ದೇಶವೆಲ್ಲ ಬಾಲರಾಮನ ದೇಗುಲದ ಕಡೆ ದೃಷ್ಟಿ ನೆಟ್ಟಿರುವಾಗ ‘ಭರತಕಲ್ಪ’ದ ಓದು ರಾಮರಾಜ್ಯ ಕುರಿತು ಹೊಸ ಹೊಳಹು ನೀಡುತ್ತದೆ. ರಾಮರಾಜ್ಯವೆಂದರೆ ಸ್ತ್ರೀಯರನ್ನು ಗೌರವಿಸುವುದು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು, ಕಂದಾಯ ಸಂಗ್ರಹ, ದ್ರವ್ಯ ವಿಲೇವಾರಿಯಲ್ಲಿ ಅರಮನೆಯ ಸದಸ್ಯರ ಖರ್ಚು ಗೌಣವಾಗಿರುವುದು, ರಾಜ್ಯದ ಸುರಕ್ಷೆಯೊಂದಿಗೆ ಕಟ್ಟುವಿಕೆಯಲ್ಲಿ ಹೆಚ್ಚು ನಂಬಿಕೆ ಇಡುವುದು, ಬಹುತ್ವವನ್ನು ಕಾಪಾಡುತ್ತಲೇ ಏಕಸಂವಿಧಾನ ಸೂತ್ರದಡಿ ತರುವುದು–ಹೀಗೆ ಭರತ ರಾಮನ ರಾಜ್ಯವನ್ನು ರಾಮರಾಜ್ಯವಾಗಿಸಿದ ಕತೆ ಇದು. ಹೆಣ್ಣುಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡುವ ಭರತ ಮಾಂಡವಿ (ಭರತನ ಹೆಂಡತಿ), ಶ್ರುತಕೀರ್ತಿ (ಶತೃಘ್ನನ ಹೆಂಡತಿ) ಹಾಗೂ ಊರ್ಮಿಳೆ (ಲಕ್ಷ್ಮಣನ ಹೆಂಡತಿ) ಮೂವರ ಕೌಶಲಗಳೂ ಪ್ರಕಾಶಿಸುವಂತೆ ಪ್ರೇರಣೆ ನೀಡುತ್ತಾನೆ. ಕೃಷಿ ಮಹಿಳೆಯಾಗಿ ದುಡಿಯುವ ಊರ್ಮಿಳೆ ಗಟ್ಟಿ ಉದಾಹರಣೆ, ಕೌಶಲವಿರುವ ಮಹಿಳೆಯಾಗಿ ಶ್ರುತಕೀರ್ತಿಯನ್ನು ಬೆಳೆಸುತ್ತಲೇ ಆದರ್ಶ ಸಮಾಜದ ನಿರ್ಮಾಣದ ಹಂತಗಳನ್ನು ವಿವರಿಸುತ್ತಾನೆ. ರಾಮರಾಜ್ಯದ ಕಲ್ಪನೆ ರಾಮನಿಂದಲ್ಲ, ಭರತನಿಂದ ಆದ ಕತೆಯನ್ನು ಈ ಕಾದಂಬರಿ ಪ್ರಸ್ತುತಪಡಿಸುತ್ತದೆ. ರಾಮನಿಲ್ಲದ ಅಯೋಧ್ಯೆಯಲ್ಲಿ ಭರತನ ತಳಮಳ, ಅವಮಾನ, ಕೈಕೇಯಿ ಅನುಭವಿಸಬೇಕಾದ ಅವಮಾನ, ಇವನ್ನು ನಿರೂಪಿಸಿದ ಶೈಲಿ ಸರಳವಾಗಿದೆ. ರಾಮ–ಲಕ್ಷ್ಮಣರು ಬಿಲ್ವಿದ್ಯೆ ಪ್ರವೀಣರಾದರೆ, ಭರತ ಆಡಳಿತ ಹಾಗೂ ನಗರ ನಿರ್ಮಾಣ ವಿದ್ಯೆಯಲ್ಲಿ ಹೆಚ್ಚು ಪಾರಂಗತನಾಗಿರುತ್ತಾನೆ. ರಾಮನಿಗಿಂತಲೂ ಹೆಚ್ಚು ಮರ್ಯಾದಾ ಪುರುಷೋತ್ತಮನಾಗಿ ಭರತ ಕಾಣಿಸುವ ಈ ಕಾದಂಬರಿ ರಾಮರಾಜ್ಯದ ಪರಿಕಲ್ಪನೆಯ ಚೌಕಟ್ಟನ್ನು ಮನೋಜ್ಞವಾಗಿ ಕಟ್ಟಿಕೊಡುತ್ತದೆ.