ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ತಥಾಗತ ಬುದ್ಧ ತೋರಿದ ಧಮ್ಮಪದ

Published 23 ಏಪ್ರಿಲ್ 2023, 2:56 IST
Last Updated 23 ಏಪ್ರಿಲ್ 2023, 2:56 IST
ಅಕ್ಷರ ಗಾತ್ರ

-ಡಾ.ಕಬ್ಬಿನಾಲೆ ವಸಂತ ಭಾರದ್ವಾಜ

ಕ್ರಿ.ಪೂ. ನಾಲ್ಕು ಅಥವಾ ಮೂರನೆಯ ಶತಮಾನದ ’ಧಮ್ಮಪದ’ ಭಗವಾನ್ ಬುದ್ಧನ ಉಪದೇಶಗಳ ಸುಂದರ ಸಂಪುಟ. 26 ಸರ್ಗಗಳಲ್ಲಿ 423 ಗಾಥೆಗಳು ಮತ್ತು 305 ಅರ್ಥಕಥೆಗಳಿರುವ ಈ ಸಂಕಲನವನ್ನು ಜಗತ್ತಿನ ನೂರಾರು ವಿದ್ವಾಂಸರು ವಿವಿಧ ಭಾಷೆಗಳಿಗೆ ಅನುವಾದ ಮಾಡಿದ್ದಾರೆ. ಪಾಲಿಭಾಷೆಯಲ್ಲಿರುವ ಅದರ ಮೂಲಪಠ್ಯವು ಲ್ಯಾಟಿನ್ (ವಿನ್ಸೆಂಟ್ ಫಾಸ್‌ಬೋಲ್-1855), ಜರ್ಮನ್ (ಎ.ವೆಬರ್ ಪಾಲಿ-1860), ಫ್ರೆಂಚ್ (ಫೆರ್ನಾಂಡ್ ಹೂ-1878), ಇಂಗ್ಲಿಷ್ (ಮ್ಯಾಕ್ಸ್ ಮುಲ್ಲರ್-1870), ಬಂಗಾಳಿ (ಚಾರುಚಂದ್ರ ಬಸು-1904), ಸಂಸ್ಕೃತ (ಸ್ವಾಮಿ ಹರಿಹರಾನಂದ ಅರಣ್ಯ-1905) ಮುಂತಾದ ಭಾಷೆಗಳಲ್ಲಿ ಈಗಾಗಲೇ ಜಗದಗಲ ಪಸರಿಸಿದೆ. ಕನ್ನಡದಲ್ಲಿ ಈ ಕುರಿತ ಮೊದಲ ಲೇಖನಮಾಲೆಯನ್ನು ಬರೆದವರು ರಾವ್ ಬಹದ್ದೂರ್ ಎಂ.ಶಾಮರಾವ್ (1888). ’ಹಿತಬೋಧಿನಿ’ ಪತ್ರಿಕೆಯಲ್ಲಿ ಆ ಲೇಖನಗಳು ಪ್ರಕಟವಾಗಿವೆ ಎಂದು ತಿಳಿದಿದ್ದರೂ ಇದುವರೆಗೆ ಲಭ್ಯವಾಗಿರಲಿಲ್ಲ.1906ರಲ್ಲಿ ಪ್ರಕಟವಾದ ಕನ್ನಡ ಪಠ್ಯಪುಸ್ತಕ (ಸಂ: ಎ.ಮಾರ್ಸ್‌ಡೆನ್ ಮತ್ತು ಎಸ್.ಜಿ.ನರಸಿಂಹಾಚಾರ್ಯ)ದಲ್ಲಿ ದೊರೆತ ಐದು ಪಾಠಗಳನ್ನು ಇತ್ತೀಚೆಗೆ ಸಂಶೋಧಿಸಿ’ಬುದ್ಧನಜೀವನ ಮತ್ತು ಬೋಧನೆ’ ಎಂಬ ಕೃತಿಯನ್ನು ಪ್ರೊ. ಎಸ್. ಶಿವಾಜಿ ಜೋಯಿಸ್‌ ಅವರು ಮರುಪ್ರಕಟಿಸಿದ್ದಾರೆ. ಇದರೊಂದಿಗೆ ತಥಾಗತ ಬುದ್ಧನು ತೋರಿದ ’ಧಮ್ಮಪದ’ದ ಅನುವಾದವೂ ಬೆಳಕು ಕಂಡಿದೆ.

ಕನ್ನಡದಲ್ಲಿ ’ಧಮ್ಮಪದ’ದ ಕುರಿತಾಗಿ ಮೊದಲ ಕೃತಿ ಬಿದರೆ ಅಶ್ವತ್ಥನಾರಾಯಣ ಶಾಸ್ತ್ರಿಗಳು ರಚಿಸಿದ’ಬೌದ್ಧಾವತಾರ’ (1907).ಅವರೇ ರಚಿಸಿದ ’ಧರ್ಮಪದವೆಂಬ ಬುದ್ಧಗೀತೆಯು’ (1908) ಮತ್ತು ’ಧರ್ಮಸಾಮ್ರಾಜ್ಯಮ್‌ ಅಥವಾ ಜಪಾನರುನ್ನತಿಗೆ ಮೂಲಾಧಾರ’ (1913) ಎಂಬ ಕೃತಿಗಳೂ ಗಮನಾರ್ಹ. ಬಿದರೆ ಅಶ್ವತ್ಥಾನಾರಾಯಣ ಶಾಸ್ತ್ರಿಗಳು ಮೂಲತಃ ತುಮಕೂರಿನ ಗುಬ್ಬಿ ತಾಲ್ಲೂಕಿನ ಬಿದರೆಯವರಾದರೂ ಮೈಸೂರು ಅರಸರ ಆಸ್ಥಾನ ವಿದ್ವಾಂಸರಾಗಿದ್ದವರು. ಅವರ ವೈಯಕ್ತಿಕ ಜೀವನದ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಅವರು ದಾರುಣ ಸಾವಿಗೆ ತುತ್ತಾದರೆಂದಷ್ಟೆ ಡಿವಿಜಿ ಅವರ ‘ಜ್ಞಾಪಕ ಚಿತ್ರಶಾಲೆ’ಯಿಂದ ತಿಳಿದುಬರುತ್ತದೆ.

’ಬೌದ್ಧಾವತಾರ’ ಬುದ್ಧನ ಜೀವನ ಚರಿತ್ರೆಯನ್ನು ಹೇಳಿದರೆ, ’ಬುದ್ಧಗೀತೆ’ ಧಮ್ಮಪದದ ಗಾಥೆಗಳನ್ನು ಅನುವಾದಿಸಿದ ಪ್ರಯತ್ನ. ಆದರೆ ಅದು ಪಾಲಿಯಿಂದ ಮಾಡಿದ ನೇರ ಅನುವಾದವಾಗಿರದೆ ಮ್ಯಾಕ್ಸ್‌ಮುಲ್ಲರನ ಇಂಗ್ಲಿಷ್‌ ಅನುವಾದವನ್ನು ಆಧರಿಸಿದೆ. ಆ ಕೃತಿಯ ಉಪೋದ್ಘಾತದಲ್ಲಿ ಶಾಸ್ತ್ರಿಯವರ ತಲಸ್ಪರ್ಶಿಯಾದ ವಿಶ್ಲೇಷಣೆ ತುಂಬಾ ಗಮನಾರ್ಹವಾದುದು. ಧಮ್ಮಪದವು ಭಾರತೀಯ ವೇದಾಂತದ ಪ್ರತಿಫಲನವೆಂಬುದು ಅವರಒಟ್ಟು ಗ್ರಹಿಕೆ. ಕಠ, ಮುಂಡಕ, ಶ್ವೇತಾಶ್ವತರ ಮುಂತಾದ 19 ಉಪನಿಷತ್ತುಗಳಿಂದ 49 ಸದೃಶವಾಕ್ಯಗಳು, ಶಂಕರಾಚಾರ್ಯರ ವಿವೇಕಚೂಡಾಮಣಿಯಿಂದ 24, ಮಹಾಭಾರತದಿಂದ 19, ಭಗವದ್ಗೀತೆಯಿಂದ 7 ಹೀಗೆ ಒಟ್ಟು 24 ಮೂಲಗಳಿಂದ ಒಟ್ಟು 104 ವಾಕ್ಯಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಅದ್ವೈತಕ್ಕೂ ಬೌದ್ಧಸಿದ್ಧಾಂತಕ್ಕೂ ಮುಖ್ಯವಾದ ವ್ಯತ್ಯಾಸವಿಲ್ಲವೆಂಬುದು ಅಶ್ವತ್ಥನಾರಾಯಣ ಶಾಸ್ತ್ರಿಗಳ ಪ್ರತಿಪಾದನೆ. ಆದಕಾರಣ ಶಂಕರಾಚಾರ್ಯರು ಹೊಸಮತವನ್ನು ಎಂದಿಗೂ ಸ್ಥಾಪಿಸಿಲ್ಲ; ಬುದ್ಧ ವೇದಾಂತವೇ ಅದ್ವೈತ ವೇದಾಂತವೆಂಬ ನವೀನ ನಾಮದಿಂದ ಪ್ರಕಾಶಿಸಿತು ಎಂಬ ನಿಲುವು ಅವರದು. ಶಂಕರಾಚಾರ್ಯರಿಗೆ ’ಪ್ರಚ್ಛನ್ನಬುದ್ಧ’ ಎಂಬ ಉಪಾಧಿಯಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶ್ರೀ ವೈ.ಸುಬ್ಬರಾವ್ (ಶ್ರೀ ಸಚ್ಚಿದಾನೇಂದ್ರ ಸ್ವಾಮೀಜಿಯವರ ಪೂರ್ವಾಶ್ರಮ) ಎಂಬುವರು ತಮ್ಮ ’ಧಮ್ಮಪದ-ಪ್ರವೇಶಿಕೆ’ಯಲ್ಲಿ ಇದನ್ನು ನಿರಾಕರಿಸುತ್ತಾ ಅನಾತ್ಮವಾದವನ್ನು ಹೇಳುವ ಬೌದ್ಧಮತಕ್ಕೂ, ಸರ್ವಾತ್ಮವಾದವನ್ನು ಹೇಳುವ ಅದ್ವೈತಕ್ಕೂ ಯಾವುದೊಂದು ಸಾಮ್ಯವೂ ಇರುವುದು ಸಾಧ್ಯವಿಲ್ಲ ಎಂಬ ಮಾತುಗಳನ್ನು ಹೇಳಿದ್ದಾರೆ. (ಪುಟ: 45)

ಪ್ರಸ್ತುತ ’ಧಮ್ಮಪದ’ ಪಾಲಿಭಾಷೆಯ ಮೂಲಪಠ್ಯವನ್ನು ಆಧರಿಸಿದ ಅನುವಾದಕೃತಿ. ಅದಕ್ಕೆ ಪ್ರಸ್ತಾವನೆಯಾಗಿ ಅರುವತ್ತು ಪುಟಗಳ ಭೂಮಿಕೆಯಲ್ಲಿ ಧಮ್ಮಪದದ ಕುರಿತು ಇದುವರೆಗೆ ಬಂದ ವಿವಿಧ ವಿದ್ವಾಂಸರ ಕೃತಿಗಳು, ಧಮ್ಮಪದದ ಶಬ್ದಾರ್ಥ ವಿವೇಚನೆ, ಅದು ಬುದ್ಧನ ಸ್ವಂತ ರಚನೆ ಹೌದೇ ಅಲ್ಲವೇ ಎಂಬ ಚರ್ಚೆ, ಅದರ ವಸ್ತುವಿಶೇಷತೆಯ ಸೋದಾಹರಣ ಚಿಂತನೆಗಳಿವೆ. 423 ಗಾಥೆಗಳ ಪಾಲಿಮೂಲ ಮತ್ತು ಕನ್ನಡ ಅನುವಾದ, ಅನ್ವಯಾನುಸಾರ ಪದವಿಂಗಡಣೆ, ವ್ಯಾಖ್ಯಾನ, ಅರ್ಥಕಥೆಯ ಸಂಗ್ರಹ ಮತ್ತು ಮರಳಿ ಮೊದಲ ಅನುವಾದದ ಜೋಡಣೆ ಹೀಗೆ ಗ್ರಂಥದ ರಚನಾ ವಿನ್ಯಾಸವಿದೆ. ಹಾಗಾಗಿ ಇದೊಂದು ನಿಜಾರ್ಥದ ಧಮ್ಮಪದದ ದೀಪಿಕೆ ಎನಿಸಿದೆ.

ಧಮ್ಮಪದದ 26 ವಗ್ಗ (ವರ್ಗ)ಗಳಲ್ಲಿ 21ನೆಯದು ಪ್ರಕೀರ್ಣಕವೆಂಬ ಹೆಸರಿನದು ಅರ್ಥಾತ್‌ ಅದು ಸಂಕೀರ್ಣವೆಂಬ ಪ್ರಕಾರದ್ದು. ಸಾಮಾನ್ಯವಾಗಿ ಅದೇ ಕೊನೆಯ ವಗ್ಗವಾಗಿರಬೇಕಿತ್ತು. ಆದರೆ ಅದರ ಬಳಿಕ ಐದು ವಗ್ಗಗಳಿರುವುದರಿಂದ ಅವುಗಳು ಪ್ರಕ್ಷೇಪವಿರಬಹುದೇ ಎಂಬ ಸಂದೇಹಕ್ಕೆ ಅವಕಾಶವಿದೆ ಎಂಬ ಸಂಪಾದಕರ ಅಭಿಪ್ರಾಯ ಸಹಜವಾದುದು. ಕೊನೆಯದಾದ ಬ್ರಾಹ್ಮಣ ವಗ್ಗದಲ್ಲಿ ಬರುವ ಮಾತರಂ ಪಿತರಂ ಹಂತ್ವಾ (294) ಎಂಬ ಒಗಟಿನಂತಹ ಪದ್ಯವು ಬುದ್ಧನ ಸಹಜಶೈಲಿಯಲ್ಲವೆಂಬ ನಿಲುವು ಕೂಡ ಸಮರ್ಥನೀಯವಾದುದು.ಧಮ್ಮಪದವು ಕಾವ್ಯಕೃತಿಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವ ಮೂಲಕ ಪ್ರಾಸ, ಛಂದೋಬಂಧ, ಪುನರಾವರ್ತನ, ಸಾದೃಶ್ಯ, ರೂಪಕ, ಪ್ರತಿಮೆ, ಶಬ್ದಚಮತ್ಕೃತಿಗಳು ಆ ಕಾಲದ ಸಂವಹನಮಾಧ್ಯಮವೆಂದೂ, ಋಷಿಯಲ್ಲದವನು ಕವಿಯಲ್ಲವೆಂದೂ ತರ್ಕಿಸಿರುವುದು ಒಪ್ಪತಕ್ಕ ಮಾತೇ ಸರಿ.

ಧಮ್ಮಪದದಲ್ಲಿ ಬರುವ ಹಲವಾರು ಉಪಮೆಗಳು ಪ್ರಾಚೀನ ಕಾಲದ ಕವಿಮನಸ್ಸಿಗೆ ಕನ್ನಡಿ ಹಿಡಿಯುತ್ತವೆ. ’ಚಕ್ರವು ಬಂಡಿಯನ್ನು ಎಳೆಯುವ ಎತ್ತುಗಳ ಹೆಜ್ಜೆಯನ್ನು ಅನುಸರಿಸಿದಂತೆ’, ’ಸೂಪರಸವನ್ನು ಸೌಟು ಅರಿಯದಂತೆ’, ’ನೀರಮನೆಯಿಂದ ಹೊರತೆಗೆದ ಮೀನಿನಂತೆ’, ’ದರ್ಭೆಯ ಹುಲ್ಲು ಕೈಯನ್ನೇ ಕತ್ತರಿಸಿದಂತೆ’ ಇತ್ಯಾದಿ ಸಾಲುಸಾಲು ಹೋಲಿಕೆಗಳು ಆಪ್ಯಾಯಮಾನವಾಗಿವೆ. ಗ್ರಂಥದ ಕೊನೆಯಲ್ಲಿ ಟಾಮಸ್‌ ಕ್ಲೇರಿ ಹೇಳಿದ ಮಾತುಗಳು ಬುದ್ಧದರ್ಶನಕ್ಕೆ ಮುಕುಟಪ್ರಾಯವಾಗಿವೆ.

ಈ ಕೃತಿಯ ಲೇಖಕರು ಕನ್ನಡ ಓದುಗರಿಗೆ ಧಮ್ಮಪದದ ಸಂಪೂರ್ಣ ಸೌಂದರ್ಯವನ್ನು ಸಮಂಜಸ ಅನುವಾದದ ಮೂಲಕ ಇಲ್ಲಿ ಸೆರೆಹಿಡಿದಿದ್ದಾರೆ. ಜಗತ್ತಿನ ಅಪೂರ್ವ ’ಬೆಳಕಿನ ಹೊಳೆ’ಯಲ್ಲಿ ಕನ್ನಡ ಮನಸ್ಸುಗಳು ಮಿಂದು ಶುಚಿರ್ಭೂತರಾಗುವುದಕ್ಕೆಈ ಕೃತಿ ನಿಜವಾಗಿಯೂ ಪಥದರ್ಶಕವಾಗಿದೆ. 

ಧಮ್ಮಪದ

ಲೇ: ಪ್ರೊ.ಎಸ್.ಶಿವಾಜಿ ಜೋಯಿಸ್
ಪ್ರ: ರೂಪ ಪ್ರಕಾಶನ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT