ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಮುದ್ದಣನನ್ನು ಕಾಣಿಸಿದ ನಂದಾದೀಪ

Last Updated 5 ಸೆಪ್ಟೆಂಬರ್ 2021, 2:38 IST
ಅಕ್ಷರ ಗಾತ್ರ

ನಂದಳಿಕೆಯ ನಂದಾದೀಪ– ಮುದ್ದಣ 150 ಸಂಸ್ಮರಣ ಗ್ರಂಥ
ಲೇ:
ಡಾ.ಜಿ.ಎಂ. ಹೆಗಡೆ
ಪ್ರ: ಅಕ್ಷರ ಮಂಟಪ
ಸಂ: 080 23403307

***

‘ಮುದ್ದಣ’ ಕಾವ್ಯನಾಮದ ಲಕ್ಷ್ಮೀನಾರಾಯಣಪ್ಪ ಕವಿಯ 150ನೇ ಜಯಂತಿಯ ನೆಪದಲ್ಲಿ ಸಂಸ್ಮರಣಾ ಗ್ರಂಥವಾಗಿ ಡಾ.ಜಿ.ಎಂ.ಹೆಗಡೆ ಅವರ ಸಂಪಾದಕತ್ವದಲ್ಲಿ ಮೂಡಿಬಂದ ಕೃತಿಯೇ ‘ನಂದಳಿಕೆಯ ನಂದಾದೀಪ’.

ಕೇವಲ ಮೂವತ್ತೊಂದು ವರ್ಷ ಬದುಕಿದ್ದರೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಗಳಿಸುವಂತಹ ಸಾಧನೆಗೈದ ಮುದ್ದಣನ ಕುರಿತು, ಆತನ ಸಾಹಿತ್ಯದ ಕುರಿತು ಮಾಸ್ತಿ, ಹಾಮಾನಾ, ರಂ.ಶ್ರೀ. ಮುಗಳಿ, ಕೀರ್ತಿನಾಥ ಕುರ್ತಕೋಟಿ ಅವರಂತಹ ಘಟಾನುಘಟಿಗಳು ಬರೆದ ಲೇಖನಗಳನ್ನು ಹೆಗಡೆಯವರು ಪರಿಶ್ರಮವಹಿಸಿ ಸಂಪಾದಿಸಿದ್ದಾರೆ.

ಹಾಮಾನಾ ಅವರು ‘ಪ್ರಜಾವಾಣಿ’ ಪತ್ರಿಕೆಗೆ ಬರೆದ ‘ನಂದಳಿಕೆಯ ನಂದಾದೀಪ’ ಎಂಬ ಲೇಖನದಲ್ಲಿ ‘ಮುದ್ದಣ ಬದುಕಿದ್ದು ಕೇವಲ ಮೂವತ್ತೊಂದು ವರ್ಷ. ಅದು ಬಾಳಲ್ಲ, ಬೆಂಕಿ. ಅಸಹಾಯಕ ಪರಿಸ್ಥಿತಿಯಲ್ಲೂ ಮುದ್ದಣನ ಪ್ರತಿಭೆಯೂ ಅರಳಿತು’ಎಂದಿದ್ದರು. ಇದೇ ಲೇಖನದ ಶೀರ್ಷಿಕೆಯೇ ಗ್ರಂಥದ ಶೀರ್ಷಿಕೆಯೂ ಆಗಿದೆ.

‘ರತ್ನಾವತಿ ಕಲ್ಯಾಣ’, ‘ಕುಮಾರ ವಿಜಯ’ ಎಂಬೆರಡು ಯಕ್ಷಗಾನ ಪ್ರಸಂಗಗಳನ್ನೂ ‘ಶ್ರೀ ರಾಮಪಟ್ಟಾಭಿಷೇಕ’, ‘ಅದ್ಭುತ ರಾಮಾಯಣ’ ಮತ್ತು ‘ಶ್ರೀ ರಾಮಾಶ್ವಮೇಧ’ ಎಂಬ ಮೂರು ಖಂಡ ಕಾವ್ಯಗಳನ್ನೂ ಬರೆದು ನಾಡಿನ ಸಾಹಿತ್ಯ ಸಂಪತ್ತನ್ನು ಹೆಚ್ಚಿಸಿದ ಕವಿ ಮುದ್ದಣ. ವಿದ್ಯಾಭ್ಯಾಸಕ್ಕೆ ಅನುಕೂಲವಿಲ್ಲದ ಕುಗ್ರಾಮದಲ್ಲಿ ಬಡತನದ ಕುಟುಂಬದಲ್ಲಿ ಜನಿಸಿದರೂ ಓದಿನ ಗುರಿಯೊಂದಿಗೆ ಉಡುಪಿಗೆ ಬಂದ. ವಾರಾನ್ನ ಮಾಡಿಕೊಂಡು ಅಧ್ಯಯನಕ್ಕೆ ನಿಂತರೆ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸವನ್ನೂ ಆತನಿಗೆ ಮುಗಿಸಲಾಗಲಿಲ್ಲ. ತನ್ನ ಶರೀರ ಬಲವನ್ನು ನಂಬಿ ಮದ್ರಾಸಿಗೆ ಹೋಗಿ ತರಬೇತಿ ಪಡೆದು ಕುಸ್ತಿಪಟು ಎನಿಸಿಕೊಂಡು ಬಂದ. ಆತನ ಬದುಕಿನ ಇಂತಹ ಅಪರೂಪದ ವಿವರಗಳು ಈ ಕೃತಿಯಲ್ಲಿ ಸಿಕ್ಕುತ್ತವೆ.

ಮುದ್ದಣ ಕವಿಯ ಕೃತಿಗಳ ಅಧ್ಯಯನ, ವಿಮರ್ಶೆ ಬಹುಕಾಲದಿಂದಲೂ ನಡೆಯುತ್ತಲೇ ಬಂದಿದೆ. ಇದಕ್ಕೆ ಪೂರಕವಾಗಿ ಈ ಗ್ರಂಥದಲ್ಲಿ ‘ಮುದ್ದಣನ ರಾಮಾಶ್ವಮೇಧ ಮತ್ತು ಪುರಾಣದ ಶೇಷರಾಮಾಯಣ’ ಎಂಬ ಶೀರ್ಷಿಕೆಯ ಲೇಖನದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಅವರು ಹೀಗೆ ಬರೆಯುತ್ತಾರೆ: ‘ಶೇಷ ರಾಮಾಯಣ ಮತ್ತು ಮುದ್ದಣ ರಾಮಾಯಣ ಎರಡೂ ಮಹತ್ವದ ಕಾವ್ಯ ನಿರ್ಮಾಣಗಳು. ಇವುಗಳ ವಿಸ್ತಾರವಾದ ತುಲನೆ–ವಿಮರ್ಶೆಗಳಿಗೆ ಒಂದು ಮಹಾಪ್ರಬಂಧವೇ ರಚನೆಯಾಗುವಷ್ಟು ಆಹಾರವುಂಟು’. ಹೀಗೆ ಕಾಲಕಾಲಕ್ಕೂ ಮುದ್ದಣ ಹಾಗೂ ಆತನ ಪ್ರತೀ ಕೃತಿಯೂ ಮತ್ತೆಮತ್ತೆ ವಿಮರ್ಶೆಗೆ, ಅಧ್ಯಯನಕ್ಕೆ ಒಳಪಡುತ್ತಿವೆ.

ಮುದ್ದಣನ 125ನೇ ವರ್ಷಾಚರಣೆ ಸಂದರ್ಭದಲ್ಲಿ ಜಯರಾಮ ಕಾರಂತರು ಹಾಗೂ ನಂದಳಿಕೆ ಬಾಲಚಂದ್ರರಾಯರು ‘ಮುದ್ದಣನಿಗೆ ನಮನ’ ಎಂಬ ಗ್ರಂಥವನ್ನು ಜತೆಗೂಡಿ ಸಂಪಾದಿಸಿ ಪ್ರಕಟಿಸಿದ್ದರು. ಬಾಲಚಂದ್ರರಾಯರು ಮುದ್ದಣನ ಹೆಸರಿನಲ್ಲಿ ಮತ್ತೊಂದು ಗ್ರಂಥ ಹೊರತರುವ ಆಸೆಯನ್ನು ಹೆಗಡೆ ಅವರ ಮುಂದಿಟ್ಟ ಫಲವೇ ಈ ಗ್ರಂಥ.

ಉಡುಪಿ ಜಿಲ್ಲೆಯ ನಂದಳಿಕೆ ಎಂಬ ಹಳ್ಳಿಯಲ್ಲಿ ಹುಟ್ಟಿಬೋರ್ಡ್‌ ಶಾಲೆಯಲ್ಲಿ ವ್ಯಾಯಾಮ ಶಿಕ್ಷಕರಾಗಿದ್ದ ಲಕ್ಷ್ಮೀನಾರಾಯಣಪ್ಪ, ‘ಮುದ್ದಣ’ನಾಗಿ ಪರಿವರ್ತಿತರಾದ ಬಗೆ, ಮುದ್ದಣನ ಕೃತಿಗಳ ಬಗ್ಗೆ ವ್ಯಾಖ್ಯಾನ, ವಿಮರ್ಶೆಯ ಲೇಖನಗಳನ್ನು ಪುಸ್ತಕ ಒಳಗೊಂಡಿದೆ. ಈ ಕೃತಿಯು ಮುದ್ದಣನ ಬದುಕಿನ ಕನ್ನಡಿಯಾಗಿ, ಆತನ ಕೃತಿಗಳನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸಿ ಸಾಹಿತ್ಯಾನುಸಂಧಾನ ನಡೆಸಲು ಒಂದು ವೇದಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT