ದೊಡ್ಡ ಸಾಮಗರ ಜೀವಿತಾವಧಿಯಲ್ಲಿ (1911-1999) ಈಗಿನಂತೆ ಸಾಮಾಜಿಕ ಮಾಧ್ಯಮಗಳೇನೂ ಇಲ್ಲದ ಕಾರಣದಿಂದಾಗಿ, ಅವರ ಜೀವನ ಚರಿತ್ರೆಗೆ ಚಾರಿತ್ರಿಕ ದಾಖಲೆಗಳಿಲ್ಲ. ಆದರೂ, ಸಾಮಗರ ಒಡನಾಡಿಗಳು, ಸ್ವಂತ ಅನುಭವಗಳು, ಪುತ್ರರು, ಸಹೋದರರು, ಅಭಿಮಾನಿಗಳು, ಸಹ ಕಲಾವಿದರ ಕಡೆಯಿಂದ ಅವರ ಬಗೆಗೆ ಕೇಳಿ ತಿಳಿದುಕೊಂಡು, ಜೊತೆಗೆ ತಮ್ಮ ಕಲ್ಪನಾಶಕ್ತಿಯೊಂದಿಗೆ ಆ ಘಟನೆಗಳ ಮರುಸೃಷ್ಟಿಯೊಂದಿಗೆ ದಿನೇಶ ಉಪ್ಪೂರರು ಈ ಅಮೂಲ್ಯ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಯಕ್ಷಗಾನದ ಮಟ್ಟಿಗೆ ಇದೊಂದು ಸಂಗ್ರಹಯೋಗ್ಯ ಕೈಪಿಡಿಯಾಗಬಲ್ಲುದು. ನಿರೂಪಣಾ ಶೈಲಿಯು ಅನನ್ಯವಾದುದರಿಂದ ಇದನ್ನು ಜೀವನ ಚರಿತ್ರೆ ಎನ್ನುವುದಕ್ಕಿಂತಲೂ ಆ ಕಾಲದ ಏರಿಳಿತಗಳನ್ನು, ಯಕ್ಷಗಾನದ ಇತಿಹಾಸವನ್ನಷ್ಟೇ ಅಲ್ಲದೆ, ಸಾಮಾಜಿಕ ಸ್ಥಿತ್ಯಂತರಗಳ ಮೇಲೆ ಬೆಳಕುಚೆಲ್ಲುವ ಕೃತಿ ಎನ್ನಬಹುದು.