ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಕ್ಷೇತ್ರಕಾರ್ಯ ಹವ್ಯಾಸಿಯ ಚಿತ್ರ

Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಚಲನಶೀಲ ವ್ಯಕ್ತಿತ್ವದ ಮತಿಘಟ್ಟ ಕೃಷ್ಣಮೂರ್ತಿ ಅವರ ಬದುಕು ಹಲವು ಘಟ್ಟಗಳನ್ನು ಆಕ್ರಮಿಸಿದೆ. ಮಹಾತ್ಮಗಾಂಧಿ ಅನುಯಾಯಿಯಾದ ಅವರು ಸ್ವಾಂತಂತ್ರ್ಯ ಚಳವಳಿಯಲ್ಲಿ ಸೆರೆವಾಸವನ್ನೂ ಅನುಭವಿಸುತ್ತಾರೆ. ಕಾಲೇಜು ಶಿಕ್ಷಣವನ್ನು ಬಿಟ್ಟು ಕೃಷಿಯಲ್ಲಿ ತೊಡಗುತ್ತಾರೆ. ಜಾನಪದ ಸಾಹಿತ್ಯ ಅಧ್ಯಯನವನ್ನು ಅದಮ್ಯ ಅಭಿಲಾಷೆಯಿಂದ ಚಿಕ್ಕವಯಸ್ಸಿನಲ್ಲಿಯೇ ಮೈಗೂಡಿಸಿಕೊಂಡಿದ್ದರು ಎನ್ನುವುದನ್ನು ಲೇಖಕ ಗುರುತಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರು ಆಕಾಶವಾಣಿ ಕೇಂದ್ರದಿಂದ ಮೊದಲಬಾರಿಗೆ ಜನಪದ ಗೀತೆಗಳನ್ನು ಹಾಡಿದ ಹಿರಿಮೆ ಕೃಷ್ಣಮೂರ್ತಿ ಅವರಿಗೆ ಸಲ್ಲುತ್ತದೆ.

ರೈತ ಕೃಷ್ಣಮೂರ್ತಿ ಪತ್ರಕರ್ತ ವೃತ್ತಿಗೆ ಬಂದಿದ್ದು ಆಕಸ್ಮಿಕ. ಮೊದಲು ಆರ್‌. ಕಲ್ಯಾಣಮ್ಮ ಅವರ ‘ಸರಸ್ವತಿ’ ಪತ್ರಿಕೆಗೆ ಲೇಖನಗಳನ್ನು ಬರೆಯಲು ಆರಂಭಿಸುತ್ತಾರೆ. ನಂತರ ‘ವಿಮಾವಾಣಿಜ್ಯ’ ಪತ್ರಿಕೆ ಸಂಪಾದಕರ ಸಹಾಯಕರಾಗಿ ಪತ್ರಿಕಾ ಉದ್ಯೋಗ ಆರಂಭಿಸಿದರು. ಅದಾಗಿ ಕೆಲವೇ ದಿನಗಳಲ್ಲಿ ಟಿ.ಟಿ. ಶರ್ಮ ಅವರ ‘ವಿಶ್ವಕರ್ನಾಟಕ’ ವಾರ ಪತ್ರಿಕೆಗೆ ಉಪಸಂಪಾದಕರಾಗಿ ಸೇರುತ್ತಾರೆ. ನಂತರ ಸ್ವಂತ ಪತ್ರಿಕೆಯನ್ನು ಆರಂಭಿಸಿ ಪತ್ರಿಕೋದ್ಯಮದ ಏರಿಳಿತಗಳನ್ನು ಅನುಭವಿಸುತ್ತಾರೆ.

ಕೃಷ್ಣಮೂರ್ತಿ ಜಾನಪದ ಕ್ಷೇತ್ರಕಾರ್ಯದಲ್ಲಿ ಗಂಭೀರವಾಗಿ ತೊಡಗಿದ್ದು ವಿಚಿತ್ರ ಸಂದರ್ಭ. 1960ರಲ್ಲಿ ಗಂಡು ಮಗುವಿನ ತಂದೆಯಾಗುತ್ತಾರೆ. ಆಗ ಜಾತಕ ನೋಡಿದ ಜ್ಯೋತಿಷಿ ‘ಒಂದು ವರ್ಷ ಮಗುವಿನ ಜೊತೆ ತಂದೆ ಇರಬಾರದು. ತಪ್ಪಿದರೆ ಕಷ್ಟ ತಪ್ಪುವುದಿಲ್ಲ’ ಎಂದು ಹೇಳುತ್ತಾರೆ. ಆ ಸಮಯವನ್ನು ಜಾನಪದ ಸಾಹಿತ್ಯ ಸಂಗ್ರಹಕ್ಕೆ ಉಪಯೋಗಿಸುತ್ತಾರೆ. ಸೃಜನಶೀಲ ಸಾಹಿತ್ಯದಲ್ಲೂ ಕೆಲಸ ಮಾಡಿರುವ ವಿವರವನ್ನು ‘ಕೃಷ್ಣಮೂರ್ತಿ ಬದುಕು ಬರಹ’ ಕೃತಿಯಲ್ಲಿ ಕೃಷ್ಣಪ್ಪ ಪರಿಚಯಿಸಿದ್ದಾರೆ.

ಈ ಕೃತಿ ನಾಲ್ಕು ಅಧ್ಯಾಯಗಳನ್ನು ಒಳಗೊಂಡಿದ್ದು, ಮೊದಲ ಅಧ್ಯಾಯ ಮತಿಘಟ್ಟ ಕೃಷ್ಣಮೂರ್ತಿ ಅವರ ಸಾಹಿತ್ಯದ ಪ್ರಕಾರಗಳ ಮಾಹಿತಿಯ ವಿವರವನ್ನು ಒಳಗೊಂಡಿದೆ. ಎರಡನೇ ಅಧ್ಯಾಯದಲ್ಲಿ ಅವರ ಸಾಹಿತ್ಯದ ವೈವಿಧ್ಯ ಚಿತ್ರಗಳ ಕುರಿತು ಚರ್ಚಿಸಲಾಗಿದೆ. ಮೂರನೇ ಅಧ್ಯಾಯದಲ್ಲಿ ಜಾನಪದ ಕ್ಷೇತ್ರಕ್ಕೆ ಮತಿಘಟ್ಟ ಅವರ ಕೊಡುಗೆಯನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ನಾಲ್ಕನೇ ಅಧ್ಯಾಯ ಜನಪದರ ಅಧ್ಯಾತ್ಮ ಚಿಂತನೆಯ ಒಳನೋಟಗಳನ್ನು ಕೃಷ್ಣಮೂರ್ತಿ ಹೇಗೆ ವಿವೇಚಿಸಿದ್ದಾರೆ ಎಂಬ ಅಂಶವನ್ನು ಲೇಖಕ ನಿರೂಪಿಸಿದ್ದಾರೆ.

ಮತಿಘಟ್ಟ ಕೃಷ್ಣಮೂರ್ತಿ ಬದುಕು ಬರಹ

ಲೇ: ಐಚನಹಳ್ಳಿ ಕೃಷ್ಣಪ್ಪ

ಪ್ರ. ಚೇ ಪುಸ್ತಕ

ಸಂ. 9845495475

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT