ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಪುಟಗಳು ಆತ್ಮಕಥನ: ನಂಜುಂಡಸ್ವಾಮಿ ಹೋರಾಟದ ಆ ಬೆಂಗಳೂರು

Published 10 ಡಿಸೆಂಬರ್ 2023, 0:15 IST
Last Updated 10 ಡಿಸೆಂಬರ್ 2023, 0:15 IST
ಅಕ್ಷರ ಗಾತ್ರ

ಸಾವಣ್ಣ ಪ್ರಕಾಶನ ಹೊರತಂದಿರುವ ಟಿ.ಎನ್. ಸೀತಾರಾಮ್ ಅವರ ‘ನೆನಪಿನ ಪುಟಗಳು’ ಪುಸ್ತಕ ಇಂದು (ಡಿಸೆಂಬರ್ 10) ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ಪುಸ್ತಕದಲ್ಲಿನ ಒಂದು ಭಾಗ ಇಲ್ಲಿದೆ.

ಎಪ್ಪತ್ತರ ದಶಕದಲ್ಲಿ ನಾನು ಮಲ್ಲೇಶ್ವರದ ಬಳಿ ಸ್ವಿಮ್ಮಿಂಗ್ ಪೂಲ್ ಬಡಾವಣೆಯಲ್ಲಿರುವ ನನ್ನ ಸ್ನೇಹಿತ ಕೃಷ್ಣಮೂರ್ತಿಯವರ ಮನೆಯ ಔಟ್‌ಹೌಸ್‌ನಲ್ಲಿ ವಾಸವಿದ್ದೆ.

ನಾನು ಬಾಡಿಗೆಗೆಂದು ಅಲ್ಲಿ ಹೋಗಿದ್ದು. ಅಲ್ಲಿ ಗೆಳೆಯ ಕೃಷ್ಣಪ್ಪ ಕೂಡ ನನ್ನ ಜತೆಗಿದ್ದರು. ಕೃಷ್ಣಪ್ಪ ನಾಟಕ ನಿರ್ದೇಶಕರು ಮತ್ತು ಈಗಿನ ಖ್ಯಾತ ಚಿತ್ರ ನಟಿ ಶ್ವೇತಾ ಶ್ರೀವಾಸ್ತವ್ ಅವರ ತಂದೆ.

ನಮ್ಮ ಆರ್ಥಿಕ ಕಷ್ಟ ಕಂಡದ್ದಕ್ಕಿಂತ ಹೆಚ್ಚಾಗಿ ಅವರಿಗೆ ನನ್ನ ಮೇಲೆ ಇದ್ದ ಪ್ರೀತಿಯಿಂದಾಗಿ ಕೃಷ್ಣಮೂರ್ತಿಯವರ ತಂದೆ ಎಂದೂ ಬಾಡಿಗೆಯನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ ಅವರ ಮನೆಯಲ್ಲಿಯೇ ಎರಡು ಹೊತ್ತೂ ಊಟವನ್ನೂ ಬೆಳಗಿನ ತಿಂಡಿಯನ್ನೂ ಮಾಡಬೇಕೆಂದು ಅಪ್ಪಣೆ ಮಾಡಿದ್ದರು. ಅಂಥ ಪ್ರಿಯವಾದ ಅಪ್ಪಣೆಗಳನ್ನು ಪಾಲಿಸಿಕೊಂಡು ಅನೇಕ ವರ್ಷಗಳ ಕಾಲ ನಾನು ಪೇಯಿಂಗ್ ಗೆಸ್ಟ್ ಆಗಿ ಇದ್ದೆ.
ಆಗ ಸಾಮಾನ್ಯವಾಗಿ ಪ್ರತಿದಿನ ಸಂಜೆ ಸ್ಕೂಟರ್‌ನಲ್ಲಿ ಗುರುಗಳಾದ ಲಂಕೇಶ್ ಮೇಷ್ಟ್ರ ಮನೆಗೆ ಹೋಗಿಬಿಡುತ್ತಿದ್ದೆ.

ಅವರ ಮನೆ ಗಾಂಧಿ ಬಜಾರ್‌ನ ಗೋವಿಂದಪ್ಪ ರಸ್ತೆಯಲ್ಲಿತ್ತು. ಅವರ ಮನೆಗೆ ಏಳೆಂಟು ಗೆಳೆಯರು ಬಂದಿರುತ್ತಿದ್ದರು. ಅಲ್ಲಿ ಹರಟೆ ಹೊಡೆದು ವಾಪಸ್ ಆಗುತ್ತಿದ್ದೆವು.

ಮೇಷ್ಟ್ರಿಗೆ ಅಸಾಧ್ಯವಾದ ಹಾಸ್ಯಪ್ರಜ್ಞೆ ಇತ್ತು. ಮಲ್ಲೇಶ್ವರದಿಂದ ಅಲ್ಲಿಗೆ ಕೇವಲ ಹತ್ತರಿಂದ ಹನ್ನೆರಡು ನಿಮಿಷಗಳಲ್ಲಿ ಹೋಗಿಬಿಡುತ್ತಿದ್ದೆವು. ಆಗೆ ಟ್ರಾಫಿಕ್ ತೀರ ಕಮ್ಮಿ.

ಒಂದು ಸಂಜೆ ಹೀಗೆ ಮೇಷ್ಟ್ರ ಮನೆಗೆ ಹೋಗುವ ವೇಳೆಗೆ ಅಲ್ಲಿ ಪ್ರೊಫೆಸರ್ ಎಮ್.ಡಿ. ನಂಜುಂಡಸ್ವಾಮಿಯವರು ಬಂದು ಕೂತಿದ್ದರು. ಅವರು ಒಂದೆರಡು ವರ್ಷದ ಹಿಂದೆ ತಾನೆ ಜರ್ಮನಿಯಿಂದ ಬಂದಿದ್ದರು. ಅತ್ಯಂತ ಕುಶಾಗ್ರಮತಿ. ಸಮಾಜವಾದಿ ಯುವಜನ ಸಭಾದಲ್ಲಿ ತೊಡಗಿಸಿಕೊಂಡು ಚಳವಳಿ ಮತ್ತು ಹೋರಾಟಗಳಲ್ಲಿ ಕ್ರಿಯಾಶೀಲರಾಗಿದ್ದರು. ಅವರ ಪ್ರತಿಯೊಂದು ಹೋರಾಟಕ್ಕೂ ಆಳವಾದ ಸಮಾಜಮುಖಿ ಚಿಂತನೆ ಇರುತ್ತಿತ್ತು. ನಮ್ಮನ್ನೂ ಅದರಲ್ಲಿ ಇಳಿಸಿ ಅನೇಕ ಬಾರಿ ಪೊಲೀಸ್ ಸ್ಟೇಷನ್, ಕೋರ್ಟು ನೋಡುವಂತೆ ಆಗುತ್ತಿತ್ತು.

ಅವತ್ತು ತಾನೇ ಸಿ.ಐ.ಟಿ.ಬಿಯನ್ನು ಬಿ.ಡಿ.ಎ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. (ಸಿ.ಐ.ಟಿ.ಬಿ ಅಂದರೆ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್. ಮುಂಚೆ ಬಿ.ಡಿ.ಎ ಕೆಲಸವನ್ನು ಅದು ಮಾಡುತ್ತಿತ್ತು. ಬಡಾವಣೆಗಳನ್ನು ಮಾಡಿ, ಸೈಟುಗಳನ್ನು ಮಾಡಿ ಹಂಚುವುದು ಮುಂತಾದ ಕೆಲಸಗಳು.)

ನಾನು ಹೋದ ಮೇಲೆ, ನನ್ನ ಅವರ ಮಧ್ಯೆ ಹೀಗೆ ಮಾತುಕತೆ ನಡೆಯಿತು...

ಎಲ್ಲಿಂದ ಬಂದ್ರಿ?

ಮಲ್ಲೇಶ್ವರದಿಂದ ಸರ್.

ಎಷ್ಟು ಹೊತ್ತು ಹಿಡೀತು ಅಲ್ಲಿಂದ ಇಲ್ಲಿಗೆ ಬರೋಕೆ.

ಕಾಲು ಗಂಟೆ ಸರ್. ಯಾಕೆ?

ಇನ್ನು ಐದು ವರ್ಷ ಮುಗಿಯೋದ್ರೊಳಗೆ ಅರ್ಧ ಗಂಟೆ ಬೇಕಾಗುತ್ತೆ. ಅಲ್ಲಿಂದ ಇಲ್ಲಿ ಬರೋಕೆ. ನಾಳೆ ಒಂದು ಸ್ಟ್ರೈಕ್ ಆರ್ಗನೈಜ್ ಮಾಡೋಣ ಬನ್ನಿ. ನಿಮ್ಮ ಫ್ರೆಂಡ್ಸ್‌ನೂ ಕರ್ಕೊಂಡು ಬನ್ನಿ ಎಂದರು.

ನನಗೇನೂ ಅರ್ಥವಾಗಲಿಲ್ಲ. ಏನ್ಸಾರ್ ಹೀಗೆ ಮಾತಾಡ್ತಿದ್ದೀರಿ. ಎಂದು ಕೇಳಿದೆ.

ಇವತ್ತು ಸರ್ಕಾರದ ನಿರ್ಧಾರ ಪೇಪರ್‌ನಲ್ಲಿ ಓದಿಲ್ಲವ. ಈ ಅವಿವೇಕಿಗಳು ಮಾಡಿರೋ ಕೆಲಸ ನೋಡಿ. ಸಿ.ಐ.ಟಿ.ಬಿ.ನ ಬಿ.ಡಿ.ಎ. ಮಾಡ್ತಾರಂತೆ. ಬ್ಯಾಂಗಲೋರ್ ಡೆವಲಪ್‌ಮೆಂಟ್‌ ಅಥಾರಿಟಿ. ಬೆಂಗಳೂರು ಡೆವಲಪ್ ಆಗಿರೋದು ಸಾಲದಾ? ಕೆಂಪೇಗೌಡರ ಗೋಪುರದಿಂದ ಮೂರು ಮೂರು ಕಿಲೋಮೀಟರ್ ಆಚೆ ತನಕ ಬೆಳೆದಿದೆ. ಇನ್ನಾ ಬೇಕಾ. ಇನ್ನಾ ಇವರು ಬಡಾವಣೆಗಳು ಮಾಡ್ತಾ ಕೂತರೆ ದೇಶದಲ್ಲಿರೊ ವ್ಯಾಪಾರಿಗಳೆಲ್ಲ ಇಲ್ಲಿ ಬಂದು ಕೂತ್ಕೋತಾರೆ. ಎಲ್ಲರಿಗೂ ಬೆಂಗಳೂರೇ ಬೇಕು. ಏರ್ ಕಂಡೀಶನ್ಡ್ ಸಿಟಿ ಅಲ್ವಾ. ಎಲ್ಲ ರಾಜ್ಯದೋರೂ ಬಂದು ಇಲ್ಲಿ ವಕ್ರಿಸ್ತಾರೆ. ಎಲ್ಲ ಇಂಡಸ್ಟ್ರಿಯಲಿಸ್ಟುಗಳೂ ಇಲ್ಲಿ ಕಾರ್ಖಾನೆ ತೆಗೀತೀವಿ ಅಂತಾರೆ. ಸರ್ಕಾರದೋರು ಅವರಿಗೆ 10-20 ಎಕರೆ ಜಮೀನು ಕೊಡ್ತಾರೆ. ಕನ್ನಡದೋರು ಆಮೇಲೆ ಸಿಕ್ಕೋದೇ ಇಲ್ಲ ಬೆಂಗಳೂರಿನಲ್ಲಿ. ಎಲ್ಲರೂ ಕಾರುಗಳು ತಗೊಂತಾರಪ್ಪ. ಸೈಕಲ್‌ಗಳಿಗೆ ಈ ರೋಡುಗಳನ್ನು ಮಾಡಿರೋದು. ಮನೇಗೊಂದು ಕಾರ್ ಬಂದ್ರೆ ರೋಡುಗಳು ತಡೆಯುತ್ವಾ? ಟ್ರಾಫಿಕ್ ಜಾಮ್‌ಗಳು ಶುರು ಆಗುತ್ತೆ. ನೀವು ಕಾಲು ಗಂಟೇಗೆ ಅಲ್ಲಿಂದ ಇಲ್ಲಿ ಬರೋಕೆ ಆಗುತ್ತಾ. ಸೈಟುಗಳು ಈಗ ಇಪ್ಪತ್ತು, ಮೂವತ್ತು ಸಾವಿರಕ್ಕೆ ಸಿಗ್ತಾ ಇದೆ. ಐದು ವರ್ಷ ಹೋಗಲಿ. ಒಂದೊಂದು ಸೈಟೂ ಮೂವತ್ತು, ನಲವತ್ತು ಲಕ್ಷ ಆಗುತ್ತೆ. ಸಾಮಾನ್ಯ ಜನ ಕೊಂಡುಕೊಳ್ಳೋಕೆ ಆಗುತ್ತಾ.

ಪ್ರೊ. ಎಂ.ಡಿ. ನಂಜುಂಡಸ್ವಾಮಿ
ಪ್ರೊ. ಎಂ.ಡಿ. ನಂಜುಂಡಸ್ವಾಮಿ

ಇಷ್ಟು ಸಾಲದು ಎಂದು ನಮ್ಮ ರಾಜ್ಯದಲ್ಲಿರೋ ಎಲ್ಲರೂ ಬೆಂಗಳೂರಿನಲ್ಲಿ ಒಂದು ಮನೆ ಬೇಕು ಎಂದು ಇಲ್ಲಿ ಬಂದು ಸೆಟಲ್ ಆಗ್ತಾರೆ. ಇಲ್ಲಿ ಬೀಳೋ ಕಸಾನ ಎತ್ತಿಹಾಕೋಕೆ ಜಾಗ ಇರಲ್ಲ. ಸರೀನಾ ಈ ಮು.ಗಂಡರು ಮಾಡಿರೋದು. ಅದಕ್ಕೇ ಸ್ಟ್ರೈಕ್ ಮಾಡಬೇಕು.

ಏನಂತ ಸ್ಟ್ರೈಕ್ ಮಾಡೋದು ಸರ್.

ನಮಗೆ ಬಿ.ಡಿ.ಎ. ಬೇಡ. ಬಿ.ಎಮ್.ಎ. ಶುರು ಮಾಡಿ ಅಂತ.

ಬಿ.ಎಮ್.ಏ?

ಬ್ಯಾಂಗಲೋರ್ ಮೈಂಟೆನೆನ್ಸ್ ಅಥಾರಿಟಿ. ನಮಗೆ ಡೆವಲಪ್‌ಮೆಂಟ್ ಬೇಡ. ಮೈಂಟೆನೆನ್ಸ್ ಬೇಕು ಅಷ್ಟೇ. ಬೆಂಗಳೂರು ಇನ್ನು ಬೆಳೀಬಾರದು ಎಂದು ಸ್ಟ್ರೈಕ್ ಮಾಡಬೇಕು.

ಮತ್ತೆ ಉದ್ಯಮಿಗಳು ಬಂದು ಕೈಗಾರಿಕೆ ತೆಗೀದೆ ಇದ್ರೆ ನಮಗೇ ನಷ್ಟ ಅಲ್ವ ಸರ್?

ಏನ್ ಬೆಂಗಳೂರೇ ಬೇಕಾ ಫ್ಯಾಕ್ಟರಿ ತೆಗೆಯೋಕೆ. ಹಾಸನದಲ್ಲಿ ತೆಗೀಲಿ. ಚಾಮರಾಜನಗರದಲ್ಲಿ ತೆಗೀಲಿ. ನಿಮ್ಮ ಗೌರಿಬಿದನೂರಿನಲ್ಲಿ ತೆಗೀಲಿ. ಆ ಊರುಗಳೂ ಅಭಿವೃದ್ಧಿ ಆಗುತ್ತವೆ. ಬೆಂಗಳೂರೂ ಶಾಂತವಾಗಿರುತ್ತೆ.

ಎರಡನೇ ದಿನ ಕಬ್ಬನ್ ಪಾರ್ಕ್‌ನಲ್ಲಿ ಕೂತು ಸ್ಟ್ರೈಕೂ ಮಾಡಿದಿವಿ. ಘಾಳಪ್ಪ ಅನ್ನೋ ಮಂತ್ರಿಗೆ ಘೇರಾವ್ ಕೂಡ ಮಾಡಿದಿವಿ. ಪತ್ರಿಕಾಗೋಷ್ಠೀನೂ ಮಾಡಿದಿವಿ. ಸರ್ಕಾರ ಕ್ಯಾರೇ ಅನ್ನಲಿಲ್ಲ. ಅದು ನಂಜುಂಡಸ್ವಾಮಿಗಳ ಭ್ರಮೆ ಅಂದುಬಿಟ್ಟರು.

ಇತ್ತೀಚೆಗೆ ಸಂಜೆ ನಾನು ಮಲ್ಲೇಶ್ವರದಿಂದ ಗಾಂಧಿ ಬಜಾರ್‌ಗೆ ಬರೋಕೆ ಸರಿಯಾಗಿ ಒಂದೂವರೆ ಗಂಟೆ ಕಾಲ ಹಿಡಿಯಿತು. ನಮ್ಮ ಏರಿಯಾದಲ್ಲಿ ಒಂದು ಸೈಟು ಮೂರೂ ಕಾಲು ಕೋಟಿ ಎಂದರು ಯಾರೋ. ನಂಜುಂಡಸ್ವಾಮಿಯವರಿಗೆ ಎಂಥಾ ವಿಷನ್ ಇತ್ತು. ಅವರು ಮುಖ್ಯಮಂತ್ರಿಯಾಗಬೇಕಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT