ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಹೂವುಗಳು

ಮೊದಲ ಓದು
Last Updated 30 ಜನವರಿ 2016, 19:30 IST
ಅಕ್ಷರ ಗಾತ್ರ

ನಿದ್ದೆಯಿರದ ರಾತ್ರಿಗಳನ್ನು
ನಿದ್ರಿಸಲು ಬಿಡುವೆ
ಬೆಳಕು ಮೊಳೆತ ಮೇಲೆ
ನಾನೂ ನಿದ್ದೆಹೋಗುವೆ

(ಈ ರಾತ್ರಿಗಳಲ್ಲಿ ನಿದ್ರಿಸಲಾರೆ/55)
ಬದುಕಿನ ಸಹಜಸ್ಪಂದನೆಗಳನ್ನು ಹಿಡಿಯುವ ಕವಿ ಕಾಜೂರು ಸತೀಶ್‌. ಹೊಸತಲೆಮಾರಿನ ಹೊಸದನಿಯ ಹುಡುಕಾಟದಲ್ಲಿರುವ ಕವಿಯಾಗಿರುವ ಸತೀಶ್‌ರ ಮೊದಲ ಸಂಕಲನ ಇದು. ಬಿಡಿಬಿಡಿ ಚಿತ್ರಗಳಲ್ಲಿ ಕಾವ್ಯದ ಅನುಭವ ತಾಕುವಂತಹ ಕವಿತೆಗಳನ್ನು, ತಮ್ಮ ಪ್ರಾಮಾಣಿಕ ಅನಿಸಿಕೆಗಳ ಮಂಡನೆಗಳನ್ನು ಇಲ್ಲಿ ಅವರು ಕೊಟ್ಟಿದ್ದಾರೆ. ಬದುಕಿನ ದ್ವಂದ್ವಗಳು ಅವರ ಕವಿತೆಗಳ ವಸ್ತು. ‘ಗಾಯದ ಹೂವುಗಳು’ ಎಂಬ ರೂಪಕವೇ ಅವರ ಕಾವ್ಯದ ಶಕ್ತ ರೂಪವಾಗಿದೆ. ಅದು ಅವರ ಕವಿತೆಗಳಲ್ಲಿ ಬೇರೆಬೇರೆ ರೀತಿಗಳಲ್ಲಿ ಕಾಣಿಸಿಕೊಂಡಿದೆ.

ಹೊಸಸವಾಲುಗಳನ್ನು ಎದುರಿಸಿ, ವಿಶಿಷ್ಟ ವಸ್ತುಗಳನ್ನು ಹುಡುಕಿ ಬರೆಯುವ ಕವಿ ಇವರಲ್ಲ. ಅವರ ಕವಿತೆಗಳೆಲ್ಲ ದೈನಿಕದ ಹಲಬಗೆಯ ಚಿತ್ರ, ಅನುಭಗಳಾಗಿವೆ. ತಮ್ಮ ಅನುಭವವನ್ನು ತಮ್ಮದೇ ವಿಶಿಷ್ಟ ನೋಟದ ಮೂಲಕ ಎಲ್ಲರಿಗೂ ಕಾಣಿಸಬೇಕೆಂಬ ಹಂಬಲ ಅವರದು. ಅದಕ್ಕಾಗಿ ಅವರು ನಿತ್ಯ ನಾವು ಕಾಣುವ ಚಿತ್ರಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ.

‘ಕೆಂಡದಲ್ಲಿ ಸುಟ್ಟ ಹಸಿಮೀನು/ ನನ್ನ ಕವಿತೆ. (ಹಸಿಮೀನು ಮತ್ತು ನನ್ನ ಕವಿತೆ/88) ಎನ್ನುವ ಕವಿ ಎಣ್ಣೆಹಾಕಿ, ಮಸಾಲೆ ಸೇರಿಸಿ ಎಲ್ಲರಂತೆ ಮೀನು ಹುರಿದು ತಿನ್ನುವ ಬದಲು ‘ನಾನು ಒಲೆಯ ಕೆಂಡದಲ್ಲಿ/ ಉಪ್ಪು ಸವರಿ/ ಸುಟ್ಟು ತಿನ್ನುತ್ತೇನೆ’ ಎನ್ನುತ್ತಾರೆ. ಇಂತಹ ಸರಳ ಮನೋಧರ್ಮ, ಬದುಕನ್ನು ಸಹಜವಾಗಿ ನೋಡುವ ರೀತಿಯೇ ಇಲ್ಲಿನ ಕವಿತೆಗಳನ್ನು ರೂಪಿಸಿದೆ.

‘ವ್ಯಾಲಿಡಿಟಿ ಮುಗಿದ ನಿನ್ನ/ ಮೊಬೈಲ್‌ ಸಂಖ್ಯೆಯನ್ನು/ ರೀಚಾರ್ಜ್‌ ಮಾಡಲು ಹೊರಟಿದ್ದೇನೆ/ ...ಬೆಳಕಾಗುವ ವರೆಗೂ/ ಕರೆಮಾಡಿ ಕೇಳುತ್ತಲೇ ಇರುತ್ತೇನೆ’ (ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು/51) ಎಂಬ ಈ ಕಾಲದ ಭಾಷೆ, ರೂಪಕಗಳೂ ಈ ಸಂಕಲನದಲ್ಲಿವೆ. ತಮ್ಮ ಅನುಭವನ್ನು ಇನ್ನಷ್ಟು ಸಂಗ್ರಹವಾಗಿ, ಖಚಿತವಾದ ನುಡಿಗಟ್ಟು, ರೂಪಕಗಳಲ್ಲಿ ಚಿತ್ರಿಸುವ ಶಕ್ತಿ ಬಂದಾಗ ಸತೀಶ್‌ ಮಹತ್ವದ ಕವಿತೆಗಳನ್ನು ಕೊಡಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT