ ಇನ್ನೊಂದು ವಿಶೇಷ– ೪೫೦ರಿಂದ ೫೦೦ ಅಡಿ ಅಗಲದ ರಭಸದ ನೀರಿನ ಹರಿವಿಗೆ ಸವಾಲೆಂಬಂತೆ ಮಧ್ಯೆ ಕುಳಿತ ಎತ್ತರದ ದಪ್ಪನೆಯ ಕಲ್ಲುಬಂಡೆ. ಧುಮುಕುವ ನೀರಿನ ವೇಗಕ್ಕೆ ಎದ್ದ ನೀರಿನ ಮಂಜಿನಂತಹ ಕಣಗಳು ಜಿಗಿಯುವ ಆಟಕ್ಕೆ ಪ್ರೋತ್ಸಾಹ ನೀಡುವಂತೆ ನಿಂತ ಈ ಬಂಡೆಯಿಂದ ನೀರಿನ ಮಂಜಿನಪೊರೆ ಇನ್ನಷ್ಟು ದಟ್ಟವಾಗಿ, ಅಲ್ಲಿ ಮೂಡುವ ಕಾಮನಬಿಲ್ಲುಗಳು ಬಲು ರಮಣೀಯ ಎನಿಸುತ್ತವೆ. ಒಮ್ಮೆಯೇ ಎರಡು ಮೂರು ಕಾಮನಬಿಲ್ಲು ಮೂಡುವುದು ಇಲ್ಲಿನ ವಿಶೇಷ.

೫೦–೬೦ಜನ ಆರಾಮವಾಗಿ ಕೂರುವಂಥ ಮೋಟಾರ್ ಚಾಲಿತ ನಾವೆಗಳು ಪ್ರವಾಸಿಗರನ್ನು ಜಲಪಾತದ ಬುಡದವರೆಗೂ ಕೊಂಡೊಯ್ಯುತ್ತವೆ. (ಆ ಸೊಬಗನ್ನು, ಅಲ್ಲಿ ಮೂಡಿದ್ದ ಇಂದ್ರ ಧನುಸ್ಸುಗಳನ್ನು ನನ್ನ ಮೊಬೈಲಿನಲ್ಲಿ ಕ್ಲಿಕ್ಕಿಸಲು ಹೋಗಿ ಪ್ರವಾಹದ ರಭಸಕ್ಕೆ ಎರಚಿದ ನೀರಿನಿಂದ ಮೊಬೈಲ್ ಮತ್ತು ಧರಿಸಿದ್ದ ವಸ್ತ್ರಗಳು ಒದ್ದೆಯಾದವು; ನಾನೂ ಆಯತಪ್ಪಿ ಬಿದ್ದೆ).

ನೀರಿನ ಹರಿವಿನ ಮಧ್ಯೆ ಇರುವ ಬೃಹತ್ ಬಂಡೆಯ ಮೇಲೆ ಹಲವು ಜನ ನಿಂತು ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯುತ್ತಿದ್ದರು. ಆದರೆ, ಪಾಚಿಯ ಮೇಲೆ ಕಾಲಿರಿಸಿದ ಸೀರೆಯುಟ್ಟ ಭಾರತೀಯ ಮಹಿಳೆಯೊಬ್ಬರು ಆಯತಪ್ಪಿ ಬಿದ್ದು ಪ್ರಾಣಾಪಾಯ ಎದುರಿಸಿದ್ದ ಕಹಿ ಘಟನೆ ನೆನಪಿಸಿಕೊಂಡ ಪ್ರವಾಸಿ ವ್ಯವಸ್ಥಾಪಕರು, ಬಂಡೆ ಸಮೀಪ ಕರೆದೊಯ್ಯಿರಿ ಎನ್ನುವ ನಮ್ಮ ಕೋರಿಕೆಗೆ ಸೊಪ್ಪುಹಾಕಲಿಲ್ಲ. ರ್‍ಹೈನ್‌ ಜಲಪಾತಕ್ಕೆ ಮುಪ್ಪೇ ಇಲ್ಲ ಎಂದೆನಲ್ಲ. ಅದರ ನೆನಪಿಗೂ ಮುಪ್ಪಿಲ್ಲ. ಜಲಧಾರೆಯ ಅಪ್ರತಿಮ ಚೆಲುವು, ಗಾಂಭೀರ್ಯ ಹಾಗೂ ಲಕ್ಷಲಕ್ಷ ಕೊರಳುಗಳ ಹಾಡಿನಂಥ ತಾರಕಸ್ವರ ನೋಡುಗರ ಮನಸ್ಸಿನಲ್ಲಿ ಅಚ್ಚಾಗಿಬಿಡುತ್ತದೆ.
–ಬಾಗೇಪಲ್ಲಿ ಕೃಷ್ಣಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT