ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನಾಕ್ಷಿಯ ಸೌಗಂಧ: ಸಂಶೋಧನೆಯ ದಾರಿಯಲ್ಲಿ ರಸಿಕತೆಯ ಸೌಗಂಧ

Last Updated 25 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬಿ.ಜಿ.ಎಲ್‌. ಸ್ವಾಮಿ ಕನ್ನಡದ ಶ್ರೇಷ್ಠ ಲೇಖಕರಲ್ಲಿ ಒಬ್ಬರು; ಹಲವು ಕ್ಷೇತ್ರಗಳಲ್ಲಿ ಪರಿಣತಿಯನ್ನು ಸಾಧಿಸಿದ್ದ ಪ್ರತಿಭಾವಂತ. ಇಷ್ಟನ್ನೇ ಹೇಳಿದರೆ ಅವರ ಬಗ್ಗೆ ಪೂರ್ಣ ಹೇಳಿದಂತೆ ಆಗದು. ಅವರು ಜಗತ್ತಿನ ಶ್ರೇಷ್ಠ ಸಸ್ಯವಿಜ್ಞಾನಿಗಳಲ್ಲಿ ಒಬ್ಬರು. ಅವರ ‘ಹಸುರುಹೊನ್ನು’ ಕೃತಿ ಸಸ್ಯಪ್ರಪಂಚದ ಅದ್ಭುತದರ್ಶನವನ್ನು ಸೊಗಸಾದ ಭಾಷೆ, ಅಪೂರ್ವ ಶೈಲಿಯ ಮೂಲಕ ಮಾಡಿಕೊಡುತ್ತದೆ.

ಹೀಗೆಯೇ ಅವರ ‘ಕಾಲೇಜುರಂಗ’, ‘ಕಾಲೇಜುತರಂಗ’, ‘ಅಮೆರಿಕದಲ್ಲಿ ನಾನು’, ‘ನಮ್ಮ ಹೊಟ್ಟೆಯಲ್ಲಿ ಅಮೆರಿಕ’, ‘ಪಂಚಕಲಶಗೋಪುರ’, ‘ಸಾಕ್ಷಾತ್ಕಾರದ ದಾರಿಯಲ್ಲಿ’– ಇಂಥ ಹಲವು ಸಾರ್ಥಕ ಕೃತಿಗಳನ್ನು ಕೊಟ್ಟವರು ಸ್ವಾಮಿ. ಇತ್ತೀಚೆಗಷ್ಟೆ ಅವರ ಜನ್ಮಶತಮಾನೋತ್ಸವ ನಡೆಯಿತು. (ಜನನ: 1918ರ ಫೆಬ್ರುವರಿ 5; ನಿಧನ: 1980 ನವೆಂಬರ್‌ 2) (ಈ ಆಚರಣೆ ಯಾವ ಪ್ರಮಾಣದಲ್ಲಿ, ಯಾವ ರೀತಿಯಲ್ಲಿ ನಡೆಯಬೇಕಿತ್ತೋ ಹಾಗೆ ನಡೆಯಿತೆ– ಎಂಬುದು ಇಲ್ಲಿ ಅಪ್ರಸ್ತುತ ಪ್ರಶ್ನೆಯೆನ್ನಿ!) ಈ ಸಂದರ್ಭದಲ್ಲಿ ಬಿ.ಜಿ.ಎಲ್‌. ಸ್ವಾಮಿ ಅವರ ಬಿಡಿ ಲೇಖನಗಳ ಸಂಗ್ರಹವೊಂದು ಪ್ರಕಟವಾಗಿದೆ; ಅದೇ ‘ಮೀನಾಕ್ಷಿಯ ಸೌಗಂಧ’. ಈ ಸಂಗ್ರಹದಲ್ಲಿ ಅವರ ಒಟ್ಟು 24 ಪ್ರಬಂಧಗಳಿವೆ.

‘ಮೀನಾಕ್ಷಿಯ ಸೌಗಂಧ’. ಇದು ಸ್ತುತ್ಯರ್ಹವಾಗಿರುವ ಕೃತಿ ಸಂಪಾದನೆ. ಸ್ವಾಮಿ ಅವರ ಅಲಭ್ಯ ಪ್ರಬಂಧಗಳು ಒಂದೆಡೆ ಸಿಕ್ಕುವಂತಾಗಿದೆ. ವಿಜ್ಞಾನ, ಚರಿತ್ರೆ, ಸಾಹಿತ್ಯ ಮತ್ತು ಕಲೆ– ಹೀಗೆ ನಾಲ್ಕು ವಿಭಾಗಗಳಲ್ಲಿ ಪ್ರಬಂಧಗಳನ್ನು ಅಳವಡಿಸಲಾಗಿದೆ. ವಿಜ್ಞಾನ ವಿಭಾಗದಲ್ಲಿರುವ ಲೇಖನಗಳನ್ನು ಓದಿದಾಗ ಸ್ವಾಮಿ ಅವರು ವಿಜ್ಞಾನಿ ಎನ್ನುವುದರ ಜೊತೆಗೆ ಅವರು ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಎಷ್ಟು ಸಮರ್ಥವಾಗಿಯೂ ಸರಳವಾಗಿಯೂ ಬರೆಯಬಲ್ಲರು ಎನ್ನುವುದು ಕೂಡ ತಿಳಿಯುತ್ತದೆ. ಹೀಗೆಯೇ ಅವರು ಚರಿತ್ರೆಯನ್ನು ಕುರಿತು ಬರೆದಿರುವ ಪ್ರಬಂಧಗಳನ್ನು ಓದಿದಾಗ ಅವರು ಇತಿಹಾಸ ಸಂಶೋಧಕರೂ ಹೌದೆಂದು ತಿಳಿಯುತ್ತದೆ.

ಅವರ ಸಾಹಿತ್ಯದ ಪ್ರಬಂಧಗಳನ್ನು ಓದಿದರೆ ಅವರೊಬ್ಬ ಕನ್ನಡದ ಪ್ರಮುಖ ಸಾಹಿತಿ, ಶ್ರೇಷ್ಠ ಹಾಸ್ಯಸಾಹಿತಿ ಎಂದು ಮನವರಿಕೆಯಾಗುತ್ತದೆ. ಕಲೆಯ ಬಗ್ಗೆ ಅವರ ಪ್ರಬಂಧ ಓದುವಾಗಲಂತೂ ಕಲಾವಿದರಲ್ಲದವರಿಗೆ ಆ ಮಟ್ಟದ ಸೂಕ್ಷ್ಮತೆಗಳು ದಕ್ಕದು ಎನ್ನುವುದರಲ್ಲಿ ಸಂಶಯವೇ ಉಳಿಯದು. ಹಾಗಾದರೆ ಬಿ.ಜಿ.ಎಲ್‌. ಸ್ವಾಮಿ ಅವರನ್ನು ಏನೆಂದು ಕರೆಯವುದು? ವಿಜ್ಞಾನಿಯೆ? ಸಾಹಿತಿಯೆ? ಕಲಾವಿದರೆ? ಇತಿಹಾಸತಜ್ಞರೆ? ಎಲ್ಲವೂ ಹೌದೆನ್ನಿ! ಮಾತ್ರವಲ್ಲ, ಈ ಎಲ್ಲ ಆಯಾಮಗಳನ್ನೂ ಒಳಗೊಂಡ ರಸಸಿದ್ಧ ವ್ಯಕ್ತಿತ್ವ ಅವರ ಪ್ರತಿ ಬರಹದಲ್ಲೂ ಎದ್ದುಕಾಣುತ್ತದೆ. ಕನ್ನಡನಾಡಿಗೆ ಒದಗಿದ ವರಗಳಲ್ಲಿ ಒಬ್ಬರು ಅವರು.

ಕನ್ನಡದಲ್ಲಿಯ ವಿಜ್ಞಾನ ಬರವಣಿಗೆಗೆ ಸ್ವಾಮಿಯವರಂಥ ಶ್ರೇಷ್ಠ ವಿಜ್ಞಾನಿ ದೊರೆತದ್ದು ಅದೃಷ್ಟವೇ ಸರಿ. ‘ಆರ್ಜಿತ ಗುಣಗಳೂ, ಅನುವಂಶೀಯತೆಯೂ’ ಲೇಖನ ಅವರಿಂದ ಪ್ರಕಟವಾದದ್ದು 1939ರಲ್ಲಿ. ಅವರಿಗಿನ್ನೂ ಇಪ್ಪತ್ತರ ಹರೆಯ. ಆ ಹೊತ್ತಿಗೇ ಅವರು ಸಿದ್ಧಿಸಿಕೊಂಡಿದ್ದ ಭಾಷಾಶೈಲಿ ಹಾಗೂ ವಿಷಯತಜ್ಞತೆ– ಎರಡೂ ಬೆರಗುಗೊಳಿಸುತ್ತವೆ. ಜನಪ್ರಿಯ ವಿಜ್ಞಾನವನ್ನು ಹೇಗೆ ಬರೆಯಬೇಕೆಂಬುದಕ್ಕೆ ಅವರ ಪ್ರಬಂಧಗಳೂ ಪುಸ್ತಕಗಳೂ ಮಾದರಿಗಳಾಗಿವೆ. ‘ಕೊಡುಂಬಾಳೂರಿನಲ್ಲಿ ಕನ್ನಡ’ದಂಥ ಪ್ರಬಂಧಗಳು ಅವರ ಆಳವಾದ ಸಾಹಿತ್ಯ ಮತ್ತು ಇತಿಹಾಸ ಜ್ಞಾನಕ್ಕೆ ನಿದರ್ಶನಗಳು. ಈ ಸಂಕಲನದಲ್ಲಿರುವ ನಾಲ್ಕಾರು ಪ್ರಬಂಧಗಳ ಶೀರ್ಷಿಕೆಯನ್ನು ನೋಡಿದರೂ ಸಾಕು, ಸ್ವಾಮಿ ಅವರ ವಿಷಯ ವೈವಿಧ್ಯದ ಹರವು ತಿಳಿಯುತ್ತದೆ. ‘ಜೀವವಿಜ್ಞಾನದ ತಿಲೋತ್ತಮೆ’, ‘ಅಂತರ ಬುಡಕಟ್ಟಿನವರ ಮದುವೆಗಳಾದಾಗ’, ‘ಕದಂಬ’, ‘ರಾಯರ ಅಭ್ಯಂಜನ’, ‘ಕೊಂಗುದೇಶರ ರಾಜರು’, ‘ಆದಿಪಂಪನ ಕೃತಿಗಳಲ್ಲಿ ದೋಹದ ಪ್ರಕರಣ’, ‘ಬಸವಣ್ಣನವರ ಸಸ್ಯ ಸಂಬಂಧದ ಸೂಕ್ತಿಗಳು’, ‘ಜೇಡರ ದಾಸಿಮಯ್ಯನ ಮತ ವಿಚಾರ’, ‘ಕಲಾವಿದ ಕೆ. ವೆಂಕಟಪ್ಪ’, ‘ಪುರಂದರದಾಸರು ಮತ್ತು ಬಿ.ವಿ. ಕಾರಂತರು’ – ಈ ಪ್ರಬಂಧಗಳು ಅವರ ಆಸಕ್ತಿ– ಸಂಶೋಧನೆಗಳು ಹತ್ತು ಹಲವು ವಿಷಯಗಳಲ್ಲಿ ವ್ಯಾಪಿಸಿಕೊಂಡಿರುವುದನ್ನು ಸೂಚಿಸುತ್ತವೆ. ಈ ಕ್ಷೇತ್ರಗಳಲ್ಲಿ ಅವರ ತಿಳಿವಳಿಕೆ ಕೇವಲ ಮೇಲುಮೇಲಿನ ಮಾಹಿತಿ ಮಟ್ಟದ್ದು ಅಲ್ಲ; ಆಯಾ ಕ್ಷೇತ್ರದ ಆಳವಾದ ಪರಿಜ್ಞಾನ ಎನ್ನುವುದನ್ನು ಗಮನಿಸಲೇಬೇಕು.

ವೆಂಕಟಪ್ಪನವರನ್ನು ಕುರಿತ ಸ್ವಾಮಿಯವರ ಪ್ರಬಂಧ ರಸವತ್ತಾದ ಬರಹ. ‘ವೆಂಕಟಪ್ಪ ಚಿತ್ರಶಾಲೆ’ಯ ಬಗ್ಗೆ ಅವರ ಮಾತುಗಳು ನಮ್ಮ ಕಲಾಹೀನ ಮನೋಧರ್ಮಕ್ಕೆ ಹಿಡಿದ ಕನ್ನಡಿಯಂತಿದೆ. ಸೂರ್ಯಕಾಂತಿಯನ್ನು ‘ಈ ಪರಿಯ ಪ್ರಭೆ’ ಎಂದು ವರ್ಣಿಸುತ್ತ, ಸೂರ್ಯಕಾಂತಿ ಬೀಜದ ಎಣ್ಣೆಯ ಭವಿಷ್ಯ ಆಶಾದಾಯಕವಾಗಿದೆ ಎಂಬ ಮಾತು ಇಂದು ಸತ್ಯವಾಗಿದೆಯಷ್ಟೆ. ಪುಸ್ತಕದ ಶೀರ್ಷಿಕೆಗೆ ಕಾರಣವಾಗಿರುವ ಹಾಸ್ಯಪ್ರಬಂಧ ಒಂದು ವಿಶಿಷ್ಟ ಪ್ರಯೋಗವಾಗಿಯೂ ಗಮನ ಸೆಳೆಯುತ್ತದೆ. ಸ್ವಾಮಿ ಅವರು ಸಂಶೋಧನೆಗೆ ಸಿದ್ಧಮಾಡಿಟ್ಟುಕೊಳ್ಳುತ್ತಿದ್ದ ಕಾರ್ಡುಗಳ ಮಾದರಿಯ ಜೊತೆಗೆ, ಅವರ ಪತ್ರಗಳ ಮಾದರಿಯನ್ನೂ ಕೊಟ್ಟಿರುವುದು ಕೃತಿಯ ಉಪಯೋಗವನ್ನು ಹೆಚ್ಚಿಸಿದೆ. ಸಂಸ್ಕೃತಿ, ವಿಜ್ಞಾನ, ಇತಿಹಾಸ, ಕಲೆ, ಸಾಹಿತ್ಯದ ಮಕರಂದವನ್ನು ಬಯಸುವವರೆಲ್ಲರಿಗೂ ಸಂಗ್ರಹಯೋಗ್ಯ ಕೃತಿ ‘ಮೀನಾಕ್ಷಿಯ ಸೌಗಂಧ’. ಶ್ರಮವಹಿಸಿ ಇಲ್ಲಿಯ ಪ್ರಬಂಧಗಳನ್ನು ಸಂಗ್ರಹಿಸಿರುವ ನಾಲ್ವರು ಸಂಗ್ರಹಕಾರರಿಗೂ ಕನ್ನಡ ಸಾರಸ್ವತಲೋಕದ ಕೃತಜ್ಞತೆಗಳು ಸಲ್ಲಲೇಬೇಕು.
**
ಮೀನಾಕ್ಷಿಯ ಸೌಗಂಧ (ಬಿಡಿ ಲೇಖನಗಳು)
ಲೇಖಕರು: ಬಿ. ಜಿ. ಎಲ್‌. ಸ್ವಾಮಿ
ಸಂಪಾದಕರು: ಟಿ. ಆರ್‌. ಅನಂತರಾಮು
ಎಸ್‌. ಎಲ್‌. ಶ್ರೀನಿವಾಸಮೂರ್ತಿ
ಜಿ. ಎನ್‌. ನರಸಿಂಹಮೂರ್ತಿ
ಕೆ. ಎಸ್‌. ಮಧುಸೂದನ
ಪ್ರಕಾಶಕರು: ವಸಂತ ಪ್ರಕಾಶನ
ನಂ. 360, 10ನೇ ‘ಬಿ’ ಮುಖ್ಯರಸ್ತೆ, 3ನೇ ಬ್ಲಾಕ್‌
ಜಯನಗರ, ಬೆಂಗಳೂರು – 560 011

ಪುಟಗಳು: 244
ಬೆಲೆ: ₹ 180
ಪ್ರಕಟನೆಯ ವರ್ಷ: 2018

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT