ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ: ಸಾಹಿತ್ಯದ ಅರಿವು ಮೊನಚುಗೊಳಿಸುವ ಕೃತಿ

Published 23 ಜುಲೈ 2023, 0:58 IST
Last Updated 23 ಜುಲೈ 2023, 0:58 IST
ಅಕ್ಷರ ಗಾತ್ರ

ಒಳ್ಳೆಯ ವಿಮರ್ಶಕ ಸರಿಯಾಗಿಯೋ ಅಥವಾ ತಪ್ಪಾಗಿಯೋ ತನ್ನದೇ ವಿಧಾನವನ್ನು ಸಂಶಯದಿಂದ ನೋಡುತ್ತಾನೆ. ಅವನು ತನ್ನ ಬರವಣಿಗೆಯಲ್ಲಿ ತಲ್ಲೀನನಾಗದೆ, ಮತ್ತಷ್ಟು ಸೂಕ್ಷ್ಮ ಒಳನೋಟಗಳನ್ನು ಗಳಿಸಿಕೊಳ್ಳಬಲ್ಲ ನಿಷ್ಠುರವೂ ಶ್ರಮದಾಯಕವೂ ಆದ ವಿಧಾನವನ್ನು ಅನುಸರಿಸುತ್ತಾನೆ. ಶಶಿಕಿರಣ್ ಅವರ ‘ಸಾಹಿತ್ಯ ಸಂಹಿತೆ’ ಅಂಥ ವಿಧಾನವನ್ನು ಅನುಸರಿಸಿರುವ, ಸ್ವಲ್ಪಮಟ್ಟಿಗೆ ನಮ್ಮ ನವೋದಯ ಕಾಲದ ಪಾಂಡಿತ್ಯವನ್ನು ನೆನಪಿಸುವ, ನಮ್ಮ ಕಾಲದಲ್ಲಿ ತೀರ ಅಪರೂಪವಾಗಿ ಪ್ರಕಟವಾಗುವ ಕೃತಿ. ಇಲ್ಲಿರುವುದು ನೇರವೂ ಸ್ಪಷ್ಟವೂ ಸಮತೋಲನವೂ ತೀರ ಗಾಢವೂ ಆದ ಬರವಣಿಗೆ. ಇದರಲ್ಲಿ ತಾತ್ತ್ವಿಕ ಮತ್ತು ನೈತಿಕ ಕೇಂದ್ರವಿದ್ದು ಅದು ಓದುಗರಿಗೆ ಭಾಷೆ, ಧ್ವನಿ, ಕಾವ್ಯ, ಕಾದಂಬರಿ, ಅನುವಾದ, ಹೀಗೆ ಸಂಸ್ಕೃತ ಸಾಹಿತ್ಯದ ಒಂದು ಪರಂಪರೆಯನ್ನೇ ತೆರೆದು ತೋರಿಸುತ್ತದೆ.

ಗತಕಾಲದ ಸಾಹಿತ್ಯಾಧ್ಯಯನ ಹೊಸ ಒಳನೋಟಗಳನ್ನು ಗಳಿಸಿಕೊಳ್ಳುವುದಕ್ಕಷ್ಟೇ ಅಲ್ಲ, ಸ್ಥಿತ್ಯಂತರಗೊಳ್ಳುವ ನೈತಿಕ ಆಕೃತಿಗಳಿಗೂ ನೆರವಾಗುತ್ತದೆ ಎಂಬ ನಂಬಿಕೆ ಇಲ್ಲಿದೆ. ಶಶಿಕಿರಣ್ ವಿದ್ವಾಂಸರು, ಸೌಂದರ್ಯಪ್ರಜ್ಞೆಯ ಪ್ರತಿಪಾದಕರು, ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಶೋಧಿಸಬಯಸುವವರಿಗೆ ಆದರ್ಶಪ್ರಾಯ ವಿಮರ್ಶಕರು. ಅವರ ಈ ಕೃತಿ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಕುರಿತ ನಮ್ಮ ಅರಿವನ್ನು ಮೊನಚುಗೊಳಿಸುವಷ್ಟು, ವಿಸ್ತರಿಸುವಷ್ಟು ಶಕ್ತವಾಗಿದೆ.

ಸಾಹಿತ್ಯ ಮತ್ತು ಸಂಸ್ಕೃತಿಗಳ ಇತಿಹಾಸಕಾರ ಗತಕಾಲದ ಪ್ರಯತ್ನಗಳನ್ನು ಸಹಜೀವದ ಭಾವನೆಗಳಿಂದ ಗಮನಿಸಬೇಕು ಮತ್ತು ತನ್ನದೇ ಕಾಲದ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ಸಂಕಲನದಲ್ಲಿರುವ ಹನ್ನೊಂದು ಪ್ರಬಂಧಗಳಲ್ಲಿ ಮೊದಲನೆಯದು ಕಳೆದ ಶತಮಾನದಲ್ಲಿ ಅತ್ಯುತ್ತಮ ಸಂಶೋಧನೆ ಮತ್ತು ಪಾಂಡಿತ್ಯ ಗಳಿಸಿದ ವಿಮರ್ಶೆ/ವ್ಯಾಖ್ಯಾನಗಳನ್ನು ಮಾಡಿದ ಕೆಲವು ಮಹನೀಯರ ಮಹತ್ವವನ್ನು ತಿಳಿಸಿಕೊಡುವ, ಅವರ ಕಾರ್ಯವನ್ನು ಆಳವಾಗಿ ವಿಶ್ಲೇಷಿಸುವ ಅಪರೂಪದ ಪ್ರಬಂಧ. ನವೋದಯ ಕಾಲದ ಗೋವಿಂದ ಪೈ, ಡಿ.ವಿ.ಜಿ., ಎ.ಆರ್.ಕೃಷ್ಣಶಾಸ್ತ್ರಿ, ಸೇಡಿಯಾಪು, ಕುವೆಂಪು, ಪುತಿನ, ತೀ.ನಂ.ಶ್ರೀ ಮೊದಲಾದವರಿಗಿದ್ದ ಸಂಸ್ಕೃತ ಜ್ಞಾನದಿಂದ ಕನ್ನಡಕ್ಕೆ ಅನುವಾದಗೊಂಡ ರಾಮಾಯಣ-ಮಹಾಭಾರತ, ಕಾವ್ಯಮೀಮಾಂಸೆ, ಅಲಂಕಾರಶಾಸ್ತ್ರ, ಸಂಸ್ಕೃತ ನಾಟಕ, ಕಾಳಿದಾಸನ ಕಾವ್ಯ, ಸುಭಾಷಿತ, ಬಾಣಭಟ್ಟನ ಕಾದಂಬರಿ ಹೀಗೆ ಹಲವು ಗ್ರಂಥಗಳನ್ನೂ ಪುತಿನ ಅವರ ‘ಭವನಿಮಜ್ಜನ ಚಾತುರ್ಯ’, ‘ಲಘಿಮಾ ಕೌಶಲ’ಎಂಬ ಪರಿಕಲ್ಪನೆಗಳನ್ನೂ ವಿವರಿಸುವ ಈ ಪ್ರಬಂಧ ‘ಕನ್ನಡ ಭಾಷೆಯಲ್ಲಿ ಸಾಹಿತ್ಯ-ಅಲಂಕಾರಶಾಸ್ತ್ರಗಳಿಗೆ ಉಪಾಯನವಾಗಬಲ್ಲ ಅನೇಕ ಅಂಶಗಳಿರುವು’ದನ್ನೂ ಸೂಚಿಸುತ್ತದೆ.

ಹಳೆಯ ಕೃತಿಯೊಂದನ್ನು ಪರಿಶೀಲಿಸುವಾಗ ಅದರ ವೈಶಿಷ್ಟ್ಯವನ್ನು ಗುರುತಿಸುತ್ತಲೇ ಅದರಲ್ಲಿ ಹೊಸ ಧ್ವನಿಯೋ ಒಳನೋಟವೋ ಏನಿದೆಯೆಂದು ಹುಡುಕಿ ತೆಗೆಯುವುದು ಕೂಡ ವಿಮರ್ಶೆಯ ಮುಖ್ಯ ಕೆಲಸಗಳಲ್ಲೊಂದು. ಶಶಿಕಿರಣ್ ‘ಧ್ವನ್ಯಾಲೋಕ’ವನ್ನು ಕುರಿತು ಬರೆದಿರುವ ಎರಡನೆಯ ಪ್ರಬಂಧವು ವ್ಯಂಜನ ವ್ಯಾಪಾರ, ಧ್ವನಿ ಪ್ರಭೇದಗಳು, ಅಲಂಕಾರ, ಧ್ವನಿ ಸಿದ್ಧಾಂತ, ರಸ ಸಿದ್ಧಾಂತ ಮುಂತಾದವುಗಳನ್ನು ಸಮೀಕ್ಷಿಸುತ್ತ, ಅವನು ಸಂಸ್ಕೃತ ಕಾವ್ಯಗಳಿಂದ ಉದ್ಧರಿಸಿ ಮಾಡಿದ ಪ್ರಾಯೋಗಿಕ ವಿಮರ್ಶೆಯನ್ನೂ ಗುರುತಿಸುತ್ತದೆ. ಅದೇರೀತಿ ರಾಜಶೇಖರನ ‘ಕಾವ್ಯಮೀಮಾಂಸಾ’ ಎಂಬ ಅಲಂಕಾರಶಾಸ್ತ್ರವು ಕಾವ್ಯ ಪುರುಷೋತ್ಪತ್ತಿಯ ಕತೆಯ ಮೂಲಕ ಶಾಸ್ತ್ರೀಯ ವಿಚಾರಗಳನ್ನು ರೂಪಕಾತ್ಮಕಕತೆಯ ಮೂಲಕ ಹೇಳಿರುವುದನ್ನು ಪರಿಶೀಲಿಸುತ್ತದೆ. ಇಂಥಲ್ಲಿ ಎದ್ದುಕಾಣುವುದು ಶಶಿಕಿರಣ್ ಅವರಲ್ಲಿರುವ ಆಳವಾದ ಸಾಂಪ್ರದಾಯಿಕ ವಿದ್ವತ್ತು.

‘ಅಸಾಧಾರಣ ಸಂಸ್ಕೃತ ಸಾಧಕ ಶ್ರೀ ಮೇಣರಾಮ ಕೃಷ್ಣಭಟ್ಟರು’ ಎಂಬುದು ನಮ್ಮವರೇ ಆಗಿ ನಮ್ಮವರಿಗೆ ಗೊತ್ತಿಲ್ಲದ ವಿದ್ವಾಂಸರೊಬ್ಬರನ್ನು ಪರಿಚಯಿಸುವ ಪ್ರಬಂಧ. ರಾಮಕೃಷ್ಣಭಟ್ಟರು ಮದರಾಸಿನ ಸರ್ಕಾರಿ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ, ಸಂಸ್ಕೃತ ಪ್ರಾಧ್ಯಾಪಕರಾಗಿ, ಪೂರ್ವ ಆಫ್ರಿಕೆಯ ಸಂಸ್ಕೃತಿಯ ಅಧ್ಯಯನಕಾರರಾಗಿ, ‘ಅಮೃತವಾಣೀ’ ಸಂಸ್ಕೃತ ಪತ್ರಿಕೆಯ ಸಂಪಾದಕ/ಪ್ರಕಾಶಕರಾಗಿ, ವರಾಹಮಿಹಿರನ ‘ಬೃಹತ್ಸಂಹಿತೆ’ಯ ಇಂಗ್ಲಿಷ್‌ ಭಾಷಾಂತರಕಾರರಾಗಿ ಅಪೂರ್ವವಾದದ್ದನ್ನು ಸಾಧಿಸಿದವರು. ಶ್ರೀಧರ ಭಾಸ್ಕರ ವೆರ್ಣೇಕರ್‌ ಅವರ ‘ಭಾರತೀವಿವೇಕ’, ಕೆ.ಎಸ್. ಅರ್ಜುನವಾಡ್ಕರರ ವಿಡಂಬನಾ ಕೃತಿ ‘ಕಟಕಾಂಜಲಿ’ ಇವು ಪರಿಚಯಾತ್ಮಕವಾಗಿದ್ದರೆ, ‘ಮತ್ತೆ ರಾಮನ ಕಥೆ’ ಬನ್ನಂಜೆ ಗೋವಿಂದಾಚಾರ್ಯರ ಅನುವಾದದ ಸ್ವೋಪಜ್ಞತೆಯನ್ನು ಚರ್ಚಿಸುತ್ತದೆ. ‘ದಾರ್ಶನಿಕ ದೀಪ್ತಿ’ ಎಂಬ ಪ್ರಬಂಧ ಎಸ್.ಆರ್. ರಾಮಸ್ವಾಮಿಯವರು ಅಧ್ಯಾತ್ಮ ಮತ್ತು ಮೌಲ್ಯ ಮೀಮಾಸೆಗಳನ್ನು ಕುರಿತು ಬರೆದಿರುವ ಕೆಲವು ಬರಹಗಳನ್ನು ಸಮೀಕ್ಷಿಸುತ್ತ ಅವರ ಬರಹಗಳ ಸಂರಚನೆಯನ್ನು ವಿಶ್ಲೇಷಿಸುತ್ತದೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ಬಗೆಗೆ ಒಂದೇ ರೀತಿಯ–ಬಹುಮಟ್ಟಿಗೆ ನೇತ್ಯಾತ್ಮಕ–ವಿಮರ್ಶೆಗಳನ್ನು ಓದಿದವರಿಗೆ ಇಲ್ಲಿ ಭಿನ್ನ ಬಗೆಯ ಎರಡು ಗಮನಾರ್ಹ ಪ್ರಬಂಧಗಳೂ ಇವೆ.

ಈ ಸಂಕಲನದಲ್ಲಿ ಬಹುಮುಖ್ಯವಾದದ್ದು ‘ಡಿ.ವಿ.ಜಿ. ಅವರ ಭಾಷಾಶಿಲ್ಪ’ ಎಂಬ ಪ್ರಬಂಧ. ಕವಿ, ದಾರ್ಶನಿಕ, ಪತ್ರಕರ್ತ, ಸಾಮಾಜಿಕ-ರಾಜಕೀಯ ಸಿದ್ಧಾಂತಕಾರ, ಧರ್ಮವನ್ನು ಕುರಿತ ವ್ಯಾಖ್ಯಾನಕಾರ ಡಿ.ವಿ.ಜಿ. ಕನ್ನಡದಲ್ಲಿ ವೈಚಾರಿಕ ಗದ್ಯವನ್ನು ರೂಪಿಸಿದ ಕೆಲವೇ ಕೆಲವರಲ್ಲಿ ಅಗ್ರಗಣ್ಯರು. ಪ್ರಜಾಸತ್ತಾತ್ಮಕ ಸಮಾಜ ಎದುರಿಸಬೇಕಾದ ಸಮಸ್ಯೆಗಳನ್ನು ಅವರ ಹಾಗೆ ಮೊದಲೇ ಗ್ರಹಿಸಿದವರು, ಆ ಬಗ್ಗೆ ಅತೀವ ಸ್ಪಷ್ಟತೆಯಿಂದ ಬರೆದವರು ಇನ್ನೊಬ್ಬರಿಲ್ಲ. ನಮಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ಅರಿತುಕೊಳ್ಳುವ ದಿಸೆಯಲ್ಲಿ ಹಿಂದೆಲ್ಲ ನಡೆದಿರುವ ಅತ್ಯುತ್ತಮ ಚಿಂತನೆಗಳ ಆಳವಾದ ಅಧ್ಯಯನ ಎಷ್ಟು ಉಪಯುಕ್ತ ಎಂದು ಪ್ರತಿಪಾದಿಸಿದ ಮ್ಯಾಥ್ಯು ಅರ್ನಾಲ್ಡ್‌ನಂತೆ ಡಿ.ವಿ.ಜಿ.ಯವರೂ ಒಂದು ಯುಗದ ಸಾಹಿತ್ಯದಲ್ಲಿ ಆ ಯುಗದ ಮೌಲ್ಯಗಳು ಸಾರಭೂತವಾಗಿರುತ್ತವೆಯೆಂದು ನಂಬಿದ್ದವರು. ಶಶಿಕಿರಣ್ ಅವರು ಸಾಹಿತ್ಯದ ಮೂಲಕ ಜೀವನ ಸಿದ್ಧಾಂತಕ್ಕೊಂದು ಚೌಕಟ್ಟು ಕೊಟ್ಟ ಡಿ.ವಿ.ಜಿ.ಯವರ ಸಮಗ್ರ ಸಾಹಿತ್ಯವನ್ನು ಅಭ್ಯಸಿಸಿ ಅವರ ಗದ್ಯದ ಶಕ್ತಿ ಸೌಂದರ್ಯಗಳನ್ನು ಹಲವು ಉದಾಹರಣೆಗಳ ಮೂಲಕ ತೋರಿಸಿಕೊಡುತ್ತಾರೆ. ಅವರು ಒಂದೆಡೆ ಬರೆದಿರುವಂತೆ, ‘ಡಿ.ವಿ.ಜಿ. ಅವರ ಗದ್ಯ ವಿಶಿಷ್ಟವಾದೊಂದು ಪ್ರವಚನಶೈಲಿಯಲ್ಲಿ ಸಾಗುತ್ತದೆ.... ಅದರಲ್ಲಿ ಸಮನ್ವಯದ ಹದ ಇದೆ, ಆದರೆ ವಾಚಕರನ್ನು ಒಪ್ಪಿಸಲೇಬೇಕೆಂಬ ಹಠವಿಲ್ಲ; ಇನ್ನೆಲ್ಲಿಯೂ ಕಾಣಸಿಗದ ಕಾಂತಿಯಿದೆ, ಆದರೆ ಅದು ಕಣ್ಣು ಕೋರೈಸುವಂಥದ್ದಲ್ಲ; ಅಧಿಕೃತತೆಗೆ ಕೊರತೆಯಿಲ್ಲ, ಆದರೆ ಅಧಿಕಾರದ ಧೋರಣೆಯಿಲ್ಲ; ಪಾಂಡಿತ್ಯದ ಪುಷ್ಟಿಯಿದೆ, ಆದರೆ ಅದನ್ನು ಮೆರೆಸಬೇಕೆಂಬ ಪೈತ್ಯವಿಲ್ಲ; ಭಾವತೀವ್ರತೆಯಿದೆ, ಆದರೆ ಅದೆಂದೂ ಭಾರವೆನಿಸುವುದಿಲ್ಲ. ಒಟ್ಟಿನಲ್ಲಿ ಅದೊಂದು ಪಾಕ’.

ಸಾಹಿತ್ಯ, ಸಂಸ್ಕೃತಿಗಳನ್ನು ಕುರಿತ ಸಮೃದ್ಧವೂ ಹೊಸ ಮಾರ್ಗಾನ್ವೇಷಕವೂ ಆದ ಇಲ್ಲಿನ ಪ್ರಬಂಧಗಳು ಶಶಿಕಿರಣ್ ಎಷ್ಟು ದೊಡ್ಡ ವಿದ್ವಾಂಸರೆಂದು, ಎಂಥ ಸೂಕ್ಷ್ಮ ವಿಮರ್ಶಕರೆಂದು ತಿಳಿಸಿಕೊಡುವುದಲ್ಲದೆ ಅವರು ಬೇರೆಯವರ ಕೃತಿಗಳನ್ನು ಕುರಿತು ಹೇಗೆಲ್ಲ ಮನನ ಮಾಡುತ್ತಾರೆಂದೂ ತೋರಿಸಿಕೊಡುತ್ತವೆ. ಇಂಥ ಪರಿಪ್ರೇಕ್ಷ್ಯವಿರುವುದರಿಂದಲೇ ಅವರಿಗೆ ಅಪರೂಪದ ಒಳನೋಟಗಳು ಸಾಧ್ಯವಾಗಿವೆಯೆನ್ನಬೇಕು. ಉನ್ನತ ಸಾಹಿತ್ಯ ಹೇಗೆ ನಮ್ಮ ಸಮಾನ ಮಾನವೀಯ ಹಿತಾಸಕ್ತಿಗಳಿಗೆ ಪೂರಕವಾಗಿರುತ್ತದೆಯೆಂಬುದನ್ನು ಇಲ್ಲಿನ ಪ್ರತಿಯೊಂದು ಲೇಖನದಲ್ಲೂ ಕಾಣಬಹುದು.

ಶತಾವಧಾನಿ ಗಣೇಶ್‌ ಅವರು ಬರೆದಿರುವ ‘ನಲ್ನುಡಿ’ ಈ ಪುಸ್ತಕಕ್ಕೊಂದು ಸೊಗಸಾದ ಪ್ರವೇಶಿಕೆಯಾಗಿದೆ.

- ಸಾಹಿತ್ಯ ಸಂಹಿತೆ

ಲೇ: ಬಿ.ಎನ್. ಶಶಿಕಿರಣ್

ಪ್ರ: ಪ್ರೇಕ್ಷಾ ಪ್ರತಿಷ್ಠಾನ ಬೆಂಗಳೂರು

ಸಂ: 9739100950

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT