ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಕಗಳ ನಡು ನಡುವೆ

ಕವಿತೆ
Last Updated 16 ಮೇ 2015, 19:30 IST
ಅಕ್ಷರ ಗಾತ್ರ

ಸಂತೆಯಲ್ಲಿ ನಿಂತ ಕಬೀರ
ಎನ್ನುವುದೊಂದು ಬರಿಯ ರೂಪಕ
ಸಂತೆ, ಕಬೀರ ಎರಡೂ ನಾಮ ಪದಗಳೇ
ನಾಮ ವಿಶೇಷಣಗಳಿಲ್ಲದ ವಿಶೇಷಗಳೇ

ಆದರೂ

ಸಂತೆಯನ್ನೇ ಒಂದು ರೂಪಕವನ್ನಾಗಿಸಿರುವ
ಈ ಆಧುನಿಕ ಮಾಲುಗಳ ಬೀದಿಯಲ್ಲಿ
ವ್ಯಾಪಾರಕ್ಕಿಂತಲೂ ಘನಂದಾರಿ ಐಷಾರಾಮಿ
ಅಗತ್ಯಕ್ಕಿಂತಲೂ ಐಲು ಫೈಲಿನ ಹರಾಮಿ
ಸಂತೆಯನ್ನೇ ಬೊಂತೆ ಕಟ್ಟಿ ಎಸೆಯುತ್ತಿರುವಾಗ

ನಿಜದ ರೂಪಕವಾಗಬೇಕಿರುವ ಕಬೀರನಿಗೋ
ತನ್ನ ಮಗ್ಗದ ಲಾಳಿ ಸಡಿಲವಾಗುತ್ತಿರುವ ಶಂಕೆ
ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಅನಿವಾರ್ಯ
ತುತ್ತಿನ ಚೀಲ ಸರಿಹೊಂದಿಸುವ ಬಿರುಸು
ವ್ಯಾಪಾರ, ಪರಭಾರೆ, ವಿನಿಮಯ
ಅವನ ನಿಘಂಟಿಗಂಟದ ಶಬ್ದ ತೀರ
ಲೌಕಿಕದ ವ್ಯವಹಾರಕ್ಕೆ ಸಾವಿರದ ಹೆಸರು

ಅದಕ್ಕೇ ಮತ್ತೆ ಮತ್ತೆ ಅನಿಸುವುದು

ಸಂತೆಯಲ್ಲಿ ನಿಂತ ಒಬ್ಬಂಟಿಗರನ್ನೆಲ್ಲ
ಕಬೀರ ಎನ್ನುವ ಈ ಹುಂಬರಿಗೆ
ಸಂತೆಯ ಅನಿವಾರ್ಯದ ತುರ್ತಾಗಲೀ
ಕಬೀರನೆಂಬ ರೂಪಕದ ಅರ್ಥವಾಗಲೀ

ಸುಲಭಕ್ಕೆ ಒಗ್ಗುವುದಿಲ್ಲ
ಅದಕ್ಕೇ ಅವರೂ ಬದಲಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT