ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ ಶಿಖರ!

Last Updated 5 ಸೆಪ್ಟೆಂಬರ್ 2015, 19:51 IST
ಅಕ್ಷರ ಗಾತ್ರ

ತಡಿಯಾಂಡಮೋಳ್! ಇದು ಒಂದು ಹೆಸರಷ್ಟೇ ಅಲ್ಲ– ಪ್ರಕೃತಿ ಪ್ರೇಮಿಗಳಿಗೆ ಹಾಗೂ ಚಾರಣ ಪ್ರಿಯರ ಪಾಲಿನ ಸ್ವರ್ಗವೂ ಹೌದು.

ಪಕ್ಷಿಗಳ ಚಿಲಿಪಿಲಿ, ಹರಿಯುವ ಚಿಕ್ಕ ಚಿಕ್ಕ ಜಲಪಾತಗಳ ಮೋಹಕತೆ, ಪರಿಶುದ್ಧವಾದ ಗಾಳಿ, ಕಣ್ಣಿಗೆ ತಂಪು ನೀಡುವ ಹಸಿರು– ಪ್ರಕೃತಿಯ ಅದ್ಭುಯ ಚಿತ್ರಕಾವ್ಯದಂತೆ ಕಾಣಿಸುವ ತಡಿಯಾಂಡಮೋಳ್ ಬದುಕಿಗೆ ಉತ್ಸಾಹ ತುಂಬುವ ಸ್ಥಳ.

‘ತಡಿಯಾಂಡಮೋಳ್’ ಎಂದರೆ ವಿಶಾಲವಾದ, ಎತ್ತರದ ತುಟ್ಟತುದಿ ಎಂಬ ಅರ್ಥವಿದೆ. ಇದು ಕೊಡಗು ಜಿಲ್ಲೆಯಲ್ಲೇ ಅತೀ ದೊಡ್ಡ ಶಿಖರ. ಕರ್ನಾಟಕದಲ್ಲೇ ಮೂರನೆಯ ಅತೀ ದೊಡ್ಡ ಶಿಖರ ಎನ್ನುವುದು ಇದರ ಅಗ್ಗಳಿಕೆ. ಈ ಸೌಂದರ್ಯ ಶಿಖರ ಬೆಂಗಳೂರಿನಿಂದ ಸುಮಾರು 260 ಕಿ.ಮೀ. ದೂರವಿದೆ. ಈ ಪರಿಸರದಲ್ಲಿ ಆನೆ, ಕಾಡೆಮ್ಮೆ, ಹುಲಿ, ಕಾಡು ಬೆಕ್ಕುಗಳು ಸೇರಿದಂತೆ ಅನೇಕ ಪ್ರಾಣಿ-ಪಕ್ಷಿಗಳು ವಾಸಿಸುತ್ತಿವೆ. ಈ ಮೊದಲು ಹೆಚ್ಚಾಗಿ ವಿದೇಶಿ ಚಾರಣಿಗರೇ ಇಲ್ಲಿಗೆ ಹೆಚ್ಚಿಗೆ ಬರುತ್ತಿದ್ದುದು. ಈಚೆಗೆ ದೇಸಿ ಸಾಹಸಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಸಮುದ್ರ ಮಟ್ಟದಿಂದ 1740 ಮೀಟರ್ ಎತ್ತರದಲ್ಲಿರುವ ಶಿಖರವನ್ನು ಸೇರಲು ಸುಮಾರು 4-5 ತಾಸುಗಳ ಸಮಯ ಅವಶ್ಯಕ. ಈ ಚಾರಣಕ್ಕೆ ಮುಖ್ಯವಾಗಿ ಎರಡು ಚಾರಣ ಮಾರ್ಗಗಳಿವೆ. ಒಂದು ಅರಮನೆ ಮಾರ್ಗ ಮತ್ತೊಂದು ಹನಿವೆಲ್ ಮಾರ್ಗ. ಅರಮನೆ ಮಾರ್ಗದಿಂದ ಶಿಖರ ಸುಮಾರು 8 ಕಿ.ಮೀ. ದೂರವಿದೆ. ತಮ್ಮ ತಮ್ಮ ವಾಹನಗಳನ್ನು ಮಾರ್ಗದ ಆರಂಭದಲ್ಲಿಯೇ ನಿಲ್ಲಿಸಿ ನಡಿಗೆಯನ್ನು ಪ್ರಾರಂಭಿಸಬೇಕಾಗುತ್ತದೆ.

ಸುಂದರ ಕಾಫೀ ತೋಟಗಳ ನಡುವೆ ಚಾರಣ ಶುರುವಾಗಿ, ಪ್ರಾರಂಭದಲ್ಲೇ ಒಂದು ಚಿಕ್ಕ ಜಲಪಾತದ ಮೋಹಕ ದೃಶ್ಯವನ್ನು ಕಾಣಬಹುದು. ದಾರಿಯಲ್ಲಿ ಕಾಫೀ, ಏಲಕ್ಕಿ, ಮೆಣಸು, ಹಲಸಿನ ಮರಗಳ ತೋಟ ಕಾಣಸಿಗುತ್ತದೆ. ಇಂತಹ ತೋಟದ ನಡುವೆ ಸುಮಾರು 2–3 ಕಿ.ಮೀ. ಉದ್ದದ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ನಂತರದ ಸುಮಾರು 3 ಕಿ.ಮೀ. ದಾರಿಯು ತುಂಬ ಕಿರಿದಾಗಿದೆ. ಮುಂದೆ ಸಾಗುವಾಗ ಎದುರಾಗುವ ಒಂದು ಬೃಹದಾಕಾರದ ಬಂಡೆಯ ಗುರುತು ತುಂಬ ಮುಖ್ಯವಾದುದು.

ಏಕೆಂದರೆ ಶಿಖರ ಸೇರಲು ಇದುವೇ ಮುಖ್ಯವಾದ ಗುರುತು. ಇಲ್ಲಿ ವಿಶ್ರಾಂತಿ ಪಡೆಯುತ್ತಾ, ಸುತ್ತಲೂ ಕಣ್ಣಾಡಿಸಿದರೆ ಸಾಲು ಸಾಲು ಬೆಟ್ಟಗಳ ವಿಹಂಗಮ ನೋಟವನ್ನು ನೋಡಿ ಆನಂದಿಸಬಹುದು. ತದನಂತರದ ಸುಮಾರು 2 ಕಿ.ಮೀ. ದಟ್ಟವಾದ ಕಾಡಿನಲ್ಲಿ, ಮರ-ಗಿಡಗಳ ನಡುವೆ ಸಾಗುವ ದಾರಿಯು ಬೆವರಿಳಿಸುವ ನಡಿಗೆಯಾಗಿರುತ್ತದೆ. ಶಿಖರವನ್ನು ಏರಿ ನಿಂತರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಿಸುತ್ತದೆ. ಟ್ರೆಕ್ಕಿಂಗ್ ಪ್ರಿಯರಿಗೆ ಇದು ಒಂದು ಒಳ್ಳೆಯ ಜಾಗ. ಶಿಖರದ ತಪ್ಪಲಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಒಳ್ಳೆಯ ಹೋಂ ಸ್ಟೇಗಳಿವೆ.

ಚಾರಣ ಮಾಡುವವರು ಚಾರಣದ ನಕ್ಷೆಯನ್ನು ಚಾಚುತಪ್ಪದೆ ಅನುಸರಿಸುವುದು ಅಗತ್ಯ. ಕಾಡುಪ್ರಾಣಿಗಳ ಬಗ್ಗೆ ಎಚ್ಚರದಿಂದಿರಬೇಕು. ಕಾಲುಗಳಿಗೆ ಉಪ್ಪು ಮತ್ತು ನಿಂಬೆ ರಸ ಲೇಪಿಸಿಕೊಳ್ಳುವುದರಿಂದ ಜಿಗಣೆಗಳ ಕಾಟ ತಪ್ಪಿಸಿಕೊಳ್ಳಬಹುದು. ಕಾಲುಗಳು  ಸಂಪೂರ್ಣವಾಗಿ ಮಚ್ಚುವಂತಹ ಬೂಟುಗಳನ್ನು ಧರಿಸಿದರೆ ಒಳ್ಳೆಯದು. ಚಳಿ ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಒಳ್ಳೆಯ ರೈನ್ ಕೋಟ್‌ಗಳನ್ನು ಕೊಂಡೊಯ್ಯಬೇಕು. ಉಳಿದಂತೆ ಕುಡಿಯುವ ನೀರು, ಆಹಾರ ಜೊತೆಗಿರಲೇಬೇಕು. ಈ ಸಾಹಸದ ದಾರಿ ಗೆಳೆಯರ ಗುಂಪಿನಲ್ಲಿ ಹೆಚ್ಚು ಖುಷಿ ಕೊಡುತ್ತದೆ.

ಬೆಂಗಳೂರಿನಿಂದ ಮಂಡ್ಯ, ಶ್ರೀರಂಗಪಟ್ಟಣ, ಎಲಿವಾಲ, ಹುಣಸೂರು, ಗೋಣಿಕೊಪ್ಪಲ್, ವಿರಾಜಪೇಟ್, ಕಕ್ಕಬೆ ಮಾರ್ಗದ ಮೂಲಕ ತಡಿಯಾಂಡಮೋಳ್ ತಲುಪಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT