ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತ್ವ ಭಾರತದ ಅನಾವರಣ

Last Updated 7 ಅಕ್ಟೋಬರ್ 2018, 10:31 IST
ಅಕ್ಷರ ಗಾತ್ರ

ಕೃತಿ: ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ (ಪ್ರಬಂಧಗಳು)

ಲೇಖಕ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಪ್ರಕಾಶನ: ಲಡಾಯಿ ಪ್ರಕಾಶನ, ಗದಗ

ಪುಟಗಳ ಸಂಖ್ಯೆ: 296

ಬೆಲೆ: ₹ 180

**

ಕನ್ನಡದ ಪ್ರಸಿದ್ಧ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಪ್ರಬಂಧಗಳ ಸಂಕಲನ ಹಲವು ನಿಟ್ಟಿನಲ್ಲಿ ಮಹತ್ವದ ಕೃತಿ. ‘ಸುಧಾ’ವಾರಪತ್ರಿಕೆಯ ‘ವಿಚಾರಲಹರಿ’ ಅಂಕಣಕ್ಕೆ ಬರೆದ ಲೇಖನಗಳ ಸಂಕಲನ ಈ ಕೃತಿ. ಆಯಾ ಕಾಲಘಟ್ಟದ ರಾಜಕೀಯ, ಸಾಮಾಜಿಕ, ಆರ್ಥಿಕ ವಿದ್ಯಮಾನಗಳನ್ನು ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಕಟ್ಟಿಕೊಟ್ಟಿರುವ ಈ ಲೇಖನಗಳ ವಿಷಯಗಳು ಇಂದಿಗೂ ಪ್ರಸ್ತುತವಾಗಿರುವುದೇ ಈ ಕೃತಿಯ ವಿಶಿಷ್ಟ ಗುಣ. ಸದಾಕಾಲಕ್ಕೂ ಸಲ್ಲುವ ತಾತ್ವಿಕ ಮೌಲ್ಯಗಳನ್ನು ಮೂಡ್ನಾಕೂಡು ಚಿನ್ನಸ್ವಾಮಿ ಅವರು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ.

ಇಲ್ಲಿನ ಬರಹಗಳು ಕೇವಲ ಬೌದ್ಧಿಕ ಒಣಚರ್ಚೆಗಳಾಗದೇ ವಿಷಯದ ಆಳಕ್ಕಿಳಿದು ಅಲ್ಲಿನ ನಿಜದ ನೆಲೆಯನ್ನು ತೆರೆದಿಡುವಂಥವು. ಸೂಕ್ಷ್ಮಮನಸ್ಸಿನ ಲೇಖಕರು ತಮ್ಮ ಕಾಲಘಟ್ಟದ ವಿದ್ಯಮಾನಗಳ, ಸಾಂಸ್ಕೃತಿಕ ರಾಜಕಾರಣ, ದಮನಿತ ಮತ್ತು ಅಂಚಿನ ಸಮುದಾಯಗಳ ತಲ್ಲಣಗಳನ್ನು ನಿರ್ಭಿಡೆಯಿಂದ ಬರಹದಲ್ಲಿ ದಾಖಲಿಸಿದ್ದಾರೆ.

ಇಲ್ಲಿರುವ ಬಹುಪಾಲು ಬರಹಗಳು ಮುಕ್ತದಾರಿಯಂಥವು. ಅಂದರೆ ಲೇಖಕರು ತಮ್ಮ ವಿಚಾರಧಾರೆಗಳನ್ನು ಓದುಗರ ಮೇಲೆ ಬಲವಂತವಾಗಿ ಹೇರದೆ, ತಾತ್ವಿಕ ನೆಲೆಯಲ್ಲಿ ಚರ್ಚಿಸುತ್ತಾರೆ. ಓದುಗರು ತಮ್ಮ ನಿಲುವು– ವಿಚಾರಗಳನ್ನು ಸೇರಿಸಿಕೊಂಡೇ ಈ ಬರಹಗಳನ್ನು ಓದಬಹುದು. ಅದುವೇ ಇಲ್ಲಿನ ಬರಹಗಳ ವಿಶಿಷ್ಟ ಗುಣ. ನೈತಿಕ, ಸಾಂಸ್ಕೃತಿಕ ಶಿಕ್ಷಣದ ಅನುಸಂಧಾನಗಳ ಹೂರಣವೇ ಈ ಕೃತಿ. ಕನ್ನಡದಲ್ಲಿ ವಿಚಾರವಾದದ ಜತೆಗೆ ಬೌದ್ಧ ತಾತ್ವಿಕ ನೆಲೆಗಳನ್ನು ಒಳಗೊಂಡ ಅಪರೂಪದ ಕೃತಿ ಇದಾಗಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಸುಮ್ಮನೇ ತೇಲಿಸಿ ಮಾತನಾಡಬಹುದಾದ ವಿಷಯಗಳು ಇಲ್ಲಿ ತಾತ್ವಿಕ ಚೌಕಟ್ಟನ್ನು ಪಡೆದುಕೊಂಡಿವೆ. ಅಷ್ಟೇ ಅಲ್ಲ ತಮ್ಮದೇ ಆದ ವಿಶಿಷ್ಟ ಮಾದರಿಯೊಂದನ್ನು ಇಲ್ಲಿನ ಬರಹಗಳು ರೂಪಿಸಿವೆ.

ಚಿನ್ನಸ್ವಾಮಿ ಅವರ ಆಳವಾದ ಓದು ಮತ್ತು ಅನುಭವಗಳ ಪ್ರತಿಬಿಂಬ ಪ್ರತಿ ಲೇಖನದಲ್ಲೂ ಗೋಚರಿಸುತ್ತದೆ. ಓದಿದ್ದರಲ್ಲಿ ‘ಅಂತಸ್ಥ’ವಾದ ವಿಚಾರಗಳನ್ನು ಅತಿ ಸರಳ ನೆಲೆಯಲ್ಲಿ ಲೇಖಕರು ಓದುಗರಿಗೆ ಎಟಕುವಂತೆ ಮಾಡಿರುವುದೇ ಈ ಕೃತಿಯ ಹೆಗ್ಗಳಿಕೆ. ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಸಂಗ್ರಹಯೋಗ್ಯ ಕೃತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT