ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಮರಳಿ ಐಡಿಎಸ್ ಗೂಡಿಗೆ!

Published 9 ಸೆಪ್ಟೆಂಬರ್ 2023, 23:30 IST
Last Updated 9 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ
ಎಸ್.ಆರ್.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಕುರಿತು ಲೇಖಕಿ ರೂಪ ಹಾಸನ ಅವರು ರಚಿಸಿರುವ ‘ಮಹಾಸಂಗ್ರಾಮಿ’ ಕೃತಿ ಸೆಪ್ಟೆಂಬರ್‌ 10ರಂದು ಬಿಡುಗಡೆಯಾಗುತ್ತಿದೆ. ಇದರಿಂದ ಆಯ್ದ ‘ಮರಳಿ ಐಡಿಎಸ್ ಗೂಡಿಗೆ!’ ಅಧ್ಯಾಯದ ಒಂದು ಭಾಗ...

ತುರ್ತು ಪರಿಸ್ಥಿತಿ ವಿರುದ್ಧದಾಗಿನ ಒಂದೂ ಮುಕ್ಕಾಲು ವರ್ಷದ ಅವಿರತ ಚಳವಳಿ, ಹೋರಾಟಗಳು ಒಂದು ದಡಕ್ಕೆ ಬಂದು ಮುಟ್ಟಿದ್ದೂ ಆಯ್ತು, ‘ಇಂಡಿಯನ್ಸ್ ಫಾರ್ ಡೆಮಾಕ್ರೆಸಿ’[ಐಎಫ್‍ಡಿ]ಯ ವಿಸರ್ಜನೆ ಕೂಡ ಆಯ್ತು. ಈಗೊಮ್ಮೆ ಹಿಂತಿರುಗಿ ನೋಡೋದಾದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಪಾತ್ರವನ್ನು ಅವಲೋಕನ ಮಾಡಿಕೊಳ್ಳುವಾಗ, ನನಗೆ ಅನೇಕ ವಿಷಯಗಳು ನೆಮ್ಮದಿಯನ್ನ ತರ್ತವೆ. ಏಕೆಂದರೆ, ತುರ್ತು ಪರಿಸ್ಥಿತಿ ಘೋಷಣೆಯಾದ ಕ್ಷಣದಿಂದ ಹಿಡಿದು ಅದರ ಅಂತ್ಯ ಕಾಣೂವರೆಗೆ ನಾವು ಬಿಡದೆ ಹೋರಾಟ ಮಾಡುತ್ತಲೇ ಇದ್ದೆವು. ಇಂಡಿಯನ್ಸ್ ಫಾರ್ ಡೆಮಾಕ್ರಸಿ, ದಿ ಫ್ರೀ ಜೆ.ಪಿ. ಕ್ಯಾಂಪೈನ್ ಮತ್ತು ಕಮಿಟಿ ಫಾರ್ ಫ್ರೀಡಂ ಇನ್ ಇಂಡಿಯಾ ಸಂಘಟನೆಗಳು- ತುರ್ತು ಪರಿಸ್ಥಿತಿ ವಿರುದ್ಧವಾಗಿ ಪ್ರಬಲ ಜನಸಂಘಟನೆಯನ್ನ ಮಾಡಿದ್ದವು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಪ್ರಾಯ ರೂಪಿಸುವಲ್ಲಿ ಅವಿರತ ಶ್ರಮಿಸಿದ್ದವು. ಇವು ಮೂರೂ ಸಂಘಟನೆಗಳು ಅನೇಕ ಪ್ರತಿಭಟನಾ ಮೆರವಣಿಗೆ, ಧರಣಿ, ಕಾರ್ಯಕ್ರಮಗಳನ್ನ ನಿರಂತರವಾಗಿ ಆಯೋಜಿಸಿದ್ದವು. ನಮ್ಮ ಇಂಡಿಯನ್ಸ್ ಫಾರ್ ಡೆಮಾಕ್ರಸಿ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಶಿಕಾಗೋ, ಹಾರ್ಟ್‌ಫೋರ್ಡ್ ಮತ್ತೆ ಅಮೇರಿಕದ ಅನೇಕ ನಗರಗಳಲ್ಲಿ ರಾಷ್ಟ್ರೀಯ ವಿಚಾರಸಂಕಿರಣಗಳನ್ನು ನಡೆಸಿ, ಜನರಲ್ಲಿ ತುರ್ತು ಪರಿಸ್ಥಿತಿಯ ಕರಾಳತೆಯನ್ನ ಮನದಟ್ಟು ಮಾಡಿತ್ತು. ಮೊದಲಿಗೆ ದಿ ಫ್ರೀ ಜೆ.ಪಿ. ಕ್ಯಾಂಪೈನ್ ‘ಸ್ವರಾಜ್’ ಹೆಸರಿನ ಸುದ್ದಿಪತ್ರವನ್ನ ಹೊರತಂದಿತು. ನಿಮಗೆ ತಿಳಿದಿರೋಹಂಗೆ ನಮ್ಮ ಇಂಡಿಯನ್ಸ್ ಫಾರ್ ಡೆಮಾಕ್ರಸಿ, ‘ಇಂಡಿಯನ್ ಒಪೀನಿಯನ್’ ಪತ್ರಿಕೆ ಹೊರತಂದಿತು. ಈ ಪತ್ರಿಕೆಗಳ ಓದುಗರು ಕೇವಲ ಭಾರತೀಯರಷ್ಟೇ ಆಗಿರಲಿಲ್ಲ! ಸ್ವಾತಂತ್ರ್ಯವನ್ನ ಪ್ರೀತಿಸೋ ವಿದೇಶಿ ಮಂದಿನೂ ಇದಕ್ಕೆ ಚಂದಾದಾರರಾಗಿದ್ದರು. ಜೊತೆಗೆ ನಾವು ಐಎಫ್‍ಡಿ ವತಿಯಿಂದ ಅನೇಕ ಮುಖ್ಯ ಪುಸ್ತಕಗಳನ್ನೂ ಪ್ರಕಾಶಿಸಿದೆವು. ಅದರಾಗ ಮರೆಯಲಾಗದಂತದ್ದೆಂದರೆ ಜಾರ್ಜ್ ಫರ್ನಾಂಡೀಸ್ ಅವರ ‘ಅನಾಟಮಿ ಆಫ್ ಡಿಕ್ಟೇಟರ್‌ಶಿಪ್’, ಮತ್ತೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರು ಮಾಡುತ್ತಿದ್ದ ಭಾಷಣಗಳ ಕಿರುಹೊತ್ತಿಗೆಗಳು. ಜೊತೆಗೆ, ಕಮಿಟಿ ಫಾರ್ ಫ್ರೀಡಂ ಇನ್ ಇಂಡಿಯಾ ಸಂಸ್ಥೆ ಮುದ್ರಿಸಿದ, ಡಾ.ಆನಂದ್ ಕುಮಾರ್ ಅವರ, 80 ಪುಟಗಳ ‘ಡೆಮಾಕ್ರಸಿ ಆರ್ ಡಿಕ್ಟೇಟರ್‌ಶಿಪ್ ಇನ್ ಇಂಡಿಯಾ’- ಇದರಲ್ಲಿ ಸೆನ್ಸಾರ್‌ಗೆ ಒಳಗಾಗದ ಭಾರತದ ಅನೇಕ ದಾಖಲೆಗಳು, ಜೆಪಿಯವರು ಚಂಡೀಗಢ ಜೈಲಿನಿಂದ ಬರೆದ ಪತ್ರಗಳು, ಹೀಗೆ ಮಹತ್ವದ ವಿಷಯಗಳಿದ್ದವು. ಈ ಕಿರುಹೊತ್ತಿಗೆ ಬಹಳಷ್ಟು ಪ್ರಚಾರವನ್ನ ಪಡೆಯಿತು. ಜೊತೆಗೆ ಪ್ರಮುಖವಾದ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನ ದಾಖಲಿಸಿ ನಾವು ಪ್ರಕಟಿಸಿದ 73 ಪುಟಗಳ ಪುಸ್ತಿಕೆ, ಚರಿತ್ರೆಯಲ್ಲಿ ದಾಖಲಾರ್ಹವಾಗಿ ಉಳಿಯುವಂತದ್ದಾಗಿತ್ತು. ಭಾರತದಿಂದ ಅಮೆರಿಕೆಗೆ ಬರುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು, ತಜ್ಞರು, ಮಾನವಹಕ್ಕುಗಳ ಕಾರ್ಯಕರ್ತರ ಭಾಷಣಗಳಂತೂ ಜನರಲ್ಲಿ ಕಿಚ್ಚು ಹೆಚ್ಚಿಸುತ್ತಿತ್ತು. ಅಮೆರಿಕದ ಪತ್ರಿಕೆಗಳಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ನಾವು ನಿರಂತರವಾಗಿ ನೀಡುತ್ತಿದ್ದ ಜಾಹಿರಾತುಗಳು, ಹೊರಡಿಸುತ್ತಿದ್ದ ಕರಪತ್ರಗಳು ಪ್ರಭಾವಶಾಲಿಯೂ, ಪ್ರೇರಣಾದಾಯಕವೂ ಆಗಿದ್ದವು. ತುರ್ತು ಪರಿಸ್ಥಿತಿ ಸಂದರ್ಭದಾಗ ನಮ್ಮ ಮೂರೂ ಸಂಸ್ಥೆಗಳು ಅಂತರಾಷ್ಟ್ರೀಯ ಸಂಸ್ಥೆ, ಸಂಘಟನೆಗಳ ಜೊತೆಗೆ ಸಶಕ್ತವಾಗಿ ಕೆಲಸ ಮಾಡಿದ್ದು ನಮ್ಮ ಶಕ್ತಿಯನ್ನ ಹೆಚ್ಚಿಸಿತ್ತು. ಒಂದು ದೊಡ್ಡ ಸಮೂಹದ ನೆಟ್‍ವರ್ಕ್ ನಮಗೆ ಸಿಕ್ಕಿದ್ದರಿಂದಾಗಿ ನಮ್ಮ ತುರ್ತು ಪರಿಸ್ಥಿತಿ ವಿರೋಧಿ ಚಟುವಟಿಕೆಗೆ ಬಲ ಬಂದಿತ್ತು. ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಇಂಟರ್‌ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್, ಸೋಷಿಯಲಿಷ್ಟ್ ಇಂಟರ್‌ನ್ಯಾಷನಲ್, ವರ್ಲ್ಡ್‌ ಅಸೋಸಿಯೇಷನ್ ಆಫ್ ವರ್ಲ್ಡ್‌ ಫೆಡರಲಿಸ್ಟ್ಸ್ಮತ್ತು ಅನೇಕ ಪ್ರಮುಖ ಟ್ರೇಡ್ ಯೂನಿಯನ್ ಸಂಘಟನೆಗಳು, ಶಾಂತಿಗಾಗಿ ಸಂಘಟಿತರಾಗಿದ್ದ ಕ್ವೇಕರ್‌ಳು... ಹೀಗೆ ನಾವು ಊಹಿಸಿಯೇ ಇರದಿದ್ದ ರೀತಿಯಲ್ಲಿ ಪ್ರತಿಷ್ಠಿತ ಸಂಘಟನೆಗಳ ಕೂಡೆ ಒಡನಾಟ, ನಮ್ಮ ವೈಶಾಲ್ಯವನ್ನು ಹೆಚ್ಚಿಸಿತ್ತು.

ಮುಂದೆ ‘ಇಂಡಿಯಾ ಡೆವಲಪ್‍ಮೆಂಟ್ ಸರ್ವೀಸ್’[ಐಡಿಎಸ್] ಕೆಲ್ಸಗಳಾಗೆ ಮತ್ತೆ ಗಂಭೀರವಾಗಿ ತೊಡಗಿಸಿಕೊಂಡೆ! ಇದುವರೆಗೆ ರಾಜಕೀಯ ಚಟುವಟಿಕೆಯಲ್ಲೇ ಬಿಡುವಿಲ್ಲದಂಗ ಮುಳುಗಿಹೋಗಿದ್ದರಿಂದ ಭಾರತದ ಅಭಿವೃದ್ಧಿ ಕೆಲ್ಸಗಳಿಗಾಗಿ ಹುಟ್ಟುಹಾಕಿದ್ದ ನಮ್ಮ ಈ ಮೂಲ ಸಂಸ್ಥೆಯ ಚಟುವಟಿಕೆಯಾಗ ಹೆಚ್ಚು ತೊಡಗಿಸಿಕೊಳ್ಳಲಿಕ್ಕೆ ಆಗಿರಲಿಲ್ಲ. ತಕ್ಷಣ ಐಡಿಎಸ್‍ನ ತುರ್ತು ಸಭೆ ಕರೆದೆ. ‘ನನ್ನ ಆಸಕ್ತಿಗಳು ವಿಸ್ತರಿಸಿರೋದ್ರಿಂದ ಸಮಯ ಸಾಕಾಗ್ತಿದ್ದಿಲ್ಲ. ಈ ಸಂಸ್ಥೆಗೆ ರಾಜೀನಾಮೆ ಕೊಡ್ತೀನಿ’ ಅಂದೆ. ಅದಕ್ಕೆಲ್ಲರೂ ಆಕ್ಷೇಪಣೆ ಮಾಡಿದ್ರು. ‘ನಿಮಗೆ ಏನೂ ಹೊರೆಯಾಗಂಗಿಲ್ಲ, ನಾವೂ ಜೊತೆ ಸೇರಿ ಎಲ್ಲಾ ಕೆಲ್ಸ ಮಾಡ್ತೀವಿ. ನೀವು ಮುಂದುವರೀಬೇಕು’ ಅಂದ್ರು. ಆಗ ನಾನು `ಒಂದು ವರ್ಷದವರೆಗಷ್ಟೇ ಮುಂದುವರೀತೇನೆ’ ಎಂದು ಒಪ್ಪಿದೆ. ಮತ್ತೆ ಸಂಸ್ಥೆಯ ಕೆಲಸಗಳನ್ನೆಲ್ಲಾ ಪುನರ್ ವ್ಯವಸ್ಥೆ ಮಾಡಿಕೊಂಡು, ಚಟುವಟಿಕೆಯ ವೇಗ ಹೆಚ್ಚಿಸ್ಕೊಂಡ್ವಿ. ಆಗ ಎಲ್ಲರಿಂದ ಮೊದಲಿಗಿಂತ ಒಳ್ಳೆಯ ಪ್ರತಿಕ್ರಿಯೆ ಬಂದವು. ಆ ವರ್ಷ ಕೆಲ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸಂಗ್ರಹಿಸಿದ 33,000 ಡಾಲರ್ಸ್‍ ನಮಗೆ ದೇಣಿಗೆಯಾಗಿ ಬಂತು! ಅಮೇರಿಕಾದ ಐಡಿಎಸ್ ಸಂಸ್ಥೆಗೆ ನಾನು ಒಟ್ಟು ನಾಲ್ಕು ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ನಾನು ಬಿಟ್ಟಿದ್ದು ಐದನೇ ವರ್ಷದಲ್ಲಿ, ಅವಾಗ ಐದನೇ ವರ್ಷದ ವಾರ್ಷಿಕೋತ್ಸವವನ್ನೂ ವಿಜೃಂಭಣೆಯಿಂದ ಮಾಡಿದೆವು. ಜೊತೆಗೆ ಒಂದು ನೆನಪಿನ ಸಂಚಿಕೆಯನ್ನೂ ತಂದೆವು.

ಪಾಸ್‍ಪೋರ್ಟ್ ಮುಟ್ಟುಗೋಲು ಹಾಕ್ಕೊಂಡಿದ್ದ ಸಂದರ್ಭದಲ್ಲಿ 'India Abroad' ಪತ್ರಿಕೆಯಾಗ ನನ್ನ 2-3 ಸುದೀರ್ಘ ಸಂದರ್ಶನಗಳು ಕೂಡ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನ ಹೇಳಿದ್ದೆನಲ್ಲಾ, ಅವೆಲ್ಲವೂ ನನ್ನ ಪಾಲಿಗೆ ಬಹಳೇ ಮುಖ್ಯವಾದಂಥವು. ಕರ್ನಾಟಕದ ಪ್ರಸಿದ್ಧ ಪ್ರಜಾವಾಣಿ ಬಳಗದ, ‘ಸುಧಾ’ ವಾರಪತ್ರಿಕೆಯನ್ನ ಆಗ ಎಸ್.ಆರ್.ರಾಮಸ್ವಾಮಿ ಅಂತ ಸಹಾಯಕ ಸಂಪಾದಕರು ನೋಡ್ಕೊಳ್ತಿದ್ದರು. ಅವರು ಬಹಳೇ ಬಾರಿ ನನಗೆ ಫೋನ್ ಮಾಡಿ ನಮ್ಮ ಚಟುವಟಿಕೆ ಬಗ್ಗೆ, ವರದಿಗಳ ಬಗ್ಗೆ, ಜೊತೆಗೆ ಫೋಟೊ ಕೂಡ ಕೇಳಿದ್ರು. ನಾನೆಲ್ಲಾ ಅವರಿಗೆ ಕಳಿಸಿದ್ದೆ. ಅವರದನ್ನ ಇಟ್ಟುಕೊಂಡು ಬಹಳೇ ಆಕರ್ಷಕವಾಗಿ ಜೋಡಿಸಿ, 1977ರ ತುರ್ತು ಪರಿಸ್ಥಿತಿ ಕೊನೆಗೊಂಡ ಸಂದರ್ಭದಾಗ ನಾಲ್ಕು ವಾರ ಸುದೀರ್ಘ ಲೇಖನ ಪ್ರಕಟಿಸಿದ್ದಾರೆ! ಬಹುಶಃ ವಿದೇಶದಲ್ಲಿ ನೆಲೆಸಿರುವ ಭಾರತೀಯರು ನಡೆಸಿದ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಕುರಿತು ಕನ್ನಡದಲ್ಲಿ ಆದ ಒಂದು ದಾಖಲೆ ಎಂದರೆ ಬಹುಶಃ ಇದು ಮಾತ್ರವೇ ಇರಬೇಕು.

ನನ್ನ ಚಿಂತನಾ ಕ್ರಮದಲ್ಲಿ ಅತಿ ಹೆಚ್ಚಿನ ಬದಲಾವಣೆಯಾಗಿದ್ದೆಂದರೆ ಇಂದಿರಾ ಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿಯಿಂದ! 4ರಿಂದ 5 ವರ್ಷ ನಮ್ಮ ದೇಶಕ್ಕಾಗಿ ತುರ್ತು ಪರಿಸ್ಥಿತಿ ವಿರುದ್ಧ ಅಮೆರಿಕಾದಾಗೆ ಇದ್ದುಕೊಂಡೆ ತೀವ್ರವಾಗಿ ಕೆಲಸವನ್ನು ಮಾಡಿದ್ದು, ನನ್ನ ಜೀವಮಾನದಲ್ಲೇ ಮರೆಯಲಾಗದಂತಹಾ ಅನುಭವ. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗ ನಮಗೇನನ್ನಿಸ್ತು ಅಂದ್ರ ‘ಇಂತಹ ಒಂದು ಸರ್ವಾಧಿಕಾರಿ ವಾತಾವರಣದೊಳಗೆ ಕಟ್ಟಕಡೆಯ ವ್ಯಕ್ತಿಯನ್ನ ಮೊದಲು ಮಾಡಿಕೊಂಡು, ಯಾರೂ ಅಭಿವೃದ್ಧಿಯಾಗೋದು ಯಾವಾಗಲೂ ಸಾಧ್ಯವಾಗಲ್ಲ. ಇದು ಮನುಷ್ಯನ ವ್ಯಕ್ತಿತ್ವ ವಿಕಾಸಕ್ಕೆ ಅನುಕೂಲ ಆಗೂದಿಲ್ಲ’ ಎನ್ನವಂಥ ಮೂಲಭೂತವಾದ ತಿಳಿವಳಿಕೆ ಆಗ ನನಗೆ ಬಂತು. ಇದರ ಬಗ್ಗೆ ಆಗ ಆಳವಾದ ವೈಚಾರಿಕ ಜ್ಞಾನ ಇದ್ದಿಲ್ಲ. ಒಬ್ಬ ವ್ಯಕ್ತಿಯ ಪರಮಾಧಿಕಾರ ಏನು ಅನಾಹುತ ಮಾಡ್ತದೆ ಎನ್ನೋದು ಮಾತ್ರ ತಿಳೀತಿತ್ತು. ಈ ಅವಧಿ ನಮ್ಮ ಜೀವನದ ಅತ್ಯಂತ ಸೃಜನಶೀಲ ಕಾಲ. ಅವತ್ತು ನಾನು ರಾಜಕೀಯ ಬದಲಾವಣೆ ಬಗ್ಗೆ ಹಂತ ಹಂತವಾಗಿ ಏನು ಕಲಿತೆ, ಅದು ಇವತ್ತಿನವರೆಗೂ ನನ್ನ ರಕ್ತದಾಗೆ ಉಳಿದು ಬಂದದಾ. ಹೀಗಾಗೇ ನಾನು ಮೂಲಭೂತವಾಗಿ ರಾಜಕೀಯ ಆಕ್ಟಿವಿಸ್ಟ್ ಇದ್ದೀನಿ ಅಂತ ಹೇಳ್ತಿರ್ತಿನಿ.

ಕೃತಿ: ಮಹಾಸಂಗ್ರಾಮಿ ಲೇ: ರೂಪ ಹಾಸನ ಪ್ರ:ಅಭಿರುಚಿ ಪ್ರಕಾಶನ ದ:600 ಪು:464 ಸಂ:9480227576

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT