ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸಾಫಲ್ಯ ವೈಫಲ್ಯಗಳ ‘ಹಿಂದೂ’ ನಡಿಗೆ

Published 10 ಫೆಬ್ರುವರಿ 2024, 23:30 IST
Last Updated 10 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ನಾನು ಯಾಕೆ ಹಿಂದೂ?

ಇಂಗ್ಲಿಷ್‌ ಮೂಲ: ಶಶಿ ತರೂರ್‌

ಕನ್ನಡ ಅನುವಾದ: ಕೆ. ಈ. ರಾಧಾಕೃಷ್ಣ

ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ

ಸಂ: 0836–2441823

‘ನಾನು ಯಾಕೆ ಹಿಂದೂ?’. ಇದು ಲೇಖಕ ಮತ್ತು ರಾಜಕಾರಣಿ ಶಶಿ ತರೂರ್‌ ಅವರ ‘ವೈ ಐಯಾಮ್‌ ಎ ಹಿಂದೂ’ ಇಂಗ್ಲಿಷ್‌ ಕೃತಿಯ ಕನ್ನಡ ಅನುವಾದ; ಅನುವಾದಕರು ಕೆ. ಈ. ರಾಧಾಕೃಷ್ಣ. ಇಂಥ ಯಾವುದೇ ವೈಚಾರಿಕ ಕೃತಿಯ ಅನುವಾದದ ಬಗ್ಗೆ ವಿಶ್ಲೇಷಿಸುವಾಗ ಎದುರಾಗುವ ಮೊದಲ ಸಮಸ್ಯೆ ಎಂದರೆ: ‘ಯಾವುದನ್ನು ನಾವು ವಿಮರ್ಶಿಸಬೇಕು? ಮೂಲಕೃತಿಯ ವಿಚಾರಸರಣಿಯನ್ನೋ ಅಥವಾ ಅನುವಾದದ ಸಾಫಲ್ಯ–ವೈಫಲ್ಯಗಳನ್ನೋ?’ ಇಲ್ಲಿ ಎರಡನ್ನೂ ಯಥಾವಕಾಶ ಮಾಡಲಾಗಿದೆ. 

ಈ ಕೃತಿಯ ಪ್ರಧಾನ ವಿಷಯ ಏನು? ನೆಹರೂ–ಗಾಂಧಿ ಪ್ರತಿಪಾದನೆಯ ‘ಹಿಂದೂಧರ್ಮ’ಕ್ಕೂ ಆರ್‌.ಎಸ್‌.ಎಸ್‌.–ಬಿಜೆಪಿ ಪ್ರಣೀತ ‘ಹಿಂದುತ್ವ’ಕ್ಕೂ ಇರುವ ವ್ಯತ್ಯಾಸವನ್ನು ತಿಳಿಸುವುದು. ಇದನ್ನು ಸಾಧಿಸಿ ತೋರಿಸುವುದಕ್ಕೆ ಲೇಖಕರು ತಮ್ಮ ಪುಸ್ತಕವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಮೊದಲ ಭಾಗವನ್ನು ಅವರು ಹಿಂದೂಧರ್ಮದ ಅನುಯಾಯಿಯಾದ ಒಬ್ಬ ಲೇಖಕನಾಗಿಯೇ ಬರೆದಿದ್ದಾರೆ. ಆದರೆ ಎರಡು ಮತ್ತು ಮೂರನೆಯ ಭಾಗಗಳನ್ನು ಬರೆಯುವ ಹೊತ್ತಿಗೆ ಅವರಲ್ಲಿರುವ ರಾಜಕಾರಣಿ ಕ್ರಿಯಾಶೀಲನಾಗಿದ್ದಾನೆ. ಮೊದಲಲ್ಲಿ ಹಿಂದೂಧರ್ಮದ ಒಳಗಿನವನಾಗಿ ನಡೆಸುವ ಮೀಮಾಂಸೆಗಳೆಲ್ಲವನ್ನೂ ಆನಂತರದಲ್ಲಿ ರಾಜಕೀಯ ನಿಲುವುಗಳಿಗೆ ಸರಿಹೊಂದಿಸುವಂಥ ಅವರ ಜಾಣ್ಮೆಯೇ ಈ ಕೃತಿಯನ್ನು ಸಂಕುಚಿತಗೊಳಿಸಿಬಿಡುತ್ತದೆ. ಹಿಂದೂಧರ್ಮದ ಮೇಲೆ ಇಸ್ಲಾಂನ ಆಕ್ರಮಣಗಳು, ಕ್ರಿಶ್ಚಿಯನ್‌ ಮತಾಂತರಗಳು ಮಾಡಿರುವ ಹಾನಿಯಂಥವನ್ನು ಒಳಗಿನವರಾಗಿ ನೆನಪಿಸಿಕೊಳ್ಳುತ್ತಾರೆ; ಆದರೆ ಈಗ ಅದನ್ನೆಲ್ಲವನ್ನೂ ಮರೆಯಬೇಕೆಂದು ಉಪದೇಶಿಸುತ್ತಾರೆ. ಏಕೆ ಮರೆಯಬೇಕು–ಎಂಬುದಕ್ಕೆ ಅವರು ಕೊಡುವ ಕಾರಣಗಳು ಮಾತ್ರ, ಅವರೇ ನಿರಾಕರಿಸಿರುವ, ‘ಸೆಕ್ಯುಲರಿಸ್ಟ್‌’ ಮಾದರಿಯವು! ತರೂರ್‌ ಅವರ ಕೃತಿಯಲ್ಲಿರುವ ಇಂಥ ಎಲ್ಲ ಸಮಸ್ಯೆಗಳನ್ನೂ ಪಟ್ಟಿ ಮಾಡಲು ಇಲ್ಲಿ ಸಾಧ್ಯವಿಲ್ಲವಷ್ಟೆ. 

ಪ್ರಾಚೀನ ಹಿಂದೂಧರ್ಮದ ವೈಶಾಲ್ಯವನ್ನೂ ಔದಾರ್ಯವನ್ನೂ ವಿವೇಕವನ್ನೂ ಶಶಿ ತರೂರ್‌ ಅಲ್ಲಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ‘ಬೈಬಲ್‌, ಕುರಾನ್‌, ಬುದ್ಧನ ಸಂವಾದಗಳು ಪ್ರಶ್ನಾತೀತವಾದುದು ಎಂದು ನಂಬುವ ಆಯಾ ಮತಗಳಂತೆ ಸನಾತನಧರ್ಮವು ವೇದಗಳನ್ನು ಕೂಡ ಹಾಗೆ ಭಾವಿಸುವುದೂ ಇಲ್ಲ; ಯಾವುದೇ ಗ್ರಂಥವನ್ನೂ ಅದು ಅಕ್ಷರಶಃ ಸತ್ಯ ಎಂಬಂತೆ ಸ್ವೀಕರಿಸಬೇಕೆಂದು ಒತ್ತಾಯಿಸುವುದು ಇಲ್ಲ. ಇಲ್ಲಿ ಪರ–ವಿರೋಧ ಅಭಿಪ್ರಾಯಗಳು ಸಹಜ. ಮನುಸ್ಮೃತಿಯಂಥ ಗ್ರಂಥಗಳು ಎಲ್ಲ ಕಾಲಕ್ಕೂ ಸಲ್ಲುತ್ತಿತ್ತು ಎಂದೇನೂ ಅಲ್ಲ’ ಎಂಬ ಅವರ ವಿಮರ್ಶೆ ಗಮನಾರ್ಹ.

ಆದರೆ ‘ಹಿಂದುತ್ವ’ವನ್ನು ಟೀಕಿಸುವಾಗ ಅವರು ತಮ್ಮ ಇಂಥ ಮಾತುಗಳನ್ನೇ ಮರೆತುಬಿಡುತ್ತಾರೆ. ಆರ್‌.ಎಸ್‌.ಎಸ್‌.–ಬಿಜೆಪಿಗಳು ಹಿಂದೂಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸಿ, ಅದನ್ನು ಅವು ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಬಳಸಿಕೊಳ್ಳುತ್ತಿವೆ ಎಂಬ ಆತಂಕ ತರೂರ್‌ ಅವರದ್ದು. ಆದರೆ ಇಲ್ಲೆಲ್ಲ ಅವರ ತರ್ಕ ಏಕಮುಖವಾಗಿದೆ. ಹೀಗಾಗಿ ಅವರ ವಾದಗಳನ್ನು ಸುಲಭವಾಗಿ ತಿರಸ್ಕರಿಸಬಹುದು.

ಆರ್‌.ಎಸ್‌. ಎಸ್‌.–ಬಿಜೆಪಿಗಳನ್ನು ಟೀಕಿಸುವ ಉತ್ಸಾಹದಲ್ಲಿ ಅವರು ಹಿಂದೂಸಮಾಜದ ವೈಚಾರಿಕ ಕ್ಷಮತೆಯನ್ನೇ ಅಗ್ಗ ಮಾಡುತ್ತಿದ್ದಾರೆ ಎಂದೆನಿಸುತ್ತದೆ. ಉದಾಹರಣೆಗೆ, ‘ಅಯೋಧ್ಯೆ ನಮಗೆ ಪವಿತ್ರವಾದುದು’ ಎಂದು ಬಿಜೆಪಿಯವರು ಹೇಳಿದ ಬಳಿಕ ಹಿಂದೂಗಳಿಗೆ ಆ ವಿಷಯ ಗೊತ್ತಾದುದಲ್ಲ; ಅದು ಅವರ ಪರಂಪರೆಯಲ್ಲಿಯೇ ರಕ್ತಗತವಾಗಿದೆ. ತಮ್ಮ ಕೆಲಸವನ್ನು ಸಾಧಿಸಿಕೊಡಬಲ್ಲವರ ಬೆಂಬಲಕ್ಕಷ್ಟೆ ಸದ್ಯ ಹಿಂದೂಗಳು ನಿಂತಿದ್ದಾರೆ ಎಂದು ಕೂಡ ನಾವು ಈಗಿನ ಬೆಳವಣಿಗೆಗಳನ್ನು ಅರ್ಥೈಸಬಹುದಲ್ಲವೆ? ತಮ್ಮ ಧರ್ಮಕ್ಕೆ ಬಿಜೆಪಿಯಿಂದ ತೊಂದರೆ ಇದೆ – ಎಂದು ಅರಿವಾದರೆ ಹಿಂದೂಗಳು ಆರ್‌. ಎಸ್‌. ಎಸ್‌.,–ಬಿಜೆಪಿಗಳನ್ನು ತಿರಸ್ಕರಿಸಲಾರರೆ? ಒಂದು ಕಾಲದಲ್ಲಿ ಕಾಂಗ್ರೆಸ್ಸನ್ನು ‘ಹಿಂದೂಗಳ ಪಕ್ಷ’ ಎಂಬುದಾಗಿಯೇ  ಗುರುತಿಸಲಾಗುತ್ತಿತ್ತಲ್ಲವೆ? ತರೂರ್‌ ಅವರ ಕೃತಿ ಹಿಂದೂಧರ್ಮವನ್ನು ವಿಕೃತಗೊಳಿಸುತ್ತಿರುವ ಬಿಜೆಪಿಯ ಬಗ್ಗೆ ಅರಿವನ್ನು ಮೂಡಿಸುವುದಕ್ಕಾಗಿಯೆ ಹೊರಟಿದೆ ಎಂದೇ ಭಾವಿಸೋಣ. ಆದರೆ ಇದಕ್ಕೆ ಅನಿವಾರ್ಯವಾಗಿರುವ ನಿಷ್ಪಕ್ಷಪಾತದ ವಿಶ್ಲೇಷಣೆ ಈ ಕೃತಿಯಲ್ಲಿ ಕಾಣದು. ಕಾಶ್ಮೀರವು ಇಸ್ಲಾಂಮಯ ಆದದ್ದನ್ನು ಹೇಳುತ್ತಾರೆ. ಆದರೆ ಈ ಮತಾಂತರ ಕ್ರಿಯೆ ಇಡೀ ದೇಶವನ್ನು ವ್ಯಾಪಿಸಲಿಲ್ಲ ಎಂದೂ ಹೇಳುತ್ತಾರೆ; ಆ ಸಂದರ್ಭದಲ್ಲಿ ಉತ್ತರದಿಂದ ವಲಸೆ ಬಂದ ಹಿಂದೂಗಳ ಸಂಕಟವನ್ನು ಉತ್ತರ–ದಕ್ಷಿಣಭಾರತದ ಧಾರ್ಮಿಕ ಆಚರಣೆಗಳ ಬೆಸುಗೆಯಲ್ಲಿ ತೇಲಿಸಿಬಿಡುತ್ತಾರೆ. ಬ್ರಿಟಿಷರು ಹೇಗೆ ಜಗನ್ನಾಥನ ರಥೋತ್ಸವವನ್ನು ತಪ್ಪಾಗಿ ಅರ್ಥೈಸಿದರು ಎನ್ನುತ್ತ, ಅದೇ ದಾರಿಯಲ್ಲಿಯೇ ಅವರೂ ಸಾಗಿ ಪುರುಷಸೂಕ್ತವನ್ನೇ ಜಾತಿವ್ಯವಸ್ಥೆಯ ಮೂಲವನ್ನಾಗಿ ಅರ್ಥೈಸುತ್ತಾರೆ. ಕೃತಿಯಲ್ಲಿ ಇಂಥ ಹಲವು ವೈರುದ್ಧ್ಯಗಳಿವೆ, ದಿಟ, ಆದರೆ ಸಾರ್ವಜನಿಕ ಜೀವನದಲ್ಲಿರುವವರಿಗೆ ವೈಚಾರಿಕ ಪ್ರಜ್ಞೆ ಇರಬೇಕು. ತರೂರ್‌ ಈ ಕೃತಿಯಲ್ಲಿ ಅವರ ಒಲವು–ನಿಲುವುಗಳನ್ನು ವಿಚಾರದ ಬಲದಿಂದ ಪ್ರಕಟಿಸಿದ್ದಾರೆ. ಆದುದರಿಂದ ಈ ಕೃತಿ ಸ್ವಾಗತಾರ್ಹವೇ ಹೌದು.

ತರೂರ್‌ ಅವರ ಇಂಗ್ಲಿಷ್‌ನ ಬಗ್ಗೆ ಪ್ರಶಂಸೆಯನ್ನು ಕೇಳುತ್ತಿರುತ್ತೇವೆ. ಆದರೆ ಅವರ ಕೃತಿಯ ಈ ಅನುವಾದಕ್ಕಂತೂ ಅಂಥ ದೊಡ್ಡ ಪ್ರಶಂಸೆ ಸಲ್ಲುವಂತಿಲ್ಲ. ರಾಧಾಕೃಷ್ಣ ಅವರ ಅನುವಾದ ಎಷ್ಟೋ ಭಾಗಗಳಲ್ಲಿ ಮೂಲಕೃತಿಗೆ ನಿಷ್ಠವಾಗಿಯೇ ಇಲ್ಲ; ಹಲವು ಸ್ಥಳಗಳಲ್ಲಿ ಅಪಾರ್ಥಕ್ಕೂ ಎಡೆಮಾಡಿಕೊಟ್ಟಿದೆ. ಕೆಲವೊಂದು ಭಾಗಗಳು ಚೆನ್ನಾಗಿವೆ; ದಿಟ. ಆದರೆ ಕೆಲವೊಂದು ವಾಕ್ಯಗಳು ಗೊಂದಲಮಯವಾಗಿವೆ. ಮೂಲದಲ್ಲಿ ಇರದ ‘ಮನೋರೋಗ’ವನ್ನು ಅನುವಾದಕರು ಒಂದೆಡೆ ಹುಟ್ಟಿಸಿದ್ದಾರೆ; ಇನ್ನೊಂದು ಕಡೆ ‘ಆತ್ಮ’ವನ್ನೇ ‘ಅಧರ್ಮ’ ಮಾಡಿಬಿಟ್ಟಿದ್ದಾರೆ! ‘ಆರ್ಟ್‌ ಆಫ್‌ ಲಿವಿಂಗ್’ ಸಂಸ್ಥೆಯನ್ನು ‘ಬಾಳುವ ಕಲೆ’ಯಾಗಿಸಿದ್ದಾರೆ. ‘ನಿರ್ವಾಣಷಟ್ಕ’ದ ಪದ್ಯಗಳನ್ನು ಕೇನೋಪನಿಷತ್ತಿನ ಭಾಗಗಳಂತೆ ಕಾಣಿಸಲಾಗಿದೆ. ಇಂಥವು ಎಷ್ಟೋ ಇವೆ. ಕೆಲವು ಪದಗಳಂತೂ ಕನ್ನಡಕ್ಕೆ ಹೊಂದುವಂತಿಲ್ಲ. ಪರಿವಿಡಿಯ ಪುಟದಲ್ಲಿ ಅಧ್ಯಾಯಗಳಿಗೆ ಪುಟಸಂಖ್ಯೆಗಳೇ ಇಲ್ಲ. ಇಸ್ವಿಗಳಿಗೆ ಹಲವೆಡೆ ಅಲ್ಪವಿರಾಮವನ್ನು ಬಳಸಲಾಗಿದೆ (ಹೀಗೆ: 1,947)! ಒಟ್ಟಿನಲ್ಲಿ, ಮೂಲಕೃತಿಯ ವೈಚಾರಿಕತೆಯಲ್ಲಿ ಒಪ್ಪುವಂಥದ್ದೂ ಒಪ್ಪಲಾಗದಂಥದ್ದೂ ಇವೆಯಷ್ಟೆ. ಅಂತೆಯೇ, ಈ ಕೃತಿಯ ಅನುವಾದದಲ್ಲೂ ಸಾಫಲ್ಯ–ವೈಫಲ್ಯಗಳು ಬೆರೆತುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT