ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿಂದ ಸುಬ್ರಹ್ಮಣ್ಯಕ್ಕೆ : ದ.ಕ. ಜಿಲ್ಲೆಯ ಸ್ಥೂಲ ಚಿತ್ರಣ

Published 24 ಜೂನ್ 2023, 23:39 IST
Last Updated 24 ಜೂನ್ 2023, 23:39 IST
ಅಕ್ಷರ ಗಾತ್ರ

ಇದೊಂದು ರೀತಿಯ ಚಾರಣ ಕಥನ. ಕ್ರೈಸ್ತಧರ್ಮ ಪ್ರಚಾರಕರಾಗಿ ಬಾಸೆಲ್‌ ಮಿಷನ್‌ ಸಂಘಟನೆಯ ಸೂಚನೆಯಂತೆ ರೆ. ಹರ್ಮನ್‌ ಮೋಗ್ಲಿಂಗ್‌ ಹಾಗೂ ರೆ.ಗಾಟ್‌ಪ್ರೈಟ್‌ ವೈಗ್ಲೆ ಮಂಗಳೂರಿಗೆ ಹೆಜ್ಜೆ ಇಟ್ಟಿದ್ದರು. ದಕ್ಷಿಣ ಕನ್ನಡದಲ್ಲಿ ನಡೆಸಿದ ಅವರ ಪ್ರವಾಸದ ದಾಖಲೆಯ ಅನುವಾದ ಕೃತಿ ಇದು. 

ಮಂಗಳೂರಿನಿಂದ ಆರಂಭವಾಗಿ ಧರ್ಮಸ್ಥಳ, ಸುಬ್ರಹ್ಮಣ್ಯ, ಕಾಸರಗೋಡು ಮಾರ್ಗವಾಗಿ ಮಂಜೇಶ್ವರ ಮೂಲಕ ಮತ್ತೆ ಮಂಗಳೂರು ತಲುಪಿದ ಈ ಹೆಜ್ಜೆಗಳು ದಾಖಲಿಸಿದ್ದು ಕೇವಲ ಚಾರಣ ಕಥನವನ್ನಲ್ಲ, ಬದಲಾಗಿ ದಕ್ಷಿಣ ಕನ್ನಡದ ಸಂಪ್ರದಾಯ, ಸಂಸ್ಕೃತಿ, ಇಡೀ ಜಿಲ್ಲೆಯ ಸ್ಥೂಲ ಪರಿಚಯ, ಚಿತ್ರಣವನ್ನು ಈ ಕೃತಿ ನೀಡಿದೆ. ತಾವು ಪ್ರಯಾಣಿಸಿದ ಪ್ರದೇಶಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಪ್ರತ್ಯೇಕವಾಗಿ ಇಲ್ಲಿ ದಾಖಲಿಸಿದ್ದಾರೆ ಮೋಗ್ಲಿಂಗ್‌ ಹಾಗೂ ವೈಗ್ಲೆ. ಭೇಟಿ ನೀಡಿದ ಸ್ಥಳಗಳ ಮಹತ್ವವನ್ನೂ, ಪುರಾಣ ಚರಿತ್ರೆಗಳನ್ನೂ ತಿಳಿದುಕೊಳ್ಳುವ ಆಸಕ್ತಿಯ ಜೊತೆಗೆ ಸ್ವಧರ್ಮದ ಬಗೆಗಿನ ಮೋಹ, ಸ್ಥಳೀಯ ಸಂಪ್ರದಾಯದ ವಿರುದ್ಧ ಪ್ರಶ್ನೆ, ಪ್ರಚಾರದ ಬಿರುಸು ಮೋಗ್ಲಿಂಗ್‌ ಬರವಣೆಗೆಯುದ್ದಕ್ಕೂ ಕಂಡುಬರುತ್ತದೆ. ‘ಇದು ಒಂದು ಪ್ರವಾಸಕಥನವಷ್ಟೇ ಅಲ್ಲ. ಅದು ಹೊತ್ತೊಂಬತ್ತನೆ ಶತಮಾನದ ಮೊದಲ ಅರ್ಧದ ಕರಾವಳಿಯ ಸಾಮಾಜಿಕ, ಧಾರ್ಮಿಕ ಚರಿತ್ರೆಯೂ ಹೌದು’ ಎಂದು ಉಲ್ಲೇಖಿಸುತ್ತಾರೆ ಅನುವಾದಕ ಎ.ವಿ.ನಾವಡ ಅವರು.

ದಕ್ಷಿಣ ಕನ್ನಡ, ಕೇರಳಕ್ಕೆ ಸೇರಿದ ಈಗಿನ ಕಾಸರಗೋಡು ಜಿಲ್ಲೆಗಳಲ್ಲಿ ಓಡಾಡಿದವರಿಗೆ ಇಡೀ ಕೃತಿ ಪ್ರವಾಸಕಥನದಂತೆ ಕಂಡುಬರುತ್ತದೆ. ಜೊತೆಗೆ ಅಲ್ಲಿನ ದೈವಗಳ ಬಗ್ಗೆ ಇಲ್ಲಿ ಸುದೀರ್ಘವಾದ ವಿವರಣೆಗಳನ್ನು ಕಾಣಬಹುದು. ಅನುವಾದಕನ ಟಿಪ್ಪಣಿಯಡಿ ನಾವಡ ಅವರು ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಮೋಗ್ಲಿಂಗ್‌ ಉಲ್ಲೇಖಿಸುವ ಅನೇಕ ಅಂಶಗಳನ್ನು ಪ್ರಶ್ನಿಸುತ್ತಲೇ ಇಲ್ಲಿ ವಿಶ್ಲೇಷಿಸಲಾಗಿದೆ. ತುಳುನಾಡಿನ ದೈವಗಳನ್ನು ಮೋಗ್ಲಿಂಗ್‌ ತಪ್ಪಾಗಿ ಗ್ರಹಿಸಿರುವುದನ್ನು ಲೇಖಕರು ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ. ಕೃತಿಯ ಕೊನೆಯಲ್ಲಿ 1896 ರಿಂದ 1921ರ ಅವಧಿಯಲ್ಲಿ ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಲ್ಲಿ ತೆಗೆದ ಕಪ್ಪು ಬಿಳುಪಿನ ಚಿತ್ರಗಳನ್ನು ನೀಡಲಾಗಿದೆ.   

ಮಿಷನರಿ ಪ್ರವಾಸ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ 1840

ಜರ್ಮನ್‌ ಮೂಲ: ಹೆರ್ಮನ್‌ ಮ್ಯೋಗ್ಲಿಂಗ್‌ ಗಾಟ್‌ಫ್ರೈಡ್‌ ವೈಗ್ಲೆ 

ಇಂಗ್ಲಿಷ್‌ಗೆ: ಜೆನ್ನಿಫರ್‌ ಜೆಂಕಿನ್ಸ್‌ 

ಕನ್ನಡಕ್ಕೆ: ಪ್ರೊ.ಎ.ವಿ.ನಾವಡ 

ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 

ಸಂ: 080–23183311

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT