ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ‘ಭೂಮ್ತಾಯಿ’ಯೊಳಗಿನ ‘ಬಂಗಾರದ ಮನುಷ್ಯ’

Last Updated 30 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ವರನಟ ಡಾ.ರಾಜ್‌ಕುಮಾರ್‌ ನಟನೆಯ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿದ ಬಳಿಕ ಹುಮ್ಮಸ್ಸಿನಿಂದ ಕಾಂಕ್ರಿಟ್‌ ಕಾಡಿನಿಂದ ಮಣ್ಣಿಗೆ ಮರಳಿ ಚಿನ್ನ ಬೆಳೆದವರೆಷ್ಟೋ! ಅದೇ ರೀತಿ ಬೇರು ತೊರೆದು ಉದ್ಯೋಗಕ್ಕಾಗಿ ನಗರಕ್ಕೆ ಹೆಜ್ಜೆ ಇಟ್ಟು ಕಳೆದ ಎರಡೂವರೆ ವರ್ಷದಲ್ಲಿ ಕೋವಿಡ್‌ ಸುಳಿಯೊಳಗೆ ಸಿಲುಕಿ ಉದ್ಯೋಗಕ್ಕೆ ಕುತ್ತು ಬಂದಾಗ ಅನಿವಾರ್ಯವಾಗಿ ಮತ್ತೆ ಬೇರಿಗೆ ಮರಳಿದವರೂ ಸಾವಿರಾರು ಮಂದಿ. ಇಂಥ ಎಳೆಯ ಕಥೆಯೊಂದನ್ನು ಹೊತ್ತು ಬಂದಿದೆ ‘ಭೂಮ್ತಾಯಿ’.

‘ಭೂಮ್ತಾಯಿ’ ಜಾಣಗೆರೆ ವೆಂಕಟರಾಮಯ್ಯ ಅವರ ಹತ್ತನೇ ಕಾದಂಬರಿ. ಕಾದಂಬರಿ ಬರವಣಿಗೆ ತಮಗಿಷ್ಟವಾದ ಪ್ರಕಾರವೆಂದು ಹೇಳುವ ವೆಂಕಟರಾಮಯ್ಯನವರು, ‘ಜಗದೀಶ’ ಎಂಬ ಮುಖ್ಯಪಾತ್ರ ಹಾಗೂ ಆ ಪಾತ್ರವನ್ನಾಧರಿಸಿ ಬೆಳೆದ ಬಳ್ಳಿಗಳ ಬದುಕನ್ನು ಎಳೆಎಳೆಯಾಗಿ ಹಿಡಿದಿಟ್ಟಿದ್ದಾರೆ. ಕೋವಿಡ್‌ ಆವರಿಸಿದ ಬಳಿಕ ಮೊದಲು ಕತ್ತರಿ ಬಿದ್ದಿದ್ದು ‘ದೊಡ್ಡ ಸಂಬಳ’ದವರಿಗೆ. ಜಗದೀಶನೂ ಇದೇ ಶ್ರೇಣಿಯ ವೇತನದವನು. ಸ್ವಂತ ಕಾರನ್ನೇ ಟ್ಯಾಕ್ಸಿಯನ್ನಾಗಿ ಓಡಿಸಿ ಜೀವನ ಸಾಗಿಸಲು ಪ್ರಯತ್ನಿಸಿದ್ದ ಜಗದೀಶ ಆರು ತಿಂಗಳ ಬಳಿಕ ಯಾವುದೂ ಕೈಹಿಡಿಯದೇ ಇದ್ದಾಗ ಕುಗ್ಗಿ ಹೋಗಿ ಬೇರಿನ ದಾರಿ ಹಿಡಿದಿದ್ದ. ಆತನ ದುಃಖ, ಅಳು ಗುಪ್ತಗಾಮಿನಿ. ಇದು ಜಗದೀಶನ ತಂದೆ ರಾಮಪ್ಪನಿಗೆ ತಿಳಿಯುವ ವೇಳೆ ಕೃತಿಯಲ್ಲಿ ಮೂರನೇ ಅಧ್ಯಾಯ ದಾಟಿರುತ್ತದೆ. ಹೀಗಾಗಿಯೇ ಇಲ್ಲಿ ಪಾತ್ರಗಳ ಜೀವನ, ಅವುಗಳ ಸಂಭಾಷಣೆಯು ಎಷ್ಟು ಆಳವಾಗಿದೆಯೋ ಕೃತಿಯ ಗಾತ್ರವೂ ಅಷ್ಟೇ ಹಿರಿದಾಗಿದೆ. ನಗರಕ್ಕೆ ಒಗ್ಗಿದ ಬಳಿಕ ಜನರ ಬದಲಾದ ಜೀವನ ಶೈಲಿಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕಾದ ಪರಿಸ್ಥಿತಿಯನ್ನು ಜಗದೀಶನ ಪಾತ್ರ ಪ್ರತಿಬಿಂಬಿಸಿದೆ.

ಜಗದೀಶನ ಪಾತ್ರವನ್ನು ‘ಬಂಗಾರದ ಮನುಷ್ಯ’ನಿಗೂ ಹೋಲಿಕೆ ಮಾಡಬಹುದು. ತಾಳ್ಮೆ, ಶ್ರಮ, ನಂಬಿಕೆ ಇವನ ಆಸ್ತಿ. ಆತನ ಅಣ್ಣ ‘ಚೆಲುವರಾಜ’ನ ನಡೆ ತದ್ವಿರುದ್ಧ. ಶ್ರಮದಿಂದ ದುಡಿದು ಚಿನ್ನವನ್ನೂ ಬೆಳೆಯುವ ಸಾಮರ್ಥ್ಯವಿರುವ ರಾಮಪ್ಪ ದಂಪತಿಗೆ ಅಲ್ಲಾಭಕ್ಷ ಬೆನ್ನೆಲುಬು. ತನ್ನ ಪತ್ನಿಯ ಒಡವೆಯನ್ನು ಗಿರವಿ ಇಟ್ಟು ರಾಮಪ್ಪನಿಗೆ ಭೂಮಿ ಒದಗಿಸಿಕೊಡುವಂಥ ಕಲ್ಲುಸಕ್ಕರೆ ಹೃದಯದವನು. ರಾಮಪ್ಪ–ಅಲ್ಲಾಭಕ್ಷರೆಂಬ ಪಾತ್ರಗಳೆರಡನ್ನು ಅರ್ಥೈಸಿಕೊಂಡರೆ ಅಥವಾ ಕೇವಲ ಓದಿದರೂ ಪ್ರಸ್ತುತ ಎದುರಾಗಿರುವ ಧರ್ಮದ್ವೇಷ ಮಂಜಿನಂತೆ ಕರಗುತ್ತದೆ. ಗ್ರಾಮೀಣ ಭಾಗಕ್ಕೂ ಕಾಲಿಟ್ಟಿರುವ ದ್ವೇಷ ಭಾವನೆಗೆ ಈ ಕೃತಿ ಮದ್ದು. ಇದನ್ನು ಮೀರಿ ಜಗದೀಶನ ಮಗನಿಗೂ ಅಲ್ಲಾಭಕ್ಷನ ಪುತ್ರಿಗೂ ಆಗುವ ಮದುವೆ ಸಾಮಾಜಿಕ ಸಾಮರಸ್ಯದ ಮಹತ್ವವನ್ನು ಬಿಂಬಿಸುತ್ತದೆ.

ಕಾದಂಬರಿಯಲ್ಲಿ ಇರುವ ವಿಷಯಗಳೆಲ್ಲವೂ ವಾಸ್ತವಕ್ಕೆ ಬಲು ಹತ್ತಿರ. ಹಳ್ಳಿಗಳಲ್ಲಿ ಏರಿಕೆಯಾಗುತ್ತಿರುವ ಭೂಮಿಯ ಬೆಲೆ, ಸ್ನೇಹದ ನಡುವೆಯೂ ‘ಬಷೀರ ಅಹ್ಮದ್‌’ ಮನಸ್ಸಿನಲ್ಲಿ ಹುಟ್ಟಿಕೊಂಡ ಜಾತಿ–ಮತದ ಪ್ರಶ್ನೆ,ಶಿವಪ್ಪ ದಂಪತಿಯ ವ್ಯಥೆ ಹೀಗೆ ಪುಟ ಸಂಖ್ಯೆಗಳುರುಳಿದಂತೆ ಅಕ್ಕಪಕ್ಕದಲ್ಲೇ ನಡೆಯುವ ಘಟನೆಗಳಂತೆ ಹಾದುಹೋಗುತ್ತವೆ. ರಾಜಕಾರಣ, ಭೂಮಿಗೇ ವಿಷ ಉಣಿಸುವ ಆಸೆ, ಪೋಷಕರ ಅನಾಥಪ್ರಜ್ಞೆ ಮುಂತಾದ ವಿಷಯಗಳು ಇಲ್ಲಿ ಸೂಚ್ಯವಾಗಿವೆ. ಸಾಲುಸಾಲು ಪಾತ್ರಗಳ ಮುಖಾಂತರ ಬದುಕಿನ ವಿವಿಧ ಆಯಾಮಗಳನ್ನು ‘ಭೂಮ್ತಾಯಿ’ ತೆರೆದಿಡುತ್ತದೆ. ಆರಂಭದಲ್ಲೇ ಬರುವ ‘ಹೃದಯದಲ್ಲಿ ಪ್ರಾಮಾಣಿಕತೆಯಿದ್ದಾಗ, ಇಡೀ ಪ್ರಪಂಚ ಆಯುಧ ಕೆಳಗಿಡುತ್ತದೆ’ ಎನ್ನುವ ವಿವೇಕಾನಂದರ ಮಾತು ಇಡೀ ಕೃತಿಗೆ ಅಡಿಪಾಯವಾಗಿದೆ.

ಕೃತಿ: ಭೂಮ್ತಾಯಿ

ಲೇ: ಜಾಣಗೆರೆ ವೆಂಕಟರಾಮಯ್ಯ

ಪ್ರ: ಶಶಿ ಪಬ್ಲಿಕೇಷನ್ಸ್‌

ಸಂ: 9448747281

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT