ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಯತ್ತ ವೇಷದಲ್ಲಿರುವ ಸರ್ಕಾರಿ ಸಂಸ್ಥೆ

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ರೇಡಿಯೊ ಒಂದು ಸಮೂಹ ಮಾಧ್ಯಮವಾಗಿ ಬಂದು ಜನರಿಗೆ ಮಾಹಿತಿ, ಶಿಕ್ಷಣ, ಜ್ಞಾನ, ವಿಜ್ಞಾನಗಳ ದಾರಿದೀಪವಾಯಿತು. ರೇಡಿಯೊ ನಿಜವಾದ ಅರ್ಥದಲ್ಲಿ ಜನಪ್ರಿಯ ಮಾಧ್ಯಮವಾಯಿತು.

ಭಾರತದ ರೇಡಿಯೊ ಕ್ರಮೇಣ ಸರ್ಕಾರದ ಏಕಸಾಮ್ಯತೆಯ ಆಡಳಿತದಲ್ಲಿ ಸಿಲುಕಿ ‘ಸರ್ಕಾರದ ತುತ್ತೂರಿ’ ಎಂದೆನಿಸಿಕೊಂಡಿತು. ಸರ್ಕಾರದ ಬಿಗಿಹಿಡಿತ, ಅಧಿಕಾರಶಾಹಿಯ ಅಸಹಕಾರ ಧೋರಣೆಯಿಂದಾಗಿ, ಆಕಾಶವಾಣಿಯಾಗಿ ರೂಪುಗೊಂಡ ರೇಡಿಯೊ ಜನಪರ ಮಾಧ್ಯಮವನ್ನಾಗಿ ಬಳಸಿಕೊಳ್ಳುವ ಅವಕಾಶ ಕಳೆದುಕೊಂಡಿತು. ಆಕಾಶವಾಣಿಯಂತಹ ಪ್ರಬಲ ಮಾಧ್ಯಮವನ್ನು ಸರ್ಕಾರದ ಬಿಗಿಹಿಡಿತದಿಂದ ಸ್ವತಂತ್ರ ಗೊಳಿಸಬೇಕೆಂಬ ಬೇಡಿಕೆ ಹೆಚ್ಚಾಯಿತು. ಟಿ.ವಿ. ಮತ್ತು ರೇಡಿಯೊ ಇವೆರಡೂ ಮಾಧ್ಯಮಗಳ ಸ್ವಾಯತ್ತತೆಯ ಬೇಡಿಕೆ ಚಳವಳಿಯ ರೂಪ ಪಡೆಯಿತು. ಆಗ ಸರ್ಕಾರ ಹಲವಾರು ಸಮಿತಿ ರಚಿಸಿ ಆಡಳಿತಾರೂಢ ರಾಜಕೀಯ ಪಕ್ಷ ಹಾಗೂ ಸರ್ಕಾರದ ಒಟ್ಟು ವಿವೇಚನೆಗೆ ಅನುಗುಣವಾಗಿ ಹೊಣೆಗಾರಿಕೆಯ ಹೆಸರಿನಲ್ಲಿ ‘ಪ್ರಸಾರ ಭಾರತಿ’ ಎಂಬ ಸಂಸ್ಥೆ ಅಸ್ತಿತ್ವದಲ್ಲಿ ಬಂತು.

ಸ್ವಾತಂತ್ರ್ಯದ 50 ವರ್ಷದ ನಂತರ 1997ರಲ್ಲಿ ಐತಿಹಾಸಿಕವಾಗಿ ನಮ್ಮ ದೇಶದ ಪ್ರಸಾರ ವ್ಯವಸ್ಥೆ ಸರ್ಕಾರಿ ಅಧಿಕಾರದಿಂದ ಪಾರಾಗಿ ಬಂದು ಜನರಿಗೆ, ಜನರಿಗಾಗಿ, ಜನರಿಂದ ರೂಪುಗೊಂಡಿತು. ಇದಕ್ಕೂ ಮೊದಲು ಅನೇಕ ಸಮಿತಿಗಳು ನೀಡಿದ ಸಲಹೆ, ಸೂಚನೆಗಳ ಪ್ರಕಾರ 1997ರ ಸೆಪ್ಟೆಂಬರ್ 22ರಂದು ಪ್ರಸಾರ ಭಾರತಿ ಸಂಪೂರ್ಣ ಸ್ವತಂತ್ರ ಸಂಸ್ಥೆಯಾಗಿ ದೇಶದ ಮಾಧ್ಯಮ ಆಕಾಶದಲ್ಲಿ ಆಶಾಕಿರಣವಾಗಿ ಸರ್ಕಾರದಿಂದ ಕಾನೂನಿನ ರೂಪ ಪಡೆದು, ಸಂಸತ್ತಿನಿಂದ ಅನುಮೋದನೆ ಪಡೆಯಿತು.

ಪ್ರಸಾರ ಭಾರತಿ ಸ್ವತಂತ್ರ ಮಾಧ್ಯಮ ಸಂಸ್ಥೆಯಾಗಿ ಇಂದಿಗೆ 20 ವರ್ಷಗಳಾದವು. ಈ ಅವಧಿಯಲ್ಲಿ ಅದು ಈ ಎರಡೂ ಮಾಧ್ಯಮಗಳನ್ನು ತನ್ನ ಮುಖ್ಯ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. ಇದರ ಕಾರ್ಯ ಚಟುವಟಿಕೆಗಳು ತೋರಿಕೆಗೆ ಹೊಂದಿರುವ ಸ್ವಾಯತ್ತತೆಯ ಸನ್ನಿವೇಶದಲ್ಲಿ ಪ್ರಸಾರ ಸೇವೆ ಸರ್ಕಾರದ ಆಡಳಿತಾತ್ಮಕ ಘಟಕವಾಗಿರುವುದು ವಿಷಾದನೀಯ.

ಸಾರ್ವಜನಿಕ ಪ್ರಸಾರ ಸೇವೆ?
ಸರ್ಕಾರದ ಮುಷ್ಠಿಯಿಂದ ಪಾರಾಗುವುದಕ್ಕಿಂತ ಹೆಚ್ಚಾಗಿ ಪ್ರಸಾರ ಭಾರತಿ ವಾಣಿಜ್ಯೀಕರಣದ ಬಿರುಗಾಳಿಗೆ ಸಿಲುಕಿ ಆರ್ಥಿಕಾದಾಯದ ಭೀಕರ ಸನ್ನಿವೇಶಗಳಿಂದ ಸ್ವತಂತ್ರವಾಗಬೇಕಾಗಿದೆ. ಈಗಲೂ ಈ ಸಂಸ್ಥೆ ಆರ್ಥಿಕ ಅನುದಾನಕ್ಕಾಗಿ ಸರ್ಕಾರವನ್ನೇ ಅವಲಂಬಿಸಬೇಕಾಗಿದೆ. ಆರ್ಥಿಕ ಅನುದಾನದ ಪ್ರಶ್ನೆ ಬಂದಾಗಲೆಲ್ಲ ಸರ್ಕಾರ ಪ್ರಸಾರ ಭಾರತಿಗೆ ಸ್ವಾವಲಂಬನೆಯ ಪಾಠ ಹೇಳುತ್ತದೆ. ಎರಡೂ ಮಾಧ್ಯಮಗಳ ಅವಕಾಶಗಳನ್ನು ಬಳಸಿಕೊಂಡು, ವಾಣಿಜ್ಯ ನೀತಿಗಳಿಂದ ಹಣ ಸಂಗ್ರಹಿಸಬೇಕು ಎಂದು ಸರ್ಕಾರ ಅನೇಕ ಬಾರಿ ಪ್ರಸಾರ ಭಾರತಿಗೆ ಉಪದೇಶ ಮಾಡುತ್ತಲೇ ಬಂದಿದೆ. ತನ್ನ ಇಬ್ಬಗೆಯ ನೀತಿಯಿಂದಾಗಿ ಇತ್ತ ವಾಣಿಜ್ಯ ಸಂಸ್ಥೆಯೂ ಆಗದೆ, ಅತ್ತ ಸಾರ್ವಜನಿಕ ಪ್ರಸಾರ ಸಂಸ್ಥೆ ಆಗದೆ ಅತಂತ್ರ ಧೋರಣೆಯಲ್ಲಿಯೇ ಈ ಎರಡು ದಶಕಗಳನ್ನು ಕಳೆಯಿತು.

ಪ್ರಸಾರ ಭಾರತಿಯ ಪ್ರಮುಖ ಉದ್ದೇಶವಾದ ಸಾರ್ವಜನಿಕ ಪ್ರಸಾರ ಸೇವೆ ಹಾಗೂ ವಾಣಿಜ್ಜೀಕರಣ. ಇವೆರಡೂ ಒಂದಕ್ಕೊಂದು ಪೂರಕವಾಗದ ನೀತಿಗಳನ್ನು ಅನುಸರಿಸುತ್ತಿದೆ. ಈಗ ಈ ಎರಡೂ ಮಾಧ್ಯಮಗಳಲ್ಲಿ ಬರುತ್ತಿರುವ ಜಾಹೀರಾತುಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಪ್ರಕಟಣೆಗಳೇ ಹೆಚ್ಚು. ಖಾಸಗಿ ವಲಯದ ಜಾಹೀರಾತು ಜಗತ್ತಿನಲ್ಲಿ ಪ್ರಸಾರ ಭಾರತಿಗೆ ಸ್ಥಾನವೇ ಇಲ್ಲ. ಜಾಹೀರಾತಿನ ಮಾರುಕಟ್ಟೆಯಲ್ಲಿ ಪ್ರಸಾರ ಭಾರತಿಯ ಈ ಎರಡೂ ಮಾಧ್ಯಮಗಳ ವಾಣಿಜ್ಯ ಬ್ರ್ಯಾಂಡ್ ಇಲ್ಲವೇ ಇಲ್ಲ.

ಪ್ರಸಾರ ಭಾರತಿಯ ಇಬ್ಬಗೆಯ ನೀತಿಯೇ ಇದಕ್ಕೆ ಕಾರಣ. ಒಂದು ವರದಿ ಪ್ರಕಾರ ಸಂಸದೀಯ ಸ್ಥಾಯಿ ಸಮಿತಿಯು ತನ್ನ ವರದಿಯಲ್ಲಿ ‘ಸಾಮಾಜಿಕ ಕಾರಣ ಬಿಟ್ಟು ಹಣ ಗಳಿಕೆಯ ಮಾರ್ಗಗಳನ್ನು ಹುಡುಕಿ, ಸಾಮಾಜಿಕ ಸಂದೇಶದ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ ಅವು ಯಾವ ಆದಾಯವನ್ನೂ ತರಲಾರವು’ ಎಂದು ಹೇಳಿದೆ. ಅಂತೆಯೇ ದೇಶದೆಲ್ಲೆಡೆಯ ಆಕಾಶವಾಣಿ, ದೂರದರ್ಶನ ಕೇಂದ್ರಗಳು ಲಾಭಕರವಲ್ಲದ ಕಾರ್ಯಕ್ರಮಗಳ ಭಾರದಿಂದ ಸಂಪೂರ್ಣವಾಗಿ ಸೋತು ಹೋಗಿವೆ. ಪ್ರಸಾರ ಭಾರತಿಯನ್ನು ಪರಿಶೀಲಿಸಿದ ಇನ್ನೊಂದು ಸಮಿತಿ ಸಾರ್ವಜನಿಕ ಪ್ರಸಾರ ಸೇವೆಯನ್ನು ಅನುಮೋದಿಸುತ್ತ ಪ್ರಸಾರ ಭಾರತಿಗೆ ಆದಾಯವನ್ನು ಹೆಚ್ಚಿಸಿಕೊಳ್ಳುವ ಗುರಿ ಇರಬೇಕಾಗಿಲ್ಲ’ ಎಂದು ಹೇಳಿದೆ. ಈ ಗೊಂದಲದ ಗೂಡಿನಲ್ಲಿ ಸಿಕ್ಕಿರುವ ಪ್ರಸಾರ ಭಾರತಿ ವಾಣಿಜ್ಜೀಕರಣದ ಬಿರುಗಾಳಿಗೆ ಸಿಲುಕಿ ಆರ್ಥಿಕ ಸ್ವಾವಲಂಬನೆಯ ಹರಸಾಹಸದಲ್ಲಿ ಸಾರ್ವಜನಿಕ ಪ್ರಸಾರ ಸೇವೆಯನ್ನು ಕ್ರಮೇಣ ಕೈಬಿಟ್ಟರೆ ಆಶ್ವರ್ಯಪಡಬೇಕಾಗಿಲ್ಲ.

ಸರ್ಕಾರಿ ಭಾರತಿ?
ಆರ್ಥಿಕ ಅನುಮೋದನೆಗಾಗಿ ಆಕಾಶವಾಣಿ, ದೂರದರ್ಶನ ಸರ್ಕಾರದ ಅನುದಾನಗಳನ್ನು ಅವಲಂಬಿ ಸುವುದಕ್ಕಿಂತ ಇವೆರಡೂ ಸಂಸ್ಥೆಗಳಿಗೆ ಕಾರ್ಪೋರೇಟ್ ರೂಪ ಕೊಟ್ಟು ಅವು ತಾವೇ ತಮ್ಮ ನಿರ್ಧಾರಗಳನ್ನು ಕೈಗೊಳ್ಳುವಂತೆ ಮಾಡಬೇಕೆಂಬ ಸಲಹೆಯನ್ನು ಕೇಂದ್ರದ ಉನ್ನತಮಟ್ಟದ ಕಾರ್ಯದರ್ಶಿಗಳ ಸಮಿತಿ ಕಳೆದ ಜನವರಿಯಲ್ಲಿ ಪ್ರಧಾನಿಗೆ ನೀಡಿದೆ.

ಪ್ರಸಾರ ಭಾರತಿಗೆ ಸ್ವಾಯತ್ತತೆಯ ಅಧಿಕಾರ ಕೊಟ್ಟರೂ ಅದು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಎಂದು ಈ ಸಮಿತಿ ಹೇಳಿದೆ. ತನ್ನ ಆಯವ್ಯಯಕ್ಕೆ ಬೇಕಾಗಿರುವ ಆರ್ಥಿಕ ಬೆಂಬಲಕ್ಕಾಗಿ ಜೊತೆಗೆ ಪ್ರಸಾರ ಭಾರತಿಯ ಎಲ್ಲ ನಿರ್ಧಾರಗಳಿಗೆ ಬೇಕಾಗಿರುವ ಸರ್ಕಾರದ ಅನುಮೋದನೆ, ಹೊಸ ಸಿಬ್ಬಂದಿಯ ನೇಮಕಾತಿ ಈ ಎಲ್ಲದಕ್ಕೂ ಪ್ರಸಾರ ಭಾರತಿ ಸರ್ಕಾರದ ಮೋರೆ ಹೋಗಬೇಕಾಗುತ್ತದೆ. ಹೀಗಾಗಿ ಪ್ರಸಾರ ಭಾರತಿ ತನ್ನ ಅಸ್ತಿತ್ವಕ್ಕಾಗಿ ಸರ್ಕಾರದ ಕೃಪಾಕಟಾಕ್ಷದಲ್ಲಿಯೇ ಇರಬೇಕಾದ ಸ್ಥಿತಿ ಇದೆ.

ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಟ್ಟ ಮುಖ್ಯಾಂಶ ಗಳಲ್ಲಿ ಪ್ರಮುಖವಾಗಿ ಆಕಾಶವಾಣಿ, ದೂರದರ್ಶನ ಈ ಎರಡೂ ಸಂಸ್ಥೆಗಳ ಕೇಳುಗರ, ವೀಕ್ಷಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರಸಾರ ಸಚಿವಾಲಯದ ವರದಿಯ ಪ್ರಕಾರ ₹ 1,600 ಕೋಟಿ ಆದಾಯದ ಗುರಿಯಲ್ಲಿ ಈ ಸಂಸ್ಥೆಗಳು ಗಳಿಸಿದ್ದು, ₹ 1,267 ಕೋಟಿ ಮಾತ್ರ (ಇದು 2015–16ರ ಸಾಲಿನಂತೆ). 1976ರಲ್ಲಿ ದೂರದರ್ಶನದ ಪ್ರತಿ ವಾರದ ವೀಕ್ಷಕರ ಸಂಖ್ಯೆ 900ರಿಂದ 1000 ವರೆಗಿತ್ತು. (GVL Gross Vic wership). ಇದು ಖಾಸಗಿ ವಾಹಿನಿಗಿಂತ ತೀರಾ ಕಡಿಮೆ. 2014ರಲ್ಲಿ ಬಂದ ಸ್ಯಾಮ್‌ ಪಿಟ್ರೋಡಾ ಸಮಿತಿಯ ಶಿಫಾರಸ್ಸಿನ ಪ್ರಕಾರ ಈ ಸಂಸ್ಥೆಗಳು ಅದಾಯವನ್ನು ವಾಣಿಜ್ಜೀಕರಣದಿಂದ ಹೆಚ್ಚಿಸಿಕೊಳ್ಳಬೇಕು. ಈ ಆದಾಯದಿಂದ ಸಿಬ್ಬಂದಿಯ ನೇಮಕಾತಿ ಹಾಗೂ ಇತರ ಅವಶ್ಯಕತೆ ಪೂರೈಸಿಕೊಳ್ಳಬೇಕೆಂಬ ಸಲಹೆ ನೀಡಿತ್ತು. ಆದರೆ, ಇವು ಯಾವುವೂ ಕಾರ್ಯಗತವಾಗಲಿಲ್ಲ.

ಅಸಮಾಧಾನದ ಹೊಗೆ
ಕಳೆದ 20–25 ವರ್ಷಗಳಿಂದ ಪ್ರಸಾರ ಭಾರತಿಯ ಈ ಎರಡೂ ಸಂಸ್ಥೆಗಳಲ್ಲಿ ಹೊಸ ನೇಮಕಾತಿಗಳು ನಡೆದಿಲ್ಲ ಅಥವಾ ತನ್ನ ಸಿಬ್ಬಂದಿಗೆ ಬಡ್ತಿ ಆಗಲಿ ಅಥವಾ ಇನ್ನಿತರ ಸೇವಾ ಅವಕಾಶಗಳನ್ನು ಮೇಲ್ದರ್ಜೆಗೆ ಏರಿಸಲಿಲ್ಲ. ಎಲ್ಲ ಸೇವಾ ಯೋಜನೆಗಳಿಗೆ ಪ್ರಸಾರ ಭಾರತಿ ಸರ್ಕಾರವನ್ನೇ ಅವಲಂಬಿಸಬೇಕು. ಈಗೀಗ ಸಿಬ್ಬಂದಿಯ ವೇತನ ನಡೆಯುವುದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಚೆನ್ನೈ ಆಕಾಶವಾಣಿ ಕೇಂದ್ರದಲ್ಲಿ ತಿಂಗಳ ವೇತನಕ್ಕಾಗಿ ಅಲ್ಲಿಯ ಸಿಬ್ಬಂದಿ ಹರತಾಳ ಮಾಡಿದ್ದು ವರದಿಯಾಗಿದೆ. ಬಾಯಿಗೆ ಬೆಣ್ಣೆ ಹಚ್ಚಿದಂತೆ ಕೆಲವು ಸಿಬ್ಬಂದಿಗೆ ತಾತ್ಕಾಲಿಕ ಬಡ್ತಿ ಕೊಟ್ಟು ಬಾಯಿ ಮುಚ್ಚಿಸಲು ಪ್ರಯತ್ನಿಸಲಾಗಿದೆ.

ನಿವೃತ್ತರ ಆಶ್ರಮ
ಪ್ರಸಾರ ಭಾರತಿ ಹೊಸಬರನ್ನು ನೇಮಿಸಿ ಕೊಳ್ಳುವುದಕ್ಕಿಂತ ಅನೇಕ ನಿವೃತ್ತಿ ನೌಕರರನ್ನು ಕರಾರು ಪತ್ರದ ಮೂಲಕ ನೇಮಿಸಿಕೊಂಡಿದೆ. ಸಾವಿರಾರು ನಿವೃತ್ತರು ವಿಶ್ರಾಂತಿ–ವೇತನದ ಜೊತೆಗೆ ಪ್ರಸಾರ ಭಾರತಿಯಲ್ಲಿ ಕರಾರಿನ ವೇತನ ಪಡೆಯುತ್ತಿದ್ದಾರೆ. ಪ್ರಸಾರ ಭಾರತಿ ಈಗ ನಿವೃತ್ತರ ಧಾಮವಾಗಿದೆ. ಈ ಎಲ್ಲ ಸಮಸ್ಯೆಗಳಿಗಿಂತ ಹೆಚ್ಚಿನ ಗಮನಾರ್ಹ ಸಂಗತಿ ಅಂದರೆ ಆಕಾಶವಾಣಿ, ದೂರದರ್ಶನ ಸಂಸ್ಥೆಗಳು ಪ್ರಸಾರ ಮಾಡುತ್ತಿರುವ ವಿಷಯ ವಸ್ತುಗಳು ಜನರ ಅಗತ್ಯ, ಅವರ ನಿರೀಕ್ಷೆಗಳಿಗೆ ಸ್ಪಂದಿಸುತ್ತಿವೆಯೆ?

ಕಳೆದ ಹಲವಾರು ದಶಕಗಳಿಂದ ಈ ಎರಡೂ ಮಾಧ್ಯಮಗಳ ಕಾರ್ಯಕ್ರಮಗಳ ಗುಣಮಟ್ಟ ಕಳಪೆ ಆಗಿರುವುದಕ್ಕೆ ಈಗ ಅವುಗಳ ಕೇಳುಗರ ವೀಕ್ಷಕರ ಸಂಖ್ಯೆ ವಿಪರೀತ ಕಡಿಮೇ ಆಗಿರುವುದೇ ಸಾಕ್ಷಿ. ಇದಕ್ಕೆ ಕಾರಣ ಮಾಧ್ಯಮದ ವೃತ್ತಿಯ ಗುಣಮಟ್ಟದ ಹಾಗೂ ಸಾಮಾಜಿಕ ಕಾಳಜಿಯ ಕೊರತೆ.
ದೂರದೃಷ್ಟಿಯ ಅಭಾವ ಎಲ್ಲಕ್ಕಿಂತ ಹೆಚ್ಚಾಗಿ ಸರಕಾರದ ನಿರ್ಲಕ್ಷ್ಯ ಈ ಎರಡೂ ಮಾಧ್ಯಮ ಸಂಸ್ಥೆಗಳ ಸೋಲಿಗೆ ಕಾರಣವಾಗಿವೆ. ಇದಕ್ಕೆ ಪ್ರಸಾರ ಭಾರತಿ ತೊಟ್ಟಿರುವ ಸ್ವಾಯತ್ತದ ಪೋಷಾಕಿನಲ್ಲಿರುವ
ಸರ್ಕಾರ.

ಈಗೆಲ್ಲಿದೆ ಸಾರ್ವಜನಿಕ ಪ್ರಸಾರ?
ಸಾರ್ವಜನಿಕ ಸೇವೆ ರೂಪುಗೊಂಡು ಪ್ರಸಾರ ವ್ಯವಸ್ಥೆ ಪ್ರಾರಂಭವಾಗಿದ್ದು ಬಿ.ಬಿ.ಸಿ.ಯಿಂದ. ಜಾನ್‌ ರೀತ್‌ ಎಂಬುವರು ಬಿ.ಬಿ.ಸಿ.ಯನ್ನು ಜನಪ್ರಿಯ ಸಂಸ್ಥೆಯನ್ನಾಗಿ ಬೆಳೆಸಿದರು. ಮುಂದೆ ಬಿ.ಬಿ.ಸಿ. ತನ್ನ ಕೇಂದ್ರಗಳನ್ನು ಹೆಚ್ಚಿಸುತ್ತ ಹೋದಂತೆ ಆರ್ಥಿಕ ಕಠಿಣತೆ ಅನುಭವಿಸತೊಡಗಿತು. ಆಗ ಬ್ರಿಟನ್ನಿನ ಪ್ರಧಾನಿಯಾಗಿದ್ದ ಮಾರ್ಗರೇಟ್‌ ಥ್ಯಾಚರ್‌, ಪಿತಾಕ್‌ ಎಂಬ ಸಂಸತ್‌ ಸದಸ್ಯರ ನೇತೃತ್ವದಲ್ಲಿ ಸಮಿತಿ ನೇಮಿಸಿ ಸಾರ್ವಜನಿಕ ಪ್ರಸಾರ ಸೇವೆಯ ಕುರಿತು ವರದಿ ನೀಡಲು ಕೇಳಿದರು.

ಪಿತಾಕ್‌ ಸಮಿತಿ ತನ್ನ ವರದಿಯಲ್ಲಿ ಸಾರ್ವಜನಿಕ ಪ್ರಸಾರ ಸೇವೆ ಕ್ರಮೇಣ ನಿಲ್ಲಿಸಬೇಕೆಂಬ ಶಿಫಾರಸು ಮಾಡಿತು. ಅದರಂತೆ ಬಿ.ಬಿ.ಸಿ. ಕ್ರಮೇಣ ತನ್ನ ಕಾರ್ಯಕ್ರಮಗಳಲ್ಲಿ ವಾಣಿಜ್ಜೀಕರಣ ಮಾಡತೊಡಗಿತು ಇತೀಚೆಗೆ ಬಿ.ಬಿ.ಸಿ. ಬ್ರಿಟಿಷ್‌ ಸಂಸತ್ತಿಗೆ ಒಂದು ವರದಿಯನ್ನು ನೀಡಿ ಎರಡು ದಶಕಗಳಲ್ಲಿ ಬಿ.ಬಿ.ಸಿ. ತನ್ನ ಎಲ್ಲ ರೇಡಿಯೊ ಕೇಂದ್ರಗಳನ್ನು ಮುಚ್ಚಿ ಇಂಟರ್‌ನೆಟ್‌ ರೇಡಿಯೊ ಕೇಂದ್ರಗಳನ್ನು ಪ್ರಾರಂಭಿಸುವ ಪ್ರಸ್ತಾಪ ಮಾಡಿದೆ. ಜಗತ್ತಿನ ಬಹುತೇಕ ದೇಶಗಳ ಈಗ ಪ್ರಸಾರ ವ್ಯವಸ್ಥೆಯನ್ನು ವಾಣಿಜ್ಜೀಕರಣ ಮಾಡಿದೆ.

ಪ್ರಸಾರ ಭಾರತಿಯ ವ್ಯಾಪ್ತಿ
ಪ್ರಸಾರ ಭಾರತಿ ದೇಶದ ಸಮೂಹ ಮಾಧ್ಯಮದ ಆಶಾಕಿರಣವಾಗಿ ಇಂದು ಆಕಾಶವಾಣಿಯ ಸುಮಾರು 400ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ದೇಶದ ಶೇ 92ರಷ್ಟು ಭೌಗೋಳಿಕ ಪ್ರದೇಶದಲ್ಲಿ 231 ಭಾಷೆಗಳಲ್ಲಿ ,146 ಆಡು ಭಾಷೆಗಳಲ್ಲಿ ತನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ದೂರದರ್ಶನ ದೇಶದ ಪ್ರಮುಖವಾದ 67 ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. ಜ್ಞಾನ, ವಿಜ್ಞಾನದ ಕಿಟಕಿಯಾಗಿ ದೇಶದ ಜನತೆಯ ಸೇವೆಯಲ್ಲಿ ತೊಡಗಿವೆ. ಪ್ರಸಾರ ಭಾರತಿ ವಿವಿಧ ವಾದ್ಯಗಳ ವಾದ್ಯ ಮೇಳವಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT