ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ

Last Updated 29 ಜೂನ್ 2013, 19:59 IST
ಅಕ್ಷರ ಗಾತ್ರ

ಪ್ರೀತಿಯ ಪುಟಾಣಿಗಳೇ,
ನಮ್ಮಲ್ಲಿರುವುದು ನೂರಾರು ರಾಮಾಯಣಗಳು. ಜನಪದ ರಾಮಾಯಣದಿಂದ ಹಿಡಿದು ಕುವೆಂಪು ಬರೆದ `ರಾಮಾಯಣ ದರ್ಶನಂ'ವರೆಗೂ ಅನೇಕ ರಾಮಚರಿತೆಗಳಿವೆ. ಆದರೆ ಎಲ್ಲಾ ರಾಮಾಯಣಗಳ ಮೂಲ ಆಧಾರ ಸಂಸ್ಕೃತ ರಾಮಾಯಣ. ಅದನ್ನು ಬರೆದವರೇ `ವಾಲ್ಮೀಕಿ'. ಆದರೆ ಆತನ ನಿಜ ಹೆಸರು ರತ್ನಾಕರ ಎಂಬುದಾಗಿತ್ತು.

ಕಾಡಿನಲ್ಲಿ ವಾಸಿಸುತ್ತಿದ್ದ ರತ್ನಾಕರನಿಗೆ ಜನರನ್ನು ದೋಚುವುದೇ ಕಾಯಕ. ಅವನೊಬ್ಬ ದೊಡ್ಡ ಡಕಾಯಿತ. ಒಂದು ದಿನ ಆ ಕಾಡಿನ ಹಾದಿಯಲ್ಲಿ ನಾರದ ಮುನಿ ಹೊರಟಿದ್ದರು. ಹಾಗೆ ನಡೆಯುತ್ತಿದ್ದ ಅವರ ಪಾದಕ್ಕೆ ಮುಳ್ಳೊಂದು ಚುಚ್ಚಿತು. ತಕ್ಷಣವೇ ಅವರು `ನಾರಾಯಣ ನಾರಾಯಣ' ಎಂದು ಭಗವಂತನನ್ನು ಸ್ಮರಿಸಿದರು. ಡಕಾಯಿತ ರತ್ನಾಕರನು ಮರವೊಂದರ ಹಿಂದೆ ಅಡಗಿದ್ದವನು ನಾರದರ ಧ್ವನಿ ಕೇಳಿ ಹೊರ ಬಂದ. ನಾರದರಿಂದಲೂ ದೋಚವುದು ಅವನಾಸೆ. ಆದರೆ ಅವರ ಬಳಿ ಅವನಿಗೆ ಬೇಕಾದ ಬೆಲೆಬಾಳುವ ವಸ್ತುಗಳಿರಲಿಲ್ಲ. ಕಡೆಗೆ ನಿರಾಸೆ.

ಈ ನಡುವೆ ನಾರದರು ಮತ್ತೊಮ್ಮೆ ನಾರಾಯಣನ ಹೆಸರನ್ನು ಉಚ್ಚರಿಸಿದರು. ಡಕಾಯಿತ ರತ್ನಾಕರನು ನಾರದರ ಸ್ನೇಹಿತ ನಾರಾಯಣ ಎಂಬುವನು ಇಲ್ಲೇ ಎಲ್ಲೋ ಅಡಗಿ ಕುಳಿತಿದ್ದಾನೆ ಎಂದು ಯೋಚಿಸಿದ. ಆಗ ನಾರದರನ್ನು ಕುರಿತು `ನಿನ್ನ ಸ್ನೇಹಿತ ನಾರಾಯಣ ಎಲ್ಲಿದ್ದಾನೆ, ಅವನನ್ನು ಕರೆ' ಎಂದ. ನಾರದರು, `ನಾರಾಯಣ ನನ್ನ ಮಿತ್ರನಲ್ಲ, `ಆತ ಭಗವಂತ' ಎಂದು ಎಷ್ಟು ಸಲ ಹೇಳಿದರೂ ರತ್ನಾಕರ ನಂಬಲಿಲ್ಲ.

ಅಂತಿಮವಾಗಿ ನಾರದರು ನಾರಾಯಣ ಭಗವಂತನನ್ನು ನೋಡುವೆಯಾ ಎಂದರು. ರತ್ನಾಕರನಿಗೆ ಕುತೂಹಲ. ಅವನನ್ನು ಸಮೀಪದ ನದಿಯ ಬಳಿಗೆ ಕರೆದೊಯ್ದರು. ರತ್ನಾಕರನನ್ನು ಸ್ನಾನ ಮಾಡಲು ತಿಳಿಸಿದರು. ಸ್ನಾನದ ನಂತರ ಡಕಾಯಿತ ರತ್ನಾಕರ ನದಿಯಿಂದ ಹೊರಬಂದ. ಆತನ ಮುಖದಲ್ಲಿ ಒಂದು ದಿವ್ಯ ತೇಜಸ್ಸು. ನಾರದರು ಆತನಲ್ಲಿ ಋಷಿತ್ವದ ಲಕ್ಷಣಗಳನ್ನು ಗುರುತಿಸಿದರು.

ಅದೇ ಸಮಯಕ್ಕೆ `ಬ್ರಹ್ಮದೇವ' ಪ್ರತ್ಯಕ್ಷನಾದ. ಆತ ನಾರದರಿಗೆ `ರತ್ನಾಕರನು ವಾಲ್ಮೀಕಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯುತ್ತಾನೆ. ಈತನ ರಾಮಾಯಣದ ರಚನೆ ಮಾಡುತ್ತಾನೆ ಮತ್ತು `ಪ್ರಾಚೀನ' ಕವಿ ಎಂಬ ಹೆಸರು ಗಳಿಸುತ್ತಾನೆ' ಎಂದ ಇದನ್ನು ಕೇಳಿ ನಾರದರಿಗೆ ಸಂತೃಪ್ತಿಯಾಯಿತು.

ನಾರದರು ಆ ಡಕಾಯಿತನಿಗೆ `ನಾರಾಯಣ' ಮಂತ್ರ ಉಪದೇಶಿಸಿದರು. ಡಕಾಯಿತ ರತ್ನಾಕರನು ಹಗಲು - ರಾತ್ರಿಯೆನ್ನದೆ `ನಾರಾಯಣ' ಮಂತ್ರ ಜಪಿಸತೊಡಗಿದ. ಆತನ ಶರೀರದ ಮೇಲೆ ಕೀಟಗಳು ಮನೆ ಕಟ್ಟಲಾರಂಭಿಸಿದವು. ಹುತ್ತದ ಮಣ್ಣಿನ ನಡುವೆ ರತ್ನಾಕರನ ದೇಹ ಸಣಕಲಾಗಿತ್ತು. ಬಾಹ್ಯಲೋಕದ ಎಚ್ಚರವೇ ಇರಲಿಲ್ಲ. `ನಾರಾಯಣ' ಮಂತ್ರದ ಜಪ ಹಾಗೆಯೇ ಸಾಗಿತ್ತು.

ತಪಸ್ಸಿನಿಂದ ಪ್ರಸನ್ನನಾದ ಬ್ರಹ್ಮದೇವನು ರತ್ನಾಕರನ ಹೆಸರನ್ನು ವಾಲ್ಮೀಕಿ ಎಂದು ಬದಲಿಸಿ, `ನಿನ್ನ ಬಾಯಿಯಿಂದ ಹೊರಬರುವ ಶಬ್ದಗಳೆಲ್ಲವೂ ಕವಿತೆಗಳಾಗಲಿ' ಎಂದು ವರವಿತ್ತ. ವಾಲ್ಮೀಕಿ ಮುನಿಯು ಮುಂದೆ `ಮಹಾಕವಿ' ಎನಿಸಿದ. ಈತನು ರಚಿಸಿದ `ರಾಮ ಕಥೆ' ಯನ್ನು ರಾಮಾಯಣ ಎಂಬ ಹೆಸರಿನಿಂದ ಕರೆಯಲಾಯಿತು. ಸಂಸ್ಕೃತ ರಾಮಾಯಣವೇ `ಆದಿಕಾವ್ಯ' ಎಂದು ಹೇಳಲಾಗುತ್ತದೆ. ಹಾಗೆಯೇ ವಾಲ್ಮೀಕಿಯನ್ನು `ಆದಿಕವಿ' ಎಂದು ತಿಳಿಯಲಾಗಿದೆ.

ಹೀಗೆ ನಾರದರ ಉಪದೇಶದಿಂದ, ಬ್ರಹ್ಮನ ವರದಾನದಿಂದ ಹಾಗೂ ತನ್ನ ನಿಷ್ಠೆ, ಏಕಾಗ್ರತೆಯಿಂದ ಡಕಾಯಿತ ರತ್ನಾಕರ ವಾಲ್ಮೀಕಿ ಹೆಸರಿನಲ್ಲಿ ಅಮರತ್ವ ಪಡೆದ.

          - ಡಿ. ಸುಜಲಾದೇವಿ
        ಪ್ರಾಂಶುಪಾಲರು, ಸುಪ್ರಜಗುರುಕುಲ, ಶನಿವಾರ ಸಂತೆ, ಸೋಮವಾರಪೇಟೆ ತಾಲ್ಲೂಕು


ಹಾಯ್ ಮಕ್ಕಳೇ,
ನೀವು ಕತೆ ಕೇಳಿರ್ತೀರಿ, ಬೇರೆಯವರಿಗೂ ಹೇಳಿರ‌್ತೀರಿ. ಪದ್ಯ ಬರೆಯೋದನ್ನ ನೋಡಿರ‌್ತೀರಿ. ನಿಮಗೂ ಬರೀಬೇಕು ಅನ್ನಿಸಿರುತ್ತೆ. ಹಾಗಿದ್ರೆ ನಮ್ಮ `ಬಣ್ಣದ ತಗಡಿನ ತುತ್ತೂರಿ' ಕಾಯ್ತಾ ಇದೆ. ಪ್ಲೀಸ್ ಬೇಗ ಬರೆದು ಪೋಸ್ಟ್ ಮಾಡಿ. ಎಚ್ಚರ! ದೊಡ್ಡವರು ನಿಮ್ಮ ಬರಹದಲ್ಲಿ ಕೈ ಆಡಿಸೋ ಹಾಗಿಲ್ಲ.

ಕತೆ, ಕವಿತೆ ಬರೆಯೋಕೆ ಆಗದಿದ್ರೂ ಚಿಂತೆ ಇಲ್ಲ. ಶಾಲೆಯಲ್ಲಿ, ಮೈದಾನದಲ್ಲಿ, ಮನೆಯಲ್ಲಿ, ಪಾಠದ ಮನೆಯಲ್ಲಿ ಆದ ಅನುಭವಗಳನ್ನು ಕೂಡ ಬರೀಬಹುದು. ಖುಷಿ ಪಡಬಹುದು. 
ನಂ ವಿಳಾಸ:
ಸಾಪ್ತಾಹಿಕ ಪುರವಣಿ ವಿಭಾಗ
`ಪ್ರಜಾವಾಣಿ'
ನಂ. 75,
ಎಂ.ಜಿ. ರಸ್ತೆ, ಬೆಂಗಳೂರು 560001

saptahika@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT